ಮಾರ್ಚ ೩೧ ಆಗಿ ಎಪ್ರೀಲ ಬಂದರ ಸಾಕ ಎಲ್ಲಾರೂ ಬ್ಯೂಸಿನ ಬ್ಯೂಸಿ, ಯಾರನ ಕೇಳಿದರು
“ಏ, ಇನಕಮ ಟ್ಯಾಕ್ಸ್ ರಿಟರ್ನ ತುಂಬಬೇಕ” ಅಂತಾರ.
ಅಲ್ಲಾ ಹಂಗ ಖರೇ ಹೇಳ್ತೇನಿ ಮಂದಿ ದುಡಿಬೇಕಾರ ಇಷ್ಟ ತಲಿಕೆಡಸಿಗೊಂಡಿರಂಗಿಲ್ಲಾ ಆದರ ಇನಕಮ್ ಟ್ಯಾಕ್ಸ ರಿಟರ್ನ ತುಂಬಬೇಕಾರ ಭಾಳ ತಲಿಕೆಡಸಿಗೋತಾರ. ಒಂದ ಹತ್ತ ಸರತೆ ಆ ಸಿ.ಎ.ನ ಆಫೀಸಿಗೆ ಹೋಗಿ ಅವನ ತಲಿ ತಿಂದ ಅಂವಾ ಇವರದ ತಲಿ ತಿಂದ ಕಡಿಕೆ ರಿಟರ್ನ ಫೈಲ ಮಾಡಲಿಕ್ಕೆ ಮತ್ತ ಮೂರ ತಿಂಗಳ ತೊಗೊತಾರ.
ಅಲ್ಲಾ ಹಂಗ ಇಷ್ಟ ತಲಿಕೆಡಸಿಕೊಂಡ ತುಂಬೋದ ಏನ ಇರತದ ಅದರಾಗ ಅಂತ ನನ್ನಂಗ ಲೊ ಇನಕಮ್ ಇದ್ದ ಮಂದಿ ಅನ್ನಬಹುದು, ಆದರ ಅದು ಹಂಗ ಅಲ್ಲಾ, ಈ ಜನಾ ಇಷ್ಟ ತಲಿ ಕೆಡಸಿಗೋಳೊದ ಇನಕಮ್ ಟ್ಯಾಕ್ಸ ತುಂಬಲಿಕ್ಕಲ್ಲಾ, ಇನಕಮ್ ಟ್ಯಾಕ್ಸ್ ಉಳಸಲಿಕ್ಕೆ. ಅದಕ್ಕ ಇವರ ಇಷ್ಟ ಕಷ್ಟ ಪಡತಾರ. ಪಾಪ, ಮತ್ತ ವರ್ಷಾನ ಗಟ್ಟಲೇ ಇಷ್ಟ ಕಷ್ಟ ಪಟ್ಟ ದುಡದ ಗಳಸಿರತಾರ ಅದರಾಗ ಫಾಯದೆದಾಗ ೩೦ % ಇನಕಮ್ ಟ್ಯಾಕ್ಸ ತುಂಬ ಅಂತ ಅಂದರ ಕರಳ ಹಿಂಡಿದಂಗ ಆಗಲಾರದ ಇರತದ?
ಹಿಂಗಾಗೆ ಜನಾ ಹೆಂಗ ಟ್ಯಾಕ್ಸ್ ಉಳಸಬೇಕು ಅಂತ ಹತ್ತ ಸರತೆ ವಿಚಾರ ಮಾಡಿ-ಮಾಡಿ ಕಡಿಕೆ ಎಷ್ಟ ಸಾಧ್ಯಅದ ಅಷ್ಟ ಅಡ್ಜಸ್ಟಮೆಂಟ ಮಾಡಿ, ಕಡಿಮಿ ಇನಕಮ್ ಟ್ಯಾಕ್ಸ ತುಂಬತಾರ. ಅದರಾಗ ನಮ್ಮ ದೇಶದಾಗ ಅಂತೂ ಇಷ್ಟ ಟ್ಯಾಕ್ಸ ಅವ ಅಲಾ, ಕುಂತರ ನಿಂತರ ಟ್ಯಾಕ್ಸ ಅನ್ನೊ ಹಂಗ ಆಗೇ ಹೋಗೇದ. ಅಲ್ಲಾ ಇಷ್ಟ ನಮೂನಿ ಟ್ಯಾಕ್ಸ ಮಾಡಿದರು ಯಾಕ ನಮ್ಮ ದೇಶದ್ದ ಪರಿಸ್ಥಿತಿ ಸುಧಾರಸವಲ್ತು ಅಂದರ ಜನಾ ಈ ನೂರಾ ಎಂಟ ಟ್ಯಾಕ್ಸ ತಪ್ಪಸಲಿಕ್ಕೆ ಸಾವಿರದಾ ಎಂಟ ದಾರಿ ಹುಡ್ಕಿರತಾರ. ಆದರೂ ಏನ ಅನ್ರಿ ನಮ್ಮ ದೇಶದಾಗ ದುಡಿಯೊರಿಗೆ ಇನಕಮ್ ಕಡಿಮಿ ಟ್ಯಾಕ್ಸ್ ಭಾಳ ಆಗೇದ ಅನಸ್ತದ.
ಅಲ್ಲಾ ಇದ ನಮ್ಮ ದೇಶದ್ದ ಒಂದ ಹಣೇಬರಹ ಅಲ್ಲಾ, ಎಲ್ಲಾ ದೇಶದಾಗೂ ಇನಕಮ್ ಟ್ಯಾಕ್ಸ್ ಇದ್ದ ಇರತದ. ಕೆಲವೊಂದ ಕಡೆ ವಿಚಿತ್ರ-ವಿಚಿತ್ರ ಟ್ಯಾಕ್ಸ್ ಇರತಾವ. ಇಗಿನ್ನೂ ಬೇಕ ಮೊದ್ಲ ಜಗತ್ತಿನಾಗ ಹೆಂತಿಂತಾ ಟ್ಯಾಕ್ಸ್ ಇದ್ದವಂತ ಗೊತ್ತೇನ ನಿಮಗ? ಕೇಳಿದರ ಹುಚ್ಚ ಹಿಡಿತದ.
ಒಂದನೇ ಶತಮಾನದಾಗ ರೋಮನ ರಾಜ ಒಬ್ಬಂವಾ ‘ಯುರಿನ್’ ಮ್ಯಾಲೆ ಟ್ಯಾಕ್ಸ್ ಹಾಕಿದ್ದನಂತ. ಅಂದರ ಉಚ್ಚಿ ಹೋಯ್ದರ ಟ್ಯಾಕ್ಸ್ ಕೊಡಬೇಕಂತ ಅಲ್ಲಾ ಮತ್ತ. ಆ ದೇಶದ ಒಳಗ ಮಂದಿ ಯುರಿನ್ ಕಲೆಕ್ಟ ಮಾಡಿ ಅದರಿಂದ ಅಮ್ಮೋನಿಯಾ ತಯಾರ ಮಾಡ್ತಿದ್ದರು. ಹಂಗ ಯಾರ ಈ ಯುರಿನ್ ಕಲೆಕ್ಟ ಮಾಡ್ತಾರಲಾ ಅವರ ಟ್ಯಾಕ್ಸ್ ಕೊಡಬೇಕಾಗ್ತಿತ್ತ. ಅದು ಈ ಯುರಿನ್ ಯಾರದ ಅದ ಅವರಿಗಲ್ಲ ಮತ್ತ ಆ ದೇಶದ ರಾಜಗ. ಇನ್ನ ದೇಶಕ್ಕ ರಾಜಾ ಅಂದರ ಪ್ರಜೆಗಳ ಯುರಿನಗೂ ಅವನ ರಾಜಾ ಅಲಾ.
ಅಲ್ಲಾ ಹಂಗ ನಮ್ಮ ದೇಶದ್ದ ಜನಸಂಖ್ಯೆ ಇಷ್ಟ ಅದ ಹಂಗ ನಾವು ಮನಸ್ಸ ಮಾಡಿದರ ನಮ್ಮ ಯುರಿನದಿಂದ ಎಷ್ಟ ಅಮ್ಮೋನಿಯಾ ತಯಾರ ಮಾಡಬಹುದೇನೋ ಅಂತ ಅನಸ್ತದ. ಅಲ್ಲಾ ಇದ ನನ್ನ ವಿಚಾರ ಬಿಡ್ರಿ ಹಂಗ ಇದರ ಬಗ್ಗೆ ಸರ್ಕಾರ ತಲಿಕೆಡಸಿಗೊಬೇಕು ಇಲ್ಲಾ ಯಾರರ ಹೊಸಾ ಪ್ರೊಜೆಕ್ಟ ಹುಡಕಲಿಕತ್ತಿದ್ದರ ಅವರ ವಿಚಾರ ಮಾಡಬೇಕ.
ಇನ್ನ ರೋಮನ್ ಸಾಮ್ರಜ್ಯದಾಗ ಪುರಾತನ ಕಾಲದಾಗ ‘ಗುಲಾಮರ’ ಸ್ವತಂತ್ರರಾದರಂದರ ಅವರ ರಾಜಾಗ ಟ್ಯಾಕ್ಸ್ ಕೊಡಬೇಕಾಗ್ತಿತ್ತಂತ. ಯಾಕಂದರ ಮೊದ್ಲ ಆ ಗುಲಾಮರು ಸ್ವತಂತ್ರ ಆಗಲಿಕ್ಕೆ ತಮ್ಮ ಮಾಲಕರಿಗೆ ರೊಕ್ಕ ಕೊಡಬೇಕಾಗ್ತಿತ್ತ, ಇನ್ನ ಆ ರೊಕ್ಕದ ಸಂಬಂದ ದುಡಿತಿದ್ದರು, ಮತ್ತ ಹಿಂಗ ದುಡದ ರೊಕ್ಕಾಗಳಿಸಿ ಗುಲಾಮಗಿರಿಯಿಂದ ಫ್ರೀ ಆಗ್ಯಾರಂದರ ನೀವ ಟ್ಯಾಕ್ಸ್ ತುಂಬರಿ ಅಂತ ರಾಜಾ ಅಂತಿದ್ದನಂತ. ಏನ್ಮಾಡ್ತೀರಿ?
ಈಗ ನಮ್ಮಲ್ಲೇನೂ ಒಂದ ಕಾನೂನ ಮಾಡ್ಯಾರಲಾ ಗಂಡ ಏನರ ಹೆಂಡತಿ ಗುಲಾಮಗಿರಿಯಿಂದ ತಪ್ಪಿಸಿಗೊಳ್ಳಿಕ್ಕೆ ಡೈವರ್ಸ್ ಕೊಟ್ಟರ ಅಕಿಗೆ ತಾ ಕಷ್ಟ ಪಟ್ಟ ದುಡದದ್ದ ಆಸ್ತಿ ಒಳಗ ಅರ್ಧಾ ಕೊಡಬೇಕಂತ, ಹಂಗ.
ಇನ್ನ ನಮ್ಮ ಗ್ರೇಟ್ ಬ್ರಿಟನದಾಗೂ ಭಾರಿ-ಭಾರಿ ಟ್ಯಾಕ್ಸ್ ಪದ್ಧತಿ ಇದ್ದವು. ಅಲ್ಲೆ ೧೮ನೇ ಶತಮಾನದ ತನಕಾ ‘ಸೋಪ’ ಮ್ಯಾಲೆ ಟ್ಯಾಕ್ಸ್ ಹಾಕತಿದ್ದರಂತ. ಅವರಿಗೇನ ಜನಾ ಸೋಪ ಹಚಗೊಂಡ ಸ್ವಚ್ಛ ಸ್ನಾನ ಮಾಡೋದ ಕಂಡ್ರ ಆಗ್ತಿದ್ದಿಲ್ಲೋ ಏನೋ ಗೊತ್ತಿಲ್ಲಾ, ಒಟ್ಟ ಸೋಪ ಮ್ಯಾಲೆ ಟ್ಯಾಕ್ಸ್ ಹಾಕತಿದ್ದರಂತ. ಇನ್ನ ಕಾರ್ಡ್ಸ್ ಆಡಿದರ, ಮನಿ ಮುಂದ ಕಟ್ಟಿಮ್ಯಾಲೆ ಕೂತ ಚಕ್ಕಾ-ವಚ್ಚಿ ಆಡಿದರ ಸಹಿತ ಟ್ಯಾಕ್ಸ್ ಹಾಕತಿದ್ದರಂತ. ಅಲ್ಲಾ ಅದಕ್ಕ ನಮ್ಮ ದೇಶದಾಗ ಜುಜಾಟ ಅಂತ ದಂಡಾ ಹಾಕತಾರ ಆದರ ಅಲ್ಲೆ ಟ್ಯಾಕ್ಸ್ ಹಾಕತಿದ್ದರ ಇಷ್ಟ ಫರಕ ಬಿಡ್ರಿ.
ಆಮ್ಯಾಲೆ ಅಲ್ಲೆ ಮನಿಗೆ ಟ್ಯಾಕ್ಸ್ ಆ ಮನ್ಯಾಗ ಖಿಡಕಿ ಎಷ್ಟ ಅವ ಅಂತ ನೋಡಿ ಹಾಕತಿದ್ದರಂತ, ಜಾಸ್ತಿ ಖಿಡಕಿ ಇದ್ದರ ಜಾಸ್ತಿ ಟ್ಯಾಕ್ಸ್ ಹಾಕತಿದ್ದರಂತ. ಅದಕ್ಕ ಜನಾ ತಲಿಕೆಟ್ಟ ಟ್ಯಾಕ್ಸ್ ಉಳಸಲಿಕ್ಕೆ ಮನಿಗೆ ಖಿಡಕಿ ಕಡಿಮಿ ಮಾಡ್ಕೋತ ಹೊಂಟರಂತ. ಕಡಿಕೆ ಹಿಂಗ ಆತಲಾ ಜನಾ ಮನಿಗೆ ಖಿಡಕಿ ಇಲ್ಲದ ಉಸರಗಟ್ಟಿ ಸಾಯಲಿಕ್ಕೆ ರೆಡಿ ಆದರು ಆದರ ಟ್ಯಾಕ್ಸ್ ಕೊಡಲಿಕ್ಕೆ ತಯಾರಾಗಲಿಲ್ಲ. ಏನೋ ಅವರ ಪುಣ್ಯಾಕ್ಕ ಮುಂದ ಸರ್ಕಾರ ಆ ಟ್ಯಾಕ್ಸ್ ವಾಪಸ ತಕ್ಕೊಂಡರು ಆ ಮಾತ ಬ್ಯಾರೆ.
ಇಂಗ್ಲೆಂಡ ಒಳಗ ಹಿಂಗ ಹುಚ್ಚುಚಾಕಾರ ಟ್ಯಾಕ್ಸ್ ಹಾಕೋದ ನೋಡಿ ೧೭ನೇ ಶತಮಾನದಾಗ ರಶಿಯಾದ ರಾಜಾ ಒಬ್ಬಂವಾ ಗಂಡಸರ ದಾಡಿ ಮ್ಯಾಲೆ ಟ್ಯಾಕ್ಸ್ ಹಾಕತಿದ್ದನಂತ. ಯಾರ ಕ್ಲೀನ್ ಆಗಿ ಶೇವ ಮಾಡ್ಕೊಳಂಗಿಲ್ಲಾ ಅಂವಾ ಟ್ಯಾಕ್ಸ್ ಕೊಡಬೇಕಾಗ್ತಿತ್ತ. ಏನ್ಮಾಡ್ತೀರಿ?
ಆವಾಗಿಂದೇಲ್ಲಾ ನೋಡಿದರ ನಮ್ಮ ದೇಶದಾಗಿನ ಈಗಿನ ಟ್ಯಾಕ್ಸ್ ಛಲೋ ಅಂತ ಸುಮ್ಮನಿರೋದ ಛಲೋ ಅಂತ ಅನಸ್ತದ ಹೌದಲ್ಲ?
ಅಲ್ಲಾ ಈಗ ಎಲ್ಲಾ ಬಿಟ್ಟ ಈ ಟ್ಯಾಕ್ಸ್ ವಿಷಯ ಯಾಕ ಬಂತಪಾ ಅಂದರ ಮೊನ್ನೆ ಎಪ್ರೀಲ್ ೧೫ಕ್ಕ ಅಮೇರಿಕಾದಾಗ ‘ಟ್ಯಾಕ್ಸ್ ಡೇ’ ಇತ್ತಂತ, ಅಂದರ ಟ್ಯಾಕ್ಸ ತುಂಬಲಿಕ್ಕೆ ಡೆಡ್ ಲೈನ. ನಮ್ಮ ಅಮೇರಿಕಾ ಸೆಟ್ಲಡ್ ದೋಸ್ತ ಒಬ್ಬಾಂವ ಫೋನ ಮಾಡಿ ಒಂದ ವಾರ ಭಾಳ ಬ್ಯುಸಿ ಇದ್ದೆ, ಟ್ಯಾಕ್ಸ ತುಂಬಬೇಕಿತ್ತು ಹಂಗ ಹಿಂಗ ಅಂತ ಕಥಿ ಹೇಳಿದಾ.
ನಾ “ನೀವೇಲ್ಲಾ ಭಾಳ ತಲಿ ಕೆಡಸಿಗೋತಿರ ಬಿಡಪಾ ಟ್ಯಾಕ್ಸ್ ತುಂಬಲಿಕ್ಕೆ, ನಮ್ಮ ದೇಶದಾಗ ನಾವ ದುಡಿಲಿಕ್ಕೆ ತಲಿ ಕೆಡಸಿಗೊಳಂಗಿಲ್ಲಾ ಇನ್ನ ಟ್ಯಾಕ್ಸ ತುಂಬಲಿಕ್ಕೆ ಎಲ್ಲಿದಲೇ, ಅದರಾಗ ಎರೆಡರಡ ಮೂರ-ಮೂರ ವರ್ಷದ ಹಿಂದಿಂದ ರಿಟರ್ನ್ ಸಹಿತ ನಾವ ಒಮ್ಮೆ ಫೈಲ ಮಾಡ್ತೇವಿ” ಅಂದೆ.
“ಅದಕ್ಕ ಮಗನ ನಿಮ್ಮ ದೇಶದ್ದ ಡೆವಲೆಪಮೆಂಟ್, ಗ್ರೌಥ ಆಗವಲ್ತ. ನಿಮಗ ಯಾರಿಗೂ ದೇಶದ್ದ ಬಗ್ಗೆ, ಅದರ ಎಕಾನಮಿ ಬಗ್ಗೆ ಸಿರಿಯಸನೆಸ್ ಇಲ್ಲಾ” ಅಂತ ಭಾಷಣಾ ಹೇಳಲಿಕತ್ತಾ.
ನಂಗ ತಲಿ ಕೆಡ್ತ, ಅವನೌನ ನಮ್ಮ ದೇಶದ್ದ ಬಗ್ಗೆ ನಮ್ಮ ಎಕಾನಮಿ ಬಗ್ಗೆ ನಮಗ ಹೇಳ್ತಾನಲಾ ಅಂತ
“ಲೇ, ನಿಮ್ಮಂತಾವರ ಇಲ್ಲೇ ಹುಟ್ಟಿ, ಇಲ್ಲೆ ಬೆಳದ, ಇಲ್ಲೇ ಕಲತ ಇವತ್ತ ಅಮೇರಿಕಾಕ್ಕ ಹೋಗಿ ಸೆಟ್ಲ್ ಆಗಿ income tax ಅಮೇರಿಕಾದಾಗ ತುಂಬತೀರಲಾ ಅದಕ್ಕ ನಮ್ಮ ದೇಶ ಹಿಂಗಾಗಿ ಆಗಿದ್ದ ಮಗನ, ಸಾಕ ಬಾಯಿ ಮುಚ್ಚ ಭಾಳ ಮಾತಾಡಬ್ಯಾಡ” ಅಂತ ಫೋನ ಇಟ್ಟೆ.
ಅಲ್ಲಾ ಇವತ್ತ ರೊಕ್ಕದ ಸಂಬಂಧ ಬ್ಯಾರೆ ದೇಶಕ್ಕ ದತ್ತಕ್ಕ ಹೋದವರ ನಮ್ಮ ದೇಶದ ಬಗ್ಗೆ ಭಾಳ ಲೈಟ ಮಾತಾಡಿದರ ನಂಗಂತೂ ಭಾಳ ಸಿಟ್ಟ ಬರತದ.
ಆದ್ರು ಏನ ಅನ್ರಿ ನಮ್ಮ ದೇಶದಾಗ ಅಂತು ಈ income tax ತುಂಬೋದ ಅಂದ್ರ ಒಂದ ದೊಡ್ಡ ಸಡಗರ ಇದ್ದಂಗ. ಹಂಗ ಇನಕಮ್ ಇದ್ದೋರ ಇನಕಮ್ ಟ್ಯಾಕ್ಸ್ ಉಳಸಲಿಕ್ಕೆ ಗುದ್ದ್ಯಾಡವಲ್ಲರಾಕ ಬಿಡ್ರಿ, ನಂಬದೇನ ಇನಕಮ್ ಇಲ್ಲಾ ಏನ ಇಲ್ಲ ಸುಳ್ಳ ಈ ಇನಕಮ್ ಟ್ಯಾಕ್ಸ್ ರಿಟರ್ನ ಅದು ಇದು ಅಂತ ತಲಿಕೆಡಸಿಕೊಳ್ಳೊದರಾಗ ಏನ ಅರ್ಥ ಇಲ್ಲಾ.