ಒಂದ ದಿವಸ ಸಂಜಿಮುಂದ ನಾ ಹಿಂಗ ಕೆಲಸಾ ಮುಗಿಸಿಕೊಂಡ ಬಂದ ಸಾಕಾಗಿ ಮನ್ಯಾಗ ಅಡ್ಡಾಗಿದ್ದೆ, ನನ್ನ ಮೊಬೈಲಗೆ ಒಂದ ಫೋನ್ ಬಂತ. ಬರೇ ನಂಬರ ಇಷ್ಟ ಇತ್ತ ಹಿಂಗಾಗಿ ಕಂಪಲ್ಸರಿ ಎತ್ತ ಬೇಕಾತ. ಹಂಗ ಹೆಸರ ಬಂದಿತ್ತಂದರ ಆ ಹೆಸರ ನೋಡಿ ಫೋನ ಎತ್ತೋದು ಬಿಡೋದ ಡಿಸೈಡ ಮಾಡೊ ಮನಷ್ಯಾ ನಾ. ಸರಿ, ನಾ ಫೋನ ಎತ್ತಿದೆ, ಆ ಕಡೆಯಿಂದ
“ನಮಸ್ಕಾರ, ನಾನು ಡಿ.ಡಿ.ಚಂದನ ದಿಂದ ಆರತಿ ಅಂತ ಮಾತೊಡೊದ” ಅಂದರು. ನಾ ಅವರ ಹೆಸರ ಕೇಳಿದ್ದೆ, ಹಂಗ ಫೇಸಬುಕ್ಕಿನಾಗ ನನ್ನ ಫ್ರೆಂಡ ಇದ್ದೋರು ಅದರಾಗ ಅವರ ಫೇಸಬುಕ್ಕಿನಾಗ ಭಾರಿ ಫೇಮಸ ಹಿಂಗಾಗಿ ನಾ “ಗೊತ್ತಾತ ಹೇಳ್ರಿ” ಅಂದೆ. “ಏನಿಲ್ಲಾ, ನಾವು ಡಿ.ಡಿ.ಚಂದನದಲ್ಲಿ ’ಥಟ್ ಅಂತ ಹೇಳಿ’ ಅಂತ ಒಂದ ಕಾರ್ಯಕ್ರಮ ಮಾಡ್ತೇವಿ, ಅದಕ್ಕ ನೀವು ಬರಬೇಕಲಾ” ಅಂತ ಕೇಳಿದರು.
ನಾ ಅವರ ಹಂಗ ಅನ್ನೋದ ತಡಾ ಥಟ್ ಅಂತ “ಏ, ಇಲ್ರಿ, ನಂಗ ಸಾಹಿತ್ಯದ ಬಗ್ಗೆ ಏನ ಸುಡಗಾಡ ಗೊತ್ತಿಲ್ಲಾ, ಆ ಕ್ವಿಜ್-ಗಿಜ್ಜ ನಮಗ ಬಗಿ ಹರಿಯಂಗಿಲ್ಲಾ” ಅಂತ ಹೇಳಿ ಬಿಟ್ಟೆ. ನಾ ಹಿಂಗ ಥಟ್ ಅಂತ ಇಲ್ಲಾ ಅಂದಿದ್ದ ಆರತಿಯವರಿಗೆ ಸಿಟ್ಟ ಬಂತ ಕಾಣತದ
“ಅದೇಲ್ಲಾ ನನಗೊತ್ತರಿ, ಅದಕ್ಕ ನಿಮಗ ಆ ಕಾರ್ಯಕ್ರಮಕ್ಕ ಗೆಸ್ಟ ಅಂತ ಕರಿಲಿಕ್ಕೆ ಫೋನ ಮಾಡೇನಿ. ಹಂಗ ಕಾಂಪಿಟೇಶನ್ ಒಳಗ ಪಾರ್ಟಿಸಿಪೇಟ ಮಾಡೋರ ಶಾಣ್ಯಾರ ಇರಬೇಕು, ಅವರಿಗೆ ಜನರಲ್ ನಾಲೇಜ್ ಇರಬೇಕು ಅಂತ ಅದ, ಗೆಸ್ಟ ಆಗಲಿಕ್ಕೇನ ಇಲ್ಲಾ, ಸುಮ್ಮನ ಬರ್ರಿ” ಅಂತ ಕರದ ಫೋನ ಇಟ್ಟ ಬಿಟ್ಟರು. ಅಲ್ಲಾ ಅವರ ಹೇಳೊದು ಖರೇನ, ಇವತ್ತ ಎಲ್ಲಾ ಕಡೇ ಗೆಸ್ಟ್ ಏನ ಶಾಣ್ಯಾ ಇರಬೇಕಂತ ಇಲ್ಲಾ. ಹಿಂಗಾಗಿ ನಂಗೂ ಗೆಸ್ಟ ಅಂತ ಕರದಿದ್ದರು.
ಇನ್ನ ಪಾಪ ನನ್ನ ಮ್ಯಾಲೆ ಇಷ್ಟ ವಿಶ್ವಾಸ ಇಟಗೊಂಡ ಅಷ್ಟ ದೂರದಿಂದ ಲಾಂಗ್ ಡಿಸ್ಟನ್ಸ ಫೋನ ಮಾಡಿ ಕರದಾರ ಇಲ್ಲಾ ಅನ್ನಲಿಕ್ಕೆ ಬರಂಗಿಲ್ಲಾ. ಅದರಾಗ ಎಲ್ಲಾರೂ ’ಕನ್ನಡಕ್ಕಾಗಿ ಕೈ ಎತ್ತು’ ಅಂತ ಅನಬೇಕಾರ ನಾ ಕನ್ನಡಕ್ಕಾಗಿ, ಅದು ಕನ್ನಡ ಚಾನೆಲಗಾಗಿ, ಅದು ಡಿ.ಡಿ ೧ ಕ್ಕ ಇಲ್ಲಾ ಅಂದ್ರ ಹೆಂಗ ಅಂತ ಹೂಂ ಅಂತ ಒಪಗೊಂಡೆ.
ಮುಂದ ಒಂದ ವಾರ ಬಿಟ್ಟ ನಮ್ಮ ಆರತಿಯವರ ಮತ್ತ ಫೋನ ಮಾಡಿದ್ರು, ಈ ಸರತೆ ಅವರದ ನಂಬರ ನಾ ಫೋನ ಎತ್ತೊ ಲಿಸ್ಟ ಒಳಗ ಸೇವ ಮಾಡಿದ್ದೆ, ಅವರದ ಫೋನ ಬರೋದ ತಡಾ ಥಟ್ ಅಂತ ಫೋನ ಎತ್ತಿ ” ಹೇಳ್ರೀವಾ” ಅಂದೆ, ಅವರ ನಂಗ ಮುಂದ ಕಾರ್ಯಕ್ರಮಕ್ಕ ಯಾವತ್ತ, ಎಷ್ಟ ಗಂಟೆಕ್ಕ ಬರಬೇಕ, ಎಷ್ಟ ತಾಸಿನ ಕಾರ್ಯಕ್ರಮ ಎಲ್ಲಾ ಡಿಟೇಲ್ಸ್ ಹೇಳಿ, ಬರಬೇಕಾರ ನಿಂಬದ ಒಂದ ಕುಂಡ್ಲಿ (ಪರಿಚಯ) ತೊಗೊಂಡ ಬರ್ರಿ ಅಂತ ಹೇಳಿದರು.
ಇನ್ನ ’ನಾವು ಸಂಡೆ ಹುಟ್ಟಿದ್ದ ಮಂದಿ ಏನ ಕಾರ್ಯಕ್ರಮ ಇಟಗೊಂಡರು ಸಂಡೆನ ಇಟಗೋಬೇಕು’ ಅಂತ ನಾ ನವೆಂಬರ್ ಹತ್ತ, ೨೦೧೩, ಸಂಡೆ ದಿವಸ ಡೇಟ್ ಫಿಕ್ಸ್ ಮಾಡಿಸಿಸಿದೆ.
ಸರಿ, ಇತ್ತಲಾಗ ನಾ ಬೆಂಗಳೂರಿಗೆ ಹೊಂಟೇನಿ ಅಂತ ಗೊತ್ತಾಗೋದ ತಡಾ ನನ್ನ ಹೆಂಡತಿ
“ಮತ್ತ ಯಾರ ಬುಕ್ ಬರದಾರ ಈ ಸರತೆ? ಯಾಕ ಗಾಡಿ ಖರ್ಚ ಮೈಮ್ಯಾಲೆ ಹಾಕ್ಕೊಂಡ ಒಂದ ಉಪ್ಪಿಟ್ಟ ಚಹಾ ಸಂಬಂಧ ಬೆಂಗಳೂರ ತನಕಾ ಹೋಗ್ತೀರಿ, ಸುಮ್ಮನ ಅವರ ನಾಳೆ ಬುಕ್ ರೀಲೀಸ್ ಫೋಟೊ ಫೇಸಬುಕ್ಕಿನಾಗ ಹಾಕಿದ ಮ್ಯಾಲೆ ಲೈಕ ಮಾಡಿ ಕಮೆಂಟ ಮಾಡಬಾರದ” ಅಂತ ಶುರು ಮಾಡಿದ್ಲು. ಇನ್ನ ನನ್ನ ಹಿಂಗ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕ ಕರದಾರ ಅಂತ ಹೇಳಿ ಬಿಟ್ಟರ ಇಕಿ ಥಟ್ಟಂತ ನಾನು ಬರತೇನಿ ಅಂತ ಶುರು ಮಾಡೇ ಬಿಡ್ತಾಳ, ಅದರಾಗ ಆರತಿಯವರು ದಂಪತ್ ಬರ್ರಿ ಅಂತ ಏನ ಹೇಳಿಲ್ಲಾ, ಇನ್ನೇನರ ಇಕಿ ನಾ ಬ್ಯಾರೆ ಅಲ್ಲಾ ನನ್ನ ಗಂಡ ಬ್ಯಾರೆ ಅಲ್ಲಾ ಅವರನ ಕರದರ ನನ್ನು ಕರದಂಗ ಅಂತ ನನ್ನ ಟಿ.ವಿ. ಶೊ ಕ್ಕ ಬಂದ ಕ್ಯಾಮರಾದಾಗ ಹಣಿಕಿ ಹಾಕೇ ಬಿಡೋಕಿ ತಡಿ ಅಂತ ಹೇಳಿ ನಾ ಅಕಿಗೆ
“ಏನಿಲ್ಲಾ, ಬೆಂಗಳೂರಾಗ ಒಂದ ಬುಕ್ ಆವಾರ್ಡ ಫಂಕ್ಶನಗೆ ಗೆಸ್ಟ ಅಂತ ಕರದಾರ, ಗಾಡಿ ಖರ್ಚ ಕೊಡ್ತಾರ ಹೋಗಿ ಬರ್ತೇನಿ” ಅಂದೆ.
“ಅಯ್ಯ, ನನ್ನ ಹಣೇಬಾರ, ನೀವು ಬರದಿದ್ದ ಒಂದ ಬುಕ್, ಅದಕ್ಕಂತೂ ಯಾವ ಸುಡಗಾಡ ಆವಾರ್ಡು ಮೂಸ ನೋಡಲಿಲ್ಲಾ, ಇನ್ನ ನಿಮ್ಮನ್ನ ಮಂದಿ ಬ್ಯಾರೆ ಬುಕ್ಕಿಗೆ ಆವಾರ್ಡ ಕೊಡಲಿಕ್ಕೆ ಕರದಾರ? ಆತ ತೊಗೊ, ಹಿಂಗಾಗೆ ನಮ್ಮ ಕನ್ನಡ ಸಾಹಿತ್ಯ ಈ ಮಟ್ಟಕ್ಕ ಬಂದದ್ದು” ಅಂದ್ಲು. ನಂಗ ಖರೇ ಹೇಳ್ತೇನಿ ಅಕಿ ಹಂಗ ಅಂದಿದ್ದ ಕೇಳಿ ಪಿತ್ತ ನೆತ್ತಿಗೇರತ ಆದರ ಅಕಿ ಹೇಳೋದ ಖರೆ ಇತ್ತ ಅಂತ ಸುಮ್ಮನಾದೆ.
ಮುಂದ ನವೆಂಬರ ಹತ್ತಕ್ಕ ಬೆಂಗಳೂರ ಮುಟ್ಟಿ ಹೇಳಿದ್ದ ಟೈಮ ಕಿಂತ ಒಂದ ತಾಸ ಮೊದ್ಲ ದೂರದರ್ಶನದ ಗೇಟ ಮುಂದ ಹಾಜರ. ನಾ ಹೋಗಿ ಆರತಿ ಅವರಿಗೆ ಭೆಟ್ಟಿ ಆಗಿ ನಾನ ಪ್ರಶಾಂತ ಆಡೂರ ಅಂತ ಪರಿಚಯ ಮಾಡ್ಕೋಳದಕ್ಕ ಅವರ ಮಾರಿ ಸಣ್ಣ ಆಗಿ ಬಿಡ್ತು. ಬಹುಶಃ ಅವರ ನಾ ಏನ ಗಾಡಿ ಖರ್ಚ ಮೈಮ್ಯಾಲೆ ಹಕ್ಕೊಂಡ ಬರಂಗಿಲ್ಲಾ ಅನ್ಕೊಂಡಿದ್ದರೋ ಇಲ್ಲಾ ನನ್ನ ತಾವ ಕರದದ್ದ ಮರತ ಬ್ಯಾರೆ ಯಾರಿಗರ ಗೆಸ್ಟ ಅಂತ ಫಿಕ್ಸ್ ಮಾಡಿದ್ದರೊ ಅನಸಲಿಕತ್ತ. ಅವರ ನನಗ
“ನಾ ನಿಮಗೆ ಫೋನ್ ಮಾಡ್ತಾ ಇದ್ದೆ” ಅಂತ ತಮ್ಮ ಮೊಬೈಲ ತೊರಿಸಿ
“ಅದೇನ ಆಗಿದೆ ಅಂದ್ರೆ ಇವತ್ತು ಮುಂಜಾನೆಯಿಂದಲೇ ಚಿಕ್ಕ ಮಕ್ಕಳ ಸಂಗೀತ ಕಾರ್ಯಕ್ರಮ ನಡಿತಾ ಇದೆ, ಸ್ಟುಡಿಯೋ ತುಂಬಾ ಮಕ್ಕಳಿದ್ದಾರೆ, ಅವರದ ಮುಗಿಲಿಕ್ಕೆ ಎಂಟ ಗಂಟೆ ಆದರೂ ಆಗಬಹುದು, i am really sorry, ಇವತ್ತ ಕಾರ್ಯಕ್ರಮ ಮಾಡೋದ ಕಷ್ಟ ಆಗಬಹುದು” ಅಂತ ನಂಗ ಕರಕೊಂಡ ಹೋಗಿ ಸ್ಟುಡಿಯೋ ತೊರಿಸಿದರು. ಹಂಗ, ಅವರ ಹೇಳೊದ ಖರೇನ ಇತ್ತ. ಸಣ್ಣ ಸಣ್ಣ ಹುಡುಗರು ಎಷ್ಟ ಛಂದ ಹಾಡಲಿಕತ್ತಿದ್ವು, ಇನ್ನ ಅವರ ಕಾರ್ಯಕ್ರಮದ ಮುಂದ ನಂದೇನ ಅನಸ್ತ. ಆದ್ರೂ ಏನಪಾ ಅಲ್ಲಿಂದ ಇಲ್ಲಿ ತನಕ ಬಂದ ಒಣಾ-ಒಣಾ ಬರೇ ಸ್ಟುಡಿಯೋ ನೋಡಿ ಹೋಗೊ ಹಂಗ ಆತಲಾ ಅಂತ
“ಅಲ್ಲರಿ ಆರತಿಯವರ ಒಂದ ತಾಸ ಮೊದ್ಲನರ ಹೇಳಿದ್ರ ಆಟೋ ರೊಕ್ಕನರ ಉಳಿತಿತ್ತಲ್ಲರಿ” ಅಂತ ಅಂದೆ.
ಪಾಪ ಅವರ ಅದಕ್ಕ ಮತ್ತಿಷ್ಟ ಕೆಟ್ಟ ಅನಿಸಿಕೊಂಡ “ಇಲ್ಲಾ, ಪ್ರಶಾಂತ, ಹನ್ನೊಂದ ವರ್ಷದಿಂದ ೨೩೫೦ ಎಪಿಸೋಡ ಮಾಡಿದೇನಿ, ಇದ ಫಸ್ಟ ಪ್ರೊಗ್ರಾಮ್ ಪೊಸ್ಟಪೊನ್ ಆಗಿದ್ದು” ಅಂತ ಮತ್ತಿಷ್ಟ ಕೆಟ್ಟ ಅನಿಸಿಕೊಂಡ ಹೇಳಿದರು. ಕಡಿಕೆ ನಾನ ಸಮಾಧಾನ ತೊಗೊಂಡ
“ಏ, no issues. ನೀವೇನ ಭಾಳ ತಲಿಸಿಗೆಡಸಿಗೋ ಬ್ಯಾಡರಿ, ಮುಂದಿನ ಸರತೆ ಸ್ಟುಡಿಯೋ ಖಾಲಿ ಇದ್ದಾಗ ಮತ್ತ ಕರೀರಿ” ಅಂತ ನಾನ ಅವರಿಗೆ ಸಮಾಧಾನ ಮಾಡಿ ನಮ್ಮ ಕ್ವಿಜ್ ಮಾಸ್ತರ್ ಸೋಮೇಶ್ವರ ನಾರಪ್ಪವರಿಗೆ ಭೆಟ್ಟಿ ಆಗಿ ಅವರ ಜೊತಿ ಒಂದ ಸ್ವಲ್ಪ ಜನರೆಲ್ ನಾಲೆಡ್ಜ್ ಹಂಚಗೊಂಡ ಹರಟಿ ಹೊಡದ ಅಲ್ಲಿಂದ ರೈಟ ಅಂತ ಯಶವಂತಪುರಕ್ಕ ಬಂದ ಹುಬ್ಬಳ್ಳಿ ಟ್ರೇನ ಹತ್ತಿದೆ.
ಅಲ್ಲಾ ಹಂಗ ಹನ್ನೊಂದ ವರ್ಷದಿಂದ ಇಷ್ಟ ಪರಫೆಕ್ಟ ಪ್ರೊಗ್ರಾಮ್ ಮಾಡಲಿಕತ್ತವರಿಗೆ ನನ್ನ ಪ್ರೊಗ್ರಾಮಿಗೆ ಹಿಂಗ ಆಗಬೇಕಂದರ ನನ್ನ ಹಣೇಬರಹನ ಛಲೊ ಇರಲಿಕ್ಕಿಲ್ಲಾ ಅನಸ್ತ. ಅಲ್ಲಾ ಹಂಗ ಹೆಂಡ್ತಿಗೆ ಸುಳ್ಳ ಹೇಳಿ ಹೋದವರಿಗೆ ಹಿಂಗ ಆಗಬೇಕ ಬಿಡ್ರಿ.
ಒಂದ ರೀತಿಯಿಂದ ನಾ ನನ್ನ ಹೆಂಡತಿಗೆ ’ಥಟ ಅಂಟ ಹೇಳಿ’ ಕಾರ್ಯಕ್ರಮಕ್ಕ ಹೊಂಟೇನಿ ಅಂತ ಹೇಳಲಾರದ್ದ ಭಾಳ ಛಲೋ ಆತ ಅನಸ್ತ, ನಾ ಏನರ ಅಕಿಗೆ ಹೇಳಿದ್ದರ ಅಕಿ ಇಡಿ ಓಣಿ ತುಂಬ ಎಲ್ಲಾ “ನಮ್ಮ ಮನೇಯವರ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕ ಬೆಂಗಳೂರಿಗೆ ಹೊಂಟಾರ” ಅಂತ ಡಂಗರಾ ಹೊಡಿತಿದ್ಲು ಆಮ್ಯಾಲೆ ಹಿಂಗ ಆಗಿತ್ತಂದರ ’ನಂಗ ಬಿಟ್ಟ ಹೋದರಿ ಅದಕ್ಕ ಹಿಂಗ ಆತ, ಬರೊಬ್ಬರಿ ಆತ’ ಅಂತ ಗ್ಯಾರಂಟಿ ಅಂತಿದ್ಲು.
ಅಲ್ಲಾ, ಹಂಗ ನಂಗ ಕಾರ್ಯಕ್ರಮಕ್ಕ ಕರದಾರ, ನಾ ಹೊಂಟೇನಿ ಅನ್ನೋದ ಕರಿಸಿಗೊಂಡ ನಂಗ, ಕರದ ಆರತಿಯವರಿಗೆ ಇನ್ನ ನನಗ ಪ್ರಶ್ನೆ ಕೇಳೋ ಸೋಮೇಶ್ವರ ಮಾಸ್ತರಿಗೆ ಬಿಟ್ಟ ಬ್ಯಾರೆ ಯಾರಿಗೂ ಗೊತ್ತ ಇದ್ದಿದ್ದಿಲ್ಲಾ, ಹಿಂಗಾಗಿ ನಾ ಏನ ಹಿಂಗ ಆತಲಾ ಅಂತ ತಲಿಕೆಡಸಿಗೊಳೊ ಪ್ರಸಂಗ ಬರಲಿಲ್ಲಾ. ಅಲ್ಲಾ ಈಗ ನಿಮಗೇಲ್ಲಾ ಗೊತ್ತಾತ ಬಿಡ್ರಿ, ಆದರ ಅದೇನ ನನಗ ಫರಕ ಬೀಳಂಗಿಲ್ಲಾ. ಒಟ್ಟ ನನ್ನ ಹೆಂಡತಿಗೆ ಗೊತ್ತಾಗಲಿಲ್ಲಾ ಅಷ್ಟ ಸಾಕ…..
ಹಂಗ ಮುಂದ ಒಂದ ಸರತೆ ಸ್ಟುಡಿಯೋ ಖಾಲಿ ಇದ್ದಾಗ ಅದು ಸಂಡೆನ ನೋಡಿ ಆರತಿಯವರ ನಂಗ ಫೋನ ಮಾಡಿ ’ಥಟ್ ಅಂತ ಹೇಳಿ’ ಕಾರ್ಯಕ್ರಮಕ್ಕ ’ಥಟ್ ಅಂತ ಬರ್ರಿ’ ಅಂತ ಕರದ ನನ್ನ ಕಾರ್ಯಕ್ರಮ ಮಾಡಿ ಮುಗಿಸಿದರು.