ದೇವರ ಇಚ್ಛೆ….

ಮೊನ್ನೆ ಬನಶಂಕರಿ ನವರಾತ್ರಿಗೆ ನಾ ಸಹ-ಕುಟಂಬ ಪರಿವಾರದೊಂದಿಗೆ ಅಂದರ ನನ್ನ ಆಫಿಸಿಯಲ್ ಕುಟಂಬ ಕರಕೊಂಡ ಬನಶಂಕರಿಗೆ ಹೋಗಿದ್ದೆ. ಬನಶಂಕರಿ ನಮ್ಮನಿ ಕುಲದೇವರ ಹಿಂಗಾಗಿ ವರ್ಷಕ್ಕೊಮ್ಮೆ ನವರಾತ್ರಿಗೆ ಸ್ವಂತ ಗಾಡಿ ಖರ್ಚ ಮಾಡಕೊಂಡ ಹೋಗಬೇಕಂತ, ಅದಕ್ಕ ಹೋಗಿದ್ದೆ.
ಒಳಗ ಗರ್ಭಗುಡ್ಯಾಗ ಸೀರಿ ಉಡಿತುಂಬಿ, ಮಂಗಳಾರತಿ, ಅಭಿಷೇಕ ಮಾಡಿಸಿ ಹೊರಗ ಬರೋದರಾಗ ನನ್ನ ನಾಲ್ಕ ವರ್ಷದ ಮಗಳ ಕಳಕೊಂಡ ಬಿಟ್ಟಿದ್ಲು. ಅತ್ತಲಾಗ ಇತ್ತಲಾಗ ಎಲ್ಲೇ ನೋಡಿದರು ಕಾಣಲಿಲ್ಲಾ.
“ರ್ರಿ, ಅಕಿ ಅಲ್ಲೆ ಗರ್ಭಗುಡಿ ಒಳಗ ಇರಬೇಕು, ಹೋಗಿ ನೋಡ್ಕೊಂಡ ಬರ್ರಿ, ಮಗಳ ಕಡೆ ಲಕ್ಷ ಇರಲಿ ಅಂದರ ಕಣ್ಣ ಮುಚಗೊಂಡ ದೇವರ ಮುಂದ ನಿಂತ ಬಿಟ್ಟರಿ” ಅಂತ ನನ್ನ ಹೆಂಡತಿ ನಂಗ ಬೈಲಿಕತ್ಲು.
ನಾ ಗರ್ಭ ಗುಡಿಯಿಂದ ಹೊರಗ ಬಂದ ದಾರಿಲೇನ ಒಳಗ ಹೋಗಲಿಕ್ಕೆ ಭಟ್ಟರ ಬಿಡಂಗಿಲ್ಲಾ ಅಂತ ಮತ್ತ ಪಾಳೇ ಹಚ್ಚಿ ಒಳಗ ಹೋಗಿ ನೋಡಿದ್ರ ಅಲ್ಲೇನ ನನ್ನ ಮಗಳ ಕಾಣಲಿಲ್ಲಾ.
ನಾ ಬನಶಂಕರಿನ್ನ ಬಿಟ್ಟ ಅಲ್ಲಿದ್ದವರಿಗೇಲ್ಲಾ ಕೇಳಿದೆ ‘ಯಾವದರ ಸಣ್ಣ ಹುಡಗಿ, ಕೆಂಪ ಫ್ರಾಕ್ ಹಾಕೊಂಡೊಕಿನ್ನ ನೋಡಿರೇನು’ ಅಂತ. ಒಂದಿಷ್ಟ ಮಂದಿ ಇಲ್ಲಾ ಅಂದರು, ಇನ್ನ ಕೆಲವೊಬ್ಬರು ನನ್ನಂಗ ದೇವರ ಮುಂದ ಮಕ್ಕಳ ಖಬರ ಇಲ್ಲದ ಕಣ್ಣಮುಚಗೊಂಡ ನಿಂತವರು ಕಣ್ಣ ತಗದ ತಮ್ಮ ಮಕ್ಕಳನ ಹುಡಕಲಿಕತ್ತರು.
ನಾ ಮತ್ತ ಹೊರಗ ಬಂದ ನೋಡಿದ್ರ ನನ್ನ ಮಗಳದು ಇನ್ನೂ ಪತ್ತೇ ಇರಲಿಲ್ಲಾ. ಮೊದ್ಲs ಬನಶಂಕರಿ ನವರಾತ್ರಿ ಗದ್ಲ ಬ್ಯಾರೆ. ನನ್ನ ಹೆಂಡತಿ ಮಾರಿ ಸಣ್ಣಾತ, ಇನ್ನೇನ ಅಳೋದ ಒಂದ ಬಾಕಿ ಇತ್ತ.
“ರ್ರಿ, ಮುಂದ ಹೆಂಗರಿ?” ಅಂದ್ಲು.
“ನಾ ಅದಕ್ಕs ಹೇಳಿದ್ದೆ, ಆಪರೇಶನ್ ಮಾಡಸೋದ ಬ್ಯಾಡಾ ಅಂತ ನನ್ನ ಮಾತ ಎಲ್ಲೆ ಕೇಳಿದಿ. ಎರಡನೇದ ಹಡೀಯೊ ಪುರಸೊತ್ತ ಇಲ್ಲದ ಆಪರೇಶನ್ ಮಾಡಿಸಿಗೊಂಡ ಬಂದಿ. ಇನ್ನ ಮುಂದಿಂದ ದೇವರ ಇಚ್ಛೆ ತೊಗೊ” ಅಂದೆ.
ನನ್ನ ಮಾತ ಕೇಳಿ ನನ್ನ ಹೆಂಡತಿ ಸಿಟ್ಟಲೆ ‘ಯಾ ಹೊತ್ತಿನಾಗ ಏನ ಮಾತಾಡಬೇಕು, ಅದು ಎಲ್ಲೇ ಅಂತ ನಿಮಗ ಗೊತ್ತಾಗಂಗಿಲ್ಲಾ’ ಅಂತ ಸಾಕ್ಷಾತ ಶಾಕಾಂಬರಿ ಮೈಯಾಗ ಬಂದೊರಗತೆ ಒದರಲಿಕತ್ಲು. ನನಗ ಅಕಿ ಹಂಗ ಒದರೋದ ನೋಡಿ ಎಲ್ಲೆ ಗುಡಿಗೆ ಬಂದ ಜನಾ ಇಕಿ ಮೈಯಾಗ ಬನಶಂಕರಿ ಬಂದಾಳ ಅಂತ ಇಕಿಗೆ ನಮಸ್ಕಾರ ಮಾಡಿ ಉಡಿ ತುಂಬಲಿಕ್ಕೆ ಪಾಳಿ ಹಚ್ಚತಾರೋ ಅಂತ ಹೆದರಕಿ ಹತ್ತ.
ನಾ ನನ್ನ ಹೆಂಡತಿಗೆ “ಏ, ಪ್ರಶಸ್ತಿ ಕಾಲಾಗ ಗೆಜ್ಜಿ ಹಾಕೊಂಡಿದ್ಲೇನ?” ಅಂತ ಕೇಳಿದೆ.
ಅಕಿ “ಹೌದು, ಯಾಕ?” ಅಂದ್ಲು.
“ಅಲ್ಲಲೇ, ನಿಂಗೋತ್ತಿಲ್ಲಾ? ಬನಶಂಕರಿ ವಕ್ಕಲ ಇದ್ದೋರ ಮನ್ಯಾಗ ಹೆಣ್ಣಮಕ್ಕಳ ಗೆಜ್ಜಿ ಹಾಕೋ ಬಾರದು ಅಂತ, ಹಂಗ ಗೆಜ್ಜಿ ಹಾಕ್ಕೊಂಡರ ದೇವಿ ಆ ಕೂಸಿನ್ನ ನುಂಗತಾಳ ಅಂತ ಕಥಿ ಅದ ಕೇಳಿ ಇಲ್ಲೋ” ಅಂದೆ.
ನನ್ನ ಹೆಂಡತಿಗೆ ಮತ್ತ ಪಿತ್ತ ನೆತ್ತಿಗೇರತ
“ರ್ರಿ, ನಮ್ಮ ಸ್ವಂತ ರೊಕ್ಕದಲೇ ಗೆಜ್ಜಿ ಹಾಕ್ಕೋಬಾರದು, ಬ್ಯಾರೆ ಯಾರರ ಕೊಡಸಿದರ ಹಾಕೊಬಹುದು. ಈ ಗೆಜ್ಜಿ ನಮ್ಮವ್ವ ಕೊಡಸಿದ್ಲು” ಅಂದ ದೇವರಿಗೆ ಕೈಮುಗದ
“ತಾಯಿ ಬನಶಂಕರಿ, ನನ್ನ ಮಗಳ ಸಿಗೋತನಕ ಎಲ್ಲೆ ಇರಲಿ ಆರಾಮ ಇರಲಿವಾ, ನಿನಗ ಸೀರಿ ಉಡಸತೇನಿ” ಅಂತ ಬೇಡ್ಕೊಂಡಳು. ನಂಗ ತಲಿ ಕೆಟ್ಟತ, ಈಗ ಒಂದ ತಾಸ ಹಿಂದ ಬನಶಂಕರಿಗೆ ಸೀರೆ ಉಡಿಸಿ ಬಂದೇನಿ ಇಕಿ ಏನ ಮತ್ತ ಸೀರಿ ಉಡಸ್ತೇನಿ ಅಂತ ಬೇಡ್ಕೋಳಿಕತ್ತಾಳಲಾ ಅಂತ ಸಿಟ್ಟಬಂತ.
ಮೊದ್ಲs ನಮ್ಮ ಮಂದ್ಯಾಗ ಕನ್ಯಾ ಕಡಿಮೆ ಅವ ಯಾರರ ಗಂಡಸ ಮಗನ ಹಡದವರು ತಮ್ಮ ಮಗಗ ಸೆಟ್ ಮಾಡ್ಕೊಂಡ ಕರಕೊಂಡ ಹೋದರೊ ಏನೋ ಅನ್ಕೋತ ನಾ ನನ್ನ ಮಗಳನ್ನ ಸಿರಿಯಸ್ ಆಗಿ ಹುಡಕಲಿಕತ್ತೆ.
ನಾ ಅಕಿನ್ನ ಹುಡಕೊತ ಹಿಂಗ ಎರಡ ಸುತ್ತ ಪ್ರದಕ್ಷಿಣಿ ಹಾಕೋದರಾಗ ಅಕಿ ಹಿಂದಿನಿಂದ ‘ಪಪ್ಪಾ’ ಅಂತ ಓಡಿ ಬಂದ್ಲು.
“ದನಾ ಕಾಯೋಕಿನ ಎಲ್ಲಿ ಹೋಗಿದ್ದಿ” ಅಂತ ಕೇಳಿದರ
“ನಾ ಅಲ್ಲೇ ಗುಡಿ ಕಟ್ಟಿ ಮ್ಯಾಲೆ ಪೋಲಿಯೊ ಹಾಕಲಿಕತ್ತಿದ್ದರು, ಪಾಳೆ ಹಚ್ಚಿ ಪೋಲಿಯೋ ಹಾಕಿಸಿಗೊಂಡ ಬಂದೆ” ಅಂದ್ಲು.
ನನ್ನ ಮಗಳಿಗೆ ಆ ಪೋಲಿಯೋ ಔಷಧ ಭಾಳ ಸೇರತದ ಹಿಂಗಾಗಿ ಅಕಿ ಎಲ್ಲೇರ ಪೋಲಿಯ ಹಾಕಲಿಕತ್ತಿದ್ದರು ಅಂದರ ತಪ್ಪಸಲಾರದ ಹಾಕಿಸಿಗೊಂಡ ಬರತಾಳ.
ಇರಲಿ ಒಟ್ಟ ಮಗಳ ಸಿಕ್ಕಳಲಾ, ಇನ್ನೊಂದ ಹಡೆಯೋದು ತಪ್ಪತು ಅಂತ ಬನಶಂಕರಿಗೆ ಇನ್ನೊಂದ ಕಾಯಿ ಒಡಸಿಗೊಂಡ ಹುಬ್ಬಳ್ಳಿ ಹಾದಿ ಹಿಡದ್ವಿ.
ನನ್ನ ಹೆಂಡತಿ ಮತ್ತೋಮ್ಮೆ ದೇವರಿಗೆ ಅಡ್ಡ ಬಿದ್ದ ‘ಮುಂದಿನ ಸಲಾ ಜೋಡ ಸೀರಿ ಉಡಸ್ತೇನಿ ತೊಗೊವಾ ನಮ್ಮವ್ವಾ’ ಅಂದ ನನ್ನ ಬೆನ್ನ ಹತ್ತಿದ್ಲು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ