ಮೊನ್ನೆ ಬೆಂಗಳೂರಾಗ ನಮ್ಮ ದೋಸ್ತ ರಾಹುಲ ಭೆಟ್ಟಿ ಆಗಿದ್ದಾ, ಅವಂದ ಎಂಗೇಜಮೆಂಟ ಆಗಿ ಜಸ್ಟ ಒಂದ ವಾರ ಆಗಿತ್ತ ಅಂವಾ ಪೂರ್ತಿ ಆ ಹುಡಗಿ ಗುಂಗಿನಾಗ ಇದ್ದಾ. ಹಂಗ ನಾ ಹುಡಗಿ ಫೋಟೊ ಫೇಸಬುಕ್ಕಿನಾಗ ನೋಡಿದ್ದೆ ಖರೆ ಆದ್ರೂ ಈ ಫೇಸಬುಕ್ಕಿನಾಗ ಹುಡಗ್ಯಾರ ಫೋಟೊ ಭಾಳ ಫೇಕ ಇರ್ತಾವಲಾ ಹಿಂಗಾಗಿ
’ಹೆಂಗಿದ್ದಾಳಲೇ ನಿನ್ನ ಹೆಂಡ್ತಿ ಫಿಸಿಕಲಿ ನೋಡಲಿಕ್ಕೆ’ ಅಂತ ಕೇಳಿದೆ.
ನಾ ಹಂಗ ಕೇಳಿದ್ದ ತಪ್ಪಾತ ಅಂವಾ ಬ್ರಿಗೇಡ ರೋಡನಾಗ ಕಂಡ ಕಂಡ ಛಂದ ಛಂದ ಹುಡಗ್ಯಾರನ ತೋರಿಸಿ ತೋರಿಸಿ ಈಕಿ ಗತೆ ಕೂದ್ಲಾ, ಅಕಿಗೆ ಗತೆ ಹುಬ್ಬ, ಮತ್ತೊಬ್ಬೊಕಿ ಗತೆ ಮೂಗು,ಇನ್ನೊಬ್ಬಕಿ ಗತೆ ತುಟಿ…ಹಂಗ ಹಿಂಗ ಅಂತ ಹಂಗ ಕೆಳತನಕಾ ಹೊಂಟ ಬಿಟ್ಟಾ. ನಾ ಯಾಕರ ಅವನ ಹುಡಗಿ ಬಗ್ಗೆ ಕೇಳಿದೆಪಾ ಅನ್ನೊಂಗ ಆಗಿ ಹೋತ. ನಾ ತಲಿ ಕೆಟ್ಟ ಸಾಕ ಮುಗಸ ಅನ್ನೋತನಕಾ ಅಂವಾ ಅಂವಾ ಆ ಹುಡಗಿ ಕಿರಬಟ್ಟ ಮುಟ್ಟಿ ಬಿಟ್ಟಿದ್ದಾ. ಆ ಪರಿ ಹುಡಗಿದ ಗುಣಗಾನ ಮಾಡಿದ್ದ ಮಾಡಿದ್ದ.
’ಇಲ್ಲಲೇ ಖರೇನ ಎಂಗೇಜಮೆಂಟ ಆದಾಗಿಂದ ಎಲ್ಲೆ ನೋಡಿದರು, ಯಾರ ಒಳಗ ನೋಡಿದರು ಬರೇ ಅಕಿನ ಕಾಣಲಿಕತ್ತಾಳ, ಕಣ್ಣ ಮುಚ್ಚಿದರು ಅಕಿನ, ಕಣ್ಣ ತಗದರು ಅಕಿನ..ಅಕಿ ಒಳಗು ಅಕಿನ…ನನ್ನ ಒಳಗು ಅಕಿನ…….’ ಅಂತ ಅಗದಿ ಭಾರಿ ಕವಿ ಗತೆ ಹೇಳಲಿಕತ್ತಾ. ಅವನೌನ ಜಗತ್ತಿನಾಗ ಬ್ಯಾರೆ ಯಾರದರ ಹೆಂಡ್ತಿ ಛಂದ ಇದ್ದಾಳೊ ಇಲ್ಲೊ ಅನ್ನೋರಗತೆ ಅಂವಾ ತನ್ನಕಿ ಬಗ್ಗೆ ಹೇಳಿದ್ದ ಹೇಳಿದ್ದ. ನಾ ಅವಂಗ
’ಲೇ, ಹುಚ್ಚಾ..ಸ್ಟಾರ್ಟಿಂಗ ಸ್ಟಾರ್ಟಿಂಗಗೆ ಎಲ್ಲಾರಿಗೂ ಅದ ಹಂಗ ಅನಸ್ತದ, ಅದ ಒಂಥರಾ Droste effect ಇದ್ದಂಗ, ಭಾಳ ತಲಿಗೆಡಸಿಗೋ ಬ್ಯಾಡ, ನಂಗು ಹೊಸ್ತಾಗಿ ಹುಡಗಿ ಫಿಕ್ಸ ಆದಾಗ ಹಂಗ ಆಗಿತ್ತ, ನೀ ಮತ್ತೇಲ್ಲರ ಬ್ಯಾರೆ ಯಾವದರ ಹುಡಗಿಗೆ ನಿನ್ನ ಹುಡಗಿಗತೇ ಕಂಡ್ಲು ಅಂತ ಕೈ-ಬಾಯಿ ಹಾಕಿ ಮಚ್ಛಿಲೇ ಹೊಡಿಸಿಗೊಂಡ ಗಿಂಡಿ ನಡಿ’ ಅಂತ ಹೇಳಿದೆ.
ನಾ ’ದ್ರೋಸ್ಟ ಎಫೆಕ್ಟ’ ಅಂತ ಸೈಂಟಿಫಿಕ್ ವರ್ಡ ಅಂದಿದ್ದ ಕೇಳಿ ಪಾಪ ಅಂವಾ ತನಗೇಲ್ಲೊ ಯಾವದೊ ಮಾನಸಿಕ ರೋಗ ಬಂದದ ಅಂತ ತಿಳ್ಕೊಂಡಾ. ನಾ ಮತ್ತ ಅವಂಗ ತಿಳಿಸಿ ದ್ರೋಸ್ಟ ಪರಿಣಾಮದಾಗ ’ಒಂದು ಚಿತ್ರ – ಅದರಾಗ ಮತ್ತ ಅದ ಚಿತ್ರ- ಮತ್ತ ಅದರಾಗ ಇನ್ನೊಂದ ಸಣ್ಣದ ಅದ ಚಿತ್ರ – ಹಂಗ ಎಂಡ ಇಲ್ಲದ ಸುರುಳಿ- ಸುರಳಿ ಚಿತ್ರ’ ಕಾಣ್ತಾವ ಅಂತ (The Droste effect — is the effect of a picture appearing within itself, The appearance is recursive: depicts a smaller version of the image within itself in a recursive manner), ಹಂಗ ನಿನಗೂ ಎಲ್ಲಾದರಾಗೂ, ಎಲ್ಲಾರ ಒಳಗೂ ಬರೇ ನಿನ್ನ ಹುಡಗಿನ ಕಾಣ್ತಾಳ, ಇದರಾಗ ಹೆದರೊ ಹಂತಾದೇನಿಲ್ಲ ತೊಗೊ ಅಂತ ಸಮಾಧಾನ ಮಾಡಿದೆ.
ಅಲ್ಲಾ ಹಂಗ ನಂಗು ಹದಿನಾಲ್ಕ ವರ್ಷದ ಹಿಂದ ಕನ್ಯಾ ಫಿಕ್ಸ ಆದಾಗ ಈ ದ್ರೋಸ್ಟ ಇಫೆಕ್ಟ ಆಗಿತ್ತ. ನನಗಂತೂ ನಮ್ಮ ಇಡಿ ಹುಬ್ಬಳ್ಳ್ಯಾಗ ನನ್ನ ಹೆಂಡತಿ ಅಷ್ಟ ಛಂದ ಯಾ ಹುಡಗಿನೂ ಇಲ್ಲೇ ಇಲ್ಲಾ ಅನಸ್ತಿತ್ತ. ಹಿಂಗಾಗಿ ನಾ ನಮ್ಮ ದೋಸ್ತನಗತೆ ಬ್ಯಾರೆ ಆಲತು-ಫಾಲತು ಹುಡಗ್ಯಾರನ ನೋಡಿ ಅಕಿಗತೆ ಮೂಗು, ಇಕಿಗತೆ ಕಣ್ಣು ಅಂತ ಕಂಪೇರ ಮಾಡ್ತಿದ್ದಿಲ್ಲಾ. ನಂದೇನಿದ್ದರು ಪಿಕ್ಚರ ನಟಿಯರ ಜೊತಿ ಕಂಪೇರಿಸನ್ ಇರ್ತಿತ್ತ.
ನಮ್ಮಕಿ ನಕ್ಕರ ’ದೇವರ ಗುಡಿ’ ಒಳಗಿನ ಭಾರತಿ ಅನಸೋಕಿ, ಅತ್ತರ ’ಬೆಂಕಿಯ ಬಲೆ’ಒಳಗಿನ ಲಕ್ಷ್ಮಿ ಅನಸೋಕಿ..ಸಿಟ್ಟಾದಾಗ ’ಬಬ್ರುವಾಹನದ’ ಬಿ.ಸರೋಜಾದೇವಿ, ಪ್ರೀತಿ ಉಕ್ಕಿದಾಗ ’ಎಡಕಲು ಗುಡ್ಡದ ಮ್ಯಾಲೆ’ನ ಜಯಂತಿ, ಯರಕೊಂಡ ಕೂದ್ಲಾ ಬಿಟ್ಟಾಗ ’ಎರೆಡು ಕನಸು’ಒಳಗಿನ ಕಲ್ಪನಾ ಅನಸೋಕಿ, ಮಂಗ್ಯಾನಾಟ ಮಾಡಬೇಕಾರ ’ಸೀತಾ ರಾಮು’ ಒಳಗಿನ ಮಂಜುಳಾ….ಹಿಂಗ ನಂಗ ಪ್ರತಿ ಹಿರೋಯಿನ್ ಒಳಗು ಪ್ರೇರಣಾ ಕಾಣತಿದ್ಲು. ಹಂಗ ಈ ದ್ರೋಸ್ಟ ಇಫೆಕ್ಟ ಲಗ್ನಾಗಿ ಒಂದ ಹಡಿಯೊತನಕ ಇತ್ತ. ಯಾವಾಗ ಒಂದ ಗಂಡ ಹಡದ ’ದಾರಿ ತಪ್ಪಿದ ಮಗಾ’ ಒಳಗಿನ ಸಾಹುಕಾರ ಜಾನಕಿ ಆದ್ಲು ಆವಾಗ ಒಂದ ಸ್ವಲ್ಪ ಕಡಮಿ ಆತ.
ಈಗ ಹದಿನಾಲ್ಕ ವರ್ಷ ಆದಮ್ಯಾಲೆನೂ ಆವಾಗ ಇವಾಗ ನನಗ ಈ ದ್ರೋಸ್ಟ ಇಫೆಕ್ಟ ಕಾಣತಿರ್ತದ. ಈಗ ನನ್ನ ಹೆಂಡತಿ ಯರಕೊಂಡ ಕೂದ್ಲಾ ಬಿಟ್ಟಾಗ ಶರಪಂಜರದಾಗಿನ ಕಲ್ಪನಾ ಕಂಡಂಗ, ಸಿಟ್ಟು-ಸಿಡಕು ಮಾಡಿದಾಗ ’ಶುಭ ಮಂಗಳ’ದಾಗಿನ ಆರತಿಗತೆ ಕಾಣತಿರ್ತಾಳ ಆ ಮಾತ ಬ್ಯಾರೆ. ಒಟ್ಟ ಒಂದ ಮಾತ ಹೇಳಬೇಕಂದರ ನಾ ಅಕಿ ಕೈಯಾಗ ಸಿಕ್ಕ ’ಅಮ್ಮಾವ್ರ ಗಂಡ’ ಒಳಗಿನ ಶಿವರಾಜಕುಮಾರ ಆಗೇನಿ ಇಷ್ಟ ಮಾತ್ರ ಖರೆ.
ಅಲ್ಲಾ ಇದ ಇರವಲ್ತಾಕ ಬಿಡ್ರಿ, ಇದೇನ ದೊಡ್ಡ ವಿಷಯ ಅಲ್ಲಾ. ಹಂಗ ನನಗಾದಂಗ ನಮ್ಮ ದೋಸ್ತಗಾದಂಗ ನಿಮಗೂ ಫಿಕ್ಸ ಆದ ಹೊಸ್ತಾಗಿ ಆಗೆ ಆಗಿರ್ತದ. ಆದರ ಹಿಂಗ ಆಗೋದಕ್ಕ ದ್ರೋಸ್ಟ ಇಫೆಕ್ಟ ಅಂತಾರ ಅಂತ ಹೇಳಲಿಕ್ಕೆ ಇಷ್ಟೇಲ್ಲಾ ಬರಿಬೇಕಾತ.