ಮೊನ್ನೆ ನಮ್ಮ ರಾಜಾಗ ಕಡಿಕೂ ಮದುವಿ ಆಗಿ ಎಂಟ ವರ್ಷದ ಮ್ಯಾಲೆ ಒಂದ ಕೂಸ ಹುಟ್ಟತು. ಏನಿಲ್ಲದ ಅವಂಗ ಕನ್ಯಾ ಸಿಕ್ಕ ಮದುವಿ ಆಗೋದರಾಗ ೩೬ ವರ್ಷ ಆಗಿದ್ವು, ಅದರಾಗ ಅಂವಾ ಸಾಲಿ ಜಾಸ್ತಿ ಕಲತಿದ್ದಿಲ್ಲಾ, ಥರ್ಡ ಕ್ಲಾಸಿನಾಗ ಬಿ.ಎಸ್ಸಿ ಮಾಡಲಿಕ್ಕೆ ಐದ ವರ್ಷ ತೊಗೊಂಡಿದ್ದಾ. ಮುಂದ ಛಲೋ ನೌಕರಿ ಸಿಗೋತನಕಾ ಅಂತ ಒಂದ ಕೊರಿಯರ್ ಏಜೆನ್ಸಿ ಒಳಗ ಕೆಲಸಕ್ಕ ಹೊಂಟಂವಾ ಅದನ್ನ ಪರ್ಮನೆಂಟ ಮಾಡ್ಕೊಂಡಾ. ಹಂಗ ಆವಾಗಿನ್ನೂ ನಮ್ಮ ಮಂದ್ಯಾಗ ಕನ್ಯಾದ್ದ ಅಷ್ಟ ಬರಗಾಲ ಬಿದ್ದಿದ್ದಿಲ್ಲಾ ಖರೆ, ಆದ್ರೂ ಹುಡಗ ಕೊರಿಯರ್ ಡಿಲೇವರಿ ಬಾಯ್ ಅಂದ ಕೂಡಲೇ ಕನ್ಯಾ ಸಿಗೋದ ಸ್ವಲ್ಪ ತ್ರಾಸ ಆತ. ಸ್ವಲ್ಪ ಏನ್ ಇವಂಗ ಕನ್ಯಾ ಸಿಗೋದರಾಗ ೩೬ ವರ್ಷ ಆಗೇ ಬಿಟ್ಟಿದ್ವು.
ಅವರವ್ವಂತೂ ನಾವು ಮನಿಗೆ ಹೋದಾಗ ಒಮ್ಮೆ
“ನಿಂಬದೇಲ್ಲಾ ಮದುವಿ ಆಗಿ ಮಕ್ಕಳಾಗಲಿಕತ್ವು, ನಮ್ಮ ರಾಜಾಗ ಒಂದೂ ಕನ್ಯಾನ ಸಿಗವಲ್ವು, ನಿಮ್ಮ ದೋಸ್ತಗ ಒಂದ ಕನ್ಯಾ ನೋಡರಿ” ಅಂತ ಗಂಟ ಬೀಳ್ತಿದ್ಲು. ಪಾಪ, ಆಕಿ ಜೀವಾ ನಂಬದೆಲ್ಲಾ ಸಂಸಾರ ನೋಡಿ ಚುಟು-ಚುಟು ಅಂತಿತ್ತ.
ಅವರವ್ವಗ ಅವಂದೊಂದ ಲಗ್ನಾಗಿ ತನಗ ಒಂದ ಸೊಸಿ ಅನ್ನೋದ ಮನಿಗೆ ಬಂದರ ಸಾಕಾಗಿತ್ತ. ಅದರಾಗ ಮ್ಯಾಲೆ ಅವಂಗ ಅವನಕಿಂತ ಒಂದ ಹನ್ನೆರಡ ವರ್ಷ ಸಣ್ಣೊಕಿ ತಂಗಿ ಬ್ಯಾರೆ ಇದ್ಲು. ಹಿಂಗಾಗಿ ಒಂದ ಹುಡಗಿ ಹೂಂ ಅನ್ನೋದ ತಡಾ ಅವರವ್ವಾ ವಾಲಗಾ ಊದಿಸಿ ಬಿಟ್ಲು. ಆಕಿಗೆ ತಾ ಸಾಯೋದರಾಗ ಮೊಮ್ಮಗನ ಬ್ಯಾರೆ ನೋಡಬೇಕಿತ್ತ.
ಆದ್ರ, ಪಾಪ ಆಕಿ ಅನ್ಕೊಂಡಂಗ ಆಗಲಿಲ್ಲಾ. ಈ ಮಗಂದ ಮದುವಿ ಇಷ್ಟ ಲೇಟ ಅಂತ ಅಂದರ ಮುಂದ ಹಡಿಯೋದ ಅದರಕಿಂತ ಲೇಟಾ ಆಗಲಿಕತ್ತ. ಕೆಲವೊಬ್ಬರ ವಯಸ್ಸಾದ ಮ್ಯಾಲೆ ಲಗ್ನಾದರ ಹಿಂಗ ಆಗ್ತದ, ಲಗೂನ ಕನ್ಸೀವ ಆಗಂಗಿಲ್ಲಾ ಅಂತ ಅಂದರು. ಇನ್ನ ಕೆಲವೊಬ್ಬರು ಆ ಹುಡಗಿಗೆ ಲಗ್ನ ಆಗೋದರಾಗ ಮೂವತ್ತ ದಾಟಿ ಬಿಟ್ಟಿದ್ವು, ಅದರಾಗ ಮೈ ಬ್ಯಾರೆ ಅದ, ಅದಕ್ಕ ಆಗವಲ್ತು ಅಂದರು. ಒಟ್ಟ ಏನ ಕಾರಣೊ ಏನೋ ಸುಡಗಾಡ ಗೊತ್ತಿಲ್ಲಾ, ಮಕ್ಕಳ ಆಗೋ ಲಕ್ಷಣ ಕಾಣಸವಲ್ತಾಗಿತ್ತು. ನಾವು ಮೊದಲ ಆ ವಿಷಯದಾಗ ಅವನ ಜೊತಿ ಹುಡಗಾಟಕಿ ಮಾಡ್ತಿದ್ವಿ, ಆಮ್ಯಾಲೆ ಇದ ಸೀರಿಯಸ್ ವಿಷಯ ಅಂತ ಅದರ ಬಗ್ಗೆ ಮಾತಾಡೋದ ಬಿಟ್ವಿ. ಅವರವ್ವಾ ಮಾತ್ರ ನಮ್ಮ ಮಕ್ಕಳನ ನೋಡಿ ನೋಡಿ ಸಂಕಟಾ ಪಡತಿದ್ಲು. ಅಕಿನೂ ಇವನ್ನ ಹಡಿಲಿಕ್ಕೆ ಮದುವಿ ಆದ ಮ್ಯಾಲೆ ಹದಿನೈದ ವರ್ಷ ತೊಗೊಂಡ ಮುಂದ ಹನ್ನೆರಡ ವರ್ಷ ಬಿಟ್ಟ ಮತ್ತೊಂದ ಹಡದಿದ್ಲು. ಹಿಂಗಾಗಿ ‘ರಾಜಂದೂ ನನ್ನಂಗ ಲೇಟಾತ, ಆದರ ಇವತ್ತಿಲ್ಲಾ ನಾಳೆ ಆಗೇ ಆಗತದ’ ಅಂತ ತಾನ ಸಮಾಧಾನ ಮಾಡಕೊತಿದ್ಲು.
ಕಡಿಕೆ ಮೊನ್ನೆ ಅಂವಾ ತನ್ನ ಹೆಂಡತಿ ಹೆಣ್ಣ ಹಡದ್ಲು ಅಂತ ಸಿಹಿ ಸುದ್ದಿ ನಮಗೆಲ್ಲಾ ಕೊಟ್ಟಾಗ ಅವರವ್ವನ ವರ್ಷಾಂತಕ ಆಗಿ ಬರೋಬ್ಬರಿ ಆರ ತಿಂಗಳಾಗಿತ್ತ. ಪಾಪ, ಅಕಿ ಮೊಮ್ಮಕ್ಕಳ ಮಾರಿ ನೋಡಬೇಕು, ನೋಡಬೇಕು ಅಂತ ಮರುಗಿ, ಮರುಗಿ ಸತ್ಲು.
ನಾ ಕೂಸಿನ ನೋಡ್ಕೊಂಡ ಬರಲಿಕ್ಕೆ ಹೋಗಿದ್ದೆ. ನಮ್ಮ ಇನ್ನೊಬ್ಬ ದೋಸ್ತ ತನ್ನ ಹೆಂಡತಿನ ಕರಕೊಂಡ ಬಂದಿದ್ದಾ. ನಮ್ಮ ದೋಸ್ತನ ಹೆಂಡತಿಗೆ ರಾಜಾನ ಫ್ಯಾಮಿಲಿ ಹಿಸ್ಟರಿ ಗೊತ್ತಿರಲಿಲ್ಲಾ. ಆಕಿ ರಾಜಾಂದು ಅವನ ಹೆಂಡತಿದು ವಯಸ್ಸು ನೋಡಿ
ಎಲ್ಲಾರ ಮುಂದನs, “ಇದು ಒಂದನೇದಾ?” ಅಂತ ಕೇಳಿ ಬಿಟ್ಟಳು.
ರಾಜಾಗ ಏನ ಹೇಳಬೇಕ ಗೊತ್ತಾಗಲಿಲ್ಲಾ, ನಮಗೆಲ್ಲಾ ಇಕಿ ಹಂಗ ಕೇಳಬಾರದಿತ್ತು, ಪಾಪ. ಅವರಿಗೆ ಒಂದ ಆಗಲಿಕ್ಕೆ ಏಳೂ ಹನ್ನೆರಡ ಆಗಿತ್ತು ಅಂತ ಅನಸಲಿಕತ್ತು. ಅಷ್ಟರಾಗ ರಾಜಾನ ಹೆಂಡತಿ
“ಇಲ್ರಿ, ಹಂಗ ಖರೇ ಹೇಳ್ಬೇಕಂದರ ಇದು ಎರಡನೇದು. ನಂದ ಒಂದನೇದ ಎರಡರಾಗ ಹೋಗಿತ್ತ” ಅಂದ ಬಿಟ್ಟಳು. ನಮಗ್ಯಾರಿಗೂ ಆಕಿದ ಒಂದನೇದ ಎರಡ ತಿಂಗಳಕ್ಕ ಹೋಗಿದ್ದ ಗೊತ್ತ ಇರಲಿಲ್ಲಾ, ಅಲ್ಲಾ ಆ ಮಾತಿಗೆ ಈಗ ಏಳ-ಎಂಟ ವರ್ಷ ಆಗಿರಬಹುದು ಖರೆ, ಆದ್ರ ನಮಗ ಒಮ್ಮೆನೂ ರಾಜಾ ಆತು ಅವರವ್ವ ಆತು ಈ ವಿಷಯ ಅಂದಿದಿಲ್ಲಾ.
ನಾ ಆಮ್ಯಾಲೆ ರಾಜಾಗ ಹಂಗ ಹಗರಕ, “ಏನಲೇ ನಿನ್ನ ಹೆಂಡತಿ ಎರಡನೇದ ಅಂತ ಹೇಳ್ತಾಳ, ಒಂದನೇದ ಯಾವಾಗ ಆಗಿತ್ತ, ಯಾವಾಗ ಹೋತ, ಏನ್ತಾನ” ಅಂದೆ.
“ಲೇ, ಅದು ಭಾಳ ಹಳೇ ಸುದ್ದಿಲೇ. ಲಗ್ನಾದ ಹೊಸ್ತಾಗಿನ ಮಾತು, ಮದುವಿ ಆಗಿ ಮೂರ ತಿಂಗಳಕ್ಕ ನಿಂತಿತ್ತ. ಮುಂದ ಎರಡ ತಿಂಗಳಕ್ಕ ಹೋಗಿ ಬಿಡ್ತು, ನಿಂಗ ರಾತ್ರಿ ಭೆಟ್ಟಿ ಆದಾಗ ಎಲ್ಲಾ ಡಿಟೇಲ್ಸ್ ಹೇಳ್ತೇನಿ ತೊಗೊ” ಅಂದಾ.
ಅವತ್ತ ರಾತ್ರಿ ಅವಂದ ಸಾವಜಿ ಖಾನಾವಳಿ ಒಳಗ ಪಾರ್ಟಿ ಇತ್ತ, ಹೆಣ್ಣ ಹಡದದ್ದಕ್ಕ.
ಆದರೂ ಅವನ ಹೆಂಡ್ತಿ ಬಂದ ಮಂದಿ ಮುಂದ ‘ಇದು ಒಂದನೇದಾ?’ ಅಂತ ಕೇಳಿದಾಗ ‘ಅಲ್ಲಾ, ಇದು ಎರಡನೇದು. ಒಂದನೇದ ಎರಡರಾಗ ಹೋಗಿತ್ತ’ ಅಂತ ಹೇಳಿದ್ದ ಭಾಳ ಆಶ್ಚರ್ಯ ಆತ. ಪಾಪ, ಅಕಿನ್ನ ನೋಡಿದರ ಒಂದs ಹಡದ ಹತ್ತ ಹಡದವರಂಗ ಕಾಣತಿದ್ಲು. ಹಿಂಗ ಮಂದಿ ಬಂದ ಒಂದನೇದ ಅಂತ ಕೇಳಿದರ ಆಕಿಗೆ ಒಂಥರಾ ಆಗತಿತ್ತ. ಅದಕ್ಕ ಆಕಿ ತನ್ನ ಅಬಾರ್ಶನ್ ಆಗಿದ್ದರ ಲೆಕ್ಕಾ ಹಿಡದ ಹೇಳಿದ್ಲು. ನಾವೇಲ್ಲಾ ಏನರ ಆಗವಲ್ತಾಕ ಒಟ್ಟ ಒಂದsರ ಆತಲಾ ಅಂತ ಸಮಾಧಾನ ಪಡಬೇಕಾರ ಆ ವಿಷಯ ಮತ್ತ ರಾತ್ರಿ ಪಾರ್ಟಿ ಒಳಗ ಬಂತ, ನಮ್ಮ ಒಂದಿಬ್ಬರ ದೋಸ್ತರ
“ಲೇ, ನಿಂದ ಹೆಂಡತಿದ ಯಾವದ ಒಂದನೇದಲೇ, ಮದ್ವಿ ಮುಂಚಿಂದೋ ಇಲ್ಲಾ ಆಮ್ಯಾಲೆದೋ?” ಅಂತ ಕೇಳಿದರು. ಯಾಕಂದರ ಇಂವಾ ಅಕಿಗೆ ಮದುವಿ ಮುಂಚೆ ಒಂದ ಆರ ತಿಂಗಳ ಕರಕೊಂಡ ಬ್ಯಾರೆ ಅಡ್ಡಾಡಿದ್ದಾ. ಹಿಂಗಾಗಿ ಯಾವಾಗಿಂದ ಅಂತ ಸ್ವಲ್ಪ ಡೌಟ ಬಂದ ದೋಸ್ತರ ನೀ ಏನಲೇ ಒಂದನೇದರ ಸ್ಟೋರಿ ನಮಗ ಹೇಳೆ ಇಲ್ಲಾ ಅಂತ ಕಾಡಸಲಿಕತ್ತರು.
“ಲೇ, ಮದುವಿ ಆದ ಮ್ಯಾಲೆಲೆ, ನಮ್ಮ ತಂಗಿ ಲಗ್ನಕ್ಕಿಂತ ಮುಂಚೆ ಒಂದ ಆಗಿತ್ತ” ಅಂತ ಸೀದಾ ತನ್ನ ಎಂಟ ವರ್ಷದ ಹಿಂದಿನ ಫ್ಲ್ಯಾಶ್ ಬ್ಯಾಕಿಗೆ ಹೋದಾ. ಅವನು ಒಂದ ಸಿಕ್ಸ್ಟಿ ತೊಗೊಂಡ ಮೂಡ ಒಳಗ ಇದ್ದಾ, ತಂದ ’ಒಂದನೇದ ಎರಡರಾಗ ಹೋಗಿದ್ದರ’ ಕಥಿ ಹೇಳಲಿಕ್ಕೆ ಶುರು ಮಾಡಿದಾ. ಇನ್ನ ಮುಂದಿದ್ದ ಅವನ ಬಾಯಲೇನ ಕೇಳ್ರಿ. ಮತ್ತೇಲ್ಲರ ನೀವ ’ನಾ’ ಅಂತ ಬರದಿದ್ದನ್ನ ಖರೇನ ನಾ ಅಂತ ತಿಳ್ಕೊಂಡ ಗಿಳ್ಕೊಂಡೀರಿ…………….
ಒಂದ ದಿವಸ ಮುಂಜಾನೆ ನಾ ಸ್ನಾನ ಮಾಡಿ ಗಡಿಬಿಡಿಲೇ ನವಗ್ರಹ ಸ್ತೋತ್ರಾ ನುಂಗಕೋತ ರೇಡಿ ಆಗ್ತಿರಬೇಕಾರ ನನ್ನ ಹೆಂಡತಿ
“ರ್ರಿ, ನಂದ ಯಾಕೋ ಈ ವಾರ ಡೇಟ ಆಗಲಿಲ್ಲಾ” ಅಂದ್ಲು.
“ತಡಕೋ ಹಂಗ್ಯಾಕ ಮಾಡ್ತಿ, ಅದು ವಾರಕ್ಕೊಮ್ಮೆ ಆಗೋದಲ್ಲಾ ತಿಂಗಳಿಗೊಮ್ಮೆ ಆಗೋದ” ಅಂತ ನಾ ಅಂದೆ.
“ರ್ರಿ, ನಂಗೊತ್ತದ. ಈಗ ಒಂದ ತಿಂಗಳಾಗಿ ಒಂದ ವಾರ ಆಗಲಿಕ್ಕೆ ಬಂತು, ಈ ವಾರ ಆಗಬೇಕಿತ್ತು ಆದ್ರೂ ಇನ್ನೂ ಆಗಿಲ್ಲಾ ಅದಕ್ಕ ಹೇಳಿದೆ” ಅಂದ್ಲು.
ನಾ ಅವತ್ತ ಆ ವಿಷಯ ಸೀರಿಯಸ ತೊಗೊಳಿಲ್ಲಾ, ಮುಂದ ಒಂದ ವಾರ ಬಿಟ್ಟ ಮತ್ತ ಅಕಿ
“ರ್ರೀ, ಹದಿನೈದ ದಿವಸ ಆತು, ಇನ್ನೂ ಕೈ ಇಲ್ಲಾ ಕುಂಯಿ ಇಲ್ಲಾ, ನಂಗ್ಯಾಕೋ ಹೆದರಕಿ ಆಗಲಿಕತ್ತದ” ಅಂದ್ಲು. ಆವಾಗ ನಂಗು ಒಂದ ಸ್ವಲ್ಪ ಗಾಬರಿ ಆಗಲಿಕತ್ತು. ಹಂಗ ಇದ ನಾ ಏನ ಗಾಬರಿ ಆಗೋ ವಿಷಯ ಅಲ್ಲಾ, ಆದರ ನಾವಿಬ್ಬರೂ ಆ ವಿಷಯದಾಗ ಕೂತ ನಮಗ ಯಾವಾಗ ಇಶ್ಯು ಬೇಕು ಬೇಡಾ ಅಂತ ಪ್ಲಾನ ಮಾಡಿದ್ದಿಲ್ಲಾ ಅಷ್ಟರಾಗ ಇದೊಂದ ಇಶ್ಯು ಆಗಿಬಿಡ್ತು. ಹಂಗ ನಾ ಫೈನಾನ್ಸಿಯಲಿನೂ ಇನ್ನೂ ರೆಡಿ ಇದ್ದಿದ್ದಿಲ್ಲಾ, ದಣೆಯಿನ ಮದುವಿ ಆಗಿತ್ತು. ಇನ್ನು ಆ ಫೈನಾನ್ಸಿಯಲ್ ಬರ್ಡನ್ನಿಂದ ಹೊರಗ ಬಂದಿದ್ದಿಲ್ಲಾ, ಅದರಾಗ ಮದುವಿ ಆದ ಮ್ಯಾಲೆ ಹೆಂಡತಿದ ಒಂದ ಖರ್ಚ ಮೈಮ್ಯಾಲೆ ಬಂದಿತ್ತ. ಮ್ಯಾಲೆ ತಂಗಿದ ಒಂದ ಲಗ್ನಾ ಮಾಡಿ ಅಟ್ಟೋದ ಇತ್ತು, ಅದು ಮೇನ ಪ್ರಿಯಾರಿಟಿ. ಹಂತಾದರಾಗ ಇದೊಂದ ಗದ್ಲ ಆತೇನಪಾ ಅಂತ ಅನಸಲಿಕತ್ತ. ಖರೇನ ನಾ ಹಿಂಗ್ಯಾಕ ಕಂಡೇನೊ ಇಲ್ಲೊ ಅನ್ನೊರಂಗ ಮಾಡಿದೆ, ಅದು ಸೈನ್ಸ ಸ್ಟುಡೆಂಟ ಆಗಿ ಅಂತ ಅನಸಲಿಕತ್ತ. ಆತ, ಈಗ ಆಗಿದ್ದ ಆಗಿ ಹೋತ, ಮುಂದಿಂದ ವಿಚಾರ ಮಾಡಬೇಕು ಅಂತ ನನ್ನ ಹೆಂಡತಿಗೆ
“ಲೇ, ನಾ ಸಂಜಿಗೆ ಬರಬೇಕಾರ ಮನ್ಯಾಗ ಪ್ರಿಗ್ನೆನ್ಸಿ ಚೆಕ್ ಮಾಡೋ ಕಿಟ್ ತೊಗೊಂಡ ಬರತೇನಿ. ಅದು ಕನಫರ್ಮ ಆದರ ಮುಂದಿನ ವಿಚಾರ ಮಾಡೋಣ” ಅಂತ ಹೇಳಿದೆ. ಮುಂದ ಸಂಜಿ ಮುಂದ ‘ವೆಲಾಸಿಟ್’ ಅಂತ ಒಂದ ಪ್ರಿಗ್ನೆನ್ಸಿ ಚೆಕ್ ಮಾಡೋ ಕಿಟ್ ತೊಗೊಂಡ ಬಂದೆ. ಹೆಂಗಿದ್ದರು ದೋಸ್ತರ ಭಾಳ ಮಂದಿ ಮೆಡಿಕಲ್ ರೆಪ್ ಇದ್ದರು. ಯಾರರ ಫ್ರೀ ಕೊಡ್ತಾರೇನು ಅಂತ ನೋಡಿದರ ಅವರಿಗೆ ಬರೋ ಫ್ರೀ ಸ್ಯಾಂಪಲ್ ಕಿಟ್ ಅವರಿಗೆ ಸಾಲತಿದ್ದಿಲ್ಲಾ. ಕಡಿಕೆ ತಲಿಕೆಟ್ಟ ನಾನ ನೂರಾ ಹತ್ತ ರೂಪಾಯಿ ಬಡದ ಒಂದs ತೊಗೊಂಡ ಬಂದೆ. ಸರಿ ಮುಂಜಾನೆ ಎದ್ದ ಚೆಕ್ ಮಾಡಿದರ ಪಾಸಿಟಿವ್ ಅಂತ ಬಂತ. ಅಗದಿ ಡಾರ್ಕ್ ವೈಲೆಟ ಕಲರ, ಕನಫರ್ಮಿಂಗ ಟು ಪ್ರಿಗ್ನೆನ್ಸಿ. ನಾ ಆ ಡಾರ್ಕ ವೈಲೆಟ ಕಲರ ನೋಡಿ ಇದ ಗಂಡsಲೇ ಅಂತ ಹೇಳಿದೆ. ನನ್ನ ಹೆಂಡತಿ ಪಾಸಿಟಿವ್ ಅಂದಾಗ ಗಾಬರಿ ಆಗಿದ್ಲು, ಗಂಡ ಅಂದ ಕೂಡಲೇ ಆಕಿಗೆ ಇನ್ನಷ್ಟ ಬಿ.ಪಿ. ಏರತು.
“ರ್ರಿ, ಇನ್ನ ಮುಂದ ಹೆಂಗರಿ, ನಮಪ್ಪ ಬ್ಯಾರೆ ರಿಟೈರ್ಡ್ ಆಗ್ಯಾನ, ಇದ್ದ ಬಿದ್ದ ಫಂಡ ಎಲ್ಲಾ ನಿಮ್ಮ ಲಗ್ನಕ್ಕ ಬಡದಾನ, ಇನ್ನ ಪಾಪ ಅಂವಾ ಹೆಂಗ ಡಿಲೇವರಿ, ಬಾಣಂತನಾ ಮಾಡ್ಬೇಕು” ಅಂದ್ಲು.
ನಾ, “ಲೇ, ಅದು ಅವರ ಜವಾಬ್ದಾರಿ, ಅವರೇನರ ಮಾಡವಲ್ಲರಾಕ. ಆದರ ನಂಗ ತಂಗೀದ ಒಂದ ಲಗ್ನಾ ಮಾಡಿ ಅಟ್ಟಿದ ಮ್ಯಾಲೆ ಆಗಿದ್ದರ ಛಲೋ ಇತ್ತು” ಅಂದೆ.
ಒಟ್ಟ ಇಬ್ಬರದು ಒಂದ ವಿಚಾರ ಇತ್ತು ಆದರ ಅದಕ್ಕ ಕಾರಣ ಬ್ಯಾರೆ ಬ್ಯಾರೆ ಇದ್ದವು. ಸರಿ ಇನ್ನ ಮುಂದ ಏನ ಮಾಡೋದ ಅಂತ ವಿಚಾರ ಮಾಡಲಿಕತ್ತವಿ. ಇನ್ನ ನಮ್ಮ ಮನ್ಯಾಗ ಗೊತ್ತಾದರ ನಮ್ಮವ್ವ ದೇವರ ಮುಂದ ದೀಪಾ ಹಚ್ಚಿ ಬಾಯಾಗ ಸಕ್ಕರಿ ಹಾಕೇ ಬಿಡೋಕಿ, ಅದರಾಗ ಅಕಿ ಮುಂದ ಅಂತೂ ನಮಗ ಇಷ್ಟ ಲಗೂ ಬ್ಯಾಡಾ ಅಂತ ಹೇಳಲಿಕ್ಕ ಬರಂಗಿಲ್ಲಾ. ಇನ್ನ್ ಆಗಿದ್ದನ್ನ ತಗಸ್ತೇವಿ ಅಂತ ಹೇಳಿದರ ಅಕಿ ನಮ್ಮನ್ನ ಯಾರಿಗರ ಸುಪಾರಿ ಕೊಟ್ಟ ತಗಿಸಿ ಬಿಡೋಕಿ. ಹಿಂಗಾಗಿ ಆಕಿಗೆ ಏನ ಅದರ ಸುದ್ದಿ ಹಚ್ಚಿ ಕೊಡಲಿಲ್ಲಾ. ನಾ ಕಡಿಕೆ ಭಾಳ ತಲಿಗೆಡಸಿಗೊಂಡ ನಮ್ಮ ಮನ್ಯಾಗ ಗೊತ್ತಾಗಲಾರದಂದ ತಗಿಸಿ ಬಿಡೋದು ಅಂತ ಡಿಸೈಡ ಮಾಡಿದೆ, ನನ್ನ ಹೆಂಡತಿಗೂ ಅದ ಬೇಕಾಗಿತ್ತು. ಆಕಿನು ಒಂದ ಹೊಡತಕ್ಕ ಹೂಂ ಅಂದ್ಲು.
ಇನ್ನ ಹೆಂಗ ತಗಸ್ಬೇಕು, ಅದು ಡಾಕ್ಟರ್ ಕಡೆ ಹೋಗಬಾರದು, ಖರ್ಚ ಆದಷ್ಟ ಕಡಿಮೆ ಆಗ್ಬೇಕು ಅಂತ ಮೊದ್ಲ ನ್ಯಾಚುರಲ್ ಮೆಥಡ್ ಇಮ್ಮಿಡಿಯಟ್ ಆಗಿ ಶುರು ಮಾಡಿದ್ವಿ.
ಒಂದನೇ ದಿವಸ ಒಂದ ಪಪ್ಪಾಯಿ ತಿನ್ನಸಿದೆ. ನನ್ನ ಹೆಂಡತಿಗೆ ಪಪ್ಪಾಯಿ ಸೇರತಿದ್ದಿಲ್ಲಾ. ಆದರ ಇದನ್ನ ತಿಂದರ ಹೋಗ್ತದ ಅಂತ ಹೇಳಿದ್ದಕ್ಕ ಅದರ ಬೀಜಾ ಸಹಿತ ನುಂಗಿದ್ಲು.
“ಲೇ, ಬೀಜಾ ಯಾಕ ತಿಂತಿ, ಆ ಬೀಜ ಹೊಟ್ಟ್ಯಾಗ ಹೋಗಿ ಗಿಡಾ ಆಗಿ ಅದರಾಗ ಹಣ್ಣ ಆಗೋದರಾಗ ನೀ ಹತ್ತ ಹಡದಿರತಿ” ಅಂತ ನಾ ಬೈದೆ. ಮುಂದ ಮರುದಿವಸ ಎಲ್ಲೋ ಓದಿದ್ದೆ ಅಂತ ಒಂದ ಮೂರ ಗ್ಲಾಸ್ ಕಬ್ಬಿನ ಹಾಲ ಮೂರ ಹೊತ್ತ ಕುಡದ್ಲು, ಅದ ಹೀಟಾಗಿ ಮೂಗಿನಾಗ ರಕ್ತ ಬರಲಿಕತ್ತ. ಆಮ್ಯಾಲೆ ಯೆಳ್ಳ ಉಂಡಿ ಬ್ಯಾರೆ ತಿಂದ್ಲು. ಉಂ..ಹೂಂ.. ಹರ ಇಲ್ಲಾ ಶಿವಾ ಇಲ್ಲಾ, ಅಕಿ ಮಾರಿ ಮ್ಯಾಲೆ ಹೀಟಿನ ಗುಳ್ಳಿ ಆದವ ಖರೆ, ಆದರ ಆಕಿ ಡೇಟ ಏನ ಆಗಲಿಲ್ಲಾ. ನಾ ಕಡಿಕೆ ತಲಿಕೆಟ್ಟ ಒಬ್ಬ ಮೆಡಿಕಲ್ ರೆಪ್ ದೋಸ್ತಗ ಫೋನ ಮಾಡಿ ಎಲ್ಲಾ ಹಕಿಕತ್ ಹೇಳಿ ಈಗ ಮುಂದ ಹೆಂಗಲೇ ಅಂದೆ. ಅಂವಾ
“ಏ, ಇದಕ್ಯಾಕ ಅಷ್ಟ ತಲಿಕೆಡಸಿಗೋತಿ. ಹಿಂತಾವೆಲ್ಲಾ ನಾ ಭಾಳ ಹ್ಯಾಂಡಲ್ ಮಾಡೇನಿ ತೊಗೊ” ಅಂತ ನಂಗ ೯೦೦ ರೂಪಾಯಿಕ್ಕ ಒಂದರ ಗುಳಗಿ ತಂದ ಕೊಟ್ಟಾ, ನಾ ಎಮರ್ಜೆನ್ಸಿಗೆ ಒಂದ ವರ್ಕ ಆಗಲಿಲ್ಲಾ ಅಂದರ ಇನ್ನೊಂದ ಇರಲಿ ಅಂತ ಎರಡ ಗುಳಗಿ ತರಸಿದೆ.
“ಇದು ವೆಜಿನಲ್ ಟ್ಯಾಬ್ಲೆಟ್, ಮತ್ತೆಲ್ಲರ ನೀ ನುಂಗಿಸಿ ಗಿಂಗಿಸಿ” ಅಂತ ತಿಳಿಸಿ ಹೇಳಿ ಹೋದಾ. ನಾ ಅವಂಗ ಥ್ಯಾಂಕ್ಸ ಹೇಳಿ ‘ಕಷ್ಟದಾಗ ದೋಸ್ತರ ಹೆಲ್ಪ ಮಾಡ್ತಾರ ಅಂತಾರಲಾ ಅದು ಸುಳ್ಳ ಅಲ್ಲ’ ನೋಡ ಅಂತ ಎಮೋಶನಲ್ ಆಗಿ ಹೇಳಿ ಕಳಸಿದೆ.
ಒಂದ ಗುಳಗಿಗೆ ೯೦೦ ರೂಪಾಯಿ ಅಂದ ಕೂಡಲೇ ನನ್ನ ಹೆಂಡತಿ
“ಅಲ್ಲರಿ ಚಿಟಗುಪ್ಪಿ ಹಾಸ್ಪಿಟಲದಾಗ ಮೂರ ಸಾವಿರ ರೂಪಾಯಿಗೆ ಸಿಜರಿನ್ ಡಿಲೇವರಿನ ಮಾಡ್ತಿದ್ದರಲ್ಲರಿ” ಅಂತ ಸಂಕಟಾ ಪಟಗೊಂಡ ಒಂದನೇ ಗುಳಗಿ ಪ್ರಯೋಗ ಮಾಡಿದ್ಲು. ಮುಂದ ಒಂದ ದಿವಸ ಬಿಟ್ಟ ನೋಡಿದ್ವಿ ಏನು ರಿಸಲ್ಟ ಬರಲಿಲ್ಲಾ. ಮರುದಿವಸ ನಾ ಇಲ್ಲಾ ಎರಡನೇ ಗುಳಗಿನೂ ತೊಗೊಂಡ ಬಿಡ ಆಗಿದ್ದ ಆಗವಲ್ತಾಕ ಅಂತ ಅದನ್ನು ಕೊಟ್ಟೆ. ಮುಂದ ಎರಡ ದಿವಸಕ್ಕ ರಿಸಲ್ಟ ಬಂತಲಾ, ನನ್ನ ಹೆಂಡತಿ ಅಗದಿ ಖುಷ ಆಗಿ “ರ್ರಿ, ನಂದ ಡೇಟ ಆತ” ಅಂತ ಇಡಿ ಓಣೀ ಮಂದಿ ಕೇಳೊ ಹಂಗ ಒದರಿದ್ಲು. ನಂಗ ಸ್ವಲ್ಪ ಸಮಾಧಾನ ಆತ. ಅಡ್ಡಿಯಿಲ್ಲಾ ಇಷ್ಟ ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಆತ ಅನಸ್ತು. ಆದರು ಒಂದ ಸರತೆ ಕನಫರ್ಮ ಮಾಡ್ಕೊಂಡ ಬಿಡೋಣು ಅಂತ ಮತ್ತ ನೂರಾ ಹತ್ತ ರೂಪಾಯಿ ಬಡದ ‘ವೆಲಾಸಿಟ್’ ಕಿಟ್ ತೊಗೊಂಡ ಬಂದ ಪ್ರಿಗ್ನೆನ್ಸಿ ಟೆಸ್ಟ ಮಾಡಸಿದೆ. ನನ್ನ ಹಣೇಬರಹಕ್ಕ ಮತ್ತ ವೈಲೆಟ ಕಲರ್ ಬಂತ, ಸೇಮ ಅಗದಿ ಮೊದ್ಲಿನ ಗತೆನ ಡಾರ್ಕ ವೈಲೇಟ ಕಲರ್ ಲೈನ್. ನಂಗ ‘ನಾ ಇಷ್ಟ ಮಂಡ’ ಅಂತ ಅನ್ಕೊಂಡರ ಇದ ಹುಟ್ಟೋದ ನನ್ನಕಿಂತಾ ಮಂಡ ಅದ ಅಂತ ಗ್ಯಾರಂಟೀ ಆತ.
ನಾ ಆವಾಗ ಡಿಸೈಡ ಮಾಡಿದೆ, ಇನ್ನ ಹಿಂಗ ಹುಚ್ಚುಚಾಕಾರ ಪ್ರಯೋಗ ಮಾಡೋದ ಬ್ಯಾಡಾ. ರೊಕ್ಕ ಖರ್ಚ ಆದರ ಆಗವಲ್ತಾಕ ಅಂತ ಸೀದಾ ಮನ್ಯಾಗ ಹೇಳಲಾರದ ಗೈನಾಕಲಜಿಸ್ಟ ಕಡೆ ಹೋಗಿ ನಮಗೇನೂ ಗೊತ್ತಿಲ್ಲಾ ಅನ್ನೋರಗತೆ ನಾಟಕ ಮಾಡಿ
“ಯಾಕೊ ಪಿರಿಯಡ್ಸ್ ಒಂದ ತಿಂಗಳ ಲೇಟಾಗಿ ಆತು, ಅದು ಸರಿಯಾಗಿ ಆಗಲಿಲ್ಲ ಅನಸ್ತು ಅದಕ್ಕ ಏನರ ಆಗಲಿ ಒಂದ ಸರತೆ ಡಾಕ್ಟರ ಕಣ್ಣಿಗೆ ಹಾಕೆ ಬಿಡೋಣ ಅಂತ ಬಂದ್ವಿ” ಅಂತ ಹೇಳಿ ಅಗ್ದಿ ಮುಗ್ಧ ಗಂಡಾ ಹೆಂಡತಿ ನಮಗೇನೂ ಇದರ ಬಗ್ಗೆ ತಿಳಿಯಂಗಿಲ್ಲಾ ಅನ್ನೋರಗತೆ ಹೇಳಿದ್ವಿ.
ಡಾಕ್ಟರ ನಮ್ಮಿಬ್ಬರ ಮಾರಿ ನೋಡಿ
“ಏನ ಗಾಬರಿ ಆಗ ಬ್ಯಾಡರಿ, ಹೋಸ್ತಾಗಿ ಮದುವಿ ಆದಾಗ ಹಿಂತಾವೆಲ್ಲಾ ಕಾಮನ್” ಅಂತ ನಮಗ ಸಮಾಧಾನ ಮಾಡಿ ಎಲ್ಲಾ ಚೆಕ ಅಪ್ ಮಾಡಿ
“ಪ್ರಿಗ್ನೆನ್ಸಿ ಇತ್ತು, ಆದರ ಅದ ಈಗ ಅರ್ಧಾ ಮರ್ಧಾ ಹೋಗಿ ಬಿಟ್ಟೇದ, I am sorry, ಈಗ MTP (medical termination of pregnancy) is only solution” ಅಂತ ಹೇಳಿಬಿಟ್ಟರು. ನಾವು ಇಬ್ಬರು ಏನೋ ಕಳಕೊಂಡವರ ಗತೆ ಸಪ್ಪ ಮಾರಿ ಮಾಡಿ ನೀವ ಹೆಂಗಂತಿರಿ ಹಂಗ ಅಂತ ಹೇಳಿ ಮನಿಗೆ ಬಂದ್ವಿ.
ನಾ ಮರುದಿವಸ ನಮ್ಮವ್ವಗ, ನಮ್ಮ ಅತ್ತಿಗೆ ನಿನ್ನೆ ಡಾಕ್ಟರ ಕಡೆಗೆ ಹೋಗಿದ್ವಿ, ಅವರ ಹಿಂಗ ಹೇಳ್ಯಾರ, ಎಲ್ಲಾ ದೇವರ ಇಚ್ಛೆ ಏನ ಎರಡ ತಾಸಿನ ಕೆಲಸ ಅಂತ ಅವರಿಬ್ಬರನು ಒಪ್ಪಿಸಿ ನನ್ನ ಹೆಂಡತಿನ ಅವರ ಜೊತಿ ಕೊಟ್ಟ ದವಾಖಾನಿಗೆ ಕಳಸಿ ಕಾರ್ಯಕ್ರಮ ಮುಗಿಸಿಸಿದೆ. ಪಾಪ ನಮ್ಮವ್ವ, ನಮ್ಮತ್ತಿ ಭಾಳ ಬೇಜಾರ ಮಾಡ್ಕೊಂಡರು, ನಾನ ಮತ್ತ ಸಮಾಧಾನ ಮಾಡಿ
“ಭಾಳ ತಲಿಗೆಡಸಿಗೊ ಬ್ಯಾಡರಿ, ಇನ್ನೊಂದ ಎರಡ ತಿಂಗಳಕ್ಕ ಮತ್ತೊಂದ ತಯಾರ ಮಾಡಬಹುದು. ನೀವ ಹಿಂಗ ಬೇಜಾರ ಆದರ ಪಾಪ ನನ್ನ ಹೆಂಡತಿಗೆ ಇನ್ನೂ ಬೇಜಾರ ಆಗ್ತದ” ಅಂತ ಹೇಳಿದೆ.
ಒಟ್ಟ ಅಂತೂ ನಮ್ಮ ತಲ್ಯಾಗ ಏನ ಇತ್ತ ಅದು ಆತ. ಇನ್ನ ಮುಂದರ ಹುಷಾರ ಇರಬೇಕು ನಮಗ ಯಾವಾಗ ಬೇಕ ಆವಾಗ ಇಷ್ಟ ಪ್ಲಾನ ಮಾಡಬೇಕು ಅಂತ ಇಬ್ಬರು ಡಿಸೈಡ ಮಾಡಿದ್ವಿ. ನಮಗ ಆವಾಗ ಇದ ಹಿಂಗ ಮಂಗ್ಯಾನಾಟ ಮಾಡೋ ವಿಷಯ ಅಲ್ಲಾ, ಹಂಗ ಒಂದನೇದ ಅಬಾರ್ಶನ್ ಆದರ ಎರಡನೇದ ಅಷ್ಟ ಸರಳ ನಿಲ್ಲಂಗಿಲ್ಲಾ, ಮುಂದ ಆಗಲಿಕ್ಕೆ ತ್ರಾಸ ಆಗ್ತದ ಅಂತ ಅನಸಲಿಲ್ಲಾ. ಹಿಂಗಾಗಿ ನಂಬದ ಒಂದನೇದ sorry ಎರಡನೇದ ಆಗಲಿಕ್ಕೆ ಇಷ್ಟ ಲೇಟಾತು. ಇದನ್ನೆಲ್ಲಾ ನೆನಪ ಮಾಡ್ಕೊಂಡ ನನ್ನ ಹೆಂಡತಿ ‘ನಂದ ಒಂದನೇದ ಎರಡರಾಗ ಹೋಗಿತ್ತ’ ಅಂತ ನಿಮ್ಮ ಮುಂದ ಅಂದಿದ್ದು…………….
ಅಂತ ಅಂವಾ ತನ್ನ ಒಂದನೇದ ಎರಡರಾಗ ಹೋಗಿದ್ದರ ಕಥಿ ಹೇಳಿದಾ. ನಾವು ಎಲ್ಲಾರು ಭಾರಿ ಇಂಟರೆಸ್ಟ ಕೊಟ್ಟ ಥರ್ಟಿ ಮ್ಯಾಲೆ ಥರ್ಟಿ ಹೊಡಕೋತ ಅವನ ಕಥಿ ಕೇಳಿದ್ವಿ.
ಏನ್ಮಾಡ್ತೀರಿ ಅವರವ್ವ ಸಾಯೋತನಕ ಮೊಮ್ಮಗ ಇಲ್ಲಾ ಮೊಮ್ಮಗಳ ಮಾರಿ ನೋಡ್ಬೇಕು ಅಂತ ಸಂಕಟಾ ಪಟ್ಟ ಪಟ್ಟ ಸತ್ತಲು ಈ ಮಗಾ ಹಿಂಗ ಎಡವಟ್ಟ ಮಾಡ್ಕೊಂಡಿದ್ದಾ. ಅಲ್ಲಾ ಈ ವಿಷಯ ಏನರ ಅವರವ್ವಗ ಗೊತ್ತ ಆಗಿತ್ತಂದರ ಅಕಿ ಆವಾಗ ಸಾಯಿತಿದ್ಲ ಬಿಡ್ರಿ.
ಅಲ್ಲಾ ಆದರೂ ಇದೇಲ್ಲಾ ಏನ ಇರವಲ್ತಾಕ. ನಾ ಈಗ ಮದುವಿ ಆಗಿ ಹನ್ನೆರಡ ವರ್ಷಾಗಿ ಎರಡ ಹಡದ ಒಂದ ಆಪರೇಶನ್ ಮಾಡಿಸಿದ ಮ್ಯಾಲೆ ನಮ್ಮ ಹಸಿ ಮೈ ಹುಡುಗರಿಗೆ ಹೇಳೋದ ಇಷ್ಟ, ‘ಏನ ಆಗಲಿ ಒಂದನೇದಕ್ಕ ಭಾಳ ಪ್ಲಾನ್ ಮಾಡಲಿಕ್ಕೆ ಹೋಗ ಬ್ಯಾಡರಿ, ನ್ಯಾಚುರಲ್ಲಾಗಿ ಏನರ ಪ್ಲಾನ್ ಮಾಡತಿದ್ದರ ಮಾಡ್ರಿ ಆದ್ರ ಆರ್ಟಿಫಿಶಿಯಲ್ ಆಗಿ ಈ ಗುಳಗಿ-ಪಳಗಿ ತೊಗಳಲಿಕ್ಕೆ ಹೋಗಬ್ಯಾಡರಿ. ಇವ ಸುಡಗಾಡ ಕೆಮಿಕಲ್ಸ್ ಯಾವಾಗ ವರ್ಕ ಆಗ್ತಾವ ಯಾವಾಗ ಇಲ್ಲಾ ಗೊತ್ತಾಗಂಗಿಲ್ಲಾ. ಒಮ್ಮೊಮ್ಮೆ ದೇಹದಾಗ ಉಳಕೊಂಡ ಮುಂದ ನಮಗ ಖರೇನ ಬೇಕಂದರು ಆಗಲಾರದಂಗ ಆಗ್ತದ. ಅಕಸ್ಮಾತ ಇಷ್ಟೆಲ್ಲಾ ಪ್ಲಾನಿಂಗ ಮಾಡಿದ ಮ್ಯಾಲೂ ನಿಮಗ ಬೇಕಾಗಿರಲಿಲ್ಲಾ ಅಂದರೂ ಆತಂದರ ದಯವಿಟ್ಟ ತಗಸಲಿಕ್ಕೆ ಮಾತ್ರ ಹೋಗಬ್ಯಾಡರಿ.