ನಗು ನಗುತಾ ನಲಿ…ಏನೇ ಆಗಲಿ

(world laughter day ದಿನದ ಅಂಗವಾಗಿ ಬರೆದ ಲೇಖನ)
ಮೇ ತಿಂಗಳ ಮೊದಲನೇ ರವಿವಾರವನ್ನ ‘ವಿಶ್ವ ನಗೆ ದಿವಸ’ world laughter day ಅಂತ ಆಚರಸ್ತಾರ. ಹಂಗ almost all, ಎಲ್ಲಾ world days ಪಾಶ್ಚ್ಯಾತ್ಯ ಸಂಸ್ಕೃತಿವು ಮತ್ತ ಅವು ವಿದೇಶಿಯರೇ ಹುಟ್ಟ ಹಾಕಿದ್ದ ಇರಬಹುದು. ಆದರ ಈ world laughter dayನ್ನ ಹುಟ್ಟು ಹಾಕಿದವರು ಭಾರತೀಯರು, ಜಗತ್ತಿಗೆ ನಗುವಿನ ಪ್ರಾಮುಖ್ಯತೆಯನ್ನ ಹೇಳಿ ಕೊಟ್ಟ ಇವತ್ತ ಜಗತ್ತೀನ ೭೦-೮೦ ದೇಶದಾಗ ಈ ‘ವಿಶ್ವ ನಗು ದಿವಸ’ವನ್ನ ಆಚರಿಸೊ ಹಂಗ ಮಾಡಿದವರು ನಮ್ಮವರು.
“ನೀವು ನಕ್ಕಾಗ ಬದಲಾಗ್ತೀರಿ, ನೀವು ಬದಲಾದಾಗ ನಿಮ್ಮ ಇಡಿ ಜಗತ್ತ ಬದಲಾಗ್ತದ” ಅಂತ ಹೇಳಿ ಜೀವನದಲ್ಲಿ ಆರೋಗ್ಯ, ಸಂತೋಷಕ್ಕಾಗಿ ಹಾಗೂ ವಿಶ್ವ ಶಾಂತಿಗೆ laughter yogaನ ಮದ್ದು ಅಂತ ಇವತ್ತ ಜಗತ್ತಿನ ಮೂಲೆ-ಮೂಲೆಗೆ ಈ ನಗುವ ಯೋಗಾಭ್ಯಾಸವನ್ನ ಮುಟ್ಟಿಸಿದ ಮುಂಬಯಿಯ ಡಾ. ಮದನ ಕಟಾರಿಯಾ ಅವರು ೧೯೯೮ರಾಗ ಈ world laughter dayನ ಹುಟ್ಟು ಹಾಕಿದರು.
ನಗೋರಿಗೆ ನೂರವರ್ಷ ಆಯುಷ್ಯ ಅಂತಾರ ಎಲ್ಲಾರೂ ನಕ್ಕೋತ ಬಾಳಿ-ಬೆಳಗೋಣ, ನಿಮಗೇಲ್ಲಾ ಈ ವಿಶ್ವ ನಗೆ ದಿವಸದ ಶುಭಾಷಯಗಳು. ಹಂಗ ಜೀವನದಾಗ ಸಣ್ಣ- ಸಣ್ಣ ಖುಶಿ-ಸಂತೋಷಾನೂ ಭಾಳ important. ನಮ್ಮ ನಿತ್ಯ ಜೀವನದಾಗ ಎಷ್ಟೋ ಹಾಸ್ಯ ಹರಿತಿರತದ ಅದನ್ನ ಅನುಭವಿಸಿ ನಕ್ಕು ಮನಸ್ಸ ಹಗರ ಮಾಡ್ಕೋಬೇಕು. ಹಂಗ ನಗಲಿಕ್ಕು ಕಾರಣ, logic ಹುಡಕೋತ ಕೂತರ ನಗು ಮರಿಬಹುದು ಅಂತ ನನಗ ಅನಸ್ತದ. so please dont miss any opporunity in a life to laugh ಅಂತ ಹೇಳಿ ನಾ ನಿನ್ನೆ ನಮ್ಮ ಮನ್ಯಾಗ ನಡದ ಒಂದ ಘಟನೆಯನ್ನ ನಿಮ್ಮ ಜೋತಿ ಹಂಚಗೊಳಿಕ್ಕೆ ಇಷ್ಟ ಪಡತೇನಿ.
ನಿನ್ನೆ ಮಧ್ಯಾಹ್ನ ನಾ ಊಟಾ ಮಾಡಿ ಆಫೀಸಿಗೆ ಬರಬೇಕಾರ ಓಣ್ಯಾಗ ಐಸಕ್ರೀಮ್ ಮಾರೋಂವಾ ಗಾಡಿ ತೊಗೊಂಡ ಒದರಕೋತ ಹೊಂಟಿದ್ದಾ. ನನ್ನ ಕಳಸಿ ಬಾಗಲ ಹಾಕ್ಕೊಂಡ ಹೋಗಲಿಕ್ಕೆ ಬಂದಿದ್ದ ನನ್ನ ಹೆಂಡತಿ ಅವನ್ನ ನೋಡಿ
“ರ್ರೀ, ಒಂದ ಐಸಕ್ರೀಮ ಕೊಡಸರಿ” ಅಂದಳು. ನಾ
“ಏ, ಎಲ್ಲಿ ಐಸಕ್ರೀಮಲೇ, ಮೊದ್ಲ ನೆಗಡಿ ಆಗೇದ ತಿಂದ ಎಲ್ಲೆರ ಜಡ್ಡ ಬಿದ್ದ ಗಿದ್ದಿ, ಹುಡುಗರಿಗೆ ಬ್ಯಾರೆ ಆರಾಮ ಇಲ್ಲಾ, ಅವು ನೀ ತಿನ್ನೋದ ನೋಡಿ ತಮಗೂ ಬೇಕ ಅಂತ ಹಟಾ ಮಾಡ್ತಾವ ಸುಮ್ಮನ ನಡಿ” ಅಂದೆ. ಆದರು ಅಕಿ ನನ್ನ ಮಾತ ಕೇಳಲಿಲ್ಲಾ, ಗಂಟs ಬಿದ್ಲು.
ನಾ ನನ್ನ ಹೆಂಡತಿ ಜೊತಿ ಹೊರಗ ಹಿಂಗ ಮಾತೋಡದ ನೋಡಿ ನಮ್ಮವ್ವ ಗಂಡಾ ಹೆಂಡತಿ ಹೊರಗ ಇಬ್ಬರ ಏನ ಗುಸು-ಗುಸು ನಡಿಸ್ಯಾರ ಅಂತ ಸಂಶಯ ಪಟ್ಟ ತಾನು ಅಕಿ ಹಿಂದ ಬಂದ ನಿಂತಳು.
ನಾ ನಮ್ಮವ್ವ ಬಂದಿದ್ದ ನೋಡಿ ಸ್ವಲ್ಪ ಧೈರ್ಯಾದ್ಲೆ ಜೋರಾಗಿ
“ಐಸಕ್ರೀಮ ತಿಂದ ಸಾಯಿಬೇಕಂತ ಮಾಡಿ ಏನ, ಇರೋಕಿ ಒಬ್ಬಕಿ ಹೆಂಡತಿ ಇದ್ದಿ, ಮಕ್ಕಳಿನ್ನೂ ಸಣ್ಣವ ಅವ, ನಮ್ಮವ್ವಗು ವಯಸ್ಸಾಗೇದ ಸುಮ್ಮನ ಕೂತಗೋ” ಅಂದೆ. ನಾ ಅಷ್ಟ ಹೇಳಿದರು ಅಕಿ ಏನ ಕೇಳಲಿಲ್ಲಾ ಮತ್ತು
“ರ್ರೀ, ಹಂಗೇನ ಆಗಂಗಿಲ್ಲಾ, ಹಂಗ ಅಕಸ್ಮಾತ ಸತ್ತರು ಸಾಯವಲ್ನ್ಯಾಕ ನೀವು ಐಸಕ್ರೀಮ ಕೊಡಸರಿ” ಅಂತ ಹಟಾ ಹಿಡದ್ಲು.
ನಾ ಇಕಿ ಮಂಡತನಾ ಮಾಡೋದರಾಗ ನನ್ನ ಮಗಳನ್ನ ಮೀರಸ್ತಾಳ, ಇಕಿ ಜೋತಿ ಏನ ತಲಿ ಒಡಕೋಳೋದು ಅಂತ ಗಾಡಿ ಹತ್ತಿ ಆಫೀಸ ಹಾದಿ ಹಿಡದೆ. ಇತ್ತಲಾಗ ಆ ಐಸಕ್ರೀಮ ಮಾರೋಂವಾ ನಾವ ಬರೆ ಮಾತಾಡೊರು ತೊಗೊಳೊರ ಅಲ್ಲಾ ಅಂತ ಗ್ಯಾರಂಟೀ ಆಗಿ ಅವನು ಮುಂದಿನ ಓಣಿಗೆ ಹೋದಾ.
ಮುಂದ ನನ್ನ ಹೆಂಡತಿ ಸಿಟ್ಟಲೇ ನಮ್ಮವ್ವನ ಮುಂದ
“ನೋಡ್ರಿ, ನಾ ಸತ್ತರೂ ಅಡ್ಡಿಯಿಲ್ಲಾ ಐಸಕ್ರೀಮ ಕೊಡಸರಿ ಅಂದರು ಕೊಡಸಲಿಲ್ಲಾ ನಿಮ್ಮ ಮಗಾ, ಎಷ್ಟ ಜಿಪುಣ ಇದ್ದಾನ” ಅಂತ ನನ್ನ ಸಿಟ್ಟ ನಮ್ಮವ್ವನ ಮ್ಯಾಲೆ ಹಾಕಿದ್ಲಂತ.
ನಮ್ಮವ್ವಾ, ನೀವು ಗಂಡಾ ಹೆಂಡತಿ ಏನರ ಹಾಳಗುಂಡಿ ಬೀಳ್ರಿವಾ ನಂಗ್ಯಾಕ ನಡುವ ತರತಿ ಅಂತ ಅಂದ ಸುಮ್ಮನ ಕೂಡಬೇಕೋ ಬ್ಯಾಡೋ
“ಅಯ್ಯ… ನಮ್ಮವ್ವ, ಅವಂಗ ಖಾತ್ರಿಯಿಲ್ಲs ನೀ ಐಸಕ್ರೀಮ ತಿಂದರ ಗ್ಯಾರಂಟೀ ಸಾಯಿತಿ ಅಂತ ಅದಕ್ಕ ಕೊಡಸಲಿಲ್ಲಾ ತೊಗೊ” ಅಂದ ಬಿಟ್ಟಳಂತ.
ಯಾಕ ಬೇಕಾಗಿತ್ತ ಇದ ನಮ್ಮವ್ವಗ ಹೇಳ್ರಿ. ಸುಮ್ಮನ ತನ್ನಷ್ಟಕ ತಂದ ಕೆಲಸ ನೋಡ್ಕೊಂಡ ಇದ್ದರ ಆಗತಿತ್ತೊ ಇಲ್ಲೊ? ಈಗ ಅಂದ ಕೆಟ್ಟ ಆದೊಕಿ ನಮ್ಮವ್ವನ ಹೌದಲ್ಲ?
ಮುಂದ ಅರ್ಧಾತಾಸ ನನ್ನ ಹೆಂಡತಿ ಇಡಿ ಓಣಿ ಮಂದಿಗೆ ಕೇಳೋ ಹಂಗ
“ಅಯ್ಯ, ಹೌದ ಬಿಡ್ರಿ ಹಂಗ ನಾ ಐಸಕ್ರೀಮ ತಿಂದರ ಸಾಯ್ತೇನಿ ಅಂತ ಗ್ಯಾರಂಟೀ ಇದ್ದರ ನೀವೇನ ತಾಯಿ ಮಗಾ ಐಸಕ್ರೀಮ ಅಂಗಡಿನ ತಂದ ತಿನಿಸೋ ಪೈಕಿ” ಅಂತ ಒದರಿದ್ಲಂತ. ಏನ್ಮಾಡ್ತೀರಿ?
ನಾ ಮನಿಗೆ ಬಂದ ನಮ್ಮವ್ವಗ ನೀ ಯಾಕ ಅಂದ ಕೆಟ್ಟ ಆದೀವಾ ಅಂದರ
“ಅಯ್ಯ, ಅದ sense of humour, ಚಾಷ್ಟಿ ಮಾಡಿದೆ. ಎಷ್ಟ ಅಂದರು ನಾ ನಿನ್ನ ಹಡದೋಕಿ ಅಲ್ಲೇನ, ನಂಗೂ ಒಂದ ಸ್ವಲ್ಪ sense of humour ಅದಪಾ. ನಂಗೇನ ಗೊತ್ತ ನಿನ್ನ ಹೆಂಡತಿ ನಾ ಅಂದಿದ್ದ ಇಷ್ಟ ಸಿರಿಯಸ್ ತೊಗೊತಾಳ ಅಂತ ಹೇಳಿ” ಅಂದ್ಲು.
ನಾ ಹೋಗಲಿ ಬಿಡ ಇನ್ನ ಕಡ್ಡಿ ಇದ್ದದ್ದ ಗುಡ್ಡ ಮಾಡೋದ ಬ್ಯಾಡ ಅಂತ ಹೇಳಿ ನನ್ನ ಹೆಂಡತಿಗೆ ಕರದ ಹತ್ತ ರೂಪಾಯಿ ಕೊಟ್ಟ
“ನಾಳೆ ಐಸಕ್ರೀಮನವಾ ಬಂದಾಗ ತೊಗೊಂಡ ತಿಂದ ಸಾಯಿ” ಅಂತ ಹೇಳಿ ಅಲ್ಲಿಗೆ ಆ ಇಶ್ಯು ಕ್ಲೋಸ್ ಮಾಡಿದೆ.
ಹಿಂಗ ಸಣ್ಣ-ಪುಟ್ಟ ಹಾಸ್ಯಮಯ ಘಟನೆಗಳು ಎಲ್ಲಾರ ಮನಿ ಒಳಗು, ಮನದೊಳಗು ಇದ್ದ ಇರತಾವ ಅವನ್ನ enjoy ಮಾಡಬೇಕು, ಯಾರು ಇವನ್ನ ನನ್ನ ಹೆಂಡತಿಗತೆ ಅಪಾರ್ಥ ಮಾಡ್ಕೋಬಾರದು ಅಂತ ಅನಸ್ತದ.
ಚಾರ್ಲಿ ಚಾಪ್ಲೀನ ಹೇಳಿದ್ದರು A day without laughter is a day wasted ಅಂತ ಅದಕ್ಕ ನಗಲಿಕ್ಕೆ ಸಿಗೊ ಎಲ್ಲಾ ಅವಕಾಶಗಳನ್ನ ಸದುಪಯೋಗ ಮಾಡ್ಕೊಂಡ ನಗು-ನಗುತಾ ನಲಿರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ