ಪೇರೆಂಟ್ಸ ಡೇ ( 4th sunday of every july) ನಿಮಿತ್ತ ವಿಶೇಷ ಲೇಖನ,
ಮೊನ್ನೆ ಬೆಂಗಳೂರ ಬನಶಂಕರಿ ನಾಲ್ಕನೇ ಸ್ಟೇಜ ಶ್ರೀ ವೆಂಕಟೇಶ್ವರ ಮಂಗಲ ಕಾರ್ಯಾಲಯದಾಗ ಗುರಣ್ಣಂದ ವರ್ಷಾಂತಕ ಇತ್ತ. ಹಂಗ ಗುರಣ್ಣ ಇಲ್ಲೇ ಧಾರವಾಡದಾಗ ಸತ್ತ ಇಲ್ಲಿ ಪಂಚಭೂತದೊಳಗ ಲೀನ ಆಗಿದ್ದ ಖರೇ ಆದರ ಬಳಗದವರ ಒಂದ ನಾಲ್ಕ ಮಂದಿ ವರ್ಷಾಂತಕಕ್ಕರ ಬರಲಿ ಸತ್ತಾಗ ಅಂತು ಧಾರವಾಡ ತನಕಾ ಅವರಿಗೆ ಬರಲಿಕ್ಕೆ ಆಗಲಿಲ್ಲಾ ಪಾಪಾ ಎಲ್ಲಾರು ಬೆಂಗಳೂರಾಗ ಸೆಟ್ಲ ಆದೋರು ಅಂತ ಹೀರೆ ಮಗಾ ರಾಮಣ್ಣ ಮುದ್ದಾಮ ಬೆಂಗಳೂರಾಗ ವರ್ಷಾಂತಕ ಇಟಗೊಂಡಿದ್ದಾ.
ಹಂಗ ಧಾರವಾಡದಿಂದ ವರ್ಷಾಂತಕಕ್ಕ ಹೋದೊಂವ ವಾಸಣ್ಣ ಒಬ್ಬನ, ಹೆಗಲ ಕೊಟ್ಟ ನಾಲ್ಕ ಮಂದಿ ಒಳಗ ಅವರ ಗೋತ್ರದಂವಾ ಅಂವಾ ಒಬ್ಬನ ಅಂತ ರಾಮಣ್ಣ ಅವಂಗ ಒಬ್ಬಂವಂಗ ಕರದಿದ್ದಾ. ಹಂಗ ಇನ್ನ ಉಳದ ಹುಬ್ಬಳ್ಳಿ ಧಾರವಾಡ ಮಂದಿಗೆ ಎಲ್ಲೆ ಹಿಂತಾ ಸಣ್ಣ-ಪುಟ್ಟ ಕಾರ್ಯಕ್ರಮಕ್ಕ ಬೆಂಗಳೂರ ತನಕಾ ಹೋಗಲಿಕ್ಕೆ ಆಗತದ, ಸುಳ್ಳ ಗಾಡಿ ಖರ್ಚ ದಂಡಾ ಅಂತ ಅವರನ ಕರೆಯೋ ಗೊಜಿಗೆ ರಾಮಣ್ಣ ಹೋಗಿದ್ದಿಲ್ಲಾ. ಅಲ್ಲಾ ಇತ್ತಿತ್ತಲಾಗ ಎಲ್ಲಾ ಬಂಧು- ಬಳಗಾ ಬೆಂಗಳೂರಾಗ ಸೆಟ್ಲ್ ಆದ ಮ್ಯಾಲೆ ಹುಬ್ಬಳ್ಳಿ-ಧಾರವಾಡದಾಗ ಉಳದ ಹಳಕಲಾ-ಬಳಕಲಾ ಹಳೆ ತಲಿ ತೊಗೊಂಡರ ಏನ ಮಾಡಬೇಕ.
ಪಾಪ, ವಾಸಣ್ಣ ಹೋಗ್ಲ್ಯೊ ಬ್ಯಾಡೋ ಅನ್ಕೋತ ಒಂದ ಹತ್ತ ಸರತೆ ವಿಚಾರ ಮಾಡಿ ಒಬ್ಬವನ ಒಂದ ದಿವಸ ಮೊದ್ಲ ಇಂಟರಸಿಟಿ ಹತ್ತಿ ಬೆಂಗಳೂರಿಗೆ ಹೋದಾ. ಅದರಾಗ ಅವಂಗ ಒಬ್ಬವಂಗ ಕರದಿದ್ದಕ್ಕ ಬೆಂಗಳೂರ ತನಕಾ ಜೋಡಿ ಬ್ಯಾರೆ ಯಾರ ಇದ್ದಿದ್ದಿಲ್ಲಾ, ಅದರಾಗ ಅವಂಗು ಈಗ ವಯಸ್ಸು ಎಪ್ಪತ್ತರ ಹತ್ತರ ಬಂತು ಮದ್ಲಿನಂಗ ಚುರಕತನಾ ಇಲ್ಲಾ. ಆದರ ಇದನ್ನ ಬಿಡಲಿಕ್ಕೂ ಬರಂಗಿಲ್ಲಾ, ಗುರಣ್ಣ ಅವನ ಖಾಸ ಕಾಕಾ, ಅದರಾಗ ಲಾಸ್ಟ ಹತ್ತ ಹದಿನೈದ ವರ್ಷದಿಂದ ಇವನ ಧಾರವಾಡದಾಗ ಗುರಣ್ಣನ ದೇಖರಕಿ ಮಾಡಿದಂವಾ.
ಹಂಗ ಬೆಂಗಳೂರಾಗ ವರ್ಷಾಂತಕ ಅಗದಿ ಗ್ರ್ಯಾಂಡ ಆಗಿನ ಆತ ಅನ್ನರಿ, ಎನಿಲ್ಲಾ ಅಂದರು ಒಂದ ನೂರ ನೂರಾ ಐವತ್ತ ಮಂದಿ ಬಂದ ಉಂಡ ಎಲಿ ಅಡಕಿ ಹಾಕ್ಕೊಂಡ ಅಲ್ಲೇ ಒಂದ ಪ್ಲ್ಯಾಸ್ಟಿಕ್ ಚೇರ ಮ್ಯಾಲೆ ಚೆಂಡ ಹೂವಿನ ಮಾಲಿ ಹಾಕಿ ಇಟ್ಟಿದ್ದ ಗುರಣ್ಣನ ಫೊಟಕ್ಕ ಕೈಮುಗದ ಹೋದರು. ಫೋಟೊ ನೋಡಿದವರ ಏನ ಅಗದಿ ಗುರಣ್ಣ ಸಣ್ಣ ವಯಸ್ಸಿನಾಗ ಹೋದ್ನೇನೋ ಅನಬೇಕ ಹಂಗ ಇತ್ತ ಯಾಕಂದರ ಅದ ಏನಿಲ್ಲಾಂದರು ಒಂದ ಇಪ್ಪತ್ತೈದ ವರ್ಷದ ಹಿಂದಿನ ಫೋಟೊ. ಪಾಪ, ರಾಮಣ್ಣರ ಏನ ಮಾಡ್ತಾನ ಅವನ ಕಡೆ ಇದ್ದದ್ದ ಅವರಪ್ಪಂದ ಅದ ಒಂದ ಫೋಟೊ, ಹಂಗ ಖರೇ ಅಂವಾ ಅವರಪ್ಪನ್ನ ಮಾರಿ ಲಾಸ್ಟ ನೋಡಿದ್ದ ನಾಲ್ಕ ವರ್ಷದ ಹಿಂದ ತನ್ನ ಮಗನ ಲಗ್ನಕ್ಕ ಕರಿಲಿಕ್ಕೆ ಹೋದಾಗ.
ಆವಾಗ ಗುರಣ್ಣಗ ಏನೋ ಮೊಮ್ಮಗನ ಲಗ್ನಕ್ಕ ಹೋಗಿ ನಾಲ್ಕ ಅಕ್ಕಿ ಕಾಳ ಹಾಕಬೇಕಂತ ಮನಸ್ಸಿತ್ತ ಖರೆ ಆದರ ಎರಡನೇ ಮಗ ಶಂಕರನ ಉಸ್ತುವಾರಿ ಒಳಗ ಇದ್ದ ಗುರಣ್ಣ ಶಂಕರ ಹೂಂ ಅನ್ನಲಾರದ ಹೊಚ್ಚಲ ಹೊರಗ ಹೋಗೊಹಂಗ ಇರಲಿಲ್ಲಾ. ಅದರಾಗ ಶಂಕರ ಪುಣಾದಾಗ ಇರ್ತಿದ್ದಾ ಹಿಂಗಾಗಿ ಅಂವಾ ’ನನ್ನ ಕೇಳದ ನಮ್ಮಪ್ಪನ್ನ ಯಾರ ಕರದರೂ ಕಳಸ ಬ್ಯಾಡರಿ’ ಅಂತ ದಿಗಂಬರಗ ತಾಕಿತ್ತ ಮಾಡಿ ಬಿಟ್ಟಿದ್ದಾ.
ರಾಮಣ್ಣನ ಜೊತಿ ಇದ್ದ ವಾಸಣ್ಣ “ಮೊಮ್ಮಗನ ಮದುವಿ, ಇಲ್ಲೇ ಹುಬ್ಬಳ್ಳಿ ಒಳಗ, ಅಕ್ಕಿ ಕಾಳ ಹಾಕಿದವನ ಮತ್ತ ಬಂದ ಬಿಡ್ತಾನ, ಕಾರನಾಗ ಹೋಗಿ ಕಾರನಾಗ ಕರಕೊಂಡ ಬರ್ತೇವಿ” ಅಂತ ಅಂದರು ದಿಗಂಬರ ಕಳಸಲಿಲ್ಲಾ. ಅಲ್ಲಾ, ಅದಕ್ಕ ಕಾರಣ ಏನ ಇಲ್ಲಾ ಅಂತ ಅಲ್ಲಾ, ಭಾಳ ಕಾರಣ ಇದ್ವು, ಅದೇಲ್ಲಾ ವಾಸಣ್ಣ ಗೊತ್ತ ಇದ್ದದ್ವ. ಆದರ ಏನ ಮಾಡೋದ ಮನಿ ತನಕ ಕಾರ ತೊಗೊಂಡ ಬಂದ ರಾಮಣ್ಣ
’ನನ್ನ ಮಗನ ಲಗ್ನಕ್ಕ ನಮ್ಮಪ್ಪ ಹೆಂಗರ ಮಾಡಿ ಬರಬೇಕ, ಅದಕ್ಕ ಅವನ್ನ ಕರದ ಬರೋಣ ಬಾ’ ಅಂತ ಅಂದಾಗ ಇಲ್ಲೆ ಅನ್ನಲಿಕ್ಕೆ ಆಗದ ಅವನ ಜೊತಿ ಗುರಣ್ಣನ್ನ ಕರಿಲಿಕ್ಕೆ ಹೋಗಿದ್ದಾ.
ಹಂಗ ಶಂಕರಾ ’ನನ್ನ ಕೇಳದ ನಮ್ಮಪ್ಪನ್ನ ಯಾರ ಕರದರೂ ಕಳಸ ಬ್ಯಾಡರಿ’ ಅನ್ನೋದರಾಗು ತಪ್ಪು ಇದ್ದಿದ್ದಿಲ್ಲಾ, ಯಾಕಂದರ ಗುರಣ್ಣ ಒಮ್ಮೆ ಯಾರದರ ಮನಿಗೆ ಹೋದನಂದರ ಎರಡೆರಡ ಮೂರ ಮೂರ ದಿವಸ ಅಲ್ಲೆ ಠಿಕಾಣಿ ಹುಡಿ ಬಿಡ್ತಿದ್ದಾ ಒಂದ ಫೊನ ಇಲ್ಲಾ, ಸುಡಗಾಡ ಇಲ್ಲಾ, ಇತ್ತಲಾಗ ದಿಗಂಬರ ಚಿಂತಿ ಮಾಡಿ ವಾಸಣ್ಣಗ ಫೊನ ಮಾಡೋದು, ಅವಂಗೂ ಗೊತ್ತಿಲ್ಲಾ ಅಂದ ಮ್ಯಾಲೆ ಕಡಿಕೆ ಪೂಣಾಕ್ಕ ಶಂಕರಗ ಫೊನ್ ಮಾಡೋದ ಕಾಮನ್ ಆಗಿ ಬಿಟ್ಟಿತ್ತು. ಮತ್ತ ವಾಸಣ್ಣನ ಗುರಣ್ಣ ಎಲ್ಲೆ ಹೋಗ್ಯಾನ ಅಂತ ಹುಡಕಿ ಹುಡಕಿ ಕರಕೊಂಡ ಬಂದ ದಿಗಂಬರನ ಹವಾಲಿ ಮಾಡ್ತಿದ್ದ. ಇದ ಭಾಳ ಸರತೆ ಹಿಂಗ ಆಗೋಣ ಒಂದ ದಿವಸ ತಲಿ ಕೆಟ್ಟ ಶಂಕರ ’ನನ್ನ ಕೇಳದ ನಮ್ಮಪ್ಪನ್ನ ಯಾರ ಕರದರೂ ಕಳಸ ಬ್ಯಾಡರಿ’ಅಂತ ಹೇಳಿ ಬಿಟ್ಟಿದ್ದಾ. ಇನ್ನ ಗುರಣ್ಣನ ಖರ್ಚ ಈಗ ಐದ ವರ್ಷದಿಂದ ನೋಡಲಿಕತ್ತವನ ಶಂಕರ ಅಂದ ಮ್ಯಾಲೆ ದಿಗಂಬರಗ ಶಂಕರನ ಮಾತ ಮಿರೋಹಂಗ ಇರಲಿಲ್ಲ. ಹಂಗ ಯಾರರ ಬಂದರ ಭೆಟ್ಟಿ ಮಾಡಸ್ತಿದ್ದಾ ಆದರ ಯಾವದ ಕಾರಣಕ್ಕು ಗುರಣ್ಣನ ಮಾತ್ರ ಹೊರಗ ಬಿಡ್ತಿದ್ದಿಲ್ಲ. ಅದರಾಗ ಅವನ ಹೆಲ್ತ ಇತ್ತೀಚಿಗೆ ಭಾಳ ಕೆಡಲಿಕತ್ತಿತ್ತ ಹಿಂಗಾಗಿ ಯಾರರ ಗುರಣ್ಣನ ಕರಸಬೇಕು ಹಿರೇ ಮನಷ್ಯಾ ಅಂತ ಅನಸಿದರು ಒಂದ ಹತ್ತ ಸರತೆ ವಿಚಾರ ಮಾಡೊರು.
ಹಿಂಗಾಗಿ ರಾಮಣ್ಣನ ಮಗನ ಲಗ್ನಕ್ಕ ಗುರಣ್ಣ ಹೋಗಲಿಲ್ಲಾ, ರಾಮಣ್ಣನು ತಮ್ಮ ಶಂಕರಗ ಒಂದ ಮಾತ ಕೇಳಿ ಅಪ್ಪನ್ನ ನಾ ನನ್ನ ಮಗನ ಲಗ್ನಕ್ಕ ಕರಕೊಂಡ ಹೋಗಿ ಮತ್ತ ವಾಪಸ ಬಿಡ್ತೇನಿ ಅನ್ನಲಿಲ್ಲ. ಆ ಮಾತಿಗೆ ಈಗ ನಾಲ್ಕ ವರ್ಷ ಆಗಲಿಕ್ಕೆ ಬಂತ. ಈಗ ತಿರಗಿ ರಾಮಣ್ಣಗ ಮೊಮ್ಮಗಾ ಹುಟ್ಟ್ಯಾನ. ಹಂಗ ಒಂದ ತಿಂಗಳ ಲೇಟಾಗಿ ಹುಟ್ಟಿದ್ದರ ತನ್ನ ಮೊಮ್ಮಗಗ ’ಗುರಣ್ಣ’ ಅಂತ ಹೆಸರ ಇಡಸ್ತಿದ್ನೊ ಏನೋ ಆದರ ಮೊಮ್ಮಗ ಹುಟ್ಟಿ ಒಂದ ತಿಂಗಳಾದ ಮ್ಯಾಲೆ ಗುರಣ್ಣ ಸತ್ತಾ. ಆದರ ಅವಂಗೇನ ಮೊಮ್ಮಗ ಹುಟ್ಟಿದ್ದ ಗೊತ್ತ ಇತ್ತೊ ಇಲ್ಲೊ ಆ ದೇವರಿಗೆ ಗೊತ್ತ.
ಹಂಗ ಗುರಣ್ಣ ಸತ್ತಾಗ ಶಂಕರ ಅಮೇರಿಕಾದಾಗ ಇದ್ದ, ಇನ್ನ ಅಂವಾ ಏನೋ ’ನನ್ನ ಕೇಳದ ನಮ್ಮಪ್ಪನ್ನ ಯಾರ ಕರದರೂ ಕಳಸ ಬ್ಯಾಡರಿ’ಅಂತ ಹೇಳಿದ್ದಾ ಖರೆ ಆದರ ಆ ದೇವರ ಯಾಕ ಇವನ್ನ ಕೇಳಿ ಅವರಪ್ಪನ್ನ ಕರಕೊಂಡ ಹೋಗ್ತಾನ, ಒಂದ ದ್ವಾದಶಿ ದಿವಸ ಮುಂಜ-ಮುಂಜಾನೆ ಚಹಾ ವಾಟಗಾ ಕೈಯಾಗ ಹಿಡಕೊಂಡ ಹಿಂದ ತಲಿದಿಂಬಿಗೆ ಆನಕೊಂಡಿದ್ದ ಗುರಣ್ಣ ಅಲ್ಲೆ ಕಣ್ಣ ಮುಚ್ಚಿ ಬಿಟ್ಟಾ. ಇನ್ನ ಶಂಕರ ಆವಾಗ ಶಿಕ್ಯಾಗೊ ಒಳಗ ಇದ್ದಾ, ಹಿಂಗಾಗಿ ದಿಗಂಬರ ಸೀದಾ ವಾಸಣ್ಣಗ ಫೊನ ಮಾಡಿದಾ. ವಾಸಣ್ಣ ರಾಮಣ್ಣಗ ’ನಿಮ್ಮಪ್ಪ ಹೋದಾ’ ಅಂತ ಫೊನ ಮಾಡಿದರ
ರಾಮಣ್ಣ ’ನಮ್ಮಪ್ಪಗ ಶಂಕರ ಒಬ್ಬನ ಮಗಾ, ಅವನ ಬಂದ ಬೆಂಕಿ ಇಡ್ಲಿ ತೊಗೊ’ ಅಂತ ಸೀದಾ ಎರಡನೇ ದಿವಸ ಅಸ್ತಿ ಬಿಡಲಿಕ್ಕೆ ಹಂಪಿಗೆ ಬಂದಿದ್ದಾ. ವಾಸಣ್ಣನ ಬ್ರಾಹ್ಮಣ ಸಂಘದವರನ ಹಿಡದ ಎಲ್ಲಾ ವ್ಯವಸ್ಥಾ ಮಾಡಿ ಹೆಂಗಿದ್ದರೂ ಕಾಕಾ ಅಂತ ತಾನ ಬೆಂಕಿ ಹಚ್ಚಿ ಕೈ ತೊಳ್ಕೊಂಡ ಮರದಿವಸ ಅಸ್ತಿ ಆರಿಸಿಕೊಂಡ ಹಂಪಿಗೆ ಹೋಗಿ ರಾಮಣ್ಣಗ ’ನಿಮ್ಮಪ್ಪನ್ನ ಅಸ್ತಿ’ ಅಂತ ಅವನ ತಾಬಾ ಮಾಡಿದಾ.
ಮುಂದ ಶಂಕರ ಬಂದಿದ್ದ ಧರ್ಮೋದಕ ಬಿಡಲಿಕ್ಕೆನ. ಏನೋ ಪುಣ್ಯಾ ನಾ ಇಲ್ಲೆ ಶಿಕ್ಯಾಗೋದಾಗ ಧರ್ಮೋದಕ ಬಿಡ್ತೇನಿ ನನ್ನ ಪಾಲಿನ ಅಸ್ತಿ ಕೊರಿಯರ ಮಾಡ ಅನ್ನಲಿಲ್ಲಾ.
ಈ ಮಾತಿಗೆ ಒಂದ ವರ್ಷ ಆತ. ಶಂಕರ ಪುಣಾದಿಂದ ವರ್ಷಾಂತಕಕ್ಕ ಏನ ಬರಲಿಲ್ಲಾ. ನಾ ಅದರ ಬದ್ಲಿ ಹಾನಗಲ್ಲ ಒಳಗಿನ ಬನಶಂಕರಿ ಗುಡಿಗೆ ನಮ್ಮಪ್ಪನ ಹೆಸರಿಲೆ ಒಂದ ರೂಮ ಕಟ್ಟಿಸಿಕೊಡ್ತೇನಿ ಅಂತ ಹೋದ ಸರತೆ ದತ್ತ ಜಯಂತಿಗೆ ಹಾನಗಲ್ಲಿಗೆ ಹೋದಾಗ ಹೇಳಿ ಬಂದಾನಂತ.
ಹಂಗ ಗುರಣ್ಣ ಹೋದ ಮ್ಯಾಲೆ ರಾಮಣ್ಣ, ಶಂಕರನಕಿಂತಾ ಟೇನ್ಶನ್ ಫ್ರೀ ಆದೊರ ಅಂದರ ವಾಸಣ್ಣ ಮತ್ತ ದಿಗಂಬರ. ಇನ್ನ ದಿಗಂಬರಂತೂ ತಂದ ಡ್ಯುಟಿ ಅಂತ ಪಗಾರಕ್ಕಾದರು ಮಾಡ್ತಿದ್ದಾ ಆದರ ಇದ್ದ ಊರಾಗ ಗುರಣ್ಣನ ಬಳಗದಂವಾ ಅಂದರ ವಾಸಣ್ಣ, ಹಿಂಗಾಗಿ ಗುರಣ್ಣಗ ಏನ ಹೆಚ್ಚು ಕಡಿಮಿ ಆದರು ಮೊದ್ಲ್ ಓಡಿ ಹೋಗೊಂವ ವಾಸಣ್ಣ, ಅದರಾಗ ಅವನ ಕಾಕಾ ಬ್ಯಾರೆ, ಅದರಾಗ ವಾಸಣ್ಣಗ ಸಣ್ಣಂವ ಇರತ ಸಾಕಿದವನ ಗುರಣ್ಣ ಕಾಕ, ವಾಸಣ್ಣನ ಅಪ್ಪಾ ಲಗೂನ ತಿರಕೊಂಡಿದ್ದಾ, ಕಾಕಾನ ಇವಂಗ ಓದಿಸಿ ಬೆಳಿಸಿ ದೊಡ್ಡಂವನ ಮಾಡಿದ್ದ, ಹಿಂಗಾಗಿ ಸ್ವಂತ ಮಕ್ಕಳ ಮರತರು ವಾಸಣ್ಣ ಮರೆಯೊಹಂಗ ಇರಲಿಲ್ಲ. ಅದಕ್ಕ ಹದಿನೈದ ವರ್ಷದಿಂದ ಚಕಾರ ಶಬ್ದ ಎತ್ತಲಾರದ ಚಾಕರಿ ಮಾಡಿದಂವಾ ವಾಸಣ್ಣನ ಅಂದರು ತಪ್ಪ ಅಲ್ಲಾ.
….ಇವತ್ತ ಗುರಣ್ಣ ಬರೇ ಒಂದ ನೆನಪ ಮಾತ್ರ. ಅದು ಅವನ ನೆನಪ ಆಗೊದು ರಾಮಣ್ಣನ ಮನಿ ಪಡಸಾಲ್ಯಾಗಿನ ಗ್ಲಾಸ್ ಶೊ ಕೇಸ ಒಳಗಿನ ಫೋಟೊ ನೋಡಿದಾಗ ಒಮ್ಮೆ. ಆ ಫೋಟೊದ ಮ್ಯಾಲೆ ’ದಿನಾ ಒಂದಕ್ಕೂ ಎಲ್ಲೆ ಮಾಲಿ ಹಾಕಲಿಕ್ಕೆ ಆಗ್ತದ’ ಅಂತ ಹಾವೇರಿ ಒಳಗ ಹೇಳಿ ಮಾಡಿಸಿದ್ದ ಐದ ನೂರ ರೂಪಾಯ್ದ ಯಾಲಕ್ಕಿ ಹಾರ ಹಾಕಿ ಇಟ್ಟಾರ. ಇನ್ನ ಆ ಫೋಟೊ ಬಾಜು ಗುರಣ್ಣನ ಪರಿಸ್ಥಿತಿ ನೋಡಿ ’ನಂಗೇಲಾ ಗೊತ್ತಿತ್ತ ನಿಂದ ಇದ ಹಣೇಬರಹ ಇಷ್ಟ’ ಅಂತ ಮುಗಳ್ನಗೊ ಗುರಣ್ಣನ ಹೆಂಡ್ತಿದ ನಲವತ್ತ ವರ್ಷದ ಹಿಂದಿಂದ ಧೂಳ ಹತ್ತಿದ್ದ ವರ್ಷಾ ಐದಾನವಮಿಗೆ ಒಮ್ಮೆ ಒಣಾ ಕುಂಕಮಾ ಕಾಣೊ ಫೊಟೊ. ಮೂವತ್ತ ವರ್ಷದ ಹಿಂದ ಮುಂದ ಹೆತ್ತ ಮಕ್ಕಳ ತುತ್ತ ಹಾಕಲಾರದನ್ನ ನೋಡಲಿಕ್ಕೆ ಆಗಂಗಿಲ್ಲಾಂತ ಗಂಡನ್ನ ಪರದೇಶಿ ಮಾಡಿ ತನಗ ಒಬ್ಬೊಕಿಗೆ ಪುಣ್ಯಾ ಬರಲಿ ಅಂತ ಬಯಸಿ ಪಡದ ಮುತ್ತೈದಿ ಸಾವು ಗುರಣ್ಣನ ಹೆಂಡ್ತಿದು.
ಇನ್ನ ಈ ಕಥಿ ಒಳಗ ಒಂದ ಪಾತ್ರ ಯಾರು ಅಂತ ಗೊತ್ತಗಲಾರದ್ದು ಅಂದರ ಅದು ದಿಗಂಬರಂದು……
ದಿಗಂಬರ ’ಶಾಕಾಂಬರಿ ವಾನಪ್ರಸ್ಥ ಆಶ್ರಮ, ಮಾಳಮಾಡ್ಡಿ, ಧಾರವಾಡ’ ಇದರ ಮ್ಯಾನೇಜರ, ಹುಟ್ಟಾ ಅನಾಥ, ಅವರ-ಇವರ ಮನ್ಯಾಗ ತಿಂದ ಉಂಡ ಬೆಳದ ಇವತ್ತ ಅನಾಥ ಆದ ಎಲ್ಲಾ ಪೇರೆಂಟ್ಸನ್ನು ತನ್ನ ಅವ್ವಾ-ಅಪ್ಪಾ ಅನ್ನೊರಗತೆ ನೋಡ್ಕೊಂಡ ಹೋಗೊಂವಾ. ಹಂಗ ಅವಂಗ ಇದ ತಿಂಗಳಿಗೆ ಎಂಟ ಸಾವಿರ ರೂಪಾಯಿ ಕೊಡೊ ನೌಕರಿ ಇರಬಹುದು ಆದರ ಇಂವಾ ಅದನ್ನ ವರ್ಕ ಇಜ್ ವರ್ಶಿಪ್ ಅಂತ ಮಾಡ್ತಾನ. ಏನಿಲ್ಲಾಂದರು ವರ್ಷಕ್ಕ ಎರಡ ಮೂರ ಮಂದಿಗೆ ವೃದ್ಧಾಶ್ರಮದಾಗ ನೀರ ಬಿಟ್ಟ ನಿಮ್ಮಪ್ಪ ಹೋದಾ ಬಂದ ಬಾಡಿ ಓಯ್ತಿರೋ ಇಲ್ಲಾ ನಾನ ಮುಕ್ತಿಧಾಮಕ್ಕ ಒಯ್ದ ಎಲ್ಲಾ ಮುಗಸಬೇಕೊ ಅಂತ ಫೋನ ಮಾಡೊಂವಾ ಇವನ. ಹಂಗ ಗುರಣ್ಣಗ ನೀರ ಬಿಟ್ಟವನು ಇವನ ಆ ಮಾತ ಬ್ಯಾರೆ.
ಈಗ ಹದಿನೈದ ವರ್ಷದ ಹಿಂದ ಹಾನಗಲ್ಲಾಗಿನ ಹೊಲದ ಹಿಸೆ ಒಳಗ ಇಬ್ಬರು ಮಕ್ಕಳಿಗೆ ನ್ಯಾಯ ಒದಗಿಸಿ ಅನಾಥ ಆದಂವಾ ಗುರಣ್ಣ, ಪೂಣೆ ಶಂಕರ ವರ್ಷದಾಗ ಒಂದ್ಯಾರಡ ತಿಂಗಳ ಇಷ್ಟ ಇಂಡಿಯಾದಾಗ ಇರೋಂವಾ ದೊಡ್ಡ ನೌಕರಿ, ದೊಡ್ಡ ಪಗಾರ, ಮ್ಯಾಲೆ ಅವಂದ ಒಂದ ದೊಡ್ಡ ಸಂಸಾರ, ಹಂತಾದರಾಗ ಅಪ್ಪನ್ನ ಸಂಭಾಳಸಲಿಕ್ಕೆ ಆಗಂಗಿಲ್ಲಾ.
ಇನ್ನ ರಾಮಣ್ಣ ಇದ್ದದ್ದರಾಗ ಕನಿಕರ ಇದ್ದೋಂವಾ ಆದರ ಹೆಂಡ್ತಿದ ಒಂದ ಎಳಿ ರಂಗೋಲಿ ದಾಟಂವ ಅಲ್ಲಾ, ಅದರಾಗ ಇವನು ದೊಡ್ಡ ಸರ್ಕಾರಿ ನೌಕರಿ, ಎರಡ ವರ್ಷಕ್ಕೊಮ್ಮೆ ಟ್ರಾನ್ಸ್ಫರ, ಎಲ್ಲೆ ವಯಸ್ಸಾದ ಅಪ್ಪನ್ನ ಕಟಗೊಂಡ ಅಡ್ಡಾಡಲಿಕ್ಕೆ ಆಗ್ತದ. ಹಿಂಗಾಗಿ ಗುರಣ್ಣ ಕೈಕಾಲ ಗಟ್ಟಿ ಇರೋತನಕ ವಾಸಣ್ಣನ ಮನ್ಯಾಗ ಇದ್ದಾ, ಆದರ ಮಂದೇರ ಎಷ್ಟ ದಿವಸ ಅಂತ ಮಾಡ್ತಾರ ಕಡಿಕೆ ಒಂದ ದಿವಸ ಶಂಕರ ಬಂದ ಅಪ್ಪನ್ನ ವೃದ್ಧಾಶ್ರಮಕ್ಕ ಸೇರಿಸಿ ದಿಗಂಬರಗ ಸ್ವಲ್ಪ ನಿಮ್ಮಪ್ಪ ಅಂತ ನೊಡ್ಕೊ ಅಂತ ಹೇಳಿ ಹೋಗಿದ್ದಾ. ಹಂಗ ತಿಂಗಳಾ ಬೇಕಾಗೊ ಅಷ್ಟ ರೊಕ್ಕ ನೆಫ್ಟ ಮಾಡ್ತಿದ್ದಾ. ಮ್ಯಾಲೆ ಹೆಚ್ಚು ಕಡಿಮಿ ಏನರ ಆದರ ವಾಸಣ್ಣಂತು ಸೈನ ಸೈ. ಗುರಣ್ಣ ಸಾಯೊ ಎರಡ ದಿವಸ ಮುಂಚೆ ವಾಸಣ್ಣ ತನಗ ಮೊಮ್ಮಗ ಹುಟ್ಟಿದಾ ಅಂತ ಫೆಡೆ ಕೊಡಲಿಕ್ಕೆ ಹೋದಾಗ ಗುರಣ್ಣ “ನಿನ್ನ ಮಗಗು ಗಂಡ ಹುಟ್ಟತ…ಆತ ತೊಗೊ” ಅಂತ ಅಂದಿದ್ದನಂತ..ಅದ ಅಂವಾ ಅವನ ಜೊತಿ ಆಡಿದ್ದ ಲಾಸ್ಟ ಮಾತ……
ಇದೇನೊ ಕಥಿ ಅನಸಬಹುದು ಆದರ ಇದ ಇವತ್ತ ನಮ್ಮ ಸಮಾಜದಾಗ ಆಗ್ತಾ ಇರೊ ಹಕಿಕತ್, ಇವತ್ತ ಗುರಣ್ಣನ ಭೂತಕಾಲ ನಮ್ಮ ನಾಳಿ ಭವಿಷ್ಯ ಆದರು ಆಗಬಹುದು. ಒಂದ ಸರತೆ ಪುರಸೊತ್ತ ಸಿಕ್ಕರ ವಿಚಾರ ಮಾಡ್ರಿ ಇಲ್ಲಾ ಇನ್ನ ಇಪ್ಪತ್ತ ವರ್ಷ ಬಿಟ್ಟ ಯಾವದರ ವೃದ್ಧಾಶ್ರಮದಾಗ ಕೂತ ವಿಚಾರ ಮಾಡೊಣಂತ.