ನನ್ನ ಸಾಧನೇಯ ‘ಸಮಾವೇಶ’…

ಇದೇನಪಾ ಸಾಧನೇಯ ಸಮಾವೇಶ, ಇಂವಾ ಏನ್ ಜೀವನದಾಗ ಹಂತಾದ ಸಾಧಸಿದಾ ಅಂತ ಸಮಾವೇಶ ಮಾಡ್ಕೋಳಿಕ್ಕೆ ಹೊಂಟಾನ ಅಂತ ಗಾಬರಿ ಆಗಬ್ಯಾಡರಿ. ನಾ ಹಂತಾದ ಏನ್ ಸಾಧಿಸಿಲ್ಲಾ, ಹಂಗ ಸಾಧಸಲಿಕ್ಕು ಹೋಗಂಗಿಲ್ಲಾ. ನನ್ನ ಕಡೆ ಆಗಂಗನ ಇಲ್ಲಾ, ನನ್ನ ಹೆಂಡತಿ ಸಾಧಸಲಿಕ್ಕ ಬಿಟ್ಟರಲಾ ನಾ ಏನರ ಸಾಧಸೋದು? ಹಂಗ ಜೀವನದಾಗ ಸಾಧಸೇ ತೀರಬೇಕು ಅಂದರ ಹೆಂಡತಿನ್ನ ಬಿಡಬೇಕಾಗತದ. ಕಟಗೊಂಡ ಹೆಂಡತಿನ್ನ ಬಿಡೋದು ಒಂದ ದೊಡ್ಡ ಸಾಧನೆನ ಆದರ ಸದ್ಯೇಕ ಅದೇನ ಬ್ಯಾಡ. ಇಷ್ಟ ದಿವಸ ಛಂದಾಗಿ ಹೆಂಡತಿ ಜೊತಿ ಹೊಂದಕೊಂಡ ಇದ್ದೇನಲಾ ಅದ ಒಂದ ದೊಡ್ಡ ಸಾಧನೆ ಅಂತ ಸಮಾಧಾನ ಮಾಡ್ಕೊಂಡ ಸುಮ್ಮನ ಇದ್ದರಾತು.
ಹಂಗರ ಇದ ಯಾ ಸಾಧನೇ ಸಮಾವೇಶದ ಬಗ್ಗೆ ನಾ ಹೇಳಿ ಕತ್ತೇನಿ ಅಂದರ, ನಾವು ನಮ್ಮ ದೋಸ್ತರ ಸರ್ಕಲದಾಗ ಯಾರದರ ಹೆಂಡತಿ ಒಂದನೇದ ಬಸರಾಗಿ, ಸ್ಕ್ಯಾನಿಂಗ ಮಾಡಿಸಿ ಕನಫರ್ಮ್ ಮಾಡ್ಕೊಂಡ, ಒಂದ ದಿಡ ತಿಂಗಳ ಸ್ಟಾರ್ಟಿಂಗಗೆ ಬೆಡ್ ರೆಸ್ಟ ತೊಗೊಂಡ ಆಮ್ಯಾಲೆ ಅವರೇನ ಮನ್ಯಾಗ ಕುಬಸಾ ಅಂತ ಮಾಡ್ತಾರಲಾ ಅದಕ್ಕ ಸಾಧನೇ ಸಮಾವೇಶ ಅಂತೇವಿ. ಯಾ ನನ್ನ ಮಗನ ಹೆಂಡತಿ ಹಡಿಯೋಕಿ ಇರತಾಳಲಾ ಅದು ಆ ಮಗಾ ಮಾಡಿದ್ದ ಸಾಧನೆ. ಅಲ್ಲಾ ಇತ್ತೀಚಿಗೆ ಹೆಂಡತಿಗೆ ಗುಳಗಿ ಚಟಾ ಬಿಡಿಸಿ ಹಡಿಲಿಕ್ಕೆ ಹೂಂ ಅನ್ನಸೋದು ಒಂದ ದೊಡ್ಡ ಸಾಧನೆನ ಬಿಡ್ರಿ.
ಈಗ ಎಲ್ಲಾ ಬಿಟ್ಟ ಅದ ಯಾಕ ನೆನಪಾತು ಅಂದ್ರ ಮೊನ್ನೆ ಒಬ್ಬರ ಮನ್ಯಾಗ ಕುಬಸದ ಆಮಂತ್ರಣ ಬಂದಿತ್ತು. ನಾವು ಗಂಡಾ ಹೆಂಡತಿ ಕುಬಸಕ್ಕ ಹೋಗಿ ಕುಪಸದ(ಜಂಪರ್)ಪೀಸ ಉಡಿ ತುಂಬಿ ಊಟಾ ಹೋಡದ ಬಂದ್ವಿ. ಅವರ ಕುಬಸಕ್ಕ ಕರದಿದ್ದ ಮಂದಿ, ರಸ್ತೇದಾಗ ಹಾಕಸಿದ್ದ ಪೆಂಡಾಲ, ಮಾಡಿದ್ದ ಖರ್ಚ ನೋಡಿದರ ಅದರಾಗ ನಮ್ಮಂದೀವ ಮೂರ ಬಾಣೆಂತನಾ ಆಗತಿದ್ವು. ಅಲ್ಲಾ ಅದು ಕೆಲವಬ್ಬರ ಇಂಟರೇಸ್ಟ್ ಮತ್ತ ಕ್ಯಾಪ್ಯಾಸಿಟಿ ಬಿಡರಿ. ಯಾರ ತಯಾರ ಮಾಡಲಿಕ್ಕೆ ಎಷ್ಟ ಕಷ್ಟ ಪಟ್ಟಿರಿತಾರ ಅಷ್ಟ ಜೋರಲೆ ಕುಬಸಾ ಸೆಲೆಬ್ರೇಟ ಮಾಡ್ತಾರ. ನಾವೇಲ್ಲಾ ಮನಿ ಪೂರ್ತೇಕ, ಬಳಗದವರ ಒಳಗ ಮಾಡಿ ಮುಗಸ್ತೇವಿ, ಕೆಲವಬ್ಬರ ಊರ ಮಂದಿಗೆ ತೊರಸಲಿಕ್ಕೆ ಮಾಡ್ತಾರ ಇಷ್ಟ. ನಾ ಹಿಂಗ ಅವರ ಮನಿ ಕಾರ್ಯಕ್ರಮ ಮುಗಿಸಿಕೊಂಡ ಬರಬೇಕಾರ ನಂಗ ಹತ್ತ ವರ್ಷದ ಹಿಂದಿನ ನನ್ನ ಸಾಧನೇ ಸಮಾವೇಶಗಳು ನೆನಪಾದ್ವು. ಹಂಗ ನಾ ಹಡಿಲಿಕತ್ತಿದ್ದ ಒಂದ ಆದರು ಸಮಾವೇಶಗಳು ಮಾತ್ರ ಭಾಳ ಆದ್ವು. ಬಹುಶಃ ಇಂವಾ ಒಂದ ಹಡಿತಾನ ತೊಗೊ ಎರಡನೇದ ವಿಚಾರ ಮಾಡಲಿಕ್ಕಿಲ್ಲಾ ಅಂತ ನಮ್ಮ ಅತ್ತಿ ಮನೆಯವರು ಭಾರಿ ಭಾರಿ ನಮೂನೆ ನಮೂನೆ ಸಮಾವೇಶ ಅಂದರ ಕುಬಸಾ ಮಾಡಿದರು. ಅವೇಲ್ಲಾ ಒಮ್ಮಿಂದೊಮ್ಮೆಲೆ ನೆನಪಾದವು, ಹಂಗರ ನಿಮ್ಮ ಜೊತಿ ಹಂಚಗೊಂಡರಾತು ಅಂತ ವಿಷಯ ತಗದೆ ಇಷ್ಟ.
ಹಂಗ ಮದುವಿ ಆದಮ್ಯಾಲಿನ ನನ್ನ ಸತತ ಒಂದುವರಿ ವರ್ಷದ ಪ್ರಯತ್ನಕ್ಕ ಫಲಾ ಸಿಕ್ಕದ ಅಂತ ಮೊದ್ಲ ಗೊತ್ತಾಗಿದ್ದ ೨೦೦೨ರ ಎಪ್ರೀಲ್-ಮೇ ತಿಂಗಳದಾಗ. ಒಂದ್ಯಾರಡ ಸರತೆ ನನ್ನ ಹೆಂಡತಿ
“ಯಾಕೊ ವಾಂತಿ ಬರೋ ಹಂಗ ಆಗಲಿಕತ್ತದ, ತಲಿ ತಿರಗತದ,ಊಟನ ಸೇರವಲ್ತು” ಅಂದಾಗ ನಾ ಅಕಿಗೆ
“ಬಿಸಲಾಗ ಉಪ್ಪಿನಕಾಯಿ ತಿಂದ ಪಿರಿ-ಪಿರಿ ತಿರಗ್ಯಾಡತಿ, ಪಿತ್ತ ಆಗಲಾರದ ಏನ ಆಗತದ” ಅಂತ ಒಂದ ಬಾಟಲಿ ಜೆಲೋಸಿಲ್ ತಂದ ಕೊಟ್ಟಿದ್ದೆ.
” ಏ, ಅದರ ವಾಸನಿ ಕಂಡರ ಇನ್ನೂ ವಾಕರಕಿ ಬರತದ” ಅಂತ ಅದನ್ನ ತೊಗಂಡಮ್ಯಾಲೆ ಅದರ ಜೊತಿಗೆ ಉಂಡುದ್ದು ವೈಕ್ ಮಾಡ್ಕೋಳಿಕತ್ಲು. ನಾ ಗಾಬರಿ ಆಗಿ ಯಾ ಬಾಟಲಿ ಕೊಟ್ಟೇನಪಾ ಎಲ್ಲೇರ ಬ್ಯಾರೆ ಯಾವದರ ಬಾಟಲಿ ಕೊಟ್ಟೇನಿನ ಅಕಿಗೆ ಅಂತ ನೋಡಿದರ ಅದ ಕರೆಕ್ಟ ಗುಲಾಬಿ ಬಣ್ಣದ್ದ ಬಾಟಲಿನ ಇತ್ತ. ಅಷ್ಟರಾಗ ನಮ್ಮವ್ವಗ ಬಚ್ಚಲದಾಗ ಏನ ವಾಸನಿ ಬಡೀತೊ ಏನೋ “ಏನರ ಆಗಲಿ ಡಾಕ್ಟರಗೆ ತೊರಿಸಿಗೊಂಡ ಬರೋಣ, ಹಿಂಗ ಉಂಡದ್ದೇಲ್ಲಾ ವಾಂತಿ ಮಾಡ್ಕೊಂಡರ ಹೆಂಗ, ಮೊದ್ಲ ತುಟ್ಟಿ ಕಾಲ” ಅಂತ ಅಂದ್ಲು. ನಂಗೂ ಅಕಿ ಹೇಳೋದು ಸರಿ ಅನಸ್ತು, ಕಡಿಕೆ ಅತ್ತಿ ಸೊಸಿ ಇಬ್ಬರು ಹೋಗಿ ತೊರಿಸಿಗೊಂಡ ಬಂದ
“ಪ್ರಶಾಂತಾ ನಿನ್ನ ಹೆಂಡತಿ ಗದ್ಲಾ ಹಾಕ್ಯಾಳೋ,ಅಕಿಗೆ ದೀಡ ತಿಂಗಳ ತುಂಬ್ಯಾವ” ಅಂತ ನನ್ನ ಬಾಯಾಗ ಒಂದ ಅರ್ಧಾ ಚಮಚಾ ರೇಶನ್ ಸಕ್ಕರಿ ಹಾಕಿದ್ಲು. ಅಲ್ಲಾ ಅದು ಇಬ್ಬರೂ ಕೂಡೇ ಗದ್ಲಾ ಹಾಕಿದ್ದ ಅಕಿ ಬಾಯಾಗು ಒಂದ ಚೂರ ಹಾಕು ಅಂತ ಹಾಕಿಸಿದೆ. ಅಷ್ಟರಾಗ ನನ್ನ ಹೆಂಡತಿ ತಮ್ಮ ತವರ ಮನಿಗೆ ಫೊನ್ ಹಚ್ಚಿ ಅವರವ್ವಾ ಅಪ್ಪಗ ಸುದ್ದಿ ಮುಟ್ಟಿಸಿದ್ಲು. ಒಟ್ಟ ನಮ್ಮ ಎರಡು ಮನ್ಯಾಗು ಎಲ್ಲಾರು ಅಗದಿ ಖುಶ್ ಆಗಿಬಿಟ್ಟರು.
ಮುಂದ ಹಿಂಗ ಒಂದ ತಿಂಗಳಾಗಲಿಕ್ಕೆ ಬಂದಿತ್ತ, ಈಕಿದ ವೈಕ-ವೈಕ ಕಂಟಿನ್ಯೂ ಇತ್ತ. ಆದರು ಮ್ಯಾಲೆ ಅದು ಬೇಕ, ಇದು ಬೇಕು ಶುರುವಾಗಿತ್ತ.
ಒಂದ ದಿವಸ “ರ್ರೀ ನಾಳೆ ಮಧ್ಯಾಹ್ನ ನಮ್ಮವ್ವ ಒಂದ ನಾಲ್ಕ ಮಂದಿನ ಕರಕೊಂಡ ಬಂದ ನಂಗ ಕಳ್ಳ ಕುಬಸಾ ಮಾಡೋರ ಇದ್ದಾರ, ಊಟಕ್ಕ ಬರಬೇಕಾರ ಮಿಶ್ರಾದಾಗ ಏನರ ಸ್ವೀಟ ತೊಗಂಡ ಬರ್ರಿ” ಅಂದ್ಲು.
ನಾ ಇಷ್ಟ ದಿವಸ ಕುಬಸಾ ಕೇಳಿದ್ದೆ, ಆದರ ಕಳ್ಳ ಕುಬಸಾ ಕೇಳಿದ್ದಿಲ್ಲಾ. ಹಂಗ ನಮ್ಮ ಮನ್ಯಾಗ ನಂಗ ತಿಳವಳಿಕೆ ಬಂದ ಮ್ಯಾಲೆ ಯಾ ಕುಬಸಾನು ನಡದಿದ್ದಿಲ್ಲಾ, ಇನ್ನ ನಮ್ಮವ್ವ ಚೊಚ್ಚಲ ಬಸರಿದ್ದಾಗ ಕುಬಸಾ ಮಾಡಿದಾಗ ನಾನ ಹೊಟ್ಟ್ಯಾಗಿದ್ದೆ ಹಿಂಗಾಗಿ ಕಳ್ಳ ಕುಬಸದ ಬಗ್ಗೆ ಗೊತ್ತಿದ್ದಿಲ್ಲಾ.
“ಅಲ್ಲಲೇ, ಕಳ್ಳ ಕುಬಸ ಯಾಕ, ನಾವೇನ ಕಳುವಿಲೇ ಮಾಡೇವೇನ? ಇನ್ನೊಂದ ಎರಡ ತಿಂಗಳ ಬಿಟ್ಟ ಖುಲ್ಲಂ ಖುಲ್ಲಾ ಕುಬಸಾ ಮಾಡವಲ್ಲಾರಕ ತೊಗೊ” ಅಂದೆ.
“ಹಂಗ ಅಲ್ಲರೀ, ಕಳ್ಳ ಕುಬಸಾ ಅಂದ್ರ ತವರಮನಿಯವರು ಮನಿ ಪೂರ್ತೇಕ ಹೊರಗಿನ ಮಂದಿಗೆ ಗೊತ್ತಾಗಲಾರದಂಗ ಮಾಡ್ತಾರ” ಅಂದ್ಲು.
“ತವರಮನಿಯವರು ಮಾಡ್ತಾರ ಅಂದ್ರ ತವರಮನಿ ಒಳಗ ಮಾಡಬೇಕ, ನಮ್ಮನಿಗೆ ಯಾಕ ಬಂದ ಮಾಡ್ತಾರ, ಅದು ನಾಲ್ಕೈದ ಮಂದೀನ ಕರಕೊಂಡ ಬಂದ” ಅಂದೆ.
“ಅಲ್ಲರೀ, ನಂಗ ಡಾಕ್ಟರ್ ಧಡಕಿ ಒಳಗ ಹೋಗ ಬ್ಯಾಡಾ ಅಂದಾರ, ನಾ ಹೆಂಗ ಆಟೋದಾಗ ಹೋಗಲಿ? ಅದರಾಗ ಆ ನೇಕಾರನಗರದ ರೋಡನಾಗ ಹೋಗಿ ಬಿಟ್ಟರ ನಂದ ನಾಳೆ ಡಿಲೇವರಿ ಆಗಿ ಬಿಡತದ, ಮತ್ತ ಒಂದ ಹೋಗಿ ಒಂದ ಆದರ ಯಾರ ಜವಾಬ್ದಾರಿ” ಅಂದ್ಲು. ಅಕಿ ಹೇಳೋದು ಖರೇನ, ಆ ನೇಕಾರ ನಗರ ರಸ್ತೆದಾಗ ಯಾರರ ದಿಂದಾಗ ಇದ್ದೋರ ಒಂದ ಎರಡ ಸರತೆ ಅಡ್ಯಾಡಿ ಬಿಟ್ಟರ ಡಿಲೇವರಿನ, ಅದು ನಾರ್ಮಲ ಮತ್ತ.
ಅದರಾಗ ಇತ್ತೀಚಿಗೆ ಯಾರದರ ಕನ್ಸೀವ್ ಆಗಿದ್ದ ಕನಫರ್ಮ ಆಗೋ ಪುರಸತ್ತ ಇಲ್ಲದ ಡಾಕ್ಟರ್ ನೀವ ಎರಡ ತಿಂಗಳ ಫುಲ್ ರೆಸ್ಟ್ ಮಾಡಬೇಕು ಅಂತ ಹೇಳಿ ಹೆದರಿಸಿ ಬಿಡ್ತಾರ, ಅದರಾಗ ಒಂದನೇದ ಇದ್ದಾಗ ನಾವು ಹೆದರಿ ಅವರ ಹೇಳಿದಂಗ ಕೇಳ್ತೇವಿ, ಮನ್ಯಾಗ ಅತ್ತಿ ಸಹಿತ ಎರಡ ತಿಂಗಳ ಏನೋ ಸೊಸಿ ಹಡಿತಾಳ ಅಂತ ಅಕಿಗೆ ಏನೂ ಕೆಲಸಾ ಹಚ್ಚಂಗಿಲ್ಲಾ.
ಆತ ತೊಗೊ ಅದೇನ ಶಾಸ್ತ್ರನೊ ಬಂದ ಮಾಡ್ಕೊಂಡ ಹೋಗವಲ್ಲರಾಕ ಅಂತ ನಾನೂ ಸುಮ್ಮನಾದೆ. ಮರುದಿವಸ ಒಂದ ನಾಲ್ಕೈದ ಮಂದಿ ಹೆಣ್ಣ ಮಕ್ಕಳ ಬಂದ ಕಳ್ಳ ಕುಬಸಾ ಅಂತ ಆರತಿ ಮಾಡಿ ನಮ್ಮ ಮನ್ಯಾಗ ಊಟಾ ಹೊಡದ ಹೋದರು.
ಮುಂದ ಹಿಂಗ ಒಂದ ವಾರ ಆಗಿತ್ತಿಲ್ಲೊ ಮತ್ತ ನಮ್ಮತ್ತಿ ಬರತಾರ ಈ ಸಲಾ ಏಳೇಂಟ ಮಂದಿ ಕರಕೊಂಡ ಬರತಾರ ಅಂತ ಗೊತ್ತಾತ.
” ಏ, ಮತ್ತ ಯಾಕ ಬರತಾರಲೇ, ಅದು ಮಧ್ಯಾಹ್ನ ಊಟದ ಹೊತ್ತಿಗೆ, ಮೊನ್ನೆನ ಬಂದ ಹೋಗ್ಯಾರಲಾ” ಅಂದೆ.
” ರ್ರೀ, ಅವರ ಬಯಕಿ ಊಟಾ ತೊಗೊಂಡ ಬರಲಿಕತ್ತಾರ, ಹಂಗ ಖಾಲಿ ಕೈಲೆ ಏನ ಬರಲಿಕತ್ತೀಲ್ಲಾ, ನಾವ ಬರೇ ಎಂಟತ್ತ ಮಂದಿಗೆ ಒಂದ ಅನ್ನಾ ಹುಳಿ, ಶಾವಿಗೆ ಪಾಯಸಾ, ಒಂದ್ಯಾರಡ ಪಲ್ಯಾ.ಹಪ್ಪಳಾ-ಸಂಡಿಗೆ ಇಷ್ಟ ಮಾಡಿದರಾತ” ಅಂದ್ಲು. ಯಪ್ಪಾ ದೇವರ, ಯಾವಗಿಂದ ಈಕಿದ ಇಶ್ಯು ಶುರು ಆಗೇದಲಾ, ಆವಾಗಿಂದ ನಂಗ ಖರೇನ ಯಾಕರ ಇಕಿದ ಶುರು ಆತು ಅನಿಸಿ ಬಿಟ್ಟಿತ್ತು. ಏನ ಗುಳಗಿ, ಏನ ಟಾನಿಕ್, ಅವನೌನ ಐರನ್ ಅಂತ, ಝಿಂಕ್ ಅಂತ,ಕ್ಯಾಲ್ಸೀಯಮ್ ಅಂತ, ನಾ ಆ ಒಂದ ಕಾಪರ್(ಟಿ) ತಗಿಸಿದ್ದ ತಪ್ಪಿಗೆ ಇಷ್ಟೇಲ್ಲಾ ತಂದ ಕೊಡೊಹಂಗ ಆಗೇದ ಅನಸ್ತು.
ಆತ ಆಗಿದ್ದ ಆಗಿ ಹೋತ, ತಪ್ಪ ನಂದ ಅಂತ ಸುಮ್ಮನಾದೆ. ಮರುದಿವಸ ನಮ್ಮ ಅತ್ತಿ ಎಂಟ ಮಂದಿ ಕರಕೊಂಡ ನಾಲ್ಕ ಮಂದಿಗೆ ಸಾಲೋ ಅಷ್ಟ ಬಯಕಿ ಊಟಾ ಕಟಗೊಂಡ ಬಂದ ನಮ್ಮ ಮನ್ಯಾಗ ಊಟಾ ಹೊಡದ ಹೋದ್ರ.
ಹಿಂಗ ಒಂದೆರಡ ತಿಂಗಳಾಗಿತ್ತ ಇಲ್ಲೋ ಸಾರ್ವಜನಿಕವಾಗಿ ‘ಉದ್ಘಾಟನಾ ಕುಬಸ’ದ ಅನೌನ್ಸಮೆಂಟ ಆತ, ಪುಣ್ಯಾಕ ಅದ ಅಕಿ ತವರಮನಿ ಕುಬಸಾ, ಖರ್ಚ ನಂದ ಇದ್ದಿದ್ದಿಲ್ಲಾ. ಒಂದ ಸರತೆ ತವರಮನಿಯವರು ಕುಬಸಾ ಮಾಡಿದ ಮ್ಯಾಲೆ ಬ್ಯಾರೆಯವರು ಅಂದರ ಸಾರ್ವಜನಿಕರು ಕುಬಸಾ ಮಾಡಬಹುದಂತ ಅದಕ್ಕ ನಾ ಹೇಳಿದ್ದ ಇದು ಉದ್ಘಾಟನಾ ಕುಬಸಾ ಅಂತ.
ನಂಗರ ಇಕಿ ವಾಂತಿ-ಬಯಕಿ ಒಳಗ ಐದ ತಿಂಗಳ ಹೆಂಗ ಹೋತು ಗೊತ್ತ ಆಗಿದ್ದಿಲ್ಲಾ. ನಮ್ಮ ಬೀಗರು ಅಗದಿ ಉಮೇದಿಲಿ ಈಡಿ ನೇಕಾರ ನಗರ ಮಂದಿಗೆ ಕರದಿದ್ದರು. ನಾ ಹಿಂತಾ ಕುಬಸದಾಗ ಅಳಿಯಾಗ ಚೈನ, ಉಂಗರಾ ಕೊಡ್ತಾರಂತ ಕೇಳಿದ್ದೆ ಹಿಂಗಾಗಿ ಅಗದಿ ಟಿಪ್ ಟಾಪ್ ಆಗಿ ನಮ್ಮ ಪೈಕಿ ಒಂದ ಹತ್ತ ಮಂದಿಗೆ ಕರಕೊಂಡ ಹೊಗಿದ್ದೆ. ಅಕಿಗೆ ಆರತಿ ಮಾಡಿ ರೇಶ್ಮೆ ಸೀರಿ ಕೊಟ್ಟ
” ಏ, ಎಲ್ಲಿದ್ದಾನ ಅಂವಾ ಗದ್ಲ ಹಾಕಿದಂವಾ, ಕರೀರಿ ಅವನ್ನೂ. ಇದೇಲ್ಲಾ ಅವಂದ ಕಿತಾಪತಿ” ಅಂತ ನನ್ನ ಹೆಂಡತಿ ಅಜ್ಜಿ ಒದರಿ, ಕರದ ಅಕಿ ಬಾಜುಕ ಕೂಡಸಿದರು. ನಮ್ಮ ಮಾವ ಬಂದ ಒಂದ ಉದ್ದ ಕುಂಕಮಾ ನನ್ನ ಮಾಟನ ಹಣಿ ಮ್ಯಾಲೆ ಎಳದ ಕೈಯಾಗ ಒಂದ ಅಂಗಿ ಚಡ್ಡಿ ಅಂದರ ಪ್ಯಾಂಟ ಶರ್ಟದ್ದ ಪಾಕೇಟ ಕೊಟ್ಟ ಮನಸ್ಸಿನಾಗ ‘ಭಾಳ ಶಾಣ್ಯಾ ಇದ್ದಿ, ಇನ್ನೊಂದ ಎರಡ ವರ್ಷ ತಡಕೊಳಿಕ್ಕೆ ಬರತಿದ್ದಿಲ್ಲಾ’ ಅಂತ ನಮಸ್ಕಾರ ಮಾಡಿದರು. ನಾ ತಿರುಗಿ ಬಗ್ಗಿ ನಮ್ಮ ಮಾವಾ ಅತ್ತಿಗೆ ‘ಏನೋ ನಿಮ್ಮ ಪುಣ್ಯಾ, ನಾ ನಿಮ್ಮ ಮಾರಿ ನೋಡಿ ಇಷ್ಟ ದಿವಸ ತಡದಿದ್ದೆ, ಹಂಗ ನಾ ಮನಸ್ಸ ಮಾಡಿದ್ದರ ಮದುವಿಗಿಂತಾ ಮುಂಚೇನ ಕುಬಸಾ ಮಾಡಿಸಿ ಬಿಡ್ತಿದ್ದೆ’ ಅಂತ ಮನಸ್ಸಿನಾಗ ಅಂದ ನಮಸ್ಕಾರ ಮಾಡಿ ಎದ್ದೆ.
ನಂಗ ಅವರ ಬರೇ ಪ್ಯಾಂಟ ಶರ್ಟ ಅರಬಿ ಕೊಟ್ಟದ್ದ ನೋಡಿ ಸಿಟ್ಟ ನೆತ್ತಿಗೇರತ. ಅವನೌನ ಇದೇನ ಕಡಿಮೆ ಸಾಧನೆ ಏನರಿ, ಒಂದ ಗಂಡಸ, ಗಂಡಸ ಅಂತ ಖಾತ್ರಿ ಮಾಡೋ ಸಾಧನೆ. ಹಿಂತಾದಕ್ಕ ಬರೇ…ಅಲ್ಲಾ ಎಷ್ಟ ತ್ರಾಸ ಅದ ಇವತ್ತ ಒಂದ ತಯಾರ ಮಾಡೋದ, ನಾ ಎಷ್ಟ ಕಷ್ಟ ಪಟ್ಟೇನಿ ಒಂದ ಚೂರರ ಅದಕ್ಕ ಅಪ್ರೀಸೀಯೇಶನ್ ಬ್ಯಾಡಾ? ಹೋಗಲಿ ನಂದ ಗೋಣ ದೊಡ್ಡದ ಅದ ಚೈನ ಇಲ್ಲಾಂದರು ಎಷ್ಟ ಹೋತ ಬಟ್ಟ ಸಣ್ಣವ ಇದ್ವು ಒಂದ ಉಂಗರಕ್ಕೇನ ಕೇಡ ಇವರಿಗೆ? ಇವತ್ತ ನನ್ನ ಹೆಂಡತಿ ಬಸರಾಗಿದ್ದಿಲ್ಲಾ ಅಂದರ ನಿಮ್ಮಗಳನ ನಿಮ್ಮ ಮನ್ಯಾಗ ಇಟಗೋರಿ ಅಂತ ಅಕಿನ್ನ ಅಲ್ಲೇ ಬಿಟ್ಟ ಹೋಗತಿದ್ದೆ, ಖರೇನ ಅಷ್ಟ ಸಿಟ್ಟ ಬಂದಿತ್ತ. ನಮ್ಮ ಅವ್ವಾ-ಅಪ್ಪಾ “ಹೋಗಲಿ ಬಿಡ ಮತ್ತ ನೀ ಅಷ್ಟಕ್ಕ ಜಗಳಾಡಿ ಅವರ ಜೊತಿ ಹರಕೊಂಡ ಕಡಿಕೆ ನಾವ ಎಲ್ಲರ ಬಾಣಂತನ ಮಾಡೋ ಹಂಗ ಆಗಿ-ಗಿಗಿತ್ತ” ಅಂತ ನನಗ ಸಮಾಧಾನ ಮಾಡಿದರು. ನಾ ಅವತ್ತs ಮನಸ್ಸಿನಾಗ ಅವರಿಗೆ ಶಾಪಾ ಕೊಟ್ಟ ಬಿಟ್ಟೆ ‘ನಿಮ್ಮ ಮಗಳದ ಸಿಜಿರನ್ ಡಿಲೇವರಿನ ಆಗಲಿ, ನನ್ನ ಚೈನ ರೊಕ್ಕ ಅಲ್ಲೇ ಖರ್ಚ ಆಗಲಿ’ ಅಂತ.
ಆದರ ಬಂದ ಮಂದಿ ಎಲ್ಲಾ ‘ಕುಬಸಾ ಭಾರಿ ಆರ್ಭಾಟ ಆತು, ಏನ ಜನಾ- ಏನ ಉಟಾ’ ಅಂತ ನನ್ನ ಹೆಂಡತಿಗೆ ಒಂದ ಸಸ್ತಾ ಜಂಪರ ಪೀಸ್ ಉಡಿ ತುಂಬಿ ‘ಗಂಡಸ ಮಗನ ಹಡೀವಾ’ ಅಂತ ಆಶೀರ್ವಾದ ಮಾಡಿ ಹೋದರು.
ನಾ ಇನ್ನ ಈ ವಿಷಯ ಸುಳ್ಳ ನನ್ನ ಹೆಂಡತಿಗೆ ಹೇಳಿ ಅಕಿಗೆ ಸ್ಟ್ರೇಸ್ ಮಾಡೋದ ಬ್ಯಾಡಾ ಮೊದ್ಲ ಬಸರೆಂಗಸು ಅಂತ ಸುಮ್ಮನಾದೆ. ಇನ್ನೇನ ನಾವ ನಮ್ಮ ಮನಿಗೆ ಹೋಗಬೇಕು ಅನ್ನೋದರಾಗ ನಮ್ಮತ್ತಿ
“ಹಂಗರ ಬರೋ ಹುಣ್ಣಿಮೆಗೆ ಮಾಡೋಣ?” ಅಂತ ನಮ್ಮವ್ವಗ ಹೇಳಿ ಹೋದರು. ನಾ ಈಗ ಮತ್ತೇನ ಮಾಡೋರಪಾ ಅಂತ ನಮ್ಮವ್ವಗ ಕೇಳಿದ್ರ “ಬರೋ ಹುಣ್ಣಿಮೆಗೆ ಬೆಳದಿಂಗಳ ಕುಬಸಾ ಮಾಡಬೇಕಂತ ಮಾಡೇವಿ, ಅದಕ್ಕ ಅವರಿಗೆಲ್ಲಾ ನಮ್ಮ ಮನಿಗೇ ಬಾ ಅಂತ ಹೇಳೀನಿ” ಅಂದ್ಲು. ಹಕ್ಕ್, ಆತ ತೊಗೊ ನನ್ನ ಹೆಂಡತಿಗೆ ಕುಬಸಾ ಮಾಡಿ ಮಾಡಿ ನಂದ ಡಿಲೇವರಿ ಆಗ್ತದ ಅಂತ ಗ್ಯಾರಂಟೀ ಆತ.
ಮುಂದ ಒಂದ ವಾರಕ್ಕ ಹುಣ್ಣಿಮೆ ಬಂದ ಬಿಡತ ಮತ್ತ ನಮ್ಮ ಅತ್ತಿ ಮನಿಯಿಂದ ಒಂದ ಮುಷ್ಟಿ ಮಂದಿ ಹಾಜರ, ನಮ್ಮನಿ ಟೇರೇಸ ಮ್ಯಾಲೆ ಬೆಳದಿಂಗಳ ಬೆಳಕ ಸಾಲಂಗಿಲ್ಲಾಂತ ಮತ್ತ ಶಾಮಿಯಾನದವರಿಗೆ ಹೇಳಿ ಎರಡ ಬಿಳೆ ಫೊಕಸ್ ಲೈಟ್ ಹಾಕಿಸಿ ನನ್ನ ಹೆಂಡತಿಗೆ ಆರತಿ ಮಾಡಿ ಊಟಾ ಹೊಡದ ನನ್ನ ಮಾರಿಗೆ ಮಂಗಳಾರತಿ ಮಾಡಿ ಹೋದರು. ಹಿಂಗ ಒಂದ ವಾರ ಕಳಿತ ಅನ್ನೊದರಾಗ ಮತ್ತ ಅವರವ್ವನ ಫೊನ್ ಬಂತು, ಇಕಿ ಅದು ಇದು ಮಾತಡತ ಮಾತಾಡತ ಕಡಿಕೆ
” ನಾಳೆ ಲಗೂನ ಬರ್ರಿ ಹಂಗರ, ಟಿಫಿನ್ ಇಲ್ಲೆ ಮುಗಿಸಿಕೊಂಡ ಹೋಗ್ರಿ”…..
“ಏ, ಅದರಾಗ ಏನ ತ್ರಾಸ ತೊಗಳವ್ವಾ, ಒಂದ ನಾಲ್ಕ ಮಂದಿಗೆ ಇಡ್ಲಿ ವಡಾ ಮಾಡೋದ ಏನ ತ್ರಾಸಿನು, ನಮ್ಮತ್ತಿ ಎಲ್ಲಾ ಮಾಡ್ತಾರ ತೊಗೊ” ಅಂತ ಫೋನ್ ಇಟ್ಟಳು. ನಾ ಬಾಯಿ ತಗದ ಅಕಿ ಮಾರಿನ್ನ ನೋಡಲಿಕ್ಕೆ ಹತ್ತಿದ್ದೆ. ಅಕಿ ಸೂಕ್ಷ್ಮ ತಿಳ್ಕೊಂಡ್ಲು.
“ಏನಿಲ್ರಿ, ನಾಳೆ ಬೆಳಿಗ್ಗೆ ‘ಎಳೆ ಬಿಸಿಲ ಕುಬಸಾ’ ಮಾಡ್ತಾರಂತ ನಮ್ಮವ್ವ, ಅದಕ್ಕ ಇಲ್ಲೆ ನಾಷ್ಟಾ ಮುಗಿಸಿಕೊಂಡ ಹೋಗರಿ ಅಂತ ಹೇಳಿದೆ” ಅಂತ ಅಂದ್ಲು. ನಾ ಏನು ಮಾತಾಡಲಿಲ್ಲಾ. ಅಲ್ಲಾ ಮೊನ್ನೆ ಬೆಳದಿಂಗಳ ಕುಬಸಾ ಮಾಡಲಿಕ್ಕೆ ಬಂದಾಗ ಇಲ್ಲೆ ವಸ್ತಿ ಮಾಡಿ ಮುಂಜಾನೆ ಎದ್ದ ಎಳೆ ಬಿಸಲ ಕುಬಸಾ ಮಾಡ್ಕೊಂಡ ಹೋಗಲಿಕ್ಕೆ ಬರತಿತ್ತಿಲ್ಲೊ ಅನ್ನೋವ ಇದ್ದೆ, ಆದರ ಹೋಗಲಿ ಬಿಡ ನಾ ಯಾಕ ಅಂದ ಕೆಟ್ಟ ಆಗಬೇಕಂತ ಸುಮ್ಮನಾದೆ.
ಮುಂದ ಒಂದ ಸ್ವಲ್ಪ ದಿವಸಕ್ಕ ನನ್ನ ಹೆಂಡತಿ ಒಂದ ಸ್ವಲ್ಪ ಅಡ್ಯಾಡೊ ಹಂಗ ಆಗಿದ್ಲು, ಡಾಕ್ಟರ ಅಡ್ಡಿಯಿಲ್ಲಾ ಇನ್ನ ನೀವು ಸ್ವಲ್ಪ ವಾಕಿಂಗ ಮಾಡ್ಕೋತ ಇರ್ರಿ ಅಂತ ಬ್ಯಾರೆ ಹೇಳಿದ್ರು, ಇಕಿ ವಾರಕ್ಕ ಎರೆಡರಡ ಮನಿಗೆ ಕುಬಸಾ ಅಂತ ಹೋಗಲಿಕತ್ಲು. ನಾನು ಹೋದರ ಹೋಗಲಿ ಬಿಡ ‘ಊಟ ಹೋದರ ಕೋಟಿ ಲಾಭ’ ಅಂತ ಸುಮ್ಮನಿದ್ದೆ. ಬರಬರತ ಮಂದಿ ಮನಿ ಕುಬಸಾ ಜಾಸ್ತಿ ಆಗಲಿಕತ್ವು. “ಲೇ, ಇದೇನ ನಿನ್ನವು ಸಾರ್ವಜನಿಕ ಕುಬಸ ಜೋರ ನಡದಾವಲಾ” ಅಂದರ ” ಏನೋ ನಾಲ್ಕ ಮಂದಿಗೆ ಹಚಗೊಂಡೇನಿ, ಹಡೇಯೊತನಕ ಮಾಡ್ತಾರ, ಹಡದಮ್ಯಾಲೆ ಯಾರ ಮಾಡ್ತಾರ” ಅಂದ್ಲು. ಒಂದೊಂದ ಕುಬಸಕ್ಕ ಏನಿಲ್ಲಾಂದರೂ ಒಂದ ನೂರ ರೂಪಾಯಿ ಬಡದ ಆಟೊ ಮಾಡ್ಕೊಂಡ ಜೊತಿಗೆ ಅವರವ್ವನ ಇಲ್ಲಾ ನಮ್ಮವ್ವನ ಕರಕೊಂಡ ಹೋಗೊಕಿ, ಬರ್ತ ಒಂದ ಮುವತ್ತ ರೂಪಾಯಿದ್ದ ಜಂಪರ್ ಪೀಸ ತೊಗೊಂಡ ಬರೋಕಿ. ಕೆಲವೊಂದ ಕಡೆ ಒಂದ ನಾಲ್ಕೈದೆ ಮಂದಿ ಕೂಡಿ ಸಾಮೂಹಿಕ ಕುಬಸಾನು ಮಾಡಿದ್ರು. ನಾ ಮಾತ್ರ ಏನು ಮಾತಾಡಲಿಕ್ಕೆ ಹೋಗಲಿಲ್ಲಾ. ಸುಳ್ಳ ಯಾಕ ಅಕಿದ ಸ್ಟ್ರೇಸ್ ಜಾಸ್ತಿ ಮಾಡಬೇಕು ಅಂತ ಬಿಟ್ಟ ಬಿಟ್ಟೆ. ಮುಂದ ಒಂದ ಎರಡ ದಿವಸ ಯಾಕೋ ಖಾಲಿ ಇದ್ಲು, ಯಾರ ಕುಬಸಕ್ಕ ಕರದಿದ್ದಿಲ್ಲ ಕಾಣತಾದ ಅಕಿಗೆ ಭಾಳ ಭಣಾ-ಭಣಾ ಅನ್ನಲಿಕತ್ತು.
“ರ್ರೀ, ಯಾವದರ ತೋಟಕ್ಕ ಕರಕೊಂಡ ಹೋಗರಿ, ತೋಟದಾಗ ಕುಬಸಾ ಮಾಡಿಸ್ಗೊ ಬೇಕ ಅಂತ ಅನಸಲಿಕತ್ತದ” ಅಂದ್ಲು.
“ಲೇ, ಇದ ಹುಬ್ಬಳ್ಳಿ, ಇಲ್ಲೆ ಯಾ ತೋಟ -ಗೀಟ ಇಲ್ಲಾ, ಗ್ಲಾಸ ಹೌಸ, ಉಣಕಲ ಕೇರಿ ಎರಡ ಅವ, ಬೇಕಾರ ಅಲ್ಲೆ ಊಟಾ ಕಟಗೊಂಡ ಹೋಗಿ ಉಂಡ ಬಾ” ಅಂದೆ. ಆದರ ಅಕಿ ಏನ ಕೇಳಲಿಲ್ಲಾ. ಕಡಿಕೆ ನಮ್ಮವ್ವಾ ಹಂಗ ಹೆಣ್ಣಮಕ್ಕಳ ಬಯಕಿ ತೀರಸಲಿಲ್ಲಾ ಅಂದರ ಹುಟ್ಟೋ ಕೂಸಿಂದ ಕಿವಿ ಸೋರತದ ಅಂತ ಹೆದರಿಸಿದ್ದಕ್ಕ ಉಟಾ ಕಟಗೊಂಡ ಪಿ.ಬಿ.ರೋಡನಾಗ ಯಾರದೊ ಗೋರ್ತ ಇಲ್ಲಾ ಖೂನ ಇಲ್ಲದವರ ಹೊಲದಾಗ ಕಳುವಿಲೆ ಊಟಾ ಮಾಡಿ ಬಂದ್ವಿ.
ಎರಡ ದಿವಸ ಬಿಟ್ಟ ಅವರವ್ವನ ಫೊನ ಬಂತ, ನಾ ಮತ್ತ ಇದೇನ ಬಂತಪಾ ಅಂತ ಕೇಳಿದರ ” ಏನಿಲ್ಲ ತೊಗೊರಿ, ಹಂಗ್ಯಾಕ ಗಾಬರಿ ಆಗ್ತೀರಿ, ನಮ್ಮವ್ವ ಹೊಟೇಲ್ ಕುಬಸಾ ಮಾಡ್ತಾರಂತ, ಅದಕ್ಕ ನಾಳೆ ಮಧ್ಯಾಹ್ನ ಬಸಪ್ಪನ ಖಾನಾವಳಿಗೆ ಬಂದ ಬಿಡು” ಅಂತ ಹೇಳಿದರು ಅಂದ್ಲು. ಅವನೌನ ಏನ ಕುಬಸಲೇ ಇವು, ಸುಮ್ಮನ ನಾನು ಯಾಕ ಹೆಣ್ಣ ಆಗಿ ಹುಟ್ಟಲಿಲ್ಲಾ ಅನಸ್ತು.
ಇತ್ತಲಾಗ ಅಕೀವು ಸಾರ್ವಜನಿಕ – ಸಾಮೂಹಿಕ ಕುಬಸ, ಮಂದಿ ಮಾಡೋವು ಹಂಗ ಚಾಲ್ತಿ ಇದ್ದವು. ಒಮ್ಮೊಮ್ಮೆ ಅಂತು ದಿವಸಕ್ಕ ಎರೆಡೆರಡು.
ಒಂದ ದಿವಸ ಯಾರದೊ ಮನಿ ಕುಬಸಾ ಮುಗಿಸಿಕೊಂಡ ಬಂದೋಕಿನ
“ರ್ರಿ, ಯಾರದರ ಮನ್ಯಾಗ ತೂಗ ಮಂಚ ಇದ್ದರ ಕೇಳ್ರಿ, ತೂಗ ಮಂಚ ಕುಬಸಾ ಮಾಡ್ಕೋಬೇಕು” ಅಂದ್ಲು. ನಂಗ ಈ ಸರತೆ ಭಾಳ ತಲಿಕೆಟ್ಟತ.
” ಲೇ, ನಿನ್ನೌನ, ನೀ ಒಂದ ಬಸರಾಗೋದರಾಗ ಇದ್ದ ಮನಿ ಮಂಚನ ತುಗ್ಯಾಡಲಿಕತ್ತದ ನಿನ್ನ ವೇಟಿಗೆ, ಮತ್ತ ತೂಗ ಮಂಚ ಅಂತ ತೂಗ ಮಂಚಾ, ಇನ್ನ ಹಡೇಯೋ ತನಕ ಯಾವದರ ಕುಬಸಾ ಅಂದರ ನೋಡ ನಿನ್ನ” ಅಂತ ಸಿಟ್ಟಲೇ ಒದರಿದೆ
“ಅಯ್ಯ, ಒಂದನೇದಕ್ಕ ಇಷ್ಟ ಮಾಡ್ತಾರ, ಅದೇನ ಹಂಗ ಹಗಲಗಲ ಬರತದ ಜೀವನದಾಗ. ಮುಂದ ನಾ ಹತ್ತ ಹಡದರು ನಂಗ ಯಾರು ಮೂಸ ನೋಡಂಗಿಲ್ಲಾ, ಏನೇನ ಪದ್ಧತಿ ಅವ ಅವನೇಲ್ಲಾ ಈಗ ಮಾಡಿ ಮುಗಸಿಬಿಡಬೇಕು” ಅಂತ ನಂಗ ತಿವದು, ಕಡಿಕೆ ಅಲ್ಲೆ ನೇಕಾರ ನಗರದಾಗ ಯಾರದೊ ಸಂಬಂಧ ಇಲ್ಲದವರ ಮನ್ಯಾಗ ತೂಗಮಂಚ ಇತ್ತಂತ ಅವರ ಮನ್ಯಾಗ ಕುಬಸಾ ಮಾಡಿಸಿಗೊಂಡ ಬಂದ್ಲು.
ಬರಬರತ ಇಕಿ ಈ ಪರಿ ಕುಬಸಾ ಮಾಡಿಸ್ಗೋಳೊದ ನೋಡಿ ನಮ್ಮವ್ವಗೂ ತಲಿ ಕೆಟ್ಟತ, ಇನ್ನ ಇಕಿನ್ನ ಹಂಗ ಬಿಟ್ಟರ ಇಕಿ ಹನ್ನೆರಡ ಹದಿಮೂರ ತಿಂಗಳಾದರು ಕುಬಸದ ಆಶಾಕ್ಕ ಹಡಿಲಿಕ್ಕಿಲ್ಲಾ ಅಂತ ಹೆದರಿ ಎಂಟರಾಗ ಭಡಾ-ಭಡಾ ಅತ್ತಿಮನಿ ಸೀಮಂತ ಫಿಕ್ಸ್ ಮಾಡಿಬಿಟ್ಟಳು.
“ನೋಡ್ವಾ ಹಂಗ ಒಮ್ಮೆ ಅತ್ತಿ ಮನ್ಯಾಗ ಸೀಮಂತ ಆದ ಮ್ಯಾಲೆ ಎಲ್ಲಾ ಕುಬಸ ಬಂದ. ನೀ ಹೊರಗೆಲ್ಲೂ ಹೋಗಂಗಿಲ್ಲಾ, ಮುಂದ ಒಂದ ವಾರಕ್ಕ ನೀ ಹಡಿಲಿಕ್ಕೆ ಹೋಗಬೇಕು, ಇನ್ನ ಸಾಕ ತಿರಗೋದು, ಒಂದ ಸ್ವಲ್ಪ ರೆಸ್ಟ್ ತೊಗೊ. ಕಡಿಕೆ ಒಂದ ಹೋಗಿ ಒಂದ ಮಾಡ್ಕೊಂಡಿ” ಅಂತ ಜೋರ ಮಾಡಿದ್ಲು.
ಪಾಪ, ನನ್ನ ಹೆಂಡತಿ ಮನಸ್ಸಿನಾಗ ಇನ್ನು ಕುಬಸಾ ಭಾಳ ಉಳದಿದ್ವು, ಅವರ ಮೌಶಿಗೊಳ ಇನ್ನೂ ಕುಬಸಾ ಮಾಡಿದ್ದಿಲ್ಲಾ, ಧಾರವಾಡದ ಅತ್ಯಾ ಮಾಡಿದ್ದಿಲ್ಲಾ, ಅವರೇಲ್ಲಾ ” ನೀ ಮೊದ್ಲ ಹೊರಗಿನ್ವೇಲ್ಲಾ ಮುಗಿಸಿಗೋವಾ, ನಾವೇನ ಮನಿ ಮಂದಿ ಎಲ್ಲೆ ಓಡಿ ಹೋಗ್ತೇವಿನ? ನೀ ಯಾವಗ ಅಂತಿ ಆವಾಗ ಮಾಡ್ತೇವಿ, ಒಟ್ಟ ಹಡಿಯೊಕಿಂತಾ ಮುಂಚೆ ಹೇಳ ಸಾಕ” ಅಂತ ಹೇಳಿದ್ದರು.
ನಮ್ಮವ್ವ ಅತ್ತಿ ಮನಿ ಸೀಮಂತ ಡಿಸೈಡ ಮಾಡಿ ಎಲ್ಲಾದಕ್ಕೂ ಬ್ರೇಕ್ ಹಾಕಿ ಬಿಟ್ಟಳು. ಇನ್ನ ನಮ್ಮ ಮನ್ಯಾಗ ಸೀಮಂತ ಅಂದ ಮ್ಯಾಲೆ ಖರ್ಚ ಎಲ್ಲಾ ನಂಬದ ಅಲಾ, ಅವರು ತವರ ಮನಿ ಒಳಗ ಹೆಂಗ ಗ್ರ್ಯಾಂಡ ಮಾಡಿದ್ದರು ಹಂಗ ನಾವು ಮಾಡೋದ ಅಂತ ನಮ್ಮವ್ವ ಹಟಾ ಹಿಡದ ಮನಿ ಮಾಳಗಿ ಮ್ಯಾಲೆ ಪೆಂಡಾಲ ಹಾಕಿಸಿ ಒಂದ ನೂರ ಮಂದಿಗೆ ಊಟಕ್ಕ ಹಾಕಿ ಕೈ ತೊಳ್ಕೊಂಡ್ಲು. ಮುಂದ ಒಂದ ವಾರಕ್ಕ ನನ್ನ ಹೆಂಡತಿನ್ನ ಹಡಿಲಿಕ್ಕೆ ತವರಮನಿಗೆ ಅಟ್ಟಿ ನಾ ಕೈ ತೊಳ್ಕೊಂಡೆ. ಆತ ಇನ್ನ ಇಕಿ ಹಡೆಯೋ ತನಕ ನಿಶ್ಚಿಂತಿ, ಅವನೌನ ಆ ಕುಬಸದ್ದ ಕಾಟ ತಪ್ಪಿದ್ವು ಅಂತ ಸಮಾಧಾನ ಆತು.
ಹಂಗ ಒಮ್ಮೆ ಅತ್ತಿ ಮನಿ ಸೀಮಂತ ಆದಮ್ಯಾಲೆ ಮತ್ತ ಕುಬಸಾ ಮಾಡಿಸ್ಗೋಬಾರದು ಅಂತ ನಮ್ಮವ್ವ ಹೇಳಿದರು ಅಕಿ ತವರಮನಿಗೆ ಹೋದ ಮ್ಯಾಲೆ ಮತ್ತ ಒಂದ ನಾಲ್ಕ ಕುಬಸಕ್ಕ ಹೋಗಿದ್ಲು ಅಂತ ನಮ್ಮ ಕಿವಿಗೆ ಬಡಿತು ಆದರ ನಾವ ಅದನ್ನ ತಲಿ ಕೆಡಸಿಗೊಳ್ಳಿಕ್ಕೆ ಹೋಗಲಿಲ್ಲಾ. ಒಟ್ಟ ನಮಗ ಅಕಿ ಸುಸುತ್ರ ಹಡದರ ಸಾಕಾಗಿತ್ತ. ನಂಗಂತು ಕೆಲವೊಮ್ಮೆ ಈ ಕುಬಸದ ಗದ್ಲಾ ನೋಡಿ ಯಾಕರ ಹಿಂತಾ ಕೆಲಸಾ ಮಾಡಿದೆ ಅನಿಸಿ ಬಿಟ್ಟಿತ್ತ.
ಹಿಂಗ ನಾ ಮಾಡಿದ್ದ ಒಂದ ಸಾಧನೆಗೆ ಸಾಕ ಸಾಕ ಅನ್ನೋಷ್ಟ ಸಮಾವೇಶಗೊಳ ಆದ್ವು. ಹಂಗ ಏನರ ಎರಡನೇದಕ್ಕೂ ಕುಬಸಾ ಮಾಡೊ ಪದ್ಧತಿ ಇದ್ದರ ನನ್ನ ಅವಶೇಷನ ಉಳಿತಿದ್ದಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ