ನಮ್ಮವ್ವಗ ಮೊದ್ಲಿಂದ ಯಾರ ಮನಿ ಮುಂದ ಬಂದ ಏನ ಬೇಡಿದ್ರು ಇಲ್ಲಾ ಅಂತ ಹೇಳಿ ಕಳಸಿ ಗೊತ್ತಿದ್ದಿಲ್ಲಾ, ಹಂಗ ಬೇಡೋರ ಬಂದಾಗ ನಿನ್ನಿ ಅನ್ನ ಉಳದಿದ್ದಿಲ್ಲಾ ಅಂದರ ಒಂದ ಹಿಡಿ ರೇಶನ್ ಅಕ್ಕಿ ಹಾಕಿ ’ನೀನ ಬಿಸಿ ಅನ್ನಾ ಮಾಡ್ಕೊಂಡ ಉಣ್ಣು’ ಅಂತ ಕಳಸ್ತಿದ್ಲ ಹೊರತು ಖಾಲಿ ಕೈಲೆ ಎಂದು ಕಳಸ್ತಿದ್ದಿಲ್ಲಾ.
ಹಂಗ ಒಮ್ಮೊಮ್ಮೆ ಹಿಂದಿನ ದಿವಸದ ಅನ್ನ ಉಳದಾಗ
’ಪ್ರಶಾಂತ, ನಿನ್ನಿ ಅನ್ನಾ ನೀ ಕಲಸನ್ನ ಉಣತೇನಿ ಅಂದರ ಇಡ್ತೇನಿ, ಇಲ್ಲಾ ಹೊರಗ ಬೇಡಲಿಕ್ಕೆ ಬಂದಾರ ಅವರಿಗೆ ಹಾಕ್ತೇನಿ, ಏನ್ಮಾಡಂದಿ?’ ಅಂತ ನನ್ನ ಪರ್ಮಿಶನ್ ತೊಗೊಂಡಾದ್ರು ಹಾಕ್ತಿದ್ಲು. ಅದ ಹಿಂಗ ಆಗಿತ್ತಲಾ, ಬೇಡೊರಿಗೆ ನಮ್ಮ ಮನಿ ಒಳಗ ಗ್ಯಾರಂಟಿ ಏನರ ಸಿಗ್ತದ ಅಂತ ಖಾತ್ರಿ ಇತ್ತ.
ಮುಂದ ನಾವ ಜೋಳದ ಓಣಿ ಮನಿ ಬಿಟ್ಟ ಇತ್ತಲಾಗ ಗೋಕುಲ ರೋಡನಾಗ ಸೆಟ್ಲ್ ಆದ್ವಿ ಹಂಗ extension areaಕ್ಕ ಬಂದ ಮ್ಯಾಲೆ ಈ ಬೇಡೊ ಮಂದಿ ಕಡಿಮಿ ಆದರು. ಅಲ್ಲಾ ಹಂಗ ಆವಾಗ ನಂಗ ಕಂಪಲ್ಸರಿ ಹಿಂದಿನ ದಿವಸ ಅನ್ನದ್ದ ಕಲಸನ್ನ ಉಣ್ಣೊ ಪಾಳೆ ಬಂತ ಆ ಮಾತ ಬ್ಯಾರೆ. ಹಂಗ ಅಕಸ್ಮಾತ ಯಾರರ ಬಂದರ ’ಅಯ್ಯ, ಭಾಳ ದಿವಸಾದ ಮ್ಯಾಲೆ ಬಂದಾರ, ಇಲ್ಲಾ ಅಂತ ಹೆಂಗ ಅನ್ನಬೇಕು’ ಅಂತ ಹಿಂದಿನ ದಿವಸದ್ದ ಉಳದಿದ್ದಿಲ್ಲಾ ಅಂದರು ನಮಗೇಲ್ಲಾ ಒಂದ ತುತ್ತ ಕಡಮಿ ಮಾಡಿ ಮನಿಗೆ ಮಾಡಿದ್ದರಾಗಿಂದ ಹಾಕ್ತಿದ್ದಳು.
ಹಂಗ ಹೊಸಾ ಏರಿಯಾಕ್ಕ ಬಂದ ಮ್ಯಾಲೆ ಹಿಂಗ ಬೇಡೋರ ಬರದಿದ್ದರು ಬ್ಯಾರೆ ಬ್ಯಾರೆ ಸೇಲ್ಸ್ ಮೆನ್ ಬರೋದ ಜಾಸ್ತಿ ಆಗಲಿಕತ್ತ. oxford dictionary ಮಾರೋರು, Britannia encyclopedia ಮಾರೋರು, ಕುಕ್ಕರ, ಗ್ರೈಂಡರ್ ಮಾರೋರು, ಪ್ಲ್ಯಾಸ್ಟಿಕ್ ಬಕೇಟ ತಂಬಗಿ ಮಾರೋರು ಒಬ್ಬರ ಇಬ್ಬರ. ಮೊದ್ಲಿಗೆ ನಮ್ಮವ್ವ ಇವರನರ ಯಾಕ ವಾಪಸ ಕಳಸಬೇಕು ಅಂತ ಅವರ ತಂದಿದ್ದ ಸಾಮನದಾಗ ಯಾವದರ ಒಂದ ಸೋವಿ ಇದ್ದ ಸಾಮಾನ ತೊಗೊಂಡ ಕಳಸ್ತಿದ್ದಳು. ಆಮ್ಯಾಲೆ ನಾ ಅಕಿಗೆ ’ ಏ, ಅವೇಲ್ಲಾ cheap ಸಾಮಾನ, ನೀ ಹಿಂಗ ಮನಿ ಬಾಗಲಕ್ಕ ಬಂದಿದ್ದೇಲ್ಲಾ ತೊಕ್ಕೋತ ಕೂತರ ನಾ ಮನಿ ನಡಸೋದ ತ್ರಾಸ ಆಗತದ ಅಂತ ಜೋರ ಮಾಡಿದ ಮ್ಯಾಲೆ ಸ್ವಲ್ಪ ಕಡಮಿ ಮಾಡಿದಳು.
ಇನ್ನೊಂದ ಮಜಾ ಅಂದರ ಈ ಏರಿಯಾದಾಗ ಚಪ್ಪಲ್-ಛತ್ರಿ ರಿಪೇರಿ ಮಾಡೋರು, ಗ್ಯಾಸ ರಿಪೇರಿ ಮಾಡೋರು, ಬಕೇಟ ಕೊಡಾ ರಿಪೇರಿ ಮಾಡೊರು ಭಾಳ ಬರೋರ. ನಮ್ಮವ್ವಗ ಅವರನ ಕಂಡ್ರ ಭಾಳ ಖುಷಿ ಆಗಿ ಬಿಡ್ತಿತ್ತ. ಹಂತಾವರ ಯಾರರ ಬಂದರ ಸಾಕ ಏನರ ರಿಪೇರಿ ಸಾಮಾನ ಹೊರಗ ತಗದ ಅವರನ ಅಂಗಳದಾಗ ಕೂಡಿಸಿಗೊಂಡ ಅರ್ಧಾ ಕಪ್ ಚಹಾ ಮಾಡಿ ಕೊಟ್ಟ ಹರಟಿ ಹೊಡ್ಕೊತ ಕೂತ ಬಿಡೋಕಿ. ನಾನು ನಮ್ಮಪ್ಪ ಅಕಿಗೆ ’ಹಿಂಗ ರಿಪೇರಿ ಮಾಡಲಿಕ್ಕೆ ಬರೋರ ನಮ್ಮ ಮನಿ ಎಲ್ಲಾ ನೊಡ್ಕೊಂಡ ಹೋಗಿ ರಾತ್ರಿ ಬ್ಯಾರೆಯವರನ ಕರಕೊಂಡ ಬಂದ ಕಳುವು ಮಾಡ್ತಾರ’ ಅಂತ ಅಕಿಗೆ ಹೆದರಿಸಿದರ
’ಅಯ್ಯ…ನಮ್ಮ ಮನ್ಯಾಗ ಏನ ಅದ ಸುಡಗಾಡ ಕಳವು ಮಾಡಲಿಕ್ಕೆ, ಏನ ತಂದಿ ಮಗಾ ಒಂದ ಇಪ್ಪತ್ತ ತೊಲಿ ಬಂಗಾರ ಮಾಡಿಸಿಕೊಟ್ಟಿರ ನೋಡ ಕಳ್ಳರ ನಮ್ಮ ಮನಿಗೆ ಬಂದ ಕಳುವು ಮಾಡಲಿಕ್ಕೆ’ ಅಂತ ನಮಗ ಅನ್ನೋಕಿ. ಅಷ್ಟಕ್ಕ ಬಿಡ್ತಿದ್ದಿಲ್ಲಾ ಮುಂದಿನ ಸರತೆ ಯಾರರ ರಿಪೇರಿ ಮಾಡೊರ ಮನಿಗೆ ಬಂದಾಗ ಅವಂಗೂ
’ನಮ್ಮ ಮನ್ಯಾಗ ಏನ ಸುಡಗಾಡ ಅದ ಅಂತ ಕಳ್ಳರ ಬರ್ತಾರೊ ಮಾರಾಯ, ನೋಡಲಿಕ್ಕೆ ಇಷ್ಟ ದೊಡ್ಡ ಮನಿ ..ನಮನ್ನ ಹೊಡದರು ಬಡದರು ಒಂದ ಹತ್ತ ಸಾವಿರದ್ದ ಬಂಗಾರ ಸಿಗಂಗಿಲ್ಲಾ ಮನ್ಯಾಗ’ ಅಂತ ಹೇಳಿ ಕಳಸೋಕಿ.
ಅಲ್ಲಾ ನಾಳೆ ಎಲ್ಲರ ನಮ್ಮ ಮನಿಗೆ ಕಳ್ಳರ ಬಂದ ಗಿಂದಾರಂತ ಪಾಪ ಇಕಿ ಅವರಿಗೆ ಮೊದ್ಲ ಹೇಳಿ ಕಳಸಿ ಬಿಡ್ತಿದ್ದಳು. ಹಿಂಗಾಗೆ ಏನೊ ಗೊತ್ತಿಲ್ಲಾ ನಮ್ಮ ಮನಿಗೆ ಇವತ್ತಿನ ತನಕ ಕಳ್ಳರ ಬಂದಿಲ್ಲಾ ಮತ್ತ, ಹಂಗ ಆಜು ಬಾಜಿ ಮನಿ ಕಳವು ಆದರು ಇವತ್ತೀಗೂ ನಮ್ಮ ಮನಿಗೆ ಯಾ ಕಳ್ಳರು ಹಣಕಿ ಹಾಕಿಲ್ಲಾ. ಕಡಿಕೆ ನಾ ಒಂದ ಸರತೆ ನಮ್ಮವ್ವಗ ಸಿಟ್ಟಿಗೆದ್ದ ಒದರಾಡಿದ ಮ್ಯಾಲೆ ಸುಟ್ಟ ಸುಡಗಾಡ ಉಪಯೋಗಕ್ಕ ಬರಲಾರದ ಸಾಮಾನ ರಿಪೇರಿ ಮಾಡಸೋದು ಬಂದ ಮಾಡಿದ್ಲು.
ಮುಂದ ಒಂದ ದಿವಸ ಶುಭ ಮುಹೂರ್ತದಾಗ ನಂದ ಮದುವಿ ಆತ, ನಮ್ಮವ್ವನ ಸೊಸಿ ಮನಿ ತುಂಬಿಸಿಕೊಂಡ ಬಂದ್ಲು. ಮತ್ತ ಈ ಕಥಿ ಒಂದನೇದಿಂದ ಶುರು ಆತ.
ನನ್ನ ಹೆಂಡತಿ ಒಂದ ವಿಚಿತ್ರ ಗಿರಾಕಿ ಇತ್ತ…ಇತ್ತ ಏನ ಅದ. ಇಕಿಗೆ ಮೊದ್ಲಿಂದ ಯಾರ ಮನಿ ಮುಂದ ಬಂದ ಬೇಡಿದರು ಏನೂ ಕೊಡೊ ಚಟಾ ಇರಲಿಲ್ಲಾ. ಒಂದು ಇಕಿ ಹಂಗ ಮಾಡಿದ್ದನ್ನ ಉಳಸೊ ಪೈಕಿನ ಅಲ್ಲಾ, ತುಟ್ಟಿ ಕಾಲ ಯಾಕ ಉಳಿಸಿ ಛಲ್ಲ ಬೇಕು ಅಂತ ಉಳದದ್ದನ್ನ ಎಲ್ಲಾ ತಾನ ತಿಂದ ಹೊಟ್ಟಿ ಕೆಡಸ್ಗೊತಿದ್ದಳ ಹೊರತು ಯಾರಿಗೂ ಒಂದ ತುತ್ತ ಕೊಟ್ಟೊಕಿ ಅಲ್ಲಾ. ಹಂಗ ಮೊದ್ಲ ನಮ್ಮ ಏರಿಯಾದಾಗ ಬೇಡೋರ ಬರೋದ ಕಡಮಿ, ಹಂಗ ಅಪ್ಪಿ ತಪ್ಪಿ ಯಾರರ ಬಂದರು ಇಕಿ ಸೀದಾ ’ಮುಂದ ಹೋಗ’ ಅಂತ ಕಳಸಿ ಬಿಡ್ತಿದ್ದಳು. ಪಾಪ ನಮ್ಮವ್ವ ಹಂಗ ಮೊದ್ಲ ಆದರ ಏನ ಉಳದಿದ್ದಿಲ್ಲಾ ಅಂದರು ಯಾರರ ಬೇಡಲಿಕ್ಕೆ ಬಂದಾಗ ’ಒಂದ ಐದ ನಿಮಿಷ ತಡಿವಾ, ಕುಕ್ಕರ ದಣೇಯಿನ ಸಿಟಿ ಹೊಡದದ, ಕುಕ್ಕರ ಇಳದ ಮ್ಯಾಲೆ ಕೊಡ್ತೇನಿ’ಅನ್ನೋಕಿ, ಆದರ ಈಗ ಸೊಸಿ ಬಂದ ಮ್ಯಾಲೆ ಹಂಗ ಅನ್ನಲಿಕ್ಕೂ ಧೈರ್ಯಾ ಇರಲಿಲ್ಲಾ. ಪಾಪ ನಮ್ಮವ್ವನ್ನ ನೆಚ್ಚಿ ಅಪರೂಪಕ್ಕೊಮ್ಮೆ ಬರೋ ಬೇಡೊರ ಮುಂದ ನಮ್ಮವ್ವನ್ನ ಮರ್ಯಾದಿ ಹೋಗಲಿಕ್ಕೆ ಹತ್ತ. ಅವರ ಸಹಿತ ಮಾತಾಡ್ಕೊಳೊರು ’ ಸೊಸಿ ಬಂದ ಮ್ಯಾಲೆ ಮನ್ಯಾಗ ಆ ಯಮ್ಮಂದ ಏನ ನಡೆಯಂಗೆಲಾ’ ಅಂತ. ಏನ್ಮಾಡ್ತೀರಿ?
ಅದರಾಗ ನಮ್ಮವ್ವಗ ನನ್ನ ಹೆಂಡ್ತಿ ಮನಿ ಮುಂದ ಬೇಡಲಿಕ್ಕೆ ಬಂದೋರನ ’ಮುಂದ ಹೋಗ’ ಅಂತ ಅಂದ ಕಳಸಿದರ ಭಾಳ ಸಿಟ್ಟ ಬರ್ತಿತ್ತ. ಅಕಿ ನನ್ನ ಹೆಂಡತಿಗೆ ಕರದ ’ಏ, ಹಂಗ ಹುಚ್ಚರಂಗ ’ಮುಂದ ಹೋಗ’ ಅನಬಾರದು, ನಿಂಗ ಒಂದ ಚೂರು ಮ್ಯಾನರ್ಸ್ ಇಲ್ಲಾ at least courtesyಗೆ ಆದರೂ ’ನಾಳೆ ಬಾ’ ಅಂತ ಹೇಳಿ ಕಳಸಬೇಕು ಅಂತ ಬೈಯೋಕಿ.
ಅಷ್ಟರಾಗ ನನ್ನ ಹೆಂಡತಿಗೂ ನಮ್ಮವ್ವನ ಗತೆ ಮನಿ ಮುಂದ ಸಾಮಾನ ಮಾರಲಿಕ್ಕೆ ಬಂದಾಗ ಸಸ್ತಾ ಸಿಗ್ತಾವ ಅಂತ ಬೇಕಾಗಿದ್ದು ಬ್ಯಾಡಾಗಿದ್ದು ಎಲ್ಲಾ ತೊಗೊಳೊ ಚಟಾ ಇತ್ತ, ಇದರಾಗ ಅತ್ತಿ – ಸೊಸಿ ಇಬ್ಬರು ಜೊತಿಯಾಗಿ ಸುಟ್ಟು ಸುಡಗಾಡ ಖರೀದಿ ಮಾಡೋದ ಮತ್ತ ಶುರು ಆತ. ನಾ ಆಮ್ಯಾಲೆ ಬೈಲಿಕತ್ತರ ನಮ್ಮವ್ವ ನನ್ನ ಹೆಂಡತಿ ಮ್ಯಾಲೆ ಹಾಕಿ ’ ನಾ ಎಷ್ಟ ಹೇಳಿದೇಪಾ, ಬ್ಯಾಡಾ ಅಂತ, ನಿನ್ನ ಹೆಂಡತಿ ಎಲ್ಲೆ ನನ್ನ ಮಾತ ಕೇಳ್ತಾಳ’ ಅಂತ ಅಂದ ಬಿಡೋಕಿ.
ನನ್ನ ಹೆಂಡತಿ oxford dictionary ಮಾರೋರಕಡೆ ಕನ್ನಡ oxford dictionary ತೊಗೊಳೊದು, ಹಳೇ ಇಪ್ಪತ್ತ ಲಿಟರ ಬಕೀಟ ಹಾಕಿ ಎರಡ ಎರೆಡೆರಡ ಲಿಟರಿನ್ವು ಪ್ಲ್ಯಾಸ್ಟಿಕ್ ತಂಬಗಿ ತೊಗೊಂಡಿದ್ಲು, ನಾ ಹಾಕೋದ ಬಿಟ್ಟಿದ್ದ ಚಪ್ಪಲ್ ಹುಡಕಿ ಹುಡಕಿ ರಿಪೇರಿ ಮಾಡಸೋದು, ಹಿಂತಾವೇಲ್ಲಾ ವಾರದಾಗ ಒಂದ ಸರತೆ ಇದ್ದ ಇರ್ತಿತ್ತ.
ನಾ ತಲಿಕೆಟ್ಟ ಅಕಿಗೆ “ಲೇ ಬುದ್ದಿ ಎಲ್ಲೆ ಇಟ್ಟ ಬೇಕಾಗಿದ್ದ ಬ್ಯಾಡಾಗಿದ್ದ ಎಲ್ಲಾ ತೊಗೊತಿ, ಇನ್ನ ಮುಂದ ನನ್ನ ಕೇಳಲಾರದ ಏನರ ತೊಗೊಂಡ್ರ ನೋಡ” ಅಂತ ನಾ ಅಂದರ.
“ಏ, ಅವರ ಬಿಡಂಗೇಲ್ರಿ, ಅಕ್ಕಾ ಬೋಣಗಿ ಆಗಿಲ್ಲಾ ಕಡಿಕೆ ಏನರ ಒಂದ ತೊಗೊ ಅಂತ ಗಂಟ ಬಿಳ್ತಾರ” ಅಂದ್ಲು.
“ಇನ್ನ ಮುಂದ ಹಂಗ ಯಾರರ ಗಂಟ ಬಿದ್ದರ ನಮ್ಮ ಮನೆಯವರ ಇಲ್ಲಾ ನಾಳೆ ಬಾ ಅಂತ ಹೇಳ ಕಳಸು, ಸುಳ್ಳ ಬೇಕಾ ಬಿಟ್ಟಿ ಸಾಮಾನ ತೊಗೊ ಬ್ಯಾಡ” ಅಂತ ನಾ ಬೈದ ಸುಮ್ಮನ ಕೂಡಸಿದೆ.
ತೊಗೊ ಅವತ್ತಿನಿಂದ ಯಾರ ಮನಿ ಮುಂದ ಬಂದರು ನನ್ನ ಹೆಂಡತಿ ’ನಮ್ಮ ಮನೆಯವರ ಇಲ್ಲಾ ನಾಳೆ ಬಾ’ ಅಂತ ಶುರು ಮಾಡಿದ್ಲು. ಅದು ಯಾ ಪರಿ ಆತ ಅಂದ್ರ, ಸಾಮಾನ ಮಾರೋರಿಗೆ, courierನವರಿಗೆ, ಹಳೇ ಸಾಮಾನ ರಿಪೇರಿ ಮಾಡೋರಿಗೆ ಇಷ್ಟ ಏನ even ಭಿಕ್ಷಾ ಬೇಡಲಿಕ್ಕೆ ಬಂದರು ’ನಮ್ಮ ಮನೆಯವರ ಇಲ್ಲಾ ನಾಳೆ ಬಾ’ ಅಂತ ಹೇಳಿ ಕಳಸಲಿಕತ್ಲು. ಅದ ಹಿಂಗಾತ ಅಂದರ ಮರದಿವಸ ಮಂದಿ ಕರೆಕ್ಟ ನಾ ಮಧ್ಯಾಹ್ನ ಊಟಕ್ಕ ಹೋದಾಗ ಬಂದ ’ನಿನ್ನೆ ನಿಮ್ಮ ಮನೆಯವರ ಹೇಳಿದ್ದರು ನಾಳೆ ಬಾ ಅಂತ, ಬಂದೇವಿ ಈಗ ಏನರ ತೊಗೊಳ ಬೇಕ ಅಂತ ನಂಗ ಗಂಟ ಬೀಳಲಿಕತ್ತರು. ನಾ ಅವರಿಗೆ ಹೊರಗ ಹಾಕೋದರಾಗ ಏಳು ಹನ್ನೆರಡ ಆಗಲಿಕತ್ತ.
ಇಕಿ ಒಂದ ಸರತೆ ಅಂತೂ ಆ ಲೈಟ ಬಿಲ್ಲ್, ನಳದ ಬಿಲ್ಲನವರಿಗೂ ’ನಮ್ಮ ಮನೆಯವರಿಲ್ಲಾ ನಾಳೆ ಬಾ’ ಅಂತ ಹೇಳಿ ಕಳಸಿ ಬಿಟ್ಟಿದ್ಲು. ಅವರ ತಲಿಕೆಟ್ಟ ಮುಂದಿನ ತಿಂಗಳ ಎರಡು ತಿಂಗಳದ ಬಿಲ್ಲ್ ಜೊತಿ ಪೆನಲ್ಟಿ ಹಚ್ಚಿ ನಾ ಇದ್ದಾಗ ತಂದ ಕೊಟ್ಟ ಹೋದರು.ಏನ್ಮಾಡ್ತೀರಿ ಹಿಂತಾವರಿಗೆ?
ಯಾರಿಗೆ ಏನ ಹೇಳ್ಬೇಕು ಏನ ಹೇಳ್ಬಾರದು ಒಂದ ಗೊತ್ತಾಗಂಗಿಲ್ಲಾ. ಇವತ್ತಿಗೂ ನಮ್ಮ ಮನ್ಯಾಗ ಹಿಂಗ ನಡದದ ಮತ್ತ. ಕೋರಿಯರನವರ ಅಂತು ನನ್ನ ಹೆಂಡತಿ ಕಾಲಾಗ ಸಾಕ ಸಾಕಾಗಿ ನಂಗ ಫೊನ ಮಾಡಿ ಬೇಕಾರ ನಮ್ಮ ಆಫೀಸಿಗೆ ಬಂದ ತೊಗೊಂಡ ಹೋಗ್ರಿ ಅಂತ ಹೇಳ್ತಾರ.
ಅಲ್ಲಾ ಹಂಗ ನಾ ಇಲ್ಲದಾಗ ಯಾರರ ಮನಿಗೆ ಬಂದರು ’ನಮ್ಮ ಮನೆಯವರಿಲ್ಲಾ ನಾಳೆ ಬಾ’ ಅಂತ ಹೇಳಿ ಕಳಸೊ ಪೈಕಿನ ನನ್ನ ಹೆಂಡತಿ..ಹಂಗ ನೀವ ಯಾರರ ನಮ್ಮ ಮನಿಗೆ ಬರೋರ ಇದ್ದರ ನಾ ಇದ್ದಿದ್ದ ಕನ್ಫರ್ಮ ಮಾಡ್ಕೊಂಡ ಬರ್ರಿ ಮತ್ತ..ಮತ್ತೇಲ್ಲರ ನನ್ನ ಹೆಂಡತಿ ಒಬ್ಬೊಕಿನ ಇದ್ದಾಗ ಬಂದ ’ನಮ್ಮ ಮನೆಯವರಿಲ್ಲಾ ನಾಳೆ ಬಾ’ ಅಂತ ಅನಿಸಿಗೊಂಡ ನೀರಿಲ್ಲಾ- ಚಹಾ ಇಲ್ಲದಂಗ ಹೋಗಿ-ಗೀಗಿರಿ.