ಈ ಪ್ರಹಸನ ನನ್ನ ಜೀವನದಾಗ ನಡೆದ ಖರೆ ಘಟನೆಗಳನ್ನ ಒಳಗೊಂಡಿದ್ದ, ಅಂದರ ನಾ ಮೊದ್ಲ ಬರದಿದ್ದೆಲ್ಲಾ ಸುಳ್ಳ-ಸುಳ್ಳ ಘಟನೆಗಳು ಅಂತ ಅನ್ಕೋಬ್ಯಾಡರಿ, ಅವು ಖರೇನ ಆದ್ರ ಇದು ಒಂಥರಾ ನನ್ನ ಆಟೊಬೈಯೊಗ್ರಾಫಿ ಇದ್ದಂಗ, ಹಿಂದ ನಡೆದ ಹೋದ, ಮಾಸಿದ ಆದ್ರ ಹಳಸಲಾರದ ಪ್ರಹಸನ.
ಇದು 95-96 ರಾಗಿನ ಮಾತ, ಆವಾಗ ನಂಗ ದಣೇಯೀನ 22 ತುಂಬಿ 23ರಾಗ ಬಿದ್ದಿತ್ತು. ಒಂದ ಸರತೆ ಊಟಕ್ಕ ಕೂತಾಗ ನಮ್ಮಪ್ಪ ಸಡನ್ನಾಗಿ ಮಾತಾಡ್ತ-ಮಾತಾಡ್ತ ನಮ್ಮವ್ವನ ಮುಂದ
“ನಿನ್ನ ಮಗನ ಮದುವಿ ಮಾಡ್ತೀ ಏನಪಾ ಅಂತ ಮೋನಪ್ಪಾ ಕೇಳಿದಾ” ಅಂತ ಅಂದಾ.
ಅದನ್ನ ಕೇಳಿದ್ದ ನಂಗ ನಮ್ಮವ್ವ ಮಾಡಿದ್ದ ಮೆತ್ತಗನಿ ಅನ್ನಾ ಗಂಟಲಕ್ಕ ಹತ್ತಿ ನೆತ್ತಿಗೇರಿ ಕೆಮ್ಮ ಬಂತ. ನಮ್ಮವ್ವಾ “ಸವಕಾಶ,ಸವಕಾಶ, ಮ್ಯಾಲೆ ನೋಡ, ನೀರ ಕುಡಿ” ಅಂತ ಅಂದ ನನ್ನ ಬೆನ್ನ ತಿಕ್ಕಿದ್ಲು.
ಆಮ್ಯಾಲೆ ಅಕಿ ನಮ್ಮಪ್ಪನ ಮಾರಿ ನೋಡಿ
“ಯಾಕ ಅವರ ಮಗಳ ದೊಡ್ಡಕ್ಯಾಗಳಂತ ನಮ್ಮ ಮಗನ ಲಗ್ನ ಬಗ್ಗೆ ಕಾಳಜಿ ಬಂತೇನ ನಿಮ್ಮ ಮೋನಪ್ಪಗ” ಅಂತ ಸೀದಾ ಮದುವಿ ಮಾತ ಅಲ್ಲಿಗೆ ಮುರದ ಬಿಟ್ಟಳು.
ಅದು ನನ್ನ ಜೀವನದಾಗ ನನ್ನ ಮದುವಿ ಬಗ್ಗೆ ನಮ್ಮ ಮನ್ಯಾಗ ನಡದ ಮೊದಲನೇ official discussion. ಹಂಗ ಇದಕ್ಕ ಪ್ರಪೋಸಲ್ ಅನ್ನಲಿಕ್ಕೆ ಬರಂಗಿಲ್ಲಾ, ಯಾಕಂದರ ನಮ್ಮ ಮೋನಪ್ಪಾ ಮಾಮಾ ಏನ ತಾ ತನ್ನ ಮಗಳನ್ನ ನನಗ ಕೊಡ್ತೇನಿ ಅಂದಿದ್ದಿಲ್ಲಾ. ಅವಂಗ ನಾನೂ ದೊಡ್ಡಂವಾಗೇನಿ ಅಂತ ಅನಿಸರಬೇಕು ಅದಕ್ಕ ಹಂಗ ಸಹಜ ‘ನಿನ್ನ ಮಗನ ಲಗ್ನಾ ಮಾಡ್ತೀ ಏನಪಾ’ ಅಂತ ನಮ್ಮಪ್ಪಗ ಕೇಳಿದ್ದಾ ಇಷ್ಟ. ಮೋನಪ್ಪಗ ನಾಲ್ಕ ಹೆಣ್ಣ ಇದ್ವು. ಒಂದನೇದಕಿ ನನಕಿಂತ ಒಂದ ವರ್ಷ ಸಣ್ಣೊಕಿದ್ದರ ಕಡಿಯಾಕಿ ನನಕಿಂತ ಹತ್ತ ವರ್ಷ ಸಣ್ಣೋಕಿ. ಅದರ ನಡಕ ನಂಗ ಸೆಟ್ ಆಗೊವ ಎರಡ ಇದ್ವು. ಹಂಗ ನಮ್ಮ ಮೋನಪ್ಪ ಮಾಮಾ ನಮಗೇನ ಸಂಬಂಧದಂವಾ ಅಲ್ಲಾ, family friends ಇಷ್ಟ. ಆದರೂ ಬಳಗದವರಕಿಂತಾ ಜಾಸ್ತಿ ಹಚಗೊಂಡಿದ್ವಿ. ನಂಗ ತಿಳವಳಕಿ ಬರೋದರಾಗ ಅವಂಗ ಎರಡ ಹೆಣ್ಣ ಹುಟ್ಟಿ ಬಿಟ್ಟಿದ್ವು. ಹಿಂಗಾಗಿ ನಾ ಮುಂದ ತಿಳವಳಿಕೆ ಬಂದ ಮ್ಯಾಲೆ ಅವಂಗ ಕಾಕ ಅಂತ ಕರದ ಯಾಕ ರಿಸ್ಕ್ ತೊಗೊಬೇಕು ಅಂತ ಮಾಮಾ, ಮಾಮಾ ಅಂತ ಕರಿತಿದ್ದೆ.
ಹಂಗ ಅಂವಾ ನನ್ನ ಮದುವಿ ಬಗ್ಗೆ ವಿಚಾರ ಮಾಡ್ಲಿಕ್ಕೆ ಕಾರಣ ಅಂದರ ಆವಾಗ ನನಗ ಕಿರ್ಲೋಸ್ಕರದಾಗ ನೌಕರಿ ಸಿಕ್ಕಿತ್ತು, ಆಗಿನ ಕಾಲದಾಗ ಕಿರ್ಲೋಸ್ಕರ ನೌಕರಿ ಅಂದರ ಬ್ಯಾಂಕ ನೌಕರಿ ಇದ್ದಂಗ. ಅದರಂಥಾ ಛಲೋ ನೌಕರಿ ಅದು ಇದ್ದ ಊರಾಗ ಸಿಗೋದ ಅಷ್ಟ ಸರಳ ಇದ್ದಿದ್ದಿಲ್ಲಾ. ಅದರಾಗ ಬ್ರಾಹ್ಮಣರಾಗ ಛಲೋ ನೌಕರಿ ಸಿಕ್ಕ ಮುಂದ ಕನ್ಯಾ ಅಕ್ಕ್ಯಾಗಿನ ಬಾಲಹುಳಾ ಆರಿಸಿದಂಗ ಆರಿಸಿ ಲಗ್ನ ಮಾಡ್ಕೋಳೊದರಾಗ 33-35 ಆಗಿರತದ, ಮುಂದ ಎರಡ ಹಡೇಯೋದರಾಗ ಐವತ್ತ ತುಂಬಿ ಅರವತ್ತರಾಗ ಬಿದ್ದಿರತಾವ. ಇನ್ನ ಹಂತಾದರಾಗ ನಂಗ 21.5 ವರ್ಷಕ್ಕ ಕಿರ್ಲೋಸ್ಕರ ನೌಕರಿ, ಮ್ಯಾಲೆ ಸಂಭಾವಿತ ಹುಡುಗಾ, ಆಕಳಂತ ಅವ್ವಾ-ಅಪ್ಪಾ, ಉಬಿದರ ಹಾರಿಹೋಗೊ ಅಂತಾ ತಂಗಿ, ಅಲ್ಲಾ ನಾವ ಇಡಿ ಮನಿ ಮಂದಿ ಕಡ್ಡಿ ಪೈಲವಾನರ ಆ ಮಾತ ಬ್ಯಾರೆ ಬಿಡ್ರಿ. ಹಂಗ ನಮಗೇನರ ಒಂದ ಸ್ವಂತ ಮನಿ, ಒಂದೆರಡ ಎಕರೆ ಹೊಲಾ ಇದ್ದಿದ್ದರ ನಮ್ಮ ಮನೆತನ ನೋಡಿ ಹೆಣ್ಣ ಹಡದವರಿಗೆ ಬಾಯಾಗ ನೀರ ಬಂದ ತಮ್ಮ ಮನಿ ಆಕಳಾ ನಮ್ಮನಿಗೆ ದಕ್ಷಿಣಿ ಜೊತಿ ದಾನ ಕೊಡೊದ ಗ್ಯಾರಂಟಿ ಇತ್ತ.
ನಮ್ಮ ಮೋನಪ್ಪ ಮಾಮಾನ ಗತೆ ಮುಂದ ಒಂದೆರಡ ಸರತೆ ಮತ್ತೊಂದಿಬ್ಬರು, ನಂಗ ‘ಮದುವಿ ಮಾಡ್ಕೋತಿ ಏನಲೇ’ ಅಂತ, ನಮ್ಮವ್ವಾ- ಅಪ್ಪಗ ‘ನಿಮ್ಮ ಮಗಗ ಕನ್ಯಾ ನೋಡಲಿ ಕತ್ತೀರೇನು?’ ಅಂತ ಹಂಗ ಕೇಳಿ ನೋಡಿದ್ರು. ಆದರ ಆವಾಗ ನನ್ನ ಜೀವನದ priority ಬ್ಯಾರೆ ಇತ್ತು. ನಾ ಒಂದ ಸ್ವಲ್ಪ financially settle ಆಗಿ, ನನ್ನ ತಂಗಿಗೆ ಓದಿಸಿ ಅಕಿ ಶಾಣ್ಯಾಕ್ಯಾದರ ಶಾಣ್ಯಾಮಾಡಿ, ಮುಂದ ಅಕಿದ ಲಗ್ನಾ ಮಾಡಿ ಅಟ್ಟಿ, ನನ್ನ ಲಗ್ನದ ವಿಚಾರ ಅಂತ ಇತ್ತು.
ಆದ್ರ ಮುಂದ ಮೂರ ವರ್ಷಕ್ಕ ನಾ ನಮ್ಮ ಮಾರವಾಡಿ ದೋಸ್ತ ‘ನಾ ಹೊಸಾ factory ಹಾಕತೇವಿ ನೀ ಬಂದ ಬಿಡ’ ಅಂದಾಗ ನಾ ಹಿಂದ ಮುಂದ ವಿಚಾರ ಮಾಡದ ‘ಕಿರ್ಲೋಸ್ಕರ ಏನ್ ನಮ್ಮಪ್ಪನ ಪಿತ್ರಾರ್ಜಿತ ಕರ್ಮ ಭೂಮಿ ಅಲ್ಲಾ ‘ ಅಂತ ಅದಕ್ಕ ಜೈ ಅಂದ ಬಿಟ್ಟೆ. ಆವಾಗ ನನಗ ದಣೆ ಇನ 24.5 ವರ್ಷ್, ಆ ವಯಸ್ಸಿನಾಗ ನಮ್ಮ ದೋಸ್ತರ ಒಂದಿಷ್ಟಮಂದಿ ನೌಕರಿ ಮಾಡೋದ ದೂರ ಉಳಿತ ಇನ್ನೂ degree ಮುಗಿಸಿದ್ದಿಲಾ, ಹಂತಾದರಾಗ ನಾ ಒಂದ ದೊಡ್ಡ ಕಂಪಾನ್ಯಾಗ ನೌಕರಿ ಮಾಡಿ resign ಮಾಡಿದ್ದೆ.
ಅಲ್ಲಿಗೆ ಮುಗಿತ ನೋಡ್ರಿ, ಮುಂದ ಅವನೌನ ಯಾರು ನಮ್ಮ ಮನಿ ಮಂದಿ ಜೊತಿ ನನ್ನ ಲಗ್ನದ ಬಗ್ಗೆ ಮಾತೋಡದ ದೂರ ಉಳಿತ ನಾನೂ ಒಂದ ಗಂಡಸಂತ ಮಾತೋಡದನ್ನೂ ಬಿಟ್ಟ ಬಿಟ್ಟರು.
“ಯೇ, ಅಂವಾ ಅಲ್ಲೆ industrial ಎಸ್ಟೇಟನಾಗ ಮಾರಾವಾಡಿ ಕಂಪನ್ಯಾಗ managerಅಂತ ಕೆಲಸಾ ಮಾಡ್ತಾನ” ಅಂತ ಅಂದರ ಹೊರತು ಯಾರು ವರ-ಕನ್ಯಾ ವಿಷಯ ಮಾತಾಡಲಿಲ್ಲಾ. ಮಂದಿ ಮಾತಾಡಲಿಲ್ಲಾ ಅಂದರು ಮನಿ ಮಂದಿನರ ವಯಸ್ಸಾದ ಮ್ಯಾಲೆ ಮಾತಡಬೇಕಲಾ? ವಯಸ್ಸ ಬಿಡತದ, ಮಾತಾಡೆ ಮಾತಡಸ್ತದ. ಹಿಂಗ ಒಂದ ಎರಡ ವರ್ಷ ಆಗೊದಕ್ಕ ನಂದು ಜೀವಾ ಚುಟು-ಚುಟು ಅನ್ನಲಿಕತ್ತು, ರಸ್ತೆದಾಗ ಹೋಗೊ ಹುಡುಗ್ಯಾರನ ನೋಡೋ ರೀತಿ ಬದಲಾತು. ನಾ ಮನಸ್ಸಿನಾಗ ಮಂಡಗಿ ತಿನ್ನಲಿಕ್ಕೆ ಶುರುಮಾಡಿದ್ದೆ. ಮನ್ಯಾಗ “ತಂಗಿಗೆ ತೋರಸಲಿಕ್ಕೆ ಶುರು ಮಾಡರಿ, ಅಕಿಗೆ ಇಪ್ಪತ್ತ ಆತು. ಇನ್ನ ಅಕಿ ಲಗ್ನಾಗಿ ನನ್ನ ಲಗ್ನ ಆಗೋದರಾಗ ಬೆಳಕ ಹರಿತದ” ಅಂತ ಅಗದಿ ಜವಾಬ್ದಾರಿ ಅಣ್ಣನ ಗತೆ ಅಂದೆ.
ಆದರ ನಮ್ಮ ತಂಗಿ ಏನ ಕಲತ ಅವನೌನ ದೊಡ್ಡ IAS officer ಆಗೋರಕತೆ ‘ನಾ ಇನ್ನೂ ಕಲಿತೇನಿ, ಇನ್ನೊಂದ ಮೂರ ವರ್ಷ ಮದುವಿ ಆಗಂಗಿಲ್ಲಾ’ ಅಂದ್ಲು.
ಇನ್ನ ಅಕಿ ತನ್ನ 24-25ವರ್ಷಕ್ಕ ಮದುವಿ ಮಾಡ್ಕೊಂಡರ ಅಷ್ಟರಾಗ ನಂಗ ಮೂವತ್ತ ದಾಟಿರ್ತಾವ, ಏನಿಲ್ಲದ ನಮ್ಮ ದೋಸ್ತರ ‘ಲೇ, ನಿಮ್ಮಂದ್ಯಾಗ ಮಾರಿ ಮ್ಯಾಲೆ ನೀರಗಿ ಬಿದ್ದ ಮ್ಯಾಲೆ ಮದುವಿ ಮಾಡ್ತಾರ’ ಅಂತಾರ, ಇದ ಬಗಿ ಹರಿಯಂಗಿಲ್ಲಾ, ಅವನೌನ ಇನ್ನ ನಾ ಯಾವಾಗ ಜೀವನದಾಗ ಹೆಂಡತಿ ನೀರಗಿ ಮಡಚಬೇಕು ಅಂತ ತಲಿಕೆಟ್ಟ
“ಏ, ಹಂಗರ ನಾ ಲಗ್ನಾ ಮಾಡ್ಕೋತೇನಿ, ಅಕಿದ ಮುಂದ ನೋಡಿದರಾತು” ಅಂತ ಹೇಳಿ ಬಿಟ್ಟೆ.
ಸರಿ ನಾ ಅಂತು ಲಗ್ನಕ್ಕ ರೆಡಿ ಅಂತ ಘೋಷಣಾ ಮಾಡಿದೆ, ಆದ್ರ ಕನ್ಯಾ ಸಿಗಬೇಕಲಾ ? ನಾ ಕೆ.ಇ.ಸಿ ಒಳಗ ಇದ್ದಾಗ, ಇನ್ನೂ ದೊಡ್ಡಂವನೂ ಆಗಲಾರದಾಗ ‘ನಿಮ್ಮ ಮಗನ ಲಗ್ನಾ ಮಾಡ್ತೀರೇನು?’ ಅಂತೇಲ್ಲಾ ಕೇಳಿದವರು ಈಗ ನಾ ವಯಸ್ಸಿಗೆ ಬಂದಮ್ಯಾಲೆ ಗಪ್ ಚುಪ್ ಆಗಿಬಿಟ್ಟಿದ್ದರು. ಯಾಕಂದರ ಈಗ ನಾ ಮಾರಾವಾಡಿ ಕಂಪನಿ ಒಳಗ managerಅಂತ ಕೆಲಸಾ ಮಾಡೋಂವಲಾ, ಅದ ಹೆಂಗ ತಮ್ಮ ಕನ್ಯಾ ಕೊಡ್ತಾರ. ನಮ್ಮ ಮೋನಪ್ಪ ಮಾಮಾ ಅಷ್ಟರಾಗ ತಂದ ಒಂದನೇ ಕನ್ಯಾ ನಮಗ ಹೇಳದ ಕೇಳದ ದಾಟಿಸಿದ್ದಾ, ಎರಡನೇದಕಿ ನನಗ ‘ಅಂವಾ ಭಾಳ ತೆಳ್ಳಗಿದ್ದಾನ’ ಅಂತ ಅಂದಿದ್ಲಂತ. ಅಲ್ಲಾ ನಾ ತೆಳ್ಳಗಿದ್ದರ ಏನಾತರಿ? ಈಗ ನೋಡ್ರಿ ನಾ ಎರಡ ಹಡದೇನಿ, ಅಕಿ ದಪ್ಪನ ಗಂಡನ ಮಾಡ್ಕೊಂಡರು ಒಂದ ಹಡದಾಳ.
ನಮ್ಮ ಬ್ರಾಹ್ಮಣರ ಹಣೇಬರಹನ ಇಷ್ಟರಿ, ಅವನೌನ ಕನ್ಯಾ ಕೊಡಬೇಕಾರೂ ಜಿಕೇರಿ ಮಾಡ್ತಾವ, ಕನ್ಯಾ ತೊಗೊಬೇಕಾರು ಚೌಕಾಶಿ ಮಾಡ್ತಾವ, ಎಲ್ಲಾದಕ್ಕೂ ಹತ್ತ-ಹತ್ತ ಸರತೆ ವಿಚಾರ ಮಾಡ್ತಾವ ಖೋಡಿ ಒಯ್ದಂದು. ಅಲ್ಲರಿ ಹುಡುಗ ಗಂಡಸ ಹೌದೊ ಅಲ್ಲೊ, ಅವಂಗ ದುಡದ ಹಾಕೊ capacity ಅದನೋ ಇಲ್ಲೊ ಇಷ್ಟ ನೋಡಿ ಲಗ್ನ ಮಾಡಿ ಕೊಟ್ಟರಾತ. ಯಾ ನೌಕರಿ ಆದರ ಏನಾತ. ಅಲ್ಲಾ ಇದ ನನ್ನ ವಿಚಾರ ಬಿಡ್ರಿ. ಈಗಂತೂ ಹೆಣ್ಣ ಹಡದವರ CBI Enquiry ಮಾಡಿ ತಮ್ಮ ಮಗಳನ ಕೊಡಲಿಕತ್ತಾರ ಆ ಮಾತ ಬ್ಯಾರೆ.
ಮುಂದ ಒಂದ ದಿವಸ ನಮ್ಮವ್ವ “ಅಲ್ಲಾ, ನೀ ಖರೇ ಹೇಳ, serious ಆಗಿ ಲಗ್ನಾ ಮಾಡ್ಕೋಳೊಂವೇನ, ನೀ ಮಂಗ್ಯಾನಾಟಾ ಮಾಡ್ಬೇಡ ಮತ್ತ” ಅಂತ ಅಂದ್ಲು.
“ಏ, ಅದರಾಗ ಏನ ಮಂಗ್ಯಾನಾಟ, ತಂಗಿ ಈಗ ಮಾಡ್ಕೋಳಂಗಿಲ್ಲಾ ಅಂದ್ರ ನಾ ಮಾಡ್ಕೋತೇನಿ” ಅಂದೆ.
ಹಂಗರ ಯಾವರ ಕುಂಡ್ಲಿ ಬಂದಾವೇನ ಅಂತ ನಮ್ಮವ್ವಗ ಕೇಳಿದೆ.
“ಕುಂಡ್ಲಿ ಏನ ಬಂದಿಲ್ಲಾ, ಆದರ ನೇಕಾರ ನಗರದಾಗ ಒಂದ ಕನ್ಯಾ ಅದ ಅಂತ, ಅಕಿನೂ ನಿನ್ನಂಗ ತೆಳ್ಳಗ ಇದ್ದಾಳಂತ, ‘ಭಾಳ ಏನ ಕಲತಿಲ್ಲಾ, puc ತನಕ ಓದ್ಯಾಳ, ಮನಿಕೆಲಸ ಎಲ್ಲಾ ಕಲತಾಳ, ಹುಡಗಿ ನೋಡಲಿಕ್ಕೂ ಅಡ್ದಿಯಿಲ್ಲಾ, ನಿಮ್ಮ ಪ್ರಶಾಂತಗ ಜೋಡಿ ಛಲೋ ಆಗ್ತದ’ ಅಂತ ಹೇಳಲಿಕತ್ತಿದ್ದರು. ಹಂಗ ನೀ ಸಿರೀಯಸ್ ಆಗಿ ಹೂಂ ಅಂದರ ಕುಂಡಲಿ ತರಸ್ತೇವಿ” ಅಂದ್ಲು. ನಾನೂ ಯಾ ಮೂಡನಾಗ ಇದ್ದೆನೋ “ಯೇ, ಕುಂಡ್ಲಿ ತರಸರಿ, ಅದರಾಗೇನ್” ಅಂದ ಬಿಟ್ಟೆ.
ಮುಂದ ಯಾವಾಗ ಕುಂಡ್ಲಿ ಬಂತೊ, ಅದನ್ನ ಯಾರ ನೋಡಿದರೊ, ಅದ ಹೆಂಗ ಕೂಡ್ತೋ ಆ ದೇವರಿಗೆ ಗೊತ್ತ. ನಮ್ಮವ್ವ ಒಂದ ದಿವಸ
“ಕುಂಡ್ಲಿ ಕೂಡೇದ, ಹೆಣ್ಣಿನವರು ಯಾವಾಗ ತೊರೊಸೋಣು ಅಂತ ಕೇಳಲಿಕತ್ತಾರ” ಅಂದ್ಲು. ನಾ ಅಂದೆ ಏ ನಂಗ ಮೊದ್ಲ ಫೊಟೊ ತೊರಸರಿ, ಫೊಟೊ ಲೈಕ ಆದರ ಮುಂದ ಹುಡಗಿನ್ನ ಕರಸೋಣಂತ ಅಂದೆ. ನಮ್ಮವ್ವಗ ತಲಿಕೆಡತ
“ನಿನ್ನ ಮಾರಿಗೆ ಫೋಟೊ ಬ್ಯಾರೆ ಕೇಡ, ಇದ್ದೂರ ಕನ್ಯಾ, ಮನಿ ತನಕಾ ತಂದ ಪೂರ್ತಿ ಹುಡಗಿನ್ನ ತೋರಸ್ತಾರ, ಬಾಯಿ ಮುಚಗೊಂಡ ನೋಡ, ಮತ್ತ ಫೋಟೊ ಯಾಕ” ಅಂತ ನಂಗ ಬೈದ ಬಾಯಿ ಮುಚ್ಚಿಸಿ ಬಿಟ್ಟಳು.
ಮುಂದ ಒಂದ ದಿವಸ ಕನ್ಯಾ ambassador ಕಾರನಾಗ ಬಂತ, ನಮ್ಮವ್ವ ನೋಡಿದ್ರ ಕನ್ಯಾ ನನ್ನಂಗ ತೆಳ್ಳಗ ಅಂತ ಅಂದಿದ್ಲು, ಇಲ್ಲೆ ನೋಡಿದ್ರ ದೊಡ್ಡ ಕಾರ ಬಂತಲಪಾ ಅನಸ್ತು. ಆಮ್ಯಾಲೆ ನೋಡಿದ್ರ ಆ ಕಾರ ತುಂಬ ನೇಕಾರನಗರ ಮಂದಿ ತುಂಬಕೊಂಡ ಹುಡುಗಿನ್ನ್ ತೊಡಿಮ್ಯಾಲೆ ಕೂಡಿಸಿಕೊಂಡ ಬಂದಿದ್ದರು. ಮುಂದ ಒಂದ ಸ್ವಲ್ಪೊತ್ತಿಗೆ ಕನ್ಯಾ ನೋಡೊ ಕಾರ್ಯಕ್ರಮ ಮುಗಿತ, ಹಂಗ ನಾ ಏನ ಭಾಳ serious ಆಗಿ ತಲಿಕೆಡಸಿಕೊಂಡ ನೋಡಲಿಲ್ಲಾ ಅಕಿನೂ ಏನ್ ತಲಿ ಎತ್ತಿ ನನ್ನ ನೋಡಲಿಲ್ಲಾ, ಒಟ್ಟ ಕನ್ಯಾ ನೋಡೊ ಶಾಸ್ತ್ರ ಕಾಟಾಚಾರಕ್ಕ ಮುಗಿಸಿದೆ.
ಮುಂದ ನಮ್ಮವ್ವಾ ‘ಹೆಣ್ಣಿನವರಿಗೆ ಹುಡುಗಾ, ನಮ್ಮ ಮನೆತನ ಎಲ್ಲಾ ಪಸಂದ ಬಂದ ಅವರಾಗೆ ‘ನಿಮಗ ನಮ್ಮ ಮಗಳ ಹೆಂಗ ಅನಸಿದ್ಲು’ ಅಂತ ಕೇಳಿದರ ನಮ್ಮ decision ತಿಳಿಸೋದು, ಅಲ್ಲಿ ತನಕ ನಾವಾಗೆ ಏನ ಮಾತಾಡೋದ ಇರಂಗಿಲ್ಲಾ’ ಅಂತ ಹೇಳಿದ್ಲು. ನಾನೂ ಭಾಳ ತಲಿಕೆಡಸಿಗೊಳ್ಳಲಾರದ ಇದ್ದ ಬಿಟ್ಟೆ. ಒಂದ ವಾರಕ್ಕ ನಾ ಕನ್ಯಾ ನೋಡಿದ್ದೆ ಅನ್ನೋದನ್ನ ಮರತ ಬಿಟ್ಟಿದ್ದೆ. ಆ ಕಡೆಯಿಂದ ಏನ ಜವಾಬು ಬಂದಿರಲಿಲ್ಲಾ, ಬಹುಶಃ ಅವರಿಗೆ ನಮ್ಮ ಮಗಾ ಪಸಂದ ಬಂದಿರಲಿಕ್ಕಿಲ್ಲಾ ಬಿಡ ಅಂತ ನಮ್ಮವ್ವಾ-ಅಪ್ಪನು ಸುಮ್ಮನ ಆಗಿ ಬಿಟ್ಟರು.
ಮುಂದ ಎರಡ ಮೂರ ತಿಂಗಳ ಬಿಟ್ಟ ಒಮ್ಮಿಂದೊಮ್ಮಿಲೆ ಕನ್ಯಾದವರ ನಮಗ “ಮತ್ತ ನಮ್ಮ ಕನ್ಯಾದ್ದ ಏನ ಮಾಡಿದಿರಿ?” ಅಂತ ಕೇಳಿದರು. ಅಲ್ಲಾ, ನಾವ ಏನ ತಲಿ ಮಾಡಬೇಕ? ಕನ್ಯಾ ನಮ್ಮ ಮನ್ಯಾಗಿದ್ದರಲಾ ನಾವ ಎನರ ಮಾಡೋದು? ಕನ್ಯಾ ತೊರಿಸಿಗೊಂಡ ಹೋದೊರು ಮೂರ ತಿಂಗಳ ಬಿಟ್ಟ ಈಗ ಏನ್ಮಾಡಿದರಿ ಅಂತ ನಮ್ಮನ್ನ ಕೇಳಿದರ? ನಾ ನಮ್ಮವ್ವಗ ಹೇಳಿದೆ
“ನೋಡ್ವಾ ನಾ ಅಂತು ಹುಡುಗಿ ಮಾರಿ ಸಹಿತ ಮರತೇನಿ, ಇನ್ನೊಮ್ಮೆ ತಂದ ತೊರಸ ಅಂತ ಹೇಳು, ಆಮ್ಯಾಲೆ ವಿಚಾರ ಮಾಡೋಣಂತ” ಅಂದೆ. ನಮ್ಮವ್ವಾ
“ನೋಡಿಲ್ಲೆ, ಹಂಗ ನೀ ಎರಡನೇ ಸರತೆ ಮನಿಗೆ ಕನ್ಯಾ ಕರಸದೋ ಇತ್ತಂದ್ರ, ಆಮ್ಯಾಲೆ ಮುರ್ಕೋಳಂಗಿಲ್ಲಾ ಮತ್ತ, ನೀ ಕನ್ಯಾಕ್ಕ ಹೂಂ ಅನ್ನೊ ಹಂಗ ಇದ್ದರ ಇಷ್ಟ ಕರಸೋದ” ಅಂದ ಬಿಟ್ಟಳು.
ಹಂಗರ ನಿಮಗೇಲ್ಲಾ ಪಸಂದ ಬಂದದ ಏನು ಅಂತ ಅಂದರ ನಮಗೇಲ್ಲಾ ಓಕೆ ಅಂದ ಬಿಟ್ಟಳು. ನಾ ಇವರು ಒಂದನೇ ಕನ್ಯಾಕ್ಕ ಕಂಡೇನೋ ಇಲ್ಲೋ ಅನ್ನೊರಂಗ ಕುಣದಾಡೋದ ನೋಡಿ ಹಣಿ-ಹಣಿ ಬಡ್ಕೊಂಡೆ.
ನಮ್ಮವ್ವಾ ಭಾಳ ಭೋಳೆ ಹೆಣ್ಣಮಗಳು, ಅಕಿಗೆ ಎಲ್ಲೆ ತನ್ನ ಮಗಗ ಬ್ಯಾರೆ ಕನ್ಯಾ ಸಿಗ್ತಾವೋ ಇಲ್ಲೋ ಅಂತ ಇತ್ತೋ ಇಲ್ಲಾ ಪಾಪ ಹೆಣ್ಣಿನವರಿಗೆ ಹೆಂಗ ಇಲ್ಲಾ ಅನ್ನೋದಂತ ಭಿಡೆಕ್ಕ ಹೂಂ ಅಂದ್ಲೋ ಇಲ್ಲಾ ಖರೇನ ಹುಡಗಿ ನಮ್ಮ ಮನಿಗೆ ತಕ್ಕ ಇದ್ಲೊ ಆ ದೇವರಿಗೆ ಗೊತ್ತ. ಅದರಾಗ ನಡಕಾದವರ ಒಂದಿಬ್ಬರು
“ಸಿಂಧು, ಹುಡಗಿ ಭಾಳ ಛಲೋ ಇದ್ದಾಳ, ಕೆಲಸಾ-ಬೊಗಸಿ ಎಲ್ಲಾ ಮಾಡ್ಕೊಂಡ ಹೋಗ್ತಾಳ, ನಿಮ್ಮ ಮನಿಗೆ, ನಿನ್ನ ಮಗಗ ಹೇಳ ಮಾಡಿಸಿದಂಗ ಇದ್ದಾಳ” ಅಂತ ಅಕಿ ತಲ್ಯಾಗ ತುರಕಿದ್ದರು. ಅಕಿ ನನ್ನ ತಲಿ ತಿನ್ನಲಿಕತ್ತಿದ್ಲು. ‘ಅಲ್ಲಾ ನನಗ ಹೇಳಿ ಮಾಡಿಸಿದಂಗ ಇದ್ದಾಳಂತ, ಅವನೌನ ನಾ ಏನ್ ಆರ್ಡರ್ ಕೊಟ್ಟಿದ್ದೆನ್ ನನಗ ಒಂದ ಹಿಂತಾದ ಹಡಿರಿ’ ಅಂತ, ಒಟ್ಟ ಈ ನಡಕಿನವರು ಒಂದ ಜೋಡಿ ಪ್ಯಾಂಟ ಶರ್ಟ್/ಸೀರಿಗೆ ಬೇಕಾದ್ದ ಮಾಡೋರು.
ನಾ ತಲಿಕೆಟ್ಟ ಮುಂದಿಂದ ಮುಂದ ನೋಡಿದರಾತ ಅಂತ “ಆತ ತೊಗೊ ಕರಿಸಿ ಬಿಡ್ವಾ, ಇನ್ನೊಂದ ರೌಂಡ್ ನೋಡೇ ಬಿಡೋಣ್”ಅಂದೆ.
ಬೀಗರ ಮತ್ತ ಬಿಳಿ ambassador ಕಾರ ತೊಗೊಂಡ ಬಂದರು, ಈ ಸರತೆ ಯಾಕೋ ನನ್ನ ಪುಣ್ಯಾಕ್ಕ
“ನಿಂಗೂ ಏನರ ಕೇಳೋದ ಇದ್ದರ ಕೇಳ ಪ್ರಶಾಂತ” ಅಂತ ನಮ್ಮ ಕಡೆ ಹಿರೇತನ ಮಾಡಲಿಕ್ಕೆ ಬಂದಿದ್ದ ಹಿರೇಮನಷ್ಯಾರ ಅಂದರು. ಇನ್ನ ನನಗ ಮಾತಾಡ ಅಂತ ಹೇಳಿದ ಮ್ಯಾಲೆ ಮಾತಾಡ ಬೇಕಲಾ, ಇಲ್ಲಾಂದರ ಅಕಿಗೆ ನಾ ತೊದಲತೇನೋ ಇಲ್ಲೋ ಅಂತ ಹೆಂಗ ಗೊತ್ತಾಗಬೇಕು, ಅಕಿ ಅಂತೂ ತನಗ ‘ಹಾ.ಹಾ.ಹಾ..ಹಾಡಬರಂಗಿಲ್ಲಾಂತ’ ಒಂದನೇ ಸರತೆ ತೊರಸಲಿಕ್ಕೆ ಬಂದಾಗ ಹೇ.ಹೇ.ಹೇ.ಹೇಳಿ ಬಿಟ್ಟಿದ್ಲು.
ಹಂಗ ನಾ ಏನಿಲ್ಲದ ಸ್ವಲ್ಪ fast & rough ಮಾತಾಡೋಂವಾ, ಅದು ನನ್ನ manufacturing defect. ಹಂತಾದರಾಗ tensionನಾಗ ನಾ ಅಕಿಗೆ ಒಮ್ಮಿಕ್ಕಲೆ
“ಏನ್ ಕಲತಿ?” ಅಂತ ಕೇಳಿದೆ, ಅಕಿ puc ಕಲತಿದ್ದರು ಗಾಬಾರಿ ಆಗಿ sslc ಅಂದ್ಲು,
“ಮುಂದ ಕಲಸಿದರ ಓದತಿ?”ಅಂದೆ. ಏನ ದೊಡ್ಡ ಓದಸೋರ ಗತೆ. ಅಕಿ ಖರೇನ ಓದಿಸಿ-ಗಿದೆಸ್ಯಾನ ಅಂತ ಹೆದರಕೋತ ಹೂಂ ಅಂದ್ಲು.
“english ಬರಿಲಿಕ್ಕೆ, ಓದಲಿಕ್ಕೆ ಬರತದ?” ಅಂತ ಕೇಳಿದೆ. ಅಕಿ ಸ್ವಲ್ಪ-ಸ್ವಲ್ಪ ಅಂದ್ಲು. ಖರೆ ಅಂದ್ರ ನಾ ಕನ್ನಡ ಬರತದ ಇಲ್ಲೊ ಅಂತ ಕೇಳಬೇಕಿತ್ತ ಅಂತ ಆಮ್ಯಾಲೆ ಗೊತ್ತಾತ.
“computer ಬರತದ?” ಅಂದೆ, ಅದಕ್ಕೂ ಹೂಂ ಅಂದ್ಲು. ಅಕಿ computer ಅಂದ್ರ ms-dosದಾಗ data entry ಮಾಡೋದ ಅಂತ ತಿಳ್ಕೊಂಡಿದ್ಲು.
“ನಿಂಗ ಭಕ್ಕರಿ ಮಾಡಲಿಕ್ಕೆ ಬರತದ?” ಅಂದೆ, ಏನ್ ಅವನೌನ ದಿವಸಾ ಮೂರ ಮೂರ ಭಕ್ಕರಿ ತಿನ್ನೋರಗತೆ. ಅಲ್ಲಾ ಚಪಾತಿನ ಜಗದ ತಿನ್ನಲಿಕ್ಕೆ ಆಗಂಗಿಲ್ಲಾಂತ ಹಾಲು ಸಕ್ಕರಿ ಒಳಗ ನೆನಸಿಕೊಂಡ ತಿನ್ನೋವಾ ಇನ್ನ ಭಕ್ಕರಿ ತಿಂತೇನ? ಪುಣ್ಯಾಕ ಅಕಿ ಇಲ್ಲಾ ಅಂದ್ಲು.
ನಾ ಸ್ವಲ್ಪ rough ಆಗಿ ಮಾತಾಡಿದ್ದಕ್ಕೋ ಏನೋ ಅಷ್ಟರಾಗ ಅಕಿ ಬೆವತ ರಾಡಿ ಆಗಿ, ಅಕಿ ಮಾರಿ ಅನ್ನೋದ ಬಿಸಿ ಕುಕ್ಕರ ಡಬ್ಬಿ ಮುಚ್ಚಳದಂಗ ಆಗಿತ್ತ. ನಾ ಮಾತೋಡದ ಹಂಗ ಅಂತ ಪಾಪ ಆ ಹುಡಗಿಗೆ ಏನ ಗೊತ್ತ, ಅಕಿ ಮಾರಿ ನೋಡಿ ನಾ ಅಷ್ಟಕ್ಕ ನನ್ನ questions ಮುಗಿಸಿ ಸಿಟಿ ಹೊಡದ ಬಿಟ್ಟೆ. ಕನ್ಯಾದವರ ಹಚ್ಚಿದ ಅವಲಕ್ಕಿ ತಿಂದ ತಮ್ಮನಿ ದಾರಿ ಹಿಡದರು.
ಇನ್ನ ನಮ್ಮವ್ವಾ-ಅಪ್ಪಾ ನಂಗ ಹೂಂ ಅನ್ನಬೇಕ ಅಂತ ಬ್ಯಾರೆ ಹೇಳಿದ್ದರು, ಹಂಗಾ ಕನ್ಯಾನೂ ಅಡ್ಡಿಯಿಲ್ಲಾ, ಮತ್ತೊಬ್ಬರ ಹೊಟ್ಟಿಕಿಚ್ಚ ಪಡೋಹಂಗ, ಕಣ್ಣ ಹಾಕೊಹಂಗ ಏನ ಇಲ್ಲಾ ಅಂತ ನಾನು ಭಾಳ ತಲಿಕೆಡಸಿಗೊಳ್ಳಾರದ “ಬೊಲೋ ನೇಕಾರ ನಗರ ಕನ್ಯಾಕಿ ಜೈ” ಅಂತ ಅಂದ ಬಿಟ್ಟೆ.
ಮಂದಿ ಒಂದ ಮಾಡ್ಕೋಳ್ಳಿಕ್ಕೆ ನೂರಾರ ಕನ್ಯಾ ನೋಡತಾರ, ಆದರು ಅವರಿಗೆ ಅಷ್ಟ ಸರಳ ಪಸಂದ ಬರಂಗಿಲ್ಲಾ, ಅದು ಅವರವರ ವಯಕ್ತಿಕ requirements ಬಿಡ್ರಿ, ಕೆಲವಬ್ಬರಿಗೆ ಒಂದ ಕನ್ಯಾದಾಗ ಮೂಗ ಛಂದ ಕಂಡರ ಮತ್ತೊಂದರಾಗ ಕಣ್ಣ ಛಂದ ಕಾಣತದ, ಇನ್ನೊಬ್ಬಕಿ ಒಳಗ ಮತ್ತೊಂದ ಏನರ ಛಂದ ಕಾಣಬಹುದು. ಒಟ್ಟ ಹಂಗ ಕನ್ಯಾ ಪಸಂದ ಮಾಡೋದ ಅಷ್ಟ ಸುಲಭ ಅಲ್ಲಾ, ಆದರ…ಆದರ..ಅದೇಲ್ಲಾ depend ಇರೋದ ನಮ್ಮ ನಮ್ಮ requirements ಮ್ಯಾಲೆ. ಹಂಗ ಎಲ್ಲಾರು ತಮಗ ಐಶ್ವರ್ಯರಾಯನ ಬೇಕಂದ್ರ ಸಿಗಂಗಿಲ್ಲಾ, ನಿರೂಪರಾಯ ಇದ್ದರು adjust ಮಾಡ್ಕೋಂಡ ಹೋಗೊದು ಕಲಿಬೇಕು. ಇರಲಿ, ಅದ ಅವರವರಿಗೆ ಬಿಟ್ಟಿದ್ದು.
ಇನ್ನ ನಾ ಹೆಂಗ ಒಂದ ಹೊಡತಕ್ಕ ಇಷ್ಟ ಸರಳ ಒಂದ ಕನ್ಯಾಕ್ಕ ಹೂಂ ಅಂದೆ ಅನ್ನಲಿಕ್ಕೆ ನನ್ನ requirements ಭಾಳ simple ಇದ್ದವು. ಆವೇಲ್ಲಾ ನಾ ನೋಡಿದ್ದ ಒಂದನೇ ಕನ್ಯಾದೊಳಗ ಇದ್ದವು, ಮುಗದ ಹೋತ.
ನಮ್ಮವ್ವ ಇಪ್ಪತ್ತೈದ ವರ್ಷಗಟ್ಟಲೇ ಸಂಸಾರ ನಡಸಲಿಕ್ಕೆ ನಮ್ಮಪ್ಪನ ಜೊತಿ ದುಡದೊಕಿ, ದಿವಸಾ pressನಾಗ ಎಂಟ ತಾಸ ನಿಂತ composing stick ಹಿಡದ ಅಕ್ಷರದ ಮಳಿ ಜೋಡಿಸಿಗೋತ ತನ್ನ ಜೀವಾ ತೇಯದ ನನ್ನ ಜೀವಾ ತಿಂದ ನನ್ನ ತಲಿ ಒಳಗೂ ನಾಲ್ಕ ಅಕ್ಷರ ಜೋಡಿಸಿ ಇದ್ದಿದ್ದರಾಗ ಶಾಣ್ಯಾ ಮಾಡಿ ಒಂದ levelಗೆ ಹತ್ತೊಹಂಗ ಮಾಡಿದೋಕಿ, ಅಕಿ ಕೆಲಸಾ ಮಾಡ್ಕೋತ ಕಷ್ಟ ಪಟ್ಟ ಸಂಸಾರ ಮಾಡೋದನ್ನ ನಾ ನೋಡಿದ್ದೆ, ಹಿಂಗಾಗಿ ನನಗ ನಂದ ಎಷ್ಟ ಪಗಾರ ಇರವಲ್ತಾಕ ಅಷ್ಟರಾಗ adjust ಮಾಡ್ಕೊಂಡ ಹೋಗೊ ಹೆಣ್ಣ ಬೇಕಾಗಿತ್ತ ಹೊರತು modern educated ಹುಡಗಿ ಅಲ್ಲಾ. ಹಂಗ ನನ್ನ ಅವತ್ತಿನ financial conditionಗೆ ಒಂದ ಸಣ್ಣ-ಪುಟ್ಟ ನೌಕರಿ ಮಾಡೋ ಹುಡುಗಿ ಅವಶ್ಯಕತೆ ಇತ್ತ ಖರೆ, ಆದ್ರ ನನಗ ಅದರಕಿಂತ ನಮ್ಮವ್ವಾ-ಅಪ್ಪಾ ಆರಾಮ ಇರಬೇಕು, ನನ್ನ ಹೆಂಡತಿ ನಂದ ಸೇವಾ ಮಾಡಲಿಲ್ಲಾಂದರ ಎಷ್ಟ ಹೋತ ಅವರ ಇರೋತನಕ ಅವರದರ ಸೇವಾ ಮಾಡ್ಕೋತ ಮನ್ಯಾಗ ಇರಬೇಕು ಅನ್ನೋದ ಮುಖ್ಯ ಇತ್ತು.
ಇನ್ನ ಛಂದ-ಚಾರದ ಬಗ್ಗೆ ನಾ ಭಾಳ ತಲಿಕೆಡಸಿಗೊಂಡಿದ್ದಿಲ್ಲಾ, ಮೊದ್ಲ ನಾನ size zero ಮನಷ್ಯಾ ಇನ್ನ ನನ್ನ ತಕ್ಕ ಒಂದ ಹೆಣ್ಣಾಗಿದ್ದರ ಸಾಕಾಗಿತ್ತ. ಹಂತಾದ ಬೇಕ ಹಿಂತಾದ ಬೇಕ ಅಂತ ಎಂದೂ ತಲಿಕೆಡಸಿಕೊಂಡಂವ ಅಲ್ಲಾ. ಹಂಗ ಅಂತ ನಂಗೇನ fantasy ಇದ್ದಿದ್ದಿಲ್ಲಂತ ಅಲ್ಲಾ, ಆದ್ರ ನಂಗೊತ್ತಿತ್ತ ನಾ ಮಾಧುರಿ, ಕರೀನಾನ ಲಗ್ನ ಮಾಡ್ಕೊಂಡರು ಮಲ್ಲಿಕಾ ಶೆರಾವತನ fantasy ಏನ ತಪ್ಪಂಗಿಲ್ಲಾಂತ. ನಾ ನನ್ನ life levelಗೆ, physiqueಗೆ ಒಪ್ಪೋ ಹಂಗ practical ಆಗಿ ಹುಡಗಿನ select ಮಾಡಿ ಒಂದನೆ ಕನ್ಯಾಕ್ಕ ಜೈ ಅಂದೆ.
ಹಂಗ ಇತ್ತೀಚೀಗೆ ಇತ್ತಿತ್ತಲಾಗಿನ ಹುಡಗ್ಯಾರು, ಅವರ ವೇಷ ಭೂಷಣ ನೋಡಿದಾಗ ನಾನೂ ಇನ್ನೊಂದ ಎರಡ ಕನ್ಯಾ ಕಣ್ಣ ತಂಪ ಮಾಡ್ಕೋಳ್ಳಿಕ್ಕರ ನೋಡಬೇಕಿತ್ತೇನೊ ಅಂತ ಅನಸ್ತು, ಆದರ ಈಗ ಆಗಿದ್ದ ಆಗಿ ಹೋತ.I have no regrets now.
ಇನ್ನ ಆ ಕನ್ಯಾದ್ದ ಬಗ್ಗೆ ಜಾಸ್ತಿ ಹೇಳೋದರಾಗ ಏನ ಅರ್ಥ ಇಲ್ಲಾ, ಯಾಕಂದರ ನೀವ ಈಗಾಗಲೇ ನನ್ನ ಪ್ರಹಸನದಳೊಗ ಅಕಿ ಬಗ್ಗೆ ಓದೇ ಓದಿರಿ, ಮುಂದನೂ ಓದೇ ಓದ್ತೀರಿ. ನನ್ನ deicision ಛಲೋನ ಕೆಟ್ಟೋ ನೀವ ಹೇಳಬೇಕ.
ಆದರ ಮಂದಿ ಇವತ್ತೂ ಅಂತಾರ ‘ನಿಂಗ ಭಾಳ ಛಲೊ ಹೆಂಡತಿ ಸಿಕ್ಕಾಳ ಮಗನ’ ಅಂತ ಹಿಂಗಾಗಿ ನಾ ಭಾಳ ತಲಿಕೆಡಸಿಗೊಳ್ಳಾರದ ಪಾಲಿಗೆ ಬಂದದ್ದ ಪಂಚಾಮೃತ ಅಂತ ಸುಮ್ಮನ ಆಗೇನಿ.