ಇದ ೧೯೯೯-೨೦೦೦ರ ಟೈಮನಾಗಿನ ಮಾತ, ನಮ್ಮ ಒಂದಿಷ್ಟ ದೋಸ್ತರ ಸಿರಿಯಸ್ ಆಗಿ ಲಗ್ನಾ ಮಾಡ್ಕೋಬೇಕು ಅಂತ ಕನ್ಯಾ ನೋಡಲಿಕ್ಕೆ ಶುರು ಮಾಡಿದ್ದರು. ಆವಾಗ ಇವಾಗಿನಗತೆ ಕನ್ಯಾದ್ದ ಶಾರ್ಟೇಜ ಏನ ಇರಲಿಲ್ಲಾ ಹಿಂಗಾಗಿ ಒಂದ ಬಿಟ್ಟ ಇಪ್ಪತ್ತ ಕನ್ಯಾ ನೋಡಿ ಇದ್ದಿದ್ದರಾಗ ಛಂದನ್ವು ಆರಿಸಿ ಮತ್ತ ಅದರಾಗ ಚೀಟಿ ಎತ್ತಿ ಮಾಡ್ಕೋಬಹುದಿತ್ತ. ಅದರಾಗ ನಮ್ಮ ಓಣ್ಯಾಗ ಬ್ರಾಹ್ಮರವು ಒಂದ ನಾಲ್ಕ ವರಾ ಇದ್ದವು. ನನ್ನ ಬಿಟ್ಟ ಮತ್ತ, ಆವಾಗ ನಂಗ ದಣೇಯಿನ ೨೬ ಮುಗದಿದ್ವು ಹಿಂಗಾಗಿ ಇನ್ನು ವರಾ ಅನಿಸಿಗೊಳ್ಳಿಕ್ಕೆ ಟ್ರೇಡಿಶನಲಿ ಎಲಿಜಿಬಲ್ ಆಗಿದ್ದಿಲ್ಲಾ. ಹಂಗ ಆವಾಗಿನ ಕಾಲದಾಗ ಬ್ರಾಹ್ಮರಾಗ ೨೫-೨೬ಕ್ಕ ಲಗ್ನಾ ಮಾಡ್ಕೊಂಡರ ಒಂಥರಾ ಬಾಲ್ಯ ವಿವಾಹ ಮಾಡ್ಕೊಂಡಂಗ ಅನಸ್ತಿತ್ತ.
ನಮ್ಮ ಓಣ್ಯಾಗಿನ ಬ್ರಾಹ್ಮರ ವರಗಳೇಲ್ಲಾ ಪ್ರತಿ ವಾರ ಕನ್ಯಾ ನೋಡ್ತಿದ್ದವು. ಮನ್ಯಾಗ ತಿಂಗಳಿಗೆ ಒಂದ ಐದ ಕೆ.ಜಿ ಅವಲಕ್ಕಿ ಹಚ್ಚಿ ಇಟ್ಟ, ಅರ್ಧಾ ಡಜನ್ ಬಾಳೆ ಹಣ್ಣ, ಒಂದ ಪಾರ್ಲೆ ಬಿಸ್ಕಿಟ್ ಪಾಕೇಟ್ ತಂದ ವಾರಾ ಕನ್ಯಾ ಕರಿಸಿ-ತರಿಸಿ ನೋಡೊದ ಒಂದ ಅವರದ ಕೆಲಸ ಆಗಿ ಬಿಟ್ಟಿತ್ತ. ಒಂದ ಕನ್ಯಾ ಬಂತಿಲ್ಲೊ ಇಡಿ ಓಣಿ ಮಂದಿ ತಮ್ಮ ಮನಿ ಗೇಟ ಮುಂದ ನಿಂತ ಆಟೋದಾಗಿಂದ ಇಳಿಯೋ ಕನ್ಯಾ ನೋಡಿ ಆಮ್ಯಾಲೆ ಆ ಮನಿಯವರಿಗೆ ಫೀಡ ಬ್ಯಾಕ ಕೋಡೊದ, ಆಜು ಬಾಜುದವರ ಸುಳ್ಳ ಸುಳ್ಳ ಅವರ ಮನಿಗೆ ಕನ್ಯಾ ಬಂದಾಗ ಹೆಪ್ಪಿಗೆ ಮಸರ ನೆವಾ ಮಾಡ್ಕೊಂಡ ಹೋಗಿ ಕನ್ಯಾ ನೋಡಿ ಬರೋದು ಆವಾಗ ಕಾಮನ್. ಹಂಗ ನಾ ಏನ ಕನ್ಯಾ ಬಂದ ಮನೀಗೆ ಏನರ ನೇವಾ ಮಾಡ್ಕೊಂಡ ಹೋಗತಿದ್ದಿಲ್ಲಾ ಆದರೂ ಕಳುವಿಲೇ ಕನ್ಯಾ ನೋಡಿ ಫೀಡ ಬ್ಯಾಕ ಕೊಡೊರ ಪೈಕಿ ನಾನೂ ಒಬ್ಬೊಂವ ಇದ್ದೆ ಆ ಮಾತ ಬ್ಯಾರೆ.
ನಮ್ಮ ಬಾಜು ಮನಿ ದೋಸ್ತ ಮನ್ಯಾನೂ ಎಲ್ಲಾರಗತೆ ವಾರಾ ಒಂದೊಂದ ಕನ್ಯಾ ನೋಡ್ತಿದ್ದಾ, ಅವಂಗ ತೋರಸಲಿಕ್ಕೆ ಬಂದ ಕನ್ಯಾ ನಾ ಹೊರಗ ಗೇಟನಾಗ ನಿಂತ ನೋಡ್ತಿದ್ದೆ. ಆ ಮಗಾ ಬ್ಯಾರೆ ನೋಡಲಿಕ್ಕೆ ಒಂದ ಸ್ವಲ್ಪ ರಾಜಕುಮಾರ ಇದ್ದಂಗ ಇದ್ದ, ಮ್ಯಾಲೆ ಕಿರ್ಲೋಸ್ಕರ ನೌಕರಿ, ಅಕ್ಕ ತಂಗ್ಯಾರದ ಕಾಟ ಇರಲಿಲ್ಲಾ, ಅಪ್ಪಾ- ಅಮ್ಮಾ, ಸಣ್ಣ ಸಂಸಾರ, ಹಿಂಗಾಗಿ ಒಂದ ಬಿಟ್ಟ ಹತ್ತ ಕನ್ಯಾ ಆರಿಸಿ ಆರಿಸಿ ಇಡ್ತಿದ್ದಾ. ಅಂವಾ ಪ್ರತಿ ಸರತೆ ಕನ್ಯಾ ನೋಡ್ಬೇಕಾರ ನಂಗ ನೀನು ಬಾ ಅಂತ ಕರಿತಿದ್ದಾ. ಆದರ ನಾ ಅದ ಸರಿ ಕಾಣಂಗಿಲ್ಲಾ ಮ್ಯಾಲೆ ಕನ್ಯಾಕ್ಕ ಎಲ್ಲರ ಯಾರ ವರಾ ಅಂತ ಕನಫ್ಯೂಸ್ ಆಗಬಾರದ ಅಂತ ನಾ ಹೊರಗ ಗೇಟನಾಗ ಇಷ್ಟ ನೋಡಿ ಕೈ ಬಿಡ್ತಿದ್ದೆ. ಅಲ್ಲಾ ಆವಾಗಿನ ನನ್ನ ಪರ್ಸಾನಾಲಿಟಿ ನೋಡಿದ್ರ ನಂಗೇನ ಯಾರ ವರಾ ಅಂತಿದ್ದಿಲ್ಲಾ ಆ ಮಾತ ಬ್ಯಾರೆ. ಹಂಗ ಖರೇ ಹೇಳ್ಬೇಕಂದರ ನಾ ಸ್ವಂತ ನನಗ ಕನ್ಯಾ ನೋಡಬೇಕಾರು ನಾನ ವರಾ ಅಂತ ಕೊಳ್ಳಾಗ ಬೋರ್ಡ ಹಾಕೊ ಬೇಕ ಅಷ್ಟ ಸಣ್ಣಂವ ಇದ್ದೆ, ಸಣ್ಣಂವ ಕಾಣತಿದ್ದೆ. ಅಲ್ಲಾ ಈಗ ಮದುವಿ ಆಗಿ ಹದಿನಾಲ್ಕ ವರ್ಷ ಆದಮ್ಯಾಲೆನೂ ನನ್ನ ಹೆಂಡತಿ ಮುಂದ ನಾನ ಸಣ್ಣಂವ ಕಾಣ್ತೇನಿ ಆ ಮಾತ ಬ್ಯಾರೆ.
ನಮ್ಮಿಬ್ಬರ ಮನಿ ಲೈನ ಒಳಗ ಒಂದ ಹತ್ತ ಮನಿ ಬಿಟ್ಟ ಇನ್ನೊಬ್ಬಂವ ಕುಲಕರ್ಣಿ ಅಂತ ಇದ್ದಾ. ಅವಂಗ ಆವಾಗ ಮೂವತ್ತೈದ ದಾಟಿದ್ವು, ಅವಂದೊಂದ ತಾರಿಹಾಳ ಇಂಡಸ್ಟ್ರಿಯಲ್ ಏರಿಯಾದಾಗ ಸಣ್ಣ ಫ್ಯಾಕ್ಟರಿ ಇತ್ತ, ಮನ್ಯಾಗ ಒಬ್ಬನ ಇರ್ತಿದ್ದ. ಅವನು ಒಂದ ವರಾ, ಡೇಟ್ ಬಾರ್ ಆಗಿದ್ದ ವರಾ ಅನ್ನರಿ. ಅಂವಾ ಒಂದ ಐದ ವರ್ಷದಿಂದ ಕನ್ಯಾ ಆರಿಸಿಗೊತ ಹೊಂಟಿದ್ದಾ. ಅಂವಾ ತನಗ ಒಂದ ಸ್ವಲ್ಪ ಜ್ಯುಬಿಲಿಯಂಟ್ ಪರ್ಸಾನಲಿಟಿ ಇದ್ದ ಹುಡಗಿನ ಬೇಕ, ಇಲ್ಲಾ ಸರ್ಕಾರಿ ನೌಕರಿ ಇದ್ದ ಹುಡಗಿನ ಬೇಕು ಅಂತ ಹುಡ್ಕೋತ ಹೊಂಟಿದ್ದಾ. ಬರೇ ಅಷ್ಟ ಆಗಿದ್ದರ ಅವಂಗ ಕನ್ಯಾ ಲಗೂನ ಸಿಗ್ತಿತ್ತೊ ಏನೊ ಆದರ ಅವನ ಕನ್ಯಾದ್ದ ರಿಕ್ವೈರ್ಡ್ ಸ್ಪೆಸಿಫಿಕೇಶನ್ ಭಾರಿ ಇತ್ತ. ೩೬-೨೪-೩೬ ಅಂದರ ೩೬-೨೪-೩೬ ಇರಬೇಕು, ಅದು ಅದ ಆರ್ಡರ ಒಳಗ ಇರಬೇಕು, ಒಂದ ಎಮ್.ಎಮ್ ಹೆಚ್ಚು ಕಡಮಿ ಆಗೊಹಂಗ ಇರಲಿಲ್ಲಾ. ನೋಡಲಿಕ್ಕೆ ಮಾಧುರಿ ಇಲ್ಲಾ ಶ್ರೀದೇವಿ ಲೆವೆಲಗೆ ಇರಬೇಕು, ಹಂಗ – ಹಿಂಗ ಅಂತ ನೂರಾ ಎಂಟ ರಿಕ್ವೈರಮೆಂಟ ಇತ್ತ ಆ ಕುಲಕರ್ಣಿದ.
ಅವನು ಪ್ರತಿ ವಾರ ಬ್ಯಾರೆ ವರಗೊಳ ಗತೆ ಕನ್ಯಾ ನೋಡ್ತಿದ್ದಾ. ಆದರ ಅವರ ಮನಿ ಒಳಗ ಯಾರ ಇಲ್ಲಾ ಅಂತ ಇಂವಾ ತಾನ ಕನ್ಯಾ ಇದ್ದಲ್ಲೇ ಅವರ ಅಕ್ಕಾ ಮಾಮಾನ ಕರಕೊಂಡ ಹೋಗಿ ನೋಡಿ ನೋಡಿ ಬರತಿದ್ದಾ. ಹಿಂಗಾಗಿ ಅಂವಾ ರಿಜೆಕ್ಟ ಮಾಡಿದ್ದ ಕನ್ಯಾದ್ದ ಸ್ಪೆಸಿಫಿಕೇಶನ್ ನೋಡಲಿಕ್ಕೆ ನಂಗ ಆಗಲಿ ನಮ್ಮ ದೋಸ್ತರಿಗೆ ಆಗಲಿ ಆಗತಿದ್ದಿಲ್ಲಾ. ಅಲ್ಲಾ ಆ ಭಾಗ್ಯ ಸಿಗತಿದ್ದಿಲ್ಲಾ ಅಂದರೂ ಅಡ್ಡಿಯಿಲ್ಲಾ.
ನಾನು ಮನ್ಯಾ ಕೂಡಿ ಅವಂಗ ಕನ್ಯಾ ಒಳಗ ಏನ ನೋಡಬೇಕು, ಏನ ನೋಡಬಾರದು? ಹೆಂಗ ಕನ್ಯಾದ್ದ ಜೊತಿ ಮಾತಾಡಬೇಕು, ಏನೇನ ಮಾತಾಡಬೇಕು ಅಂತ ಕೇಳತಿದ್ದವಿ. ಅಲ್ಲಾ, ಅಂವಾ ಅದರಾಗ ಎಕ್ಸಪರ್ಟ ಅಲಾ ಅದಕ್ಕ. ಖರೇ ಹೇಳ್ತೇನಿ ಆವಾಗ ನನಗಂತು ೩೬-೨೪-೩೬ ಅಂದರ ಏನ ಅನ್ನೋದ ಗೊತ್ತ ಆಗ್ತಿದ್ದಿಲ್ಲಾ, ಯಾವದ ೩೬ ಇರಬೇಕು, ಯಾವದ ೨೪ ಇರಬೇಕು ಅನ್ನೋದ ಭಾಳ ಕನಫ್ಯೂಸನ ಇರ್ತಿತ್ತ. ಹಂಗ ಆವಾಗ ನನ್ನ ಸೈಜ್ ೨೩-೨೨-೨೧ ಇತ್ತ, ಹೇಳಿ ಕೇಳಿ ಸೈಜ್ ಝಿರೊ ಮನಷ್ಯಾ ನಾ, ಇನ್ನ ನನ್ನ ಹಂತಾವಂಗ ೩೬-೨೪-೩೬ ಎಲ್ಲೆ ತಿಳಿಬೇಕ. ಆ ಕುಲಕರ್ಣಿಗೆ ಹಿಂತಾ ವಿಷಯ ತಗದರ ಸಾಕ ಭಾರಿ ಉಮೇದಿಲೆ ಎಲ್ಲಾ ಡಿಟೇಲ್ಸ ಹೇಳ್ತಿದ್ದಾ. ಅಂವಾ ಎಷ್ಟ ಡೀಪ ಸ್ಟಡಿ ಮಾಡ್ಯಾನಲಾ ಕನ್ಯಾದ್ದ ಬಗ್ಗೆ ಅಂತ ನಮಗ ಖರೇನ ಅವನ ಬಗ್ಗೆ ಹೆಮ್ಮೆ ಅನಸ್ತಿತ್ತ. ಆ ಮಗಾ ಹಿಂಗ ಎಲ್ಲಾನೂ ಎಮ್.ಎಮ್. ಲೇವಲನಾಗ ನೋಡಿ ನೋಡಿನ ಅವಂಗ ಒಂದು ಕನ್ಯಾನು ಪಸಂದ ಬರವಲ್ವು ಅಂತ ನಮಗ ಗ್ಯಾರಂಟಿ ಆಗಿತ್ತ.
ಇತ್ತಲಾಗ ನಮ್ಮ ಮನ್ಯಾಂದ ತಿಂಗಳಿಗೆ ಎರಡ ಇಲ್ಲಾ ಮೂರ ಕನ್ಯಾ ನೋಡೊದ ಚಾಲ್ತಿ ಇತ್ತ, ಕಡಿಕೆ ಒಂದಿ ದಿವಸ
’ಲೇ, ಒಂದ ಗದಗದ ಕನ್ಯಾ ನೋಡೇವಿ, ಬಹುಶಃ ಅದ ಫೈನಲ್ ಆಗೊ ಹಂಗ ಕಾಣ್ತದ, ಮಾತು ಕತಿ ಮುಗದ ಮ್ಯಾಲೆ ಎಲ್ಲಾರಿಗೂ ಹೇಳೋದ. ಅಲ್ಲಿ ತನಕಾ ನೀ ಯಾರ ಮುಂದ ಬಾಯಿ ಬಿಡಬ್ಯಾಡ’ ಅಂತ ನಂಗೊಬ್ಬವಂಗ ಸೂಕ್ಷ್ಮ ಹೇಳಿ ಇಟ್ಟಿದ್ದಾ. ಅಲ್ಲಾ ಅಂವಾ ಹಂಗ ಹೇಳೊದರಾಗ ಕಾರಣ ಇತ್ತ. ಏನಿಲ್ಲದ ಓಣ್ಯಾಗ ನಾಲ್ಕೈದ ವರಗಳೊ, ಪ್ರತಿ ವರಾನು ಒಂದ ಕನ್ಯಾ ಬಂದ ಹೋದ ಕೂಡಲೇ, ’ಅಕಿ ಹಿಂಗ ಇದ್ಲು, ಇಕಿ ಹಂಗ ಇದ್ದಾಳ, ಕನ್ಯಾಕಿಂತ ಕನ್ಯಾದ್ದ ತಂಗಿ ಭಾರಿ ಇದ್ದಾಳ, ಹಂಗ ಹಿಂಗ’ ಅಂತ ಎಲ್ಲಾ ದೋಸ್ತರ ಜೊತಿ ಹುಚ್ಚುಚಾಕಾರ ಡಿಸ್ಕಸ್ ಮಾಡೋರು ಅದರಾಗ ಉಳದವರಿಗೆ ಇನ್ನು ಕನ್ಯಾ ಸಿಕ್ಕಿದ್ದಿಲ್ಲಾ, ಹಂತಾದರಾಗ ಇವಂದ ಒಂದ ಫಿಕ್ಸ್ ಅಂದ ಬಿಟ್ಟರ ಪಾಪ ಅವರಿಗೆ ಸರಿ ಅನಸಂಗಿಲ್ಲಾ ಅಂತ ಅವನ ವಿಚಾರ ಇತ್ತ. ಮುಂದ ಒಂದ ಹದಿನೈದ ದಿವಸಕ್ಕ ಎಂಗೇಜಮೇಂಟ್ ಡೇಟ್ ಫಿಕ್ಸ್ ಮಾಡ್ಕೊಂಡ ಎಲ್ಲಾ ದೋಸ್ತರನ ಕರಕೊಂಡ ಹೋದಾ.
ಸರಿ, ನಮಗೇನ ಎಂಗೇಜಮೆಂಟಗೆ ಗಿಫ್ಟ ಏನ ಕೋಡೊದ ಇರಂಗಿಲ್ಲಾಂತ ಎಲ್ಲಾ ದೋಸ್ತರು ಹೋದ್ವಿ. ನಮ್ಮ ಕುಲಕರ್ಣಿನೂ ಎಂಗೇಜಮೆಂಟಗೆ ಬಂದಿದ್ದಾ. ಅವಂಗ ಯಾರದರ ಮದ್ವಿ ಅವನಕಿಂತಾ ಮೊದ್ಲ ಫಿಕ್ಸ ಆದರ ಹೊಟ್ಯಾಗ ಒಂಥರಾ ಹುಳಿ ಪಳದೆ ಹಾಕಿ ಕಲಸಿದಂಗ ಆಗ್ತಿತ್ತ. ಹಿಂಗಾಗೆ ಅವತ್ತ ಪೂರ್ತಿ ಹೊತ್ತಿದ್ದ ಝುಣಕದ ಮಾರಿ ಮಾಡ್ಕೊಂಡ ಇದ್ದಾ. ಅಲ್ಲಾ ಹಂಗ ಅಂವಾ ತಾ ಕನ್ಯಾ ಆರಿಸ್ಗೋತ ಕೂತ ಉಳದವರದ ಫಿಕ್ಸ್ ಆದರ ಯಾರ ಏನ ಮಾಡಬೇಕ ಬಿಡ್ರಿ.
ಮುಂದ ಒಂದ ವಾರ ಆದ ಮ್ಯಾಲೆ ಮನ್ಯಾಗ ನಾವೇಲ್ಲಾ ಎಂಗೇಜಮೆಂಟ ಪಾರ್ಟಿ ಅಂತ ಗಂಟ ಬಿದ್ದ ಕರಕೊಂಡ ಹೋದ್ವಿ, ಅವತ್ತು ಕುಲಕರ್ಣಿ ಬಂದಿದ್ದಾ. ಒಂದ ಸಿಕ್ಸ್ಟಿ ಬಿದ್ದ ಮ್ಯಾಲೆ ನಮ್ಮ ಮನ್ಯಾ ತನ್ನ ಹುಡಗಿ ಹೆಂಗ ಇದ್ದಾಳ ಅಂತ ದೋಸ್ತರಿಗೆ ಫೀಡಬ್ಯಾಕ್ ಕೇಳಿದಾ. ಅಲ್ಲಾ ಫಿಕ್ಸ್ ಆದಮ್ಯಾಲೆ ಕೇಳಿದರ ಯಾರ ಏನ ಹೇಳ್ತಾರ, ಛಲೋನ ಅಂತ ಹೇಳ್ಬೇಕು ಹಿಂಗಾಗಿ ಎಲ್ಲಾರೂ ಛಲೋನ ಇದ್ದಾಳ ಅಂತ ಹೇಳಿದರು. ಮ್ಯಾಲೆ ಆ ಪಾರ್ಟಿ ಬ್ಯಾರೆ ಅವಂದ ಇತ್ತ, ಎಲ್ಲೆ ಅಕಿ ಹಂಗ ಇದ್ದಾಳ ಹಿಂಗ ಇದ್ದಾಳ ಅಂತ ಹೇಳಿ ಪಾರ್ಟಿ ಬಿಲ್ ಸಪರೇಟ ಮಾಡಿಸಿಗೊಳ್ಳೊದು ಅಂತ ನಮ್ಮ ವಿಚಾರ. ಕಡಿಕೆ ಮನ್ಯಾ ನಮ್ಮ ಒಳಗ ಎಲ್ಲಾರಕಿಂತ ಕನ್ಯಾದ ಬಗ್ಗೆ ತಿಳ್ಕೊಂಡೊಂವಾ ಕುಲಕರ್ಣಿ ಅಂತ ಅವಂಗ ಕೇಳಿ ಬಿಟ್ಟ. ಆ ಮಗಾ ಮೊದ್ಲ ಮಾರಿ ಗಡತರ ಮಾಡ್ಕೊಂಡ ಪಾರ್ಟಿಗೆ ಬಂದಿದ್ದಾ ಅವಂಗ ಮನ್ಯಾನ್ನ ಹುಡಗಿ ಬಗ್ಗೆ ಒಪಿನಿಯನ್ ಕೇಳಿದ ಕೂಡ್ಲೆ ಸಿಟ್ಟ ಬಂದ ಬಿಡ್ತ. ಅಂವಾ ಸೀದಾ ಮನ್ಯಾಗ
“ಅಲ್ಲಲೇ, ನೀ ಎಲ್ಲಾ ಬಿಟ್ಟ ನಾ ನೋಡಿದ್ದ ಕನ್ಯಾ ಯಾಕ ಮಾಡ್ಕೊಂಡಿ” ಅಂದ ಬಿಟ್ಟಾ.
ಅಲ್ಲಿ ತನಕಾ ನಮಗ ಯಾರಿಗೂ ಅಂವಾ ಈ ಕನ್ಯಾನೂ ನೋಡಿದ್ದಾ ಅನ್ನೋದ ಗೊತ್ತ ಇರಲಿಲ್ಲಾ. ಅಲ್ಲಾ, ಹಂಗ ನಮಗ ಗೊತ್ತಿತ್ತ ಹುಬ್ಬಳ್ಳಿ ಸುತ್ತ ಮುತ್ತಲ ೧೦೦ ಕಿ.ಮಿ ಏರಿಯಾ ಒಳಗ ಕುಲಕರ್ಣಿ ಕಣ್ಣ ಹಾಕಲಾರದ ಬ್ರಾಹ್ಮರವು ಕನ್ಯಾ ಯಾವು ಇಲ್ಲಾ ಅಂತ ಆದರೂ ಮನ್ಯಾನ್ನ ಕನ್ಯಾನೂ ಇಂವಾ ನೋಡಿದ್ದ ಅನ್ನೋದ ನಮಗ ಯಾರಿಗೂ ಗೊತ್ತ ಇದ್ದಿದ್ದಿಲ್ಲಾ. ಆ ಮಗಗ ತಾ ನೋಡಿ ರಿಜೆಕ್ಟ ಮಾಡಿದ್ದ ಕನ್ಯಾ ಮನ್ಯಾ ಹೂಂ ಅಂದ ಫಿಕ್ಸ ಮಾಡ್ಕೊಂಡಿದ್ದ ಮನಸ್ಸಿಗೆ ಹತ್ತಿ ಬಿಟ್ಟಿತ್ತ. ನಂಗ ಆವಾಗ ಅನಸಲಿಕತ್ತ ಯಾಕ ಈ ಮಗಾ ಮನ್ಯಾನ್ನ ಎಂಗೇಜಮೆಂಟ್ ಆದಾಗಿಂದ ಇಷ್ಟ ಮಾನಸಿಕ ಆಗ್ಯಾನ ಅಂತ. ಮತ್ತ ನಾನ ಸಮಾಧಾನ ಮಾಡಲಿಕ್ಕೆ
“ಆತ ಬಿಡ ದೋಸ್ತ ಆಗಿದ್ದ ಆಗಿ ಹೋತ, ಹಂಗ ಲಗ-ಬಗ ಇತ್ತಲಾಗಿನ ಎಲ್ಲಾ ಕನ್ಯಾನೂ ನೀ ನೋಡಿ ಬಿಟ್ಟಿದ್ವ, ನೀ ಕನ್ಯಾ ಆರಿಸಿದಂಗ ಎಲ್ಲಾರೂ ಕನ್ಯಾ ಆರಿಸ್ಗೋತ ಕೂತ್ರ ಯಾರದೂ ಲಗ್ನ ಆಗಲಿಕ್ಕಿಲ್ಲಾ, ನೀ ಯಾಕ ಅಷ್ಟ ತಲಿ ಕೆಡಸ್ಗೋತಿ ಮತ್ತೊಂದ ಕನ್ಯಾ ನೋಡವಂತಿ ತೊಗೊ” ಅಂತ ನಾ ಅಂದೆ.
ಅಷ್ಟರಾಗ ನಮ್ಮ ಮನ್ಯಾಗ ಅಂವಾ ನೋಡಿ ಬಿಟ್ಟಿದ್ದ ಕನ್ಯಾ ತಾ ಮಾಡ್ಕೊಳಿಕತ್ತೇನಲಾ ಅಂತ ತಲಿ ಕೆಟ್ಟ, ಒಂದ ಥರ್ಟಿ ಒಂದ ಶಾಟನಾಗ ಜಗ್ಗಿ
“ಅಲ್ಲಪಾ, ನಿಂಗ್ಯಾರ ಮಾಡ್ಕೋಬ್ಯಾಡ ಅಂದಿದ್ದರ ಅಕಿಗೆ, ನೀ ಯಾಕ ಅಕಿಗೆ ರಿಜೆಕ್ಟ ಮಾಡಿದೆ, ಹಂತಾದ ಏನ ಕಡಿಮಿ ಆಗೇದ ಅಕಿದರಾಗ” ಅಂತ ಕೇಳಿ ಬಿಟ್ಟಾ. ತೊಗೊ ಕುಲಕರ್ಣಿಗೆ ಬರೆ ಥಮ್ಸ ಅಪ್ ಕುಡದ ಏರಿತ್ತ್
“ಲೇ, ಮಗನ ನಾ ಅಕಿಗೆ ಫೆಮಿನೈನ ಫೀಚರ್ಸ್ (feminine features ) ಇಲ್ಲಾ ಅಂತ ರಿಜೆಕ್ಟ ಮಾಡಿದ್ದೆ” ಅಂದ ಬಿಟ್ಟಾ.
ಇನ್ನ ಫೆಮಿನನ್ ಫೀಚರ್ಸ ಅಂದರ ಏನು, ಅಕಿಗೆ ಅದರಾಗ ಯಾವ ಯಾವ ಫೀಚರ್ಸ್ ಇಲ್ಲಾ ಅಂತ ನಾವ್ಯಾರು ಕುಲಕರ್ಣಿಗೆ ಕೇಳಲಿಕ್ಕೆ ಹೋಗಲಿಲ್ಲಾ, ಹಂಗ ಅಂವಾ ಅದರ ವಿವರಣೆ ಭಾಳ ಛಂದ ಕೊಡ್ತಾನ ಅಂತ ನಮಗ ಗೊತ್ತಿತ್ತ, ಆದರ ಮನ್ಯಾ ಇದ್ದಾಗ ಅವನ ಮುಂದ ಕೇಳಲಿಕ್ಕೆ ಸರಿ ಕಾಣಸಂಗಿಲ್ಲಾ ಅಂತ ನಾ ಸುಮ್ಮನಾದೆ.
ಅವತ್ತ ಲಾಸ್ಟ ಮನ್ಯಾ ಕುಲಕರ್ಣಿ ಜೊತಿ ಮಾತಾಡಿದ್ದು ಇವತ್ತಿಗೂ ಇಬ್ಬರೂ ಒಂದ ಓಣ್ಯಾಗ ಇದ್ದರು ಮಾತಾಡಂಗಿಲ್ಲಾ. ಹಂಗ ಆ ಫೆಮಿನನ್ ಫೀಚರ್ಸ್ (feminine features ) ಇಲ್ಲದ ಮನ್ಯಾನ ಹೆಂಡತಿ ಮುತ್ತಿನಂತಾ ಎರಡ ಮೇಲ ಫೀಚರ್ಸ್ ಇರೊ ಗಂಡ ಹಡದಾಳ. ಆದರ ನಮ್ಮ ಕುಲಕರ್ಣಿ ಮಾತ್ರ ಇನ್ನು ಕನ್ಯಾ ಒಳಗ ಫೆಮಿನನ್ ಫೀಚರ್ಸ್, ಐಡಿಯಲ್ ಫಿಗರ್ ಅದು- ಇದು ಅಂತ ಹುಡಕ್ಯಾಡ್ಕೋತ ಹೊಂಟಾನ. ಅಲ್ಲಾ ಆವಾಗ ಲಗ್ನ ಆಗಲಾರದಂವಾ ಈಗೇನ ತಲಿ ಆಗ್ತಾನ..ಬರಬರತ ವಯಸ್ಸ ಹೋದಂಗ ಹೋದಂಗ ಇವಂಗ ಇರೋ ಒಂದ್ಯಾರಡ ಮೇಲ್ ಫೀಚರ್ಸ ಸಹಿತ ಕಡಮಿ ಆಕ್ಕೋತ ಹೊಂಟಾವ ಇತ್ತಲಾಗ ಬ್ರಾಹ್ಮರಾಗ ಕನ್ಯಾದ್ದ ತಳಿನೂ ಕಡಮಿ ಆಕ್ಕೋತ ಹೊಂಟದ.
ಹಂಗ ಒಬ್ಬರ ನೋಡಿದ್ದ ಕನ್ಯಾ ಇನ್ನೊಬ್ಬರ ನೋಡಿ ಮಾಡ್ಕೊ ಬಾರದಂತೇನ ಜಗತ್ತಿನಾಗ ನಿಯಮ ಇಲ್ಲಾ. ಇದ ಸಹಜ ಪ್ರಕ್ರಿಯೆ. ನಮ್ಮ ಕಾಕುನ್ನ ನಿಮ್ಮ ಕಾಕಾ ನೋಡಿರ್ತಾನ, ನಿಮ್ಮ ಅತ್ಯಾನ್ನ ನಮ್ಮ ಮಾಮಾಗ ತೋರಿಸಿರ್ತಾರ, ನಮ್ಮಜ್ಜ ನಿಮ್ಮಜ್ಜಿಗೆ ಲೈನ ಹೊಡದಿರ್ತಾನ ಹಿಂತಾವೆಲ್ಲಾ ಸಹಜ. ಆದರ ಒಂದ ಮಜಾ ಅಂದರ ಒಂದಿಷ್ಟ ವರ್ಷ ಆದ ಮ್ಯಾಲೆ ಒಂದ ಕಾಲದಾಗ ವರಾ- ಕನ್ಯಾ ಇದ್ದೋರ ಬ್ಯಾರೆ ವರ- ಕನ್ಯಾನ್ನ ಕಟಕೊಂಡ ಎಲ್ಲರ ಅಕಸ್ಮಾತ ಭೆಟ್ಟಿ ಆದರಪಾ ಅಂದರ ’ಎಲ್ಲೋ ನೋಡಿದ್ನೇಲ್ಲಾ’ ಅಂತ ವಿಚಾರ ಮಾಡಿ ’ಹಾಂ. ಇಕಿನ್ನ ನಂಗ ತೋರಿಸಿದ್ರು’ಅಂತ ನೆನಪಾಗತದಲಾ ಆವಾಗ ಮತ್ತ ಹಳೇ ನೆನಪೆಲ್ಲಾ ಬರತಾವ. ಅಲ್ಲಾ ಹಂಗ ಸಿಕ್ಕಾ ಪಟ್ಟೆ ಕನ್ಯಾ ನೋಡಿದವರಿಗೆ ಕನ್ಯಾದ್ದ ಮಾರಿ ನೆನಪ ಇರಂಗಿಲ್ಲಾ ಆ ಮಾತ ಬ್ಯಾರೆ.
ನಮ್ಮ ಇನ್ನೊಬ್ಬ ದೋಸ್ತ ಒಂದ ಕನ್ಯಾ ನೋಡಿ ಒಲ್ಲೆಂದ ಐದ ವರ್ಷದ ಮ್ಯಾಲೆ ಆ ಕನ್ಯಾದ್ದ ತಂಗಿನ್ನ ನೋಡಿ ಲಗ್ನ ಮಾಡ್ಕೊಂಡಾ. ಅಲ್ಲಾ ಆ ಐದ ವರ್ಷದಾಗ ಇಂವಾ ಮತ್ತೊಂದ ನೂರ ನೂರಾ ಐವತ್ತ ಕನ್ಯಾ ನೋಡಿದ್ದಾ ಆ ಮಾತ ಬ್ಯಾರೆ. ಅವಂಗ ಆ ತಂಗಿನ್ನ ನೋಡಲಿಕ್ಕೆ ಹೋದಾಗ ಅನಸ್ತ ಅಂತ ಈ ಮನಿಗೆ ನಾ ಐದ ವರ್ಷದ ಹಿಂದ ಕನ್ಯಾ ನೋಡಲಿಕ್ಕೆ ಬಂದಿದ್ದೆ ಅಂತ. ಆ ಅಕ್ಕಗೂ ಇವನ್ನ ನೋಡಿದಾಗೊಮ್ಮೆ ಎಲ್ಲೊ ನೋಡೇನಿ ಎಲ್ಲೋ ನೋಡೇನಿ ಅನಸೋದಂತ ಆದರ ಎಲ್ಲೆ ನೋಡೇನಿ ಅನ್ನೋದ ಗೊತ್ತಾಗವಲ್ತಾಗಿತ್ತ. ಕಡಿಕೆ ನಮ್ಮ ದೋಸ್ತ ತಂದ ಲಗ್ನ ಆಗಿ ಹನಿಮೂನಗೆ ಹೋಗಿ ಬಂದ ಮ್ಯಾಲೆ ಆ ಅಕ್ಕಗ ಹೇಳಿದ್ನಂತ ನಾ ಕನ್ಯಾ ನೋಡಲಿಕ್ಕೆ ಶುರು ಮಾಡಿದ ಹೋಸ್ದಾಗಿ ನಿನ್ನ ನಂಗ ತೋರಿಸಿದ್ದರು ಅಂತ. ಆವಾಗ ಆ ಅಕ್ಕಗೂ ನೆನಪಾತ ಪಾಪ. ಅಷ್ಟರಾಗ ಇಂವಾ ತಂಗಿ ಜೊತಿ ಹನಿಮೂನ ಮುಗಿಸಿಕೊಂಡ ಬಂದ ಅಕಿ ತಿರಗಿ ಹುಣಸಿ ಹಣ್ಣಿನ ಟೊಕ್ಕ ತಿನ್ನಲಿಕತ್ತಿದ್ಲು.
ಮುಂದ ಅದ ಹೆಂಗೊ ಅವರಕ್ಕನ ಗಂಡಗ ಗೊತ್ತಾಗಿ ಅಂವಾ ಇವಂಗ ಮನಿಗೆ ಕರೆಯೋದ ಬಿಟ್ಟ ಬಿಟ್ಟಾ. ಇವತ್ತು ಇಬ್ಬರು ಷಡ್ಕರು ಒಬ್ಬರಿಗೊಬ್ಬರ ಷಟಕೊಂಡ ಅಡ್ಡಾಡ್ತಾರ. ಅಲ್ಲಾ ಅದರಾಗ ನಮ್ಮ ದೋಸ್ತಂದರ ತಪ್ಪ ಏನ ಬಿಡ್ರಿ. ಹಂಗ ನೋಡಿದರ ಇದರಾಗ ತಪ್ಪ ಯಾರದು ಇಲ್ಲಾ. ಎಲ್ಲಾ ತಪ್ಪ ಇರೋದ ಆ ದೇವರದ, ಅದೇನೋ ಹೇಳ್ತಾರಲಾ ಆ ದೇವರ ಮೊದ್ಲ ನಮ್ಮ ಹೆಸರಿಲೆ ಕಗ್ಗಂಟ ಹಾಕಿ ಇಟ್ಟಿರ್ತಾನ ಅಂತ. ಎಲ್ಲಾ ಅವನದೆ ಮಾಯ.
Wow good article,
ಮಸ್ತ ಬದಿ೯ರಿ
Woooooooooooooooooow superrrrrrrrrrrrrrr story in Uttarkannada language. Happy to read the same. I am a big fan of you Sir
Sir your articles are soooperb .I really enjoy reading them. The way your thoughts are expressed 👌👌👌 really nice sir