’ನಾ ಸೀರಿ ಉಟ್ಕೊಳೊದರಾಗ, ನೀವು ಸಂತಿ ತೊಗೊಂಡ ಬರ್ರಿ’

“ರ್ರಿ, ಒಂದ ಕೆಲಸಾ ಮಾಡ್ರಿ, ಪಟ್ಟ ಅಂತ ಹೇಳಿ ನಾ ಸೀರಿ ಉಟ್ಕೋಳೊದರಾಗ ನೀವು ಇಲ್ಲೆ ಸಂತಿಗೆ ಹೋಗಿ ಒಂದ ನಾಲ್ಕ ಕಾಯಿಪಲ್ಯಾ, ಲಿಂಬೆ ಹಣ್ಣ, ಕೊತಂಬರಿ ತಂದ ಬಿಡ್ರಿ, ಮತ್ತ ಇವತ್ತ ಆಗಲಿಲ್ಲಾಂದ್ರ ಒಂದ ವಾರ ಗಟ್ಟಲೇ ಆಗಂಗಿಲ್ಲಾ” ಅಂತ ನಿನ್ನೆ ನನ್ನ ಹೆಂಡತಿ ನಂಗ ಗಂಟ ಬಿದ್ಲು.
ಅದೇನ ಆಗಿತ್ತಂದರ ನಮ್ಮ ಪೈಕಿ ಒಬ್ಬರ ಮನ್ಯಾಗ ಸತ್ಯಾನಾರಯಣ ಪೂಜಾ ಇತ್ತ, ದಂಪತ್ತ ಬರ್ರಿ ಅಂತ ಕರದಿದ್ದರು. ಅದರಾಗ ಸಂಡೆ ಇದ್ದಿದ್ದರಿಂದ ನಂಗ ತಪ್ಪಿಸಿಗೊಳ್ಳಿಕ್ಕೆ ಏನ ನೆವಾ ಇದ್ದಿದ್ದಿಲ್ಲಾ ಹಿಂಗಾಗಿ ನಾನ ನನ್ನ ಹೆಂಡ್ತಿ ಜೊತಿಗೆ ಹೋಗಬೇಕಿತ್ತ. ಆದರ ನಮ್ಮ ಮನ್ಯಾಗ ನಾವ ಸಂತಿ ಮಾಡೋದ ಸಂಡೆಕ್ಕೊಮ್ಮೆ ಇಷ್ಟ, ಇನ್ನ ನಾವಿಬ್ಬರು ಹೊರಗ ಹೋದರ ಸಂತಿ ತರೋರ ಯಾರ, ಮುಂದ ವಾರಾನ ಗಟ್ಟಲೇ ಬರೇ ಅನ್ನಾ ಬ್ಯಾಳಿ ತಿನ್ನೊಹಂಗ ಆಗಬಾರದಲಾ? ಇಲ್ಲಾ ಮುಂದ ಒಂದಕ್ಕ ಹತ್ತ ರೊಕ್ಕಾ ಕೊಟ್ಟ ಸಿಟಿ ಒಳಗ ಹೋಗಿ ಕಾಯಿಪಲ್ಯಾ ತರಬೇಕಾಗ್ತಿತ್ತ. ಹಿಂಗಾಗಿ ಪಾಪ ಅಕಿಗೆ ಮನಿ ಬಗ್ಗೆ ಭಾಳ ಕಾಳಜಿಯಲಾ ಅದಕ್ಕ ತಾ ಸೀರಿ ಉಟ್ಕೋಳೊದರಾಗ ನಂಗ ಸಂತಿ ತೊಗೊಂಡ ಬರ್ರಿ ಅಂದ್ಲು.
ಅಲ್ಲಾ ಹಂಗ ಏನ ಅಗದಿ ನಮ್ಮ ಮನಿ ಕಂಪೌಂಡಿಗೆ ಸಂತಿ ಹಚ್ಚಿರತಾರ ಇಲ್ಲಾ ಇಕಿ ಏನ ಸಂತ್ಯಾಗ ಸೀರಿ ಉಟ್ಕೋಳಿಕತ್ತಾಳೇನು ಅಕಿ ಸೀರಿ ಉಟ್ಕೋಳೊದರಾಗ ಸಂತಿ ತರಲಿಕ್ಕೆ ಅಂತ ಕೇಳಬ್ಯಾಡರಿ, ಹಂಗ ಸಂತಿ ಇರೋದ ಬರೊಬ್ಬರಿ ನಮ್ಮ ಮನಿಯಿಂದ ಒಂದೂವರಿ ಕಿ.ಮಿ ದೂರ ಕೆ.ಇ.ಸಿ ಹತ್ತರ, ಆದರ ಇಕಿ ಸೀರಿ ಉಟ್ಕೋಳೊದೇನ ಅದ ಅಲಾ ಅದ ಎಷ್ಟ ಲಗೂ ಆಗ್ತದ ಅಂದ್ರ, ಅಕಿ ಸೀರಿ ಉಟ್ಕೋಳೊದರಾಗ ಒಂದ ವಾರದ್ದೇನ ಒಂದ ತಿಂಗಳದ್ದ ಸಂತಿ ತರಬಹುದು, ಅದಕ್ಕ ಅಕಿ ಹಂಗ ಅಂದಿದ್ದು.
ಅಲ್ಲಾ, ಈಗ ಅದು ರೂಡಿ ಬಿದ್ದ ಬಿಟ್ಟದ ಬಿಡ್ರಿ. ಮೊದ್ಲ ಅಂತೂ ಅಕಿ ಸೀರಿ ಉಟ್ಕೋಳಿಕ್ಕೆ ಹೊಂಟಳು ಅಂದರ ಇಷ್ಟ ಟಾರ್ಚರ ಆಗತಿತ್ತಲಾ, ಅಯ್ಯಯ್ಯ..ಕೇಳ ಬ್ಯಾಡ್ರಿ. ಈಕಿ ಸೀರಿ ಉಟ್ಕೋಳಿಕ್ಕೆ ರೂಮಿನಾಗ ಹೊಕ್ಕಳ ಅಂದ್ರ ಮುಗದ ಹೋತ, ಅದು ಬಾಗಲ ಬೋಲ್ಟ ಹಾಕ್ಕೊಂಡ ಉಟ್ಕೊಳೊದ ಬ್ಯಾರೆ
“ಲೇ, ನಾನಲೇ, ನಿನ್ನ ಗಂಡಾ, ಬಾಗಲ ತಗಿ ನಂಗ ಅರ್ಜೆಂಟ ಪ್ಯಾಂಟ ಹಾಕ್ಕೊಂಡ ಹೋಗಬೇಕಾಗೇದ” ಅಂದ್ರನೂ..ಹೂಂ..ಹೂಂ.. ಬಾಗಲ ತಗದ ಕೇಳ್ರಿ. ನಂಗ ಖರೇನ ಹೇಳ್ತೇನಿ ಒಂದ ಅರ್ಥ ಆಗಲಾರದ್ದ ಅಂದರ ಈ ಹೆಂಡಂದರ ಸೀರಿ ಕಳಿಬೇಕಾರ ಗಂಡ ಬಾಜು ಇದ್ದರ ನಡಿತದ ಆದರ ಸೀರಿ ಉಟ್ಕೋಬೇಕಾರ ಮಾತ್ರ ಗಂಡನ್ನ ಹೊರಗ ದಬ್ಬಿನs ಉಟ್ಗೋತಾರ. ಹಂಗ್ಯಾಕ ಅನ್ನೋದ ಆ ದೇವರಿಗೆ ಗೊತ್ತ.
ಇಗಿನ್ನೂ ಬೇಕ ನಮಗ ಅಂತ ಒಂದ ಸಪರೇಟ ರೂಮನರ ಅದ, ಮೊದ್ಲ ಅಂತೂ ಒಂದ ಬೆಡರೂಮ, ಆ ಬೆಡರೂಮಿನಾಗ ಸ್ಟೋರ ರೂಮ, ಮನ್ಯಾಗಿನ ಅರ್ಧಾ ಸಾಮಾನ ಅಲ್ಲೇ ಇರ್ತಿದ್ವು, ಇಕಿ ಸೀರಿ ಉಟ್ಕೋಳಿಕ್ಕೆ ಅಂತ ಒಂದ ತಾಸ ಹೋಗಿ ಬಿಡ್ತಿದ್ಲು. ಕರೆಕ್ಟ ಹಂತಾ ಹೊತ್ತಿನಾಗ ನಮ್ಮವ್ವಗ ಏನರ ಸ್ಟೋರ ರೂಮಿನಾಗಿನ ಸಾಮಾನ ಬೇಕಾಗ್ತಿದ್ವು. ತೊಗೊ ’ನಿಂದ ಆತೇನ್ವಾ’ ಅಂತ ನಮ್ಮವ್ವ ಹೊರಗಿಂದ ’ಇನ್ನೂ ಇಲ್ಲಾ, ನೀರಗಿ ಬಾಕಿ ಅವ’ ಅಂತ ಅಕಿ ಒಳಗಿಂದ, ಅಗದಿ ಕೇಳೊ ಹಂಗ ಇರ್ತಿತ್ತ.
ಅದರಾಗ ಲಗ್ನಾದ ಹೊಸ್ದಾಗಿ ಅಂತು ಅಕಿಗೆ ಸೀರಿ ಉಟ್ಕೋಳಿಕ್ಕೂ ಅಷ್ಟ ಛಂದಾಗಿ ಬರತಿದ್ದಿಲ್ಲಾ, ಏನಿಲ್ಲದ ತಾಸಗಟ್ಟಲೇ ಸೀರಿ ಉಟ್ಕೋಳೊದು, ಕೇಳ್ತಿರೇನ, ನಮಗೇಲ್ಲಾ ತಲಿ ಕೆಟ್ಟ ಹೋಗಿತ್ತ. ಕಡಿಕೆ ನಾವ ಅರ್ಜೆಂಟ್ ಕೆಲಸ ಇದ್ದಾಗ ಸೀರಿ-ಪಾರಿ ಏನ್ ಬ್ಯಾಡ ನೀ ಚೂಡಿದಾರದ ಮ್ಯಾಲೆ ಬಾರವಾ ನಮ್ಮವ್ವಾ ಅಂತ ಅನ್ನೊ ಪ್ರಸಂಗ ಬರತಿದ್ವು. ಹಂಗ ಅಕಿ ಸೀರಿ ಉಟ್ಕೋಂಡರು, ಅಕಿಗೆ ಸೀರಿಗೆ ನೀರಗಿ ಮಾಡೋರ ಒಬ್ಬರು, ಅದನ್ನ ಸಿಗಸಲಿಕ್ಕೆ ಒಬ್ಬರು, ಕೆಳಗ ನೀರಗಿ ಸರಿ ಮಾಡಿ ಜಗ್ಗಲಿಕ್ಕೆ ಒಬ್ಬರು, ಸೆರಗ ಉದ್ದಾತೋ ಗಿಡ್ಡಾತೊ ಅಂತ ಹೇಳಲಿಕ್ಕೆ ಒಬ್ಬರು…ಅಯ್ಯಯ್ಯ..ಯಾಕರ ಈ ದೇವರ ಈ ಸೀರಿ ಕಂಡ ಹಿಡದಾನ ಅಂತ ನಮ್ಮಂತಾ ನೋಡೋರಿಗೆ ಅನಸ್ತಿತ್ತ ಇನ್ನ ಪಾಪ ಅಕಿಗೆ ಎಷ್ಟ ತ್ರಾಸ ಆಗ್ತಿತ್ತ ನೀವ ವಿಚಾರ ಮಾಡ್ರಿ.
ಅಕಿ ಸೀರಿ ಉಟ್ಕೊಂಡ ಬರೋದರಾಗ ನಮ್ಮ ಮನ್ಯಾಗ ಏನೇನ ಕೆಲಸಾ ಮಾಡಬಹುದು ಅನ್ನೋದನ್ನ ನೀವು ಕಲ್ಪನಾ ಮಾಡ್ಕೊಳಿಕ್ಕೂ ಸಾಧ್ಯ ಇಲ್ಲಾ ಅಷ್ಟ ಲಗೂ ಸೀರಿ ಉಟ್ಕೋತಾಳ ನನ್ನ ಹೆಂಡತಿ.
ಎಲ್ಲೇರ ಅತ್ತಿ ಸೊಸಿ ಕೂಡಿ ಅರಷಣ-ಕುಂಕಮಕ್ಕ ಹೊಂಟರ
“ಅತ್ಯಾ ನಾ ಸೀರಿ ಉಟ್ಕೋಳೊದರಾಗ ನೀವು ಕುಕ್ಕರ ಸೀಟಿ ಹೊಡಿಸಿ ಬಿಡ್ರಿ” ಅಂತ ಅಕಿ ನಮ್ಮವ್ವಗ ಹೇಳೊಕಿ. ನಮ್ಮವ್ವ ತಾ ತಯಾರಾಗಿ, ಸೀರಿ ಉಟ್ಕೊಂಡ, ಅಕ್ಕಿ ಆರಿಸಿ, ತೊಳದ ಕುಕ್ಕರ ಇಟ್ಟ, ಆ ಕುಕ್ಕರ ಸೀಟಿ ಹೊಡದ ಗ್ಯಾಸ ಆರಸೊ ಹೊತ್ತಿಗೆ ಇಕಿದ ಸೀರಿ ಉಟ್ಕೊಳೊದ ಮುಗಿತಿತ್ತ, ಆಮ್ಯಾಲೆ ಅತ್ತಿ ಸೊಸಿ ಇಬ್ಬರು ಮಂದಿ ಮನಿ ಅರಷಣ-ಕುಂಕುಮಕ್ಕ ಹೋಗೊರ.
“ಅಲ್ಲಲೇ, ಹೆಂಗಿದ್ದರು ಇವತ್ತ ಸಂಪತ್ತ ಶುಕ್ರವಾರ ಮಂದಿ ಕರದ ಕರಿತಾರ ಅಂತ ಗೊತ್ತ ಇದ್ದ ಇರತದ ಮಧ್ಯಾಹ್ನನ ಯಾಕ ನೀ ಸೀರಿ ಉಟ್ಕೊಂಡ ಕೂಡಬಾರದು” ಅಂತ ನಾ ಏನರ ಸಜೆಶನ್ ಕೊಟ್ಟರ,
“ನೀವು ಬಾಯಿ ಮುಚಗೊಂಡ ಸುಮ್ಮನ ಕೂಡ್ರಿ, ನಿಮಗ್ಯಾಕ ಬೇಕ ನನ್ನ ಸೀರಿ ಉಸಾಬರಿ” ಅಂತ ಒದರೋಕಿ. ಹಿಂಗಾಗಿ ನಾ ಅಕಿ ಏನರ ಹಾಳ ಗುಂಡಿ ಬೀಳಲಿ ಅಂತ ಬಿಟ್ಟ ಬಿಟ್ಟೇನಿ.
ಮೊನ್ನೆ ಅಕಿ ತಮ್ಮಾ ಧಾರವಾಡದಿಂದ ಹುಬ್ಬಳ್ಳ್ಯಾಗಿನ ಒಂದ ಮದವಿಗೆ ಹೋಗಬೇಕಾರ
’ಅವ್ವಕ್ಕ್ ನೀ ರೆಡಿಯಾಗಿರ ನಾ ಕಾರ ತೊಗೊಂಡ ಬರ್ತೇನಿ’ ಅಂತ ಹೇಳಿದರ, ಅಕಿ ಇವಂಗ
’ನೀ ಧಾರವಾಡ ಬಿಡಬೇಕಾರ ಒಂದ ಮಿಸ್ ಕಾಲ್ ಕೊಡು’ ಅಂತ ಹೇಳಿದ್ಲು, ಯಾಕ ಅಂತ ಕೇಳಿದರ, ಇಕಿ ಅಂವಾ ಧಾರವಾಡ ಬಿಟ್ಟ ಕೂಡಲೇನ ಸೀರಿ ಉಟ್ಕೋಳಿಕ್ಕೆ ಹೋಗೊಕಿದ್ಲು.. ಅಂದರ ಅಂವಾ ೪೦-೫೦ನಿಮಿಷ ಬಿಟ್ಟ ಹುಬ್ಬಳ್ಳಿ ಮುಟ್ಟೊ ಹೊತ್ತಿಗೆ ಇಕಿದ ಸೀರಿ ಸಡಗರ ಮುಗದಿರತದ ಅಂತ ಅಕಿ ವಿಚಾರ ಇತ್ತ.
ಹಿಂದಕೊಮ್ಮೆ ಅವರ ತಂಗಿ ಲಗ್ನದಾಗ ಕನ್ಯಾನ್ನ ತಯಾರ ಮಾಡಲಿಕೆ ಇಕಿಗೆ ಹೇಳಿದ್ದರು, ಇನ್ನ ಇಕಿ ತಯಾರಾಗಿ ಅಕಿನ್ನ ತಯಾರ ಮಾಡಬೇಕಿತ್ತು, ಹಿಂಗಾಗಿ ಅವರವ್ವ ಇಕಿಗೆ ೯.೨೦ಕ್ಕ ಮನಿ ಅಕ್ಕಿಕಾಳ ಮುಗದ ಮ್ಯಾಲೆ
“ಅವ್ವಿ, ನೀ ಈಗ ಸೀರಿ ಉಟ್ಕೊಳಿಕ್ಕೆ ಹೋಗಿ ಬಿಡ್ವಾ, ನೀ ರೆಡಿ ಆಗಿ ಮದುಮಗಳನ ರೆಡಿ ಮಾಡಬೇಕಂದರ ಲೇಟಾಗ್ತದ. ಹನ್ನೆರಡು ಐವತ್ತಕ್ಕ ಮತ್ತ ಸಾರ್ವಜನಿಕ ಅಕ್ಕಿಕಾಳ ಅವ” ಅಂತ ಹೇಳಿ ಕಳಸಿದರ, ನನ್ನ ಹೆಂಡತಿ ರೆಡಿ ಆಗಿ ಆ ಕನ್ಯಾ ರೆಡಿ ಆಗಿ ಮುಂದ ಜನಾ ಸಾರ್ವಜನಿಕ ಅಕ್ಕಿ ಕಾಳ ಹಾಕಿದ್ದ ೧.೫೦ಕ್ಕ. ಅಲ್ಲಾ ಏನಿಲ್ಲದ ತಾಸ ಗಟ್ಟಲೇ ಸೀರಿ ಉಟ್ಕೋಳೊಕಿ ಇನ್ನ ಹಿಂತಾ ಫಂಕ್ಶನಗೆ ತಯಾರಾಗೊದಂದರ ಏನ ಕೇಳ್ತೀರಿ. ಮ್ಯಾಲೆ ಇಕಿಗೆ ಆ ಕನ್ಯಾನ್ನ ತಯಾರ ಮಾಡಲಿಕ್ಕೆ ಬ್ಯಾರೆ ಹೇಳಿದ್ದರು.
ನಂಗ ಯಾವಾಗ ಇಕಿಗೆ ತಯಾರಾಗಿ ಕನ್ಯಾಗ ತಯಾರ ಮಾಡಲಿಕ್ಕೆ ಹೇಳ್ಯಾರಂತ ಗೊತ್ತಾತಲಾ, ಆವಾಗ ಗ್ಯಾರಂಟಿ ಇತ್ತ ಇವತ್ತ ಟೈಮಸೀರ ಅಕ್ಕಿಕಾಳ ಆದಂಗ ಅಂತ. ಅದಕ್ಕ ನಾ ಭಡಾ ಭಡಾ ಒಂದುವರಿಗೆ ಒಂದನೇ ಪಂಕ್ತಿ ಊಟಾ ಶುರು ಮಾಡಿಸಿ
“ಏ, ಊಟಾ ಮಾಡಿ ಅಕ್ಕಿಕಾಳ ಹಾಕ್ರಿ ನಡಿತದ, ವಧು- ವರರ ಏನ ಓಡಿ ಹೋಗಂಗಿಲ್ಲಾ, ಆದರ ಮಾಡಿದ್ದ ಅಡಿಗೆ ಆರಿ ಹೋಗ್ತದ” ಅಂತ ಬೀಗರಿಗೆ ಊಟಕ್ಕ ಕಳಿಸಿ ಬಿಟ್ಟೆ. ಇಲ್ಲಾಂದರ ಬೀಗರ ಹೊಟ್ಟಿ ಹಸಕೊಂಡ ಕಡಿಕೆ ಆರಿದ್ದ ಉಂಡ ನಮ್ಮ ಹೆಸರಿಲೆ ಹೊಯ್ಕೊ-ಬಡ್ಕೊ ಮಾಡೋದ ಗ್ಯಾರಂಟಿ ಇತ್ತ.
ಅಲ್ಲಾ ಈಗ ಜಸ್ಟ ನನ್ನ ಹೆಂಡತಿ ಮಾರ್ಕೇಟಿಗೆ ಹೋಗೊದ ಅದ ಅಂತ ಸೀರಿ ಉಟಗೋಳಿಕ್ಕೆ ಹೋದ್ಲು ಆವಾಗ ಇವೇಲ್ಲಾ ವಿಷಯ ನೆನಪಾತು ಅದಕ್ಕ ಇಷ್ಟ ಹೇಳ್ಬೇಕಾತು. ಹಂಗ ನನ್ನ ಲೇಖನಾ ಬರೇಯೋದ ಮುಗದ ನಿಂಬದ ಓದೋದ ಮುಗದರು ಅಕಿ ಇನ್ನು ಹೊರಗ ಬಂದಿಲ್ಲಾ. ಇನ್ನೊಂದ ಎರೆಡ ಮೂರ ನೀರಗಿ ಬಾಕಿ ಅವ ಅಂತ ಕಾಣತದ.
ಆದರೂ ನಂಗ ಸುಮ್ಮನ ಕೂಡಲಿಕ್ಕೆ ಬರಂಗಿಲ್ಲಾ. ಹಂಗ ಅಕಿ ಬಗ್ಗೆ ನಾ ಹಿಂಗೇಲ್ಲಾ ಬರದರ ಬೈತಾಳ ಅಂತ ಗೊತ್ತಿದ್ರು ಅಕಿ ಅದರ ಬಗ್ಗೆ ಬರೇಯೋದ ಬಿಡಂಗಿಲ್ಲಾ, ಮುಂದ ಬೈಸಿಗೋಳೊದ ತಪ್ಪಂಗಿಲ್ಲಾ.
ನೀವು ಲೇಖನಾ ಓದಿ ಎಂಜಾಮ್ ಮಾಡೋದ ಇರಲಿ ನಾ ಬೈಸಿಗೋಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ