ಯಾರರ ಹಡದದ್ದ ಸುದ್ದಿ ಬಂತ ಅಂದರ ಮೊದ್ಲ ನಾವ ಕೇಳೊದ ಏನು? ಗಂಡೋ, ಹೆಣ್ಣೊ ಹೌದಲ್ಲ ಮತ್ತ..?
ಮುಂಜಾನೆ ನನ್ನ ಹೆಂಡತಿ ಮೌಶಿ ತನ್ನ ಮಗಳ ಹಡದದ್ದ ಸುದ್ದಿ ಹೇಳಲಿಕ್ಕೆ ಫೋನ ಮಾಡಿದರ ನನ್ನ ಹೆಂಡತಿ ಮೊದ್ಲ ಕೇಳಿದ್ದ ಏನಪಾ ಅಂದರ
“ಸವ್ವಿ ಹಡದ್ಲ..ಯಾವಾಗ? ನಾರ್ಮಲ್ ಆತೋ ಇಲ್ಲಾ ಸಿಜರಿನ್ ಆತೊ?” ಅಂತ.
ಅಷ್ಟರಾಗ ಹಿಂದಿನಿಂದ ನಮ್ಮವ್ವಾ ಕೂಸು ಬಾಣಂತಿ ಆರಾಮ ಇದ್ದಾರಿಲ್ಲೋ ಕೇಳು ಅಂತ ಒದರಿದ್ಲು, ಇಕಿ
“ಸಿಜರಿನ್ ಆತ, ಭಾಳ ಛಲೋ ಆತ ತೊಗೊ… ಏನ ಕಾಳಜಿ ಮಾಡಬ್ಯಾಡ, ನನ್ನವು ಎರಡೂ ಸಿಜರಿನ್ ಆಗಿದ್ವು. ಅನ್ನಂಗ ಕೂಸು ಬಾಣಂತಿ ಆರಾಮ ಇದ್ದಾರಲಾ?..ಸಿಟಿ ಕ್ಲಿನಿಕ್ ರೂಮ ನಂಬರ್ ಎಂಟಲಾ… ಆತ ..ಆತ” ಅಂತ ಇಕಿ ಫೋನ ಇಟ್ಟ ಬಿಟ್ಟಳು
ಇತ್ತಲಾಗ ಇಕಿ ಫೋನ ಇಡೋದಕ್ಕ ನಮ್ಮವ್ವ
“ಪಾಪ, ಸಿಜರಿನ್ ಆತಂತ..ಆಗಲಿ ಬಿಡ ಒಟ್ಟ ಕೂಸು ಬಾಣಂತಿ ಆರಾಮ ಇದ್ದಾರಲಾ, ಅಷ್ಟ ಸಾಕ ತೊಗೊ. ಅನ್ನಂಗ ಏನಾತಂತ? ಹೆಣ್ಣ ಆತೊ ಗಂಡ ಆತೊ” ಅಂತ ಕೇಳಿದ್ಲು.
ನನ್ನ ಹೆಂಡತಿಗೆ ಏನ ಗೊತ್ತ ತಲಿ, ಇಕಿ ಅದನ್ನ ಕೇಳಿದ್ರಲಾ ಗೊತ್ತಾಗೊದ? ಇಕಿಗೆ ನಾರ್ಮಲ್ಲೊ ಸಿಜರಿನ್ನೊ ಅನ್ನೋದ ಗಂಡ ಹೆಣ್ಣೊ ಅನ್ನೋದರಕಿಂತಾ ಭಾಳ important ಇತ್ತ, ಹಿಂಗಾಗಿ ಅದನ್ನೊಂದ ಕೇಳಿ ಫೋನ ಇಟ್ಟ ಬಿಟ್ಟಿದ್ಲು.
“ಅಯ್ಯ ಗಡಬಡಿ ಒಳಗ ಅದನ್ನ ಕೇಳಲೇ ಇಲ್ರಿ ಅತ್ಯಾ, ಅತ್ತಲಾಗ ಡಾಕ್ಟರ ಕರಿತಾರಂತ ಮೌಶಿನೂ ಫೊನ ಇಟ್ಟ ಬಿಟ್ಟಳು. ಇನ್ನೊಮ್ಮೆ ಫೋನ್ ಮಾಡಿ ಕೇಳಿದ್ರಾತ ಬಿಡ್ರಿ” ಅಂತ ನನ್ನ ಹೆಂಡತಿ ಅಂದ ಸುಮ್ಮನಾದ್ಲು.
ಏನ್ಮಾಡ್ತೀರಿ ಇವತ್ತ ನಾರ್ಮಲ್ ಆತೋ ಸಿಜಿರನ್ ಆತೊ ಅನ್ನೋದ first question , ಅದಕ್ಕಿದ್ದಷ್ಟ curiosity ಗಂಡ ಆತೊ ಇಲ್ಲಾ ಹೆಣ್ಣ ಆತೊ ಅಂತ ಕೇಳಬೇಕಾರ ಇರಂಗಿಲ್ಲಾ. ಹಂಗ ಮುಂದ ಗಂಡ ಆತೊ, ಹೆಣ್ಣ ಆತೊ ಅಂತ ಕೇಳಿ ಲಾಸ್ಟಿಗೆ ನೆನಪಾದರ ಅದು formalityಗೆ ’ಅನ್ನಂಗ ಕೂಸು ಬಾಣಂತಿ ಹೆಂಗ ಇದ್ದಾರ’ ಅಂತ ಕೇಳೋದು.
ಅಲ್ಲಾ, ಹಂಗ ಇವತ್ತ ಜಗತ್ತ ಭಾಳ ಸುಧಾರಿಸೇದ, ಗಂಡ – ಹೆಣ್ಣ ಅಂತ ಭೇದ ಭಾವ ಇಲ್ಲಾ, ಯಾವದಾದರೇನ ಬಿಡ್ರಿ. ಆದರೂ ಯಾವದ ಆತು ಅನ್ನೋದ ನಾಲ್ಕ ಮಂದಿ ಹೇಳಲಿಕ್ಕರ ಗೊತ್ತ ಆಗಬೇಕಲಾ?
ಹಂಗ ನೀವ ಏನ ಅನ್ನರಿ ಇತ್ತೀಚಿಗೆ ಹೆಣ್ಣಮಕ್ಕಳ ನಾರ್ಮಲ ಹಡೇಯೋದ normally ಭಾಳ ಕಡಿಮೆ ಆಗೇದ. ಹಿಂಗಾಗಿ ಸಿಜರಿನ್ ಕಾಮನ್ ಆಗೇದ ಆ ಮಾತ ಬ್ಯಾರೆ. ಆದರೂ ಯಾರರ ಅಪ್ಪಿ ತಪ್ಪಿ ಒಂದನೇದ ನಾರ್ಮಲ್ ಹಡದ ಬಿಟ್ಟರ ಮುಗದ ಹೋತ
“ಅಯ್ಯ, ಇನ್ನೊಂದ ಆಗೆ ಬಿಡಲಿ ನಮ್ಮವ್ವಾ ಹೆಂಗಿದ್ದರೂ ಒಂದನೇದ normal ಹಡದಿ, ಎರಡನೇದ ಸಿಜರಿನ್ ಆದರೂ ನಡಿತದ” ಅಂತ ಮನ್ಯಾಗ ಅತ್ತಿ ಒಂದನೇ ಕೂಸಿನ ನೋಡಲಿಕ್ಕೆ ಅಂಟಿನ ಉಂಡಿ ತೊಗೊಂಡ ಬಂದಾಗ ಗಂಟ ಬಿದ್ದ ಬಿಡತಾಳ. ಯಾಕಂದರ ಸಿಜರಿನ್ ಆದೋರು ಒಂದ ಹಡದ ಹತ್ತ ಹಡದವರ ಗತೆ ರಗಡ ಆತ ಅಂತ ಅಲ್ಲಿಗೆ ಕಥಿ ಮುಗಿಸಿ ಬಿಡತಾರ. ನಾರ್ಮಲ್ ಆದೋರ ಹಂಗ ಇನ್ನೊಂದ ಚಾನ್ಸ ತೊಗೊಬಹುದು ಅಂತ ಅತ್ತಿ ವಿಚಾರ. ಖರೇ ಹೇಳ್ಬೇಕಂದರ ಪಾಪ ನಾರ್ಮಲ್ ಹಡದೋರ ಭಾಳ ತ್ರಾಸ ಅನುಭವಿಸಿರ್ತಾರ ಆ ಮಾತ ಬ್ಯಾರೆ.
ಒಂದ ಕಾಲದಾಗ ಸಿಜರಿನ್ issue ಅಂದರ ಭಾರಿ ದೊಡ್ಡ issue.
“ಏ ಅಂವಾ ಅವರವ್ವನ ಹೊಟ್ಟಿ ಹರದ ಹುಟ್ಟಿದ್ದ ಮಗಾ” ಅಂತ ಹುಟ್ಟಿದ್ದ ಮಗಗ ಸಾಯೊತನಕ ಕಾಡಸೋರು. ಹಂಗ ಆಗಿನ ಕಾಲದಾಗ ಹತ್ತರಾಗ ಎಂಟ ಸಿಜರಿನ್ ಕೇಸ ಒಳಗ ತಾಯಿ ಇಲ್ಲಾ ಮಗು ಎರಡರಾಗ ಒಂದ ಉಳಿಯೋದ ಭಾಳ ಕಾಮನ್ ಇತ್ತ. ಹಿಂಗಾಗಿ ಗಂಡ ಅನ್ನೊ ಪ್ರಾಣಿ ಇದ್ದ ಮಕ್ಕಳನ್ನ ಸಾಕಲಿಕ್ಕೆ ಇನ್ನೊಂದ ಕಟಗೋಳೊ ಪಾಳೆ ಬರ್ತಿತ್ತ. ಅಕಿನು ಎರಡ ಹಡದ ಹೋದರ ಮತ್ತೊಂದ. ಅಲ್ಲಾ ಆ ಕಾಲ ಹೋತ ಬಿಡ್ರಿ ಆವಾಗ ಒಂದ ಯಾಕ ನಾಲ್ಕ ನಾಲ್ಕ ಮಾಡ್ಕೊಂಡ ಡಜನ್ ಗಟ್ಟಲೇ ಹಡದರು ಸಾಕೊ ತಾಕತ್ತ ಇರತಿತ್ತ, ಈಗೇಲ್ಲಾ ಎಲ್ಲೆ ಆಗ್ತದ, ಒಂದ ಹೆಂಡ್ತಿ ಎರಡ ಮಕ್ಕಳನ್ನ ಸಾಕೋದರಾಗ ಕುರಿ-ಕೋಣ ಬಿಳ್ತದ ಆದರೂ ಮಾತ ಹೇಳಿದೆ.
ಆಮ್ಯಾಲೆ ಆವಾಗ ಈಗಿನಕತೆ ಹಡೇಯೋದ ದೊಡ್ಡ ಇಶ್ಯು ಇರಲಿಲ್ಲಾ. ಹಡೇಯೊತನಕ ಎಂದೂ ಬೆಡ್ ರೆಸ್ಟ ಅಂತು ಇದ್ದಿದ್ದೇಲಾ, ಕೇಳ್ರಿ ಬೇಕಾರ ನಿಮ್ಮ ಅಜ್ಜಿ-ಮುತ್ತಜ್ಜಿ ಯಾರರ ಇನ್ನು ಇದ್ದರ, ಹತ್ತ ಹಡದರು ಅಗದಿ ರುಬ್ಬು ಕಲ್ಲನಂಗ ಇರ್ತಿದ್ದರು. ನಮ್ಮ ಮುತ್ತಜ್ಜಿ ನಮ್ಮಜ್ಜಿನ್ನ ಕಾಡಿಗೆ ಕಟಗಿ ಆರಿಸಿಗೊಂಡ ಬರಲಿಕ್ಕೆ ಹೋದಾಗ ಹಡಕೊಂಡ ಕರಕೊಂಡ ಬಂದಿದ್ಲಂತ. ಅದು ನಾರ್ಮಲ್ ಮತ್ತ, ಅಲ್ಲಾ, ಕಾಡಿನಾಗ ಯಾರ ಸಿಜರಿನ್ ಮಾಡ್ತಾರ ಆ ಮಾತ ಬ್ಯಾರೆ.
ಮುಂದ ೧೬ ವರ್ಷಕ್ಕ ಅದ ನಮ್ಮ ಮುತ್ತಜ್ಜಿ ಎಂಟನೇದ ಹಡದಾಗ ಆ ಕಾಡಿನಾಗ ಹುಟ್ಟಿದ್ದ ನಮ್ಮಜ್ಜಿನ ಅವರವ್ವನ ಬಾಣಂತನ ಮಾಡಿದ್ಲಂತ. ಏನೋ ನಮ್ಮ ಮುತ್ತಜ್ಜನ ನಸೀಬ ಖೊಟ್ಟಿ ಇತ್ತ ನಮ್ಮ ಮುತ್ತಜ್ಜಿ ಒಂಬತ್ತ ಹಡದರು ಒಂಬತ್ತು ನಾರ್ಮಲ್ ಆದ್ವು ಹಿಂಗಾಗಿ ಮತ್ತೊಂದ ಮದುವಿ ಮಾಡ್ಕೊಳೊ ಪಾಳೆ ಬರಲಿಲ್ಲಾ. ಆದರ ಮಕ್ಕಳ ಒಳಗ ಎರಡ ಸಣ್ಣವ ಇರತ ಹೋಗಿದ್ವು ಆ ವಿಷಯ ಬ್ಯಾರೆ.
ಇನ್ನ ಈಗಿನವರ ಹಣೇಬರಹ ಅಂತು ಕೇಳೊ ಹಂಗ ಇಲ್ಲಾ, ಇನ್ನು ವೈಕ್ ಅನ್ನೋದಕ್ಕ ಒಂದ ತುಂಬಿ ಎರಡರಾಗ ಬಿದ್ದಿರತದೋ ಇಲ್ಲೊ ಮೂರ ತಿಂಗಳ ಬೆಡ್ ರೆಸ್ಟ ಕಂಪಲ್ಸರಿ. ಅದು ತವರ ಮನಿ ಒಳಗ, ಏನ ಅತ್ತಿ ಮನ್ಯಾಗ ಬೆಡ್ ರೆಸ್ಟ ತೊಗೊಂಡರ ಅವಳಿ-ಜವಳಿ ಹುಟ್ಟತಾವ ಅನ್ನೋರಗತೆ ಮಾಡ್ತಾರ. ಇನ್ನ ಡಿಲೇವರಿ ಡೇಟ್ ಹತ್ತರ ಬಂದಂಗ ಮತ್ತ ಎರಡ ತಿಂಗಳ ಬೆಡ್ ರೆಸ್ಟ. ಇನ್ನ ಇನ್ನೇನ ಇವತ್ತ ನಾಳೆ ಡಿಲೇವರಿ ಅನ್ನೋದರಾಗ ರಾಗ ಶುರು
“ನಾ ನಿಂಗ ಈಗ ಹೇಳಿರತೇನಿ ಮತ್ತ, ನಂಗ ಭಾಳ ಬ್ಯಾನಿ ತಿನ್ನಲಿಕ್ಕೆ ಆಗಲಾರದ ತ್ರಾಸ ಆದರ ಸಿಜರಿನ್ ಮಾಡಿಸಿ ಬಿಡ ಮತ್ತ, ನಿಮ್ಮವ್ವನ ಮಾತ ಕೇಳಿ ನಾರ್ಮಲ್ ಆಗಲಿ ಅಂತ ಕಾಯಕೋತ ಕೂತ ಎಲ್ಲರ ನನ್ನ ಕೊಂದ ಗಿಂದಿ, ನಂಗ ಮದ್ಲ ತಡಕೊಳಿಕ್ಕೆ ಆಗಂಗಿಲ್ಲಾ” ಅಂತ ಗಂಡನ ಕಡೆ ಆಣಿ ಮಾಡಿಸಿಕೊಂಡ ಆ ಮಾತಿಗೆ ಸಾಕ್ಷಿ ಅಂತ ಅವರವ್ವನ್ನ ಆಪರೇಶನ್ ಥೆಟರ್ ಮುಂದ ನಿಲ್ಲಿಸಿಗೊಂಡ ಆಮ್ಯಾಲೆ ಹಡಿಲಿಕ್ಕೆ ಸ್ಟ್ರೇಚರ್ ಮ್ಯಾಲೆ ಒಳಗ ಹೋಗೊದು.
ಮೊದ್ಲಿನ ಕಾಲದಾಗ ಹೆಂಡತಿ ಎರಡನೇದು, ಮೂರನೇದು ಹಡಿಲಿಕ್ಕೆ ತವರ ಮನಿಗೆ ಹೋಗಬೇಕಾರ ಚಕ್ಕಡಿ ಹತ್ತೋಕಿಂತ ಮುಂಚೆ
“ರ್ರಿ, ಹಂಗೇನರ ನಂಗ ಹೆಚ್ಚು ಕಡಿಮಿ ಆದರ ನೀವು ಇದ್ದ ಮಕ್ಕಳನ ಅನಾಥ ಮಾಡಬ್ಯಾಡರಿ, ನಮ್ಮ ಕಾಕಾನ ಮಗಳ ಪವ್ವಿ ಲಗ್ನದ ವಯಸ್ಸಿಗೆ ಬಂದಾಳ, ಮಕ್ಕಳು ಅಕಿ ಮ್ಯಾಲೆ ಭಾಳ ಜೀವ ಅವ” ಅಂತ ಸೂಕ್ಷ್ಮ ಹಿಂಟ ಕೊಟ್ಟ ಹೋಗ್ತಿದ್ದಳು.
ಈಗ…..? ಹೋಗಲಿ ಬಿಡ್ರಿ, ಮೊದ್ಲ ಹೇಳಿದ್ನೆಲ್ಲಾ ಆ ಕಾಲನ ಬ್ಯಾರೆ ಈಗೀನ ಕಾಲನ ಬ್ಯಾರೆ ಅಂತ.
ಹಂಗ ಈ ಕಲಿಯುಗದಾಗ ನಾರ್ಮಲ್ಲಾಗಿ ಡಿಲೇವರಿ ಒಳಗ ನಾರ್ಮಲ್ ಮತ್ತ ಸಿಜರಿನ್ ಎರಡ ಮೇನ, ಹಡಿಯೋದ ಒಂದ ಇದ್ದರು ಡಿಲೇವರಿ ಮಾತ್ರ ಎರಡ ಟೈಪ್.
ಇನ್ನ ದ್ವಾಪರ ಯುಗದಾಗ, ತ್ರೇತಾ ಯುಗದಾಗ ಎಷ್ಟ ಟೈಪ ಇದ್ವೊ ಆ ಶ್ರೀಕೃಷ್ಣ ಪರಮಾತ್ಮಗ ಗೊತ್ತ.
ಈಗ ನಮ್ಮ ಧುರ್ಯೋಧನ & Brothers ಅಂದರ ಕೌರವರು ಹುಟ್ಟಿದ್ದ ಹೆಂಗಪಾ?
ಗಾಂಧಾರಿ ಬಸರಿದ್ಲು, ಎಷ್ಟ ದಿವಸ ಆದರೂ ಅಕಿದ ಡಿಲೇವರಿನ ಆಗಲಿಲ್ಲಾ, delivery date ಹಂಗ ಮುಂದ ಮುಂದ ಹೊಂಟತು. ಇತ್ತಲಾಗ ನೋಡಿದ್ರ ಕುಂತಿ ಲಗ್ನ ಆಗೋ ಪುರಸತ್ತ ಇಲ್ಲದ ಧರ್ಮರಾಜನ ಹಡದ ಬಿಟ್ಟಿದ್ಲು. ಗಾಂಧಾರಿಗರ ಹ್ಯಾವ ಹತ್ತು, ಅಕಿ ಹಡದ್ಲು ನಾ ಇನ್ನು ಹಡಿಲಿಲ್ಲಲಾ ಅಂತ. ಅಲ್ಲಾ ಆವಾಗ ಹೆಣ್ಣಮಕ್ಕಳು ಹಡಿಲಿಕ್ಕೂ ಹ್ಯಾವ ಮಾಡತಿದ್ದರು. ಈಗ ಅದಕ್ಕೊಂದ ಬಿಟ್ಟ ಬಾಕಿ ಎಲ್ಲಾದಕ್ಕೂ ಹ್ಯಾವ ಮಾಡತಾರ ಆ ಮಾತ ಬ್ಯಾರೆ. ಕಡಿಕೆ ತಲಿಕೆಟ್ಟ ಗಾಂಧಾರಿ ಸಿಟ್ಟಲೆ ತನ್ನ ಹೊಟ್ಟಿ ತಾನ ಹೊಡಕೊಂಡ್ಲು. ಆಗ ಒಂದ ಮಾಂಸದ ಮುದ್ದಿ ಹೊರಗ ಬಂತು. ಅದನ್ನ ನೋಡಿ ವೇದ ವ್ಯಾಸರು ಓಡಿ ಬಂದರು. ಅದರಾಗ ಅವರ ಅಕಿಗೆ ಮೊದ್ಲ ನೂರಾ ಒಂದ ಮಕ್ಕಳ ತಾಯಿ ಆಗು ಅಂತ ಆಶೀರ್ವಾದ ಬ್ಯಾರೆ ಮಾಡಿ ಬಿಟ್ಟಿದ್ದರು ಇಲ್ಲೆ ಇಕಿ ನೋಡಿದರ ತನ್ನ ಹೊಟ್ಟಿ ಒಡಕೊಂಡ ಬಿಟ್ಟಿದ್ಲು. ಪಾಪ ಅವರ ಸಂಕಟ ಅವರಿಗೆ, ಕಡಿಕೆ ಎಲ್ಲೆ ತಮ್ಮ ಆಶೀರ್ವಾದ ಸುಳ್ಳ ಆಗ್ತದೊ ಅಂತ ಆ ಹೊಟ್ಟ್ಯಾಗಿಂದ ಬಂದ ಮುದ್ದಿನ್ನ ನೂರಾ ಒಂದ ತುಂಡ ಮಾಡಿ ತುಪ್ಪದ ಗಡಿಗೆ ಒಳಗ ಹಾಕಿ ಭೂಮಿ ಒಳಗ ಮುಚ್ಚಿ ಇಟ್ಟರು. ಒಂದ ವರ್ಷ ಆದ ಮ್ಯಾಲೆ ಅದರಾಗಿಂದ ಮಕ್ಕಳ ಬಂದರು, ಅದರಾಗ ಒಂದನೇದಂವನ ನಮ್ಮ ಧುರ್ಯೋಧನ. ಉಳದವರೇಲ್ಲಾ ಇತರೆ ಕೌರವರು.. ಈಗ ಹೇಳ್ರಿ ಇದ ನಾರ್ಮಲ್ ಇಲ್ಲಾ ಸಿಜರಿನ್?
ಅಲ್ಲಾ ಹಿಂತಾವ ಇನ್ನೂ ಭಾಳ ಉದಾಹರಣೆ ಅವ. ನೀವ ಬರೆ ಕೇಳ್ಕೊತ ಹೋಗರಿ….
ಹಿಂದ ಇದ ವ್ಯಾಸರು ಅಂಬಿಕೆ, ಅಂಬಾಲಿಕೆ ಮತ್ತು ದಾಸಿಗೆ ’ನೀಯೊಗ’ದ ಮುಖಾಂತರ ಮೂರ ಮಕ್ಕಳನ್ನ respectively ಹಡದ ಕೊಟ್ಟರು ಅವರ ನಮ್ಮ ಧೃತರಾಷ್ಟ್ರ, ಪಾಂಡು ಮತ್ತು ವಿದುರ.
ಇನ್ನ ಕುಂತಿ ಗಂಡ ಪಾಂಡುಗ ’ನೀ ಹೆಂಡಂದರನ ಸೇರಿದರ ಸಾಯಿತಿ ಅಂತ ಶಾಪ ಇತ್ತ’ ಹಿಂಗಾಗಿ ಅವಂಗ ಮಕ್ಕಳ ಆಗಿದ್ದಿಲ್ಲಾ. ಆವಾಗ ಕುಂತಿ ದುರ್ವಾಸ ಮುನಿಗಳ ಕೊಟ್ಟದ್ದ ವರ ಉಪಯೋಗಿಸಿಕೊಂಡ ಯಮ, ವಾಯು, ಇಂದ್ರ ಇವರಿಂದ ಮಂತ್ರದ ಮುಖಾಂತರ ಧರ್ಮರಾಜ, ಭೀಮಸೇನ ಮತ್ತ ಅರ್ಜುನನ respectively ಹಡದಳು.
ಇನ್ನ ಶರದ್ವನು ಎಂಬ ಋಷಿಗೆ ಅಪ್ಸರೆನ್ನ ನೋಡಿ ವೀರ್ಯಸ್ಖಲನ ಆತು ಅಂವಾ ಅದನ್ನ ತನ್ನ ಬತ್ತಳಿಕೆ ಒಳಗ ಇಟ್ಟಾ, ಅವರ ಮುಂದ ಕೃಪ – ಕೃಪೆ ಅಂತ ಅವಳಿ ಜವಳಿ ಗಂಡು ಹೆಣ್ಣು ಆದರು.
ಇನ್ನ ಭರದ್ವಾಜ ಮುನಿಗಳು ಸಿರಿಯಸ್ ಆಗಿ ತಪಸ್ಸ ಮಾಡತಿರಬೇಕಾರ ಒಬ್ಬ ದೇವಕನ್ನೆ ಬಂದ ಡಿಸ್ಟರ್ಬ ಮಾಡಿ ವೀರ್ಯಸ್ಖಲನ ಆದಾಗ ಅವರು ಅದನ್ನ ದ್ರೋಣದಾಗ (ಕೊಡದಾಗ) ಇಟ್ಟರು. ಆ ಕೊಡದಿಂದ ದ್ರೋಣಾಚಾರ್ಯರು ಹೊರಗ ಬಂದರು.
ಈಗ ನೀವ ಹೇಳ್ರಿ ಇದರಾಗ ನಾರ್ಮಲ್ ಯಾವದು ಸಿಜರಿನ ಯಾವದು?
“ಲೇ ದನಾ ಕಾಯೋನ ಯಾ ಟಾಪಿಕ್ ಎಲ್ಲಿಗೆ ತೊಗೊಂಡ ಹೋದಿ” ಅಂತ ಬಯ್ಯಿ ಬ್ಯಾಡರಿ. ನಾ ಹಂಗ ಈ ನಾರ್ಮಲ್ ಡಿಲೇವರಿ ಸಿಜರಿನ ಡಿಲೇವರಿ ಬಗ್ಗೆ ಡೀಪ್ ಆಗಿ ವಿಚಾರ ಮಾಡ್ಕೋತ ಅಷ್ಟ ಡೀಪ ಹೋಗಿ ಹಿಂದ ಪುರಾತನ ಕಾಲದಾಗ ಹೆಂಗ ಇತ್ತು ಅಂತ ವಿಚಾರ ಮಾಡಲಿಕ್ಕೆ, ತಿಳ್ಕೊಳ್ಳಿಕ್ಕೆ ಈ ಟಾಪಿಕ ಯುಗಾಂತರ ಮಾಡಿದೆ ಅಷ್ಟ. ಅಲ್ಲಾ ಆದರೂ ಆವಾಗ ಬ್ಯಾನಿ ತಿನ್ನಲಾರದ ಮಕ್ಕಳನ್ನ ಹಡತಿದ್ದರು ಹಿಂಗಾಗಿ ಒಂದ ಏನ ನೂರಾ ಒಂದ ಆದರು ಹಡಿತಿದ್ದರ ಆ ಮಾತ ಬ್ಯಾರೆ.
ಇನ್ನ coming back to ಕಲಿಯುಗ, ನಾವ ಎಲ್ಲಿಗೆ ಇದ್ವಿ…ಹಾಂ.. ನಾರ್ಮಲ್ ಡಿಲೇವರಿ & ಸಿಜರಿನ್ ಡಿಲೇವರಿ ಬಗ್ಗೆ ಡಿಸ್ಕಸ್ ಮಾಡಲಿಕತ್ತಿದ್ವಿ.
ಈಗ ಊರ ಮಂದಿ ಡಿಲೇವರಿ ಉಸಾಬರಿ ಬ್ಯಾಡ ನಂದಿಷ್ಟ್ ನಾ ಹೇಳಬೇಕ ಅಂದರ.
ನನ್ನ ಹೆಂಡತಿದ ಒಂದನೇದ ಸಿಜರಿನ್. ಅದ ಸಿಜರಿನ್ ಯಾಕ ಆತ ಅಂದರ ನನ್ನ ಮಗಗ delivery date ದಿವಸ ಅರ್ಜೆಂಟಾಗಿ ಎರಡಕ್ಕ ಬಂದಿತ್ತ ಅವಂಗ ತಡಕೊಳಿಕ್ಕೆ ಆಗಲಿಲ್ಲಾ ಅಂವಾ ಒಳಗs ಮಾಡ್ಕೊಂಡ ಬಿಟ್ಟಾ. ಡಾಕ್ಟರ್ ಇಲ್ಲಾ ನಾವ ಈಗ immediate ಆಗಿ ಸಿಜರಿನ್ ಮಾಡಬೇಕು ಇಲ್ಲಾಂದರ ಮಗು ಮಾಡ್ಕೊಂಡಿದ್ದ motion ವಿಷ ಆಗತದ, ಆಮ್ಯಾಲೆ ಅದ ಏನರ ಕೂಸಿನ ಬಾಯಾಗ ಹೋತ ಅಂದರ ಭಾಳ ಡೇಂಜರ್ ಅಂತ ಹೇಳಿ ಸಿಜರಿನ್ ಮಾಡಿ ಬಿಟ್ಟರು. ಪಾಪ ನನ್ನ ಹೆಂಡತಿ ಮೂರ ತಾಸಿನಿಂದ ಬ್ಯಾನಿ ತಿನ್ನಕೋತ ನಾರ್ಮಲ್ ಹಡಿಬೇಕ ಅಂತ ಡಿಸೈಡ ಮಾಡಿದ್ಲು, ಆದರ ದೇವರ ಇಚ್ಛೆ, ನನ್ನ ಮಗಗ ವತ್ತರ ಬಂದ ಬಿಡ್ತು, ಹಿಂಗಾಗಿ ಒಂದನೇದ ಸಿಜರಿನ್ ಆತು.
ಇನ್ನ ಒಂದನೇದ ಸಿಜರಿನ್ ಆದರ ಎರಡನೇದ ನಾರ್ಮಲಿ ಸಿಜರಿನ್ ಆಗ್ತದ ಅಂತ ಅಂತಾರ. ಆದರೂ ನನ್ನ ಹೆಂಡತಿ ಡಾಕ್ಟರ, ಎರಡನೇದಕ್ಕ ’ನಾ 90 % ನಾರ್ಮಲ್ ಮಾಡಲಿಕ್ಕೆ ಟ್ರೈ ಮಾಡ್ತೇನಿ’ ಅಂತ ಹೇಳಿದ್ಲು. ಆದರ ಅಷ್ಟರಾಗ ನನ್ನ ಹೆಂಡತಿಗೆ ಸಿಜರಿನ್ ಡಿಲೇವರಿದ ಸವಿ ಹತ್ತಿ ಬಿಟ್ಟಿತ್ತ. ಎಲ್ಲಿದರಿ ಇದೊಂದ ಲಾಸ್ಟ ಹಡಿಯೋದ ಸುಮ್ಮನ ಸಿಜರಿನ್ ಮಾಡಿಸಿಗೊಂಡ ಬಿಡ್ತೇನಿ ಅಂತ ಹಟಾ ಹಿಡದಿದ್ಲು. ಹಿಂಗ ದಿವಸ ಹತ್ತರ ಬಂದ್ವು, ಡಾಕ್ಟರ್ ಡೇಟ್ ಕೊಟ್ಟರು. ನಮ್ಮ ಅಪ್ಪ ಪಂಚಾಂಗ ತಗದ ನೋಡಿದ್ರ ಬರೋಬ್ಬರಿ ಖಗ್ರಾಸ ಸೂರ್ಯಗ್ರಹಣದ ದಿವಸ ಡೇಟ್ ಇತ್ತ. ಏ ಎಲ್ಲೀದ ಬಿಡ 10 % ಸಿಜರಿನ ಆಗೋದ ಗ್ಯಾರಂಟಿ ಅಂತ ಡಾಕ್ಟರ್ ಹೇಳ್ಯಾರ ಅದರಾಗ ಕೂಸ ಬ್ಯಾರೆ ಛಲೋ ಬೆಳದದ ಅಂತ ನಮ್ಮವ್ವ ಭಡಾ ಭಡಾ ಒಂದ ಛಲೋ ಮುಹೂರ್ತಾ ನೋಡಿ ಕೊಟ್ಟದ್ದ ಡೇಟಕಿಂತಾ ಒಂದ ವಾರ ಮೊದ್ಲ್ ನನ್ನ ಹೆಂಡತಿದ ಸಿಜರಿನ್ ಮಾಡಿಸಿ ಬಿಟ್ಟಳು.
ಹಿಂಗಾಗಿ ನನ್ನವು ಅಂದರ ನನ್ನ ಹೆಂಡತಿವು ಎರಡು ಸಿಜರಿನ್ ಆದ್ವು.
ಇನ್ನ ಯುಗ ಯುಗಾಂತರದ ಡಿಲೇವರಿ ಬಗ್ಗೆ ಹೇಳಿ ಮಗನ ನೀ ಹೆಂಗ ಹುಟ್ಟಿ ಅದನ್ನೊಂದ ಹೇಳಿಬಿಡ ಅಂತ ಯಾರರ ಅನ್ನೋರಿದ್ದರ ಅದನ್ನು ಹೇಳಿ ಬಿಡ್ತೇನಿ ಕೇಳಿ ಬಿಡ್ರಿ.
ಹಂಗ ನಾ ಹುಟ್ಟಿದ್ದ ಇತ್ತಲಾಗ ನಾರ್ಮಲ್ಲು ಅಲ್ಲಾ ಸಿಜರಿನ್ನು ಅಲ್ಲಾ, ನಾರ್ಮಲಿ ಸಿಜರಿನ್ ಮಾಡೊದ ಒಳಗ ಕೂಸ ಭಾಳ ಬೆಳದಿದ್ದರ, ಅಂದರ ಅದು ಭಾಳ ದೊಡ್ಡದಿದ್ದರ ಇಲ್ಲಾ ಕೂಸ ಕಾಲ ಮುಂದ ಮಾಡಿ ಇದ್ದರ. ಹಂಗ ನಂದೇನ ಹಂತಾ ಬೆಳವಣಿಗೆ ಆವಾಗೂ ಇದ್ದಿದ್ದಿಲ್ಲಾ ಮತ್ತ ಈಗೂ ಇಲ್ಲಾ ಆ ಮಾತ ಬ್ಯಾರೆ. ಅಮ್ಯಾಲೆ ನಂದ ಯಾವಗಲೂ ತಲಿನ ಮುಂದ ಹಿಂಗಾಗಿ ಹುಟ್ಟೋಕಿಂತ ಮೊದ್ಲನೂ ನಂದ ತಲಿನ ಮುಂದ ಇತ್ತ. ಆದರ ನಾ ಹುಟ್ಟಿದ್ದ ಹತ್ತರಾಗ. ನಾ ಅದೇನ ಹಟಾ ಹಿಡಕೊಂಡ ಹೊಟ್ಟ್ಯಾಗ ಕೂತಿದ್ನ್ಯೊ ಗೊತ್ತಿಲ್ಲಾ ಪಾಪ ನಮ್ಮವ್ವ ಎಷ್ಟ ಕಷ್ಟ ಪಟ್ಟ ಬ್ಯಾನಿ ತಿಂದರು ನಾ ಹೊರಗ ಬರಲಿಲ್ಲಂತ. ಅದರಾಗ ಆವಾಗ ಅಂದರ ೧೯೭೩ರಾಗ ಸಿಜರಿನ್ ಇನ್ನು ಅಷ್ಟ ಫೇಮಸ ಇರಲಿಲ್ಲಾ ಆಮ್ಯಾಲೆ ಎಲ್ಲಾರೂ ಮಾಡ್ತಿದ್ದಿಲ್ಲಾ. ಹಿಂಗಾಗಿ ಕಡಿಕೆ ಡಾಕ್ಟರ ತಮಗ ಲೇಟ ಆಗಲಿಕತ್ತಂತ ತಲಿ ಕೆಟ್ಟ ನಂಗ ಶಸ್ತ್ರಾ ಹಾಕಿ ಜಗ್ಗಿ ಹೊರಗ ತಗದರಂತ.
ಶಸ್ತ್ರಾ ಅಂದರ ಯುದ್ಧ ಮಾಡ್ತಾರಲಾ ಹಂತಾ ಶಸ್ತ್ರ ಅಲ್ಲ ಮತ್ತ ಶಸ್ತ್ರಾ ಅಂದರ ಇಕ್ಕಳಾ, ಇಕ್ಕಳಾ ಹಾಕಿ ಹೊರಗ ಬರತೀಯೋ ಇಲ್ಲೊ ಮಗನ ಅಂತ ಎಳದರಂತ. ಅವರ ತಲಿಗೆ ಇಕ್ಕಳಾ ಹಾಕಿ ಜಗ್ಗಿದರಲಾ ಆ ಇಕ್ಕಳದ ಗುರುತು ಇನ್ನು ನನ್ನ ತಲಿ ಒಳಗ ಒಂದು ಮತ್ತ ಬಲಗಣ್ಣ ಮ್ಯಾಲೆ ಇನ್ನೊಂದು ಹಂಗ ಅವ. ಪುಣ್ಯಾ ಒಂದ ಚೂರ ಏನರ ಇಕ್ಕಳ ಅತ್ತಲಾಗ ಇತ್ತಲಾಗ ಆಗಿತ್ತಂದರ ನೀ ಒಕ್ಕಣ್ಣ ಶುಕ್ರಾಚಾರಿ ಆಗಿರ್ತಿದ್ದಿ ಅಂತ ನಮ್ಮವ್ವ ನೆನಪಾದಾಗೊಮ್ಮೆ ಅಂತಿರ್ತಾಳ. ಇನ್ನ ನನ್ನ ಹೆಂಡತಿ ಅಂತೂ
“ಏನೋ ನನ್ನ ಪುಣ್ಯಾ ನೀವ ತಲಿ ಮುಂದ ಮಾಡಿ ಹುಟ್ಟಿದಿರಿ, ಉಲ್ಟಾ ಹುಟ್ಟಿ, ನಿಮ್ಮನ್ನ ಇಕ್ಕಳಾ ಹಾಕಿ ಜಗ್ಗಿದ್ದರ ನನ್ನ ಗತಿ ಏನಾಗ್ತಿತ್ತ” ಅಂತ ಒಂದ ಹತ್ತ ಸರತೆ ಅಂದಾಳ.
“ಲೇ, ಹುಚ್ಚಿ ಹಂಗ ಉಲ್ಟಾ ಬಂದಿದ್ದರ ನಾ ಕಾಲ ಮುಂದ ಮಾಡಿ ಬರ್ತಿದ್ದೆ….ನೀ ಏನ ಮುಂದ ಮಾಡ್ಕೊಂಡ ಬರ್ತೇನಿ ಅಂತ ಅನ್ಕೊಂಡಿ….ಏನೇನರ ವಿಚಾರ ಮಾಡ್ತಿ ನೋಡ… ವಳತ ಅನ್ನ” ಅಂತ ನಾ ಅಕಿಗೆ ಎಷ್ಟೋ ಸರತೆ ಬೈದ ಬಾಯಿ ಮುಚ್ಚಿಸೇನಿ.
ಅನ್ನಂಗ ಈಗ just ನನ್ನ ಹೆಂಡತಿ ಮೌಶಿದ ಮತ್ತ ಫೋನ ಬಂದಿತ್ತ, ಅವರ ಮಗಳ ಹಡದಿದ್ದ ಹೆಣ್ಣಂತ… ಅದ ಸಿಜರಿನ್ ಆತ ಅಂತ startingಗೆ ಫೊನ ಬಂದಿತ್ತಲಾ ಅವರದ. ಸಂಜಿ ಮುಂದ ನಾನು ನನ್ನ ಹೆಂಡತಿ ಒಂದ parle-G ಬಿಸ್ಕಿಟ ಬಂಡಲ್ ಹಿಡಕೊಂಡ ಹೊಗಿ ನೋಡಿ ಬರತೇವಿ.