ಮೊನ್ನೆ ಅಮೇರಿಕಾದ ಟೆಕ್ಸಾಸ್ ಹೌಸ್ ಆಫ್ ರಿಪಬ್ಲಿಕ್ ಒಳಗ ಒಂದ ಹೊಸಾ ಬಿಲ್ ಪ್ರೆಸೆಂಟ್ ಮಾಡ್ಯಾರ, ಇನ್ನ ಮುಂದ ಯಾರ ಗವರ್ನರ್ ಇಲೆಕ್ಷನಗೆ ನಿಲ್ಲತೀರಿ ಅವರ ನಿಮ್ಮ I.Qದ ಪ್ರೂಫ ತೋರಸಬೇಕು, ಹಂಗ ಇಷ್ಟ ಮಿನಿಮಮ್ I.Q ಇದ್ದರ ಇಷ್ಟ ಇಲೆಕ್ಷನಗೆ ಎಲಿಜಿಬಲ್ ಅಂತ ಈ ಬಿಲ್ ಒಳಗ ಪ್ರಸ್ತಾವ ಮಾಡ್ಯಾರ ಅಂತ.
ಹಂಗ ಒಮ್ಮೆ ಈ ಬಿಲ್ ಏನರ ಪಾಸ್ ಆಗಿ ಲಾ(law) ಅಂದರ ಕಾನೂನ ಆತು ಅಂದರ ಯಾರ ಗವರ್ನರ ಇಲೆಕ್ಷನ ನಿಲ್ಲೋರಿದಾರ ಅವರದ I.Q ಚೆಕ್ ಮಾಡಿ ಒಂದ identity card ಮಾಡಿ ಅವರದ ಫೋಟೊ, ಅವರದ ಅಡ್ರೇಸ್ ಮ್ಯಾಲೆ ಅವರದ I.Q ಅದರಾಗ ಹಾಕಿ ಕೊಡೊರ ಇದ್ದಾರ.
ಅಲ್ಲಾ ಹಂಗ ಕಡಮಿ I.Q ಇದ್ದೊರ ಈಗಾಗಲೇ ಆ ಬಿಲ್ ವಿರುದ್ಧ ಹೋರಾಡಲಿಕತ್ತಾರ ಆ ಮಾತ ಬ್ಯಾರೆ. ಹಿಂಗ ಇಲೆಕ್ಷನ ನಿಲ್ಲಲಿಕ್ಕೆ I.Q compulsory ಮಾಡಿದರ ಮುಂದ ನಮಗ ಗವರ್ನರ್ ಇಲೆಕ್ಷನ ನಿಲ್ಲಲಿಕ್ಕಿ ಯಾರು ಸಿಗಲಿಕ್ಕಿಲ್ಲಾ ಅನ್ನೋದ ಅವರ ಸಂಕಟ. ಏನ್ಮಾಡ್ತೀರಿ? ಎಷ್ಟ I.Q ಕಡಮಿ ಇರೋ ಜನಾ ಅಲ್ಲೆ ಇದ್ದಾರ ನೀವ ವಿಚಾರ ಮಾಡ್ರಿ.
ಅಲ್ಲಾ ಅವರ ಏನರ ಮಾಡವಲ್ಲರಾಕ ಬಿಡ್ರಿ, ಆದರ ನಂಗ ಅಂತೂ ಈ idea of I.Q for election ಭಾಳ ಕರೆಕ್ಟ ಅನಸ್ತು. ಹಂಗ ನಮ್ಮ ದೇಶದಾಗು ನಾವ minimum ಇಷ್ಟ I.Q ಇದ್ದೋರಿಗೆ ಇಷ್ಟ election ನಿಲ್ಲಲಿಕ್ಕೆ ಅವಕಾಶ ಅಂತ rules ಮಾಡಬೇಕು ಅಂತ ನಮ್ಮ ಇಲೆಕ್ಷನ ಕಮೀಶನಗೆ ಲೆಟರ ಬರದರಾತು ಅಂತ ಅನ್ಕೋಳೊದರಾಗ ನನ್ನ ಹೆಂಡತಿ ಬಂದ ಎಲ್ಲಾದರಾಗೂ ತಂದು ಒಂದ ಮೂರ ಅಕ್ಕಿ ಕಾಳ ಹಾಕೊ ಹಂಗ ಇದಾರಾಗು I.Q ಅಂದರ ಏನು, ಅದು ಇದು ಅಂತ ನನ್ನ ಜೀವಾ ತಿಂದ ಇಟ್ಟಳು.
ನಾ ಅಕಿಗೆ ಕೂಡಿಸಿ ’ಜಗತ್ತಿನೊಳಗ ಪ್ರತಿಯೊಬ್ಬ ಹುಟ್ಟಿದ್ದ ಮನಷ್ಯಾಗೂ ಒಂದ I.Q ( intelligence quotient) ಅಂತ ಇರತದ, I.Q is a measure of the intelligence of an individual derived from results obtained from specially designed tests. The quotient is traditionally derived by dividing an individual’s mental age by his chronological age and multiplying the result by 100’ ಅಂತ ಅಗದಿ ಬಾಯಿಪಠ ಹೇಳಿದೆ.
ಪಾಪ ಅಕಿಗೆ ನಾ ಹೇಳಿದ್ದ french and greek ಕೇಳಿದಂಗ ಆತ ಕಾಣತದ..
“ಹಂಗ ಅಂದ್ರ” ಅಂದ್ಲು. ನಾ ಮತ್ತ ಅಕಿಗೆ ತಿಳಿಲಿ ಅಂತ
“ಲೇ, ಶಾಣ್ಯಾತನಲೇ…ಮನಷ್ಯಾರ ಶಾಣ್ಯಾತನಕ್ಕ I.Q ಅಂತಾರ…ನೀ ಅಷ್ಟ ತಿಳ್ಕೋ..ಸಾಕ ರಗಡ ಆತ” ಅಂತ ತಿಳಿಸಿ ಹೇಳೊದರಾಗ ನನ್ನ I.Q ಸವದ ಹೋತ.
“ಹಂಗರ ನಿಮ್ಮ I.Q ಸಿಕ್ಕಾ ಪಟ್ಟೆ ಇರಬೇಕು” ಅಂದ್ಲು.
’ಹೌದ್ವಾ, ನಮ್ಮವ್ವ, ಮೊದ್ಲ ಸಿಕ್ಕಾ ಪಟ್ಟೆ ಇತ್ತ, ಈಗ ನಿನ್ನ ಮದುವಿ ಆದ ಮ್ಯಾಲೆ ಕಡಿಮಿ ಆಗೇದ’
ಅನ್ನೊವ ಇದ್ದೆ ಆದರ ಎಲ್ಲಿದ ಹೋಗಲಿ ಬಿಡ ಅಂತ
“ಏ, ನಂದೇನ ಕೇಳ್ತಿ…I.Q, S.Q,E.Q ಎಲ್ಲಾ ನೂರರ ಮ್ಯಾಲೆ ಅವ” ಅಂದ ಬಿಟ್ಟೆ.
“S.Q.ನೂ ನೂರರ ಮ್ಯಾಲೆ ಅದ?” ಅಂತ ಕೇಳಿದ್ಲು.
ಇಕಿ S.Q. ಅಂದರ ಏನ ತಿಳ್ಕೊಂಡ್ಲೊ ಏನೋ ಅಂತ ನಾನ “ಲೇ…SQ ಅಂದರ spiritual quotient ಮತ್ತ, ನೀ ಮತ್ತೇಲ್ಲರ ಬ್ಯಾರೆ ಏನರ ತಿಳ್ಕೊಂಡ ಗಿಳ್ಕೊಂಡಿ..ಅಲ್ಲಾ ಹೇಳಲಿಕ್ಕೆ ಬರಂಗಿಲ್ಲಾ ಮೊದ್ಲ ನಿಂದ IQ ಇರೋದು ಅಷ್ಟರಾಗ ಅದ ಅದಕ್ಕ ಹೇಳಿದೆ” ಅಂದೆ. ಅಕಿ ಸಿಟ್ಟ ಬಂದ
“ಭಾಳ ಶಾಣ್ಯಾ ಇದ್ದೀರಿ…ಏನ ಅಸಂಯ್ಯ ಅಸಂಯ್ಯ ಮಾತಾಡ್ತೀರಿ” ಅಂತ ನಂಗ ಬೈದ್ಲು.
ನಾ ಅಲ್ಲಿಗೆ I.Q ವಿಷಯ ಮರತ ಬಿಟ್ಟಿದ್ದೆ.
ಮೊನ್ನೆ ತುಳಸಿ ಲಗ್ನದ್ದ ದಿವಸ ಬಾಜು ಮನಿ ಮುತ್ತೈದಿ ಅರಿಷಣ ಕುಂಕುಮಕ್ಕ ಬಂದಾಗ ನನ್ನ ಹೆಂಡತಿಗೆ ಏನ ನೆನಪಾತೋ ಏನ ಒಮ್ಮಿಂದೊಮ್ಮಿಲೆ ಉಡಿ ತುಂಬಿಸಿಗೊಳಿಕ್ಕೆ ಬಂದಿದ್ದ ಆ ಮುತ್ತೈದಿಗೆ ಸಡನ್ ಆಗಿ
“ನಿಮ್ಮ ಮನೆಯವರದ I.Q ಎಷ್ಟ ಅದ?” ಅಂತ ಕೇಳಿ ಬಿಟ್ಟಳು. ಅಕಿ ಹಂಗ ಕೇಳಿದ್ದ ಕೇಳಿ ನನಗಿಷ್ಟ ಅಲ್ಲಾ ಪಾಪ ಆ ಮುತ್ತೈದಿಗೂ ಗಾಬರಿ ಆಗಿ ಬಿಡ್ತು. ಪಾಪ ಅಕಿಗೆ ಒಮ್ಮಿಕ್ಕಲೇ ಏನ ಹೇಳಬೇಕ ತಿಳಿಲೇ ಇಲ್ಲಾ, ಆಮ್ಯಾಲೆ ಸ್ವಲ್ಪ ಸಂಭಾಳಿಸಿಗೊಂಡ
“ಏನಿನ್ನರಿ, ನಂಗೂ ಅಷ್ಟ ಗೊತ್ತಿಲ್ಲಾ, ಲಾಸ್ಟ ಟೈಮ ಚೆಕ್ ಮಾಡಿದಾಗ ೮೯ ಅದ ಅಂದಿದ್ರು” ಅಂದ್ಲು.
“ಅಷ್ಟsನ, ನಮ್ಮ ಮನಿಯವರದ ನೂರರ ಮ್ಯಾಲೆ ಅದ” ಅಂತ ಇಕಿ ಅಂದ್ಲು.
ಆ ಮುತ್ತೈದಿ ಒಂದಸರತೆ ನನ್ನ ಮ್ಯಾಲಿಂದ ಕೆಳಗ ನೋಡಿ ಪಾನಕ ಕೊಸಂಬರಿ ತೊಗೊಂಡ ತಮ್ಮ ಮನಿ ಹಾದಿ ಹಿಡದ್ಲು. ಪಾಪ ಅಕಿ ತನ್ನ ಗಂಡಂದ I.Q ಅಂತ ಬಹುಶಃ ತೂಕ ಹೇಳಿದ್ದಳ ಕಾಣ್ತದ ಹಿಂಗಾಗಿ ನನ್ನ ಹೆಂಡತಿ ನಮ್ಮ ಮನಿಯವರದ ನೂರರ ಮ್ಯಾಲೆ ಅದ ಅಂದಾಗ ನನ್ನ ಪಾವ ಕೆ.ಜಿ. ಮಾರಿ ನೋಡಿ ಗಾಬರಿ ಆಗಿದ್ಲು.
ಅಲ್ಲಾ ನನ್ನ ಹೆಂಡತಿಗೆ ಯಾಕ ಬೇಕ ಮತ್ತೊಬ್ಬರ ಗಂಡಂದ I.Q ಉಸಾಬರಿ ಅಂತೇನಿ.
ನಾ ಆ ಮುತ್ತೈದಿ ಹೊಚ್ಚಲಾ ದಾಟೋದ ತಡಾ ತಲಿ ಕೆಟ್ಟ
“ಲೇ, ನೀ ಏನ ಮಾಡ್ತಿ ಮೊತ್ತಬ್ಬರ ಗಂಡಂದ IQ ತೊಗೊಂಡ, ನಿಂಗ್ಯಾಕ ಬೇಕ ಊರ ಉಸಾಬರಿ” ಅಂತ ಜೋರ ಮಾಡಿದರ
“ಅಯ್ಯ… ನಾ ಹಂಗ ನನ್ನ IQ ಬೆಳಸಿಗೊಳ್ಳಿಕ್ಕೆ ಕೇಳಿದೆ, ಯಾಕ ಕೇಳ್ಬಾರದಾಗಿತ್ತೇನ… ನಾ ಶಾಣ್ಯಾಕಿ ಆಗೋದ ನಿಮಗ ಲೈಕಿ ಇಲ್ಲಾ… ಹಬ್ಬ ಇಲ್ಲಾ ಹುಣ್ಣಮಿಲ್ಲಾ ಸುಮ್ಮ ಸುಮ್ಮನ ಬೈತಿರಿ?” ಹಂಗ – ಹಿಂಗ ಅಂತ ಒಮ್ಮಿಕ್ಕಲೇ ಎಮೋಶನಲ್ ಆಗಿ ಬಿಟ್ಟಳು.
ಏನ್ಮಾಡ್ತೀರಿ…ಹಿಂತಾಕಿನ ಕಟಗೊಂಡ?
ಮತ್ತ ನಾನ ಹೋಗಲಿ ಬಿಡ ಹೆಂಗಿದ್ದರೂ ನನ್ನ ಹೆಂಡತಿ ಅಂತ ರಮಿಸಿ ಸಮಾಧಾನ ಮಾಡಿದೆ.
ಆದರೂ ಏನ ಅನ್ನರಿ ದೇವರ ಈ ಹೆಣ್ಣಮಕ್ಕಳಿಗೆ I.Q ಕಡಮಿ ಕೊಟ್ಟರು E.Qಕ್ಕ ಏನ ಕಡಿಮಿ ಮಾಡಿರಂಗಿಲ್ಲಾ ಮತ್ತ, ಮಾತ ಮಾತಿಗೆ emotional ಆಗಿ ನಮ್ಮ E.Qನೂ ಜಾಸ್ತಿ ಮಾಡೆ ಬಿಡ್ತಾರ.
ಅಲ್ಲಾ ನಾ ಖರೇನ ಹೇಳ್ತೇನಿ ಲಗ್ನಾ ಮಾಡ್ಕೋಬೇಕಾರ ಹುಡಗಿದ ಅದು ಇದು ನೋಡಿ ಲಗ್ನಾ ಮಾಡ್ಕೋತೇವಿ, ಒಂದ ಸ್ವಲ್ಪ I.Q ಕಡೆ ಲಕ್ಷ ಕೊಟ್ಟ ಮಾಡ್ಕೊಳಿಲ್ಲಾ ಅಂದರ ಹಿಂಗ ಆಗೋದ.
ನನಗ ಅನಸ್ತದ ನಾವ ಕುಂಡ್ಲಿ ತೊಗೊಬೇಕಾರ ಅದರಾಗ ಹುಡಗಿ IQ ಎಷ್ಟ ಅದ ಅದನ್ನ ಬರದ ಕೊಡ್ರಿ ಅಂತ ಕೇಳಿ ಬರಸಿಗೊಂಡ ಆಮ್ಯಾಲೆ ಕೂಡಿಸಿ ನೋಡಿ ಲಗ್ನಾ ಮಾಡ್ಕೊ ಬೇಕರಿಪಾ, ಅಲ್ಲಾ ಬೇಕಾರ ಆ ಹುಡಗಿದ ರಾಕ್ಷಸ ಗಣಾ ಇದ್ದ ಅಕಿಗೆ ಮಂಗಳ ದೋಷ ಇರವಲ್ತಾಕ ಆದರ I.Q ಮಾತ್ರ ನಮಗ ಹೊಂದೊ ಹಂಗ ಇರಬೇಕು. ಈಗ ಹೆಂಗ ಟೆಕ್ಸಾಸ್ ಒಳಗ ಗವರ್ನರ ಆಗಲಿಕ್ಕೆ minimum ಇಷ್ಟ I.Q ಅಂತ ಕಂಪಲ್ಸರೀ ಮಾಡ್ಯಾರಲಾ ಹಂಗ ನಾವು ಕನ್ಯಾಕ್ಕ ಇಷ್ಟ I.Q ಕಂಪಲ್ಸರಿ ಅಂತ ಮಾಡಬೇಕ ಬಿಡ್ರಿ.
ಅಲ್ಲಾ ನಂದ ಅಂತೂ ಈಗ ಮದುವಿ ಆಗಿ ಬಿಟ್ಟದ ಮುಂದ ಆಗೋರಿಗೆ ಮಾತ ಹೇಳಿದೆ. ನೀವರ ನಿಮ್ಮ ಹುಡಗಿದ I.Q ನೋಡಿ ಮದುವಿ ಆಗರಿಪಾ.