ನಿನ್ನಿಗೆ ನಮ್ಮ facebookಗೆ ಎಂಟ ತುಂಬಿ ಒಂಬತ್ತರಾಗ ಬಿತ್ತು. ನಾವು ಲೋಕಲ್ ಫೆಸಬುಕ್ ಗೆಳ್ಯಾರೆಲ್ಲಾ ಸೇರಿ ಅದರ ಬರ್ಥಡೆ ಸೆಲೆಬ್ರೇಟ್ ಮಾಡಿದ್ವಿ. ಇತ್ತೀಚಿಗಂತೂ ‘facebook ’ ನಮಗೆಲ್ಲಾ ಒಂದ ಕೆಟ್ಟ ಚಟಾ ಆಗಿಬಿಟ್ಟದ. ನನಗಂತೂ ಎದ್ದ ಕೂಡಲೇನ ಕ್ಯಾಮಾರಿಲೇ ಮೊದಲ ಕಂಪ್ಯೂಟರನಾಗ ಫೇಸಬುಕ್ ಅಕೌಂಟ ಒಪನ್ ಮಾಡಿ ನೋಡಿ, good morning to all ಅಂತ ಎಲ್ಲಾರಿಗೂ ವಿಶ್ ಮಾಡಿ on the way to bathroom ಅಂತ ಸ್ಟೇಟಸ್ ಮೇಸೆಜ್ ಹಾಕಿದ ಮ್ಯಾಲೆ ಮುಂದಿನ ಕೆಲಸ.
ಇವತ್ತ ನನಗ ೨೦೦೦ನೇ ಇಸವ್ಯಾಗ ಕಟಗೊಂಡ ಹೆಂಡತಿ, ೨೦೦೨ ರಾಗ ಹುಟ್ಟಿದ ಮಗನಕಿಂತಾನೂ ೨೦೦೪ ರಾಗ ಹುಟ್ಟಿದ್ದ ಈ facebook ಭಾಳ ಕ್ಲೋಸ್ ಅದ. ನನಗ ಅದನ್ನ ಬಿಟ್ಟ ಬದಕಲಿಕ್ಕ ಆಗಂಗಿಲ್ಲೇನೋ ಅನ್ನೋ ಹಂಗ ಆಗೇದ. ನನ್ನ ಹೆಂಡತಿ ‘facebook’ಗೆ ತನ್ನ ಸವತಿ ಅಂತಾಳ. ಏನೋ ಅದಕ್ಕ ಮಕ್ಕಳಾಗಂಗಿಲ್ಲಾ ಅಂತ ಸುಮ್ಮನ ಬಿಟ್ಟಾಳ, ಇಲ್ಲಾಂದರ ಆ facebook ಹಡದವರನ ಇಷ್ಟೂತ್ತಿಗೆ ಸುಟ್ಟ ಬರತಿದ್ಲು.
ಅದರಾಗ ನಮ್ಮ ಯಂಗ್ ಜನರೇಶನಗಂತೂ facebookದ ಹುಚ್ಚ ಹಿಡದ ಬಿಟ್ಟದ. ಮೊನ್ನೆ ನಮ್ಮ ಪೈಕಿ ಒಂದ ಹುಡಗಿದ ಲಗ್ನ ಫಿಕ್ಸ್ ಆತು, ಗಡಿ-ಬಿಡಿ ಒಳಗ ಎಂಗೇಜಮೆಂಟು ಆತು. ಆಮೇಲೆ ಹುಡಗಿಗ ಗೊತ್ತಾತು ಆ ಹುಡಗಂದು facebook ಅಕೌಂಟು ಇಲ್ಲಾ, ಅವಂಗ ಅದರ ಬಗ್ಗೆ ಗೊತ್ತು ಇಲ್ಲಾ ಅಂತ. ಅಂವಾ ಪಾಪ, ಕಾಲೇಜನಾಗ ಕನ್ನಡಾ ಲೇಕ್ಚರರ್, ಯು.ಜಿ.ಸಿ. ಸ್ಕೇಲ ಪಗಾರ, ಆದ್ರ ಫೇಸ್ ಬುಕ್ ಬಗ್ಗೆ ಗೊತ್ತಿದ್ದಿದ್ದಿಲ್ಲಾ.
” ನೀ facebookನಾಗ ಇಲ್ಲಾಂದ್ರ ನಿನಗ ಏನೂ ಜಗತ್ತಿಂದ knowledge ಇಲ್ಲಾ, ನಿನಗ ಸೊಸಿಯಲ್ ಲೈಫ್ ಇಲ್ಲಾ , ನಿನ್ನಂತಾವನ ಜೊತಿ ನಾ ಹೆಂಗ ಬದುಕಬೇಕು? ” ಅಂತ ಆ ಹುಡಗಿ ಮದುವಿ ಮುರಕೊಂಡ ಬಿಟ್ಟಳು.
“ಅಲ್ಲವಾ ,ಆ ಹುಡಗಾ ಆಕಳಂತಾ ಮನಷ್ಯಾ, ಒಂದ ಚಟಾ ಇಲ್ಲಾ, ಮ್ಯಾಲೆ ಅವಂದ ೭೦ ಸಾವಿರ ಪಗಾರ ” ಅಂತ ಅವರಪ್ಪ ಅಂದ್ರ
” ರೊಕ್ಕಾ ತೂಗೊಂಡ ಏನ ಮಾಡ್ಬೇಕ, ಅವಂಗ facebook ನಾಗಿಂದ like ಅಂದ್ರ ಗೊತ್ತಿಲ್ಲಾ, poke ಅಂದ್ರ ಗೊತ್ತಿಲ್ಲಾ” ಅಂತ ಮದುವಿ ಕ್ಯಾನ್ಸಲ್ ಮಾಡಿ, ಫೆಸಬುಕನಾಗ i broke my engagement ಅಂತ status message ಹಾಕಿದ್ಲು. ಅದನ್ನ ೧೦೮ ಮಂದಿ like ಮಾಡಿದ್ರು , ೧೮ ಮಂದಿ ಅದರಾಗ congrats ಅಂತ ಕಮೆಂಟೂ ಮಾಡಿದ್ರು. ಪಾಪ ಇನ್ನ ಆ ಹುಡಗಂತೂ ಸತ್ತಂಗ. ಮೊದ್ಲ ನಮ್ಮ ಮಂದ್ಯಾಗ ಕನ್ಯಾ ಇಲ್ಲಾ, ಇನ್ನ ಒಂದ ಮದುವಿ ಮುರಗಡೆ ಆಗೇದ ಅಂದ್ರ ಅವಂಗ ಮುಂದ ಎರಡನೇ ಸಂಬಂಧದ ಕನ್ಯಾನೂ ಸಿಗಂಗಿಲ್ಲಾ. ಅಲ್ಲಾ, ತಪ್ಪ ಅವಂದ ಬಿಡ್ರಿ, facebookನಾಗ account ಇಲ್ಲಾಂದ್ರ ಹೆಂತಾ ಮನಷ್ಯಾರಿ ?
ಹಂಗ facebook ನಾಗ ಛಲೋ ಸುದ್ದಿ ಇಷ್ಟ ಮಂದಿ like ಮಾಡಬೇಕಂತ ಇಲ್ಲಾ. ಹೋದ ವರ್ಷ ನಮ್ಮ ದೋಸ್ತ ಅವನ ಹೆಂಡತಿ ಸತ್ತಾಗ ‘i lost my beloved wife’ ಅಂತ status message ಹಾಕಿದಾ, ಅದನ್ನ ೫೨ ಮಂದಿ like ಮಾಡಿದ್ರು. ಅಂವಾ ಮನಸಿಗೆ ಭಾಳ ಕೆಟ್ಟ ಅನಿಸಿಕೊಂಡ
” ಏನಲೇ, ನನ್ನ ಹೆಂಡತಿ facebookನಾಗಿನ ಮಂದಿಗೂ ಬ್ಯಾಡಾಗಿದ್ಲೇನ್ ? ” ಅಂತ ಅಂದಾ.
ನಾ ” ಅದ ಹಂಗ ಅಲ್ಲಲೇ, ಮಂದಿ ನಿನ್ನ ಹೆಂಡತಿ ಸತ್ತದ ಸುದ್ದಿ like ಮಾಡ್ಯಾರ ಅಂದರ ಅವರಿಗೂ ಏನೋ ಕಳ್ಕೋಂಡ ಆಗಿ ನಿನ್ನ ಅಷ್ಟ ದು:ಖ ಆಗೇದ ಅಂತ ಅರ್ಥ” ಅಂತ ತಿಳಿಸಿ ಹೇಳಿದೆ. ಅಂವಾ ತಲಿ ಕೆಟ್ಟ ಅವನೌನ ಈ facebook ಉಸಾಬರಿನ ಬ್ಯಾಡ ಅಂತ ‘REST IN PEACE’ ಅಂತ ಸ್ಟೆಟಸ್ ಮೆಸೆಜ್ ಹಾಕಿ ತನ್ನ ಅಕೌಂಟ delete ಮಾಡಿ ಬಿಟ್ಟಾ.
ಇವತ್ತ ಯಾರಾದರು ಫೇಸಬುಕನಾಗ ಇಲ್ಲಾಂದರ ಅವರದ ಸೊಸಿಯಲ್ ‘existance’ ಇಲ್ಲಾ ಅಂದಂಗ. ಅಕಸ್ಮಾತ ನೀವ ಏನರ ಅದ್ರಾಗ ಇಲ್ಲಾಂದ್ರ ” ನೀ facebookನಾಗ ಇಲ್ಲಾ ? ” ಅಂತ ಅಗದಿ ಏನ್ ನೀವು ‘ಲೈಫ್ ಇನ್ಸೂರೆನ್ಸ’ ಮಾಡಸಲಾರದ ಸಾಯಲಿಕತ್ತೋರ ಗತೆ ಕೇಳ್ತಾರ. ಇವತ್ತ ನಿಮ್ಮ ಕಡೆ ಬರೆ ರೇಶನ್ ಕಾರ್ಡ್, ಇಲೆಕ್ಷನ್ ಕಾರ್ಡ್ ಇದ್ದರ ಸಾಕಾಗಂಗಿಲ್ಲಾ, ಸಮಾಜದಾಗ ಬದಕಲಿಕ್ಕೆ facebook ಅಕೌಂಟ್ ಬೇಕು, ಮುಂದ ಭವಿಷ್ಯದಾಗ facebookನಾಗ ಇದ್ದೋರಿಗೆ ಇಷ್ಟ ಚಿಮಣಿ ಎಣ್ಣಿ, LPG ಸಿಲೆಂಡರ್ ಕೋಡ್ತೇವಿ ಅಂದ್ರ ಏನ್ ಮಾಡ್ತೀರಿ. ಅದಕ್ಕ ಲಗೂನ ಒಂದ ಅಕೌಂಟ್ ಒಪನ್ ಮಾಡಿ ನನಗ freind request ಕಳಸರಿ ಮತ್ತ.