” ಏನ್ರಿ ಸಾಹೇಬರ ಮನ್ನೇನ ದಿಲ್ಲಿಗೆ ಸೆಶನಗೆ ಹೋಗಿದ್ರಿ, ಯಾವಾಗೋ ವಾಪಸ ಬಂದಿರಲಾ ? ” ಅಂತ ನಿನ್ನೆ ಒಂದ ಮದುವ್ಯಾಗ ನಮ್ಮ ಲೋಕಲ ಎಮ್.ಪಿ. ನೋಡಿ ಕೇಳಿದೆ.
” ಏ, ದಿನಾ ಪಾರ್ಲಿಮೆಂಟನಾಗ ಗದ್ಲಾ ಮಾಡಿ ಸೂಟಿ ಮಾಡ್ಲಿಕತ್ತಾರ ಹಿಂಗಾಗಿ ಅಲ್ಲೆ ಇದ್ದರ ಏನ್ ಮಾಡೋದ ಅಂತ ವಾಪಸ ಬಂದೆ, ಅದರಾಗ ಈಗ ಲಗ್ನದ ಸಿಸನ್ ಬ್ಯಾರೆ, ಉರಾಗ ಒಂದಿಷ್ಟ ಮದುವಿ ಅದಾವ, ಅವನ್ನೆಲ್ಲಾ ಬಿಡಾಕೂ ಬರಂಗಿಲ್ಲ. ಒಂದ ವಾರ ಇದ್ದ ಎಲ್ಲಾ ಮುಗಿಸಿಕೊಂಡ ಮುಂದ ಹೋದರಾತ ” ಅಂತ ನಕ್ಕರು.
ಆ ಸಣ್ಣ ಹುಡಗರ ಸಾಲಿ ಸುಟಿ ಕೊಟ್ಟಾಗ, ಪಾಟಿ ಚೀಲಾ ಬಗಲಾಗ ಇಟಗೊಂಡ ಊಟದ ಡಬ್ಬಿ ಬಾರಿಸಿಗೋತ ” ಪಾಟಿ ಮ್ಯಾಲೆ ಪಾಟಿ, ನಮ್ಮ ಸಾಲಿ ಸೂಟಿ ” ಅಂತ ಒದರಕೊತ ಬರತಾರಲಾ ಹಂಗ ನಮ್ಮ ಎಮ್.ಪಿ ಗೊಳ ಪಾರ್ಲಿಮೆಂಟ ಸೂಟಿ ಕೊಟ್ಟರ ಸಾಕ ತಮ್ಮ-ತಮ್ಮ ಊರಿಗೆ ಬಂದ ಬಿಡತಾರ.
” ಅಲ್ರಿ ಸಾಹೇಬರ, ನೀವ ಹೀಂಗ ತಪ್ಪಿಸಿದರ ಹೆಂಗ, ಮದ್ಲ ನಿಮ್ಮ ಅಟೆಂಡನ್ಸ ಪಾರ್ಲಿಮೆಂಟನಾಗ ಭಾಳ ಕಡಿಮೆ ಅದ , ಯಾರರ ಕೇಳಿದರ ಏನ ಉತ್ತರಾ ಕೊಡೊರು?” ಅಂತ ಕೇಳಿದೆ.
” ನನಗ್ಯಾರ ಕೇಳ್ತಾರೋ ತಮ್ಮಾ ,ನಂದ ಹಾಜರಿ ಕಡಿಮೆ ಆದರ ನನಗೇನ್ ಪರೀಕ್ಷಾಕ್ಕ ಕೂಡಸಂಗಿಲ್ಲೋ , ಏನ ಮುಂದಿನ ಸರತೆ ಪಾರ್ಟಿಯವರ ಟಿಕೆಟ ಕೊಂಡಗಿಲ್ಲೋ ? ಇಲ್ಲಾ, ಜನಾ ಒಟ ಹಾಕೊಂಗಿಲ್ಲೋ?”ಅಂತ ನನಗ ಜೋರ ಮಾಡಿದರು.
ಅದು ಖರೇನ, ಒಮ್ಮೆ ನಾವ ಒಟ ಹಾಕಿ ಗೆಲ್ಲಿಸಿದ ಮ್ಯಾಲೆ ಇವರ ಪಾರ್ಲಿಮೆಂಟಗೆ ಹೋದರ ಏನ, ಬಿಟ್ಟರ ಏನ ? ನಾವರ ಏನ ಮಾಡೊಹಂಗ ಇದ್ದೇವಿ.
ಈಗ ನೋಡ್ರಿ ೧೫ನೇ ಲೋಕಸಭಾದಾಗ ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಣ್ಣಂದ ಅಟೆಂಡನ್ಸ ಬರೇ ೪೭% , ನಮ್ಮ ಹಾಲಿ ಮುಖ್ಯ ಮಂತ್ರಿ ಸದಾನಂದ ಗೌಡ್ರ ಎಮ್. ಪಿ ಇದ್ದಾಗ ಅವರ ಹಾಜರಿ ೪೮%. ಗೌಡ್ರಂತೂ ಪಾರ್ಲಿಮೆಂಟಗೆ ಚಕ್ಕರ್ ಹೊಡದ ‘ನಾಳೆ ರಜೆ, ಗೋಲಿ ಭಜೆ’ ಅಂತ ಇಲ್ಲೆ ಉಡುಪ್ಯಾಗ ಇದ್ದ ಬಿಡತಿದ್ದರು. ಅದಕ್ಕ ಅವರ ಪಾರ್ಟಿಯವರ ” ನೀವು ಸುಮ್ಮನ ಅಲ್ಲೆ ಇದ್ದ ಬಿಡ್ರಿ, ಇನ್ನ ದಿಲ್ಲಿಗೆ ಬರಲಿಕ್ಕೆ ಹೋಗಬ್ಯಾಡ್ರಿ” ಅಂತ ಮುಖ್ಯ ಮಂತ್ರಿ ಮಾಡಿಬಿಟ್ಟರು.
ಇನ್ನ ನಮ್ಮಂದಿ ಹಿಂಗ ಬಿಡ ಅಂತ ಹೊರಗಿಂದ ಹೇಮಾಮಾಲಿನಿನ ಕರಕೊಂಡ ಬಂದ ಎಮ್. ಪಿ ಮಾಡಿದ್ವಿ. ಈಗ ನೋಡಿದ್ರ ಆ ಅಮ್ಮನ ಅಟೆಂಡನ್ಸ ೨೯%. ಎನ ಮಾಡ್ತೀರಿ ?
” ಅಲ್ರಿ ಸಾಹೇಬರ ನೀವು ಪಾರ್ಲಿಮೆಂಟಗೆ ಹೋಗಿ ಜನರ ಸಮಸ್ಯೆ ಬಗ್ಗೆ ಪ್ರಶ್ನೆ ಹಾಕಬೇಕರಿಪಾ, ಹಿಂಗ ಉರಾಗ ಮದುವಿ-ಮುಂಜವಿ ಅದಾವ ಅದ ಅಂತ ಇಲ್ಲೇ ಇದ್ದರ ಹೆಂಗ ?” ಅಂದೆ.
” ಏ ಎನ ಪ್ರಶ್ನೆ ಕೇಳೊದರಿ, ವಿರೋಧಿ ಪಕ್ಷದವರ ನಮಗ ಮಾತಾಡಾಕ ಕೊಟ್ಟರ ಕೇಳಬೇಕಲಾ? ಎಲ್ಲಾರೂ ಸೇರಿ ಧಾಂದಲೆ ಮಾಡಿ ಪಾರ್ಲಿಮೆಂಟ ಸೂಟಿ ಮಾಡಿ ಬಿಡತಾರ” ಅಂದ್ರು.
ಅವರ ಹೇಳೋದು ಸರೀನ. ಪಾರ್ಲಿಮೆಂಟ ಛಂದಾಗಿ ನಡದರಲಾ ಇವರ ಪ್ರಶ್ನೆ ಕೇಳೊದ. ಅದಕ್ಕ ನಮ್ಮ ದೇವೆಗೌಡ್ರ ನೋಡ್ರಿ, ಎಲ್ಲಾ ಪ್ರಶ್ನೆಗೆ ಉತ್ತರಾ ತಿಳ್ಕೊಂಡವರು, ಪಾರ್ಲಿಮೆಂಟನಾಗ ಒಂದ ಪ್ರಶ್ನೆ ಕೇಳಂಗಿಲ್ಲಾ. ಇವರು , ಕುಮಾರಣ್ಣ ಕೂಡಿ ಈ ೧೫ನೇ ಲೋಕಸಭಾದೊಳಗ ಇವತ್ತಿಗೂ ಒಂದ ಪ್ರಶ್ನೆ ಕೇಳಿಲ್ಲಾ. ಅಲ್ಲೆ ಬ್ಯಾರೆವರ ದೇಶಕ್ಕ ದೇಶಾನ ನುಂಗಿದ್ರು ಪಾರ್ಲಿಮೆಂಟನಾಗ ಸುಮ್ಮನ ಕೂಡತಾರ, ಇಲ್ಲೇ ಬೆಂಗಳೂರಾಗ ಪಾಪ ನಮ್ಮ ಯಡಿಯುರಪ್ಪಾರಿಗೆ ” ಇದು ಎಲ್ಲಿಂದ ಬಂತು, ಅಲ್ಲೇ ಜಗಾ ಹೆಂಗ ತೊಗಂಡ್ರಿ , ಅವರ ಕಡೆ ಎಷ್ಟ ಇಸ್ಗೋಂಡ್ರಿ” ಅಂತ ದಿವಸಾ ಜೀವಾ ತಿಂತಾರ.
ಅಲ್ರಿ, ದಿವಸಕ್ಕ ೨ – ೩ ಕೋಟಿ ಖರ್ಚ ಮಾಡಿ ವರ್ಷದಾಗ ೬೦-೭೦ ದಿವಸ ಪಾರ್ಲಿಮೆಂಟ ನಡಸ್ತಾರ , ಅದಕ್ಕೂ ನಮ್ಮ ಎಮ್.ಪಿ.ಗೊಳ ಸರಿಯಾಗಿ ಹೋಗಲಿಲ್ಲ ಅಂದರ ಹೆಂಗರಿ. ನಮ್ಮ ರಾಜ್ಯದಾಗ ಅಂತೂ ೩೦% ಎಮ್.ಪಿಗೊಳ ಯಾವಾಗಲೂ ಪಾರ್ಲಿಮೆಂಟನಾಗ ಗೈರ ಇರತಾರ. ಹಿಂಗಾದ್ರ ನಮ್ಮ ದೇಶಾ, ರಾಜ್ಯ ಹೆಂಗ ಉದ್ಧಾರ ಆಗಬೇಕ ನೀವ ಹೇಳ್ರಿ.
ಇನ್ನ ಸುಮ್ಮನ ನಾವ ಒಟ ಹಾಕಿದ್ದ ಸಂಕಟಕ್ಕ ನಮ್ಮ – ನಮ್ಮ ಎಮ್.ಪಿ ಗಳನ್ನ ‘ಸಣ್ಣ ಹುಡಗರಿಗೆ ಸಾಲಿಗೆ ಹೋಗಿ ಬಿಟ್ಟ ಬರತಾರಲಾ’ ಹಂಗ ನಮ್ಮ ಖರ್ಚನಾಗ ಪಾರ್ಲಿಮೆಂಟಗೆ ಹೋಗಿ ಬಿಟ್ಟ ” ಸ್ವಲ್ಪ ಓದಿ ಶಾಣ್ಯಾರಾಗರಿ , ಅಂದ್ರ ನಮ್ಮ ಬಗ್ಗೆ ಸ್ವಲ್ಪ ಪಾರ್ಲಿಮೆಂಟನಾಗ ಮಾತಾಡಿ, ನಮ್ಮನ್ನೂ ಉದ್ಧಾರ ಮಾಡ್ರಿಪಾ” ಅಂತ ಬೇಡ್ಕೊಂಡ ಬರಬೇಕ ಇಷ್ಟ.