ಫೆಬ್ರುವರಿ ೨೯ – ಪ್ರಪೋಸಲ್ ಡೆ

ಮುಂಜ ಮುಂಜಾನೆ ಎದ್ದ ತಯಾರ ಆಗೋ ಹೊತ್ತಿನಾಗ ನನ್ನ ಮೊಬೈಲ್ ಹೊಯ್ಕೊಳ್ಳಿಕತ್ತ, ಇನ್ನ ನಾ ಮೂಬೈಲ್ ಎತ್ತಿ ಮಾತಾಡಿದರ ನನಗ ಆಫೀಸಿಗೆ ಹೊತ್ತಾಗತದ ಆಂತ ನನ್ನ ಹೆಂಡತಿಗೆ ” ಲೇ ಫೋನ್ ಎತ್ತ, ಅದು ಒದರೋದ ಕೇಳಸಂಗಿಲ್ಲೇನ ” ಅಂತ ನಾ ಒದರಿ ಬಾಥರೂಮಗೆ ಹೋದೆ. ಮೊದ್ಲ ನಾವ ಏಳೋದ ನಮಗ ಏಳೂ ಹನ್ನೆರಡಾಣೆ ಆಗಿರ್ತದ.ಇನ್ನ ಎಂಟು ಐವತ್ತರೊಳಗ ರೆಡಿ ಆಗಿ ಆಫೀಸಿಗೆ ಹೊಗಲಿಕ್ಕೆ ಗಡಿಬಿಡಿಲೆ ತಯಾರಾಗೊ ಹೊತ್ತಿನಾಗ ಯಾರರ ಫೋನ್ ಮಾಡಿಬಿಟ್ಟರ ಮುಗದ ಹೋತು, ನಾ ಒಂದ ಸಂಡಾಸಕ್ಕ ಹೋಗೊದು, ಇಲ್ಲಾ ದಾಡಿ ಮಾಡ್ಕೊಳೋದು, ಇಲ್ಲಾ ನಾಷ್ಟಾ ಮಾಡೋದು ಯಾವದರ ಒಂದ ಅವತ್ತ ಡ್ರಾಪ ಮಾಡಿದರ ಇಷ್ಟ ಕರೆಕ್ಟ ಟೈಮಿಗೆ ಆಫೀಸಿಗೆ ಹೋಗೋದು, ಹಿಂಗಾಗಿ ನಾ ವಾರದಾಗ ಒಂದ ಸರತೆ ಇಷ್ಟ ದಾಡಿ ಮಾಡ್ಕೋಂಡ ಆಫೀಸಗೆ ಹೋಗ್ತೇನಿ. ಇನ್ನ ತಿಂಡಿ ತಿನ್ನೋದು – ಬೈಲಕಡಿಗೆ ಹೋಗೋದು ವಾರದಾಗ ಒಂದೆರಡ ಸಲಾ ಬಿಟ್ಟ-ಬಿಟ್ಟಿರತೇನಿ ಆ ಮಾತ ಬ್ಯಾರೆ.
” ರ್ರೀ ಯಾರೋ ವಿರೇಶಂತ ನಿಮ್ಮ ಜೊತಿನ ಮಾತಾಡಬೇಕಂತ” ಅಂತ ನನ್ನ ಹೆಂಡತಿ ಮೊಬೈಲ್ ಬಾಥರೂಮನಾಗ ತುರಕಿದ್ಲು, ಇಂವಾ ಯಾಕ ಫೋನ್ ಮಾಡಿದ್ನಪ್ಪಾ, ಹಂಗ ಹಗಲಗಲಾ ಫೋನ್ ಮಾಡೋ ಗಿರಾಕಿನೂ ಅಲ್ಲಾ, ಏನರ ಅರ್ಜೆಂಟ ಕೆಲಸ ಇರಬೇಕು ಅಂತ ಫೋನ್ ತೂಗೊಂಡೆ
“ಹೇಳಪಾ, ಮುಂಜ-ಮುಂಜಾನೆದ್ದ ಫೋನ್ ಮಾಡಿಯಲಾ “ಅಂದೆ
“ಲೇ, ಇವತ್ತ ಸಂಜಿಗೆ ಗೋಕಲ್ ಗಾರ್ಡನ್ ಗೆ ನಿನ್ನ ಹೆಂಡತಿನ ಕರಕೊಂಡ ಬಾ ,ಇವತ್ತ ನಂದ ಒಂದನೆ ಅನಿವರ್ಸರಿ, ನಾ ಪಾರ್ಟಿ ಕೊಡಲಿಕತ್ತೇನಿ ” ಅಂದಾ ‘ಹೌದಾ, ಯಾರಜೊತಿಗೆ ಅನಿವರ್ಸರಿ’ ಅನ್ನೋವಿದ್ದೆ ಆದರ ಆಮ್ಯಾಲೆ ಹೋಳಿತ ಅನಿವರ್ಸರಿ ಹೆಂಡತಿ ಜೊತಿಗೆ ಇಷ್ಟ ಆಗೋದ, ಹಂಗ ಹೊರಗ ಸೆಟಿಂಗ ಎಷ್ಟ ಇದ್ದರು ಅನಿವರ್ಸರಿ ಮಾಡಲಿಕ್ಕೆ ಬರಂಗಿಲ್ಲಾ ಅಂತ ಸುಮ್ಮನ
” ಆತ ತೊಗೊಪಾ, ಸಂಜಿಗೆ ಬರ್ತೇನಿ, ಎನಿ ವೇ ವಿಶ್ ಯು ವೆರಿ ಹ್ಯಾಪಿ ಫಸ್ಟ್ ಅನಿವರ್ಸರಿ ” ಅಂತ ಕೆಟ್ಟ ಮಾರಿಲೆ ನನ್ನ ಹೆಂಡತಿ ಮಾರಿ ನೋಡ್ಕೋತ ಹೇಳಿ ಮೊಬೈಲ್ ನನ್ನ ಹೆಂಡತಿ ಕೈಯಾಗ ಕೊಟ್ಟೆ.
ಜನಾ ಜಗತ್ತಿನಾಗ ಏನೇನ ಸೆಲೆಬ್ರೇಟ ಮಾಡ್ತಾರಲಾ ಅಂತ ಅನಸ್ತು, ಅಲ್ಲಾ ಅವನೌನ ಮ್ಯಾರೇಜ ಅನಿವರ್ಸರಿ ಏನ ಸೆಲೆಬ್ರೇಟ ಮಾಡೋದ ? ‘ಮ್ಯಾರೇಜ ಅನಿವರ್ಸರಿ’ ಅಂದರ ಗಂಡಸರಿಗೆ ‘ಶಹಿದ ದಿವಸ’ ಇದ್ದಂಗ, ಒಂದ ಥರಾ ಗಂಡಂದರ ಶ್ರಾದ್ಧ ಅನ್ನರಿ. ಅಲ್ಲಾ ಇದ ನನ್ನ ಅನಿಸಿಕೆ ಬಿಡರಿ , ಕೆಲವಬ್ಬರಿಗೆ ಹಿಂತಾವನ್ನ ಸೆಲೆಬ್ರೇಟ್ ಮಾಡೋದರಾಗೂ ಮಜಾ ಬರ್ತದ ಆ ಮಾತ ಬ್ಯಾರೆ. ಅಷ್ಟರಾಗ ನನ್ನ ಹೆಂಡತಿ ” ಅಲ್ಲರೀ ಅವರದ ಒಂದನೇ ಅನಿವರ್ಸರೀನ ? ಆರ ತಿಂಗಳ ಹಿಂದ ಅವನ ಹೆಂಡತಿ ಎರಡನೇದ ಹಡದಾಗ ಇಬ್ಬರೂ ಹೋಗಿ ವಾತ್ಸಲ್ಯ ದಾವಾಖಾನ್ಯಾಗ ಕೂಸಿನ ಕೈಯಾಗ ೧೦೦ ರೂಪಾಯಿ ಕೊಟ್ಟ ಬಂದಿಲ್ಲಾ ?” ಅಂದ್ಲು. ಹೌದಲಾ ಇಕಿ ಹೇಳೋದು ಖರೇನ ಅದ, ಅವಂಗ ಇವತ್ತ ಎರಡ ಮಕ್ಕಳ ಅವ, ಒನ್ನೆದಕ್ಕ ಎರಡ – ಎರಡುವರಿ ವರ್ಷ ಇರಬೇಕು , ಎರಡನೇದ ಒಂದ ಆರ ತಿಂಗಳ ಕೂಸ ಅದ. ಹಂಗಾದರ ಇವಂದ ಒಂದನೇ ಅನಿವರ್ಸರೀ ಹೆಂಗ ? ಅಂತಾ ವಿಚಾರ ಮಾಡಲಿಕತ್ತೆ. ಅಲ್ಲಾ ನಮಗ ಯಾರಿಗೂ ಹೇಳಲಾರದ ಮತ್ತೇನರ ಇನ್ನೊಂದ ಲಗ್ನಾ ಮಾಡ್ಕೋಂಡಾನಿನ ಅಂತ ನನಗ ಸಂಕಟಾ ಆಗಲಿಕತ್ತ. ಅಷ್ಟರಾಗ ನೆನಪಾತ ಇವತ್ತ ಫೆಬ್ರುವರಿ ೨೯ ಅಂತ. ಅವಂದ ಮದುವಿ ಆಗಿದ್ದ ಫೆಬ್ರುವರಿ ೨೯, ೨೦೦೮ ಕ್ಕ ಅಂದರ ‘ಲೀಪ್’ ವರ್ಷದಾಗ, ಹಂಗಾಗಿ ಅವಂದ ಅನಿವರ್ಸರಿ ಡೇಟ್ ಪ್ರಕಾರ ಬರೋದ ೪ ವರ್ಷಕ್ಕ ಒಂದ ಸರತೆ. ಅದಕ್ಕ ಮಗಾ ಲಗ್ನದಾಗ ಊಟಾ ಮಾಡಿಸಿದಾಂವ ತಿರುಗಿ ದೋಸ್ತರಿಗೆ ಊಟಕ್ಕ ಕರದಿದ್ದ ಇವತ್ತ.
ಈ ಮಗಾ ಏನ ಪೂಣ್ಯಾ ಮಾಡ್ಯಾನ ಅನಸ್ತು. ಅಲ್ಲರಿ , ನಾಲ್ಕ ವರ್ಷಕ್ಕೊಂದ ಸರತೆ ಇಷ್ಟ ಅನಿವರ್ಸರಿ ಅಂದರ ಅವನ ಹೆಂಡತಿಗೆ ಅಂವಾ ನಾಲ್ಕ ವರ್ಷಕ್ಕೊಮ್ಮೆ ಇಷ್ಟ ಅನಿವರ್ಸರಿ ಗಿಫ್ಟ ಕೊಡತಾನ ಮುಂದ ಮೂರವರ್ಷ ಅನಿವರ್ಸಿರಿ ಚಿಂತೆನ ಇರಂಗಿಲ್ಲಾ. ಅಲ್ಲಾ, ಹಂಗ ಹೆಂಡತಿ ಇದ್ದಾಳಲಾ ಅನ್ನೋ ಚಿಂತಿ ಮುಂದ ಅನಿವರ್ಸರಿ ಚಿಂತಿ ಏನ ದೊಡ್ಡದಲ್ಲ ಬಿಡ್ರಿ, ಆದ್ರೂ ಒಂದ ಚಿಂತೆರ ನಮಕಿಂತಾ ಅವಂಗ ಕಡಿಮೆ ಅದಲಾ.
ನನಗ ಇಂವಂದ ಫೆಬ್ರುವರಿ ೨೯ ಕ್ಕ ಮದುವಿ ಆಗಿದ್ದ ಭಾರಿ ವಿಶೇಷ ಅನಸ್ತು . ಹಂಗ ಫೆಬ್ರುವರಿ ೨೯ಕ್ಕ ಹುಟ್ಟಿದವರದ ಹುಟ್ಟಿದ ಹಬ್ಬನು ಡೇಟ ಪ್ರಕಾರ ನಾಲ್ಕ ವರ್ಷಕ್ಕೊಮ್ಮೆ ಇಷ್ಟ, ಹಂಗ ಯಾರರ ಫೆಬ್ರುವರಿ ೨೯ ಕ್ಕ ನಮ್ಮ ಮಂದ್ಯಾಗ ಸತ್ತಾಗ ವರ್ಷಾಂತಕಾನೂ ತಿಥಿ ಬದ್ಲಿ ಡೇಟ ಪ್ರಕಾರ ಮಾಡೋ ಪದ್ಧತಿ ಇದ್ದರ, ಅದನ್ನು ನಾಲ್ಕ ವರ್ಷ ಬಿಟ್ಟ ಮಾಡಬೇಕಾಗತಿತ್ತು. ಮುಂದ ನಾಲ್ಕ-ನಾಲ್ಕ ವರ್ಷಕ್ಕೊಮ್ಮೆ ಇಷ್ಟ ಶ್ರದ್ಧಾ, ಈಗ ವರ್ಷಕ್ಕೊಮ್ಮೆ ಶ್ರಾದ್ಧಾ ಮಾಡಬೇಕಾರ ಇಷ್ಟರ ತಮ್ಮ ಅಜ್ಜಾ-ಅಜ್ಜಿ , ಅವ್ವಾ-ಅಪ್ಪನ್ನ ನೆನಸೊರು ಮುಂದ ನಾಲ್ಕ ವರ್ಷಕ್ಕೊಮ್ಮೆ ಇಷ್ಟ ಶ್ರಾದ್ಧ ಅಂದರ ಮುಂದಿನ ಶ್ರಾದ್ಧದ ಪಾಳೆ ಬರೋದರಾಗ ಇವತ್ತ ಯಾರ ಶ್ರಾದ್ಧ ಅನ್ನೋದನ್ನೂ ಮರತ ಬಿಟ್ಟಿರತಾರ. ಅಲ್ಲಾ ಹಂಗ ನಂದ ಮದುವಿ ಆಗಿದ್ದೂ ‘ಲೀಪ್’ ವರ್ಷ ಇದ್ದಾಗ. ಅಂದರ ೨೦೦೦ ದಾಗ, ನಾನು ಸುಮ್ಮನ ಫೆಬ್ರುವರಿ ೨೯ ಕ್ಕ ಮದುವಿ ಮಾಡ್ಕೋಬೇಕಿತ್ತು. ನನ್ನ ಹೆಂಡತಿಗೆ ವರ್ಷಾ- ವರ್ಷಾ ಎರೆಡೆರಡ ಹೊಸಾ ನೈಟೀ ಕೊಡಸೋದರ ತಪ್ಪತಿತ್ತ ಅಂತ ಈಗ ಅನಸ್ತದ. ಆದ್ರ ಆಗಿದ್ದ ಆಗಿ ಹೋತ ಬಿಡ್ರಿ. ಈಗ ಭಾಳಂದ್ರ ಮುಂದಿನ ಫೆಬ್ರುವರಿ ೨೯ ಕ್ಕ ಡೈವರ್ಸ ಕೊಡಬಹುದು ಇಷ್ಟ.
ಈ ‘ಲೀಪ್ ಇಯರ್’ ಕ್ಕು ನಮ್ಮ ಮಂದಿ ಅಧಿಕ ವರ್ಷಕ್ಕೂ ಹಂಗೇನ ಖಾಸ ಸಂಬಂಧ ಇಲ್ಲಾ , ನಮ್ಮ ಅಧಿಕ ವರ್ಷ ಎರಡ-ಮೂರ ವರ್ಷಕ್ಕೊಮ್ಮೆ ನಾವ ಮಾಡಿದ್ದ ಪಾಪಾ ಜಾಸ್ತಿ ಆದಗೊಮ್ಮೆ ಬರಕೋತ ಇರತದ. ಹಿಂಗಾಗಿ ಮಂದಿ ಅಧಿಕ ಮಾಸದಾಗ ದಾನ-ಧರ್ಮ, ದೇವರು-ದಿಂಡ್ರು ಎಲ್ಲಾ ಮಾಡಿ ಗುಡಿ-ಗುಂಢಾರ ಅಡ್ಡ್ಯಾಡತಾರ. . ಅಧಿಕ ಮಾಸದಾಗ ಬರೋ ತಿಥಿಯೆಲ್ಲಾ ಮತ್ತ ಅದರ ಮುಂದಿನ ತಿಂಗಳ ರಿಪೀಟ್ ಆಗತಾವ . ಹಂಗ ಅಧಿಕ ಮಾಸದಾಗ ಮದುವಿ ಆದರ ಮತ್ತ ಅದು ಮುಂದಿನ ತಿಂಗಳ ಇಲ್ಲಾ ಮುಂದಿನ ಅಧಿಕ ಮಾಸದಾಗ ಏನ ರಿಪೀಟ್ ಆಗಂಗಿಲ್ಲಾ ಮತ್ತ. ಆದ್ರ ಅಧಿಕ ಮಾಸದಾಗ ಯಾರರ ಸತ್ತರ ಅವರ ಶ್ರದ್ಧಾ ಮಾತ್ರ ಅಧಿಕ ಬಂದಾಗ ಒಮ್ಮೆ ಎರೆಡೆರಡ ಸರತೆ ಮಾಡಬೇಕಾಗತದ. ಅಧಿಕ ಮಾಸದಾಗ ಮಂದಿಗೆ ಬಾಗಣಾ ಕೊಡೊ ಪದ್ಧತಿ. ಹಂಗ ಬಾಗಣಾ ಕೊಟ್ಟರ ಪುಣ್ಯಾ ಬರತದಂತ, ಪಾಪ ಏನ ಕಡಿಮೆ ಆಗಂಗಿಲ್ಲ ಮತ್ತ. ಅದ ಏನ ಬಾಗಣ ಕೊಟ್ಟರು ೩೩ ಕೊಡಬೇಕಂತ. ಹಂಗ ೩೩ ಯಾಕ ಅಂತ ನನಗೂ ಗೊತ್ತಿಲ್ಲಾ, ಬಹುಶಃ ೩೩ ಕೋಟಿ ದೇವರ ಇದ್ದಾರಂತಲಾ ನಮ್ಮ ಪೈಕಿ ಅದಕ್ಕ ಇದ್ದರು ಇರಬಹುದು. ಮತ್ತ ಅಗದಿ ಈ ಅಧಿಕ ಮಾಸ ನಮಗ ರೊಕ್ಕದ ತ್ರಾಸ ಜಾಸ್ತಿ ಇದ್ದಾಗ ಬಂದಿರತದ ಹಿಂಗಾಗಿ ಕೆಲವೊಮ್ಮೆ ಬಾಗಣ ಕೊಡಬೇಕಾರೂ ೩೩ ಮಂದಿ ಕಡೆ ಸಾಲಾ ಮಾಡೋ ಪ್ರಸಂಗ ಬರತದ, ಇರಲಿ ಈ ಅಧಿಕ ಮಾಸದ ಬಗ್ಗೆ ಮತ್ತ ಅಧಿಕ ಮಾಸದಾಗ ಬರೆಯೋಣಂತ. ಈಗ ಫೆಬ್ರುವರಿ ೨೯ ಕ್ಕ ಬರೋಣ, ಹಂಗ ನಿಮಗ್ಯಾರಿಗರ ಫೆಬ್ರುವರಿ ೨೯ ಕ್ಕ ಮದುವಿ ಆಗಬೇಕಂದರ ಇಲ್ಲಾ ಹಡಿಬೇಕಂದರ ಈಗಿಂದ ಪ್ಲ್ಯಾನ ಮಾಡರಿ , ಫೆಬ್ರುವರಿ ೨೯ ಮತ್ತ ಬರೋದ ಇನ್ನ ೨೦೧೬ಕ್ಕ, ನೀವ ಈಗಿಂದ ಕನ್ಯಾ ನೋಡಲಿಕ್ಕೆ ( ಲಗ್ನ ಆಗಲಾರದವರ ಮತ್ತ ) ಶುರುಮಾಡಿದರ ಅಲ್ಲಿ ಮಟಾ ಮದುವಿ ಆದರು ಆಗ ಬಹುದು, ಹಂಗ ಈಗ ಕನ್ಯಾ ಲಗು ಸಿಕ್ಕವರು ಮದುವಿ ಮಾಡ್ಕೊಂಡ ಒಂದನೇದ ತಯಾರಿ ಮಾಡೋದರಾಗ ೨೦೧೫ ಆಗಿ ಬಿಡತದ ಮುಂದ ೨೦೧೬ ಕ್ಕ ಕರೆಕ್ಟ ಫೆಬ್ರುವರಿ ೨೯ ಕ್ಕ ಹಡಿಬಹುದು, ಹಂಗ ಅವತ್ತ ನಾರ್ಮಲ್ ಡಿಲೆವರಿನ ಆಗಬೇಕಂತ ಏನ ಇಲ್ಲಾ , ಕರೆಕ್ಟ ಅವತ್ತ ಸಿಜರಿನ್ ಮಾಡಿಸಿದರಾತು. ಏನ ಈಗಿನ ಹೆಣ್ಣ ಮಕ್ಕಳು ಬ್ಯಾನಿ ತಿಂದ ನಾರ್ಮಲ್ ಹಡೆಯೋದ ಅಷ್ಟರಾಗ ಅದ. ಈಗಿನ ಕಾಲದಾಗ ಏನ ಬ್ಯಾನಿ ತಿಂದರು ಗಂಡಂದರ ತಿನ್ನಬೇಕು. ನನ್ನ ಕೇಳರಿಲ್ಲಿ ನಾ ಎರಡ ಹಡದವ ಇದ್ದೇನಿ. ಹಡದ ಮ್ಯಾಲೆ ಗಂಡಸರಿಗೆ ಇನ್ನೂ ಬ್ಯಾನಿ ಜಾಸ್ತಿ ಆಗತಾವ ಹೊರತು ಕಡಿಮೆ ಅಂತೂ ಆಗಂಗಿಲ್ಲಾ.
ಇನ್ನ ನಿಮಗ ಈ ಫೆಬ್ರುವರಿ ೨೯ ರದ ಇತಿಹಾಸ ಒಂದ ಚೂರ ಹೇಳ್ಬೇಕಂದ್ರ, ಹಿಂದಕ ೫ ನೇ ಶತಮಾನದಾಗ ಐರಲ್ಯಾಂಡ , ಸ್ಕಾಟಲ್ಯಾಂಡ ಒಳಗ ಯಾ ಹುಡಗಿ ಬೇಕಾದರು ಫೆಬ್ರುವರಿ ೨೯ ಕ್ಕ ತನ್ನ ತಲ್ಯಾಗ ತಿಳಿದಿದ್ದ ಹುಡಗಗ ಪ್ರಪೋಸ್ ಮಾಡಬಹುದಿತ್ತ ಅಂತ , ಅಂದ್ರ ನಾಲ್ಕ ವರ್ಷಕ್ಕ ಒಂದ ಸರತೆ ಇಷ್ಟ ಹುಡಗಿ ಮನಸ್ಸಿಗೆ ಬಂದ ಹುಡಗನ್ನ ಪ್ರಪೋಸ ಮಾಡತಿದ್ಲು , ಅಲ್ಲಾ ಈಗ ನಡಲಿಕತ್ತಿದ್ದರ ಏನ ಮತ್ತ ಅಂತಿರೇನ ,,,? ಈಗರ ಎಲ್ಲೇ ನಾವು ಅಂದರ ಗಂಡಸರು ನಮ್ಮ ಮರ್ಜಿ ಪ್ರಕಾರ ಹುಡಗ್ಯಾರನ್ನ ಲಗ್ನ ಮಾಡ್ಕೊಳ್ಳಿಕತ್ತೇವಿ, ಈಗೂ ಅವರ ಮರ್ಜಿ ಮ್ಯಾಲೆ ಅಲಾ ಹುಡಗರು ಸೆಲೆಕ್ಟ , ಸೊಲ್ಡ ಆಗಲಿಕತ್ತಿದ್ದು . ಇರಲಿ ,ಹಂಗ ಆವಾಗ ಹುಡಗಿ ಪ್ರಪೋಸ ಮಾಡಿದಾಗ ಅಕಸ್ಮಾತ ಆ ಹುಡಗಾ ನಾ ಒಲ್ಲೇ ಅಂತ ಅಂದರ ಅಂವಾ ಅಕಿಗೆ ದಂಡಾ ಕೊಡಬೇಕಾಗ್ತಿತ್ತಂತ, ದಂಡಾ ಅಂದರ ತಾ ಒಲ್ಲೇ ಅಂದ ಹುಡಗಿಗೆ ಒಂದ ಕಿಸ್ಸ್ ( ಗಲ್ಲಕ್ಕ ಮತ್ತ ), ಒಂದ ಸಿಲ್ಕ ಗೌನ ಕೊಡಸಬೇಕಾಗ್ತಿತ್ತಂತ, ಹೆಂತಾ ಮಜಾ ಅಂತೀರಿನ, ನಾವು-ನೀವು ಆಗಿದ್ದರ ಒಂದ ಇಪ್ಪತ್ತ ಹುಡಿಗ್ಯಾರಿಗೆ ಅವರು ಪ್ರಪೋಸ್ ಮಾಡಿದಾಗ ‘ಇಲ್ಲಾ’ ಅಂದ ಇಪ್ಪತ್ತ ಕಿಸ್ಸ್ ಕೊಟ್ಟ, ಗೌನ ಹಾಕಿ ಕಳಸ್ತಿದ್ದವಿ ಅನ್ನ ಬ್ಯಾಡರಿ, ಹಂಗ ನಮ್ಮ ನಸೀಬದಾಗ ೨೦ ಕಿಸ್ಸ್ ಕೊಡೋದು ಬರದಿರಬೇಕು ಅಂದರ ನಮ್ಮ ಮಾರಿಗೆ ಮೊದ್ಲ ೨೦ ಹುಡಗ್ಯಾರ ಪ್ರಪೋಸ್ ಮಾಡಬೇಕು, ಆಮ್ಯಾಲೆ ನಾವು ರಿಜೆಕ್ಟ ಮಾಡೋ ಮಾತ. ಹಂಗ ಯಾ ಹುಡುಗಿ ಬೇಕ ಆ ಹುಡುಗಿ ಪ್ರಪೋಸ ಮಾಡೋ ಹಂಗನೂ ಇದ್ದಿದ್ದಿಲ್ಲಾ , ಯಾರ ಪ್ರಪೋಸ ಮಾಡಬೇಕ ಅಂತಾರೋ ಹಂತಾ ಹುಡುಗಿ ತನ್ನ ಗೌನ ಒಳಗ ಕೆಂಪ/ಪಿಂಕ್ ಪೆಟಿಕೋಟ ಹಾಕ್ಕೊಂಡಿದ್ದರ ಇಷ್ಟ ಅದ ವ್ಯಾಲಿಡ್ ಪ್ರಪೋಸಲ್ ಆಗ್ತಿತ್ತಂತ. ಅವಾಗ ನೈಟಿ ಇದ್ದಿದ್ದಿಲ್ಲಾ, ಹಿಂಗಾಗಿ ಒಳಗ ಪೆಟಿಕೋಟ್ ಮ್ಯಾಲೆ ಗೌನ್ ಅಂತ ಎರಡೆರಡ ಹಾಕೊತಿದ್ದರು. ಅಲ್ಲಾ ಹಂಗ ಪ್ರಪೋಸ ಮಾಡಲಿಕ್ಕೆ ಬಂದೋಕಿದ ಹುಡುಗುರು ಗೌನ ಎತ್ತೆತ್ತಿ ನೋಡತಿದ್ದರೇನೂ ಅಂತ ನನಗ ಕೇಳಬ್ಯಾಡರಿ, ನಾನು ನಿಮ್ಮಂಗ ೨೦ ನೇ ಶತಮಾನದಾಗ ಹುಟ್ಟಿದಂವಾ. ನಾ ಏನ ಯಾರದು ಗೌನ್ ಎತ್ತಿ ನೋಡಿಲ್ಲಾ ಮತ್ತ. ಏನೋ ಫೆಬ್ರುವರಿ ೨೯ ಕ್ಕ ಹಿಂದ ಇತಿಹಾಸದಾಗ ಹೆಂತಿಂತಾ ವಿಚಾರ ನಡಿತಿದ್ವು ಅಂತ ತಿಳಿಸಿ ಹೇಳಿದೆ ಇಷ್ಟ. ಮತ್ತ ಇದ ಏನ ನಾ ಕಟ್ಟಿದ್ದ ಕಥಿ ಅಲ್ಲಾ, ಇತಿಹಾಸ ತಗದ ನೋಡ್ರಿ ನಿಮಗೂ ಗೊತ್ತಾಗತದ ನಾ ಖರೆ ಹೇಳಲಿಕತ್ತೇನಿ ಅಂತ.
ಏನ ‘ರೇರ ಕಸ್ಟಮ’ ಅನಸ್ತದ ಅಲಾ ? ಬಹುಶಃ ಆವಾಗ ಇದ ಒಂದ ನಮೂನಿ ಹೆಣ್ಣಮಕ್ಕಳೊಳಗ ನಾಲ್ಕ ವರ್ಷಕ್ಕೊಮ್ಮೆ ಬರೋ ಡೀಸಿಸ್ ಇತ್ತ ಕಾಣಸ್ತದ. ನಾಲ್ಕ ವರ್ಷಕ್ಕೊಮ್ಮೆ ಕಂಡ – ಕಂಡ ಗಂಡಸರಿಗೆಲ್ಲಾ ‘ಗಂಡಸರನ ಕಂಡೇನೂ ಇಲ್ಲೊ’ ಅನ್ನೊ ಹಂಗ ಪ್ರಪೋಸ್ ಮಾಡೋದು, ಅಂವಾ ಹೂಂ ಅಂದರ ಅವನ್ನ ಕಟಕೊಂಡ ಜೀವನ ಪರ್ಯಂತ ಅವನ ಜೀವಾ ತಿನ್ನೊದು ಇಲ್ಲಾ ಅಂದರ ಒಂದ ಕಿಸ್ಸ್, ಒಂದ ಗೌನ ಕೊಡಿಸಿಕೊಂಡ ಮತ್ತೊಬ್ಬನ ಕಡೆ ಹೋಗಿ ಮತ್ತ ಪ್ರಪೋಸ್ ಮಾಡೋದು , ಬಹುಶಃ ಅದಕ್ಕ ಈ ಸಲ ಫೆಬ್ರುವರಿ ೨೯ ಕ್ಕ ಭಾಳಷ್ಟ ದೇಶದಾಗ ಇದನ್ನ ‘ರೇರ ಡಿಸಿಸ್ ಡೇ’ ಅಂತ ಆಚರಿಸಲಿಕತ್ತಾರ. ಅಂದ್ರ ಗೊತ್ತಾತಲಾ? ಹಿಂಗ ಕಂಡ ಕಂಡೊರಿಗೆ ಪ್ರಪೋಸ್ ಮಾಡೋದು ಹೆಣ್ಣ ಮಕ್ಕಳ ಒಳಗ ಇರೋ ‘ರೇರ್ ಡೀಸಿಸ್’ ಅಂದರ ‘ಅತಿ ವಿರಳ ಜಡ್ಡು’ ಅಂತ ಅರ್ಥ ಆದರ ಅದು ಭಾಳ ಪುರಾತನ ಜಡ್ಡು ಅಂತ ನಿಮಗ ಈಗ ಗೊತ್ತಾತ ಹೌದಲ್ಲ?
ಅಲ್ಲಾ ನಮ್ಮ ಮಂದಿ ಒಳಗ ಮೊದ್ಲ ಹೆಣ್ಣ ಸಿಗೋದ ಭಾಳ ‘ರೇರ’ ಆಗಿ, ಪಾಪ ನಮ್ಮ ಎಳೆ ಹುಡಗರೆಲ್ಲಾ ‘ಡೀಸಿಸಡ’ ಆಗ್ಯಾರ. ಇನ್ನ ಕನ್ಯಾ ತಾವ ಬಂದ ಪ್ರಪೋಸ್ ಮಾಡೋದು ನಮ್ಮ ಕನಸಿನ ಮಾತ ಸೈ. ಇದೇಲ್ಲಾ ಒಂದ ಸಾವಿರಾರು ವರ್ಷದ ಹಿಂದ ಮುಗದ ಹೋದ ಕಥಿ, ನಿಮಗೂ ಗೊತ್ತಿರಲಿ ಅಂತ ಹೇಳಿದೆ ಇಷ್ಟ.
ಈಗ ಆಗಿದ್ದ ಆಗಿ ಹೋತು, ಮುಂದೀನ ಫೆಬ್ರುವರಿ ೨೯ ಕ್ಕ ನೀವ ಏನ ಮಾಡೊರು ವಿಚಾರ ಮಾಡ್ರಿ, ಒಂದು ಇನ್ನೊಂದ ಹಡದರ ಹಡಿರಿ ಇಲ್ಲಾ ಮತ್ತೊಂದ ಮದುವೆರ ಆಗರಿ, ಹಂಗ ಫೆಬ್ರುವರಿ ೨೯ ಹಗಲಗಲಾ ಬರಂಗಿಲ್ಲಾ ಅದಕ್ಕ ಹೇಳಿದೆ ಇಷ್ಟ. ಅಲ್ಲಾ, ಮತ್ತ ನಿಮಗೂ ಯಾವದರ ಹುಡಗಿ ಫೆಬ್ರುವರಿ ೨೯ ಕ್ಕ ಬಂದ ಪ್ರಪೋಸ್ ಮಾಡತಾಳ ನೀವು ಅಕಿಗೆ ‘ಒಲ್ಲೆ’ ಅಂದ ಒಂದ ಕಿಸ್ಸ್ ಕೊಟ್ಟ ಕಳಸಿದರಾತೂ ಅಂತ ಅನ್ಕೋ ಬ್ಯಾಡರಿ, ಅಕಸ್ಮಾತ ಹಂಗ ಯಾರರ ಬಂದ ಪ್ರಪೊಸ್ ಮಾಡಿದರು ಅಂತ ಅಂದರ ಸುಡಗಾಡ ಒಂದ ಕಿಸ್ಸ್ ಸಂಬಂಧ ರಿಜೆಕ್ಟೂ ಮಾಡ ಬ್ಯಾಡರಿ, ಮದ್ಲ ಇಲ್ಲೆ ಕನ್ಯಾ ಸಿಗವಲ್ವು, ಸಿಕ್ಕಿದ್ದ ಶಿವಾ ಅಂದ ಬಿಡರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ