ಹಂಗ ದಿವಸಾ ಮುಂಜಾನೆ ಏಳಬೇಕಾರ ಮೊಬೈಲನಾಗಿನ ಅಲರಾಮ ಹೊಯ್ಕೊಂಡ ಕೂಡಲೇ ಅದನ್ನ ಸ್ನೂಜ್ ಮಾಡಿ (ಮುಂದೂಡಿ) ಮಲ್ಕೊಳೊ ಚಟಾ ನಂದ. ಆ ಮೊಬೈಲ ಒಂದ ಮೂರ ಸರತೆ ಹೊಯ್ಕೊಂಡ ಕಡಿಕೆ ತಾನ ಬಂದ ಆದರು ನನಗ ಖಬರ ಇರಂಗಿಲ್ಲಾ. ಕಡಿಕೆ ನನ್ನ ಹೆಂಡತಿ ತಲಿಕೆಟ್ಟ ಒಂದ್ಯಾರಡ ಸರತೆ ತನ್ನ ಆವಾಜಲೇ ಅಲಾರಾಮ್ ಹೊಡದ ಮ್ಯಾಲೇ ಏಳೊ ಮನಷ್ಯಾ ನಾ, ಹಂಗ ಹೆಂಡ್ತಿ ಅಲಾರಾಮ್ ಸ್ನೂಜ್ ಮಾಡೊ ಕ್ಯಾಪ್ಯಾಸಿಟಿ ನನಗಿನ್ನೂ ಬಂದಿಲ್ಲಾ ಆ ಮಾತ ಬ್ಯಾರೆ.
’ಅಲ್ಲರಿ ಮೊಬೈಲನಾಗ ಅಲಾರಾಮ ಹೊಡದರು ಅದನ್ನ ಸ್ನೂಜ್ ಮಾಡಿ ಮತ್ತ ಮಲ್ಕೋಳೊ ಹಂಗ ಇದ್ದರ ಅಲಾರಾಮರ ಯಾಕ ಇಟ್ಗೊತಿರಿ?’ ಅಂತ ಅಕಿ ದಿವಸಾ ಲಾಜಿಕಲ್ ಕ್ವೆಶನ್ ಕೇಳೋಕಿ.
ಇನ್ನ ಮುಂಜ ಮುಂಜಾನೆ ಎದ್ದ ಅಕಿ ಲಾಜಿಕಗೆ ಎಲ್ಲೆ ಬಾಯಿ ಹತ್ತೋದ ಬಿಡ ಅಂತ ಸುಮ್ಮನ ಎದ್ದ ಮುಂದಿನ ಕೆಲಸಕ್ಕ ಹೋಗೊದ ನನ್ನ ದಿನಚರಿ.
ಹಂಗ ನಾ ಅಲಾರಾಮ್ ಆದಾಗ ಸ್ನೂಜ ಮಾಡಿ ಮಲ್ಕೊಂಡರು ನಡರಾತ್ರಿ ಒಳಗ ಯಾವದರ ನಮ್ಮ ಫೇಸಬುಕ್ ನೋಟಿಫಿಕೇಶನದ್ದ ಸೌಂಡ ಬಂದರ ಸಾಕ ಎದ್ದ ಮೊಬೈಲನಾಗ ಅದನ್ನ ಚೆಕ್ ಮಾಡಿ ಮತ್ತ ಮಲ್ಕೋತಿದ್ದೆ. ಅಲ್ಲಾ, ಅದೇನೋ ಅಂತಾರಲಾ, ಬಾಜುಕ ಒಂದು ಹೆಂಡ್ತಿನರs ಸ್ಮಾರ್ಟ ಇರಬೇಕು ಇಲ್ಲಾ ಸ್ಮಾರ್ಟ ಫೋನರ ಇರಬೇಕು ಅಂತ, ಹಂಗ ನಾ ಅಂತೂ ಒಂದ ಸ್ಮಾರ್ಟ ಫೋನ ಸಾಲಂಗಿಲ್ಲಾ ಅಂತ ಒಂದ ೭ ಇಂಚ ಸ್ಯಾಮಸಂಗ್ ಟ್ಯಾಬ ಬ್ಯಾರೆ ಇಟಗೊಂಡ ಮಲ್ಕೊಂಡಿರ್ತೇನಿ. ಇದರ ಅರ್ಥ ನನ್ನ ಹೆಂಡತಿ ಆ ಪರಿ ಸ್ಮಾರ್ಟ ಇಲ್ಲಾ ಅಂತ ಅಲ್ಲ ಮತ್ತ. ನಾ ಆ ಪರಿ ಸ್ಮಾರ್ಟ ಹೆಂಡ್ತಿನ್ನ ಬಿಟ್ಟ ಸ್ಮಾರ್ಟ ಫೋನಿಗೆ ಅಡಿಕ್ಟ ಆಗೇನಿ ಅಂತ ಅದರ ಅರ್ಥ.
ಈ ಫೇಸಬುಕ್ ನೋಟಿಫಿಕೇಶನ್ ಸ್ಮಾರ್ಟ ಫೋನನಾಗ ಕೇಳಸಲಿಲ್ಲಾಂದರು ಟ್ಯಾಬನಾಗರ ಕೇಳಸಲಿ ಅಂತ ಎರೆಡು ಇಟಗೊಂಡ ಮಲ್ಕೊಂಡಿರ್ತೇನಿ ಇಷ್ಟ. ಪಾಪ ನನ್ನ ಹೆಂಡತಿ ಮೊದ್ಲ ಸೂಕ್ಷ್ಮ ಮನಷ್ಯಾಳ, ಅಕಿಗೆ ನನ್ನ ಫೇಸಬುಕ್ ನೋಟಿಫಿಕೇಶನ್ ಬಂದರ ಸಾಕ ಡಿಸ್ಟರ್ಬ್ ಆಗಿ ನಡರಾತ್ರಿ ಒಳಗ ಎದ್ದ ಕೂತ ಬಿಡೋಕಿ. ಅಲ್ಲಾ ನಮ್ಮಂತಾವರ ರಾತ್ರಿ ಎರಡ ಮೂರ ಗಂಟೆಕ್ಕ ಫೇಸಬುಕ್ಕಿನಾಗ ನೋಟಿಫಿಕೇಶನ್ ಬಂದಾವ ಅಂತ ಎದ್ದ ನೋಡಲಿಕತ್ತರ ಬಾಜು ಮಲ್ಕೊಂಡ ಹೆಂಡ್ತಿಗೆ ಡಿಸ್ಟರ್ಬ ಆಗಲಾರದ ಏನ ಮತ್ತ್. ಏನ ಮಾಡೋದ ಏನೋ ಫೇಸಬುಕ್ಕಿನಾಗ ಭಾಳ ಮಂದಿಗೆ ಹಚಗೊಂಡೇನಿ ಹಿಂಗಾಗಿ ಜನಾ ಕಮೆಂಟ ಮಾಡಿದಾಗ ಅದನ್ನ ಓದಿ ಲೈಕ ಮಾಡಲಿಲ್ಲಾಂದ್ರ ಮನಸ್ಸಿಗೆ ಸಮಾಧಾನ ಆಗಂಗಿಲ್ಲಾ.
ಹಂಗ ಇದೇಲ್ಲಾ ನನ್ನ ಹೆಂಡತಿಗೆ ಗೊತ್ತ ಇದ್ದದ್ದ ವಿಷಯನ ಬಿಡ್ರಿ, ಅಕಿಗೆ ಅದರ ಸಂಬಂಧ ತಲಿ ಒಡ್ಕೊಂಡ ಒಡ್ಕೊಂಡ ರಗಡ ಆಗೇದ.
ಮೊನ್ನೆ ಬನಶಂಕರಿ ನವರಾತ್ರಿ ಒಳಗ ನಾ ನಸಿಕಲೇ ಐದ ಗಂಟೆಕ್ಕ ಎದ್ದ ಬನಶಂಕರಿಗೆ ಹೋಗ ಬೇಕಿತ್ತ. ನಮ್ಮವ್ವಂತೂ ಮೂರ ದಿವಸದಿಂದ
’ಶುಕ್ರವಾರ ಲಗೂನ ಏಳಬೇಕಪಾ, ಬನಶಂಕರಿ ನವರಾತ್ರಿ, ಹೋಗಿ ದೇವಿ ದೀಪಕ್ಕ ಎಣ್ಣಿ ಹಾಕಿ, ಕಾಯಿ ಒಡಿಸಿಗೊಂಡ ಬರಬೇಕು’ ಅಂತ ಒಂದ ಸಮನ ಶುರು ಹಚ್ಚೆ ಬಿಟ್ಟಿದ್ಲು.
’ಏ, ನಾ ಎಲ್ಲಾ ಏಳ್ತೇನಿ ತೊಗೊ ನೀ ಈಗಿಂದ ತಲಿ ತಿನ್ನ ಬ್ಯಾಡ’ ಅಂತ ನಾ ನಮ್ಮವ್ವಗ ಅಂದರ ನನ್ನ ಹೆಂಡತಿ ಅಗದಿ ಕಾನ್ಫಿಡೆನ್ಸಲೇ
’ಏ, ನಾ ಎಲ್ಲಾ ಎಬಸ್ತೇನಿ ತೋಗೊರಿ ಅತ್ಯಾ, ನೀವೇನ ಕಾಳಜಿ ಮಾಡಬ್ಯಾಡರಿ, ನಂಗ ಅವರನ ಹೆಂಗ ಎಬಸಬೇಕ ಗೊತ್ತದ’ ಅಂತ ಏನ ಅಗದಿ ಗಂಡನ್ನ ಒದ್ದ ಎಬಸೋ ಲೇವಲನಾಗ ಮಾತಾಡಿದ್ಲು. ಅಲ್ಲಾ ಹಂಗ ಅಕಿ ದಿವಸಾ ಹತ್ತ ಸರತೆ ಒದರಿ ಒದರಿ ಎಬಸತಾಳ ಬಿಡ್ರಿ, ಆದ್ರ ಅಕಿ ಐದ ಗಂಟೆಕ್ಕ ಕರೆಕ್ಟ ಎಬಸ್ತೇನಿ ಅಂತ ಅಂದಿದ್ದ ಕೇಳಿ ನಂಗೇಲ್ಲೊ ಇಕಿ ಹಿಂದಿನ ದಿವಸ ರಾತ್ರಿ ಮಲ್ಕೊಳಿಕ್ಕೆ ಕೊಡಲಿಕ್ಕಿಲ್ಲಾ ಅಂತ ಅನ್ಕೊಂಡಿದ್ದೆ.
ಅವತ್ತನೂ ದಿನದ ಗತೆ ಒಂದ ಕಡೆ ಸ್ಮಾರ್ಟ ಫೋನ, ಒಂದ ಕಡೆ ಟ್ಯಾಬ್ ,ಲಾಸ್ಟಿಗೆ ಗ್ವಾಡಿ ಕಡೆ ಹೆಂಡ್ತಿನ್ನ ಇಟಗೊಂಡ ಮಲ್ಕೊಂಡಿದ್ದೆ. ನಡರಾತ್ರ್ಯಾಗ ಫೇಸಬುಕ್ ನೋಟಿಫಿಕೇಶನ್ ಬರಲಿಕತ್ವು, ನಾ ಎದ್ದ ನೋಡಿ ನೋಡಿ ಮತ್ತ ಮಲ್ಕೊಳಿಕತ್ತೆ. ಆಮ್ಯಾಲೆ ಒಮ್ಮಿಂದೊಮ್ಮಿಲೆ ಕಂಟಿನ್ಯೂ ಆಗಿ ನೋಟಿಫಿಕೇಶನ್ ಬರಲಿಕತ್ವು. ಮೊಬೈಲ, ಟ್ಯಾಬ ಎರಡೂ ಹೋಯ್ಕೋಳಿಕತ್ವು. ನಾ ಒಮ್ಮಿಕ್ಕಲೇ ಇಷ್ಟ ನೋಟಿಫಿಕೇಶನ ಬಂದ್ವಲಾ ಅಂತ ಖುಶ್ ಆಗಿ ಎದ್ದ ಕೂತ
’ಏನ ಜನಾ ಈ ಪರಿ ನಂಗ ಕಮೆಂಟ್ ಮಾಡಲಿಕತ್ತಾರ, ಹಂತಾದ ಏನ್ ವಿಶೇಷ’ ಅಂತ ಎದ್ದ ಫೇಸಬುಕ್ ತಗದ ನೊಡಿದ್ರ ಅವೇಲ್ಲಾ ನನ್ನ ಬರ್ಥಡೇ ವಿಶಿಸ್. ಅಲ್ಲಾ ನಾ ಹುಟ್ಟಿದ್ದ ನೋಡಿದರ ಅಕ್ಟೋಬರನಾಗ ಇದೇನ ಜನೇವರಿ ಒಳಗ ವಿಶ್ ಬರಲಿಕತ್ವಲಾ ಅಂತ ನೋಡಿದರ ಫೇಸಬುಕ್ಕಿನಾಗ ನನ್ನ ಡೇಟ್ ಆಫ್ ಬರ್ಥ್ ಚೆಂಜ್ ಆಗಿ ಬಿಟ್ಟಿತ್ತ. ಹಿಂಗಾಗಿ ಒಂದ ಸಮನ ’ಮೆನಿ ಹ್ಯಾಪಿ ರಿಟರ್ನ್ಸ ಆಫ್ ದ ಡೇ’ ಅಂತ ಮೆಸೆಜ ಬಂದಿದ್ದ ಬಂದಿದ್ದ.
ನನ್ನ ಹಣೇಬರಹ ನೋಡ್ರಿ, ನನ್ನ ಬರ್ಥಡೇ ಇವತ್ತ ಅಲ್ಲಾ ಅಂತ ಫೇಸಬುಕ್ಕ ಫ್ರೇಂಡ್ಸಗೆ ಹೇಳೋ ಹಂಗನೂ ಇಲ್ಲಾ, ಮೂರ ತಿಂಗಳ ಹಿಂದ ಈ ಮಗನ ಬರ್ಥಡೇಕ್ಕ ವಿಶ್ ಮಾಡೇವಿ ಮತ್ತ ಹೆಂಗ ಇವನ ಬರ್ಥಡೇ ಇವತ್ತ ಬಂತು ಅಂತ ವಿಚಾರ ಮಾಡೊ ಅಷ್ಟ ಬುದ್ಧಿ ಈ ವಿಶ್ ಮಾಡೋರಿಗೂ ಇಲ್ಲಾ. ಅಲ್ಲಾ ಹಂಗ ಫೇಸಬುಕ್ಕನಾಗಿನ ಮಂದಿ ಅಷ್ಟ್ಯಾಕ ತಲಿಕೆಡಸ್ಗೊತಾರ ತೊಗೊರಿ, ಒಟ್ಟ ಬರ್ಥಡೇ ಅಂತ ಗೊತ್ತಾತು ವಿಶ್ ಮಾಡಿ ಬಿಡ್ತಾರ, ಅವರ ಸಂಬಂಧ ಇರಲಿ ಬಿಡಲಿ, ಅವರದ ಈ ವರ್ಷದಾಗ ಅದ ಮೂರನೇ ಬರ್ಥಡೆ ಇದ್ದರು ತಲಿಕೆಡಸಿಗೊಳ್ಳಂಗಿಲ್ಲಾ.
ನಾ ಅವರಿಗೇಲ್ಲಾ ಥ್ಯಾಂಕ್ಸ್..ಥ್ಯಾಂಕ್ಸ್ ಅಂತ ಹೇಳೋದರಾಗ ಸಾಕ ಸಾಕಾಗಿ ಹೋತ. ಅಷ್ಟರಾಗ ಟೈಮ ನೋಡ್ತೇನಿ ನಾಲ್ಕು ನಲವತ್ತ ಆಗಿತ್ತ. ನನ್ನ ಹೆಂಡತಿ ಬಚ್ಚಲ ಮನ್ಯಾಗ ಬಿಸಿ ನೀರ ಬಿಟ್ಟ
’ರ್ರೀ, ದೇವರಿಗೆ ಹೊಂಟೀರಿ, ಎಣ್ಣಿ ಹಚಗೊಂಡ ತಲಿ ಮ್ಯಾಲೆ ಸ್ನಾನ ಮಾಡಿ ಹೋಗ್ರಿ’ ಅಂತ ಒದರಿದ್ಲು.
ಅಕಿಗೆ ಆಲರೆಡಿ ಗೊತ್ತಾಗಿತ್ತ ನಾ ಎದ್ದ ಫೇಸಬುಕ್ ಹಿಡಕೊಂಡ ಕೂತೇನಿ ಅಂತ.
ನನಗ ಯಾಕೊ ಒಮ್ಮಿಂದೊಮ್ಮಿಲೇ ಈ ಬರ್ಥಡೇ ಲಫಡಾ ಇಕಿದ ಕಾರಭಾರ ಅನಸಲಿಕತ್ತು. ಆಮ್ಯಾಲೆ ಹಿಡದ ಕೇಳಿದರ ಎಲ್ಲಾ ಹೊರಗ ಬಿತ್ತಲಾ ಅಕಿ ಬಾಯಿಂದ.
ಅದ ಏನ ಆಗಿತ್ತಂದರ ನನ್ನ ಹೆಂಡತಿಗೆ ನಾ ಫೇಸಬುಕ್ ನೋಟಿಫಿಕೇಶನ್ ಬಂದರ ಎದ್ದ ಬಿಡ್ತೇನಿ ಅಂತ ಗೊತ್ತಿತ್ತ. ಅದಕ್ಕ ಅಕಿ ರಾತ್ರಿ ಮಲ್ಕೊಬೇಕಾರ ನನ್ನ ಬರ್ಥಡೇ ಡೇಟ್ ಎಡಿಟ್ ಮಾಡಿ ಅವತ್ತಿನ ಡೇಟ್ ಹಾಕಿ ಮಲ್ಕೊಂಡಿದ್ಲು. ಹಿಂಗಾಗಿ ಬೆಳಕ ಹರಿಯೋ ಪುರಸತ್ತ ಇಲ್ಲದ ಮಂದಿ ನನ್ನ ಬರ್ಥಡೇ ಅಂತ ವಿಶ್ ಮಾಡಿದ್ದ ಮಾಡಿದ್ದ, ಹೇಳಿ ಕೇಳಿ ಫೇಸಬುಕ್ ಸೆಲೆಬ್ರಿಟಿರಿಪಾ ನಾ, ಕೇಳ್ತಿರೇನ ಸೆಕೆಂಡಿಗೆ ಮೂರ ಮೂರ ನೋಟಿಫಿಕೇಶನ ಬರಲಿಕತ್ತಿದ್ದು. ಆ ನೋಟಿಫಿಕೇಶನ್ ಸೌಂಡ ಕೇಳಿ ಖುಷ್ ಆಗಿ ನಾ ಎದ್ದಿದ್ದೆ. ಆ ಗಡಿಯಾರದ ಅಲಾರಾಮ್ ಬೇಕ ಈ ಫೇಸಬುಕ್ಕ ನೋಟಿಫಿಕೇಶನ್ ಬ್ಯಾಡ ಅನ್ನೊಹಂಗ ಆಗಿ ಹೋತ.
ಈ ನೋಟಿಫಿಕೇಶನ್ ಬಂದರ ಒಂಥರಾ ಸತ್ತೊರನು ಬಡಿದೆಬ್ಬಿಸ್ತಾವ ಅಂತಾರಲಾ ಅದ ಸುಳ್ಳ ಅಲ್ಲ ಬಿಡ್ರಿ.
ಕಡಿಕೆ ನಾ ನನ್ನ ಹೆಂಡತಿಗೆ ’ಇನ್ನೊಮ್ಮೆ ನನ್ನ ಫೇಸಬುಕ್ಕ ಮುಟ್ಟಿದರ ನೋಡ’ ಅಂತ ದಮ್ಮ ಕೊಟ್ಟ ಹಾಸಗಿ ಬಿಟ್ಟ ಎದ್ದೆ.
ಏನ್ಮಾಡ್ತೀರಿ, ಈ ಫೇಸಬುಕ ನೋಟಿಫಿಕೇಶನ್ ಅಲರಾಮ್ ಹೆಂಗ ಕೆಲಸಾ ಮಾಡ್ತ ನೋಡ್ರಿ.
ಅನ್ನಂಗ ಇವತ್ತೀಗೆ ಈ ಸುಡಗಾಡ ಫೇಸಬುಕ್ಕಿಗೆ ಹನ್ನೊಂದ ತುಂಬಿ ಹನ್ಯಾರಡರಾಗ ಬಿತ್ತರಿಪಾ, ಹುಟ್ಟಿ ಹನ್ನೊಂದ ವರ್ಷದಾಗ ನಮಗ ಇಷ್ಟ ಅನಿವಾರ್ಯ ಆಗೇದಲಾ ಹದಿನೈದ ವರ್ಷದ ಹಿಂದಿನ ಹೆಂಡ್ತಿ ಈ ಫೇಸಬುಕ್ಕ ಮುಂದ ಔಟ ಡೇಟೆಡ್ ಅನಸಲಿಕತ್ತಾಳ.
ಅಲ್ಲಾ ಅನಸಲಾರದ ಏನ ಬಿಡ್ರಿ, ಫೇಸಬುಕ್ ವರ್ಶನ್ ಚೆಂಜ್ ಆಗ್ತಾವ, ಅಪಡೇಟ್ ಆಗ್ತಾವ ಅದರಾಗ ಹೊಸಾ ಹೊಸಾ ಫೀಚರ್ಸ್ ಬರ್ತಾವ. ಹೆಂಡ್ತಿ ಹಂಗ ಆಗಂಗಿಲ್ಲಾ ನೋಡ್ರಿ. ಹೋಗಲಿ ಬಿಡ್ರಿ ಮೊದ್ಲ ಹೇಳಿದ್ನೇಲ್ಲಾ, ಒಂದು ಹೆಂಡ್ತಿನರ ಸ್ಮಾರ್ಟ ಇರಬೇಕು ಇಲ್ಲಾ ಕಿಸೆದಾಗ ಸ್ಮಾರ್ಟ ಫೋನರ ಇರಬೇಕು ಅಂತ. ಮನ್ಯಾಗ ಒಂದ ಬಿಟ್ಟ ಎರೆಡೆರಡ ಎಲ್ಲಾ ಫೀಚರ್ಸ್ ಇರೋ ಸ್ಮಾರ್ಟ ಫೋನ ಇದ್ದಾಗ ಹೆಂಡ್ತಿ ಫೀಚರ್ಸ್ ಹೆಂಗ ಇದ್ದರ ಏನು ಅಂತೇನಿ. ಹೌದಲ್ಲ ಮತ್ತ?