ನಿನ್ನೆ ಮುಂಜ-ಮುಂಜಾನೆ ಏಳೋ ಪುರಸತ್ತ ಇಲ್ಲದ ಪೂಣಾದಿಂದ ನಮ್ಮ ಮೌಶಿದ ಫೊನ, ನಾ ಫೋನ ಎತ್ತಿದೆ ಆದರ ಅಕಿ ನನ್ನ ಜೊತಿ ಭಾಳ ಮಾತಾಡಲಾರದ ಸೀದಾ “ನಿಮ್ಮ ಅವ್ವಗ ಫೊನ ಕೊಡ” ಅಂತ ಹೇಳಿದ್ಲು. ನಂಗ ಒಂದ ಸಲಾ ಅಕಿ ಹಂಗ ಅಂದಾಗ ಹೆದರಕಿ ಆತ, ಯಾಕಂದರ ಹಂಗ ಮನ್ಯಾಗಿನ ಹೀರೆಮನಷ್ಯಾರಿಗೆ ಫೋನ ಕೊಡ ಅನ್ನೋದ ನಾರ್ಮಲಿ ಯಾರರ ಮ್ಯಾಲೆ ಹೋಗಿದ್ದ ಸುದ್ದಿ ಹೇಳಬೇಕಾರ ಇಷ್ಟ, ಅದರಾಗ ಅವರವ್ವ ಇವತ್ತ ನಾಳೆ ಅನ್ನಲಿಕತ್ತ ಒಂದ ನಾಲ್ಕೈದ ವರ್ಷ ಆಗಲಿಕ್ಕೆ ಬಂದಿತ್ತ.
ನಾ ನಮ್ಮವ್ವಗ ’ಸುಮಿ ಮೌಶಿ ಫೊನ್, ನೀನ ಬೇಕಂತ, ಲಗೂನ ಬಾ’ ಅಂತ ಒದರಿ ಕರದೆ.
ನಮ್ಮವ್ವ ಗಾಬರಿ ಆಗಿ ಬಂದ ಫೊನ ತೊಗಂಡ ಮಾತಾಡಲಿಕತ್ಲು, ಹಿಂಗ ಒಂದ್ಯಾರಡ ಸೆಂಟೆನ್ಸ್ ಮಾತಾಡಿದ ಮ್ಯಾಲೆ ನನಗ ಕನಫರ್ಮ ಆತ ಯಾರಿಗೂ ಏನು ಆಗಿಲ್ಲಾ, ಏನೋ ಬ್ಯಾರೆ ಕೆಲಸದ ಸಂಬಂಧ ನಮ್ಮ ಮೌಶಿ ಫೋನ ಮಾಡ್ಯಾಳ, ಇನ್ನ ಅಕಿ ತಾನಾಗೆ ಫೋನ ಮಾಡ್ಯಾಳ ಅಂದ ಮ್ಯಾಲೆ ’ಎಷ್ಟ ವಿಷಯ ಅಷ್ಟ ಮಾತಾಡೋಕಿ’ ಹೇಳಿ ಕೇಳಿ ಮರಾಠಿ ಮಂದಿ ಎಲ್ಲೆ ಔಟ ಗೋಯಿಂಗ ಕಾಲ ಚಾರ್ಜ ಜಾಸ್ತಿ ಆಗ್ತದೋ ಅಂತ ಅಕಿ ಡೈರೆಕ್ಟ ನಮ್ಮವ್ವನ್ನ ಕರಿಸ್ಯಾಳ ಅಂತ ನನಗ ಗ್ಯಾರಂಟಿ ಆತ.
ಮುಂದ ನಮ್ಮವ್ವ ಮಾತಾಡಿ ಇಟ್ಟಮ್ಯಾಲೆ
ನಾ ’ಏನಂತ ಅಕಿದು’ ಅಂತ ನಮ್ಮವ್ವಗ ಕೇಳಿದ್ರ
“ಏನಿಲ್ಲಾ, ಅಕಿ ಸೊಸಿಗೆ ಮಾವಿನ ಕಾಯಿ ಉಪ್ಪಿನಕಾಯಿದ ಬಯಕಿ ಹತ್ತೇದ ಅಂತ, ಅದಕ್ಕ ನಮ್ಮ ಮನ್ಯಾಗಿನ ಮಾವಿನಕಾಯಿ ಸಿಹಿ ಉಪ್ಪಿನಕಾಯಿ ಕೋರಿಯರದಾಗ ಕಳಿಸಿಕೊಡು ಅಂತ ಹೇಳಿದ್ಲು” ಅಂದ್ಲು. ಹಂಗ ಇದೇನೊ ಮಾವಿನಕಾಯಿ ಸಿಜನ್ ಖರೆ ಆದರೂ ಅಕಿಗೆ ಗೊತ್ತ ನಮ್ಮ ಮನ್ಯಾಗ ಸೀಸನ್ ಇರಲಿ ಬಿಡಲಿ ವರ್ಷಾನಗಟ್ಟಲೇ ಮಾವಿನಕಾಯಿ ಉಪ್ಪಿನಕಾಯಿ ಇರತದ ಅಂತ ಅದಕ್ಕ ಅಕಿ ತನ್ನ ಸೊಸಿ ಬಯಕಿ ತೀರಸಲಿಕ್ಕೆ ಔಟಗೋಯಿಂಗ ಕಾಲ್ ಮಾಡ್ಯಾಳಂತ ನಂಗ ಖಾತ್ರಿ ಆತ. ಇನ್ನ ಆ ಕೋರಿಯರ್ ಚಾರ್ಜ ಒಂದ ನಮ್ಮ ತಲಿಗೆ. ಯಾಕ ಅಂದರ ಕೋರಿಯರ್ ಟು-ಪೇ ತೊಗಳಂಗಿಲ್ಲಾ, ಪೇಡ ಮಾಡಿನ ಕಳಸಬೇಕು.
ಆದರೂ ಈ ಹೆಣ್ಣಮಕ್ಕಳದ ಏನ ಬಯಕಿನೋ ಏನೊ ಒಂದು ಗೊತ್ತಾಗಂಗಿಲ್ಲಾ, ಅದ ಹೆಂಗ ಇದನ್ನ ತಿನ್ನಬೇಕು ಅದನ್ನ ತಿನ್ನಬೇಕು ಅಂತ ಅನಸ್ತದೊ ಆ ದೇವರಿಗೆ ಗೊತ್ತ. ಕೆಲವೊಬ್ಬರಿಗಂತೂ ಹೆಂತಾ ವಿಚಿತ್ರ ವಿಚಿತ್ರ ಬಯಕಿ ಇರತಾವ ಅಂದರ..ಅಯ್ಯಯ್ಯ ಕೇಳಬೇಕ ನೀವು.
ನನ್ನ ಹೆಂಡತಿಗೆ ಒಂದನೇದ ಎರಡರಾಗ ಇದ್ದಾಗ ನನಗ ಚಿಗಳಿ (ಹುಣಸಿ ಹಣ್ಣ ಜಜ್ಜಿ ಮಾಡೋದು) ತಿನ್ನೋಹಂಗ ಆಗೇದ ಅಂತ ಅಂದ್ಲು ಅಂತ ಹುಣಸಿ ಹಣ್ಣಿನ ಸೀಜನ ಇದ್ದಿದ್ದಿಲ್ಲಾ ಅಂದರೂ ನಾ ಯಾರ ಮನ್ಯಾಗ ಹಳೇ ಹುಣಸಿ ಹಣ್ಣ ಉಳದದ ಅಂತ ಹುಡಕ್ಯಾಡಿ ಹುಡಕ್ಯಾಡಿ ಚಿಗಳಿ ಮಾಡಿಸಿ ಕೊಟ್ಟಿದ್ದೆ. ಮುಂದ ಎರಡ ತಿಂಗಳಕ್ಕ “ರ್ರಿ, ನನಗ್ಯಾಕೊ ಮಳೆಗಾಲದಾಗಿನ ಮಣ್ಣಿನ ವಾಸನಿ ಕುಡಿಯೋಹಂಗ ಆಗೇದ” ಅಂತ ಗಂಟ ಬಿದ್ಲು. ಏನ ಮಾಡ್ತೀರಿ
“ಅಲ್ಲಲೇ, ಬ್ಯಾಸಗ್ಯಾಗ ಬಸರಾಗಿ ಮಳಿಗಾಲದ ಮಣ್ಣಿನ ವಾಸನಿ ಬೇಕಂದರ ಹೆಂಗ ಅಂತೇನಿ” ಅಂತ ನಾ ಅಂದರೂ ಕೇಳಲಿಲ್ಲಾ, ಕಡಿಕೆ ತಲಿ ಕೆಟ್ಟ ಇರೋಕಿ ಒಬ್ಬೊಕಿ ಹೆಂಡ್ತಿ, ಅಕಿ ಬಯಕಿ ಇದು, ಅದರಾಗ ಒಂದನೇ ಬಯಕಿ, ಹಂಗ ಬಯಕಿ ತೀರಸಲಿಲ್ಲಾ ಅಂದರ ಹುಟ್ಟೊ ಕೂಸಿನ ಕಿವಿ ಸೋರತಾವ ಅಂತ ನಮ್ಮವ್ವ ಹೆದರಿಸಿದ್ಲು ಅಂತ ಮನಿ ಮಾಳಗಿ ಮ್ಯಾಲೆ ನಿಂತ ಒಂದ ದೊಡ್ಡ ಪೈಪ ಹಚ್ಚಿ ಇಡಿ ನಮ್ಮ ಮನಿ ಅಂಗಳಕ್ಕ ಆಜು ಬಾಜಿ ಮನಿಯವರ ಅಂಗಳಕ್ಕೇಲ್ಲಾ ನೀರ ಹೊಡದಿದ್ದೆ, ಆವಾಗ ಮಣ್ಣಿನ ವಾಸನಿ ಬಂತಲಾ..ನನ್ನ ಹೆಂಡತಿ ಆ ವಾಸನಿ ಆಸ್ವಾದಿಸಿ ತನ್ನ ಬಯಕಿ ತಿರಸಿಗೊಂಡ್ಲು.
ಮುಂದ ಒಂದ ತಿಂಗಳಕ್ಕ ನಮ್ಮವ್ವ ಗೋದಿ ಆರಸಬೇಕಾರ ಅದರಾಗಿನ ಕಲ್ಲ ಆರಿಸಿ ಆರಿಸಿ ತಿನ್ನೋಕಿ, ಅದರಾಗ ನಾವ ತರೋದ ಆರಿಸಿದ್ದ ಗೋದಿ ಬ್ಯಾರೆ ಅದರಾಗ ಏನ ತಲಿ ಕಲ್ಲ ಬರಬೇಕಂದರೂ ಇಕಿ ಬಿಡತಿದ್ದಿಲ್ಲಾ. ನಾ ಸಿಟ್ಟಿಗೆದ್ದ
“ಲೇ, ಅದೇನ ಬಯಕಿಲೇ, ಗೋದ್ಯಾಗಿನ ಕಲ್ಲ ತಿಂದರ ಕಿಡ್ನಿ ಸ್ಟೋನ್ ಆಗತದ ಸುಮ್ಮನ ಕುತಗೋ” ಅಂತ ನಾ ಬೈದರು ಬಿಡತಿದ್ದಿಲ್ಲಾ, ನಂಗ ಅಕಿ ಕಿಂತಾ ಹೆಚ್ಚ ಎಲ್ಲೆ ಹುಟ್ಟೊ ಕೂಸಿನ ಕಿಡ್ನಿ ಒಳಗ ಕಲ್ಲ ಆಗ್ತದೊ ಅಂತ ಚಿಂತಿ ಹತ್ತಿತ್ತ.
“ರ್ರಿ, ನನಗ ಗೋದಿ ಒಳಗಿನ ಕಲ್ಲ ತಿನ್ನೊಹಂಗ ಆಗೇದ ಮುಗಿತ, ನಾ ತಿನ್ನೋಕಿ” ಅಂತ ತಂದ ಹಟಾ ಮಾಡತಿದ್ಲು. ನಾ ತಲಿಕೆಟ್ಟ
“ಯಾಕ ಅಕ್ಯಾಗಿನ ಬಾಲ ಹುಳ ಬ್ಯಾಡ ಏನ?” ಅಂತ ಅಂದ ಅದಕ್ಕ ಅಕಿ ’ಛಿ..ಥೂ’ಅಂತ ಇಡಿ ದಿವಸ ನಾ ಅಂದಿದ್ದನ್ನ ನೆನಸಿಗೊಂಡ ನೆನಸಿಗೊಂಡ ವಾಂತಿ ಮಾಡ್ಕೊಂಡಿದ್ಲು, ನಾ ಮುಂದ ನಮ್ಮವ್ವನ ಕಡೆ “ಏನ ಹೊಲಸ್ ಮಾತಾಡ್ತಿ, ಅದನ್ನ ಕೇಳಿದ್ರ ನಂಗು ವಾಂತಿ ಬರೊಹಂಗ ಆಗತದ” ಅಂತ ಬೈಸಿಗೊಂಡಿದ್ದೆ.
ಮುಂದ ನಮ್ಮವ್ವ “ನಿಂಗ ಹೆಣ್ಣಮಕ್ಕಳ ಬೈಕಿ ಏನ ತಿಳಿತಾವ, ನೀ ಸುಮ್ಮನ ಕೂತಗೊ. ನಿಮ್ಮ ಮುಂಬಯಿ ಅತ್ತಿ ಬಸರ ಇದ್ದಾಗ ಕೆಮ್ಮಣ್ಣ ಕಲ್ಲ ನೆಕ್ಕೊ ಹಂಗ ಆಗತಿತ್ತ ಅಂತ ಕೆಮ್ಮಣ್ಣ ಕಲ್ಲ ಹುಡಕೋತ ಹೋಗ್ತಿದ್ಲು” ಅಂತ ಹಳೇ ಪುರಾಣಾ ಹೇಳಲಿಕತ್ಲು.
ಯಪ್ಪಾ ನಮ್ಮ ಅತ್ತಿಗೆ ಕೆಮ್ಮಣ್ಣ ಕಲ್ಲ ನೆಕ್ಕೊ ಹಂಗ ಆಗ್ತಿತ್ತಂತ ಬಸರ ಇದ್ದಾಗ, ಹಿಂಗಾಗೆ ಇವತ್ತ ಅಕಿ ಮಗಳ ಕೆಮ್ಮಣ್ಣ ಕಲ್ಲಗತೇ ಕೆಂಪ ಇದ್ದಾಳ ಬಿಡ ಅಂತ ಸುಮ್ಮನಾದೆ. ನಮ್ಮವ್ವ ಹಂಗ ಬಯಕಿ ಕಥಿ ಹೇಳ್ತ ಹೇಳ್ತ
“ನಿಮ್ಮ ಧಾರವಾಡ ಮೌಶಿಗೆ ಬಸರಿದ್ದಾಗ ಕೆಂಪ ಹುಂಚಿ ಬೋಟ ತಿನ್ನಬೇಕ ಅನಿಸಿತ್ತ, ಅಕಿ ಗಂಡಾ ಅನವಟ್ಟಿ ಇಂದ ಕೆಂಪ ಹುಂಚಿ ಬೋಟ ತರಿಸಿ ಕೊಟ್ಟಿದ್ದರು” ಅಂತ ಹೇಳಿದ್ಲು. ನಾ ಅವನ್ನೇಲ್ಲಾ ಕೇಳಿ
“ಏ, ನಮ್ಮವ್ವ ಹೋಗಲಿ ಬಿಡ ಈ ಬಯಕಿ ವಿಷಯ, ಅಕಿಗೆ ಏನ ಸುಡಗಾಡ ತಿನ್ನಬೇಕ ಅನಸ್ತದೊ ತಿನ್ನವಳ್ಳಾಕ, ಒಟ್ಟ ಸುಸುತ್ರ ಹಡದರ ಸಾಕ” ಅಂತ ನಾ ಅಂದ ಸುಮ್ಮನಾದೆ.
ಆದರೂ ಹಡೆಯೋದದೊ ಒಂದ ಇದ್ದರು ಈ ಸುಡಗಾಡ ಬಯಕಿ ನೂರ-ನೂರ ಟೈಪ ಇರ್ತಾವ ಬಿಡ್ರಿ. ನೋಡ್ರಿ ಹಂಗ ನಿಮಗ್ಯಾವರ ವಿಚಿತ್ರ ವಿಚಿತ್ರ ಬಯಕೆ ಇದ್ದರ ಹೇಳರಿ, ನಮ್ಮ ಕಡೆಯಿಂದ ಸಾಧ್ಯ ಇದ್ದರ ಬಯಕೆ ತೀರಸ್ತೇವಿ. ಹಂಗ ನಮ್ಮ ಮನ್ಯಾಗ ಒಂದ ಐದ ತರಹದ ಉಪ್ಪಿನಕಾಯಿ ಮಾತ್ರ ಯಾವಗಲೂ ರೇಡಿ ಇರತದ, ನೀವ ಒಂದ ಫೋನ ಮಾಡಿದರ ಸಾಕ ನಮ್ಮವ್ವ ಕಳಸೆ ಬಿಡ್ತಾಳ, ಕೋರಿಯರ ಚಾರ್ಜ ನಂದsನ ಮತ್ತ.