ಮುಂಜಾನೆ ಏಳೋದ ತಡಾ ನಮ್ಮವ್ವಂದ ರಗಳಿ ಶುರುನ. ಅಕಿಗೆ ವಟ್ಟ ಯಾವಾಗಲು ವಟಾ-ವಟಾ ಅಂತ ಎಲ್ಲಾರಿಗೂ ಬೈಕೋತ ಇದ್ದರ ಸಮಾಧಾನ. ಅದರಾಗ ಅಕಿ ಕೈಯಾಗ ನನ್ನ ಮಗಾ ಬ್ಯಾರೆ ಸಿಕ್ಕ ಬಿಟ್ಟಾನ, ಅವಂದು ಅಡ್ನಾಡಿ ವಯಸ್ಸು ಯಾರ ಹೇಳಿದ್ದ ಕೇಳೊ ವಯಸ್ಸಲ್ಲಾ, ನಮ್ಮವ್ವಂದರ ತನ್ನ ತಲ್ಯಾಗ ಬಂದದ್ದ ಆಗೋತನಕ ಬಿಡೊ ವಯಸ್ಸಲ್ಲಾ.
ನನ್ನ ಮಗಗ ಮಾತ ಮಾತಿಗೆ ನಮ್ಮವ್ವ
“ನಿನಗ ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೊ? ದನಾ ಕಾಯೋವನ ಎಷ್ಟ ಸಲಾ ಹೇಳಬೇಕ ಮನಿ ಹರವು ಬ್ಯಾಡಾ ಅಂತ ತಿಳಿಯಂಗಿಲ್ಲಾ, ಇನ್ನೂ ಸಣ್ಣ ಹುಡಗರ ಮಾಡಿದಂಗ ಮಾಡ್ತಿ ಅಲಾ, ಇದನ್ನ ಸ್ವಚ್ಛ ಮಾಡಲಿಕ್ಕೇನ ನಿನ್ನ ಹೆಂಡತಿ ಬರ್ತಾಳ ಏನ” ಅಂತ ದಿವಸಕ್ಕ ಒಂದ ಹತ್ತ ಸರತೆ ಒದರಲಿಲ್ಲಾ ಅಂದರ ಅಕಿಗೆ ರಾತ್ರಿ ಗಂಟಲದಾಗ ಟಾನಿಕ ಗುಳಿಗಿ ಇಳಿಯಂಗಿಲ್ಲಾ.
ಅಂವಂಗೂ ಅಕಿಗೆ ದಿವಸಾ ಒದರಿಸಿದರ ಸಮಾಧಾನ, ಎಂದರ ಒಂದ ದಿವಸ ಅಕಿ ಸುಮ್ಮನಿದ್ದರ ” ಯಾಕ ಅಜ್ಜಿ ಆರಾಮ ಇದ್ದಿ ಇಲ್ಲ” ಅಂತ ತಾನಾಗೆ ಕಿಡ್ಡಿ ಮಾಡಿ ಆದರು ಬೈಸಿಗೋತಾನ.
ನಾ ಅಂತೂ ಅಜ್ಜಿ ಮೊಮ್ಮಗ ಏನರ ಹಾಳ ಗುಂಡಿ ಬೀಳರಿ ಅಂತ ಅವರ ಉಸಾಬರಿನ ಹೋಗಂಗಿಲ್ಲಾ. ನಮ್ಮವ್ವನೂ ಹಂಗ ನನ್ನ ಮಗನೂ ಹಂಗ ಅಂತ ಸುಮ್ಮನಾಗಿ ಬಿಟ್ಟೇನಿ.
ಅಲ್ಲಾ, ಮೊದ್ಲ ನಂಗೂ ನಾ ಏನರ ಮನಿ ಹರವಿದರ
“ಏ, ನಿಂಗ ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೊ? ಇದನ್ನ ಸ್ವಚ್ಛ ಮಾಡಲಿಕ್ಕೇನ ನಿನ್ನ ಹೆಂಡತಿ ಬರ್ತಾಳ ಏನ” ಅಂತಿದ್ಲು, ಮುಂದ ನನ್ನ ಲಗ್ನ ಆದ ಮ್ಯಾಲೂ ಒಂದ್ಯಾರಡ ಸರತೆ ಅಂದ ನನ್ನ ಹೆಂಡತಿ ಕಡೆ
“ನಿಮ್ಮ ಮಗಾ ಹರವಿದ್ದನ್ನ ತಗಿಲಿಕ್ಕೆ ನಾ ಬಂದೇನಲಾ, ಒಬ್ಬಕಿ ಸಾಕಾಗಂಗಿಲ್ಲೇನ? ಇನ್ನ ಎಷ್ಟ ಹೆಂಡಂದರನ ಕಟ್ಟೋರ ನಿಮ್ಮ ಮಗಗ” ಅಂತ ಜೋರ ಮಾಡಲಿಕತ್ತ ಮ್ಯಾಲೆ ಸುಮ್ಮನಾಗ್ಯಾಳ.
ಹಂಗ ನಮ್ಮವ್ವ ಇಡಿ ಮನಿ ಮಂದಿಗೆಲ್ಲಾ ‘ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೊ?’ ಅನ್ನಕೋತ ಇರತಾಳ.
ಪಾಪ ನಮ್ಮಪ್ಪ ಎಪ್ಪತ್ತ ದಾಟಿದಂವಾ ಅರವು ಮರವು ಸಹಜ ಅಂವಾ ಏನರ ತಪ್ಪ ಮಾಡಿದರು ಮುಗದ ಹೋತ
“ತಿಳಿತದ ಇಲ್ಲೋ ನಿಮಗ, ಇಷ್ಟ ವಯಸ್ಸಾತ ಇನ್ನೂ ಸಣ್ಣ ಹುಡಗರ ಮಾಡಿದಂಗ ಮಾಡ್ತೀರಲಾ” ಅಂತ ಗಾಡಿ ಸ್ಟಾರ್ಟ. ಅದರಾಗ ಅಂವಾ ಇತ್ತೀಚಿಗೆ ಹೊತ್ತ ಹೊಗಂಗಿಲ್ಲಾಂತ ಮೊಮ್ಮಕ್ಕಳ ಜೊತಿ ಕಾರ್ಟೂನ ನೋಡ್ತಾನ, ಅವರ ಜೊತಿ ವಿಡೀಯೋ ಗೇಮ ಆಡ್ತಾನ, ಕಡಿಕೆ ಅವರ ಜೊತಿ ಜಗಳಾನೂ ಆಡ್ತಾನ, ನಾ ಏನೊ ನಮ್ಮಪ್ಪಗ ವಯಸ್ಸಾಗೇದ ಮೊಮ್ಮಕ್ಕಳ ಜೊತಿ ಜಗಳಾಡಕೋತರ ಆರಾಮ ಇರ್ತಾನ ಅಂತ ಸುಮ್ಮನಿದ್ದರ ನಮ್ಮವ್ವ ಬಿಡಬೇಕಲಾ
“ರ್ರಿ, ಆ ಸಣ್ಣ ಹುಡಗರ ಜೊತಿ ಜಗಳಾಡತೀರಲ್ರಿ. ಬರಬರತ ನಿಮಗ ವಯಸ್ಸ ಹೋಗ್ತದೋ ಇಲ್ಲಾ ಬರ್ತದೋ” ಅಂತ ಮತ್ತ ಶುರು. ನಮ್ಮಪ್ಪ ಅಕಿ ಕಾಟಕ್ಕ ತಲಿಕೆಟ್ಟ ಪಾಪ
“ಲೇ, ನಂದ ವಯಸ್ಸ ಹೊಂಟದ. ಆದರ ಜೀವಾ ಹೋಗವಲ್ತು. ನಾನರ ಏನ ಮಾಡಲಿ” ಅಂತಾನ
ಇನ್ನ ಕಟಗೊಂಡ ಗಂಡಾ, ಹಡದ ಮಗಗ ಬಿಡಂಗಿಲ್ಲಾ ಅಂದರ ನನ್ನ ಹೆಂಡತಿಗೆ ಬಿಡತಾಳ. ಅಕಿಗೆ ಅಂತೂ ಪ್ರತಿ ಕೆಲಸಕ್ಕೂ
“ಅಯ್ಯ ನಮ್ಮವ್ವ, ಬುದ್ಧಿ ಎಲ್ಲೆ ಇಟ್ಟಿ, ಸಾರಿಗೆ ಎಷ್ಟ ಉಪ್ಪ ಹಾಕಬೇಕು ಅಂತ ಗೊತ್ತಾಗಂಗಿಲ್ಲಾ, ನಿಂಗೇನ ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೋ” ಅಂತ ಅಂದ ಮುಂದ ಒಂದ ತಾಸ ಇಬ್ಬರು ಜಗಳಾಡಿದ ಮ್ಯಾಲೆ ಮನಿ ಶಾಂತ ಆಗೋದ.
ದಿನಂ ಪ್ರತಿ ಇದನ್ನ ನೋಡಿ ನೋಡಿ ತಲಿ ಚಿಟ್ಟ ಹಿಡದ ಮೊನ್ನೆ ನನ್ನ ನಾಲ್ಕ ವರ್ಷದ ಮಗಳ ಸಿಟ್ಟಿಗೆದ್ದ ನಮ್ಮವ್ವಗ
“ಅಜ್ಜಿ, ನಿಂಗ ಬರಬರತ ವಯಸ್ಸಹೋಗ್ತದೋ ಏನ ಬರ್ತದೊ?” ಅಂತ ಕೇಳಿದ್ಲು. ಯಾಕ ಹಂಗ್ಯಾಕ ಅಂತೀಯ ಅಂತ ಕೇಳಿದರ
“ಮತ್ತೇನ, ಇಷ್ಟ ವಯಸ್ಸಾದರೂ ನೀ ಬರೆ ಟಿ.ವಿ. ಮುಂದ ಕೂತ ಎಲ್ಲಾರಿಗೂ ಬೈಕೋತ ಇರತಿ, ಅದರ ಬದ್ಲಿ ಮನ್ಯಾಗ ಒಂದ ನಾಲ್ಕ ಕೆಲಸಾನರ ಮಾಡ” ಅಂತ ಅಂದ ಬಿಟ್ಟಳು. ತೊಗೊ ನಮ್ಮವ್ವಂದ ರಾಗ ಶುರು ಆತ
“ಏ,ಮಂಗ ಬೋಸಡಿ ಚೋಟ ಇದ್ದಿ ಎಷ್ಟ ಮಾತಾಡ್ತಿ” ಅಂತ ಆ ಸಣ್ಣ ಹುಡಗಿ ಸಹಿತ ಜೊತಿ ಒಂದ ತಾಸ ಜಗಾಳಡಿದ್ಲು.
ಆದರ ಒಂದ ಅಂತೂ ಖರೆ ಇತ್ತೀಚಿಗೆ ನಾವೇಲ್ಲಾ ದೊಡ್ಡವರ ಸಣ್ಣೊರಂಗ ಮಾಡಿದ್ರ ನನ್ನ ಸಣ್ಣ ಮಗಳ ದೊಡ್ಡವರಂಗ ಮಾಡಲಿಕತ್ತಾಳ, ಅಕಿ ಮಾತಂತೂ ಅಗದಿ ದೊಡ್ಡ ಹಿರೇಮನಷ್ಯಾರ ಆಡಿದಂಗ ಇರತಾವ
ನಮ್ಮಪ್ಪಂತು ನಮ್ಮವ್ವಗ
“ನಮ್ಮ ಮನ್ಯಾಗ ಎಲ್ಲಾರಿಗೂ ವಯಸ್ಸ ಬರಲಿಕತ್ತದ ನಿನಗೊಬ್ಬಕಿಗೆ ಹೋಗಲಿಕತ್ತದ ಅನಸತದ. ಅದು ಪೂರ್ತಿ ಹೋಗೊತನಕ ನೀ ಹಿಂಗ ಹಾರಾಡ” ಅಂತ ಬೈತಿರ್ತಾನ.
ನಮ್ಮವ್ವಗ ಹಿಂಗ ಮಾತ ಮಾತಿಗೆ ಮನ್ಯಾಗ ಎಲ್ಲಾರಿಗೂ ‘ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೊ’ ಅನ್ನೋದೇನೋ ಒಂದ ಚಟಾ ಖರೇ ಆದ್ರ ಇಂಗ್ಲೆಂಡನ್ನಾಗ ಖರೇನ ಇಬ್ಬರ ಅಣ್ಣ-ತಮ್ಮಂದರಿಗೆ ವಯಸ್ಸ ಬರಬರತ ಬರಲಿಕತ್ತದ ಅಂತ. ಒಬ್ಬವಂದ ವಯಸ್ಸ ೪೩ ಮತ್ತೊಬ್ಬಂದ ೪೦ ಆದರ ಅವರ ಮಾಡೋದು ೫-೬ ವರ್ಷದ ಹುಡಗರ ಗತೆ ಮಾಡ್ತಾರಂತ. ಅದರಾಗ ಒಬ್ಬವನ ಮಗಳ ಮದುವಿ ಆಗಿ ತಿರಗಿ ಒಂದ ಹಡದಾಳ.
ನಮ್ಮ ಮಕ್ಕಳ ಹಿಂಗ್ಯಾಕ ಸಣ್ಣ ಹುಡಗರಂಗ ಮಾಡಲಿಕತ್ತಾರ ಅಂತ ಪಾಪ ಅವರಪ್ಪಾ ಡಾಕ್ಟರಗೆ ತೊರಸಿದರ ಡಾಕ್ಟರ MRI ಮಾಡಿ ನಿಮ್ಮ ಹುಡಗರಿಗೆ terminal leukodystrophy ಅಂದರ age-reversing disease ಆಗೇದ ಅವರ ಮಾನಸಿಕವಾಗಿ ಬರಬರತ ಸಣ್ಣ ಹುಡುಗರ ಆದಂಗ ಆಗ್ತಾರ ಅಂತ ಹೇಳಿ ಬಿಟ್ಟರಂತ.
ನಂಗ ಖರೇನ ಇದನ್ನ ಕೇಳಿದ ಮ್ಯಾಲೆ ನಾವು ಮನಿ ಮಂದೇಲ್ಲಾ ಒಂದ ಸರತೆ ಚೆಕ್ ಮಾಡಿಸ್ಗೊಂಡ ಬಿಡೋದ ಛಲೋ ಯಾಕಂದರ ಏನಿಲ್ಲದ ನಮ್ಮವ್ವ ಮಾತ ಮಾತಿಗೆ ‘ಬರಬರತ ವಯಸ್ಸ ಹೋಗ್ತದೋ ಇಲ್ಲಾ ಬರ್ತದೊ’ ಅಂತಿರ್ತಾಳ, ಯಾಕ ಸುಮ್ಮನ ರಿಸ್ಕ ತೊಗೊಬೇಕ ಅಂತ ಅನಸಲಿಕತ್ತದ.
ಆದರ ಒಂದ ಅಂತೂ ಖರೆ ನಮ್ಮ ವಯಸ್ಸಿಗೂ ನಮ್ಮ ಮಾನಸಿಕ ಸ್ಥಿತಿಗೂ ಸಂಬಂಧ ಇಲ್ಲಾ ಇವತ್ತ ನಾವು ಸಣ್ಣ ಹುಡಗರಂಗ ಮುಗ್ದರಾಗಿ, ಮುಕ್ತ , ನಿಷ್ಕಳಂಕ ಮನಸ್ಸಿನಿಂದ ಜೀವನದ ಒಳಗ ಯಾವುದೇ prejudice ಇಲ್ಲದೆ ಬದಕಲಿಕ್ಕೆ ಸಾಧ್ಯ ಇದ್ದರ ಯಾಕ ಇರಬಾರದು. we are missing the life by trying to live logically ಅಂತ ನನಗ ಅನಸ್ತದ.
ಇನ್ನೊಂದ ವಿಚಿತ್ರ ಅಥವಾ ದುರಂತ ಅಂದರ ಈಗಿನ ಸಣ್ಣ ಹುಡುಗರು ತಮ್ಮ ಹುಡಗತನಾ ಬಿಟ್ಟ matured behaviour ಮಾಡಲಿಕ್ಕೆ ಶುರು ಮಾಡ್ಯಾರ, they want to show that they are grown up, which is very unhealthy sign.
ಬರಬರತ ವಯಸ್ಸ ಹೋಗಲಿ ಬಿಡಲಿ… ಮಂದಿ ಏನಂತಾರ ಏನಿಲ್ಲಾ ಅಂತ ಭಾಳ ತಲಿಕೆಡಸಿಗೊಳ್ಳಲಾರದ ನಮ್ಮ ಮನಸ್ಸಿಗೆ ಏನ ತೋಚತದ ಅದನ್ನ ಮಾಡ್ಕೋತ we should enjoy the life…….