(world population day ಸಂದರ್ಭದಲ್ಲಿ ಬರೆದ ಪ್ರಹಸನ)
ಜುಲೈ11ಕ್ಕ ವರ್ಲ್ಡ ಪಾಪ್ಯುಲೇಶನ್ ಡೇ ಅಂತ, ನಿನ್ನೆ ನಮ್ಮ ಒಣ್ಯಾಗಿನ ಮಂದಿ ಬಂದ
“ಸರ್. ನೀವು ಪಾಪ್ಯುಲೇಶನ್ ಡೇ ಕಾರ್ಯಕ್ರಮದ ದಿವಸ ಬಂದ ಒಂದ ಕ್ರಿಯೇಟಿವ್ ಭಾಷಣಾ ಮಾಡಬೇಕು” ಅಂತ ಹೇಳಿದರು. ಅಲ್ಲಾ ನಾವೇಲ್ಲಾ ಜಾಸ್ತಿ ಕ್ರಿಯೇಟಿವ್ ಆಗಿ ಕ್ರಿಯೇಟ್ ಮಾಡಿದ್ದಕ್ಕ ನಮ್ಮ ಜನಸಂಖ್ಯೆ ಇಷ್ಟ ಆಗೇದ ಇನ್ನ ಈ ಕ್ರಿಯೇಟಿವ್ ಭಾಷಣಾ ಅಂದರ ಏನಪಾ ಅಂತ ನಾ ತಲಿಕೆಡಸಿಕೊಳ್ಳಿಕತ್ತೆ.
ಅದಿರಲಿ, ಇವರ ಎಲ್ಲಾ ಬಿಟ್ಟ ನನ್ನ ಯಾಕ ಭಾಷಣಕ್ಕ ಕರದರು ಅಂತ ವಿಚಾರ ಮಾಡಲಿಕತ್ತೆ. ನಾ ಏನ್ ಇದ್ದದ್ದರಾಗ ಒಣ್ಯಾಗ ಜಾಸ್ತಿ ಕ್ರಿಯೇಟಿವ್ ಇದ್ದೇನಿ ಅಂತ ಕರದರೋ ಇಲ್ಲಾ ನಮ್ಮ ಒಣ್ಯಾಗ ನಂಗ ಜಾಸ್ತಿ ಮಕ್ಕಳವ ಅಂತ ಕರದರೋ ಗೊತ್ತಾಗಲಿಲ್ಲಾ.
ಯಾಕಂದರ ಇತ್ತೀಚಿಗೆ ನಮ್ಮಂದಿ ಬರೇ ಒಂದೊಂದ ಹಡದ ಕೈ ತೊಳ್ಕಂಡ ಬಿಡತಾರ. ಹಂತಾದರಾಗ ನಾ ಏನ್ ಭಾಳ ಹಡದಿಲ್ಲ ಬಿಡ್ರಿ, ’ನೀರ ಬಿಡಲಿಕ್ಕೆ ಒಬ್ಬ ಮಗಾ, ಭಾಂಡಿ ತಿಕ್ಕಲಿಕ್ಕೆ ಒಬ್ಬ ಮಗಳ ಸಾಕು’ ಅಂತ ಹಡದಿದ್ದ ಎರಡ. ಇರಲಿ, ಎನೋ ನನಗ ರಿಸ್ಪೆಕ್ಟ್ ಕೊಟ್ಟ ಕರದಾರ ತಿಳದಿದ್ದ ನಾಲ್ಕ ಮಾತಾಡಿದರಾತು ಅಂತ ಡಿಸೈಡ ಮಾಡೇನಿ.
ಹಂಗ ಪಾಪ್ಯುಲೇಶನ್ ಡೇ ಕಾರ್ಯಕ್ರಮದಾಗ ನಾ ಏನಬೇಕಾದ್ದ ಮಾತಾಡಲಿಕ್ಕೆ ಬರಂಗಿಲ್ಲಾ. ಹಿಂದ ನಮ್ಮ ದೇಶದ್ದ ಆರೋಗ್ಯ ಮಂತ್ರಿ ಗುಲಾಮ ನಬಿ ಆಜಾದವರು ಹಿಂಗ ಪಾಪ್ಯುಲೇಶನ್ ಡೇ ಭಾಷಣಕ್ಕ ಹೋದಾಗ
” ನಮ್ಮ ದೇಶದ್ದ ಪಾಪ್ಯುಲೇಶನ್ ಕಂಟ್ರೋಲ್ ಮಾಡಬೇಕಂದರ ಮನ್ಯಾಗ ಗಂಡ ಹೆಂಡತೀ ರಾತ್ರಿ ನಿದ್ದಿ ಬರೋಮಟಾ ಕೂತ ಟಿ.ವಿ. ನೋಡಬೇಕು, tv is also good contraceptive. ಮನ್ಯಾಗ tv entertainment ಇದ್ದರ ಲಕ್ಷ ಬ್ಯಾರೆ ಕಡೆ ಹೋಗಂಗಿಲ್ಲಾ, ಆವಾಗ ಜನಸಂಖ್ಯೆ ಕಡಿಮೆ ಆಗ್ತದ” ಅಂತ ಹೇಳಿದ್ದರಂತ. ಇನ್ನ ನಮ್ಮ ದೇಶದ್ದ ಆರೋಗ್ಯ ಮಂತ್ರಿನ ಹಿಂಗ ಹೇಳ್ಯಾರ ಅಂದಮ್ಯಾಲೆ ಮುಂದ ಜನಾ ಸುಮ್ಮನ ಇರ್ತಾರೇನ್? ಹೋದ ವರ್ಷ ಫ್ಯಾಮಿಲಿ ಪ್ಲ್ಯಾನಿಂಗನವರು ಪಾಪ್ಯುಲೇಶನ್ ಡೇಕ್ಕ ಫ್ರೀ ಕಂಟ್ರಾಸೆಪ್ಟಿವ್ ಟ್ಯಾಬ್ಲೇಟ್ಸ್ ಕೊಡಲಿಕ್ಕೆ ಬಂದಾಗ ನಮ್ಮ ಮಂದಿ
“ಏ, ನಮಗ ಟಿ.ವಿ. ನ ಕೊಡರಿ, ಹಂಗ ಟಿ.ವಿ ಮುಂದ ಕೂತರಿಷ್ಟ ನಮ್ಮ ಲಕ್ಷ ಬ್ಯಾರೆ ಕಡೆ ಹೋಗಂಗಿಲ್ಲಾ, ಈ ಗುಳಿಗೇನ ಉಪಯೋಗ ಇಲ್ಲಾ, ಒಮ್ಮೊಮ್ಮೆ ನಾವು ಗುಳಿಗಿ ತೊಗೊಳೊದ ಮರತ ಬಿಟ್ಟರ ಅದು ಗೊತ್ತಾಗೋದು ಮುಂದ ಒಂದ ದಿಡ ತಿಂಗಳಾಗಿ ನಮ್ಮಕಿ ವೈಕ ಅಂದ ಮ್ಯಾಲೆನ” ಅಂತ ಹೇಳಿದರಂತ. ಏನ್ಮಾಡ್ತೀರಿ? ನಮ್ಮ ಮಂದಿ ಅಷ್ಟ ಶಾಣ್ಯಾ ಇದ್ದಾರ.
ಹಂಗ ಖರೇ ನನ್ನ ಪ್ರಕಾರ ನಮ್ಮ ದೇಶದ್ದ ಜನಸಂಖ್ಯೆ ಜಾಸ್ತಿ ಇದ್ದರು ಶಾಣ್ಯಾರ ಜನಸಂಖ್ಯೆ ಯಾಕೋ ಇತ್ತೀಚಿಗೆ ಭಾಳ ಕಡಮಿ ಆಕ್ಕೋತ ಹೊಂಟದ ಅನಸಲಿಕತ್ತದ. ಯಾಕಂದರ ನಮ್ಮಂತಾ ಶಾಣ್ಯಾ ಮಂದಿ ಹಡಿಲಿಕ್ಕೆ ಭಾಳ ಶಾಣ್ಯಾತನ ಮಾಡಿ, ತುಟ್ಟಿ ಕಾಲ ಅಂತ cost of living ಲೆಕ್ಕಾ ಮಾಡಿ, ಕಡಿಕೆ ಹಡಿಲೋ ಬ್ಯಾಡೊ ಅಂತ ಒಂದೊಂದ ಹಡಿಲಿಕತ್ತೇವಿ. ಅಷ್ಟರಾಗ ಹಳ್ಳಿ ಮಂದಿ ನೋಡ್ರಿ ‘ಮಕ್ಕಳಿರಲವ್ವಾ ಮನಿತುಂಬ’ ಅಂತ ದೇವರಮ್ಯಾಲೆ ಭಾರಾ ಹಾಕಿ ಮುಂದಿಂದ ಮುಂದ ನೋಡಿದ್ರ ಆತು ಅಂತ ಭಿಡೆ ಬಿಟ್ಟ ಭಡಾ-ಭಡಾ ಹಡಕೋತ ಹೋಂಟಾರ.
ಈಗ ನಾ ನಾಳೆ ಪಾಪ್ಯುಲೇಶನ್ ಡೇ ಕ್ಕ ಹೋಗಿ, ಕ್ರಿಯೇಟಿವ್ ಆಗಿ ಮಾತಾಡಬೇಕು ಅಂತ ಮಂದಿಗೆ
“ಶಾಣ್ಯಾರ ಯಾವದ ಕಾರಣಕ್ಕೂ ಹಡಿಯೋದನ್ನ ನಿಲ್ಲಸ ಬ್ಯಾಡರಿ, ಸಮಾಜದಾಗ ಶಾಣ್ಯಾರ ಜನಸಂಖ್ಯೆ ಕಡಿಮೆ ಅದ, ‘ಹುಟ್ಟಿಸಿದ್ದ ದೇವರ ಹುಲ್ಲ ಮೇಯಸಲಾರದ ಇರತಾನೇನು?’ ನೀವ ಹಡಕೋತ ಇರ್ರಿ, ಮುಂದ ಹಂಗ ಒಮ್ಮೆ ಹುಟ್ಟಿದ ಮ್ಯಾಲೆ ಯಾರೇನ ಖರೇನ ಹುಲ್ಲ ತಿನ್ನಂಗಿಲ್ಲಾ” ಅಂತೇನರ ಭಾಷಣಾ ಮಾಡಿದರ
” ಮಗನ ನಿನ್ನ ಹೆಂಡತಿದ ಆಪರೇಶನ್ ಮಾಡಿಸಿಗೊಂಡ ಬಂದ, ನಮಗ ಹಡೀರಿ ಅಂತ ಹೇಳ್ತಿಯಾ” ಅಂತ ನನಗ ಹಿಡದ ಹುಟ್ಟಿಲ್ಲಾ ಅನಸ್ತಾರ ಇಷ್ಟ. ಹಂಗೇಲ್ಲಾ ಅಲ್ಲೆ ಹೇಳಲಿಕ್ಕೆ ಬರಂಗಿಲ್ಲಾ.
ಅದಕ್ಕ ನಾ ಅಲ್ಲೆ ಹೋಗಿ “ನಾವು ಸೀರಿಯಸ್ಸಾಗಿ ಪಾಪ್ಯುಲೇಶನ್ ಕಂಟ್ರೋಲ್ ಮಾಡಬೇಕು ಅಂದ್ರ, ಈ ಸ್ವರ್ಣಬಿಂದು, ಪೋಲಿಯೋ ಡ್ರಾಪ್ ಹೆಂಗ ಸಣ್ಣ ಹುಡುಗರಿಗೆ ಹುಡ್ಕ್ಯಾಡಿ ಹಿಡದ ಎರಡ-ಎರಡ ಹನಿ ಹಾಕತಾರಲಾ ಹಂಗ ಎರಡೆರಡ ಮಕ್ಕಳನ್ನ ಹಡದವರನ್ನ ಹಿಡದ ತಿಂಗಳಿಗೊಮ್ಮೆ ಕಂಟ್ರಾಸೆಪ್ಟಿವ್ ಡ್ರಾಪ್ ಹಾಕೋ ವ್ಯವಸ್ಥಾ ಮಾಡಬೇಕು, prevention is better than abortion ಅಂತ ಬೆಡರೂಮ್ ಬಾಗಲದ ಹಿಂದ ಬರಿಬೇಕು. ಆಮ್ಯಾಲೆ ಈ NGOದವರು free eye camp, limb camp ಮಾಡಿದಂಗ, ಮಕ್ಕಳಾಗಲಾರದ ಆಪರೇಶನ್ ಮಾಡೋ ಕ್ಯಾಂಪ ಮಾಡಬೇಕು” ಅಂತ ಭಾಷಣಾ ಮಾಡಿ ಬರಬೇಕ ಅಂತ ಮಾಡೇನಿ.
ನಾ ಹೇಳಿದ್ದ free operation ಮತ್ತ abortion ಅಲ್ಲಾ. ಮತ್ತ ನೀವೇಲ್ಲರ…….