“ದನಾ ಕಾಯೋನ ಬುದ್ಧಿ ಎಲ್ಲೆ ಇಟ್ಟಿ, ಊಟಕ್ಕ ಕೂತಾಗ ಬಲಗೈಲೆ ಸಾರಿನ ಸೌಟ ಮುಟ್ಟ ಬ್ಯಾಡ ಅಂತ ಎಷ್ಟ ಸರತೆ ಹೇಳಬೇಕ? ಮುದಕಾದರು ಮುಸರಿ ಯಾವದು ಎಂಜಲ ಯಾವದು ತಿಳಿಯಂಗಿಲ್ಲಲಾ, ಯಾ ಕೈಲೆ ಏನ ಮಾಡಬೇಕು, ಏನ ಮಾಡಬಾರದು ಅಂತ ಗೊತ್ತಾಗಂಗಿಲ್ಲಾ” ಅಂತ ಮನ್ನೆ ಭಾದ್ರಪದ ಮಾಸದಾಗ ಸ್ವರ್ಣಗೌರಿ ಪೂಜಾ ದಿವಸ ಊಟಕ್ಕ ಕೂತಾಗ ನನ್ನ ಮಗನ ಬಲಗೈ ಸಾರಿನ ಸೌಟಿಗೆ ಬಡದದ್ದಕ್ಕ ನಮ್ಮವ್ವ ಜೋರಾಗಿ ಒದರಿ ಬಿಟ್ಟಳು. ಹಂಗ ಅಕಿ ಮರದಿವಸ ಗಣಪತಿ ಸಂಬಂಧ ಇನ್ನು ಮಡಿ ಸಿರಿ ಒಣಾ ಹಾಕೋದ ಬಾಕಿ ಇತ್ತಂತ ಮಡಿ ಒಳಗ ಇದ್ಲು, ಇಲ್ಲಾಂದರ ಒಂದ ತಗದ ಕಪಾಳಕ್ಕ ರಪ್ಪಂತ ಹೊಡಿಯೋ ಪೈಕಿನ.
ಪಾಪ ನಮ್ಮವ್ವ ಹಂಗ ಒದರಿದ್ದ ಕೇಳಿ ನಮ್ಮ ಮನಿ ಸ್ವರ್ಣಗೌರಿ ಪೂಜಾಕ್ಕ ಬಂದಿದ್ದ ಮುತ್ತೈದಿ ಗಾಬರಿ ಆಗಿ ಅಕಿ leftist ಇದ್ದರು ಬಾಯಿ ಮುಚಗೊಂಡ ಇನ್ನ ಎಡಗೈಲೆ ಉಂಡ ನಮ್ಮವ್ವನ ಕಡೆ ಬೈಸಿಗೊಳೊದ ಬ್ಯಾಡ ಅಂತ ಬಲಗೈಲೆ ಉಂಡ ಎಡಗಯ್ಯಾಗ ದಕ್ಷಿಣಿ ತೊಗೊಂಡ ತನ್ನ ದಾರಿ ಹಿಡದ್ಲು.
ಹಂಗ ದಿವಸಕ್ಕ ಒಂದ ಹತ್ತ ಸರತೆ ನಮ್ಮವ್ವ ’ಮುದಕಾದಿ, ಮುಸರಿ ಯಾವದು…ಎಂಜಲ ಯಾವದು ತಿಳಯಂಗಿಲ್ಲಾ’ ಅಂತ ನನ್ನ ಮಗಗ ಗಂಟ ಬಿದ್ದಿರತಾಳ. ಅದರಾಗ ಅವಂದ ಮುಂಜವಿ ಆದ ಮ್ಯಾಲೆ ಅಂತೂ ಅಕಿ ಮಾತ ಮಾತಿಗೆ ’ದನಾ ಕಾಯೋನ ಮುಂಜವಿ ಮಾಡ್ಕೊಂಡಿ ಇನ್ನರ ಮುಸರಿ-ಎಂಜಲಾ ಯಾವದು ತಿಳ್ಕೊ’ ಅಂತ ಅಕಿ ಮಾತ ಮಾತಿಗೆ ಅನ್ನೋದ ಕೇಳಿ ನನ್ನ ಮಗಗ ಜೀವನ ಬ್ಯಾಸರ ಆಗಿ ಯಾಕರ ತಂದ ಮುಂಜವಿ ಮಾಡಿದರೊ ಅಂತ ಅನಿಸಿ
“ನಿಮಗ್ಯಾರ ಮುಂಜವಿ ಮಾಡ ಅಂದಿದ್ದರು, ನನ್ನ ಕೇಳಿ ಮುಂಜವಿ ಮಾಡಿರೇನ್?” ಅಂತ ನಮ್ಮವ್ವಗ ಬೈತಿರ್ತಾನ.
ಒಂಥರಾ ನಮಗೇಲ್ಲಾ ಲಗ್ನ ಮಾಡ್ಕೊಂಡ ಹೆಂಗ ಬುಟ್ಟಿ ಗಟ್ಟಲೇ ತಿಂದಂಗ ಆಗೇದಲಾ ಹಂಗ ಅವಂಗ ಮುಂಜವಿ ಮಾಡ್ಕೊಂಡ ಆಗೇದ.
ಪಾಪ, ಅಂವಾ ಎಷ್ಟ ಅಂದರೂ ಸಣ್ಣಂವಾ ತಿಳಿಯಂಗಿಲ್ಲಾ, ಯಾರರ ಉಟಕ್ಕ ಕೂತಾಗ ಭಡಕ್ಕನ ಅವರ ತಾಟಿನಾಗಿಂದ ಸಂಡಗಿ ತೊಗೊಳೊದು, ಅವಂಗ ಹಾಕಿದ್ದ ಪಲ್ಯಾ ಸೇರಲಿಲ್ಲಾಂದರ ವಾಪಸ ಪಲ್ಯಾದ ಪಾತೇಲಿಗೆ ಹಾಕಿ ಬಿಡೋದು, ಬಾಯಿ ತಪ್ಪಿ ಏನರ ಬಡಸಂದರ ತಾಟ ಮುಟ್ಟಿ ಹಾಕೋದು, ಎಂಜಲ ಕೈಲೆ ನೀರ ಕುಡಿಯೋದು, ಒಟ್ಟ ಬಲಗೈ ಎಡಗೈ ಅನ್ನೋ ಭೇದ ಭಾವ ಇಲ್ಲದ ಕನ್ವಿನಿಯಂಟ ಕೈಲೆ ತನಗ ಬೇಕಾದ್ದನ್ನ ಡೈನಿಂಗ್ ಟೇಬಲ್ ಮ್ಯಾಲಿಂದ ಹಾಕೋಳೊದು ಇವೇಲ್ಲಾ ಕಾಮನ್. ಇನ್ನ ಹಂತಾವಂಗ ಮುಂಜವಿ ಮಾಡೇವಿ ಅಂತ ಕೊಳ್ಳಾಗ ಒಂದ ಜನಿವಾರ ಹಾಕಿ ದಿನಕ್ಕ ಎರಡ ಸರತೆ ಗಂಟ ಬಿದ್ದ ಕಾಟಾಚಾರಕ್ಕ ಸಂಧ್ಯಾವಂದನಿ ಮಾಡಸೋದ ರಗಡ ಆಗಿರ್ತದ ಅದರಾಗ ಇನ್ನ ಈ ನಮ್ಮವ್ವನ ಕಾಂಪ್ಲಿಕೇಟೆಡ್ ಮುಸರಿ- ಎಂಜಲಾ ಎಲ್ಲಾ ಎಲ್ಲೆ ಗೊತ್ತಾಗಬೇಕ ಅಂತೇನಿ.
ಮೊನ್ನೆ ಒಂದ ಸರತೆ ನಮ್ಮವ್ವ ಹಿಂಗ ಒದರೊದಕ್ಕ ಅಂವಾ ತಲಿ ಕೆಟ್ಟ ನಮ್ಮವ್ವಗ
“ಡಿಫೈನ ವಾಟ ಇಜ್ ಮುಸರಿ, ವಾಟ್ ಇಜ್ ಎಂಜಲಾ? ಟೇಲ್ ಮಿ ದ ಡಿಫರೆನ್ಸ್? i am really confused” ಅಂತ ಗಂಟ ಬಿದ್ದಾ. ನಮ್ಮವ್ವಗ ಸಿಟ್ಟ ನೆತ್ತಿಗೇರತ
“ನಿನ್ನ ಹೆಣಾ ಎತ್ತಲಿ, ವೈದಿಕ ಬ್ರಾಹ್ಮರ ಮನ್ಯಾಗ ಹುಟ್ಟಿ ಯಾವದ ಮುಸರಿ ಯಾವದ ಎಂಜಲಾ ಗೊತ್ತಾಗಂಗಿಲ್ಲಾ” ಅಂತ ಜೋರ ಮಾಡಲಿಕತ್ತಳು.
“ನೀ ಅದೇಲ್ಲಾ ಕಥಿ ಹೇಳಬ್ಯಾಡ, ಮುಸರಿ ಯಾವದು ಎಂಜಲ ಯಾವದು ಇಷ್ಟ ಹೇಳ ಸಾಕ” ಅಂತ ಇಂವಾ ಚಾಲು ಮಾಡಿದಾ. ಅದಕ್ಕ ನಮ್ಮವ್ವ ಕೊಟ್ಟಿದ್ದ ಮುಸರಿ-ಎಂಜಲದ್ದ explanation ಒಂದ ಸರತೆ ಕೇಳರಿ ಇಲ್ಲೆ
’ಅನ್ನಾ, ಸಾರು, ಚಪಾತಿ, ಭಕ್ಕರಿ, ಥಾಲಿಪಟ್ಟು ಇವೇಲ್ಲಾ ಮುಸರಿ. ಚಪಾತಿಗೆ ಹಾಲ ಹಾಕಿ ಕಲಸಿದರ ಮುಸರಿ ಅಲ್ಲಾ, ಹಿಂಗಾಗಿ ಹಾಲ ಹಾಕಿ ಕಲಸಿದ್ದ ಚಪಾತಿ ಉಪವಾಸಕ್ಕ ಬರತದ. ಇನ್ನ ಸವತಿಕಾಯಿ ಹಾಕಿ ಥಾಲಿಪಟ್ಟ ಮಾಡಿದರ ಅದು ಮುಸರಿ ಅಲ್ಲಾ. ಬರೇ ನೀರ ಹಾಕಿ ಹಿಟ್ಟ ಕಲಸಿದ್ದ ಥಾಲಿಪಟ್ಟ ಇಷ್ಟ ಮುಸರಿ. ಹಂಗ ಹಾಲಿಗೆ ನೀರ ಹಾಕಿದ್ದರೂ ನಡಿತದ ಅದೇನ ಮುಸರಿ ಅಲ್ಲ ಮತ್ತ.
ಇನ್ನ ಅಕ್ಕಿ ಹುರದ ಅರಷಿಣ ಪುಡಿ ಹಾಕಿ ಅನ್ನಾ ಮಾಡಿದರ ಅದ ಸಹಿತ ಮುಸರಿ ಅಲ್ಲಾ, ಅದು ಉಪವಾಸಕ್ಕ ಬರತದ.
ಹೆಸರಬ್ಯಾಳಿ ಪಾಯಸ ಮುಸರಿ ಅಲ್ಲಾ, ಕಡ್ಲಿ ಬ್ಯಾಳಿ ಪಾಯಸಾ ಮುಸರಿ. ಹಂಗ ಹೆಸರಬ್ಯಾಳಿ ಹುಳಿ ಸಹಿತ ಮುಸರಿ ಅಲ್ಲಾ.
ಇನ್ನ ಹಿಂತಾ ಮುಸರಿ ಪದಾರ್ಥ ನಾವ ಬಲಗೈಲೆ ತಿಂದಾಗ ನಮ್ಮ ತಾಟ ಒಳಗ ಇವೇಲ್ಲಾ ಇರತಾವಲಾ ಆವಾಗ ಇವೇಲ್ಲಾ ಎಂಜಲ ಆಗ್ತಾವ, ಹಂಗ ಒಮ್ಮೆ ಒಂದ ಕೈ ಎಂಜಲಾದ ಮ್ಯಾಲೆ ಮುಸರಿನೂ ಆ ಎಂಜಲಗೈಲೆ ಮುಟ್ಟ ಬಾರದು, ಹಂಗ ಹಾಕೋ ಬೇಕಾರ ಎಡಗೈಲೇನ ಬಡಿಸಿಗೊ ಬೇಕು. ಆಮ್ಯಾಲೆ ಎಡಗೈ ಮುಸರಿ ಆಗೇದ ಅಂತ ಎಡಗೈಗೆ ನೀರ ಹಚಗೋ ಬೇಕು. ನೀರ ಹಚಗೋ ಅಂದರ ಸೀದಾ ತಂಬಗಿ ಒಳಗ ಕೈ ಎದ್ದೋದಲ್ಲ ಮತ್ತ, ವಾಟಗದಾಗಿನ ನೀರ ಒಂದ ನಾಲ್ಕ ಹನಿ ಟೇಬಲ್ ಮ್ಯಾಲೆ ಛಲ್ಲಕೊಂಡ ಆ ನೀರ ಹಚಗೋಬೇಕು’
ಮಜಾ ಕೇಳರಿಲ್ಲಿ, ಊಟಾ ಮಾಡಬೇಕಾರ ಒಂದ ಕೈ ಎಂಜಲಾಗಿದ್ದರ ಇನ್ನೊಂದ ಕೈ ಆಗಿರಂಗಿಲ್ಲಂತ, ಮುಂದ ಕೇಳರಿ
’ಚಟ್ನಿ-ಕೊಸಂಬರಿ-ಮಸರಗಾಯಿ ಎಲ್ಲಾ ಮುಸರಿ ಒಳಗ ಇಟ್ಟರ ಮುಸರಿ, ಇಡದಿದ್ದರ ಇಲ್ಲಾ’
ಹಂಗ ನಮ್ಮ ಮನ್ಯಾಗ ಮೊದ್ಲ ಇವೇಲ್ಲಾ ಮುಸರಿ ಒಳಗ ಕನ್ಸಿಡರ್ ಆಗ್ತಿದ್ದವು ಆದರ ಯಾವಾಗಿಂದ ಫ್ರಿಡ್ಜ್ ಬಂತಲಾ ಆವಾಗ ಅವು ನಾನ್-ಮುಸರಿ ಆದ್ವು. ಯಾಕಂದರ ನಮ್ಮವ್ವ ಫ್ರಿಡ್ಜ ತೊಗೊಂಡಾಗ ಅದನ್ನ ಮುಟ್ಟಿ ಆಣಿ ಮಾಡಿದ್ಲು, ಇದರಾಗ ಒಟ್ಟ ಮುಸರಿ ಇಡಂಗಿಲ್ಲಾಂತ. ಮುಂದ ನನ್ನ ಮದುವಿ ಆದ ಮ್ಯಾಲೆ ನನ್ನ ಹೆಂಡತಿ ಫ್ರಿಡ್ಜ್ ಒಳಗ ಒಂದ ಮುಸರಿ ಕಂಪಾರ್ಟಮೆಂಟ ಮಾಡಿ ಅದರಾಗ ತಂಗಳಕ್ಕ ಬ್ಯಾರೆ ಜಾಗಾ ಮಾಡಿದ್ಲು ಆ ಮಾತ ಬ್ಯಾರೆ.
ಇನ್ನ ಒಗ್ಗರಣಿ ಮುಸರಿ ಅಲ್ಲಾ, ಅದ ಎರಡಕ್ಕು ಬರತದ. ಯಾಕಂದರ ಎಣ್ಣಿಗೆ ದೋಷ ಇಲ್ಲಾ, ನಾ ಹೇಳಿದ್ದ ಶೆಂಗಾ ಎಣ್ಣಿಗೆ ಮತ್ತ, ನೀವೇಲ್ಲರ ಹಿಂದಾಗಡೆ ಬೆಡ್ ರೂಮಿನಾಗಿಂದ Royal challenge-Diet mate ತಂದ ದೇವರ ಮನ್ಯಾಗ ಇಟ್ಟ ಗಿಟ್ಟೀರಿ.
ಇನ್ನ ಮನ್ಯಾಗ ಕೈಯಾಗ ತಾಟ ಹಿಡ್ಕೊಂಡ ಊಟಾ ಮಾಡೋದು, ತೊಡಿ ಮ್ಯಾಲೆ ಇಟಗೊಂಡ ಊಟಾ ಮಾಡೋದು ದೂರದ ಮಾತ. ಮುಂದ ಊಟ ಆದ ಮ್ಯಾಲೆ ಎಂಜಲ-ಗ್ವಾಮಾ ಮಾಡೋದೊಂದ ಬ್ಯಾರೆ ಇಶ್ಯು. ಹಂಗ ಕೈಯಾಗ ತಾಟ ಹಿಡಕೊಂಡ ಊಟಾ ಮಾಡಿದರ ಎಂಜಲ-ಗ್ವಾಮಾ ಹಚ್ಚೋದ ತಪ್ಪತದ ಅಂದರೂ ನಡೆಯಂಗಿಲ್ಲಾ. ಇನ್ನ ತೊಡಿ ಮ್ಯಾಲೆ ತಾಟ ಇಟಗೊಂಡರ ತೊಡಿಗೆ ಗ್ವಾಮಾ ಹಚ್ಚಲಿಕ್ಕೂ ಬರಂಗಿಲ್ಲಾ.
ಏನೋ ನಮ್ಮ ಪುಣ್ಯಾ ನಮ್ಮವ್ವಗ ಭಾಳ ಸಣ್ಣ ವಯಸ್ಸಿನಾಗ ಮೊಣಕಾಲ ನೋವ್ ಶುರು ಆತ ಹಿಂಗಾಗಿ ಕೂತ್ರ ಏಳಲಿಕ್ಕೆ ಬರಂಗಿಲ್ಲಾ ಎದ್ದರ ಕೂಡಲಿಕ್ಕೆ ಬರಂಗಿಲ್ಲಾಂತ ಡೈನಿಂಗ ಟೇಬಲ್ ಬಂತ ಇಲ್ಲಾಂದರ ನೆಲದ ಮ್ಯಾಲೆ ತಾಟ ಹಾಕಿ ಊಟ ಮುಗದ ಮ್ಯಾಲೆ ಡೈಮಂಡ್ ಟೈಲ್ಸ್ ಮ್ಯಾಲೆ ಶಗಣಿಲೇ ಸಾರಿಸಿ ಎಂಜಲ ಗ್ವಾಮಾ ಮಾಡೋ ಪೈಕಿ ನಮ್ಮವ್ವ. ಅಲ್ಲಾ ಹಂಗ ಡೈನಿಂಗ ಟೇಬಲ್ ಮ್ಯಾಲೆ ಊಟಾ ಮಾಡಿದರ ಏನ ಆತ? ಮುಸರಿ ಮುಸರಿನ, ಎಂಜಲಾ- ಎಂಜಲಾನ ಹಿಂಗಾಗಿ ನಮ್ಮವ್ವ ಒಂದ ತಂಬಗಿ ನೀರ ಹಾಕಿ ದಿವಸಾ ಊಟಾದ ಮ್ಯಾಲೆ ಡೈನಿಂಗ ಟೇಬಲ್ ಒರಸೋದ. ಅದರಾಗ ನಮ್ಮ ಮನಿ ಡೈನಿಂಗ್ ಟೇಬಲ್ ಮ್ಯಾಲೆ ಯಾ ಕಂಪನಿ ಪ್ಲೈವುಡ್ ಹಾಕ್ಯಾರೋ ಏನೋ ಇಪ್ಪತ್ತ ವರ್ಷದಿಂದ ನಮ್ಮವ್ವಾ ದಿವಸಕ್ಕ ಮೂರ ಸರತೆ ಕೊಡಗಟ್ಟಲೇ ನೀರ ಹಾಕಿ ಎಂಜಲ- ಗ್ವಾಮಾ ಮಾಡಿದರು ಇನ್ನು ಏನು ಆಗಿಲ್ಲಾ. ಬಹುಶಃ ಅದ ’ಗ್ರೀನ ಪ್ಲೈ ಪ್ಲೈವುಡ- ಜನಮ ಜನಮ ಕಾ ಸಾಥಿ’ ಅಂತಾರಲಾ ಹಂತಾದ ಇರಬೇಕ ಅನಸ್ತದ ಹಿಂಗಾಗಿ ಇಷ್ಟ ವರ್ಷದಿಂದ ನಮ್ಮವ್ವನ್ನ ಸಾವಿರಾರ ಎಂಜಲ ಗ್ವಾಮಾ ತಡಕೊಂಡದ.
ಅಲ್ಲಾ ಈಗ ಎಲ್ಲಾ ಬಿಟ್ಟ ಈಗ್ಯಾಕ ಇದ ನೆನಪಾತ ಅಂದ್ರ ನಿನ್ನೆ ಊಟಕ್ಕ ಕೂತಾಗ ನನ್ನ ಮಗಾ ಎಡಗೈಲೆ ಮೊಸರ ಹಾಕ್ಕೊಳ್ಳಿಕ್ಕೆ ಹೋಗಿ ಮಸರಿನ ಪಾತೇಲಿ ಸಾರಿನ ಪಾತೇಲಿಗೆ ಬಡಿಸಿ ಬಿಟ್ಟಾ, ನಮ್ಮವ್ವ ದೊಡ್ಡ ಕಣ್ಣ ತಗದ ಇನ್ನೇನ ಬಾಯಿ ತಗಿಬೇಕು ಅನ್ನೋದರಾಗ ಅಂವಾ ಹೆದರಿ ಮಸರಿನ ಪಾತೇಲಿ ತಳಕ್ಕ ಎರಡ ಹನಿ ನೀರ ಹಚ್ಚಿ ಬಿಟ್ಟಾ, ಪಾಪ ನಮ್ಮವ್ವಗ ಏನ ಅನ್ನಬೇಕ ಗೊತ್ತಾಗಲಿಲ್ಲಾ. ಅಲ್ಲಾ ಅಕಿ ಪ್ರಕಾರ ಕೈ ಮುಸರಿ ಆದರ ನೀರ ಹಚಗೋ ಬೇಕ ಹಂಗ ನನ್ನ ಮಗಾ ಮಸರಿನ ಪಾತೇಲಿ ಮುಸರಿ ಮಾಡಿದ್ದಾ ಅದಕ್ಕ ಪಾತೇಲಿ ತಳಕ್ಕ ನೀರ ಹಚ್ಚಿದಾ. ಆದರೂ ನಮ್ಮವ್ವ ತನ್ನ ಚಟಾ ಬಿಡಬೇಕಲಾ ಒಂದ ಸರತೆ
“ಮುದಕಾದಿ, ಮುಸರಿ ಯಾವದು…ಎಂಜಲ ಯಾವದು ತಿಳಯಂಗಿಲ್ಲಾ? ಮಸರ ಮುಸರಿ ಮಾಡಿದೆಲಾ” ಅಂತ ಅಂದ ಸಮಾಧಾನ ಮಾಡ್ಕೊಂಡ್ಲು. ಅಲ್ಲಾ ಈಗ ನಿಮಗರ ಗೊತ್ತಾತಲಾ ಯಾವದು ಮುಸರಿ ಯಾವದ ಎಂಜಲಾ ಅಂತ?