“ರ್ರಿ, ಅನ್ನಂಗ ನಾ ನಿಮಗ ಒಂದ ಮಾತ ಕೇಳೊದಿತ್ತ, ನಂಬದ ಮದುವಿ ರೆಜಿಸ್ಟ್ರೇಶನ್ ಮಾಡಿಸಿರಿ ಇಲ್ಲೊ?” ಅಂತ ಒಂದ ವಾರದ ಹಿಂದ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ ಕೇಳಿದ್ಲು. ನನಗ ಒಮ್ಮಿಕ್ಕಲೇ ಇಕಿಗೆ ಎಲ್ಲಾ ಬಿಟ್ಟ ಮದುವಿ ರೆಜಿಸ್ಟ್ರೇಶನ್ ಯಾಕ ನೆನಪಾತ್ಲೆ, ಮದುವಿ ಆಗಿ ಹದಿನೈದ ವರ್ಷ ಆಗಿ ಹೋತ, ಮ್ಯಾಲೆ ಎರಡ ಹಡಿಬೇಕಾರ ಮ್ಯಾರೇಜ ರೆಜಿಸ್ಟ್ರೇಶನ್ ಬಗ್ಗೆ ತಲಿಕೆಡಸಿಗೊಳ್ಳಲಾರದೋಕಿ ಇವತ್ಯಾಕ ತಲಿಕೆಡಸಿಗೊಳ್ಳಿಕತ್ತಾಳ ಅಂತ
“ಏ, ನಮಗ್ಯಾಕ ರೆಜಿಸ್ಟ್ರೇಶನ್ ಬೇಕಲೇ, ಹಿಂದು ಸಂಸ್ಕೃತಿ ಪ್ರಕಾರ ಏಳ ಸುತ್ತ ಸುತ್ತ ಹೊಡದ ಊರ ಮಂದಿ ಸಾಕ್ಷಿ ಇಟಗೊಂಡ ಲಗ್ನಾ ಮಾಡ್ಕೊಂಡ, ನಿನ್ನ ಸುತ್ತ ಗಿರಕಿ ಹೊಡಿಲಿಕತ್ತೇನಿ ಮತ್ಯಾಕ ನೀ ಮದುವಿ ರೆಜಿಸ್ಟ್ರೇಶನ್ ಬಗ್ಗೆ ತಲಿ ಕೆಡಸಿಗೊತಿ” ಅಂತ ನಾ ಅಂದರ
“ಅಯ್ಯ, ಹಂಗ ಅಂದರ ಏನದ ತಲಿ, ನಂಬದ ಲಗ್ನ ಆಗೇದ ಅಂತ ಲಿಗಲ್ ಪ್ರೂಫ್ ಏನದ?” ಅಂತ ನನಗ ಕೇಳಿದ್ಲು.
“ಇವ್ಯಾರಡ ಮಕ್ಕಳ ಏನ ಇಲ್ಲಿಗಲ್ಲೇನಲೇ ಹುಚ್ಚಿ, ಕೊಳ್ಳಾಗ ಬಂಗಾರದ ಮಂಗಳಸೂತ್ರ, ಕಾಲಾಗ ಬೆಳ್ಳಿ ಕಾಲುಂಗರ ಮ್ಯಾಲೆ ನೀ ಹೇಳಿದಂಗ ಕೇಳ್ಕೊಂಡ ಬಿದ್ಕೊಂಡಿರೋ ಗಂಡ ಇವರೇನ ಲಿಗಲ್ ಪ್ರೂಫ್ ಅಲ್ಲೇನ” ಅಂತ ನಾ ಅಂದರ
“ರ್ರಿ, ನಾ ಹೇಳಲಿಕತ್ತಿದ್ದ, ಲಿಗಲ್ ಡಾಕ್ಯುಮೆಂಟ… ಏನ ಲಿಗಲ್ ಡಾಕ್ಯುಮೆಂಟ ಅದ ನಮ್ಮ ಮ್ಯಾರೇಜದ್ದ? ನೀವ ನನ್ನ ಗಂಡ ಅಂತ ಎಲ್ಲೇದ ರಿಟನ್ ಪ್ರೂಫ, ಹೇಳ್ರಿ?” ಅಂತ ನನಗ ಕೇಳಿದ್ಲು.
ಅಲ್ಲಾ, ಹಂಗ ಅಕಿ ಹೇಳೊದ ಖರೆ, ನಂಬದ ಲಗ್ನಾಗಿ ಹದಿನಾರ ವರ್ಷ ಆಗಲಿಕ್ಕೆ ಬಂದರು ಇವತ್ತೀಗೂ ಮ್ಯಾರೇಜ ರೆಜಿಸ್ಟ್ರೇಶನ್ ಮಾಡಿಸಿಲ್ಲಾ, ಮ್ಯಾರೇಜ ಸರ್ಟಿಫಿಕೇಟ ಇಲ್ಲಾ. ಹಂಗ ನಮಗ್ಯಾರು ಮ್ಯಾರೇಜ ಪ್ರೂಫ ಕೇಳೆ ಇಲ್ಲ ಬಿಡ್ರಿ, ಮೊದ್ಲ ಆವಾಗ ಇವಾಗ ನಾ ಹೆಂಡ್ತಿನ್ನ ಕರಕೊಂಡ ಓಡ್ಯಾಡ ಬೇಕಾರ ನಮಗ ಪರಿಚಯ ಇರಲಾರದವರು ನನ್ನ ಹೆಂಡತಿನ್ನ ನೋಡಿ
’ಮಗಾ ಯಾವದೊ ಛಲೋ ಆಂಟಿ ಪಟಾಯಿಸ್ಯಾನ್’ ಅಂತಿದ್ದರ ಹೊರತು ಒಂದ ಸರತೇನೂ ಯಾರರ ಪೋಲಿಸರ ಹಿಡದ ’ಇಕಿ ಯಾರು? ನಿಂದ ಮ್ಯಾರೇಜ್ ಸರ್ಟಿಫಿಕೇಟ ತೊರಸಂತ’ ನಂಗ ಇವತ್ತಿಗೂ ಕೇಳಿಲ್ಲಾ.
ಇನ್ನ ಲೈಸೆನ್ಸ್-ಗಿಸೆನ್ಸ್ ಮಾಡಸಬೇಕಾರ ಮ್ಯಾರೇಜ್ ಸರ್ಟಿಫಿಕೇಟ್ ಬೇಕಾಗತದ ಅನ್ನಲಿಕ್ಕೆ ಇಕಿಗೆ ಗಾಡಿ ಹೊಡಿಲಿಕ್ಕೆ ಬರಂಗಿಲ್ಲಾ ಹಿಂಗಾಗಿ ಲೈಸನ್ಸ್ ಮಾಡ್ಸೊ ಪ್ರಸಂಗನ ಬಂದಿಲ್ಲಾ, ಇನ್ನ ಲೈಸನ್ಸ್ ಇಲ್ಲಾಂದ್ರ ಪಾಸಪೋರ್ಟ ಅಂತೂ ಇಲ್ಲೇ ಇಲ್ಲಾ, ಹಿಂಗಾಗಿ ನಂಗ ಒಟ್ಟ ಅಕಿದ ಮ್ಯಾರೇಜ ಅಂದರ ನಮ್ಮ ಮ್ಯಾರೇಜ ಸರ್ಟಿಫಿಕೇಟದ್ದ ಅವಶ್ಯಕತೆನ ಇವತ್ತಿನ ತನಕಾ ಬಿದ್ದಿಲ್ಲ. ಹಂಗ ಖರೇ ಹೇಳ್ಬೇಕಂದರ ಮ್ಯಾರೇಜ ಸರ್ಟೀಫಿಕೇಟ ಇಲ್ಲಾ ಅಂತ ನಂದ ಪಾಸಪೋರ್ಟ ಸಹಿತ ರಿನಿವಲ್ ಮಾಡಸಲಿಕ್ಕೆ ಹೋಗಿಲ್ಲಾ. ಇನ್ನು ಅದ ಬ್ಯಾಚಲರ್ ಇದ್ದಾಗಿಂದ ಡೇಟ್ ಬಾರ್ ಆಗಿದ್ದ ಪಾಸಪೊರ್ಟ ಇಟಗೊಂಡ ಕೂತೇನಿ. ಅಲ್ಲಾ ಹಂಗ ನಂದ ಮದುವಿ ಆದಮ್ಯಾಲೆ ವಿದೇಶ ಪ್ರಯಾಣ ಇಲ್ಲಾ ಅಂತ ಅಕಿ ಕುಂಡ್ಲಿ ಒಳಗ ಬರದ ಬಿಟ್ಟಾರ ಬಿಡ್ರಿ, ಸುಳ್ಳ ಯಾಕ ಪಾಸಪೋರ್ಟ ರೆನಿವಲ್ ಮಾಡಸಬೇಕು ಅಂತ ನಾ ಬಿಟ್ಟ ಬಿಟ್ಟೇನಿ. ಅದ ಇರಲಿ, ಇವತ್ತಿಗೂ ನಾ ನನ್ನ ಹೆಂಡತಿ ಹೆಸರ ಮ್ಯಾರೇಜ ಸರ್ಟಿಫಿಕೇಟ ಇಲ್ಲಾ ಅಂತ ರೇಶನ್ ಕಾರ್ಡ ಒಳಗ ಸಹಿತ ಸೇರಸಿಲ್ಲಾ, ಏನಂತೀರಿ ಇದಕ್ಕ?
ಆದರ ಇಕಿಗೆ ಯಾಕ ಈ ಸುಡಗಾಡ ಮ್ಯಾರೇಜ್ ಸರ್ಟಿಫಿಕೇಟಿಂದ ಒಮ್ಮಿಂದೊಮ್ಮಿಲೇ ನೆನಪಾತು ಅನ್ನೋದ ನಂಗ ಸ್ವಲ್ಪ ವಿಚಾರ ಮಾಡಸಲಿಕತ್ತು. ಅಲ್ಲಾ, ನಾ ಇಕಿ ಬಗ್ಗೆ ಸಿಕ್ಕಾಪಟ್ಟೆ ಬರಿತೇನಿ ಅಂತ ಇಕಿ ಎಲ್ಲರ ನಾಳೆ ಕೊರ್ಟ-ಗೀರ್ಟಿಗೆ ಹೋಗೊಕಿ ಇದ್ದಾಳೊ ಇಲ್ಲಾ ಯಾರರ ಅಕಿ ತಲ್ಯಾಗ ಏನರ ತುಂಬಿ ಹೆಂಗಿದ್ದರೂ ನಿನ್ನ ಗಂಡ ನಿನ್ನ ಮ್ಯಾಲೆ ಬರದ ಬರದ ಫೇಮಸ್ ಆಗ್ಯಾನ ನಾಳೆ ನೀ ಅವನ ಮ್ಯಾಲೆ ’ಮಾನ ಹಾನಿ ಮೊಕದ್ದಮೆ’ ಹಾಕಿ ರೊಕ್ಕ ವಸೂಲ ಮಾಡಬಹುದು ಅಂತ ಹೇಳಿ ಕೊಟ್ಟಾರೊ ಒಂದು ಗೊತ್ತಾಗವಲ್ತಾಗಿತ್ತ. ಅದರಾಗ ಬ್ಯಾರೆ ಇತ್ತೀಚಿಗೆ ಹೆಣ್ಣಮಕ್ಕಳಿಗೆ ಅದರಾಗೂ ಹೆಂಡಂದರಿಗೆ ಸಿಕ್ಕಾ ಪಟ್ಟಿ ಕಾನೂನ ಬ್ಯಾರೆ ಬಂದ ಬಿಟ್ಟಾವ ಅಂತ ನಂಗ ಖರೇನ ಹೆದರಕಿ ಹತ್ತ.
ಇನ್ನ ಇಕಿ ಹಿಂಗ ಮ್ಯಾರೇಜ ಸರ್ಟಿಫಿಕೇಟಿಗೆ ಬೆನ್ನ ಹತ್ಯಾಳ ಅಂದರ ಅದ ಆಗೊ ಮಟಾ ಪಿಡಾ ಗಂಟ ಬಿದ್ದಂಗ ಬಿದ್ದ ಅದನ್ನ ಮಾಡಿಸೆ ಬಿಡೋಕಿ ಅಂತ ನಂಗ ಗ್ಯಾರಂಟೀ ಅನಸಲಿಕತ್ತ. ಆದರು ನಾ ಅಕಿಗೆ ಮ್ಯಾರೇಜ ಸರ್ಟಿಫಿಕೇಟ ಇವತ್ತಿಲ್ಲಾ ನಾಳೆ ಮಾಡಸೋಣ ತೊಗೊ ಅಂತ ಅಕಿಗೆ ಹೇಳಿ ಸುಮ್ಮನಾಗಿದ್ದೆ ಆದರ ಮುಂದ ಎರಡ ದಿವಸ ಬಿಟ್ಟ ಇಕಿ ಸೀದಾ ಫಾರ್ಮ ತೊಗೊಂಡ ಬಂದ ಬಿಟ್ಟಳು. ಅದು ಎರಡ ಫಾರ್ಮ. ಒಂದ ಫಾರ್ಮ ನಂ.೧- ಮೆಮೊರೆಂಡಮ್ ಆಫ್ ಮ್ಯಾರೇಜ ಇನ್ನೊಂದ ಫಾರ್ಮ್ ನಂ.೩- ಅಪ್ಲಿಕೇಶನ್ ಆಫ್ ಮ್ಯಾರೇಜ ಅಂಡರ್ ಸೆಕ್ಶನ್ ೧೫ ಆಫ್ ದ ಸ್ಪೇಶಲ್ ಮ್ಯಾರೇಜ್ ಯಾಕ್ಟ ೧೯೫೪.
ನಾ ಫಾರ್ಮ ನಂ. ೩ ನೋಡಿದವನ
“ಲೇ, ಇದನ್ಯಾಕ ತರಲಿಕ್ಕೆ ಹೋಗಿದ್ದಿ, ನಂಬದ ಮ್ಯಾರೇಜ ಆಗೇದ ಬರೇ ಫಾರ್ಮ್ ನಂ. ೧ ತಂದಿದ್ದರ ಆಗತಿತ್ತಲಾ” ಅಂತ ನಾ ಅಂದರ.
“ರ್ರಿ, ಮೊದಲ ಮ್ಯಾರೇಜ ಅಪ್ಲಿಕೇಶನ್ ಫಾರ್ಮ ತುಂಬಿ ಕೊಟ್ಟ ಆಮ್ಯಾಲೆ ಮ್ಯಾರೇಜ ರೆಜಿಸ್ಟ್ರೇಶನ್ ಮಾಡಸಬೇಕಂತ” ಅಂದ್ಲು. ಏನ್ಮಾಡ್ತೀರಿ, ಮ್ಯಾರೇಜಿಗೂ ಅಪ್ಲಿಕೇಶನ್, ರೆಸ್ಯುಮ್, ಅಫಾಡವಿಟ್ ಎಲ್ಲಾ ಶುರು ಆದ್ವೇನಪಾ ಅಂತ ಖರೇನ ಕೆಟ್ಟ ಅನಸ್ತ. ನಮ್ಮ ಕಾಲದಾಗ ನಾವು ಗೋತ್ರ, ಕುಂಡ್ಲಿ, ನಾಡಿ, ಗುಣಾ ಲಾಸ್ಟಿಗೆ ಮಾರಿ ನೋಡಿ ಕೊಡೊದ-ತೊಗೊಳೊದ ವ್ಯವಹಾರ ಕುದರಿದರ ಮದುವಿ ಆಗತಿದ್ವಿ, ಈಗೀನ ಪರಿಸ್ಥಿತಿ ನೋಡ್ರಿ.
ಸರಿ ಇನ್ನ ಹೆಂಡತಿ ಫಾರ್ಮ ತೊಗೊಂಡ ಬಂದಾಳಂದರ ಬಿಡ್ತಾಳ ಫಾರ್ಮ ತುಂಬ ಬೇಕ ಅಂತ ಮೊದ್ಲ ಮೆಮೊರೆಂಡಮ್ ಆಫ್ ಮ್ಯಾರೇಜ್ ತೊಗೊಂಡ ನೋಡಿದೆ ಅದರಾಗ ಎರಡು ಪಾರ್ಟಿದು ಅಂದರ ಗಂಡಾ ಹೆಂಡತಿ ಇಬ್ಬರದು ಹೆಸರು, ವಯಸ್ಸು, ಹುಟ್ಟಿದ್ದ ತಾರೀಖು, ಅವ್ವಾ ಅಪ್ಪನ ಹೆಸರು, ಅಡ್ರೇಸ್ಸು ಎಲ್ಲಾ ಕೇಳಿದ್ದರು, ಮುಂದ ಸ್ಟೇಟಸ್ ಆಫ ಬ್ರೈಡಗ್ರೂಮ್/ಬ್ರೈಡ್ ಅಂದರ ಹುಡಗ/ಹುಡಗಿ ಸ್ಟೇಟಸ ಒಳಗ – unmarried/widower/divorced ಅಂತ ಇತ್ತ. ಅದನ್ನ ನೋಡಿ ನಂಗ ವಿಚಿತ್ರ ಅನಸ್ತ, ಇವರೇನಪಾ ವಿಡೊವರ್, ಡೈವರ್ಸ್ಡ ಅಂತೇಲ್ಲಾ ಬರದಾರ ಫಾರ್ಮ ಒಳಗ, ಒಟ್ಟ ಸಾರ್ವಜನಿಕವಾಗಿ ಎಲ್ಲಾರಿಗೂ ಒಂದ ಫಾರ್ಮ ಮಾಡ್ಯಾರಿನ ಅಂತ ಆ ಫಾರ್ಮ ಕೆಳಗಿಟ್ಟ ಮ್ಯಾರೇಜ ಅಪ್ಲಿಕೇಶನ್ ಫಾರ್ಮ ಕೈಯಾಗ ಹಿಡಕೊಂಡ ಓದಲಿಕತ್ತೆ, ಅದರಾಗನು ಎರಡು ಪಾರ್ಟಿದು ಹೆಸರು, ವಯಸ್ಸು ಕೇಳಿ ಮುಂದಿನ ಕಾಲಮ್ ಒಳಗ ಪದ್ದತಸೀರ್ ಇಂಗ್ಲೀಷ್ ಒಳಗ Relationship if any, of parties before marriage ಅಂತ ಇತ್ತ. ನಾ ಅದನ್ನ ಓದಿ ಗಾಬರಿ ಆದೆ. ಇದೇನಪಾ ನಂಬದ ಮದ್ವಿಕಿಂತಾ ಮೊದ್ಲಿಂದ ಸೆಟ್ಟಿಂಗ, ಲಫಡಾ ಎಲ್ಲಾ ಇದರಾಗ ಕಂಪಲ್ಸರಿ ಬರಿಬೇಕಿನ ಅನಸಲಿಕತ್ತ. ನಾ ಭಡಾ-ಭಡಾ ಹೆಂಡ್ತಿಗೆ ಒದರಿ
“ಏ, ನಿಂದ ಮದುವಿಕಿಂತಾ ಮುಂಚೆ ಯಾರದರ ಜೊತಿ ಏನರ ಲಫಡಾ ಇತ್ತೇನ?” ಅಂತ ಕೇಳಿದೆ. ಅಕಿ ಸಿಟ್ಟಿಗೆದ್ದ
“ರ್ರಿ, ಹೋಗರಿ, ಏನ ಛಂದ ಕೇಳ್ತೀರಿ. ನಂದ ಯಾ ಸುಡಗಾಡ ಲಫಡಾನೂ ಇದ್ದಿದ್ದಿಲ್ಲಾ, ನಿಮ್ಮನ್ನ ಕಟಗೊಂಡಿದ್ದ ಒಂದ ದೊಡ್ಡ ಲಫಡಾ ಆಗೇದ” ಅಂತ ನಂಗ ಬೈದ ಬಿಟ್ಲು, ಸರಿ ನಾ ಮುಂದ ಹಂಗ ಓದ್ಕೋತ ಹೊಂಟೆ, ನೆಕ್ಸ್ಟ ಲೈನ ಒಳಗ
We hereby declare that –
Neither of us has more than one spouse living on the date of mentioned in this application ಅಂತ ಇತ್ತ, ನಾ ತಲಿಕೆಟ್ಟ ಈ ಫಾರ್ಮ ಇಂಡಿಯಾದ್ದೊ ಇಲ್ಲಾ ಇಂಗ್ಲೆಂಡದ್ದೊ ಅಂತ ನೋಡಲಿಕತ್ತೆ, ಅಲ್ಲರಿ ಮ್ಯಾರೇಜ ಅಪ್ಲಿಕೇಶನ್ ಫಾರ್ಮ್ ಒಳಗ ಹಿಂಗ ’ಇವತ್ತಿನ ದಿವಸ ಒಂದರಕಿಂತ ಜಾಸ್ತಿ ಗಂಡಾ ಇಲ್ಲಾ, ಹೆಂಡತಿ ಇಲ್ಲಾ ನಮಗ’ ಅಂತ ಡಿಕ್ಲೇರೇಶನ್ ಕೇಳ್ತಾರ ಅಂದರ ನಂಗ ಖರೇನ ಇದ ಇಂಡಿಯನ್ ಮ್ಯಾರೇಜ ಅಪ್ಲಿಕೇಶನ್ ಫಾರ್ಮ ಹೌದೊ ಅಲ್ಲೊ ಅಂತ ಡೌಟ ಬರಲಿಕತ್ತ. ಆದರ ಫಾರ್ಮ ಮ್ಯಾಲೆ ಭಾಳ ಕ್ಲಿಯರ್ ಆಗಿ ಬರದಿದ್ದರು karnataka rule 5(1) under Hindu Marriage Act 1955 ಅಂತ. ಅದೇನ ಯಾಕ್ಟೋ ಏನೋ? ಅಲ್ಲರಿ ನಮ್ಮ ಹಿಂದು ಧರ್ಮದಾಗ ಮದುವಿ ಅಂಬೋದ ಎಷ್ಟ ಪವಿತ್ರ ಬಂಧನ, ಇದು ಏಳೇಳ ಜನ್ಮದ್ದು, ದೇವರ ಹಾಕಿದ್ದ ಕಗ್ಗಂಟು, ಪೂರ್ವ ಜನ್ಮದ ಪಾಪನೊ ಪುಣ್ಯನೊ ಅಂತೇಲ್ಲಾ ನಂಬತೇವಿ, ನಮ್ಮ ಸರ್ಕಾರ ನೋಡಿದ್ರ ಹಿಂಗ ಫಾರ್ಮ ಪ್ರಿಂಟ ಮಾಡಿಸಿದರ ಹೆಂಗ ಅಂತೇನಿ.
ಅಲ್ಲಾ ಹಂಗ ನಿಂಬದ್ಯಾರದರ ಮ್ಯಾರೇಜ ಸರ್ಟಿಫಿಕೇಟ ಇದ್ದರ ನೀವು ಈ ಫಾರ್ಮ ತುಂಬಿ ಕೊಟ್ಟ ಸರ್ಟಿಫಿಕೇಟ ತೊಗೊಂಡಿರ್ತಿರಿ ಆ ಮಾತ ಬ್ಯಾರೆ, ಆದರ ಅದನ್ನ ನಿಮ್ಮ ಎಜೆಂಟ ತುಂಬಿರ್ತಾನ ಹಿಂಗಾಗಿ ನಿಮಗ ಅದರ ಒಳಗಿದ್ದಿದ್ದ ಡಿಟೇಲ್ಸ ಗೊತ್ತಾಗಿಲ್ಲ ಇಷ್ಟ.
ಮುಂದ ಸೆಕಂಡ ಡಿಕ್ಲೇರೇಶನ್ ಒಳಗ Neither of us is an idiot or lunatic ಅಂತ ಇತ್ತ. ಹಾಂ..ಈಗ ಒಂದ ಸ್ವಲ್ಪ ಇಂಡಿಯನ್ ಅಂತ ಅನಸಲಿಕತ್ತ. ನಾ ನನ್ನ ಹೆಂಡತಿಗೆ ಕರದ ಅದನ್ನ ತೊರಿಸಿ
“ನಾ ಇಲ್ಲೇ ನೀ ಇಡಿಯಟ್ ಅಂತ ಬರೀಲಿ?” ಅಂತ ಕೇಳಿದೆ. ನಾ ಅಕಿಗೆ ಮಾತ ಮಾತಿಗೆ ಇಡಿಯಟ್ ಇದ್ದಂಗ ಇದ್ದಿ ಅಂತ ಕಾಡಸ್ತಿರ್ತೇನಿ ಹಂತಾದರಾಗ ಫಾರ್ಮ ಒಳಗೂ ಹಿಂಗ ಕೇಳ್ಯಾರ ಅಂದ ಕೂಡಲೇ ಅಕಿಗೆ ಸಿಟ್ಟ ಬಂತ
“ಬರಿರಿ, ನಾ ಇಡಿಯಟ ಅಂತ ಬರೀರಿ..ನೀವು ಲುನಾಟಿಕ್ ಅಂತ ಬರೀರಿ” ಅಂದ್ಲು.
“ಅಲ್ಲಲೇ, ನಾ ಇಡಿಯಟ ಲಗ್ನಾ ಮಾಡ್ಕೊಂಡೇನಿ ಅಂದರ ಲುನಾಟಿಕ (ಅವಿವೇಕಿ) ಅಂತನ ಅರ್ಥ ತೊಗೊ” ಅಂತ ನಾ ಶುರು ಮಾಡಿದೆ. ಹಂಗ ಮುಂದ ಇಬ್ಬರದು ಬಾಯಿಗೆ ಬಾಯಿ ಹತ್ತಿ ಜಗಳ ಬೆಳಿತ. ಓಣ್ಯಾಗಿನ ಮಂದಿ ನಮ್ಮ ಗೇಟಿಗೆ ಬಂದ ನಿಲ್ಲೊ ಅಷ್ಟ ಜೋರ ಜಗಳ ಶುರು ಆತ. ಅಲ್ಲಾ, ಹಂಗ ಇದನೇ ಮೊದ್ಲನೆ ಸಲಾ ಅಲ್ಲ ಬಿಡ್ರಿ ನಾವ ಜಗಳಾಡೊದ. ಕಡಿಕೆ ನಾನ ತಲಿಕೆಟ್ಟ
“ಲೇ, ನೀ ಈ ಮ್ಯಾರೇಜ ಅಪ್ಲಿಕೇಶನ ಬದ್ಲಿ ಡೈವರ್ಸ ಅಪ್ಲಿಕೇಶನ್ ತಂದಿದ್ದರ ಭಾಳ ಛಲೊ ಇತ್ತ ನೋಡ, ನಿನ್ನ ಕಾಲಾಗ ನಂಗ ಜೀವ ಸಾಕಾಗಿ ಹೋಗೇದ” ಅಂತ ಅಂದರ.
“ರ್ರಿ, ನಂಗೇಲ್ಲಾ ಗೊತ್ತರಿ, ದಿವಸಾ ಅನುಭವಿಸಲಿಕತ್ತೋಕಿ ನಾನು, ನಿಮಗೇನ ಗೊತ್ತ ನನ್ನ ಸಂಕಟಾ. ಖರೇ ಅಂದರ ನಾ ಡೈವರ್ಸ ಫಾರ್ಮ ಕೇಳಲಿಕ್ಕೆ ಹೋಗಿದ್ದೆ, ಅವರ ಡೈವರ್ಸ ಕೊಡಬೇಕಂದರ ಮ್ಯಾರೇಜ ಸರ್ಟಿಫಿಕೇಟ, ಮ್ಯಾರೇಜ ರೆಜಿಸ್ಟ್ರೇಶನ್ ಕಂಪಲ್ಸರಿ ಅಂದರು ಅದಕ್ಕ ಈ ಫಾರ್ಮ ತೊಗೊಂಡ ಬಂದೇನಿ..ಇಲ್ಲಾಂದರ ಆ ಸುಡಗಾಡ ಮ್ಯಾರೇಜ ಸರ್ಟಿಫಿಕ್ ತೊಗೊಂಡ ನಾ ಏನ್ ಉಪ್ಪಿನಕಾಯಿ ಹಾಕ್ಬೇಕೇನು..ಅದೇನ ಡಿಗ್ರಿ ಇಲ್ಲಾ ಡಾಕ್ಟರೇಟ ಸರ್ಟಿಫಿಕೇಟ್ ಕಟ್ ಹಾಕಿಸಿ ಮಳಿ ಹೊಡದ ಗ್ವಾಡಿಗೆ ಹಾಕಲಿಕ್ಕೆ” ಅಂದ್ಲು. ಹಕ್ಕ…ಈಗ ಗೊತ್ತಾತ ಅಕಿ ಯಾಕ ಒಂದ ವಾರದಿಂದ ಮ್ಯಾರೇಜ ರೆಜಿಸ್ಟ್ರೇಶನಗೆ ಗಂಟ ಬಿದ್ದಾಳ ಅಂತ.
ಅಕಿ ಹಂಗ ಅನ್ನೊದ ತಡಾ ನಾ ಭಡಾ-ಭಡಾ ಆ ಎರಡೂ ಫಾರ್ಮ ಹರದ ಕಸದ ಬುಟ್ಟ್ಯಾಗ ಒಗದ
“ಲೇ, ಹುಚ್ಚಿ.. ಮದುವಿ ಆಗಿ ಹದಿನಾರ ವರ್ಷ ಆಗಲಿಕ್ಕೆ ಬಂತು, ಹಂಗ ಡೈವರ್ಸ ಕೊಟ್ಟರ ನಿನಗೇನ ಜಾಸ್ತಿ ಫಾಯದೆ ಸಿಗಂಗಿಲ್ಲಾ, ಯಾಕ ಸುಮ್ಮನ ಮಕ್ಕಳನ ಅನಾಥ ಮಾಡ್ತಿ, ಭಾಳ ಶಾಣ್ಯಾಕಿ ಇದ್ದಿ ಸುಮ್ಮನ ಕೂತ್ಗೊ” ಅಂತ ಬೈದ ಅದು- ಇದು ಹೇಳಿ ಮಸ್ಕಾ ಹೊಡದ ಸಮಾಧಾನ ಮಾಡಿ ಕಳಸಿದೆ.
ನೋಡ್ರಿ ಹಂಗ ನಿಂಬದು ಯಾರದರ ಮ್ಯಾರೇಜ್ ಸರ್ಟಿಫಿಕೇಟ ಇದ್ದಿದ್ದಿಲ್ಲಾ ಅಂದರ ಮಾಡಿಸಿ ಬಿಡ್ರಿ, ಈಗಂತೂ ಆಧಾರ ಕಾರ್ಡ, ರೇಶನ ಕಾರ್ಡ, ವೋಟರ್ಸ್ ಕಾರ್ಡ, ಗ್ಯಾಸ ಕಾರ್ಡ ಎಲ್ಲಾದಕ್ಕೂ ಮ್ಯಾರೇಜ ಸರ್ಟಿಫಿಕೇಟ ಕೇಳ್ತಾರ ಕಡಿಕೆ ಏನಿಲ್ಲಾಂದರು ನಾಲ್ಕ ಮಂದಿಗೆ ಇಕಿನ ನನ್ನ ಹೆಂಡತಿ ಅಂತ ಹೇಳಲಿಕ್ಕರ ಬೇಕಾಗ್ತದ.
ನಕ್ಕ ನಕ್ಕ ಸುಸ್ತಾತು,,,,,ದೇಸಿ ಭಾಷೆಯ ಸೊಗಡು ಭಾಳ ಖುಷಿ ಕೊಡ್ತು,,,,ಪ್ರಶಾಂತಜಿ,,,,,