ನಿನ್ನೆ ಜನೇವರಿ ನಾಲ್ಕಕ್ಕ ಒಂದಿಷ್ಟ ದೇಶದಾಗ ಡೈವರ್ಸ್ ಡೇ ಅಂತ ಆಚರಿಸದರು. ಅವತ್ತಿನ ದಿವಸ ಅಗದಿ ಪ್ರಶಸ್ತ ಅಂತ ಡೈವರ್ಸ್ ಕೊಡಲಿಕ್ಕೆ, ನಾವ ಹೆಂಗ ನಮ್ಮ ದೇಶದಾಗ ಅಕ್ಷತ್ರೀತಿಯಾ ದಿವಸ ಮೂಹರ್ತ ನೋಡಲಾರದ ಮದುವಿ ಮಾಡ್ಕೋತೇವಿ ಮನಿ ಒಪನಿಂಗ ಮಾಡ್ತೇವಿ ಹಂಗ.
ಇವತ್ತ ಇಂಗ್ಲೆಂಡ. ಅಮೇರಿಕಾ, ರಶ್ಯಿಯಾದಾಗೆಲ್ಲಾ ಪ್ರತಿ ಎರಡ-ಮೂರ ಮದುವಿಗೆ ಒಂದ ಡೈವರ್ಸ್ ಆಗ್ತಾವ. ಅಲ್ಲೆ ಈ ವಾರ, ಈ ತಿಂಗಳ ಪೂರ್ತಿ ಡೈವರ್ಸಗೆ ಮೀಸಲ ಇಟ್ಟಿರತಾರ. ಹಂಗ ವರ್ಷದ ಮೊದಲೇನ ತಿಂಗಳದಾಗ್ ಹೋದ ವರ್ಷದ ಹೆಂಡತಿನ್ನ ಬಿಟ್ಟ ಹೊಸಾ ವರ್ಷದಿಂದ ಹೊಸಾ ಅಕೌಂಟ್ ಒಪನ್ ಮಾಡೋದ ಅವರ ಪದ್ಧತಿ ಇರಬೇಕು. ಯಾ ಜನ್ಮದ ಪುಣ್ಯಾನೊ ಏನೋ ವರ್ಷಾ ಹೆಂಡತಿ ಬದಲಾಯಿಸ್ತಾರ. ಅಲ್ಲೇಲ್ಲಾ ಮದುವಿ ಇಷ್ಟ ಬ್ಯುಸಿನೆಸ್ ಅಲ್ಲಾ, ಡೈವರ್ಸನೂ ಬ್ಯುಸಿನೆಸ್ ಆಗಿ ಬಿಟ್ಟದ. ಈ ತಿಂಗಳದಾಗ ಅಲ್ಲೆ ಡೈವರ್ಸ ವಕೀಲರಿಗೆ ತಮ್ಮ ಡೈವರ್ಸ್ ಮಾಡ್ಕೋಳಿಕ್ಕು ಟೈಮ್ ಇರಂಗಿಲ್ಲಂತ, ಅಷ್ಟ ಗಿರಾಕಿ ಇರತಾವ ಏನ್ಮಾಡ್ತಿರಿ. ಅಲ್ಲಾ ಅಲ್ಲೇ ಮಂದಿ ಡೈವರ್ಸ ಆದರೂ ಪಾರ್ಟಿ,ಗಿಫ್ಟ ಕೊಟ್ಟ ಸೆಲೆಬ್ರೇಟ ಮಾಡ್ತಾರ. ಹಂಗ ಗಂಡಸರಿಗೆ ಅಂದರ ಗಂಡಂದರಿಗೆ ಡೈವರ್ಸ್ ಅಂದರ ಸ್ವತಂತ್ರ್ಯೋತ್ಸವ ಇದ್ದಂಗ ಬಿಡ್ರಿ ಸೆಲೆಬ್ರೇಟ್ ಮಾಡಬೇಕ.
ಆದ್ರ ನಮ್ಮ ದೇಶದಾಗ ಹಂಗೇಲ್ಲಾ ನಡೆಯಂಗಿಲ್ಲಾ, ಜೀವನದಾಗ ನಮಗ ಒಂದ ಅಕೌಂಟ, ಲೈಫ್ ಲಾಂಗ್ ಅದನ್ನ ಮೇಂಟೇನ್ ಮಾಡಬೇಕು. ಹಂಗ ಆ ಒಂದ ಅಕೌಂಟ ಮೆಂಟೇನ ಮಾಡೋದರಾಗ ನಮ್ಮ ಲಾಂಗ್ ಲೈಫ್ ಶಾರ್ಟ್ ಆಗಿರತದ.
ನಿಮಗ ಗೊತ್ತಿರಲಿ ಇವತ್ತ ನಮ್ಮ ದೇಶದಾಗ ನೂರ ಮದುವೆ ಆದರ ಒಂದ ಡೈವರ್ಸ್ ಆಗೋದ ತ್ರಾಸ ಅದ. ಅಷ್ಟ ನಾವು ಗಂಡಾ-ಹೆಂಡತಿ ಸಂಸಾರದಾಗ ಅನ್ನೋನ್ಯವಾಗಿ ಬಾಳಿ ಬದುಕಲಿಕತ್ತಿದ್ವಿ. ಬದುಕಲಿಕತ್ತಿದ್ವಿ ಯಾಕಂದರ ಇನ್ನ ಮುಂದ ಹಿಂಗ ಗಂಡಾ ಹೆಂಡತಿ ಜೀವನ ಪರ್ಯಂತ ‘ನಗು-ನಗುತಾ ನಲಿ, ಏನೇ ಆಗಲಿ’ ಅಂತ ಬದಕೋದ ಕಷ್ಟ ಅದ.
ನಾವ ಗಂಡಾ-ಹೆಂಡತಿ ಛಂದಾಗಿ ಸಂಸಾರ ಮಾಡ್ಕೋತ ಇದ್ದದ್ದ ಯಾರ ಕಣ್ಣಿಗೆ ಬಿತ್ತೋ ಏನೋ? ಮೊನ್ನೆ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ‘ಇನ್ನ ಮ್ಯಾಲೆ ಮನಿ ಕೆಲಸ ಮಾಡಿದ್ದಕ್ಕ ಹೆಂಡತಿಗೂ ಪಗಾರ ಕೊಡ್ಬೇಕು ಅಂತ ಕಾನೂನ ಮಾಡತೇವಿ’ ಅಂತ ಅಂದ ಬಿಟ್ಟರು. ಹೆಂಡತಿ ತನ್ನ ಸತಿ ಧರ್ಮ ಪಾಲನೆ ಮಾಡಿದರ ಅಕಿಗೆ ಪಗಾರ! ಕೇಳಿದರೇನ? ಅದು ನಮ್ಮ ದೇಶದಾಗ, ನಾಲ್ಕ ದೇಶಕ್ಕ ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಅವಿಭಕ್ತ ಕುಟಂಬ ಅಂದರ ಏನು ಅಂತ ಹೇಳಿ ಕೊಟ್ಟ ದೇಶದಾಗ ಹೆಂಡತಿಗೆ ಪಗಾರ ಅಂತ ಕಾನೂನ ಮಾಡ್ತಾರಂತ. ಯಾ ಹೆಂಡಂದರು ಗಂಡನ ದೇವರು ಅಂತ ಸಂಸಾರದ ಎಲ್ಲಾ ಭಾರ ಅವನ ಮ್ಯಾಲೆ ಹಾಕತಿದ್ದರೊ ಹಂತಾವರಿಗೆ ಪಗಾರ ಕೊಡ್ಬೇಕಂತ.
ನಂಗ ಇದನ್ನ ಕೇಳಿ ನಮ್ಮ ಸರ್ಕಾರಕ್ಕ ಯಾರೊ ಡೈವರ್ಸ ಟಾರ್ಗೇಟ್ ಕೊಟ್ಟಾರ ಅಂತ ಅನಸಲಿಕತ್ತ. ಅಲ್ಲಾ ಇನ್ನ ಗಂಡ ಹೆಂಡತಿ ನಡಕ ವ್ಯವಹಾರ ಶುರು ಆತಂದ್ರ ಸಂಸಾರ ಒಡೇಯೋದು ಗ್ಯಾರಂಟಿ. ಈ ಸಂಸಾರ ಅನ್ನೋ ಸಮಾಜದ ಬೇಸಿಕ್ ಯುನಿಟನ್ನ ಕಮರ್ಶಿಯಲ್ ಮಾಡಿದರ ಮುಂದ ಡೈವರ್ಸ್ ತನ್ನಿಂದ ತಾನ ಜಾಸ್ತಿ ಆಗೆ ಆಗ್ತಾವ. ನಂಗೇಲ್ಲರ ನಮ್ಮ ದೇಶದ ಮ್ಯಾಲೆ ಡೈವರ್ಸ್ ರೇಟ ಏರಸಬೇಕು ಅಂತ ಇಂಟರನ್ಯಾಶನಲ್ ಪ್ರೆಶರ್ ಇರಬೇಕ ಅನಸಲಿಕತ್ತ, ಇಲ್ಲದಿದ್ದರ ಹಿಂತಾ ಮನಿ ಹಾಳ ಕಾನೂನ ಯಾಕ ವಿಚಾರ ಮಾಡ್ತಾರ?
ಅಲ್ಲಾ ಇವತ್ತ ಗಂಡಾ ಹೆಂಡತಿಗೆ ಪಗಾರ ಕೊಡಬೇಕು ಅಂತಾರ, ನಾಳೆ ಅಕಿ ಬೋನಸ್, ಇನ್ಸೆಂಟೀವ, ಪಗಾರ ಹೈಕ್, ಒವರ್ ಟೈಮ್ ಅಂತ ಜಗಳಾ ಶುರು ಮಾಡೇ ಮಾಡ್ತಾಳ, ಕಡಿಕೆ ಗಂಡ ತಲಿ ಕೆಟ್ಟ ಹೆಂಡತಿಗೆ ‘ನೀ ಭಾಳ ತುಟ್ಟ್ಯಾದಿ, ನಾ ಬ್ಯಾರೆ ಹೆಂಡತಿ ನೋಡ್ಕೋತೇನಿ ತೊಗೊ’ ಅಂತ ಇದ್ದ ಹೆಂಡತಿಗೆ ಖೊ ಕೋಡ್ತಾನ, ಹಿಂಗಾಗಿ ಮುಂದ ನಮ್ಮ ದೇಶದಾಗ ಡೈವರ್ಸ್ ಜಾಸ್ತಿ ಆಗೆ ಆಗ್ತಾವ.
ಖರೆ ಹೇಳ್ತೇನಿ ಅಕಸ್ಮಾತ ನೀವೇನರ ನಮ್ಮ ದೇಶದಾಗ ಗಂಡಂದರ ವಿರುದ್ಧ ಇರೋ ಎಲ್ಲಾ ಕಾನೂನ ಕರೆಕ್ಟಾಗಿ ಓದಿಬಿಟ್ಟರ ಲಗ್ನನಾ ಮಾಡ್ಕೋಳಂಗಿಲ್ಲಾ. ಡೊಮೆಸ್ಟಿಕ್ ವೈಲನ್ಸ್ ಯಾಕ್ಟ್, ಹಿಂದೂ ಮ್ಯಾರೇಜ ಯಾಕ್ಟ, ಮೆಂಟೇನೆನ್ಸ್ ಯಾಕ್ಟ,IPC 498 A, ಸೆಕ್ಸೂವಲ್ ಹ್ಯಾರಸಮೆಂಟ್ ಯಾಕ್ಟ್ ಅಂತ ನೂರಾ ಎಂಟ ರೂಲ್ಸ್ ಸಂಸಾರದಾಗ ಹೊಕ್ಕಂಡ ನಮ್ಮ ಸಂಸಾರ ಹಳ್ಳಾ ಹಿಡಿಲಿಕತ್ತಾವ.
ಹಿಂಗ ಇರೊ ಒಂದ ಗಂಡಗ ಮಾನಿಟರ ಮಾಡಲಿಕ್ಕೆ ಇಷ್ಟ ರೂಲ್ಸ್ ಮಾಡಿದರ ಮುಗಿತಲಾ, ಮುಂದ ಒಂದೊಂದ ಮನಿ ಒಡಿಲಿಕತ್ವು. ಗಂಡಂದರ ಹಣೇಬರಹ ಹಿಂಗ ಆತಲಾ ಅಂವಾ ಹೆಂಡತಿಗೆ ಪ್ರೀತಿ ಮಾಡ್ಬೇಕಾರು ಹೆದರಲಿಕತ್ತಾ, ಎಲ್ಲೆ ಹೆಂಡತಿ ಅದನ್ನ ಡೊಮೆಸ್ಟಿಕ್ ವೈಲನ್ಸ್ ಅಂತ ಕಂಪ್ಲೇಂಟ್ ಕೊಡ್ತಾಳೊ ಅಂತ. ಇನ್ನ ಜಾಸ್ತಿ ಫೊರ್ಸ್ ಮಾಡ್ತೀಯಾ ಸೆಕ್ಸುವಲ್ ಹ್ಯಾರಾಸಮೆಂಟ್ ಕೇಸ ಹಾಕಿದರೂ ಹಾಕಬಹುದು. ಇವನ್ನೇಲ್ಲಾ ನೋಡಿ ಗಂಡಂದರಿಗೆ ಹುಚ್ಚ ಹಿಡದ ಹೋಗೇದ. ಹಿಂಗಾಗೇ ಮತ್ತ ನಮ್ಮ ದೇಶದಾಗ ಹತ್ತ ನಿಮಿಷಕ್ಕ ಒಬ್ಬ ಗಂಡ ಆತ್ಮಹತ್ಯೆ ಮಾಡ್ಕೊಂಡ ಸಾಯೋದ.
ಇನ್ನ ಈ ‘ಹೆಂಡ್ತಿಗೆ ಪಗಾರ’ ಕಾನೂನ ಒಂದ ಬಂದರ ಮತ್ತ ಎಷ್ಟ ಮಂದಿ ಗಂಡಂದರ ಆತ್ಮಹತ್ಯೆ ಮಾಡ್ಕೊತಾರೊ ಇಲ್ಲಾ ಅರ್ಧಾ ಆಸ್ತಿ ಕೊಟ್ಟ ಇದ್ದ ಹೆಂಡತಿಗೆ ಡೈವರ್ಸ್ ಕೊಡ್ತಾರೊ ಆ ದೇವರಿಗೆ ಗೊತ್ತ. ಹಿಂಗ ಗಂಡಂದರ ವಿರುದ್ಧ ಕಾನೂನ ಬರಲಿಕತ್ತರ ಮುಂದ ‘ಮ್ಯಾರಿ ಲೆಸ್-ಡೈವರ್ಸ್ ಮೋರ್’ ಆಗೋದ ಗ್ಯಾರಂಟಿ ಅಂತ ನನಗ ಅನಸ್ತದ.
ದೇವರ, ಗಂಡಂದರಿಗೆ ಹಿಂತಾ ಕಾನೂನ ಎದರಸಲಿಕ್ಕೆ ಧೈರ್ಯಾನರ ಕೊಡ ಇಲ್ಲಾ ಅವರ ಆತ್ಮಕ್ಕ ಶಾಂತಿ ಕೊಟ್ಟ ಬಿಡಪಾ.