ನಾವ B.Sc ಕಲಿಬೇಕಾರ ನಮ್ಮ ಜೊತಿ ಒಬ್ಬ ಮಾರವಾಡಿ ದೋಸ್ತ ಇದ್ದಾ. ಹಂಗ ಆವಾಗ ಮಾರವಾಡಿ ಮಂದಿ ಸೈನ್ಸ ಕಲಿಯೋದ ಭಾಳ ಕಡಿಮಿ ಇತ್ತ. ಮಾರವಾಡಿ ಮಂದಿ ಟ್ರೇಡಿಂಗ ಮಾಡೊದ ಜಾಸ್ತಿ ಹಿಂಗಾಗಿ ಅವರೇಲ್ಲಾ ಕಾಮರ್ಸ ತೊಗೊಂಡ ಪಿ.ಯು.ಸಿ ಪಾಸ್ ಆದರ ಡಿಗ್ರಿ ಮಾಡೋರು ಪಾಸ ಆಗದಿದ್ದರ ಸೀದಾ ತಮ್ಮ ತಮ್ಮ ಅಂಗಡಿಗೆ ಹೋಗಿ ಧಂಧೆ ನೋಡ್ಕೊಳೊರು. ಆದರ ನಮ್ಮ ಮಾರವಾಡಿದ ಫ್ಯಾಕ್ಟರಿ ಇತ್ತ ಹಿಂಗಾಗಿ ಅಂವಾ ಸೈನ್ಸ ತೊಗೊಂಡಿದ್ದಾ. ನಮಗೆಲ್ಲಾ ಒಬ್ಬ ಮಾರವಾಡಿ ದೋಸ್ತ ಸಿಕ್ಕದ್ದ ಅದ ಮೊದಲೆನ ಸಲಾ.
ನಮ್ಮ ತಲ್ಯಾಗ ಮಾರವಾಡಿ ಅಂದರ ಒಂಥರಾ ಫಾರೆನರ್ ಇದ್ದಂಗ, ಅವರೇಲ್ಲಾ ’ಕಂಜೂಸ ಮಾರವಾಡಿ’ನ ಇರ್ತಾರ, ಅವರ ಇಲ್ಲೆ ದುಡದದ್ದನ್ನ ವರ್ಷಕ್ಕ ಎರಡ ಸಲಾ ಮಾರವಾಡಕ್ಕ ( ರಾಜಸ್ಥಾನ) ಹೋಗಿ ಅಲ್ಲೆ ಮುಚ್ಚಿ ಇಟ್ಟ ಬರತಾರ ಅಂತ ಇತ್ತ. ಆದರ ನಮಗ ನಮ್ಮ ಮಾರವಾಡಿ ದೋಸ್ತ ಕ್ಲೋಸ್ ಆದಂಗ ಆದಂಗ ನಮ್ಮ ತಲ್ಯಾಗ ಇದ್ದ ಮಾರವಾಡಿ ಕನ್ಸೆಪ್ಟ ಚೇಂಜ್ ಆಗಲಿಕತ್ತ. ನಮ್ಮ ಮಾರವಾಡಿ ಏನ ಕಂಜೂಸ ಇದ್ದಿದ್ದಿಲ್ಲಾ ಆದರ ಬೇಕಾ ಬಿಟ್ಟಿ ನಮ್ಮಗತೆ ಖರ್ಚ ಮಾಡತಿದ್ದಿಲ್ಲಾ ಇಷ್ಟ.
ಇನ್ನೊಂದ ಮಜಾ ಅಂದರ ಈ ಮಾರವಾಡಿ ಮಂದಿ ಒಳಗ ಗಂಡ ಹುಡುಗರಿಗೂ ೧೯-೨೦ ತುಂಬೊ ಪುರಸತ್ತ ಇಲ್ಲದ ಮದುವಿ ಮಾಡೊ ಪದ್ದತಿ ಇತ್ತ. ಒಮ್ಮೆ ಇಪ್ಪತ್ತ ವರ್ಷಕ್ಕ ಲಗ್ನ ಆತಂದರ ಆ ಹುಡುಗ ವರ್ಷ ತುಂಬೊದರಾಗ ಒಂದ, ಮುಂದ ಮೂರ ವರ್ಷದಾಗ ಮಿನಿಮಮ್ ಎರಡ ಹಡದ ಒಟ್ಟ ಇಪ್ಪತ್ತೈದ ತುಂಬೊದರಾಗ ಮೂರ ಹಡದ ಬಿಡತಿದ್ದಾ. ಮುಂದ ಅಂವಾ ಮನಿ ಕಡೆ ಹೆಂಡತಿ ಕಡೆ ಹಣಕಿ ಹಾಕೋದ ಬ್ಯಾಡ, ಹೆಂಡ್ತಿಗೆ ಮಕ್ಕಳನ್ನ ನೋಡ್ಕೋಳಿಕ್ಕೆ ಹಚ್ಚಿ ತಾ ಧಂಧೆಕ್ಕ ನಿಂತನಂದರ ಉಳದಿದ್ದ ಜೀವನ ಪೂರ್ತಿ ದುಡಿಯೋದು ಗಳಸೋದು. ಹಿಂಗಾಗೆ ಅವರ ಜನರೇಶನ್ ಟು ಜನರೇಶನ್ ಶ್ರೀಮಂತರಾಗಕೋತ ಹೋಗ್ತಾರ.
ನಂಗೂ ಅವರ ಲಾಜಿಕ್ ಕರೆಕ್ಟ ಅನಸ್ತಿತ್ತ. ನನ್ನ ಪ್ರಕಾರ ಎಲ್ಲಾ ಹುಡುಗರಿಗೆ, ಅವರ ಮಾರವಾಡಿನ ಇರಲಿ ಧಾರವಾಡಿನರ ಇರಲಿ ವಯಸ್ಸಿಗೆ ಬಂದ ಮ್ಯಾಲೆ ತಲ್ಯಾಗ ಒಂದ ಕಡೆ ಹುಡಗ್ಯಾರ ಬಗ್ಗೆ ಸಣ್ಣಾಗಿ ಕೊರಿತಿರತದ, ಹುಚ್ಚುಚಾಕರ ಫ್ಯಾಂಟಸಿ ಇರ್ತಾವ ಹಂತಾದರಾಗ ತಲಿಗೆ ವಿದ್ಯಾನೂ ಹತ್ತಂಗಿಲ್ಲಾ, ಧಂಧೆ ಮಾಡೋರಿಗೆ ಅದರ ಕಡೆ ಲಕ್ಷನೂ ಇರಂಗಿಲ್ಲಾ. ಎಲ್ಲಾ ಹುಡುಗರು ಹುಡಗ್ಯಾರ ಗುಂಗಿನಾಗ ಇರ್ತಾರ, ಅವರ ಬಗ್ಗೆ ಕ್ಯುರಿಯಾಸಿಟಿ ಭಾಳ ಇರ್ತದ. ಹಿಂಗಾಗೆ ಮಾರವಾಡಿ ಮಂದಿ ಹುಡುಗ ವಯಸ್ಸಿಗೆ ಬಂದ ಹುಡಗ್ಯಾರದ ಕನಸ ಕಾಣಲಿಕತ್ತಾನ ಅನ್ನೋದ ತಡಾ ಅವಂಗ ಒಂದ ಹುಡುಗಿ ಗಂಟ ಹಾಕಿ ಅವನ ಕನಸ ನನಸ ಮಾಡೇ ಬಿಡ್ತಾರ. ಆ ಹುಡುಗರು ಮದುವಿ ಆಗೊ ಪುರಸತ್ತ ಇಲ್ಲದ ಒಂದ ಮೂರ ಹಡದ ಎಲ್ಲಾ ನಶಾ ಇಳಿಸಿಗೊಂಡ ಬಿಡ್ತಾರ. ಮುಂದ ಅವರಿಗೆ ಜೀವನದಾಗ ಎದರ ಬಗ್ಗೆನೂ ಕ್ಯುರಿಯಾಸಿಟಿ ಉಳಿಯಂಗಿಲ್ಲಾ. ಅಲ್ಲಾ ಹಂಗ ಮದುವಿ ಆಗಿ ಒಂದ ಎರಡ ವರ್ಷದಾಗ ಮಾರವಾಡಿಗೆ ಇಷ್ಟ ಏನ ಎಲ್ಲಾರಿಗೂ ಅದ ಹಣೇಬರಹ. ಜೀವನದಾಗ ಎದರ ಬಗ್ಗೇನೂ ಕ್ಯುರಿಯಾಸಿಟಿ ಉಳಿಯೋದ ದೂರ ಉಳಿತು ಕೆಲವೊಮ್ಮೆ ಅಂತೂ ಎಲ್ಲಾದರ ಬಗ್ಗೆ ಜಿಗೂಪ್ಸೆ ಬರಲಿಕ್ಕೆ ಹತ್ತಿ ಬಿಡತದ. ಹಿಂಗ ಒಮ್ಮೆ ಮಾರವಾಡಿಗೊಳಿಗೆ ಹೆಂಡತಿ ಕ್ಯುರಿಯಾಸಿಟಿ ಮುಗದ ಮ್ಯಾಲೆ ಮುಂದ ಅವರ ತಲ್ಯಾಗ ಧಂಧೆ ಮಾಡಬೇಕು, ರೊಕ್ಕಾ ಗಳಸಬೇಕ ಅನ್ನೋದ ಒಂದs ಉಳಿತದ ಹಿಂಗಾಗೆ ಅವರ ಹಗಲು ರಾತ್ರಿ ಕೂಡಿ ಗಳಸಲಿಕ್ಕೆ ನಿಲ್ಲತಾರ.
ಇನ್ನ ನಮ್ಮ ಮಂದ್ಯಾಗಂತು ನಾವ ಯಾವಾಗ ಒಂದ ಕಾಲೇಜ ಟೈಮನಾಗ ಕನಸ ಕಾಣಲಿಕತ್ತೋರಿಗೆ ಮುಂದ ಛಲೋ ನೌಕರಿ ಸಿಕ್ಕ ಛಲೋ ಕನ್ಯಾ ಸಿಗೋದರಾಗ ಮುವತ್ತ ದಾಟಿ ಮುವತ್ತಮೂರಕ್ಕ ಬಿದ್ದ ಬಿಟ್ಟಿರತಾವ. ಅಷ್ಟರಾಗ ಆ ಸುಡಗಾಡ ಜವಾನಿ ಒಳಗಿನ ಕನಸ ಕಮರಿ ಹೋಗಿ ’ಬಾಡಿ ಹೋದ ಬಳ್ಳಿಯಿಂದ ಹೂ ಅರಳ ಬಲ್ಲದೇ’ ಅನ್ನೋ ಹಂಗ ಆಗಿರತದ. ಮುಂದ ಎರಡ ಹಡೆಯೊದರಾಗ ’ಮಸಣದ ಹೂ’ ಆಗಿರ್ತೇವಿ.
ಇರಲಿ, ಇನ್ನ ನಮ್ಮ ಮಾರವಾಡಿ ಬಗ್ಗೆ ಹೇಳಬೇಕಂದರ ಹಂಗ ಅವಂದು ೧೯-೨೦ ವಯಸ್ಸಿಗೆ ಲಗ್ನ ಆಗಬೇಕಾಗಿತ್ತ ಆದರ ಅವನ ದುರ್ದೈವಕ್ಕ ಇಂವಾ B.Sc ಸೆಕೆಂಡ ಕ್ಲಾಸನಾಗ ಪಾಸ ಆಗಿ ಬಿಟ್ಟಾ. ಇನ್ನ B.Sc ಪಾಸ ಆಗೇನಿ ಅನ್ನೊ ಸಂಕಟಕ್ಕ ಮತ್ತ ಮುಂದ ರೊಕ್ಕಾ ಕೊಟ್ಟ MBA ಮಾಡಿದಾ. ಹಿಂಗಾಗಿ ಅವನ ಲಗ್ನ ಫಿಕ್ಸ್ ಆಗೋದರಾಗ ಅವಂಗ ೨೫-೨೬ ಆಗಿ ಬಿಟ್ಟಿತ್ತ. ಅಷ್ಟರಾಗ ಮಾರವಾಡಿ ಮಂದಿ ಒಳಗ ಅವಂದ ಇನ್ನು ಲಗ್ನ ಆಗಿಲ್ಲಾಂದ್ರ ಅವಂದ ಏನರ ಪ್ರಾಬ್ಲೇಮ್ ಇರಬಹುದು ಅಂತ ಮಾತಾಡೊ ಹಂಗ ಆಗಲಿಕತ್ತಿತ್ತ. ಅವನ ಮದುವಿ ಮಾರವಾಡಿ ಮಂದಿ ಪ್ರಕಾರ ಎಷ್ಟ ಲೇಟ ಆತ ಅಂದರ ಹೋದ ವಾರ ಅವನ ವಾರ್ಗಿ ಒಬ್ಬ ಮಾರವಾಡಿ ಹುಡಗನ ಮಗಳದ ನಿಶ್ಚಯ ಆತ. ಇವನ ಮಗಳು ಇನ್ನು ಎಂಟನೇತ್ತಾ ಇದ್ದಾಳ. ಏನ್ಮಾಡ್ತೀರಿ? ಇದರ ಮ್ಯಾಲೆ ಲೆಕ್ಕಾ ಹಾಕರಿ ನೀವು ಮಾರವಾಡಿ ಒಳಗ ಎಷ್ಟ ಲಗೂನ ಮದುವಿ ಮಾಡ್ತಾರ ಅಂತ.
ನಂಗಂತೂ ಆವಾಗ ನಾನೂ ಮಾರವಾಡಿ ಆಗಿ ಹುಟ್ಟಬೇಕಿತ್ತು ಅಂತ ದಿವಸಕ್ಕ ಒಂದ ಹತ್ತ ಸರತೆ ಅನಸತಿತ್ತ. ಅಲ್ಲಾ ೧೯-೨೦ ವರ್ಷಕ್ಕ ಲಗ್ನಾ ಮಾಡ್ತಾರ ಮುಂದ ೨೧ ವರ್ಷಕ್ಕ ಹಡಿತೇವಿ ಅಂದರ ಅನಸಲಾರದ ಏನ ಅಂತೇನಿ.
ಕಡಿಕೂ ನಮ್ಮ ಮಾರವಾಡಿ ದೋಸ್ತಂದ ಮದುವಿ ಫಿಕ್ಸ್ ಆತ. ಅವರ ಮಂದಿ ಒಳಗ ಖಾಸ ದೋಸ್ತರನ ತಾವs ಟಿಕೇಟ ತಗಿಸಿ ಮದುವಿಗೆ ರಾಜಸ್ಥಾನಕ್ಕ ಕರಕೊಂಡ ಹೋಗೊ ಪದ್ಧತಿ. ಇದ ನಮ್ಮ ಧಾರವಾಡಿ ಫ್ರೇಂಡ್ಸಗೇಲ್ಲಾ ಗೊತ್ತಿತ್ತ. ಹಿಂಗಾಗಿ ಕಾಲೇಜ ಮುಗಿಸಿ ಐದ ವರ್ಷ ಆಗಿದ್ದರು ಅವಂದ ಮದುವಿ ಫಿಕ್ಸ್ ಆತ ಅನ್ನೋದ ತಡಾ ಒಂದಿಷ್ಟ ಮಂದಿ ಅವನ ಜೊತಿ ಮತ್ತ ದೋಸ್ತಿ ಶುರು ಮಾಡಿದರು. ಕಾಲೇಜಿನಾಗ ಕ್ಲೋಸ ಇರಲಾರದವರು ಅವನ ಮದುವಿ ಹತ್ತರ ಬಂದಂಗ ಅವಂಗ ಕ್ಲೋಸ ಆಗಲಿಕತ್ತರು. ಅದ ಹಿಂಗ ಆಗಿ ಬಿಡ್ತಲಾ ಅವಂಗ ಮದುವಿಗೆ ಯಾರನ ಕರಕೊಂಡ ಹೋಗಬೇಕು ಯಾರನ ಬಿಡಬೇಕು ಅನ್ನೋದ ಒಂದ ದೊಡ್ಡ ಸಂಕಟ ಆತ. ಅದರಾಗ ಅವರ ಮನ್ಯಾಗ ’ಒಂದಿಬ್ಬರನs ಇಷ್ಟ ಕರಕೊಂಡ ಬಾ ಹೂಯ್ಯಿ ಅಂತ ಈ ಕಡೆ ಮಂದಿ ಬ್ಯಾಡ’ ಅಂತ ಬ್ಯಾರೆ ಹೇಳಿದ್ದರು.
ಪಾಪ ಅಂವಾ ಕಡಿಕೆ ಭಾಳ ತಲಿಕೆಡಸಿಕೊಂಡ ನನ್ನ ಜೊತಿ ಕನ್ಸಲ್ಟ ಮಾಡಿ ಒಂದ ಏಳ ಸೆಕೆಂಡ್ ಕ್ಲಾಸ್ ಟಿಕೇಟ ತನ್ನ ರೊಕ್ಕದಲೇ ಒನ್ ವೇ ತಗಸಿದಾ. ಅವರಲ್ಲೇ ಒನ್ ವೇ ಇಷ್ಟ ಕರಕೊಂಡ ಹೋಗೊ ಪದ್ದತಿ. ವಾಪಸ ಬರಬೇಕಾರ ನಾವ ನಮ್ಮ ರೊಕ್ಕದಲೇ ಬರಬೇಕ. ಹಂಗ ಇನ್ನ ಉಳದವರ ಯಾರರ ಬರೋರಿದ್ದರ ನೀವ ನಿಮ್ಮ ರೊಕ್ಕದಲೇ ಬರ್ರಿ ಅಂತ ನನ್ನ ಕಡೆ ಉಳದ ದೋಸ್ತರಿಗೆ ಹೇಳಸಿಸಿದಾ. ಕಡಿಕೆ ಒಂದ ನಾಲ್ಕ ಮಂದಿ ದೋಸ್ತರ ಪಾಪ ನಾವೇಲ್ಲಾ ಹೊಂಟೇವಿ ಅನ್ನೋ ಸಂಕಟಕ್ಕ ತಮ್ಮ ರೊಕ್ಕದಲೇ ಬರಲಿಕ್ಕೆ ರೆಡಿ ಆದರು. ಅದರಾಗ ದೋಸ್ತರನ ಕರಕೊಂಡ ಹೋಗೊ ಜವಾಬ್ದಾರಿ ನಂಗ ಕೊಟ್ಟಿದ್ದರು. ಹಿಂಗಾಗಿ ಎಲ್ಲಾ ದೋಸ್ತರು
“ಲೇ, ಆಡ್ಯಾ ಮಾರವಾಡಿಗೆ ಹೇಳಿ ನಂದೊಂದ ಟಿಕೇಟ ಮಾಡಸಲೇ” ಅಂತ ನಂಗ ಮಸ್ಕಾ ಹೊಡಿತಿದ್ದರು. ನಾ ಅಂತೂ ಅಡ್ಕೋತನಾಗ ಸಿಕ್ಕ ಅಡಿಕೆ ಆದಂಗ ಆಗಿ ಬಿಟ್ಟಿದ್ದೆ. ಯಾಕಂದರ ಎಲ್ಲಾರಿಗೂ ಗೊತ್ತಿತ್ತ, ಲಾಸ್ಟಿಗೆ ಆಡ್ಯಾ ಹೇಳಿದ್ದ ಮಾರವಾಡಿ ಫೈನಲ್ ಮಾಡ್ತಾನ ಅಂತ. ಕೆಲವೊಬ್ಬರಂತು ಅಂವಾ ಬರೇ ಏಳ ಟಿಕೇಟ ತಗಸ್ತೇನಿ ಅಂದಾಗ ಇದ ಆಡ್ಯಾಂದ ಕಿಡ್ಡಿ ಅಂತ ನನ್ನ ಮ್ಯಾಲೆ ಸಿಟ್ಟ ಆದರು. ಒಟ್ಟ ಕಡಿಕೆ ಎಲ್ಲಾ ಸೇರಿ ಹನ್ನೊಂದ ಮಂದಿ ರಾಜಸ್ಥಾನಕ್ಕ ಹೋಗಲಿಕ್ಕೆ ರೆಡಿ ಆದವಿ. ಅದರಾಗ ನಮ್ಮ ಮೂರ ಮಂದಿ ದೋಸ್ತರ ವಿಥ್ ಬರೋರಿದ್ದರು. ಇಬ್ಬರದಂತು ಒಂದ ಎರಡ ತಿಂಗಳ ಹಿಂದ ಮದುವಿ ಆಗಿತ್ತ ಹಿಂಗಾಗಿ ಅವರ ಮಾರವಾಡಿ ರೊಕ್ಕದಾಗ ಹನಿಮೂನ ಮಾಡಲಿಕ್ಕೆ ಬರಲಿಕತ್ತಿದ್ದರು.
ಅವರೇನೊ ನನಗ ’ನಾವ ಹೆಂಗಿದ್ದರೂ ಹನೀಮೂನಗೆ ಬರಲಿಕತ್ತೇವಿ ಮಾರವಾಡಿ ತಗಿಸಿದ್ದ ಸಿಂಗಲ್ ಬರ್ಥ ಟಿಕೇಟ ಒಳಗ ಗಂಡಾ ಹೆಂಡತಿ ಅಡ್ಜಸ್ಟ ಮಾಡ್ಕೊಂಡ ಬರತೇವಿ ತೊಗೊ’ಅಂತ ಅಂದರ ಖರೇ ಆದರ ಅದ ಉಳದವರಿಗೆ ಸರಿ ಕಾಣಂಗಿಲ್ಲಾ ಮ್ಯಾಲೆ ಇಂಡಿಯನ್ ರೇಲ್ವೇಸ ನವರ ಅದನ್ನ ಒಪ್ಪಂಗಿಲ್ಲಾ ಅಂತ ಅವರ ಹೆಂಡಂದರದ ಸಪರೇಟ ಟಿಕೇಟ ತಗಿಸಿಸಿದ್ವಿ. ಇನ್ನ ಉಳದ ಐದ ಮಂದಿ ನಾವ ಬ್ಯಾಚಲರ್ ಇದ್ದವಿ. ಒಟ್ಟ ಎಲ್ಲಾರೂ ಸೇರಿ ಯಾರದೊ ರೊಕ್ಕಾ ಯಲ್ಲಮ್ಮನ ಜಾತ್ರಿ ಅಂತಾರಲಾ ಹಂಗ ರಾಜಸ್ಥಾನಕ್ಕ ಹೊಂಟವಿ.
ನಾವೇಲ್ಲಾ ರಾಜಸ್ಥಾನ ಮುಟ್ಟೋತನಕ ನಂಬದೇಲ್ಲಾ ಖರ್ಚ ಮಾರವಾಡಿನ ನೋಡ್ಕೋಬೇಕಂತ, ಹಿಂಗಾಗಿ ನನ್ನ ಕೈಯಾಗ ಖರ್ಚಿಗೆ ನಮ್ಮ ದೋಸ್ತ ಒಂದ ಮೂರ ಸಾವಿರ ರೂಪಾಯಿ ಕೊಟ್ಟ ಎಲ್ಲಾರನೂ ಕರಕೊಂಡ ಬಾ ಅಂತ ಹೇಳಿದ್ದಾ. ಅಲ್ಲಾ, ಆವಾಗ ಕಾಲ ಸೋವಿ ಇತ್ತ, ಮ್ಯಾಲೆ ನಮಗ್ಯಾರಿಗೂ ಇವಾಗಿನ ಹಂಗ ಯಾವದು ದೊಡ್ಡ ಚಟಾ ಇರಲಿಲ್ಲಾ, ಅದರಾಗ ನಾವ ಎರಡ ದಿವಸ ಗಟ್ಟಲೇ ಟ್ರೇನದಾಗ ಹೋಗೊರು ಹಿಂಗಾಗಿ ಮೂರ ಸಾವಿರ ರೂಪಾಯಿ ರಗಡ ಆಗತಿತ್ತ. ಹಿಂಗ ನನ್ನ ಕೈಯಾಗ ಖರ್ಚಿಗೆ ರೊಕ್ಕಾ ಕೊಟ್ಟಾರ ಅನ್ನೋದು ಎಲ್ಲಾ ದೋಸ್ತರಿಗೂ ಗೊತ್ತಿತ್ತ.
ನಾವು ಹುಬ್ಬಳ್ಳಿಯಿಂದ ಮುಂಬಯಿ ಅಲ್ಲಿಂದ ಫಾಲ್ನಾಕ್ಕ ಹೋಗಿ ಮುಂದ ಜೀಪ ತೊಗಂಡ ರೇವತಡಾಕ್ಕ ( ಜಿಲ್ಲಾ, ಜಾಲೋರ) ಹೋಗಬೇಕಿತ್ತ.
ನಾವ ಇಲ್ಲಿಂದ ಮಧ್ಯಾಹ್ನ ಟ್ರೇನ ಹತ್ತಿದ್ವಿ. ಇನ್ನು ಟ್ರೇನ ಉಣಕಲ್ ದಾಟಿದ್ದಿಲ್ಲಾ ಶೆಂಗಾ ಕಡ್ಲಿ ಮಾರೋರು, ಮಾಸಾಲಿ ಮಂಡಕ್ಕಿ ಮಾರೋರು ಗಾಡ್ಯಾಗ ಬಂದರು.
“ಲೇ, ಎಲ್ಲಾರಿಗೂ ಶೆಂಗಾ ಕೊಡಸ ಮಗನ” ಅಂತ ಒಬ್ಬಂವಾ ಅಂದಾ ಇನ್ನೊಬ್ಬಂವಾ
“ಏ, ಮಸಾಲಿ ಮಂಡಕ್ಕಿ ತೊಗೊ” ಅಂದಾ.
ನಂಗ ಧರ್ಮ ಸಂಕಟ ಶುರು ಆತ, ಅಲ್ಲಾ ಹಂಗ ನಮ್ಮ ಮಾರವಾಡಿ ಖರ್ಚಿಗೆ ರೊಕ್ಕಾ ಕೊಟ್ಟಿದ್ದಾ ಖರೆ ಆದರ ಹಂಗಂತ ಟ್ರೇನನಾಗ ಬಂದದ್ದ ಎಲ್ಲಾ ನಮ್ಮ ದೋಸ್ತರ ಕೊಡಸಂದರ ಹೆಂಗ ಅಂತ ಅನಸಲಿಕತ್ತ.
ನಮ್ಮ ದೋಸ್ತರ ಮಾತ್ರ
“ಕೊಡಸ ಮಗನ, ಮಾರವಾಡಿ ರೊಕ್ಕ ನಿಂದೇನ ಗಂಟ ಹೋತ” ಅಂತ ಗಂಟ ಬಿದ್ದರು.
ಮುಂದ ಧಾರವಾಡದಾಗ ಒಂದ ಕೆ.ಜಿ ಧಾರವಾಡ ಪೇಡೆ ತೊಗೊಂಡ್ರು, ಬೆಳಗಾಂವನಾಗ ಕುಂದಾ ತೊಗೊಂಡ್ರು, ಗೋಕಾಕ ರೋಡನಾಗ ಕರದಂಟ ತೊಗೊಂಡ್ರು. ನಾ ಎಲ್ಲಾ ಕೊಡಸಿಗೋತ, ಲೆಕ್ಕಾ ಇಟಗೋತ ಹೊಂಟೆ.
ಮುಂದ ಮಿರಜನಾಗ ವಡಾ ಪಾವ್, ಆಮ್ಲೇಟ ಹೊಡದರು. ನಂಗರ ಯಾವಾಗ ರಾತ್ರಿ ಆಗಿ ಉಟಾ ಮಾಡಿ ಮಲ್ಕೋತಾರೊ ಅನಸಲಿಕತ್ತ. ಕಡಿಕೆ ರಾತ್ರಿ ಮತ್ತ ಎಲ್ಲಾರಿಗೂ ಪಲಾವ, ಕರ್ಡ ರೈಸ ತಿನಿಸಿಸಿ ಬಿಸ್ಲೇರಿ ಬಾಟಲಿಲೇ ನೀರ ಬಿಟ್ಟ ಮಲಗಿಸಿಸಿದೆ.
ಅಲ್ಲಾ, ಪಾಪ ನಮ್ಮ ಮಾರವಾಡಿ ಮಂದಿನs ಮದುವಿಗೆ ಹೋಗಬೇಕಾರ ಮೂರ ಡಬ್ಬಿ ಖಾಖರಾ, ಡ್ರೈ ಪುರಿ ಮಾಡ್ಕೊಂಡ ಹೋಗ್ತಾರ, ಅವರ ಟ್ರೇನನಾಗ ಚಹಾ ಒಂದ ಬಿಟ್ಟ ಬ್ಯಾರೆ ಏನು ದುಡ್ಡ ಕೊಟ್ಟ ಖರೀದಿ ಮಾಡಂಗಿಲ್ಲಾ. ಇಲ್ಲೆ ನೋಡಿದರ ನಮ್ಮ ದೋಸ್ತರ ಅವರ ರೊಕ್ಕದಾಗ ಕಂಡದ್ದೇಲ್ಲಾ ಮುಂಡದ್ದೆವ್ವಾ ಅನ್ನೋಹಂಗ ತಿನ್ಕೋತ ಹೊಂಟರ ಹೆಂಗ ಅನಸಲಿಕತ್ತ? ನನಗಂತೂ ಎಲ್ಲೆರ ನಾ ಜಾಸ್ತಿ ಖರ್ಚ ಮಾಡಬೇಕು ಆಮ್ಯಾಲೆ ಅವರ ನನಗ ಲೆಕ್ಕಾ ಕೇಳಿ ಎದಿ ಒಡ್ಕೋ ಬಾರದು ಅಂತ ಸಂಕಟ ಆಗಲಿಕತ್ತಿತ್ತ. ನಮ್ಮ ರೊಕ್ಕ ನಾವ ಖರ್ಚ ಮಾಡಲಿಕತ್ತಿದ್ದರ ಅಷ್ಟ ಟೆನ್ಶನ್ ಇರಂಗಿಲ್ಲಾ ಆದರ ಮಂದಿ ರೊಕ್ಕಾ ಹಂಗ ಸರಿ ಅನಸಂಗಿಲ್ಲಲಾ.
ಮುಂಜಾನೆ ಬಾಂಬೆ ಮುಟ್ಟಿದ್ವಿ, ಒಂದಿಬ್ಬರಂತು ಕಾಲ್ಗೇಟ ಪೇಸ್ಟ, ಡೇಟಾಲ್ ಸೋಪ, ತಲಿಗೆ ಹಚಗೊಳ್ಳಿಕ್ಕೆ ಪ್ಯಾರಾಚುಟ್ ಪಾಕಿಟಗೆ ಸಹಿತ ನನ್ನ ಕಡೇನ ರೊಕ್ಕಾ ಇಸ್ಗೊಂಡ ರೆಸ್ಟ ರೂಮಿಗೆ ಹೋಗಿ ಫ್ರೆಶ್ ಆಗಿ ಬಂದರು. ನಾ ಏನರ ಹಿಂಗ್ಯಾಕರಲೇ ಅಂದರ
“ಮಾರವಡಿ ರೊಕ್ಕ ಮಗನ, ನೀ ಯಾಕ ತಲಿಕೆಡಿಸ್ಗೋತಿ” ಅಂತ ಒಬ್ಬಂವ ಅಂದರ ಒಂದಿಬ್ಬರು
“ಲೇ, ಈ ಮಾರವಾಡಿಗಳ ನಮ್ಮ ಧಾರವಾಡಿ ಮಂದಿ ರೊಕ್ಕ ಹೊಡಕೊಂಡ ಇಷ್ಟ ಗಳಸಿರತಾರ ಮಗನ, ನೀ ಸುಮ್ಮನಿರ” ಅಂತ ನಂಗ ಜೋರ ಮಾಡೋರು.
ಮುಂದ ನಂಬದ ಮುಂಬೈದಾಗ ಮಧ್ಯಾಹ್ನ ರಣಕಪುರ ಎಕ್ಸಪ್ರೇಸ್ಸಿಗೆ ಫಾಲ್ನಾ ಟಿಕೇಟ ಬುಕ್ಕ ಆಗಿತ್ತ. ಹೆಂಗಿದ್ದರು ಐದ ತಾಸ ಟೈಮ ಅದ ಬಾಂಬೆ ನೋಡೊಣು ಅಂತ ಒಂದಿಷ್ಟ ಮಂದಿ ಗಂಟ ಬಿದ್ದರು. ಅದು ಮಾರವಾಡಿ ರೊಕ್ಕದಾಗನ ಮತ್ತ. ಕಡಿಕೆ ಲಗೇಜ ರೂಮಿನಾಗ ಸಾಮನ ಇಟ್ಟ ’ಝು’ ಬೀಚ ನೋಡಿದರಾತ ಅಂತ ಹೊಂಟ್ವಿ. ನಾಷ್ಟಾಕ್ಕ ನಮ್ಮ ಊರಕಡೆ ಹೋಟೆಲ ಸೋವಿ ಇರತದ ಅಂತ ನಾ ಉಡಪಿ ಹೋಟೆಲಗೆ ಕರಕೊಂಡ ಹೋಗಿ ಬರೇ ಇಡ್ಲಿ, ದೋಸಿ ತಿನಸಿದರ ೯೦೦ ರೂಪಾಯಿ ಬಿಲ್ ಆತ. ನಂಗ ಎದಿ ಧಸಕ್ಕ ಅಂತ. ಆವಾಗ ಹುಬ್ಬಳ್ಳಿ ಕಾಮತ ಹೊಟೇಲನಾಗ ೮ ರೂಪಾಯಿಕ್ಕ ಒಂದ ಮಸಾಲಿ ದೋಸಿ ಇದ್ದರ ಅಲ್ಲೇ ೩೦ ರೂಪಾಯಕ್ಕ ಒಂದ ದೋಸಿ, ಅದು ಸಣ್ಣ-ಸಣ್ಣವ, ನಮ್ಮ ದೋಸ್ತರ ದೋಸಿ ಕಂಡೆನೋ ಇಲ್ಲೊ ಅನ್ನೊರಂಗ ಎರಡೆರಡ ದೋಸಿ ಹೊಡದರು.
ನಂಗ ಅಂತು ಯಾವಾಗ ರಾಜಸ್ಥಾನ ಬರತದ ಅನ್ನೊ ಹಂಗ ಆಗಿ ಹೋಗಿತ್ತ.
ಮಧ್ಯಾಹ್ನ ಟ್ರೇನ ಹತ್ತಿ ರಾಜಸ್ಥಾನಕ್ಕ ಹೊಂಟವಿ. ಮುಂದ ಗುಜರಾತ ಬರೋ ಪುರಸತ್ತ ಇಲ್ಲದ ಆಲು ಬೊಂಡಾ, ಮಟಕಿ ಚಾಯ್ ಹೊಡದರು. ಒಟ್ಟ ಟ್ರೇನ ಒಳಗ ಏನ ಮಾರಲಿಕ್ಕೆ ಬಂದರು ಬಿಡಂಗಿಲ್ಲಾ ಅಂತ ನಮ್ಮ ದೋಸ್ತರು ಡಿಸೈಡ ಮಾಡಿ ಬಿಟ್ಟಿದ್ದರು ಹಿಂಗಾಗಿ ಫಾಲ್ನಾ ಮುಟ್ಟೋ ತನಕಾ ಸಿಕ್ಕದ್ದೇಲ್ಲಾ ತಿಂದಿದ್ದ ತಿಂದಿದ್ದ.
ಕಡಿಕೂ ಮರದಿವಸ ಮುಂಜಾನೆ ಫಾಲ್ನಾಕ್ಕ ಹೋಗಿ ಮುಟ್ಟಿದ್ವಿ. ಅಲ್ಲೆ ಒಂದ ಧರ್ಮಶಾಲಾದಾಗ ಹೋಗಿ ಫ್ರೆಶಪ್ ಆಗಿ ಮುಂದ ಹೋಗೋಣು ಅಂತ ನಾ ಡಿಸೈಡ ಮಾಡಿದೆ.
“ಏ, ಎಲ್ಲಿ ಧರ್ಮಶಾಲಾ ಮಗನ ಲಾಡ್ಜ ಹಿಡಿಯೋಣ” ಅಂತ ಒಂದಿಬ್ಬರ ಗಂಟ ಬಿದ್ದರು. ಮತ್ತ ನಾ
“ಲೇ ಒಂದ ಎರಡ ತಾಸಿನ ಕೆಲಸಕ್ಕ ಎಲ್ಲಿ ಲಾಡ್ಜ್” ಅಂತ್ ಕನ್ವಿನ್ಸ್ ಮಾಡಿದೆ.
ಮುಂದ ನಾವ ಅಲ್ಲಿಂದ ಜೀಪ ತೊಗೊಂಡ ರೇವತಡಾಕ್ಕ ಹೋಗಬೇಕಿತ್ತ. ಅಷ್ಟರಾಗ ಅಲ್ಲೆ ಯಾರೋ ಪುಣ್ಯಾತ್ಮರ ’ಇಲ್ಲೆ ಹತ್ತರ ರಣಕಪುರ ಟೆಂಪಲ್ ಅದ ಅದನ್ನ ನೋಡ್ಕೊಂಡ ಹೋಗರಿ, ಅನಾಯಸ ಇಲ್ಲಿ ತನಕ ಬಂದೀರಿ’ ಅಂತ ನಮ್ಮ ದೋಸ್ತರಿಗೆ ಹೇಳಿ ಬಿಟ್ಟರು. ತೊಗೊ ಎಲ್ಲಾರು ರಣಕಪುರ ನೋಡ್ಕೊಂಡ ಹೋಗೊದು ಅಂತ ಗಂಟ ಬಿದ್ದರು. ಮಾರವಾಡಿ ಮನಿ ಮುಟ್ಟೋತನಕ ಮಾರವಾಡಿದ ಖರ್ಚ ಅಲಾ, ಹಿಂಗಾಗಿ ಇವರ ಅವನ ರೊಕ್ಕದಾಗ ದಾರಿ ಒಳಗ ಏನೇನ ಬರತಾವ ಎಲ್ಲಾ ನೋಡೊದ ಅಂತ ಡಿಸೈಡ ಮಾಡಿಬಿಟ್ಟಿದ್ದರು. ಅದ ಹಿಂಗ ಆಗಿತ್ತಲ್ಲಾ ಗುಡಿ ಗುಂಡಾರಕ್ಕ ಹೋದಾಗ ಚಪ್ಪಲ್ ಬಿಡಲಿಕ್ಕೆ, ಗುಡಿ ಒಳಗ ಕಾಣಿಕೆ ಹಾಕಲಿಕ್ಕೆ ಸಹಿತ ರೊಕ್ಕಾ ನನ್ನ ಕಡೇನ ಇಸಗೊಂಡರು.
ಮುಂದ ರಣಕಪುರಕ್ಕ ಹೋಗಿ ರೇವತಡಾ ಮುಟ್ಟೋದರಾಗ ಸಂಜಿ ಆತ. ಅಲ್ಲಿಗೆ ನನ್ನ ಜವಾಬ್ದಾರಿ ಮುಗಿತ. ನಮ್ಮ ಮಾರವಾಡಿ ಮನಿ ಬಂದಕೂಡಲೇನ
“ನಾ ಇಲ್ಲಿಗೆ ಖರ್ಚ ಮಾಡೋದ ಮುಗಿತ ಮಕ್ಕಳ ಇನ್ನ ಆ ಮಾರವಾಡಿ ಬಲಾ,ನೀವ ಬಲಾ” ಅಂತ ನಾ ಕೈ ತೊಳ್ಕೊಂಡೆ. ಹೆಂಗಿದ್ದರು ವಾಪಸ ಹೋಗೊದ ಅವರವರ ಖರ್ಚಲೇನ ಇತ್ತ.
ಮುಂದ ಎರಡ ದಿವಸ ನಮ್ಮ ದೋಸ್ತನ ಮದುವಿ ಮುಗಿಸಿ, ಹೆಂಗಿದ್ದರು ಅನಾಯಸ ರಾಜಸ್ಥಾನ ತನಕಾ ಮಾರವಾಡಿ ರೊಕ್ಕದಲೇ ಬಂದೇವಿ ಇಲ್ಲಿಂದ ಮೌಂಟ ಆಬು, ಉದಯಪುರ, ಅಂಬಾಜಿ ಎಲ್ಲಾ ನೋಡೊದು ಅಂತ ಡಿಸೈಡ ಮಾಡಿದ್ವಿ. ಮುಂದ ಏನs ಮಾಡಿದರು, ಏನs ತಿಂದರು, ಏನs ಕುಡದರು ಕಂಟ್ರಿಬ್ಯುಶನ್ ಅಂತ ಕ್ಲಿಯರ್ ಮಾಡ್ಕೊಂಡ ನಾ ಅಲ್ಲಿಂದ ಬಿಟ್ಟೆ.
ಮುಂದಿನ ನಮ್ಮ ರೊಕ್ಕದಲೇ ನಾವ ಹೋಗಿದ್ದ ಟ್ರಿಪ್ಪಿಂದ ದೊಡ್ಡ ಕತಿ, ಅದನ್ನ ಮತ್ತ ಯಾವಾಗರ ಹೇಳ್ತೇನಿ ಆದರ ನಂಗ ಇವತ್ತೂ ನಮ್ಮ ದೋಸ್ತರು
“ಆಡ್ಯಾ ಮಾರವಾಡಿ ಲಗ್ನಕ್ಕ ಕರಕೊಂಡ ಹೋದಾಗ ಅವರ ಖರ್ಚಿಗೆ ಕೊಟ್ಟಿದ್ದ ರೊಕ್ಕದಾಗ ಉಳಿಸಿಗೊಂಡಿದ್ದಾ” ಅಂತ
“ಅಂವಾ, ಔಟ ಹೌಸಿನಿಂದ ಸಿಂಗಲ್ ಬೆಡರೂಮ್ ಮನಿಗೆ ಶಿಫ್ಟ ಆಗಿದ್ದ ಅದ ರೊಕ್ಕದಾಗ” ಅಂತ ಕಾಡಸ್ತಾರ.
ಅಲ್ಲಾ, ಮಾರವಾಡಿ ಹನ್ನೊಂದ ಮಂದಿಗೆ ಕರಕೊಂಡ ಬರಲಿಕ್ಕೆ ಅದು ರಾಜಸ್ಥಾನ ಮಟಾ ಮೂರ ಸಾವಿರ ರೂಪಾಯಿ ಕೊಟ್ಟರ ಅದರಾಗ ನಾ ರೊಕ್ಕ ಹೊಡ್ಕೊಂಡೇನಂತ, ಹೆಂತಾ ದೋಸ್ತರ ಅಂತೇನಿ. ಮಕ್ಕಳ ತಾವ ನೋಡಿದರ ಯಾರದೊ ರೊಕ್ಕ ಎಲ್ಲಮ್ಮನ ಜಾತ್ರಿ ಮಾಡಿಬಂದರು ಮತ್ತ ನನಗ ಅಂತಾರ.
ಅಲ್ಲಾ ಈ ಧಾರವಾಡ ಮಂದಿ ನಾ ಕರಕೊಂಡ ಹೋಗಿದ್ದಿಲ್ಲಾ ಅಂದರ ಮಾರವಾಡರ ಎಲ್ಲೆ ನೋಡತಿದ್ದರು ಅಂತೇನಿ.
ಆದರು ನನಗ ಯಾಕರ ಇವರನೇಲ್ಲಾ ಕರಕೊಂಡ ಹೋಗೊ ಜವಾಬ್ದಾರಿ ತೊಗೊಂಡೇಪಾ ಅಂತ ಅನಸ್ತ. ಅದ ಲಾಸ್ಟ ನಾ ಆಮ್ಯಾಲಿಂದ ರಾಜಸ್ಥಾನ ಕಡೆ ಮಾರಿ ಸಹಿತ ಮಾಡಿ ಮಲ್ಕೊಳೊದ ಬಿಟ್ಟ ಬಿಟ್ಟೆ.