ನಾ ಒಂದ ಮನಿ ಕಟ್ಟಲಿಕತ್ತೇನಿ ಹುಬ್ಬಳ್ಳಿ ಒಳಗ, ಅದೇನೊ ಅಂತಾರಲಾ ’ಮನಿ ಕಟ್ಟಿ ನೋಡ, ಮದುವಿ ಮಾಡ್ಕೊಂಡ ನೋಡ’ ಅಂತ ಹಂಗ ಮದುವಿ ಮಾಡ್ಕೊಂಡಂತೂ ನೋಡಿದೆ, ಅದರ ಹಣೆಬರಹ ಏನ ಹಗಲಗಲ ಹೇಳೋದ ನಿಮಗೇಲ್ಲಾ ಗೊತ್ತಿದ್ದದ್ದ ಅದ. ಇನ್ನ ಮನಿ ಕಟ್ಟೋದ ಒಂದ ಬಾಕಿ ಇತ್ತ, ಅದನ್ನು ಒಂದ ಹೆಂಡ್ತಿ ಕಾಟಕ್ಕ ಚಾಲು ಮಾಡಿ ಎರಡ ವರ್ಷ ಆಗಲಿಕ್ಕೆ ಬಂತ. ಹಂಗ ನನ್ನ ಕ್ಯಾಪಿಸಿಟಿ ನೋಡಿದರ ಅದ ಮುಗಿಲಿಕ್ಕೆ ಇನ್ನೂ ಒಂದ ವರ್ಷ ಬೇಕ ಆ ಮಾತ ಬ್ಯಾರೆ.
ನನ್ನ ಹೆಂಡ್ತಿ ’ರ್ರಿ, ಅವರ ಮನಿ ಕಟ್ಟಿದರು, ಇವರ ಅಪಾರ್ಟಮೆಂಟನಾಗ ಮನಿ ತೊಗೊಂಡರು, ನಾವ ಯಾವಾಗ ಕಟ್ಟೋದು’ ಅಂತ ಜೀವಾ ತಿಂದ ತಿಂದ ಇಡತಿದ್ದಳು, ನಾ ಹುಚ್ಚರಂಗ ಅಕಿ ಮಾತ ಕೇಳಿ ನಾನು ಮನಿ ಕಟ್ಟಿದರಾತು ಅಂತ ಹುರಪಿಲೇ ಅರ್ಧಾ ಮನಿ ಕಟ್ಟಿ ಈಗ
’ನಿಮ್ಮಪ್ಪನ ಕಡೆ ಸ್ವಲ್ಪ ಹೆಲ್ಪ್ ಕೇಳ’ ಅಂದರ
’ನಿಮ್ಮ ಕಡೆ ಕ್ಯಾಪಿಸಿಟಿ ಇದ್ದರ ಕಟ್ಟಬೇಕಿತ್ತ, ನಮ್ಮಪ್ಪನ ಕಡೆ ರೊಕ್ಕ ತೊಗೊಂಡ ಮನಿ ಕಟ್ಟೊದಿದ್ದರ ನೀವೇನ ತಲಿ ಕಟ್ಟಿದಂಗ ಆತು’ ಅಂತಾಳ.
ಅದೇನೊ ಅಂತಾರಲಾ ’ಹೆಂಡ್ತಿ ಮಾತ ಕೇಳಿ ಮೈತುಂಬ ಸಾಲ ಮಾಡಿ ಮನಿ ಕಟ್ಟಿ ಪಾಪ ಹಳ್ಳಾ ಹಿಡದಾ’ ಅಂತ, ಆ ಪರಿಸ್ಥಿತಿ ನಂದು ಆಗೇದ ಈಗ.
ಅದರಾಗ ನಾ ಮನಿ ಕಟ್ಟಲಿಕ್ಕೆ ಹತ್ತೇನಿ ಅನ್ನೋದ ತಡಾ ’ಹಂಗ ಕಟ್ಟ, ಹಿಂಗ ಕಟ್ಟ, ವಾಸ್ತು ನೋಡ, ಉತ್ತರಕ್ಕ ಬಾಗಲಾ ಮಾಡ, ಈಶಾನ್ಯ ದಿಕ್ಕಿನಾಗ ಸೆಪ್ಟಿಕ್ ಟ್ಯಾಂಕ್ ಕಟ್ಟ್, ಆಗ್ನೇಯ ದಿಕ್ಕಿನಾಗ ಸಿಂಟೆಕ್ಸ್ ಇಡ, ಕಮೋಡ್ ಯಾ ದಿಕ್ಕಿನಾಗ ಮಾಡಿ’ ಅಂತ ಮಂದಿ ಪುಕ್ಕಟ್ ಸಜೆಶನ್ ಕೊಡಲಿಕತ್ತರು. ಹಂಗ ನಾ ವಾಸ್ತು-ಗಿಸ್ತು ನಂಬಗಿಲ್ಲಾ, ಅದರಾಗ ಲಗ್ನ ಆದಾಗಿಂದ ನನ್ನ ಸ್ವಂತ ವಾಸ್ತು ಹಳ್ಳಾ ಹಿಡದ ಬಿಟ್ಟದ ಅಂತ ನಂಗ ಹೆಂಗ ಬೇಕ ಹಂಗ ನಾ ಮನಿ ಕಟಗೊಳಿಕತ್ತೇನಿ.
ಮೊನ್ನೆ ಹಿಂಗ ಈ ಮನಿ ಕಟ್ಟೋದರ ಬಗ್ಗೆ, ವಾಸ್ತು ಬಗ್ಗೆ ಡಿಸ್ಕಶನ್ ನಡದಾಗ ಒಬ್ಬ ದೋಸ್ತ
’ಏ, ನಾನೂ ಏನ ವಾಸ್ತು-ಗಿಸ್ತು ನಂಬಂಗಿಲ್ಲಾ, ನಾ ದಕ್ಷಿಣ ದಿಕ್ಕಿಗೆ ಬಾಗಲ ಇದ್ದ ಮನ್ಯಾಗ ಎಂಟ ವರ್ಷ ಭಾಡಗಿ ಇದ್ದೆ ನಂಗ ಏನೇನ ಆಗಲಿಲ್ಲಾ, ಹಂಗ ಖರೇ ಹೇಳ್ಬೇಕಂದರ ನನ್ನ ಮದುವಿ ಆಗಿದ್ದ ಆ ದಕ್ಷಿಣ ದಿಕ್ಕಿಗೆ ಬಾಗಲ ಇದ್ದ ಮನಿಗೆ ಹೋದ ಮ್ಯಾಲೆ’ಅಂದಾ.
ಅಲ್ಲಾ ಅವಂಗ ಕನ್ಯಾ ಸಿಗಲಾರದ ಭಾಳ ತ್ರಾಸ ಆಗಿ ಭಾಳ ಗುದ್ಯಾಡಿ ಮದುವಿ ಆಗಿದ್ದ ನಮಗೇಲ್ಲಾ ಮೊದ್ಲ ಗೊತ್ತಿತ್ತ, ನಾ ಸುಮ್ಮನ ಕೂಡಬೇಕೋ ಬ್ಯಾಡೊ ಅಂವಂಗ ಒಮ್ಮಿಕ್ಕಲೇ
’ಲೇ, ದನಾ ಕಾಯೋನ, ದಕ್ಷಿಣ ದಿಕ್ಕಿಗೆ ಬಾಗಲ ಇದ್ದ ಮನ್ಯಾಗ ಭಾಡಗಿ ಇದ್ದ ನಂಗೇನೂ ಕೆಟ್ಟ ಆಗಿಲ್ಲಾ ಅಂತಿ, ಮ್ಯಾಲೆ ಆ ಮನಿಗೆ ಹೋದ ಮ್ಯಾಲೆ ಮದ್ವಿ ಆದಿ ಅಂತಿ, ಲೇ ಮದ್ವಿಕಿಂತಾ ಕೆಟ್ಟ ಮತ್ತೇನ ಆಗ್ಬೇಕಪಾ ಗಂಡಸರಿಗೆ? ಅದಕ್ಕ ಹೇಳೋದ ಸೌಥ ಫೇಸಿಂಗ್ ಬಾಗಲ ಇರಬಾರದು ಅಂತ’ ಅಂತ ನಾ ಅವಂಗ ಚಾಷ್ಟಿ ಮಾಡಿದೆ.
ಅಂವಂಗ ನಾ ಹೇಳಿದ್ದ ಖರೇ ಅನಸ್ತ. ಪಾಪ ಈಗ ಪಶ್ಚಿಮ ದಿಕ್ಕಿಗೆ ಬಾಗಲ ಇದ್ದದ್ದ ಮನಿ ಹುಡಕಲಿಕತ್ತಾನ. ಅಲ್ಲಾ, ಇನ್ನೇನ ಯಾ ದಿಕ್ಕಿಗೆ ಬಾಗಲ ಇದ್ದರೇನು ಬಿಟ್ಟರೇನ ಬಿಡ್ರಿ, ಲಗ್ನ ಮಾಡ್ಕೊಂಡ ಅನುಭವಿಸಲಿಕತ್ತ ಮ್ಯಾಲೆ. ಈಗ ಪಶ್ಚಿಮ ದಿಕ್ಕಿಗೆ ಬಾಗಲ ಇದ್ದದ್ದ ಮನಿ ಹಿಡದರ ಇದ್ದ ಹೆಂಡ್ತಿ ಏನ ದಕ್ಷಿಣ ದಿಕ್ಕಲೇ ವಾಪಸ ಹೋಗಂಗಿಲ್ಲಾ. ಅಲ್ಲಾ ಹಂಗ ಹೋಗಿ ಬಂದು ಮಾಡಲಿಕ್ಕೆ ಅದೇನ ಶನಿ ಅಲ್ಲ ಬಿಡ್ರಿ, ಒಮ್ಮೆ ಬಂತು ಅಂದರ ಎಲ್ಲಾ ದಿಕ್ಕಿನಾಗೂ ಆವರಿಸಿಕೊಂಡ ಬಿಡ್ತದ ಆದರೂ ಮಾತ ಹೇಳಿದೆ.
ಈಗ ಅಂತೂ ಅಂವಾ ವಾಸ್ತು ನೋಡಲಾರದ ಏನು ಮಾಡಂಗಿಲ್ಲಾ ಮತ್ತ. ಮೊನ್ನೆ ಒಂದ ಮನಿ ಪಶ್ಚಿಮ ದಿಕ್ಕಿಗೆ ಬಾಗಲ ಇತ್ತ ಆದರ ಬಚ್ಚಲದಾಗ WOC wrong direction ಒಳಗ ಅದ ಅಂತ ಈಡಿ ಮನಿ ರಿಜೆಕ್ಟ ಮಾಡಿದಾ. ಅದರಾಗ ಅವನ ಕಾಕಾ ಒಬ್ಬೊಂವ ತಪ್ಪ ದಿಕ್ಕಿನಾಗ ಬಾಥರೂಮ್ ಮಾಡಿಸಿಸಿ ಮುಂದ ಬಾಥರೂಮ್ (toilet) ನಾಗ ಜೀವಾ ಬಿಟ್ಟಿದ್ದನಂತ ಹಿಂಗಾಗಿ ಅಂವಾ ಬೆಡರೂಮ್ ವಾಸ್ತು ಪ್ರಕಾರ ಇರದಿದ್ದರೂ ಅಡ್ಡಿಯಿಲ್ಲಾ toilet ಮಾತ್ರ ವಾಸ್ತು ಪ್ರಕಾರ ಬೇಕ ಅಂತ ಗಂಟ ಬಿದ್ದಾನ. ಏನ್ಮಾಡ್ತೀರಿ?
ನಾನ ಅವಂಗ
’ಲೇ, ನಾ ಹೊಸಾ ಮನಿಗೆ ನಾಲ್ಕು ದಿಕ್ಕಿನಾಗ ಬಾಗಲ ಮಾಡಿಸಲಿಕತ್ತೇನಿ, ಯಾ ದಿಕ್ಕ ಒಳಗ ಹೆಂಡತಿ ಇರಂಗಿಲ್ಲಾ ಆ ದಿಕ್ಕಿನಾಗಿಂದ ಮನಿಗೆ ಎಂಟರ್ ಆಗ್ತೇನಿ, ಅದ ನಮ್ಮಂಥಾ ಗಂಡಂದರಿಗೆ ರೈಟ್ ದಿಕ್ಕ, ವಾಸ್ತು-ಗಿಸ್ತು ಭಾಳ ತಲಿಕೆಡಸಿಗೋ ಬ್ಯಾಡ ನಡಿ’ ಅಂತ ತಿಳಿಸಿ ಹೇಳಿ ಕಳಸಿದೆ.
ಇವತ್ತ ಕಿಚನ್ ವಾಸ್ತು, ಬೆಡ್ ರೂಮ್ ವಾಸ್ತು, ಮೆಟ್ಟಲಕ್ಕ ವಾಸ್ತು, ದೇವರ ಮನಿಗೆ ವಾಸ್ತು..ಮನಿ ಒಳಗ ಹಿಂತಾದಕ್ಕ ವಾಸ್ತು ಇಲ್ಲಾಂತ ಇಲ್ಲಾ. ಅಲ್ಲಾ ಮದುವಿ ಮಾಡ್ಕೊಂಡ ಮ್ಯಾಲೆ ಯಾವದ ಯಾವ ದಿಕ್ಕಿನಾಗ ಇದ್ದರೇನರಿ. ಹಂಗ ಲಗ್ನಕಿಂತಾ ಮುಂಚೆ ಹೆಂಡ್ತಿದ ವಾಸ್ತು ಯಾರರ ಹೇಳೋರ ಇದ್ದರ ಹೇಳ್ರಿ? ಹಂಗೇನರ ಸಾದ್ಯ ಅದ ಏನ್? ಇಲ್ಲ ಹೌದಲ್ಲ.
ಹಂಗ ಸುಮ್ಮನ ನಮ್ಮ ಅನಕೂಲ ತಕ್ಕ ಒಂದ ಮನಿ ಕಟಗೊಂಡ ಇರೋದರಿಪಾ, ಭೂಮಿನ ರೌಂಡ ಅದ ಹಂತಾದರಾಗ ಮತ್ತ ಆ ದಿಕ್ಕ ಈ ದಿಕ್ಕ ಅಂತ ದಿಕ್ಕತಪ್ಪಿಸಿಗೊಂಡ ಕೂಡೋದರಾಗ ಏನದ ಅಂತೇನಿ?
ಅಲ್ಲಾ ಇದ ನನಗ ಅನಸಿದ್ದ ಮತ್ತ? ಹಂಗ ನಿಮಗ ವಾಸ್ತು ಮ್ಯಾಲೆ ನಂಬಿಕಿ ಇದ್ದರ ನೀವ ಯಾವದರ ದಿಕ್ಕಿಗೆ ಕಮೋಡ್ ಮಾಡ್ಕೋರಿ ನಿಮಗ್ಯಾರ ಬ್ಯಾಡ ಅಂದಾರ. ನಿಮ್ಮ ಮನಿ ನಿಮ್ಮ ಕಮೋಡ್.