ಇದ ಒಂದ ಮೂರ ನಾಲ್ಕ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಒಬ್ಬಂವಾ ಹಡದಿದ್ದಾ. ದೋಸ್ತ ಅಂದರ ದೋಸ್ತನ ಅಲ್ಲಾ, ದೋಸ್ತನ ಹೆಂಡತಿ ಹಡದಿದ್ಲು. ನಾವ ನಾಲ್ಕೈದ ಮಂದಿ ದೋಸ್ತರ ಸೇರಿ ದಾವಾಖಾನಿಗೆ ಕೂಸಿನ ನೋಡ್ಕಂಡ ಬರಲಿಕ್ಕೆ ಹೋಗಿದ್ವಿ. ನಮ್ಮ ದೋಸ್ತ ಒಂದ ಹೆಣ್ಣ ಹಡದ ಆರ-ಏಳ ವರ್ಷದ ಮ್ಯಾಲೆ ಮತ್ತ ಮತ್ತ ಪ್ರಯತ್ನ ಮಾಡಿ ಈ ಸರತೆ ಗಂಡ ಗ್ಯಾರಂಟೀ ಆಗತದ ಅಂತ ಗ್ಯಾರಂಟೀ ಆದಮ್ಯಾಲೆ ಹಡದಿದ್ದಾ. ದೇವರ ದೊಡ್ಡಂವಾ ಅವನ ವಿಜ್ಞಾನದ ಮ್ಯಾಲಿನ ನಂಬಿಕಿ ಹುಸಿ ಮಾಡಲಿಲ್ಲಾ. ಗಂಡ ಹುಟ್ಟಿತ್ತ. ಒಂದ ಹೆಣ್ಣಿನ ಮ್ಯಾಲೆ ಗಂಡ ಹಡದವರದ ಖುಷಿ ಅಗದಿ ನೋಡೊ ಹಂಗ ಇತ್ತ.
“ನಂಗ ಗೊತ್ತಿತ್ತಲೇ, ಈ ಸರತೆ ಗಂಡಾಗತದಂತ” ಅಂತ ತಾ ಏನ ತ್ರಿಕಾಲ ಜ್ಞಾನಿ, ತನ್ನ ಕಣ್ಣಂದರ ಅಲ್ಟ್ರಾಸೌಂಡ ಸ್ಕ್ಯಾನರ ಅನ್ನೋರಗತೆ ನಮ್ಮ ದೋಸ್ತ ಹೇಳ್ಕೊಂಡಾ.
‘ಅಲಾ ಮಗನ ಅಷ್ಟ ಗೊತ್ತಿದ್ದಂವಾ ನನ್ನಂಗ ಒಂದನೇ ಸರತೆನ ಗಂಡ ಹಡದ ತೋರಸಬೇಕಿತ್ತ’ ಅನ್ನೋವ ಇದ್ದೆ, ಹೋಗಲಿ ಬಿಡ ಪಾಪ ಯಾಕ ಸುಳ್ಳ ಅವನ ಕಾಲ ಜಗ್ಗ ಬೇಕು, ಏನೋ ಗಂಡ ಹಡದ ದೊಡ್ಡ ಸಾಧಿಸಿದವರಗತೆ ಭಾಳ ಖುಶೀಲೇ ಇದ್ದಾನ ಅಂತ ಸುಮ್ಮನಾದೆ.
ಅವರ ಮನಿ ಮಂದಿ ಎಲ್ಲಾ ಕೂಸ ಅವನಂಗದ, ಅವನ ಹೆಂಡತಿ ಹಂಗ ಅದ, ಇಲ್ಲಾ ಅವರಜ್ಜಿಗತೆ ಅದ ಅಂತ ಜೋರ ಜೋರ ಡಿಸ್ಕಶ್ಯನ ನಡಿಸಿದ್ದರು. ಅದರಾಗ ನಮ್ಮ ದೋಸ್ತರೂ ತಂಬದೊಂದ ಮೂರ ಅಕ್ಕಿ ಕಾಳ ಇರಲಿ ಅಂತ ‘ಇಲ್ಲಾ ಕೂಸ ಹಂಗ ಅದ, ಹಿಂಗ ಅದ’ ಅಂತ ಅವರ ಜೊತಿ ಸೊ ಅನ್ನಲಿಕತ್ತಿದ್ದರು. ಹೆತ್ತವರಿಗೆ ಹೆಗ್ಗಣ ಮುದ್ದ ಅಂತ, ಕೂಸು ಹುಟ್ಟಿದ ಮ್ಯಾಲೆ ಹೆಂಗ ಇದ್ದರ ಏನರಿ? ಯಾರಂಗ ಇದ್ದರ ಏನ? ಅವರವ್ವಾ ಅಪ್ಪಾ ಹೆಂಗ ಇರತಾರ ಹಂಗ ಕೂಸ ಇರತದ, ಅದಕ್ಯಾಕ ಅಷ್ಟ ತಲಿಕೆಡಸಿಗೋಬೇಕು ಏನೋ? ನಾ ಕಡಿಕೆ ತಲಿಕೆಟ್ಟ ನಮ್ಮ ದೋಸ್ತರಿಗೆ ‘ಲೇ ಕೂಸ ಅವರ್ಯಾರ ಹಂಗೂ ಇಲ್ಲಾ, ನನ್ನಂಗ ಅದ, ನೀವು ಸುಮ್ಮನ ಬಾಯಿಮುಚಗೊಂಡ ಕೂಡ್ರಲೇ’ ಅನ್ನೋವ ಇದ್ದೆ, ಆದರ ಬ್ಯಾಡ, ಇದ ಭಾಳ ಕೆಟ್ಟ ಜೋಕ್ ಆಗ್ತದ, ಇವರ ಯಾರು ಇದನ್ನ ಸ್ಪೋರ್ಟಿವ್ ಆಗಿ ತೊಗಳೊ ಅಷ್ಟ ಮ್ಯಾಚುರ್ ಇಲ್ಲಾ, ಅದರಾಗ ಅವರ ಮನಿ ಹಿರೇಮನಷ್ಯಾರೇಲ್ಲಾ ಇಲ್ಲೆ ಇದ್ದಾರ ಮತ್ತ ತಪ್ಪ ತಿಳ್ಕೊಂಡಾರಂತ ಆ ಕೂಸಿನ ಮ್ಯಾಲೆ ಹೊಚ್ಚಿದ್ದ ದುಬಟಿ ತಗದ
“ಇಲ್ಲೆ ನೋಡ್ರಿ. ಕೆಳಗಿಂದ ಅವರಪ್ಪನ ಹಂಗ ಅದ, ಮ್ಯಾಲೆ ಮಾರಿ ಅವರ ಅವ್ವನಂಗ ಅದ, ಜವಳ ಅವರಜ್ಜನಕಿಂತಾ ಕಡಿಮೆ ಅವ, ಧ್ವನಿ ಅವರಜ್ಜಿಗತೆ ಗೊಗ್ಗರ ಅದ. ಸಾಕ ಮುಗಸರಿನ್ನ ಆ ಡಿಸ್ಕಶ್ಯನ್. ಕೂಸ ಯಾರಂಗ ಇದ್ರ ಏನ್” ಅಂತ ನಮ್ಮ ದೋಸ್ತಗ ಪಾರ್ಟೀ ಕೇಳಿ ಅಂವಾ ಕೊಟ್ಟಿದ್ದ ಎರಡ ಫೇಡೆ ಒಳಗ ಒಂದ ತಿಂದ ಇನ್ನೊಂದ ಮನಿಗೆ ತೊಗೊಂಡ ಬಂದೆ.
ನಾ ಮನಿಗೆ ಬಂದ ಹಿಂಗ ಅಂವಾ ಹಡದದ್ದ ಸುದ್ದಿ ಹೇಳಿ ಅಂವಾ ಕೊಟ್ಟಿದ್ದ ಒಂದ ಧಾರವಾಡ ಫೇಡೆ ಒಳಗ ಎಲ್ಲಾರಿಗೂ ಹಂಚಲಿಕತ್ತಿದ್ದೆ ಅಷ್ಟರಾಗ ನಮ್ಮವ್ವಾ
“ಏ, ನೀ ದಾವಾಖಾನ್ಯಾಗ ಯಾರಿಗೂ ಮುಟ್ಟಿಲ್ಲ ಹೌದಲ್ಲ?” ಅಂತ ಅಲ್ಲೆ ಅಡಿಗೆ ಮನ್ಯಾಗಿಂದ ಒದರಿದ್ಲು.
ನಾ ದಾವಾಖಾನ್ಯಾಗ ನಮ್ಮ ದೋಸ್ತಗ ’ಅಂತೂ ಗಂಡಸ ಮಗನ ತಂದಿ ಆದೀಪಾ’ ಅಂತ ಅಗದಿ ಹಿರೇಮನಷ್ಯಾರಗತೆ ಬೆನ್ನ ಚಪ್ಪರಿಸಿ ಅಪಗೊಂಡಿದ್ದೆ, ಅಲ್ಲಾ ಹಂಗ ನಾ ಒಂದನೇದs ಗಂಡ ಹಡದ ಮ್ಯಾಲೆ ನಮ್ಮ ಗುಂಪಿನಾಗ ನಾನs ಹಿರೇಮನಷ್ಯಾ ಆ ಮಾತ ಬ್ಯಾರೆ.
ಆಮ್ಯಾಲೆ ನಾ ಆ ಕೂಸಿನ ತೊಡಿಮ್ಯಾಲೆ ಕರಕೊಂಡಾಗ ನಮ್ಮ ದೋಸ್ತನ ಅಜ್ಜಿ
“ತಮ್ಮಾ, ಸವಕಾಶ ಅದರದ ಇನ್ನೂ ಗೋಣ ನಿಂತಿಲ್ಲಾ” ಅಂತ ಗೊಗ್ಗರ ಧ್ವನಿಲೇ ಒದರಿದ್ಲು. ಅದಕ್ಕ ನಮ್ಮ ದೋಸ್ತ
“ಏ ಹೌದಲೆ, ನಿಂಗ ಎತ್ತಲಿಕ್ಕೆರ ಆಗತದ ಇಲ್ಲ ನೋಡ, ಅದರಾಗ ನಂಗಂತೂ ನಿಂದ ಗೊಣsರ ನಿಂತದಿಲ್ಲೋ ಅದ ಡೌಟ ಅದ” ಅಂತ ಹೇಳಿದ್ದ ನೆನಪಾತ.
ಅಲ್ಲಾ ಎಲ್ಲಾ ಬಿಟ್ಟ ನಮ್ಮವ್ವ ಯಾಕ ಹಂಗ ಕೇಳಿದ್ಲು ಅಂತ ಅಕಿನ್ನ ಕೇಳಿದರ “ಏ, ಖೋಡಿ ಹಡದವರಿಗೆ ರಿದ್ದಿ ಇರತದ, ಇವತ್ತ ಎಷ್ಟನೇ ದಿವಸಾ?” ಅಂದ್ಲು. (ರಿದ್ದಿ ಆಡು ಭಾಷೆ, ಅದ ಖರೆ ಅಂದರ ವೃದ್ಧಿ ಅಂತ)
ನಂಗ ನಮ್ಮವ್ವ ಹಿಂಗ ಹುಟ್ಟಿದಾಗೂ ‘ಇವತ್ತ ಎಷ್ಟನೇ ದಿವಸಾ’ ಅಂತ ಕೇಳಿದ್ದ ವಿಚಿತ್ರ ಅನಸ್ತು. ಹಂಗ ನಾವ ಯಾರದರ ಮನ್ಯಾಗ ಸತ್ತಿದ್ದ ಸುದ್ದಿ ಕೇಳಿದಾಗ ಮಾತಾಡಸಲಿಕ್ಕೆ ಹೋಗೊಕಿಂತಾ ಮೊದ್ಲ ಇವತ್ತ ಎಷ್ಟನೇ ದಿವಸಾ ಅಂತ ಕೇಳ್ತೇವಿ ಇಲ್ಲಾ ಯಾರದರ ಮನಿಗೆ ಹೋದಾಗ ಅವರು ‘ಇಲ್ಲಾ ನಮ್ಮ ಸೊಸಿ ಒಳಗಿ ಇಲ್ಲಾ ( ಅಂದರ ಮನ್ಯಾಗ ಇದ್ದಾಳ ಆದರ ಕಡಿಗ್ಯಾಗಳ ಅಂತ ಅರ್ಥ)’ ಅಂತ ಹೇಳಿದಾಗ ‘ಹೌದಾ, ಇವತ್ತ ಎಷ್ಟನೇ ದಿವಸಾ?’ ಅಂತ ಕೇಳೊದನ್ನ ನೋಡಿದ್ದೆ, ಇಕಿ ಹಡದಾಗೂ ಹಿಂಗ ಕೇಳಿದ್ಲಲಾ ಅಂತ ಆಶ್ಚರ್ಯ ಆಗಿ “ಏ ಅಂವಾ ಹಡದ ಎರಡ ದಿವಸ ಆತ ತೊಗೊವಾ” ಅಂದೆ.
“ಹುಚ್ಚಾ, ಹಡದ ಮನ್ಯಾಗ ಹತ್ತ ದಿವಸ ತನಕಾ ರಿದ್ದಿ ಇರತದ, ಹಂಗ ಮುಟ್ಟಲಿಕ್ಕೆ ಹೋಗಬಾರದ, ಹಂತಾದ ಏನ್ ನಿನಗ ಗಡಿಬಿಡಿ ಇತ್ತ ಕೂಸಿನ ನೋಡೊದು, ನಾಳೆ ಹತ್ತ ದಿವಸ ಆದ ಮ್ಯಾಲೇ ಅವರ ಮನಿಗೆ ಹೋಗಿ ಭೆಟ್ಟಿ ಆಗಲಿಕ್ಕೆ ಬರತಿದ್ದಿಲ್ಲಾ, ಹೋಗಿ ಮೊದ್ಲ ಕೈ ಕಾಲರs ತೊಳ್ಕೊಂಡ ಬಾ, ಖರೇ ಅಂದ್ರ ಸ್ನಾನನs ಮಾಡಬೇಕಿತ್ತ” ಅಂದ್ಲು.
ಅವನೌನ ನನಗ ಜೀವನ ಖರೇನ ಸಾಕಗಿ ಬಿಟ್ಟದ, ಅರ್ಧಾ ನಮ್ಮವ್ವನ ಸಲುವಾಗಿ, ಅರ್ಧಾ ನನ್ನ ಹೆಂಡತಿ ಸಂಬಂಧ, ಏನ ಮಡಿ ಮೈಲಗಿ ಅಂತ ಸಾಯಿತಾರಪಾ ಇಬ್ಬರು, ನನ್ನ ಹೆಂಡತಿನರ ಶಾಣ್ಯಾಕ ಆಗ್ತಾಳ ಅಂದ್ರ ಅಕಿನೂ ಬರಬರತ ನಮ್ಮವ್ವನಗತೇನ ಆಗಿ ಬಿಟ್ಟಾಳ. ನಮ್ಮವ್ವ ತಿಂಗಳದಾಗ ಮೂರಸರತೆ ದೇವರ ನೆವಾ ಮಾಡಿ ಮಡಿ-ಮಡಿ ಅಂದರ ನನ್ನ ಹೆಂಡತಿ ಮೂರ ದಿವಸ ವಿಜ್ಞಾನದ ನೆವಾ ಮಾಡ್ಕೊಂಡ ಮುಟ್ಟ ಬ್ಯಾಡರಿ, ಮುಟ್ಟ ಬ್ಯಾಡರಿ ಅಂತಾಳ. ಅದರಾಗ ಈ ಸರತೆ ಶ್ರಾವಣಮಾಸ ಒಂದ ತಿಂಗಳ ನಾ ಮನ್ಯಾಗ ಹೆಂಗ ಕಳದೇನಿ ಆ ಗೌರವ್ವಗ ಗೊತ್ತ. ವಾರದಾಗ ನಾಲ್ಕ ದಿವಸ ಮಡಿ, ಅಲ್ಲೆ ಮುಟ್ಟಿ- ಇಲ್ಲೆ ಮುಟ್ಟಿ, ಅದು ಮಡಿ – ಇದು ಮಡಿ. ಅಯ್ಯಯ್ಯ ನಾ ಬ್ರಾಹ್ಮರಂವಾ ಹೌದೊ ಅಲ್ಲೋ ಅಂತ ನನಗ ಡೌಟ ಬರೋಹಂಗ ಮಾಡಿದ್ದರು. ಅದರಾಗ ಅಧಿಕ ಮಾಸ ಬ್ಯಾರೆ ಬಂದ ಗೌರವ್ವ ಒಂದ ತಿಂಗಳ ಎಕ್ಸ್ಟ್ರಾ ನಮ್ಮ ಮನ್ಯಾಗ ವಸ್ತಿ ಹೊಡದ ಬಿಟ್ಲು. ನಮ್ಮವ್ವನ ಯಾರು ಹಿಡದವರ ಇದ್ದಿದ್ದಿಲ್ಲಾ. ಅದರಾಗ ನಮ್ಮವ್ವ ಮಡಿಲೇ ಇದ್ದಾಗ ನನ್ನ ಹೆಂಡತಿ ಕಡಿಗ್ಯಾಗಿ ಬಿಟ್ಟರಂತು ಮುಗದ ಹೋತ ನಮ್ಮ ಹಣೇಬರಹ, ನಮ್ಮವಗ ಕಾಯಿಪಲ್ಲೆ ಹೆಚ್ಚಿಕೊಡದು,ಮ್ಯಾಲಿಂದ ಅಕಿನ್ನ ಮುಟ್ಟಲಾರದ ಅಕಿಗೆ ಏನೇನ ಹೆಲ್ಪ್ ಮಾಡಬಹುದೊ ಅದನ್ನೇಲ್ಲಾ ನಾ ಇಲ್ಲಾ ನಮ್ಮಪ್ಪನ ಮಾಡೋದ.
ಇನ್ನ ಇಕಿ ಜೊತಿ ವಾದಿಸಿಗೋತ ಕೂತ್ರ ಉಪಯೋಗ ಇಲ್ಲಾ ಅಂತ ಅಕಿಗೆ ಮನಸ್ಸಿನಾಗ ಬೈಕೋತ ಬಚ್ಚಲದಾಗ ಕಾಲ ಮ್ಯಾಲೆ ಒಂದ ತಂಬಿಗಿ ನೀರ ಸುರಕೊಂಡ ಬಂದೆ.
ಹಂಗ ನಮ್ಮವ್ವ, ನನ್ನ ಹೆಂಡತಿ ನಾ ಯಾರರ ಸತ್ತಾಗ ಅವರ ಮನಿಗೆ ಹೋಗಿ ಬಂದಾಗೂ ಹಿಂಗ ಮಾಡ್ತಾರ. ನಾ ಮನಿಗೆ ಬರೋ ಪುರಸತ್ತ ಇಲ್ಲದ ಅಲ್ಲೇ ಗೇಟನಾಗ ನಿಲ್ಲಿಸಿ ಬಿಡ್ತಾರ “ಅಲ್ಲೇ ಹೆಣಾ ಮುಟ್ಟಿದ್ದೇನ, ಹೆಣದ ಪೈಕಿ ಯಾರನರ ಮುಟ್ಟಿದ್ದೇನ?”
” ಸ್ಮಶಾನಕ್ಕ ಹೋಗಿದ್ದೇನ?”
” ನಿಂಗ ದೂರಿಂದ ನೋಡ್ಕೊಂಡ ಬಾ ಅಂತ ಎಷ್ಟ ಸರತೆ ಹೇಳಿಲ್ಲಾ?” ಅಂತ ಇಬ್ಬರು ಸೇರಿ ಶುರು ಮಾಡೇ ಬಿಡ್ತಾರ. ಅವನೌನ ನಾ ತಲಿಕೆಟ್ಟ ಇನ್ನ ಎಲ್ಲೆ ನನಗ ಹಿಡದ ಒಂದ ಕೊಡಾ ತಣ್ಣೀರ ಸುರವಿ ಮ್ಯಾಲೆ ಬಾಯಾಗ ಪಂಚಗವ್ಯಾ ಹಾಕ್ತಾರೋ ಅಂತ ಹೆದರಿ ನಾ ಹೆಣಕ್ಕ ಹೆಗಲ ಕೊಟ್ಟಿದ್ದರು
“ಏ, ಇಲ್ಲ ತೊಗೊ ನಾ ಅಲ್ಲೇ ದೂರಿಂದ ಹೆಣಕ್ಕ ಟಾಟಾ ಮಾಡಿ ಬಂದೇನಿ” ಅಂತ ಒಂದ ಹತ್ತ ಸರತೆನರ ಸುಳ್ಳ ಹೇಳಿರಬೇಕ. ಅಲ್ಲರಿ ನಾ ಸಮಾಜದಾಗ ಒಂದ ನಾಲ್ಕ ಮಂದಿ ಹಚಗೊಂಡಾಂವಾ, ಹಂಗ ಸಹಜ ಯಾರದರ ಪೈಕಿ ಸತ್ತಾಗ ಹೋಗಬೇಕಾಗತದ, ಇಲ್ಲಾಂದರ ನಾಳೆ ಮಂದಿ ನಮ್ಮ ಪೈಕಿ ಯಾರರ ಸತ್ತಾಗ ಬರಬೇಕೊ ಬ್ಯಾಡೋ? ಇನ್ನ ಹಂಗ ಹೋದಾಗ ನಾ ಹೆಣಾ ಮುಟ್ಟಂಗಿಲ್ಲಾ, ನೀವ್ಯಾರೂ ನನ್ನ ಮುಟ್ಟ ಬ್ಯಾಡರಿ, ಮುಟ್ಟಿದರ ನಮ್ಮವ್ವ ಬೈತಾಳ ಅಂತ ಹೆಂಗ ಅನ್ನಲಿಕ್ಕ ಆಗತದ. ಕೆಲವೊಮ್ಮೆ ಅನಿವಾರ್ಯವಾಗಿ ಸ್ಮಶಾನಕ್ಕೂ ಹೋಗಬೇಕಾಗತದ. ಆಮ್ಯಾಲೆ ನಾ ಸ್ಮಶಾನತನಕ ಹೋಗಿ
“ನೀವ ಎಲ್ಲಾ ಮುಗಿಸಿಕೊಂಡ ಬರ್ರಿ, ನಾ ಅಲ್ಲಿ ತನಕ ಇಲ್ಲೆ ಹೊರಗ ಸತ್ಯ ಹರೀಶ್ಚಂದ್ರನಗತೆ ಸ್ಮಶಾನದ ಗೇಟ ಕಾಯಿತಿರತೇನಿ” ಅಂತ ಅನ್ನಲಿಕ್ಕೂ ಬರಂಗಿಲ್ಲಾ. ಏನಿಲ್ಲದ ನಮ್ಮ ದೋಸ್ತರ ನಮ್ಮ ಹೆಸರಿಲೆ ‘ಲೇ, ನಿಮ್ಮಂದ್ಯಾಗ ಸತ್ತರ ನಾಲ್ಕ ಮಂದೀನೂ ಲಗೂನ ಬರಂಗಿಲ್ಲಾ, ಬರೋತನಕ ನೀವು ತಡೆಯಂಗನೂ ಇಲ್ಲಾ. ಎಂಟ ಮಂದಿ ಬಂದ ಬಿಟ್ಟರ ಸಾಕ ಹೆಣದ ಮೈ ಇನ್ನು ಬಿಸಿ ಇರತ ಸುಟ್ಟ ಬರ್ತೀರಿ, ಹಂಗ-ಹಿಂಗ’ ಅಂತ ಹೀಯಾಳಸ್ತಾರ, ಅವರ ಹೇಳೋದಕ್ಕೂ ನಮ್ಮಂದಿ ಮಾಡೊದಕ್ಕೂ ಎಲ್ಲಾ ಖರೇನ ಅದ ಅನಸ್ತದ.
ಹಂಗ ಒಂದ್ಯಾರಡ ಸರತೆ ನಮ್ಮ ಮನ್ಯಾಗ ನಾ ಸ್ಮಶಾನಕ್ಕ ಹೋಗಿ ಬಂದದ್ದ ಗೊತ್ತಾಗಿ ನಮ್ಮವ್ವನ ಕಡೆ
“ಮೂಳಾ ಎಲ್ಲಿ ಇಟ್ಟಿ ಬುದ್ಧಿ, ಎಷ್ಟ ಸರತೆ ಹೇಳ ಬೇಕ ನಿನಗ ಅವ್ವಾ-ಅಪ್ಪಾ ಇದ್ದೊರ ಹಂಗ ಸ್ಮಶಾನಕ್ಕ ಹೋಗ ಬಾರದಂತ ಹೇಳಿ” ಅಂತ ಬೈಸಿಗೊಂಡೇನಿ. ‘ಯಾಕ ಹೋಗ ಬಾರದು’ ಅಂತ ಕೇಳಿದರ ‘ಹೋಗ ಬಾರದಂದ್ರ ಹೋಗ ಬಾರದು, ಅದು ಶಾಸ್ತ್ರ, ಹಂಗ ಹೋದರ ಅವ್ವಾ ಅಪ್ಪಗ ಒಳ್ಳೇದ ಆಗಂಗಿಲ್ಲಾ’ ಅಂತ ಏನೇನೋ ಹೇಳಿ ಬಾಯಿ ಮುಚ್ಚಿಸಿ ಬಿಡೋರು.
ಅಲ್ಲಾ ಹಂಗ ನಾ ಎಷ್ಟೋ ವರ್ಷದಿಂದ ಮನ್ಯಾಗ ಹೇಳಲಾರದ ಸ್ಮಶಾನಕ್ಕ ಹೋಗಕೋತನ ಇದ್ದೇನಿ ಬಿಡರಿ, ಆದರ ಇನ್ನೂ ನಮ್ಮ ಅವ್ವಾ ಅಪ್ಪಾ ಗಟ್ಟೀನ ಇದ್ದಾರ ಆ ಮಾತ ಬ್ಯಾರೆ.
ಇನ್ನ ಅದರಾಗ ನಮ್ಮ ಪೈಕಿ ಅಗದಿ ನಮ್ಮ ಸ್ವಗೊತ್ರ-ಸ್ವಕುಟಂಬದವರ ಸತ್ತ ಬಿಟ್ಟರಂತೂ ಮುಗದ ಹೋತ, ಹತ್ತ- ಹನ್ನೆರಡ ದಿವಸ ಗಂಡಸರನ ಹಿಡದ ಈಡಿ ಮನಿ ಮಂದಿ ಕಡಿಗ್ಯಾದಂಗ. ಅದಕ್ಕ ಮೈಲಗಿ ಅಂತಾರಂತ. ಹಂಗ ನಮ್ಮಂದ್ಯಾಗ ಹುಟ್ಟಿದಾಗೂ ಮನಿ ಮಂದಿನ್ನ ಮುಟ್ಟಂಗಿಲ್ಲಾ, ಅದು ರಿದ್ದಿ. ಸತ್ತಾಗೂ ಮುಟ್ಟಂಗಿಲ್ಲಾ, ಅದು ಮೈಲಗಿ. ಮನ್ಯಾಗ ಹಬ್ಬಾ-ಹುಣ್ಣಮಿ ಇದ್ದಾಗ ‘ಮುಟ್ಟಿ-ಮುಟ್ಟಿ’ ಅಂತಾರಂತ ಅವರನ ಮುಟ್ಟಂಗಿಲ್ಲಲಾ, ಅದು ಮಡಿ. ತಿಂಗಳಿಗೆ ಮೂರ ದಿವಸ ಮೂಲ್ಯಾಗ ಚಾಪಿ ಹಿಡದ ತಂಬಗಿ ಡಬ್ಬ್ ಹಾಕ್ಕೊಂಡ ಒಂದ ವರ್ಷದ ಸುಧಾ, ತರಂಗ, ಗೃಹಶೋಭಾ ಹಿಡಕೊಂಡ ಕೂಡೊ ಹೆಂಡತಿನ್ನೂ ಮುಟ್ಟಂಗಿಲ್ಲಲಾ, ಅದು ಕಡಿಗಿ. ಇವ ಎಲ್ಲಾವಕ್ಕು ‘ಮುಟ್ಟಂಗಿಲ್ಲಾ’ ಕಾಮನ್ ಆದರ ಹೆಸರ ಮಾತ್ರ ಎಲ್ಲಾದಕ್ಕೂ ಬ್ಯಾರೆ – ರಿದ್ದಿ,ಮೈಲಗಿ, ಮಡಿ, ಕಡಿಗಿ. ನಮ್ಮಂದ್ಯಾಗ ಇದರಾಗೂ ಏನ ವೈವಿಧ್ಯತಾ ಅಂತೇನಿ.
ಮುಂದ ಒಂದ ಸರತೆ ನಮ್ಮ ಕಾಕಾ ಸತ್ತಾಗ ಹಂಗ ಆಗಿತ್ತ, ನಮಗೇಲ್ಲಾ ಹತ್ತ ದಿವಸ ಮೈಲಗಿ. ನಮಗ ಅಡಿಗೆ ಮಾಡಿ ಹಾಕೋರು ಸಹಿತ ಗತಿ ಇದ್ದಿದ್ದಿಲ್ಲಾ. ಪಾಪ ಮಾತಡಸಲಿಕ್ಕೆ ಬಂದವರ ನಮಗ ಅಡಿಗೆ ಮಾಡಿ ಹಾಕೋ ಪಾಳೆ ಬಂದಿತ್ತ. ಆ ಮಾತಾಡಸಲಿಕ್ಕೆ ಬರೊರ ೩,೫, ೭ನೇ ದಿವಸ ಇಷ್ಟ ಬರತಿದ್ದರು, ದಿವಸಾ ಬರತಿದ್ದಿಲ್ಲಾ. ಅದರಾಗ ಊರಿಂದ ಮಾತಡಸಲಿಕ್ಕೆ ಬಂದೋರು ಇಲ್ಲೆ ಊಟಾ ಮಾಡೋರು. ಅದು ಖಾಲಿ ಕೈಲೆ ಬರೋರ, ಊಟಾ ಸಹಿತ ಕಟಗೊಂಡ ಬರತಿದ್ದಿಲ್ಲಾ. ಇಲ್ಲೆ ನಂಬದ ನಮಗ ರಗಡ ಆಗಿತ್ತ ಹಂತಾದರಾಗ ಈ ಮಾತಡಸಲಿಕ್ಕೆ ಬರೋರ ಯಾಕರ ಬರತಾರೊ ಅನ್ನೊಹಂಗ ಆಗಿತ್ತ. ಕಡಿಕೆ ಅವರ ನಮ್ಮ ಪರಿಸ್ಥಿತಿ ನೋಡಿ ತಾವ ಮಾಡಿ ಹಾಕಿ ಹೋದರು ಆ ಮಾತ ಬ್ಯಾರೆ ಆದರ ಉಳದ ದಿವಸ ನಮ್ಮ ಹೊಟ್ಟಿ ಹಣೆಬರಹ ಹೊಯ್ಕೊ ಬಡ್ಕೊ, ಅದರಾಗ ಹೊಟೇಲನಾಗಿಂದ ತಂದ್ರ ನಮ್ಮವ್ವ ನಡೆಯಂಗಿಲ್ಲಾ ಅನ್ನೋಕಿ, ಪಾಪ ಸಣ್ಣ ಹುಡುಗುರು ಎಷ್ಟಂತ ಹಚ್ಚಿದ ಅವಲಕ್ಕಿ ಮಂಡಕ್ಕಿ ತಿಂತಾವ. ಅವಕ್ಕ ಅವರ ಅಜ್ಜ ಸತ್ತರೇನೂ, ಅಜ್ಜಿ ಸತ್ತರೇನೂ ‘ಮ್ಯಾಗಿ’ನ ಬೇಕ. ಕಡಿಕೆ ಮನಿ ಹೆಣ್ಣಮಕ್ಕಳಿಗೆ ಅಂದರ ಮಗಳಗೊಳಿಗೆ ಕೈಕಾಲ ಹಿಡಕೊಂಡ ‘ಹೆಂಗಂದರೂ ನಿಮಗ ಮೂರ ದಿವಸ ಇಷ್ಟ ಮೈಲಗಿ ಇರತದವಾ, ಇನ್ನೊಂದ ವಾರ ಇದ್ದ ನಮ್ಮ ಹೊಟ್ಟಿಗೆ ಇಷ್ಟ ಹಿಟ್ಟ ಹಾಕಿ ಹೋಗರಿವಾ. ಮುಂದ ಬಂಗಾರ ಹಿಸೆ ಮಾಡಬೇಕಾರ ಒಂದ ಗುಂಜಿ ಜಾಸ್ತಿ ಕೊಡ್ತೇವಿ’ ಅಂತ ದೈನಾಸ ಪಟ್ಟವಿ. ಎನ್ಮಾಡ್ತೀರಿ? ಹೊತ್ತ ಬಂದಾಗ ಕತ್ತಿ ಕಾಲೂ ಹಿಡಿಬೇಕಂತ, ಇನ್ನ ಇವರಂತು ಮನಿ ಹೆಣ್ಣಮಕ್ಕಳು.
ಆವಾಗ ಇನ್ನೊಂದ ಮಜಾ ಅಂದರ ನಮ್ಮ ಕಾಕಾನ ಸೊಸಿ ದಿಂದಾಗ ಇದ್ಲು, ಈಗೋ ಆಗೋ ಅನ್ನೊ ಹಂಗ ಇತ್ತ. ಅಕಿ ಎಲ್ಲೆ ಮೈಲಗ್ಯಾಗ ಹಡಿತಾಳೋ ಅಂತ ಎಲ್ಲಾರಿಗೂ ಸಂಕಟ ಬ್ಯಾರೆ ಹತ್ತಿತ್ತ. ಹಂತಾದರಾಗ ನಾ ನಮ್ಮವ್ವಗ
” ಈಗ ಮೈಲಗಿ ಒಳಗ ಅಕಸ್ಮಾತ ಅಕಿ ಹಡದರ ಮುಂದ ‘ರಿದ್ದಿ’ದ ಏನ ಗತಿವಾ?” ಅಂದೆ,
“ಏ, ದನಾಕಾಯವನ ನೀ ಏನೇನರ ಹುಚ್ಚುಚಾಕಾರ ಅಧಿಕ ಪ್ರಸಂಗತನದ ಮಾತಾಡ ಬ್ಯಾಡ, ಬಾಯಿ ಮುಚ್ಚಗೊಂಡ ಸುಮ್ಮನ ಕೂಡ” ಅಂದ್ಲು.
ಅಲ್ಲಾ ಇದರಾಗ ನಾ ಕೇಳಿದ್ದ ತಪ್ಪ ಏನದ ಹೇಳ್ರಿ, ಈಗ ನಮಗ ಆಲರೆಡಿ ಮೈಲಗಿ ನಡದದ, ಹಂತಾದರಾಗ ಅಕಿ ಹಡದರ ರಿದ್ದಿನೂ ಶುರು ಆಗ್ತದೊ ಹೆಂಗ? ಆವಾಗ ರಿದ್ದಿ ಶ್ರೇಷ್ಠೋ ಮೈಲಿಗೆ ಶ್ರೇಷ್ಠೋ? ನಾವ ಯಾವದನ್ನ ಪಾಲಸಬೇಕು ಅಂತ ನಾ ಕೇಳಿದ್ದೆ ಇಷ್ಟ. ಅಲ್ಲಾ ನಮಗು ಗೊತ್ತಾಗಬೇಕಲಾ ಮತ್ತ, ನಾಳೆ ನಮ್ಮ ಅವ್ವಾ-ಅಪ್ಪನ ಜನರೇಶನ್ ಇಲ್ಲದ ಕಾಲಕ್ಕ ಹಿಂತಾ ಸುಡಗಾಡ ಸಂಪ್ರದಾಯ ಕಾಯ್ಕೊಂಡ ಹೋಗೊ ಹು.ಸೂ. ಮಕ್ಕಳ ನಾವ ಅಲಾ ಅದಕ್ಕ ಕೇಳಿದ್ದೆ. ಇದರಾಗ ಒಂದ ಸ್ವಲ್ಪ ಅಕೆಡೆಮಿಕ್ ಇಂಟರೆಸ್ಟೂ ಇತ್ತ ಅನ್ನರಿ.
ಆದರ ನಮ್ಮವ್ವ ಹಂಗ ಸಿಟ್ಟಿಗೆದ್ದಿದ್ದ ಕೇಳಿ
“ನಿಂಗ ಗೊತ್ತಿದ್ದರ ಗೊತ್ತದ ಅಂತ ಹೇಳವಾ ಇಲ್ಲಾಂದರ ಇಲ್ಲಾ ಅಂತ ಹೇಳ, ಸುಳ್ಳ ಸಿಟ್ಟಿಗ್ಯಾಕ ಏಳ್ತಿ” ಅಂತ ನಾ ನಮ್ಮವ್ವಗ ಜೋರ ಮಾಡಿದೆ.
” ಏ, ಹಂಗ ಮೈಲಗಿ ಒಳಗ ರಿದ್ದಿ ನಡಿಯಂಗಿಲ್ಲಾ, ಮೈಲಗಿನ ಮೇಲು” ಅಂತ ಹೇಳಿದ್ಲು.
ಅಷ್ಟರಾಗ ನನ್ನ ಹೆಂಡತಿ ಒಂದ ಬಾಂಬ್ ಹಾಕಿದ್ಲ ನೋಡ್ರಿ, ನಮ್ಮವ್ವಗ ಸೈಡಿಗೆ ಕರದ ಅಕಿನ್ನ ಮುಟ್ಟಲಾರದ ವೈ ಫೈ ದಾಗ ನಮ್ಮವ್ವನ ಕಿವ್ಯಾಗ ಏನೋ ಹೇಳಿದ್ಲು. ನಾ ಎಲ್ಲೋ ನಮ್ಮ ಕಾಕನ ಸೋಸಿಗೆ ಬ್ಯಾನಿ ಶುರು ಆದ್ವು ಅನ್ಕೊಂಡೆ.
ನಮ್ಮವ್ವ “ಅಯ್ಯೊ, ನಮ್ಮವ್ವನ, ಭಾಳ ಶಾಣ್ಯಾಕಿ ಇದ್ದಿ ತೊಗೊ, ಬುದ್ಧಿ ಎಲ್ಲೆ ಇಟ್ಟಿ” ಅಂತ ಹಣಿ ಬಡ್ಕೊಂಡ್ ಮೈಲಗ್ಯಾಗಿನ ಎರಡ ಚಾಪಿ ಒಳಗ ಒಂದ ಚಾಪಿ ನನ್ನ ಹೆಂಡತಿ ಮಾರಿಗೆ ಒಗದ್ಲು. ಅದಕ್ಕ ನನ್ನ ಹೆಂಡತಿ “ನಾ ಏನ ಮಾಡಬೇಕರಿ ಅದೇನ ನನ್ನ ಕೈಯಾಗಿಂದಿನ” ಅಂತ ಇದ್ದ ಗಂಟಮಾರಿನ ಮತ್ತಿಷ್ಟ ಕಗ್ಗಂಟ್ ಮಾಡ್ಕೊಂಡ ಮಾಳಗಿ ಮ್ಯಾಲೆ ಹೋಗಿ ಬಿಟ್ಲು. ನಾ ಇದೇನ ಹೊಸಾ ಎಪಿಸೋಡಪಾ ಅಂತ ಕೇಳಿದರ ನನ್ನ ಹೆಂಡತಿ ಈಗ ಜಸ್ಟ ಕಡಿಗೆ ಆದ್ಲ ಅಂತ. ಅಂತ ಯಾಕ ಅಂದರ ಈ ವಿಷಯದಾಗ ಅಕಿ ಹೇಳಿದ್ದ ಖರೆ. ಹಂಗ ನಮ್ಮವ್ವ ಅಕಿ ಹೇಳಿದ್ದಕ್ಕ ಹೂಂ ಅನ್ನೊದ ಆ ವಿಷಯದಾಗ ಒಂದ, ಇಲ್ಲಾಂದರ ಅಕಿ ಹೇಳಿದ್ದ ಎಲ್ಲಾ ವಿಷಯಾನೂ ವಾರಿಗೆ ಹಚ್ಚಿ ನೋಡೆ ಬಿಡೋಕಿ.
ಹಕ್ಕ ಅವನೌನ ಈಕಿ ಏನ್ ಬ್ರೇಕ್ಕಿಂಗ ನ್ಯೂಸ್ ಕೊಟ್ಟಳಲೇ ಅಂತ ನಂಗ ಒಂಥರಾ ಖುಷಿ ಆತ. ಹೆಂಗಿದ್ದರೂ ಮೈಲಗಿ ನಡದಿದ್ವ, ನನ್ನ ಹೆಂಡತಿ ನನ್ನ ಜೊತಿ ಇರೋದು ಅಷ್ಟರಾಗ ಇತ್ತ, ಇನ್ನ ಈ ಮೈಲಗಿ ಒಳಗ ಇಕಿ ಮೂರ ದಿವಸದ ಕಡಿಗೀನೂ ಹೋತಲಾ ಅಂತ ನಾ ಮತ್ತ ನಮ್ಮವ್ವನ ಮಾರಿ ನೋಡಿ ಅಂದೆ
“ಈಗ ಹೆಂಗವಾ ಮತ್ತ, ಮೈಲಗಿ ಒಳಗ ಕಡಿಗಿ ಆದರ ಹೆಂಗ ಮುಂದ? ಇದ್ದ ಮೈಲಗಿ ಮಂದಿ ಒಳಗ ಅಕಿನ್ನ ಮೂರ ದಿವಸ ಕೂಡೋಸೋದೊ ಇಲ್ಲಾ ಮೈಲಗ್ಯಾಗ ಕಡಿಗಿ ಆದರ ಕಡಿಗಿ ಕಡಿಗೀನ ಅಲ್ಲೊ” ಅಂದೆ.
” ಏ, ರಂಡೆಗಂಡ ನೀ ಒಂದ ಸ್ವಲ್ಪ ಬಾಯಿ ಮುಚಗೊಂಡ ಸುಮ್ಮನ ಕೂಡ, ನೀ ಮೂರ ದಿವಸ ಅಕಿ ಹತ್ತರ ಹಾಯಿಬ್ಯಾಡ, ಇನ್ನ ನಮ್ಮ ಮೈಲಗಿ ಅಡಿಗಿ ಒಳಗ ಅಕಿಗೆ ಒಂದ ನಾಲ್ಕ ತುತ್ತ ಅಲ್ಲೆ ಮಾಳಗಿ ಮ್ಯಾಲೆ ಮುತ್ತಲ ಎಲಿ ಒಳಗ ಹಾಕಿ ಬಾ” ಅಂತ ಸಿಟ್ಟಲೇ ಒದರಿದ್ಲು.
ಅಕಿ ರಂಡೆಗಂಡ ಅಂತ ಬೈದಿದ್ದ ನನಗಲ್ಲ ನನ್ನ ಹೆಂಡತಿಗಂತ ನಿಮಗ ಬೈಗಳದ ಮ್ಯಾಲೆ ಗೊತ್ತಾಗಿರಬಹುದು. ಆದರ ನನಗು ಭಾಳ ಇಂಟರೆಸ್ಟ ಇತ್ತು ಈಗ ನಮ್ಮವ್ವ ಏನ ಮಾಡತಾಳ? ಹಿಂತಾ ಕ್ರೈಸಿಸ್ ಮ್ಯಾನೇಜಮೆಂಟ ನಮ್ಮ ಸಂಪ್ರಾದಾಯದಾಗ ಹೆಂಗ ಮ್ಯಾನೆಜ್ ಮಾಡತಾರ ಅಂತ ನೋಡೋದು, ಅದಕ್ಕ ಅಕಿ ಕಾಲ ಕೆದರಿ ಕೇಳಿದ್ದೆ ಇಷ್ಟ.
ಇರಲಿ ಒಟ್ಟ ಈ ರಿದ್ದಿ, ಮೈಲಗಿ, ಮಡಿ ಮತ್ತ ಲಾಸ್ಟಿಗೆ ಕಡಿಗಿ…. ಅಲ್ಲಾ ನಡಬರಕ ಯಾವಾಗ ಬೇಕ ಆವಾಗ ಅಡ್ಡಗಾಲ ಹಾಕಲಿಕ್ಕೆ ಕಡಿಗಿ, ಇವೇಲ್ಲಾ ಒವರಲ್ಯಾಪ ಆದಾಗ ಹೆಂಗ ಮಾಡಬೇಕು ಅಂತ ವಿಚಾರ ಮಾಡಿದೆ ಇಷ್ಟ. ಆದರ ಒಂದ ಅಂತು ಸ್ಪಷ್ಟ ಆತು, ಮನ್ಯಾಗ ರಿದ್ದಿ ಇರಲಿ ಮೈಲಗಿ ಇರಲಿ ಕಡಿಗಿ ಯಾವಾಗಲೂ ಕಡಿಗಿನ…
ಹಂಗ ರಿದ್ದಿ ಒಳಗ ಮೈಲಗಿ ಬಂದರ ಮೈಲಗಿ ಮೇಲು. ಮೈಲಗಿ ಒಳಗ ರಿದ್ದಿ ಬಂದರ ರಿದ್ದಿ ರದ್ದಿಗೆ….
ಅಲ್ಲಾ ಹಿಂತಾವೇಲ್ಲಾ ಗೊತ್ತಿರಬೇಕರಿ, ಅದ ಹೇಳಿದ್ನೇಲ್ಲಾ ನಾಳೆ ನಮ್ಮ ಅವ್ವಾ-ಅಪ್ಪಾ ಇಲ್ಲದ ಕಾಲಕ್ಕ ಈ ಸಂಪ್ರದಾಯ ನಾವ ದುಗಿಸಿಕೊಂಡ ಹೋಗೊರು ಅಂತ, ಅದಕ್ಕ ಇಷ್ಟೇಲ್ಲಾ ತಿಳ್ಕೋಬೇಕಾತ. ಇರಲಿ, ಎಲ್ಲಾ ಹಳೇ ಸಂಪ್ರದಾಯ, ಹಂಗ ಬಿಡಲಿಕ್ಕೂ ಬರಂಗಿಲ್ಲಾ ಎಲ್ಲಿ ತನಕ ನಂಬದ ನಡಿತದ ನಡಿಸಿಗೋತ ಹೋದಾ. ನಾಳೆ ನಾವಿಲ್ಲದ ಕಾಲಕ್ಕ ನಮ್ಮ ಮಕ್ಕಳ ಏನರ ಹಾಳ ಗುಂಡಿ ಬೀಳವಲ್ಲರಾಕ.
ಮತ್ತೇಲ್ಲರ ನೀವ ನನ್ನ ಲೇಖನಾ ಓದಿದ ಮ್ಯಾಲೆ ಬಚ್ಚಲಕ್ಕ ಹೋಗಿ ಕೈಕಾಲ ತೊಕ್ಕಂಡ ಬಂದ-ಗಿಂದಿರಿ. ಹಂಗ ಸಾಹಿತ್ಯಕ್ಕ ಏನ ಮಡಿ-ಮೈಲಗಿ ಇರಂಗಿಲ್ಲಾ. ಅಲ್ಲಾ ನಾ ಬರದಿದ್ದ ಏನ ದೊಡ್ಡ ಸಾಹಿತ್ಯನೂ ಅಲ್ಲ ಬಿಡ್ರಿ, ಯಾರರ ಸಾಹಿತ್ಯಿಕ ಮಡಿವಂತರ ನನ್ನ ಸಾಹಿತ್ಯ ಓದಿ ಬಿಟ್ಟರ ಆಮ್ಯಾಲೆ ಸ್ನಾನ ಮಾಡೇ ಮಾಡ್ತಾರ ಆ ಮಾತ ಬ್ಯಾರೆ. ಆದ್ರ ನಾ ಮಾತ್ರ ನನಗ ಅನಿಸಿದ್ದನ್ನ ಮುಚ್ಚು-ಮರಿ, ಮಡಿ-ಮೈಲಗಿ ಮಾಡಲಾರದ ಬರಿಬೇಕು ಅಂತ ಬರದೆ ಇಷ್ಟ.