ಇದ ಒಂದ ಎಂಟ-ಹತ್ತ ತಿಂಗಳ ಹಿಂದಿನ ಮಾತ ಇರಬೇಕು, ಸುಮ್ಮನ ಪೇಪರ ಹೆಡಲೈನ್ಸ್ ಓದ್ಕೋತ ಕೂತಿದ್ದ ನನ್ನ ಹೆಂಡತಿ ಒಮ್ಮಿಂದೊಮ್ಮಿಲೆ
“ರ್ರಿ, ನಂಗೂ ಮಂಗಳ ಗ್ರಹಕ್ಕ ಕರಕೊಂಡ ಹೋಗರಿ” ಅಂದ್ಲು. ನಂಗ ಒಮ್ಮಿಕ್ಕಲೇ ನನ್ನ ಬುಡಕಿನ ಭೂಮಿ ಗ್ರಾವಿಟೇಶನಲ್ ಫೋರ್ಸ್ ಕಳಕೊಂಡಂಗ ಆಗಿ ಜೋಲಿ ಹೋಗಲಿಕತ್ತ.
“ಲೇ, ಹುಚ್ಚಿ, ಅದು ಮಂಗಳ ಗ್ರಹ, ನಿನ್ನ ಗ್ರಹಶೋಭಾ, ಗ್ರಹಲಕ್ಷ್ಮಿ ಎಕ್ಸಿಬಿಶನ್ ಅಲ್ಲಾ, ಏನೇನರ ಮಾತಾಡ್ತಿಯಲಾ” ಅಂತ ನಾ ಅಂದರ.
“ಅಯ್ಯ, ನಂಗ ಗೊತ್ತರಿ. ಇಲ್ಲೆ ನೋಡ್ರಿ, ಮಂಗಳ ಗ್ರಹಕ್ಕ ಹೋಗೊರದ ರಿಜೆಸ್ಟ್ರೇಶನ್ ಮಾಡಸಲಿಕತ್ತಾರ, ನಂಬದು ಮಾಡಸರಿ” ಅಂತ ಪೇಪರ ತೊರಿಸಿದ್ಲು. ಆ ಪೇಪರನಾಗ ’ಒನ್ ವೇ ಟ್ರಿಪ್ ಟು ಮಂಗಳ ಗ್ರಹ ೨೦೨೩’ ಅಂತ ಒಂದ ದೊಡ್ಡ ಆರ್ಟಿಕಲ್ ಬಂದಿತ್ತ.
ಅಲ್ಲಾ, ನಾ ಎಲ್ಲೆ ಮಂಗಳ ಗ್ರಹಕ್ಕ ಹೊಂಟೇನಿ ಇಕ್ಕಿನ್ನ ಜೊತಿಗೆ ಕರಕೊಂಡ ಹೋಗಲಿಕ್ಕೆ, ಏನೋ ಸಂಸಾರದಾಗ ಬ್ಯಾಸರಾದಾಗೊಮ್ಮೆ
’ಸಾಕಪಾ ಜೀವನಾ, ದೇವರ ಈ ಭೂಮಿ ಮ್ಯಾಲೆ ಇನ್ನ ಇರಬಾರದು’ ಅಂತಿರ್ತೇನಿ ಅಂತ ನಾ ಎಲ್ಲೋ ಖರೇನ ಭೂಮಿ ಬಿಟ್ಟ ಮಂಗಳ ಗ್ರಹಕ್ಕ ಹೋಗ್ತೇನಿ ಅಂತ ತಿಳ್ಕೊಂಡ್ತೋ ಏನೋ ಈ ಖೋಡಿ ಅಂತ ನಾ ಅಕಿಗೆ
“ಅಲ್ಲಲೇ… ನಾನs ಹೊಂಟಿಲ್ಲಾ ಇನ್ನ ನಿಂಗೇನ ತಲಿ ಕರಕೊಂಡ ಹೋಗ್ಲಿ” ಅಂದೆ, ಅದಕ್ಕ ಅಕಿ
“ನೀವು ಹೋಗರಿ ಬಿಡ್ರಿ ನಾ ಅಂತೂ ಹೋಗೊಕಿ, ನಂದsರ ಟಿಕೇಟ ಮಾಡಸರಿ” ಅಂದ್ಲು. ಏನ್ಮಾಡ್ತಿರಿ?
ನಾ ಅಕಿಗೆ ಮಾತ ಮಾತಿಗೆ ’ನೀ ಭೂಮಿಗೆ ಭಾರ ಆಗಿ ನೋಡ’ ಅನ್ನೊದನ್ನ ಭಾಳ ಸಿರಿಯಸ್ ತೊಗೊಂಡಿರಬೇಕು ಅನಸಲಿಕತ್ತ.
ಅಲ್ಲಾ ಆದರು ಈ ವಿಜ್ಞಾನಿಗಳಿಗೆ ಬ್ಯಾರೆ ಏನ ಕೆಲಸ ಇಲ್ಲೇನ್ ಅಂತೇನಿ, ನಮಗ ಛಂದಾಗಿ ಭೂಮಿ ಮ್ಯಾಲೆ ಬದಕಲಿಕ್ಕೆ ಆಗವಲ್ತು ಹಂತಾದರಾಗ ಇವರ ಮಂಗಳ ಗ್ರಹದಾಗ ಸೆಟ್ಲ್ ಮಾಡೋ ವಿಚಾರ ಮಾಡಲಿಕತ್ತಾರ. ಅದೇನೋ ಮಾರ್ಸ್ ಒನ್ ಪ್ರೊಜೆಕ್ಟ ಅಂತ, ಒನ್ ವೇ ಟ್ರಿಪ್ ಟು ಮಂಗಳ ಗ್ರಹ ಅಂತ, ಜಗತ್ತಿನಾಗ ಈಗಾಗಲೇ ಎರಡ ಲಕ್ಷ ಮಂದಿ ರೆಜಿಸ್ಟರ ಮಾಡ್ಯಾರ ಅಂತ ಅದರಾಗ ನಮ್ಮ ದೇಶದವರ ಒಂದ ಇಪ್ಪತ್ತ ಸಾವಿರ ಜನಾ ಇದ್ದಾರಂತ. ಅಲ್ಲಾ ಹಂಗ ನಮ್ಮ ದೇಶದ್ದ ಇಪ್ಪತ್ತ ಸಾವಿರ ಮಂದಿ ಒಳಗ ೧೬೭೮೯ ಗಂಡಂದರ ಇದ್ದಾರಂತ, ಹೆಂಡ್ತಿ ಕಾಟಾ ತಪ್ಪಿಸಿಕೊಂಡ ಭೂಮಿ ಬಿಟ್ಟ ಮಂಗಳ ಗ್ರಹಕ್ಕ ಹೋಗಿ ಸೆಟ್ಲ ಆಗಲಿಕ್ಕೆ.
ಅಲ್ಲಾ ಹಂಗ ನಾ ಏನರ ಹೋಗೊದ ಇತ್ತಂದರ ಇಕಿನ್ಯಾಕ ಕರಕೊಂಡ ಹೋಗಲಿರ ಮಾರಾಯರ, ಇಲ್ಲೇ ಭೂಮಿ ಮ್ಯಾಲೆ ಇಕಿ ಕೈಯಾಗ ಸಿಕ್ಕ ಅನುಭವಿಸಿದ್ದ ಸಾಕಾಗಿಲ್ಲಾ? ಇನ್ನ ಮಂಗಳ ಗ್ರಹಕ್ಕ ಶನಿ ಕಟಗೊಂಡ ಹೋಗಲ್ಯಾ?
ನಾ ಅಕಿಗೆ ರಮಿಸಿ ತಿಳಿಸಿ ಹೇಳಿದಾರತು ಅಂತು
“ನೋಡಿಲ್ಲೆ, ನಾ ಮುಂದ ಏಳೇಳ ಜನ್ಮಕ್ಕು ನೀನ ನನ್ನ ಹೆಂಡತಿ ಆಗಬೇಕು ಅಂತ ಹೋದವರ್ಷ ನವರಾತ್ರಿ ಒಳಗ ಬನಶಂಕರಿಗೆ ಹೋದಾಗ ಬೇಡ್ಕೊಂಡೇನಿ, ಇನ್ನ ನೀ ಮಾರ್ಸದಾಗ ಹೋಗಿ ಸೆಟ್ಲ ಆದರ ನಾ ಮುಂದಿನ ಜನ್ಮದಾಗ ಬ್ಯಾರೆಕಿನ್ನ ಲಗ್ನಾ ಮಾಡ್ಕೋಬೇಕಾಗ್ತದ, ನೋಡ ಏನ ಮಾಡ್ತೀ” ಅಂದೆ.
“ಏ, ಹಂಗರ ನಾ ಮೊದ್ಲ ಹೋಗ್ತೇನಿ, ಹೆಂಗಿದ್ದರು ಮಾರ್ಸದಾಗ ಪುನರಜನ್ಮ ಇಲ್ಲ, ಅದೇನಿದ್ದರು ಈ ಸುಡಗಾಡ ಭೂಮಿ ಮ್ಯಾಲೆ ಇಷ್ಟ. ನಿಮ್ಮನ್ಯಾರ ಏಳೇಳ ಜನ್ಮಕ್ಕ ಕಟಗೊಂಡ ಅನುಭವಸಬೇಕು” ಅಂತ ರೆಡಿ ಆಗೇ ಬಿಟ್ಟಳು.
ಹಂಗ ನಾನು ಹೋದರ ಹೋಗಲಿ ಬಿಡ ಶನಿ ಮಂಗಳಕ್ಕ ನಾ ಇಲ್ಲೆ ಭೂಮಿ ಮ್ಯಾಲೆ ಆರಾಮ ಇದ್ದಾರತು ಅಂತ ವಿಚಾರ ಮಾಡಿದೆ, ಅಲ್ಲಾ ಹಂಗ ಒಮ್ಮೆ ಅಕಿ ಹೋದ್ಲ ಅಂದರ ಮತ್ತ ವಾಪಸಂತೂ ಬರಂಗಿಲ್ಲಾ. ನಾನು ಪೀಡಾ ಹೋತ ಅಂತ ಸಮಾಧಾನದಿಂದ ಇರಬಹುದು. ಅದು ಈ ಜನ್ಮಕ್ಕ ಇಷ್ಟ ಅಲ್ಲಾ ಮುಂದಿನ ಏಳೇಳ ಜನ್ಮಕ್ಕೂ ಮತ್ತ, ಯಾಕಂದರ ಇಕಿ ಒಮ್ಮೆ ಮಂಗಳ ಗ್ರಹಕ್ಕ ಹೋಗಿ ಮುಕ್ತಿ ಹೊಂದಿದ್ಲಂದರ ಮುಂದಿನ ಜನ್ಮದಾಗ ಅಕಿ ಭೂಮಿ ಮ್ಯಾಲೆ ಎಲ್ಲೆ ಹುಟ್ಟತಾಳ ತಲಿ.
ಆದರ ಅಕಿನ್ನ ಮಂಗಳ ಗ್ರಹಕ್ಕ ಕಳಸಬೇಕಂದರ ೫೦ ಲಕ್ಷ ಬೇಕ ಅಂದರು…ಅಯ್ಯ್.. ಅಷ್ಟ ರೊಕ್ಕ ನನ್ನ ಕಡೆ ಇದ್ದರ ಇಷ್ಟ್ಯಾಕ ಆಗತಿತ್ತು, ಮ್ಯಾಲೆ ನನ್ನ ಕಡೆ ಅಷ್ಟ ಅದ ಅಂತ ಗೊತ್ತಾದರ ನನ್ನ ಹೆಂಡತಿನರ ಯಾಕ ನನ್ನ ಬಿಟ್ಟ ಮಂಗಳ ಗ್ರಹಕ್ಕ ಹೋಗೊ ವಿಚಾರ ಮಾಡ್ತಿದ್ಲು ಅಂತ ಅನ್ಕೊಂಡ ಅಕಿಗೆ
“ಇಲ್ಲಾ, ಹಂಗ ನಂಗೇನ ನಿನ್ನ ಮಂಗಳ ಗ್ರಹಕ್ಕ ಕಳಸಬಾರದಂತ ಇಲ್ಲಾ, ಆದರ ನನ್ನ ಕಡೆ ಸದ್ಯೇಕ ಅಷ್ಟ ರೊಕ್ಕ ಇಲ್ಲಾ, ಅದಕ್ಕ ಈಗ ರೊಕ್ಕ ಕೂಡಿಸಿ ಇಟಗೋತೇನಿ, ಇನ್ನೊಂದ ಹತ್ತ-ಇಪ್ಪತ್ತ ವರ್ಷಕ್ಕ ಮತ್ತ ಯಾರರ ಶನಿ ಗ್ರಹಕ್ಕ ಕರಕೊಂಡ ಹೋಗೊರ ಸಿಗತಾರ, ಅಲ್ಲೇ ಹೋಗಲಿಕ್ಕೆ ನಿಂಗ ಕನ್ಸಿಶನ್ ಸಿಕ್ಕರು ಸಿಗಬಹುದು” ಅಂತ ತಿಳಿಸಿ ಹೇಳಿ ಸಮಾಧಾನ ಮಾಡೋದರಾಗ ನಂಗ ರಗಡ ಆತ….
ಅನ್ನಂಗ ಯಾರರ ಶನಿ ಗ್ರಹಕ್ಕ ಕರಕೊಂಡ ಹೋಗೊರಿದ್ದರ ಹೇಳ್ರಿಪಾ ಮತ್ತ, ನಮ್ಮ ಮನೇಯವರು ಬರ್ತಾರ ಅಂತ. ಅದಕ್ಕ ಬೇಕಾದಷ್ಟ ರೊಕ್ಕ ಆಗಲಿ, ಕಿಡ್ನಿ ಒತ್ತಿ ಇಟ್ಟಾದರು ಅಡ್ಡಿಯಿಲ್ಲಾ ನನ್ನ ಹೆಂಡತಿನ್ನ ಶನಿ ಗ್ರಹಕ್ಕ ಕಳಸ್ತೇನಿ ಮತ್ತ.