ರ್ರಿ, ನಂದು ಒಂದ ಮೇಣದ ಮೂರ್ತಿ ಮಾಡಸರಿ….

ಇದ ಮೊನ್ನೆ ಮೂರ ದಿವಸದ ಹಿಂದ ನನ್ನ ಹೆಂಡತಿ ಅನಿವರ್ಸರಿ ಟೈಮನಾಗಿನ ಸುದ್ದಿ, ಹಂಗ ಅದ ನಂದು ಅನಿವರ್ಸರಿನ ಖರೆ, ಆದರ ವರ್ಷಾ ಸೆಲೆಬ್ರೇಶನ್ ಮಾಡೊಕಿ ಅಕಿ, ವರ್ಷಾನ ಗಟ್ಟಲೇ ಸಫರ್ ಆಗೋಂವಾ ನಾ. ಹಿಂಗಾಗಿ ನಾ ಅನಿವರ್ಸರಿ ಬಗ್ಗೆ ಭಾಳ ತಲಿಕೆಡಸಿಗೊಳ್ಳಿಕ್ಕೆ ಹೋಗಂಗಿಲ್ಲಾ.
ಅವತ್ತ ಪುಣ್ಯಾ ಯಾಕೊ ನಂಗ ಎಚ್ಚರಾಗೊ ಪುರಸತ್ತ ಇಲ್ಲದ ನಂಬದ ಅನಿವರ್ಸರಿ ಅಂತ ನೆನಪಾತ ಹಿಂಗಾಗಿ ಬಾಜುಕ ಮಲ್ಕೊಂಡ ಹೆಂಡತಿನ್ನ ಗಲ್ಲಾ ತಟ್ಟಿ ಎಬಿಸಿ ’ಹ್ಯಾಪಿ ಅನಿವರ್ಸರಿ ಡಾರ್ಲಿಂಗ್’ ಅಂತ ಅಂದೆ, ಅಕಿ ನಿದ್ದಿ ಗಣ್ಣಾಗ ’ಥ್ಯಾಂಕ್ಯು’ ಅಂತ ನಂಗ ತಿರಗಿ ’ಸೇಮ ಟು ಯು’ ಅಂತನೂ ಅನದ ’ಅನಿವರ್ಸರಿಗೆ ಏನ ಕೊಡಸ್ತೀರಿ’ ಅಂದ್ಲು. ಹಕ್ಕ ಇದೇನಿದ ಮುಂಜ ಮುಂಜಾನೆ ಎದ್ದ ’ಡಾರ್ಲಿಂಗ’ ಅಂದದ್ದ ತಪ್ಪಾತಲಾ ಅನಸಲಿಕತ್ತ, ಅಲ್ಲಾ ನಂದೂ ಅನಿವರ್ಸರಿ ಇವತ್ತ ಅಂತ ಅಕಿಗೆ ನೆನಪರ ಅದನೋ ಇಲ್ಲೊ, ತಂದ ಒಂದ ಅಂತ ತಿಳ್ಕೊಂಡ ಡೈರಕ್ಟ ಗಿಫ್ಟಗೆ ಬಂದಳಲಾ ಅಂತ ಅನಸ್ತ. ಆದರೂ ಇಕಿ ಏನ ಒಂದ್ಯಾರಡ ಕ್ಯಾಡಬರಿಜ್ ಚಾಕಲೇಟ ಕೇಳಬಹುದು ಅಂತ
“ಏ, ಏನಬೇಕ ಹೇಳ ನಿನಗ, ನೀ ಕೇಳೋದ ಹೆಚ್ಚೊ ನಾ ಕೊಡಸೋದ ಹೆಚ್ಚೊ” ಅಂತ ಅಂದ ಬಿಟ್ಟೆ.
ನಾ ದೊಡ್ಡಿಸ್ತನ ಬಡದ ಹಂಗ ಅಂದದ್ದ ತಪ್ಪ ಆತ ನೋಡ್ರಿ, ಅಕಿ ಏನ ಕೇಳಬೇಕ ಹೇಳ್ರಿ, ಹಂಗ ಜಗತ್ತಿನಾಗ ಯಾ ಹೆಂಡ್ತಿನೂ ಇನ್ನು ತನ್ನ ಅನಿವರ್ಸರಿಗೆ ಕೇಳಲಾರದ್ದನ್ನ ಕೇಳಿದ್ಲು.
“ರ್ರಿ ಆ ಮೆಡಮ್ ತುಸ್ಸೊಡ್ಸ್ (madame tussauds wax museum)ಒಳಗ ನಂದು ಒಂದ ಐಶ್ವರ್ಯರಾಯದು, ಸಲ್ಮಾನ ಖಾನಂದು, ಸಚಿನ ತೆಂಡುಲ್ಕರಂದು ಮೇಣದ ಮೂರ್ತಿ ಮಾಡಿಸ್ಯಾರಲಾ ಹಂತಾದ ಮಾಡಸರಿ” ಅಂದ್ಲು. ನಾ ಅಕಿ ಇನ್ನು ನಿದ್ದಿ ಗಣ್ಣಾಗ ಇದ್ದಾಳೊ ಇಲ್ಲೊ ಖರೇನ ಎದ್ದಾಳೊ ಅಂತ ಮತ್ತೊಂದೆರಡ ಸರತೆ ಜೋರಾಗಿ ಗಲ್ಲಾ ಚಿವಟಿ ತಟ್ಟಿದೆ. ಹಂಗ ಅಗದಿ ಅಕಿ ನಿಚ್ಚಳಾಗಿನ ಕೇಳಿದ್ಲು, ನಾ ಅನ್ಕೊಂಡಂಗ ಕನಸಿನಾಗ ಏನ ಕನವರಸಲಿಕತ್ತಿದ್ದಿಲ್ಲಾ.
“ಲೇ, ನೀ ಏನ ನಿನ್ನೆ ರಾತ್ರಿ ಭಾಂಗ ಕುಡದ ಮಲ್ಕೊಂಡಿದ್ದೇನ, ಅಲ್ಲಲೇ ನೀ ಏನ ಸೆಲಿಬ್ರಿಟಿನಾ ಇಲ್ಲಾ ಸೆಲೆಬ್ರಿಟಿ ಹೆಂಡ್ತಿನಾ? ನಿಂದೂ ಮೇಣದ ಗೊಂಬಿ ಮಾಡಲಿಕ್ಕೆ, ಭಾಳ ಶಾಣ್ಯಾಕಿದ್ದಿ ತೊಗೊ,ಏನೋ ಪಾಪ ಅನಿವರ್ಸರಿ ಅಂತ ಏನಬೇಕ ಹೇಳ ಅಂದರ ಈ ಪರಿ ಕೇಳೋದ ಎಲ್ಲೇರ” ಅಂತ ನಾ ಬೈದ ಹಾಸಗಿಂದ ಎದ್ದೆ.
“ಅಯ್ಯ, ನಿಮ್ಮ ಕೈಲೆ ಆಗದಿದ್ದರ ಯಾಕ ದೊಡ್ಡಿಸ್ತನ ಮಾಡಿ ’ಏನಬೇಕ ಹೇಳ ನಿನಗ, ನೀ ಕೇಳೋದ ಹೆಚ್ಚೊ ನಾ ಕೊಡಸೋದ ಹೆಚ್ಚೊ’ಅಂತ ಅಂದರಿ” ಅಂತ ಗಂಟ ಮಾರಿ ಮಾಡ್ಕೊಂಡ ಅಕಿನು ಎದ್ಲು.
ಅಲ್ಲಾ ತಾ ನೋಡಿದರ ಕರ್ಪೂರದ ಗೊಂಬಿ ಇದ್ದಂಗ ಇದ್ದಾಳ ಹತ್ತರ ಹೋದರ ಸಾಕ ಭಗ್ ಅಂತ ಉರಿತಾಳ ಅಕಿದ ಮೇಣದ ಮೂರ್ತಿ ಮಾಡಸಬೇಕಂತ. ಈ ಹೆಂಡಂದರಿಗೆ ಏನೇನ ಆಶಾ ಇರ್ತಾವ ನೋಡ್ರಿ.ಅಲ್ಲಾ, ಎಲ್ಲಾ ಬಿಟ್ಟ ಇಕಿಗೆ ಅದ್ಯಾಕ ತಲ್ಯಾಗ ಬಂತು ಅಂತೇನಿ.
ಹಂಗ ನಾ ಮೆಡಮ್ ತುಸ್ಸೊಡ್ಸ್ ವ್ಯಾಕ್ಸ ಮ್ಯೂಸಿಯಮ್ ಬಗ್ಗೆ ಕೇಳಿದ್ದೆ ಆದರ ಅದರ ಬಗ್ಗೆ ಡಿಟೇಲ್ಸ್ ಗೊತ್ತತ್ತಿದ್ದಿಲ್ಲಾ, ಯಾರ ಇಕಿ ಮೆಡಮ್, ನಮ್ಮ ಮೆಡಮ್ ಅಕಿ ಬಗ್ಗೆ ಇಷ್ಟ ತಲಿಕೆಡಸಿಗೊಂಡಾಳಲಾ ಅಂತ ಅಕಿ ಹಿಸ್ಟರಿ ತಗಿಲಕತ್ತೆ.
ಮೆಡಮ್ ತುಸ್ಸೊಡ ಅಂತ ಖರೇನ ಒಬ್ಬೊಕಿ ಇದ್ಲಂತ. ಅಕಿ ಹೆಸರು Madame Anna Maria Tussaud (AKA Marie). ಇಕಿ ಡಾ.ಕರ್ಟಿಸ್ ಅನ್ನೊನ ಮನ್ಯಾಗ ಕೆಲಸದಕಿ ಆಗಿದ್ಲಂತ. ಆ ಡಾಕ್ಟರ ದೇಹದ ಭಾಗಗಳ ಮಾಡೇಲ್ (anatomy) ವ್ಯಾಕ್ಸಲೇ ಮಾಡತಿದ್ದನಂತ. ಇಕಿ ಅವನ ಕಡೆಯಿಂದ ವ್ಯಾಕ್ಸಲೇ ಮಾಡೇಲ್ ಮಾಡೋದ ಕಲತ ಮುಂದ ಬರೇ ದೇಹದ ಅಂಗಾಗಳನ್ನ ಮಾಡಿದರೇನ ಫಾಯದೇ ಇಲ್ಲಾ ಅಂತ ಇಡಿ ದೇಹದ್ದ ವ್ಯಾಕ್ಸ ಮಾಡೇಲ್ ಮಾಡಲಿಕ್ಕೆ ಶುರು ಮಾಡಿದ್ಲಂತ. ಕಡಿಕೆ ಸಾಯೊಕಿಂತ ಮುಂಚೆ ತಂದು ಒಂದ ವ್ಯಾಕ್ಸ ಮಾಡೇಲ್ ಮಾಡಿ ಇಟ್ಟ ಸತ್ತಳಂತ.
ಹಿಂಗ ಅಕಿ ಮಾಡಿದ್ದ ವ್ಯಾಕ್ಸ ಮಾಡೇಲ್ಸ್ ಎಲ್ಲಾ ವರ್ಲ್ಡ ಫೇಮಸ್ ಆಗಿ ಜಗತ್ತಿನಾಗ ಒಂದ ಹದಿನೇಳ ಕಡೆ ಇವತ್ತ ಮೆಡಮ್ ತುಸ್ಸೊಡ್ಸ್ ವ್ಯಾಕ್ಸ ಮ್ಯೂಸಿಯಮ್ ಆಗ್ಯಾವ. ಅಕಿ ಸತ್ತ ಮ್ಯಾಲೂ ಆ ಮ್ಯೂಸಿಯಮದವರ ಫೇಮಸ ಇದ್ದೊರದ ಸ್ಟ್ಯಾಚು ಮಾಡ್ಕೊತ ಹೊಂಟಾರ. ಇನ್ನ ಈ ಮ್ಯೂಸಿಯಮದವರದ ಒಂದಿಷ್ಟ ಮಜಾ – ಮಜಾ ಕಥಿ ಅವ, ಅವನ್ನ ಕೇಳ್ರಿಲ್ಲೆ.
೨೦೦೮ರಾಗ ಒಬ್ಬ ನಾಜಿ ವಿರೋಧಿ ಬರ್ಲಿನ್ ಮೆಡಮ್ ತುಸ್ಸೊಡ್ಸ ವ್ಯಾಕ್ಸ ಮ್ಯೂಸಿಯಮಗೆ ಹೊಕ್ಕ ಹಿಟ್ಲರಂದ ರುಂಡಾ ಕಟ್ಟ ಮಾಡಿ ಬಿಟ್ಟನಂತ. ಏನ್ಮಾಡ್ತೀರಿ, ಅವಂಗ ಹಿಟ್ಲರನ ಮ್ಯಾಲೆ ಸಿಟ್ಟ ಇತ್ತ, ಅದರಾಗ ಹಿಟ್ಲರ ಅಂತೂ ಸತ್ತಿದ್ದಾ ಹಿಂಗಾಗಿ ಇಂವಾ ಅವನ ಸ್ಟ್ಯಾಚುದ್ದ ರುಂಡಾ ಹಾರಿಸಿ ಬಿಟ್ಟ. ಅಲ್ಲಾ, ಹಂಗ ಇದ ಗುಡ್ ಐಡಿಯಾ ನಾವು ನಮ್ಮ ಹೆಂಡತಿದ ಒಂದ ವ್ಯಾಕ್ಸ ಮಾಡೇಲ ಮಾಡಿ ಎಲ್ಲಾ ಸಿಟ್ಟ ಅದರ ಮ್ಯಾಲೆ ತಿರಿಸಿಗೊಳ್ಳಬಹುದು ಬಿಡ್ರಿ…ಇರಲಿ.
ಇನ್ನೊಂದ ಮಜಾ ಅಂದ್ರ ಈ ವ್ಯಾಕ್ಸ್ ಮಾಡೇಲ್ ಏನ ಮಾಡ್ತಾರಲಾ ಇದನ್ನ ಇವರು ಇದ್ದದ್ದ ಸೈಜ ಕಿಂತಾ ಎರಡ ಪರ್ಸೆಂಟ್ ಜಾಸ್ತಿ ಮಾಡತಾರಂತ ಯಾಕ ಅಂದರ ಆಮ್ಯಾಲೆ ಆ ವ್ಯಾಕ್ಸ್ ಶ್ರಿಂಕ್ ಆಗಿ ಕರೆಕ್ಟ ಆಗತದ ಅಂತ..ಅಲ್ಲಾ ಹಂಗ ಯಾವದರ ಎಕ್ಸ್ಪಾಂಡ್ (expand) ಆಗೋ ವ್ಯಾಕ್ಸ ಇದ್ದರ ನನ್ನ ಹೆಂಡತಿ ಸ್ಟ್ಯಾಚು ಮಾಡಸಬಹುದು ಅನಸ್ತದ, ಯಾಕಂದರ ಇಕಿ ವರ್ಷಕ್ಕ ಮಿನಿಮಮ್ ೨-೩% expand ಆಗಲಿಕತ್ತಾಳ.
ಆದರು ಹಿಂಗ ಮನಿ ಹೆಂಡತಿದ ಮೇಣದ ಮೂರ್ತಿ ಮಾಡಿಸಿ ಮ್ಯೂಸಿಯಮನಾಗ ಇಡೋದ ಸರಿ ಅನಸಂಗಿಲ್ಲ ಬಿಡ್ರಿ, ಅದರಾಗ ಈ ಟೂರಿಸ್ಟ ಮಂದಿ ಬಂದ ಆ ಸ್ಟ್ಯಾಚುದ ಮುಂದ ನಿಂತ ಹುಚ್ಚುಚಾಕಾರ ಸ್ಟೈಲ್ ಮಾಡಿ ಫೋಟೊ ಹೊಡಿಸಿಗೊಂಡ ಫೇಸಬುಕ್ಕಿನಾಗ ಹಾಕ್ಕೊಂಡ್ರ ನಂಗ ಹೆಂಗ ಅನಸಬಾರದ ಅಂತೇನಿ. ಅದರಾಗ ೨೦೦೭ ರಾಗ ಒಬ್ಬೊಕಿ ಲಂಡನ್ ಮ್ಯೂಸಿಯಮಗೆ ಹೋಗಿ ಶಾಹರುಕ್ ಖಾನಂದ ಸ್ಟ್ಯಾಚುಗೆ ಪ್ರಪೋಸ ಮಾಡಿ ಡೈಮಂಡ ರಿಂಗ ಕೊಟ್ಟಾಳಂತ. he is the first statue to receive the proposal. ಏನ್ಮಾಡ್ತೀರಿ, ಹಂಗೇನರ ನಾ ನನ್ನ ಹೆಂಡತಿದ ಮಾಡೇಲ್ ಮಾಡಸಿದರು ಅದರ ಕೊಳ್ಳಾಗ ಮಂಗಳಸೂತ್ರ ಮಾತ್ರ ಒರಿಜನಲ್ ಹಾಕಸ್ತೇನಿ ಮತ್ತ.
ಅಲ್ಲಾ ಆ ವ್ಯಾಕ್ಸ ಮಾಡೇಲ್ ಹೆಂಗ ಮಾಡಿರ್ತಾರ ಅಂದರ ಅಗದಿ ಜೀವಂತ ಇರೋ ಮನಷ್ಯಾನ್ನ ನೋಡಿದಂಗ ಆಗ್ತದ. ಅವರು ಒಂದೊಂದ ಮಾಡೇಲ ಮಾಡಬೇಕಾರು ೨೦೦-೨೫೦ ಸರತೆ ಮೇಸರಮೆಂಟ (ಅಳತಿ) ತೊಗೊತಾರಂತ, ಒಂದ ೧೫೦-೨೦೦ all angles ಫೋಟೊ ಹಿಡಕೊಂಡ ತಿಂಗಳಾನ ಗಟ್ಟಲೇ ಮೂರ್ತಿ ಮಾಡ್ತಾರಂತ. ಅದರಾಗ ಅವರ ಒರಿಜಿನಲ ಕೂದಲಾನ (human hair) ಒಂದೊಂದ ಹಿಡಕೊಂಡ ವ್ಯಾಕ್ಸ ತಲಿಗೆ ಹಚ್ಚತಾರ (ಚುಚ್ಚತಾರ) ಅಂತ. ಗಡ್ಡಾ, ಮೀಸಿ, ಹುಬ್ಬು ಎಲ್ಲಾ ಒರಿಜಿನಲ ಕೂದಲಾನ, ಹಿಂಗಾಗಿ ಅವಕ್ಕ ಆವಾಗ ಇವಾಗ ಶ್ಯಾಂಪು, ಎಣ್ಣಿ ಹಚ್ಚೋದು, ಹಿಕ್ಕೋದ ಮಾಡಬೇಕಾಗತದಂತ. ಇನ್ನೊಂದ ಶಾಕಿಂಗ ಸುದ್ದಿ ಅಂದರ ೧೯೯೬ರಾಗ ಹಿಟ್ಲರನ ಕೂದಲಾ ಬೆಳಲಿಕತ್ತದ ಅಂತ ಗೊತ್ತಾತಂತ, ಅದಕ್ಕ ಅವಂಗ ಈಗ ತಿಂಗಳಿಗೆ ಒಮ್ಮೆ ಟ್ರಿಮ್ಮಿಂಗ ಬ್ಯಾರೆ ಮಾಡ್ತಾರ.
ಅಲ್ಲಾ ನನ್ನ ಹೆಂಡತಿವೂ ಏನಿಲ್ಲದ ಕೂದಲ ಉದರಲಿಕತ್ತಾವ ಇನ್ನ ಅಕಿದ ವ್ಯಾಕ್ಸ ಸ್ಟ್ಯಾಚು ಮಾಡಿಸಿದರ ಅದಕ್ಕು ಕೂದಲ ಉದರತಾವ ಅಂದಂಗ ಆತ, ಅಲ್ಲಾ ಮತ್ತ ಹಿಟ್ಲರನ ಕೂದಲಾ ಬೆಳಿತದ ಅಂದ ಮ್ಯಾಲೆ ನನ್ನ ಹೆಂಡತಿ ಹಿಟ್ಲರನ ಅಕ್ಕಾ, ಅಕಿ ಕೂದಲಾ ಯಾಕ ಉದರಬಾರದು..ಹೌದಲ್ಲ?
ಆದರೂ ಏನೋ ನನ್ನ ಹೆಂಡತಿ ತಂದು ವ್ಯಾಕ್ಸ ಸ್ಟ್ಯಾಚು ಮಾಡಸರಿ ಅಂದ್ಲು ಅಂತ ಇಷ್ಟೇಲ್ಲಾ ಡಿಟೇಲ್ಸ್ ತಿಳ್ಕೊಂಡೆ ಇಲ್ಲಾಂದರ ನಾ ಎಲ್ಲೆ ಈ madame tussauds wax museum ಬಗ್ಗೆ ತಲಿಕೆಡಸಿಗೊತ್ತಿದ್ದೆ ……
ಅನ್ನಂಗ ಇವತ್ತ ( december 1) ಆ madame tussaud (AKA Marie)ದ ಬರ್ಥ ಡೇ. ಒಂದ ಸರತೆ ಅಕಿಗೆ ವಿಶ ಮಾಡಿ ಬಿಡ್ರಿ, ಅಕಿ ಏನ ಗಿಫ್ಟ ಕೇಳಂಗಿಲ್ಲಾ ಹೆದರಲಿಕ್ಕೆ ಹೋಗ ಬ್ಯಾಡರಿ……..
ಹಂಗ ನಾ ಈ madame tussauds wax museum ನಮ್ಮ ಇಂಡಿಯಾಕ್ಕು ಬಂದರ ನನ್ನ ಹೆಂಡತಿಗೆ ನಿಂದು ಒಂದ ಮೇಣದ ಮೂರ್ತಿ ಮಾಡಸ್ತೇನಿ ಅಂತ ಪ್ರಾಮಿಸ್ ಮಾಡೇನಿ ಆ ಮ್ಯಾತ ಬ್ಯಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ