ಮೊನ್ನೆ ನಮ್ಮ ಬೀದರ ದೇಸಾಯಿ ಬಂದಿದ್ದಾ, ಪ್ರತಿ ಸರತೆದ ಗತೆ ಇಂವಾ ಮುಂಜ-ಮುಂಜಾನೆ ಪೇಪರನವರು, ಹಾಲನವರು ಬರೋಕಿಂತಾ ಮುಂಚೆ ಗೇಟ ಮುಂದ ಹಾಜರ ಆಗೇ ಬಿಟ್ಟಾ. ನಮ್ಮವ್ವ ಅದ ಏನ ಎದ್ದ ಕ್ಯಾಗಸ ಹೊಡಿಲಿಕ್ಕೆ ಹತ್ತಿದ್ಲು, ಒಂದ ಕೈಯಾಗ ಕಸಬರಗಿ ಹಿಡ್ಕೊಂಡ ’ಬರ್ರಿ..ಬರ್ರಿ, ಈಗ ಬಂದ್ರ್ಯಾ, ಜರ್ನಿ ಆರಾಮ ಆತಾ’ ಅಂತ ಕೇಳ್ಕೋತ ಒಳಗ ಕರದ್ಲು.
ಇತ್ತಲಾಗ ಬೆಡರೂಮ ಒಳಗ ನನ್ನ ಹೆಂಡತಿ ನನಗ ಗಡಿಬಿಡೆಲೆ
“ರ್ರೀ, ದೇಸಾಯರ ಬಂದರ ಏಳ್ರಿ, ಲಗೂ ಏಳ್ರಿ” ಅಂತ ನಾ ಏನ ಅಂವಾ ಬಂದಾಗ ಮಲ್ಕೊಂಡಿದ್ದರ ಅಂವಾ ವಾಪಸ ಬೀದರಗೆ ಹೋಗ್ತಾನೆನೋ ಅನ್ನೊರಗತೆ ಎಬಿಸಿದ್ಲು. ಅದರಾಗ ನಮ್ಮವ್ವ ಹಿಂದಿನ ದಿವಸ ಅಂವಾ ಬರತಾನ ಅಂದಿದ್ದ ತಡಾ ’ನಾಳೆ ಎಲ್ಲಾರೂ ಲಗೂ ಏಳ್ರಿ, ಎಂಟರ ತನಕ ಮುಗ್ಗಲಗೇಡಿಗತೆ ಹಾಸಿಗ್ಯಾಗ ಬಿದ್ಕೊ ಬ್ಯಾಡರಿ. ಹಂಗ ಮನಿಗೆ ಮಂದಿ ಬರೊಮುಂದ ಮಲ್ಕೊಂಡಿರಬಾರದು, ಹಲ್ಲ ತಿಕ್ಕೊಂಡs ಚಹಾ ಕುಡಿರಿ, ಮೈ ತೊಳ್ಕೊಂಡs ತಿಂಡಿ ತಿನ್ನರಿ..’ಹಂಗ ಹಿಂಗ ಅಂತ ನನ್ನ ಮಕ್ಕಳಿಗೆ ನಮಗ ಕೂಡೆ ಒಂದ ದೊಡ್ಡ ಭಾಷಣಾ ಮಾಡಿದ್ಲು. ಅದರಾಗ ನಮ್ಮ ದೇಸಾಯಿ ಮನೆತನದವರ ಒಂದ ಕಾಲದಾಗ ಹಾನಗಲ್ಲ ಒಳಗ ಭಾರಿ ಸಂಪ್ರದಾಯಸ್ತರು, ಹಿಂಗಾಗಿ ನಮ್ಮವ್ವ ಹಾನಗಲ್ ಬಾಹುದ್ದೂರ ದೇಸಾಯರ ಮೊಮ್ಮಗ ಬೀದರದಿಂದ ಬರಲಿಕ್ಕತ್ತಾನ ಅಂತ ಹೇಳಿದ್ದಕ್ಕ ಈ ಪರಿ ನಮ್ಮ ಜೀವಾ ತಿನ್ನಲಿಕತ್ತಿದ್ಲು.
ಇನ್ನ ನಮ್ಮ ದೋಸ್ತ ಬಂದಾನ ಅಂದರ ನಾನ ಹಿಂಗ ಹಾಸಾಗ್ಯಾಗ ಬಿದ್ದಿದ್ದರ ಛಲೋ ಅನಸಂಗಿಲ್ಲಾಂತ ಅನಿವಾರ್ಯವಾಗಿ ಎದ್ದ
“ಬಾ, ಬಾ.. ಹೆಂಗ ಆರಾಮ ಬಂದಿ ಹೌದಲ್ಲ, ಆಟೊದಾಗ ಬಂದ್ಯೊ, ಬಸ್ಸಿಗೆ ಬಂದ್ಯೊ ಇಲ್ಲಾ ಮಾರ್ನಿಂಗ ವಾಕ್ ಆಗ್ತದ ಅಂತ ನಡಕೋತ ಬಂದ್ಯೊ” ಅಂತೇಲ್ಲಾ ಕೇಳಿ ಅವಂಗ ಒಂದ ವಾಟಗಾ ಚಹಾ ಮಾಡ ಅಂತ ನನ್ನ ಹೆಂಡತಿಗೆ ಹೇಳಿದೆ.
“ನೀ ಹಲ್ಲು-ಮಾರಿ ತೊಳ್ಕೋತೀದ್ದರ ತೊಳ್ಕೊ, ಅಷ್ಟರಾಗ ಚಹಾ ರೆಡಿ ಆಗ್ತದ” ಅಂತ ನಾ ಅಂದರ ಅಂವಾ
“ಏ, ನಂಗ ಮೊದ್ಲ ಚಹಾ ಬೇಕ, ಹಂಗ ಚಹಾ ಕುಡದರ ಮುಂದ ಒಂದಕ್ಕ ಎರಡಕ್ಕ ಎಲ್ಲಾ, ಅಲ್ಲಿ ತನಕ ಏನ ಬರಂಗೇಲಾ” ಅಂದಾ. ಆತ ತೊಗೊ ಇವನು ನಮ್ಮ ಪೈಕಿಯವನ ಇದ್ದಾನ ಅಂತ ಅವಂಗ ಒಂದ ವಾಟಗಾ ಚಹಾ ಮಾಡಿಸಿ ಕೊಟ್ಟ ನಾ ಮುಂದ “ನಿನಗ ಹೊತ್ತಗಾತಿದ್ದರ ನೀ ರೆಡಿ ಆಗಿ ಬಿಡಪಾ” ಅಂತ ಅಂದೆ.
ಅಂವಾ “ಏ, ನೀ ರೆಡಿ ಆಗಿ ಆಫೀಸಿಗೆ ಹೋಗ್ತಿದ್ದರ ಹೋಗ, ನಂದೀನ್ನು ಲೇಟ ಅದ ನಾ ಒಂದ ಸ್ವಲ್ಪ ಅಡ್ಡಾಗ್ತೇನಿ, ಬಸ್ಸಿನಾಗ ನಿದ್ದಿ ಸರಿ ಆಗಿಲ್ಲಾ” ಅಂತ ದಿವಾನದ ಮ್ಯಾಲೆ ಕೂತೊಂವಾ ಅಲ್ಲೇ ಉರಳೇಬಿಟ್ಟಾ. ಅಲ್ಲಾ ನಾ ಈ ಮಗಾ ಬಂದಾ ಅಂತ ನಿದ್ದಿ ಅರ್ಧಾ ಮರ್ದಾ ಮಾಡಿ ಆರ ಗಂಟೇಕ್ಕ ಎದ್ದರ ಇಂವಾ ತಾ ಮಲ್ಕೋಳಿಕ್ಕೆ ಹೊಂಟನಲಾ ಅಂತ ನಂಗ ಖರೇನ ಸಿಟ್ಟ ಬಂತ ಆದರು ಏನ ಮಾಡೋದ ಅತಿಥಿ ದೇವೋ ಭವ ಅಂತ ಅವಂಗ ದೀವಾನದ ಮ್ಯಾಲೆ ಹಾಸಿ ಹೊಚೊಗೊಳಿಕ್ಕೆ ಕೊಟ್ಟ ಮಲಗಿಸಿದೆ.
ಇನ್ನ ನಾ ಏನ ಮಾಡಬೇಕ, ಹಂಗ ಖರೇ ಹೇಳ್ಬೇಕಂದರ ಇಡಿ ಮನಿ ಮಂದೇಲ್ಲಾ ಇಂವಾ ಬರತಾನಂತ ಲಗೂನ ಎದ್ದಿದ್ವಿ, ಅದರಾಗ ನಮ್ಮವ್ವ ಮನಿಗೆ ಗೆಸ್ಟ ಬಂದಾಗ ಹಂಗ ಮಲ್ಕೊಂಡಿರಬಾರದು ಅಂತ ಎಲ್ಲಾರನೂ ಐದ ಗಂಟೆದಿಂದ ಎಬಿಸಲಿಕ್ಕೆ ಶುರು ಮಾಡಿದ್ಲು.
ಆತ ತೊಗೊ ಹೆಂಗಾದ್ರೂ ಎದ್ದೇವಿ ಇನ್ನ ನಮ್ಮ ಮನಿಯವರ ಎಲ್ಲಾರೂ ಲಗೂನ ರೆಡಿ ಆದರ ಆತು ಅಂತ ನಿದ್ದಿ ಗಣ್ಣಾಗ ’ಗುಡ್ ಮಾರ್ನಿಂಗ ಅಂಕಲ್’ ಅಂತ ಹೇಳಲಿಕ್ಕೆ ಎದ್ದ ಕೂತಿದ್ದ ನನ್ನ ಮಗಗ ಹಲ್ಲ್ ತಿಕ್ಕಿಸಿ ಸ್ನಾನಕ್ಕ ಕಳಿಸಿದೆ.
ನನ್ನ ಮಗಾ ಮುಂದ ಒಂದ ಐದ ನಿಮಿಷಕ್ಕ ಒಂದ ನಾಲ್ಕ ತಂಬಗಿ ನೀರ ಮೈಮ್ಯಾಲೆ ಸುರಕೊಂಡ ಸ್ನಾನ ಮಾಡಿ ಬಂದವನ
“ಪಪ್ಪಾ, ನಾ ನಿನಗ ನೀರ ಬಿಡಲಿ” ಅಂದಾ
“ಏ, ಬ್ಯಾಡ ನಂದಿನ್ನು ಲೇಟ ಅದ, ನಿಮ್ಮವ್ವಗ ನೀರ ಬಿಡು, ಅಕೀದ ಯಾವಾಗಲು ನಾ ಬಚ್ಚಲಕ್ಕ ಹೋದಾಗ ಅರ್ಜೆಂಟ ಇರತದ” ಅಂತ ನಾ ಅಂದೆ. ಅದರಾಗ ಪಾಪ ನನ್ನ ಹೆಂಡತಿ ರೆಡಿ ಆಗಿ ಜೋಶಿಗೆ ಟಿಫಿನ ಮಾಡಿ ಕೊಡ್ಬೇಕು, ಹಂಗ ಸ್ನಾನ ಇಲ್ಲದ ಟಿಫಿನ್ನ ಮಾಡೋದ ಮನಿಗೆ ಮಂದಿ ಬಂದಾಗ ಸರಿ ಕಾಣಂಗಿಲ್ಲಾ ಅಂತ ನಮ್ಮವ್ವ ಬ್ಯಾರೆ ಹೇಳಿದ್ದಕ್ಕ ನಾ ಅಕಿಗೆ ಸ್ನಾನಕ್ಕ ಕಳಿಸಿ ಆದಷ್ಟ ಇವತ್ತ ವಾಪಸ ಬಾ ಅಂತ ಹೇಳಿ ಕಳಸಿದೆ.
ಮುಂದ ನನ್ನ ಹೆಂಡತಿ ಯಾಕೊ ಒಂದ ಅರ್ಧಾ ತಾಸಿನಾಗ ಸ್ನಾನ ಮಾಡ್ಕೊಂಡ ಬಂದ ನಮ್ಮವ್ವಗ
“ಅತ್ಯಾ ನಿಮಗ ನೀರ ಬಿಡಲಿ ಅಂತ” ಒದರಿದ್ಲು
“ಅಯ್ಯ ಇಷ್ಟ ಲಗೂ ಬ್ಯಾಡವಾ, ನಂದ ಇನ್ನೂ ಭಾಳ ಕೆಲಸವ, ಹಿತ್ತಲ ತುಂಬ ಭಾಂಡೆ ಹಂಗ ಬಿದ್ದಾವ, ನಿನ್ನ ಗಂಡಗ ನೀರ ಬಿಡ ಅಂವಾ ಎಲ್ಲರ ದೋಸ್ತನ ಜೋಡಿ ಕ್ಯಾಮಾರಿಲೇನ ಹರಟಿ ಹೊಡ್ಕೋತ ಕೂತ ಗಿತಾನ” ಅಂದ್ಲು.
ಕಡಿಕೆ ನನ್ನ ಹೆಂಡತಿ
“ರ್ರೀ, ನಾ ನಿಮಗ ನೀರ ಬಿಡ್ಲೇನ್ರಿ” ಅಂತ ನಂಗ ಒದರಿದ್ಲು. ಇನ್ನ ನಾ ಇಲ್ಲಾಂದ್ರ ಇಕಿ ಮತ್ತ ನಮ್ಮಪ್ಪಗ ನೀರ ಬಿಡೋಕಿ ತಡಿ ಅಂತ ನಾ ’ನಂಗ ನೀರ ಬಿಡ್ತೀಯಾ …ಆತ ತೊಗೊ ಬಿಟ್ಟ ಬಿಡ ’ಅಂತ ನೀರ ಬಿಡಸಿಗೊಂಡ ಸ್ನಾನ ಮುಗಿಸಿಗೊಂಡ ಬಂದ ನಮ್ಮಪ್ಪಗ
“ನೀರ ಬಿಡ್ಲಿ ಏನಪಾ ನಿನಗ” ಅಂದೆ. ನಮ್ಮಪ್ಪಾ ಒಬ್ಬೊಂವ ಇನ್ನು ಹಾಸಿಗಿಂದ ಎದ್ದಿದ್ದಿಲ್ಲಾ, ಹಂಗ ವಯಸ್ಸಾದಂವಾ ಅಂತ ನಮ್ಮವ್ವ ಅವಂಗ ಸುಮ್ಮನ ಬಿಟ್ಟಿದ್ಲು, ಇಲ್ಲಾಂದರ ಅಕಿ ಏನ ನಮ್ಮ ಮನಿಗೆ ಗೆಸ್ಟ ಬರತಾರ ಅಂದರ ಬಾಜು ಮನಿಯವರಿಗೂ ನಾಲ್ಕ ಗಂಟೆಕ್ಕ ಎಬಸೋ ಪೈಕಿ.
ನಮ್ಮಪ್ಪಾ “ನಂಗೇನ ಬ್ಯಾಡಾ, ನಿಮ್ಮ ದೋಸ್ತ ದೇಸಾಯಿ ಬಂದಾನಲಾ ಊರಿಂದ, ಅವಂಗ ಲೇಟಾಗಬಹುದು ಸುಮ್ಮನ ಅವಂಗ ನೀರ ಬಿಡ” ಅಂದಾ.
ಇಷ್ಟೋತನಕ ಮಲ್ಕೊಂಡಲ್ಲೆ ನಿದ್ದಿ ಗಣ್ಣಾಗ ನಾವ ಮನಿ ಮಂದಿ ಎಲ್ಲಾರಿಗೂ ನೀರ ಬಿಡ್ಲೇನೂ ಅಂತ ಕೇಳೋದನ್ನ ಕೇಳಿ ಗಾಬರಿ ಆಗಿದ್ದ ನಮ್ಮ ದೇಸಾಯಿ, ಅವಂಗ ನೀರ ಬಿಡ ಅಂದ ಕೂಡಲೇ ಮುಸಕ ತಗದ ಪಟಕ್ಕನ ಎದ್ದ ಕೂತ ಬಿಟ್ಟಾ. ನಾ ಅಷ್ಟರಾಗ ಅಂವಾ ಎದ್ದದ್ದ ನೋಡಿ
“ಲೇ ನೀರ ಬಿಡ್ಲೇನಲೇ?” ಅಂತ ಅಂದೆ. ಅವಂಗ ತಲಿ ಕೆಟ್ಟ ಹೋತ.
“ಏನಲೇ ಮುಂಜ-ಮುಂಜಾನೆ ಎದ್ದ, ಇಡಿ ಮನಿ ಮಂದಿ ಒಬ್ಬರಿಗೊಬ್ಬರ ನೀರ ಬಿಡಲಿಕ್ಕೆ ನಿಂತೀರಿ,ಈಗ ಮನಿಗೆ ಬಂದ ಅತಿಥಿಗೂ ನೀರ ಬಿಟ್ಟ ’ತಿಥಿ’ ಮಾಡಲಿಕ್ಕೆ ಹೊಂಟೀರೇನ್, ಏನ ನಿಂಬದ ಹಕಿಕತ್ತ? ದಿವಸಾ ನಿಮ್ಮ ಮನ್ಯಾಗ ಸ್ನಾನ ಮಾಡಿದ ಕೂಡಲೇ ಒಬ್ಬರಿಗೊಬ್ಬರ ನೀರ ಬಿಟ್ಟ ಮುಂದಿನ ಕೆಲಸೇನ ಮಗನ” ಅಂತ ಒದರಲಿಕತ್ತಾ.
“ಲೇ, ನಿಮ್ಮಜ್ಜಿ. ನೀರ ಬಿಡೋದ ಅಂದ್ರ ನಾವ ಒಬ್ಬರ ಸ್ನಾನ ಮಾಡಿ ಬಂದ ಕೂಡಲೇ ಇನ್ನೊಬ್ಬರಿಗೆ ಸ್ನಾನಕ್ಕ ನೀರ ಬಿಡಲಿಕ್ಕೆ ಅಂದರ ಬಕೀಟನಾಗ ನೀರ ತೊಡಲಿಕ್ಕೆ ಹಂಗ ಅಂತೇವಿ. ನಮ್ಮ ಮನ್ಯಾಗ ಸೋಲಾರ ಕನೆಕ್ಷನ್ ಅದ ಒಮ್ಮಿಕ್ಕಲೇ ಎಲ್ಲಾರೂ ಸ್ನಾನ ಮಾಡಿದರ ನೀರ ಬಿಸಿ-ಬಿಸಿ ಬರತಾವ ಹಿಂಗಾಗಿ ಮತ್ತ ಗೀಸರ್ ಯಾಕ ಹಚ್ಚಬೇಕು ಅಂತ ಒಬ್ಬಬ್ಬರ ಸ್ನಾನ ಮಾಡಿದ ಮ್ಯಾಲೆ ಮುಂದಿನವರಿಗೆ ನೀರ ಬಿಡ್ಲೇನೂ ಅಂತ ಕೇಳ್ತಿವಿ, ಈಗ ನಿಂಗ ನೀರ ಬಿಡ್ಲ್ಯೋ ಬ್ಯಾಡೋ?” ಅಂದೆ.
“ಯಪ್ಪಾ, ದೇವರ. ನೀವು ಯಾರು ನಂಗ ಇಷ್ಟ ಲಗೂನ ನೀರ ಬಿಡೋದ ಬ್ಯಾಡ, ನಂಗ ಯಾಕೋ ಆ ಬಿಸ್ಲೇರಿ ನೀರ ಬದಲಾಗಿ ಸ್ವಲ್ಪ ನೆಗಡಿ ಆಗೊ ಹಂಗ ಕಾಣ್ತದ ನಾ ಏನ ಇವತ್ತ ಸ್ನಾನ ಮಾಡಂಗಿಲ್ಲಾ. ಈಗ ತಿಂಡಿ ತಿಂದ ಆಮ್ಯಾಲೆ ಹೊರಗ ಹೋಗಬೇಕಾರ ಬಿಸಿನೀರಲೇ ಕೈಕಾಲ ಮಾರಿ ಇಷ್ಟ ತೊಳ್ಕೊಂಡ ಬಿಡ್ತೇನಿ” ಅಂತ ಮತ್ತ ರಗ್ಗ ತುಂಬ ಹೊಚಗೊಂಡ ಮಲ್ಕೊಂಡಾ.
ಪಾಪ, ಅಂವಾ ನೀರ ಬಿಡೋದು ಅಂದರ ಸತ್ತಾಗ ಇಲ್ಲಾ ಸಾಯಿಬೇಕಾರ ನೀರ ಬಿಡ್ತಾರಲಾ ಅದ ಅಂತ ತಿಳ್ಕೊಂಡಿದ್ದಾ, ಅವಂಗೇನ ಗೊತ್ತ ನಮ್ಮ ಮನ್ಯಾಗ ಸ್ನಾನಕ್ಕ ನೀರ ತೊಡೊದಕ್ಕೂ ನೀರ ಬಿಡೋದ ಅಂತ ಅಂತೇವಿ ಅಂತ.
ಅಲ್ಲಾ ಅದಿರಲಿ, ನಮ್ಮ ಮನಿಗೆ ಗೆಸ್ಟ ಬರತಾರ ಅಂತ ನಮ್ಮವ್ವ ಎಲ್ಲಾರಿಗೂ ಐದ ಗಂಟೆದಿಂದ ಬಡದ ಎಬಿಸಿ ಎಬಿಸಿ, ಎಲ್ಲಾರದೂ ಜೀವಾ ತಿಂದ ಲಗೂನ ಸ್ನಾನ ಮಾಡಿಸಿಸಿದ್ಲು. ಇಲ್ಲೆ ನೋಡಿದ್ರ ಬಂದ ಗೆಸ್ಟ ನಾ ಸ್ನಾನ ಒಲ್ಲೆ ಅಂತಾನ…ಅದಕ್ಕ ಹೇಳೊದ್ರಿ ಮನಿಗೆ ಮಂದಿ ಬಂದಾಗ ಸುಳ್ಳ ಏನ ನಾವ ದಿವಸಾ ಸ್ನಾನ ಮಾಡೇ ಸಂಡಾಸಕ್ಕ ಹೋಗ್ತೇವಿ ಅನ್ನೋರಗತೆ ತೊರಿಸಿಗೊಳ್ಳಿಕ್ಕೆ ಹೋಗಬಾರದು. ನಾವ ನಾರ್ಮಲ್ಲಾಗಿ ಹೆಂಗ ಎಂಟ ಗಂಟೆಕ್ಕ ಎದ್ದ ಚಹಾ ಕುಡದ ಆಮ್ಯಾಲೆ ಬ್ರಶ್ ಬಾಯಾಗ ಇಟಗೊಂಡ ಬಾಥ್ ರೂಮಿಗೆ ಹೋಗಿ ಬಂದ ಹೊಟ್ಟಿತುಂಬ ತಿಂದ ಸ್ನಾನ ಮಾಡಿ ಆಫೀಸಿಗೆ ಹೋಗ್ತೇವೊ ಹಂಗ ಹೋಗಬೇಕು. ಅದನ್ನೇಲ್ಲಾ ಬಿಟ್ಟ ಮಂದಿ ಮುಂದ ದಿಮಾಕ ಮಾಡಿ ನಾವೇನ ದಿವಸಾ ಹಿಂಗ ಅನ್ನೋರಗತೇ ಮಾಡಲಿಕ್ಕೆ ಹೋದರ ಹಿಂಗ ಆಗೋದ.
ಈಗ ನಮ್ಮ ದೇಸಾಯಿನ್ನs ನೋಡ್ರಿ, ಹೆಂಗ ಭಿಡೆ ಬಿಟ್ಟ ಬಂದ ನಮ್ಮನ್ನೇಲ್ಲಾ ಎಬಿಸಿ ಕ್ಯಾಮಾರಿಲೇ ಚಹಾ ಕುಡದ ತಾ ತುಂಬ ಹೊತ್ಕೊಂಡ ನಾ ಇವತ್ತ ಸ್ನಾನ ಮಾಡಂಗಿಲ್ಲಾ ಅಂತ ತಿಂಡಿ ತಿಂದ ಮಲ್ಕೊಂಡಾ.. ಅವರಿಗೆ ಮತ್ತ ಅತಿಥಿ ಅನ್ನೋದ.
ಅಷ್ಟರಾಗ ನನ್ನ ಹೆಂಡತಿ ಮತ್ತ ಒದರಿದ್ಲು ” ರ್ರಿ, ನಾ ನಿಮಗ ನೀರ ಈಗರ ಬಿಡ್ಲೋ ಬ್ಯಾಡೊ, ಏನ ನೀವು ನಿಮ್ಮ ದೋಸ್ತನಗತೆ ಕೈ-ಕಾಲ ತೊಳ್ಕೊಂಡ ಕೆಲಸಕ್ಕೊ ಹೋಗೊರೇನ ಇವತ್ತ” ಅಂತ ಒದರಿದ್ಲು.
ನಾ ” ಏ, ನಂಗ ಬಿಡ ಮಾರಾಯ್ತಿ, ನಾ ಆಫೀಸಗೆ ಹೋಗ್ಬೇಕ” ಅಂತ ಸ್ವಚ್ಛ ಸ್ನಾನ ಮಾಡಿ ನನ್ನ ದಾರಿ ನಾ ಹಿಡದೆ.