“ರ್ರಿ, ನಿಮ್ಮ ಪಾಲಿಂದ ಕುಕ್ಕರ ಇಡ್ಲ್ಯೋ ಬ್ಯಾಡೋ? ನೀವು ಈಗ ಹೇಳಿ ಹೋಗರಿ” ಅಂತ ನಿನ್ನೆ ನನ್ನ ಹೆಂಡತಿ ನಾ ಸಂಜಿ ಮುಂದ ಹೊರಗ ಹೋಗಬೇಕಾರ ಬಾಗಲದಾಗ ನಿಂತ ಜೋರ ಮಾಡಿ ಕೇಳಿದ್ಲು. ನಾ ಸಿಟ್ಟಿಗೆದ್ದ
“ಕುಕ್ಕರ ಇಡ್ಲ್ಯೋ ಬ್ಯಾಡೋ ಅಂದರ ಏನದ? ದಿನಾ ಒಂದಕ್ಕೂ ಅದ್ನೇನ ಕೇಳೋದ? ನಿನ್ನ ಮಾತ ಕೇಳಿದವರ ಯಾರರ ನಾ ಊಟಕ್ಕ ಬ್ಯಾರೆ ಮನಿಗೆ ಹೋಗ್ತೇನಿ ರಾತ್ರಿ ಮಲ್ಕೋಳಿಕ್ಕೆ ಇಷ್ಟ ಈ ಮನಿಗೆ ಬರತೇನಿ ಅಂತ ತಿಳ್ಕೋಬೇಕೇನ?” ಅಂತ ಜೋರ ಮಾಡಿದೆ. ಏನೋ ನನ್ನ ಪುಣ್ಯಾ ’ರ್ರಿ, ಇವತ್ತ ರಾತ್ರಿ ಮಲ್ಕೋಳಿಕ್ಕೆ ಬರತಿರಿಲ್ಲೋ’ ಅಂತ ಅಕಿ ಕೇಳಲಿಲ್ಲಾ, ಅಲ್ಲಾ ನಾ ಏನ ಹಂತಾ ಮನಷ್ಯಾ ಅಲ್ಲ ಖರೆ ಆದರು ಮಾತ ಹೇಳ್ತೇನಿ. ಅದರಾಗ ಇಕಿ ಬಾಯಿ ಬ್ಯಾರೆ ಬಂಬಡಾ ಬಜಾರ, ಇಡಿ ಓಣಿ ಮಂದಿ ಇಕಿ ಆಡಿದ್ದ ಖರೆ ಅಂತ ತಿಳ್ಕೊಂಡ ಬಿಡ್ತಾರ.
“ಅಲ್ಲರಿ, ಈಗ ನಾ ಕುಕ್ಕರ ಇಟ್ಟಿರತೇನಿ ಆಮ್ಯಾಲೆ ನೀವ ಬಂದ ’ನಂದ ಮನ್ಯಾಗ ಊಟಾ ಇಲ್ಲಾ, ಹೊರಗ ಉಂಡ ಬಂದೇನಿ’ ಅಂದರ ನಾಳೆ ನಿಮ್ಮ ಪಾಲಿಂದ ಉಳದದ್ದ ಅನ್ನಾ ನಿಮ್ಮವ್ವ ನನಗ ಕಲಸನ್ನಾ ಮಾಡಿ ತಲಿಗೆ ಕಟ್ಟತಾಳ” ಅಂತ ನನ್ನ ಹೆಂಡತಿ ತನ್ನ ರಾಗಾ ಶುರು ಮಾಡಿದ್ಲು.
ಅಲ್ಲಾ ಹಂಗ ಅಕಿ ವಾರದಾಗ ಮೂರ ಸರತೆ ನಾ ಸಂಜಿ ಮುಂದ ಹೊರಗ ಹೋಗಬೇಕಾರ
“ರ್ರಿ, ನಿಮ್ಮ ಪಾಲಿಂದ ಕುಕ್ಕರ ಇಡ್ಲ್ಯೋ ಬ್ಯಾಡೋ?” ಅಂತ ನಂಗ ದಮ್ ಕೊಟ್ಟ ಕೇಳೆ ಕಳಸ್ತಾಳ ಆ ಮಾತ ಬ್ಯಾರೆ.
ಖರೇ ಅಂದ್ರ ಇದ ಮೊದ್ಲ ನಮ್ಮವ್ವಂದ ಡೈಲಾಗ ಇತ್ತ, ನಮ್ಮವ್ವಾ ಮೊದ್ಲ
“ರಾತ್ರಿ ನೀ ಬಂದ ಉಣ್ಣಲಿಲ್ಲಾ ಅಂದ್ರ ನಾಳೆ ಆ ಆರಿದನ್ನ ಕಲಸನ್ನ ಮಾಡಿ ನಿನ್ನ ತಲಿಗೆ ಕಟ್ಟತೇನಿ” ಅಂತಿದ್ಲು, ಆದರ ಈಗ ನನ್ನ ಮದುವಿ ಆದಮ್ಯಾಲೆ ನನ್ನ ಹೆಂಡತಿ ತಲಿಗೆ ಕಟ್ಟತೇನಿ ಅಂತಾಳ ಅಷ್ಟ ಫರಕ.
ಅಲ್ಲಾ ಹಂಗ ಈ ವಿಷಯದಾಗ ಅವರಿಬ್ಬರು ಹೇಳೋದ ಖರೇನ ಅದ, ವಾರದಾಗ ಮೂರ ದಿವಸ ನಾ ಹೊರಗ ಹೋದಂವಾ ರಾತ್ರಿ ಹನ್ನೊಂದಕ್ಕ ಬಂದ “ಎ, ನಂದ ಊಟಾ ಆಗೇದ” ಅಂತ ಅಂದರ ನನ್ನ ಪಾಲಿಂದ ಮಾಡಿದ್ದ ಅನ್ನಾ ಯಾರ ಊಣ್ಣಬೇಕ? ಹಿಂಗಾಗೆ ಮುಂಜಾನೆ ಎದ್ದ ಅದಕ್ಕೊಂದ ಎರಡ ದಿವಸದ ಹಿಂದಿನ ಒಗ್ಗರಣಿ ಹಾಕಿ ಬಿಸಿ ಮಾಡಿ ಕಲಸನ್ನ ಬ್ರೇಕ್ ಫಾಸ್ಟ್ ನನ್ನ ಹಣೆಬರಹಕ್ಕ ಇಲ್ಲಾ ನನ್ನ ಹೆಂಡತಿ ಹಣೆಬರಹಕ್ಕ ಗ್ಯಾರಂಟಿ. ನಮ್ಮವ್ವಂತೂ ಮಾತ ಮಾತಿಗೆ
“ತುಟ್ಟಿ ಕಾಲ, ಹಿಂಗ ಅನ್ನಾ ಮಾಡಿ ಛಲ್ಲಿಕ್ಕೆ ಆಗತದೇನ್ವಾ, ಅದು ನಿನ್ನ ಗಂಡನ ಪಾಲಿದು, ಒಂದು ಅವಂಗರ ಹಾಕ, ಇಲ್ಲಾ ನೀನರ ತಿನ್ನ” ಅಂತ ನನ್ನ ಹೆಂಡತಿ ಜೀವಾ ತಿನ್ನೋಕಿ.
ನಂಗ ಬರ ಬರತ ಏನಾತ ಅಂದರ ಕಲಸನ್ನ ಉಂಡ ಉಂಡ ಪಿತ್ತ ಆಗಲಿಕತ್ತ, ಡಾಕ್ಟರ ನನ್ನ ನಾಡಿ ಮುಟ್ಟಿ
“ಇಲ್ಲಾ ನೀವು ಮೊದ್ಲ ಆ ಕಲಸನ್ನ ತಿನ್ನೋದ ಬಿಡ್ರಿ, ಆರಿದನ್ನ ಬಿಸಿ ಮಾಡಿ ಕಲಸನ್ನ ಮಾಡ್ಕೊಂಡ ಉಂಡರು ಅಸಿಡಿಟಿ ಆಗ್ತದ” ಅಂತ ತಿಳಿಸಿ ಹೇಳಿದ ಮ್ಯಾಲೆ ನಾ ಕಲಸನ್ನ ಬಿಟ್ಟೆ, ಆದ್ರ ಅನ್ನ ಉಳಿಯೋದ ಏನ ತಪ್ಪಲಿಲ್ಲಾ, ಪಾಪ ನನ್ನ ಹೆಂಡತಿ ನಮ್ಮವ್ವನ್ನ ಕಾಟಕ್ಕ ತಾ ತಿನ್ನಲಿಕತ್ಲು. ನನ್ನ ಹೆಂಡತಿಗರ ಮುಂಜಾನೆ ಮಾಡಿದ್ದ ಅಡಗಿ ಸಂಜಿಗೆ ಉಂಡ ರೂಡಿ ಇದ್ದಿದ್ದಿಲ್ಲಾ, ಅಗದಿ ಕುಕ್ಕರ ಡಬ್ಬ್ಯಾಗ ಅದು ತಳದಾಗಿನ ಡಬ್ಯಾಗ ಹುಟ್ಟಿದೋಕಿ, ಯಾವಾಗಲು ಬಿಸಿ ಬಿಸಿ ಎಸರಂದ ಬೇಕ. ಅವರ ತವರ ಮನ್ಯಾಗಂತೂ ಹಂಗ ಏನರ ಹೆಚ್ಚು ಕಡಮಿ ಉಳದರ ಕೆಲಸವರಿಗೆ ಕೊಡೊ ಪದ್ದತಿ ಇತ್ತಂತ ಆದರ ಇಲ್ಲೆ ನಮ್ಮ ಮನ್ಯಾಗ ನನ್ನ ಹೆಂಡತಿದ ನಡಿಬೇಕಲಾ.
“ಅಯ್ಯ, ತುಟ್ಟಿ ಕಾಲ, ಹಿಂಗ ಮಾಡಿ ಮಾಡಿ ಕೆಲಸದವರಿಗೆ ಕೊಡಲಿಕ್ಕೇನ ನಿನ್ನ ತವರ ಮನಿಯಿಂದ ಕಾಳು ಕಡಿ ಬರ್ತಾವೇನ್? ನೀ ಹಿಂಗ ಮಾಡಿದ್ದೆಲ್ಲಾ ಮಂದಿಗೆ ಕೊಟ್ಟ ಎಲ್ಲರ ನಮ್ಮನ್ನ ಹೊಂತುಟ್ಲೆ ಕಳಸೋಕಿ ಬಿಡ್ವಾ?” ಅಂತ ನಮ್ಮವ್ವಾ ನನ್ನ ಹೆಂಡತಿಗೆ ಶುರು ಮಾಡೇ ಬಿಡ್ತಿದ್ದಳು.
ಅಲ್ಲಾ, ಹಂಗ ಅನ್ನ ಉಳಿತು, ಇಲ್ಲಾ ಅಡಿಗಿ ಉಳಿತು ಅನ್ನೋದರಾಗ ನಾ ರಾತ್ರಿ ಊಟಕ್ಕ ಬಂದಿಲ್ಲಾ ಅನ್ನೋದ ಒಂದs ಕಾರಣ ಇರತಿದ್ದಿಲ್ಲಾ, ಖರೇ ಅಂದರ ನಮ್ಮವ್ವನ ಕೈನ ದೊಡ್ಡದು ಹಿಂಗಾಗಿ ಅಕಿ ದಿವಸಾ ಮಾಡಿ ಮಾಡಿ ಉಳಸೋದ ಅಕಿ ಪದ್ಧತಿ. ಅಕಿ ಹುಳಿ ಮಾಡದಾಗಂತೂ ನಮ್ಮಪ್ಪ “ಇಷ್ಟ ಹುಳಿ ಒಳಗ ನನ್ನ ಮದುವಿ ಆಗಿತ್ತು” ಅಂತಾನ ಅಷ್ಟ ಹುಳಿ ಮಾಡಿರತಿದ್ದಳು, ಹಂಗ ನಮ್ಮವ್ವ ಹುಳಿ ಭಾಳ ಛಲೋ ಮಾಡ್ತಾಳ ಖರೆ, ಆದರೂ ಮೂರ ಹೊತ್ತ ಇಡಿ ಮನಿ ಮಂದಿ ಎರೆಡೆರಡ ಸರತೆ ಹುಳಿ ಅನ್ನಾ ಉಂಡರು ಮತ್ತ ಮರದಿವಸ ಮಧ್ಯಾಹ್ನ ಊಟಕ್ಕ ಹುಳಿ ಇರತಿತ್ತ. ಅಲ್ಲಾ ಆವಾಗ ಆ ಹುಳಿ ಕುದಿಸಿ ಕುದಿಸಿ ಪಲ್ಯಾ ಆದಂಗ ಆಗಿರ್ತಿತ್ತ ಅದಕ್ಕ ಮತ್ತ ನೀರ ಹಾಕಿ ಬೆಳಸತಿದ್ದಳು ಆ ಮಾತ ಬ್ಯಾರೆ. ಅದರಾಗ ನಮ್ಮವ್ವನ ಹುಳಿ ತಂಗಳಾದಷ್ಟ ಇನ್ನು ರುಚಿ ಆಗತಿತ್ತ.
ನಾ ನಮ್ಮವ್ವಗ
“ಮಂದಿ ಮನ್ಯಾಗ ನೋಡ, ಅವರ ಹೆಂಗ ಸಂಸಾರ ಮಾಡ್ತಾರ. ಮಂದಿ ಒಂದ ತಿಂಗಳಕ್ಕ ಉಪಯೋಗಿಸೊ ಅಷ್ಟ ತೊಗೊರಿಬ್ಯಾಳಿ ನೀ ಒಂದ ವಾರಕ್ಕ ಖಾಲಿ ಮಾಡ್ತೀವಾ, ಏನಿಲ್ಲದ ತೊಗೊರಿಬ್ಯಾಳಿ ತುಟ್ಟಿ ಆಗ್ಯಾವ, ಮನ್ಯಾಗ ದುಡಿಯೊಂವಾ ನಾ ಒಬ್ಬನ” ಅಂತ ಅಕಿ ಹುಳಿ ಮಾಡಿದಾಗೊಮ್ಮೆ ಬೈಯೊಂವಾ.
ಹಂಗ ನಾವ ಎಷ್ಟ ಅಂದರೂ ನಮ್ಮವ್ವ ತನ್ನ ಚಾಳಿ ಬಿಡತಿದ್ದಿಲ್ಲಾ, ಹುಟ್ಟ ಗುಣಾ ಎಲ್ಲೆ ಹೋಗಬೇಕ?
ಒಟ್ಟ ನಮ್ಮ ಮನ್ಯಾಗ ಹಿಂಗ ಆಗಿತ್ತಲಾ ಒಂದ ನಾ ರಾತ್ರಿ ಊಟಾ ಮಾಡಿಲ್ಲಾ ಅಂತsರ ಅಡಿಗೆ ಉಳಿಯೋದು ಇಲ್ಲಾ ನಮ್ಮವ್ವ ಜಾಸ್ತಿ ಮಾಡ್ಯಾಳ ಅಂತsರ ಉಳಿಯೋದ. ಇನ್ನ ತುಟ್ಟಿ ಕಾಲ ಕೆಡಸಲಿಕ್ಕೆ ಆಗ್ತದ ಏನು ಅಂತ ತಿಂದ ನಮ್ಮ ಆರೋಗ್ಯ ಕೆಡಸಿಗೋ ಬೇಕು ಇಲ್ಲಾ ಕೆಲಸದವರಿಗೆ ಕೊಡಬೇಕು.
ಹಂಗ ಮೊನ್ನೆ ಒಂದ ಸರತೆ ಮನಿ ಕೆಲಸದೊಕಿಗೆ ನಮ್ಮವ್ವ ಹಿಂದಿನ ದಿವಸದ್ದ ಅನ್ನಾ, ಹುಳಿ ಉಳದದ ಮನಿಗೆ ಒಯ್ತಿ ಏನ ಅಂತ ಕೇಳಿದರ
“ಏ, ನಾವ ತಂಗಳಾ-ಪಂಗಳಾ ತಿನ್ನಂಗಿಲ್ರೀವಾ, ಬಿಸಿದ ಏನರ ಇದ್ದರ ಕೊಡ್ರಿ ಇಲ್ಲಾಂದ್ರ ನಿಂಬದೇನ ಬ್ಯಾಡಾ” ಅಂತ ಹೇಳಿ ಬಿಟ್ಟಳು. ನಮ್ಮವ್ವಗ ಸಿಟ್ಟ ಬಂತ.
“ಅಯ್ಯ, ಭಾಳ ದಿಮಾಕಾತ ಬಿಡ್ವಾ ನಿಂದು, ನಿನ್ನಕಿಂತಾ ನನ್ನ ಸೊಸಿನ ಛಲೊ ಬಿಡ ಸುಮ್ಮನ ಬಾಯಿ ಮುಚಗೊಂಡ ತಿಂತಾಳ. ಏನೋ ಇವತ್ತ ನಮ್ಮ ಮನ್ಯಾಗ ಪೂಜಾ ಅದ ತಂಗಳದ್ದ ಇಡಲಿಕ್ಕೆ ಬರಂಗಿಲ್ಲಾಂತ ಕೇಳಿದೆ” ಅಂತ ಅಂದ ಕಡಿಕೆ ನನ್ನ ಮಗನ ಕರದ ಹೊರಗ ಆಕಳ ಬಂದಾವೇನ ನೋಡ, ಹಂಗ ಆಕಳ ಬಂದಿದ್ದರ ಆ ಅನ್ನದ ಪಾತೇಲಿ ಒಯ್ದ ಇಟ್ಟ ಕೈಗೆ ನೀರ ಹಚಗೊ, ಪುಣ್ಯಾನರ ಬರತದ ಅಂದ್ಲು.
ಆದ್ರು ನಾವ ಇವತ್ತ ಈ ವಿಷಯದಮ್ಯಾಲೆ ಸಿರಿಯಸ್ ಆಗಿ ವಿಚಾರ ಮಾಡಬೇಕಾಗಿದ್ದ ಅಂತು ಖರೆ, ಇವತ್ತ ಜಗತ್ತಿನೊಳಗ ಎಷ್ಟೋ ದೇಶದಾಗ ಒಂದ ತುತ್ತ ಆಹಾರ ಸಿಗಲಾರದ ಜನಾ ಸಾಯಿತಿರಬೇಕಾರ ನಾವ ಹಿಂಗ ಆಹಾರದ ಜೊತಿ ಚೆಲ್ಲಾಟ ಆಡೋದ ಎಷ್ಟ ಛಂದ ಕಾಣತಾದ. ಅದರಾಗ ನಾವ ಅಂತು ಮದುವಿ-ಮುಂಜವಿ ಹಂತಾ ಕಾರ್ಯಕ್ರಮದಾಗ ತಾಟನಾಗ ಹಾಕಿಸಿಗೊಂಡ ಛಲ್ಲೋದು, ಮಾಡಿದ್ದ ಅಡಿಗೆ ಜಾಸ್ತಿ ಆತ ಅಂತ ಅದನ್ನ ಕೆಡಸೋದು ಇದನ್ನೇಲ್ಲಾ ನೋಡಿದರ ಭಾಳ ಕೆಟ್ಟ ಅನಸ್ತದ. ಪ್ರತಿ ಒಂದ ತುತ್ತಿಗು ಗೌರವ ಕೊಡಬೇಕು. ಅನ್ನಕ್ಕ ಎಂದೂ ಸೊಕ್ಕ ಮಾಡಬಾರದು. ಅದು ನಮ್ಮವ್ವನ ಕಲಸನ್ನರ ಯಾಕ ಆಗವಲ್ತಾಕ ಅಂತ ನನಗ ಅನಸ್ತದ.