ನಾ ಏನಿಲ್ಲಾಂದ್ರು ಒಂದ ಹತ್ತ ಸರತೆ ಹೇಳೇನಿ ನನ್ನ ಹೆಂಡತಿಗೆ ‘ನೀ ರಾತ್ರಿ ಮಲ್ಕೋಬೇಕಾರ ಆ ಸುಡಗಾಡ ಇಂಗ್ಲೀಷ್ ಸಿನೇಮಾ ನೋಡ ಬ್ಯಾಡಾ, ರಾತ್ರಿ ಬಡಬಡಸ್ತಿ’ ಅಂತ, ಆದರೂ ಅಕಿ ನನ್ನ ಮಾತ ಒಟ್ಟ ಕೇಳಂಗಿಲ್ಲಾ. ಅದರಾಗ ಯಾವದರ ಹಾರರ್ ಇಲ್ಲಾ ಫೈಟಿಂಗ ಪಿಕ್ಚರ್ ನೋಡಿ ಮಲ್ಕೊಂಡಿದ್ದರಂತು ಮುಗದ ಹೋತ ನಾ ಅವತ್ತ ರಾತ್ರಿ ಅಕಿ ಬಾಜುಕ ಸತ್ತಂಗ. ಅಕಿ ನಿದ್ದಿಗಣ್ಣಾಗ ಗುದ್ದಿದರ ಗುದ್ದಿಸಿಗೋಬೇಕು, ಬೈದರ ಬೈಸಿಗೋಬೇಕು. ಏನ್ಮಾಡೋದ, ಇರೊಕಿ ಒಬ್ಬಾಕಿ ಹೆಂಡತಿ, ಅದು ನಿದ್ದಿಗಣ್ಣಾಗ ಇದ್ದಾಳಂತ ಸುಮ್ಮನಿರತೇನಿ. ಒಮ್ಮೊಮ್ಮೆ ಕುತಗಿನ ಹಿಚಲಿಕ್ಕ ಹೊಂಟಿರತಾಳ, ಒಮ್ಮೊಮ್ಮೆ ಗಂಡನ ಮ್ಯಾಲೆ ಇಷ್ಟ ವಯಸ್ಸಾದ ಮ್ಯಾಲೂ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂದಿರತದ. ಎಲ್ಲಾ ಅಕಿ ರಾತ್ರಿ ಯಾ ಪಿಕ್ಚರ ನೋಡಿ ಮಲ್ಕೊಂಡಿರತಾಳ ಅದರ ಮ್ಯಾಲೆ ಡಿಪೆಂಡ್.
ಮೊನ್ನೆ ಶುಕ್ರವಾರನೂ ಹಂಗ ಆತು, ರಾತ್ರಿ ಮಲ್ಕೋಬೇಕಾರ ಯಾ ಸುಡಗಾಡ ಪಿಕ್ಚರ ನೋಡಿ ಮಲ್ಕೊಂಡಿದ್ಲೊ ಏನೋ? ನಡರಾತ್ರ್ಯಾಗ ಒಮ್ಮಿಂದೊಮ್ಮಿಲೆ ನನಗ ಬಡದ ಎಬಿಸಿ
“ರ್ರಿ, ಭೂಕಂಪ ಆತ ನಿಮಗೇನರ ಗೊತ್ತಾತ ಏನು?” ಅಂದ್ಲು
“ಲೇ, ಎಲ್ಲಿ ಭೂಕಂಪಲೇ ಸುಮ್ಮನ ಬಿದ್ಕೋ, ಯಾಕ ನಿದ್ದಿ ಹಾಳ ಮಾಡ್ತಿ” ಅಂದೆ
“ಇಲ್ರಿ, ಖರೇನ ನಿಮ್ಮಾಣೆಂದ್ರು ಭೂಕಂಪ ಆತ, ಪಲ್ಲಂಗ ಅಳಗ್ಯಾಡಿದಂಗ ಆತು” ಅಂದ್ಲು
“ಏ, ನೀ ಇಲ್ಲೆ ಮ್ಯಾಲೆ ಇಷ್ಟ ದೊಡ್ಡ ದೇಹ ಬಿಟಗೊಂಡ ಹೊರಳಾಡಿದರ ಕೆಳಗ ಪಲ್ಲಂಗೇನ ಭೂಮಿನ ಅಳಗ್ಯಾಡತದ” ಅಂತ ನಾ ಅಕಿಗೆ ಬೈದ ಮತ್ತ ಮುಸಗ ಹಾಕ್ಕೊಂಡ ಮಲ್ಕೊಂಡೆ. ಮುಂದ ಹಿಂಗ ನಿದ್ದಿ ಹತ್ತತ ಅನ್ನೋದರಾಗ ಮತ್ತ ನನ್ನ ಹೆಂಡತಿ
“ರ್ರೀ ಲಗೂನ ಏಳ್ರೀ ಜಗತ್ತ ಮುಳಗಲಿಕತ್ತದ” ಅಂತ ಒದರಲಿಕತ್ಲು. ನಾ ನಿದ್ದಿ ಗಣ್ಣಾಗ ತಲಿಕೆಟ್ಟ
“ಏ, ಸುಮ್ಮನ ಬೀಳಲೇ, ನಿನ್ನ ಲಗ್ನಾ ಮಾಡ್ಕೋಂಡಾಗ ನನ್ನ ಜಗತ್ತ ಮುಳಗಿ ಹೋಗೇದ, ಮತ್ತ ಇನ್ನೇನ ತಲಿ ಮುಳಗತದ” ಅಂತ ಜೋರ ಮಾಡಿದೆ. ಆದರೂ ಅಕಿ
“ಇಲ್ಲರಿ ಖರೇನ, ಬೆಡರೂಮನಾಗ ನೀರ ಬಂದದ, ಗಾದಿ ಹಸಿ ಆಗೇದ ನೋಡ್ರಿ, ಲಗೂನ ಏಳ್ರಿ” ಅಂದ್ಲು.
“ಲೇ, ನಿನ್ನ ಮಗಳ ಹಾಸಿಗ್ಯಾಗ ಉಚ್ಚಿ ಹೋಯ್ಕಿಂಡಿರಬೇಕ ತೊಗೊ ಸುಮ್ಮನ ಬೀಳ” ಅಂದ ನಾ ಮಗ್ಗಲ ಬದಲ ಮಾಡಿ ಮಲ್ಕೊಂಡೆ.
ಅಲ್ಲಾ, ನನ್ನ ಹೆಂಡತಿ ನಿನ್ನೆ ರಾತ್ರಿ ಯಾ ಸಿನೇಮಾ ನೋಡಿದ್ಲು ಅಂತ ಹಿಂಗ ವಿಚಾರ ಮಾಡೋದರಾಗ ಹೊಳಿತ ನೋಡ್ರಿ, ಈಕಿ ನಿನ್ನೆ ರಾತ್ರಿ end of the world 2012 ಪಿಕ್ಚರ್ ನೋಡಿದ್ಲು, ಹಿಂಗಾಗಿ ಅಕಿಗೆ ಕನಸ್ಸಿನಾಗ ಜಗತ್ತ ಮುಳಗಲಿಕತ್ತದ ಅಂತ ಗ್ಯಾರಂಟೀ ಆತ.
ನಾನು ಹಂಗs ಆ ಪಿಕ್ಚರ ಬಗ್ಗೆ ವಿಚಾರ ಮಾಡ್ಕೋತ ಕಣ್ಣಮುಚ್ಚಿದೆ………….
ನನಗ ಚೀನಾದ ಹಡಗದಾಗ (space ship) ಸೀಟ ಸಿಕ್ಕಿತ್ತು. ಹಂಗ ನನ್ನ ಕಡೆ ರೊಕ್ಕಾ ಕೊಟ್ಟ ಟಿಕೇಟ ತೊಗೊಳೊ ಕ್ಯಾಪ್ಯಾಸಿಟಿ ಇದ್ದಿದ್ದಿಲ್ಲಾ ಹಿಂಗಾಗಿ ‘ಲೇಖಕಕಾರ’ ರ ಕೋಟಾದಾಗ ಟಿಕೇಟ ಗಿಟ್ಟಿಸಿ ಕೊಂಡಿದ್ದೆ. ಮುಂದ ನಾ ಹೊಸಾ ಜಗತ್ತೀನ ಮೊದಲ ಕನ್ನಡ ಲೇಖಕ ಆಗೋಂವ ಇದ್ದೆ.
ಇತ್ತಲಾಗ ಮನ್ಯಾಗ ನನ್ನ ಹೆಂಡತಿ ಹೊಸಾ ಜಗತ್ತಿಗೆ ಬೇಕಾಗ್ತಾವ ಅಂತ ಮಸಾಲಪುಡಿ,ಮೆಂತೆ ಹಿಟ್ಟು,ಉಪ್ಪಿನಕಾಯಿ,ಹಪ್ಪಳ, ಸಂಡಗಿ ಎಲ್ಲಾ ನಮ್ಮವ್ವನ ಕಡೇ ಮಾಡಿಸಿಗೊಂಡ ಕಡಿಕೆ ನಮ್ಮವ್ವಗ
“ನಿಮಗ ಈಗಾಗಲೇ ವಯಸ್ಸ ಭಾಳ ಆಗೇದ, ಅದರಾಗ ನೀವ ಮಾತ-ಮಾತಿಗೆ ‘ಸಾಕವಾ ಜೀವಾ, ದೇವರ ಲಗೂನ ಕರಕೋಪಾ’ ಅಂದ ಅಂತಿರತಿರಿ, ಅದಕ್ಕ ನೀವು ಇಲ್ಲೇ ಇರ್ರಿ” ಅಂತ ನಮ್ಮ ಅವ್ವಾ ಅಪ್ಪನ ಟಿಕೇಟ ತಮ್ಮ ಅವ್ವಾ-ಅಪ್ಪಗ ಕೊಟ್ಟಿದ್ಲು.
ನಾ ‘ಜಗತ್ತ ಮುಳಗತದ ಅಂತ ಭಾಳ ಮಂದಿಗೆ ಗೊತ್ತಿಲ್ಲಾ, ನಮಗ ಚೀನಾ ಹಡಗದ ಟಿಕೇಟ ಸಿಕ್ಕದ, ನಾವ ಹೊಂಟೇವಿ ಅಂತ ಯಾರಿಗು ಗೊತ್ತಾಗ ಬಾರದು’ ಅಂತ ಹೇಳಿದ್ದಕ್ಕ ನನ್ನ ಹೆಂಡತಿ ಬಾಯಿಮುಚಗೊಂಡ ಸುಮ್ಮನ ಇದ್ಲು.
ಆದರು ಒಂದ ಹತ್ತ ಮಂದಿ ಮನಿಗೆ ಹೋಗಿ ನಾವು ಊರ ಬಿಡೋರಿ ಇದ್ದೇವಿ, ಇನ್ನ ಈ ಕಡೇ ಹಾಯಂಗಿಲ್ಲಾ ಅಂತ ಹೇಳಿ ಎಲ್ಲಾರ ಕಡೆ ಸೆಂಡ್ ಆಫ್ ತೊಗೊಂಡ ಸೀರಿ-ಜಂಪರ ಪೀಸ ಉಡಿ ತುಂಬಿಸಿಗೊಂಡ ಬಂದಿದ್ಲು.
“ಅಲ್ಲಲೇ ಇಷ್ಟ ಸೀರಿ-ಜಂಪರ್ ಪೀಸ ತೊಗೊಂಡ ಅವನ್ನೇನ ನೀ ಹಡಗದಾಗ ಮಾರೋಕಿ ಇದ್ದಿ ಏನು?” ಅಂದರು ಅಕಿ ಏನ ಕೇಳಲಿಲ್ಲಾ. ನಮಗ ಯಾರ ಬಾಕಿ, ಕಡಾ ಕೊಡದಿತ್ತು ಅದನ್ನೇಲ್ಲಾ ವಸೂಲಿ ಮಾಡ್ಕೊಂಡ ಬಂದ ತಾ ಮಾತ್ರ ಅಂಗಡ್ಯಾಗ ಸಾಮಾನ ಉದ್ರಿ ತೊಗಂಡ ಬಂದ, ಬಾಕಿ ಮುಂದಿನ ತಿಂಗಳ ನಮ್ಮ ಮನೆಯವರದ ಪಗಾರ ಆದಮ್ಯಾಲೆ ಕೋಡ್ತೇನಿ ಅಂತ ಹೇಳಿ ಬಂದ್ಲು.
“ಏ, ಹುಚ್ಚಿ, ಹಂಗ್ಯಾಕ ಸುಳ್ಳ ಹೇಳ್ತಿ, ಕೊಡೋರದ ಕೊಟ್ಟ ಬಿಡಬೇಕು, ಮಂದಿದ ಯಾಕ ಬಾಕಿ ಇಡ್ತಿ” ಅಂತ ನಾ ಸಿಟ್ಟಿಗೆದ್ದ ಜೊರಾಗಿ ಒದರಲಿಕತ್ತೆ………………….
“ನಾ ಎಲ್ಲೆ ಬಾಕಿ ಇಟ್ಟೇನರಿ, ನಾ ಯಾರದು ಬಾಕಿ ಇಡೋಕೆಲ್ಲಾ, ಹಂಗ್ಯಾಕ ಏನೇನರ ಬಡಬಡಸಲಿಕತ್ತೀರಿ ಏಳ್ರಿ ಏಂಟಾತ” ಅಂತ ನನ್ನ ಹೆಂಡತಿ ಒದರಿದ್ಲು. ನಾ ಧಡಕ್ಕನ ಕಣ್ಣ ತಗದೆ. ಹಕ್ಕ, ನಾನು ಆ ಸುಡಗಾಡ end of the world ಸಿನೇಮಾದ ಬಗ್ಗೆ ವಿಚಾರ ಮಾಡ್ಕೋತ, ಹಂಗೇನರ ಡಿಸೆಂಬರ್ 21ಕ್ಕ ಖರೇನ ಜಗತ್ತ ಮುಳಗಿದರ ಅಂತ ವಿಚಾರ ಮಾಡಕೋತ ಮಲ್ಕೊಂಡಿದ್ದೆ, ನಂಗ ಅದರದ ಕನಸ ಬಿದ್ದ ಬಿಟ್ಟಿತ್ತ.
ಇಲ್ಲೆ ನೋಡಿದರ ಯಾ ಜಗತ್ತು ಮುಳಗಲಿಕತ್ತಿಲ್ಲಾ, ಯಾ ಸುಡಗಾಡ ಚೀನಾ ಹಡಗನು ಇಲ್ಲಾ…ಮತ್ತು ಅದ ಹೆಂಡತಿ…ಅದ ಮಕ್ಕಳು… ಅದ ಗೋಳು ಅಂತ ಹಾಸಗಿ ಬಿಟ್ಟ ಎದ್ದೆ.