(ಇದು ನನ್ನ ಕುಟ್ಟವಲಕ್ಕಿ ಪುಸ್ತಕದೊಳಗ ಈಗಾಗಲೇ ಪ್ರಕಟಾಗಿದ್ದ ಲೇಖನ, ನಾ ಇದನ್ನ february 29, ಪ್ರಪೋಸಲ್ ಡೇ ಅಂತ ಅದರಾಗ ಬರದಿದ್ದೆ, ಅದನ್ನ ಇವತ್ತ ಕುಟ್ಟವಲಕ್ಕಿ ಹಲ್ಲಿಗೆ ಬರಂಗಿಲ್ಲಾಂತ ಅಂತ ಬರೇ ಕೆಂಡಸಂಪಿಗಿ ಒಳಗ ಘಮ-ಘಮಾ ವಾಸನಿ ತೊಗೊತ ಇರೋರ ಸಲುವಾಗಿ ಪ್ರಕಟಿಸಲಿಕತ್ತೇವಿ. ಹಂಗ ಕುಟ್ಟವಲಕ್ಕಿ ಒಳಗ ಓದಿದವರು ಮತ್ತೋಮ್ಮೆ ಓದಿದರ ನಾ ಏನ ತಪ್ಪ ತಿಳ್ಕೋಳಂಗಿಲ್ಲಾ. ಅಲ್ಲೆ ಕಮೆಂಟ್ ಬರಿಲಿಕ್ಕೆ ಜಾಗ ಇದ್ದಿದ್ದಿಲ್ಲಾ, ಇಲ್ಲೆ ಅದ. ನಾ ಆ ಕುಟ್ಟವಲಕ್ಕಿ ಲೇಖನಕ್ಕ ಇನ್ನೊಂದ ಸ್ವಲ್ಪ ಚಟ್ನಿಪುಡಿ, ಮೆಂತೆ ಹಿಟ್ಟ ಹಚ್ಚಿ ನಿಮ್ಮ ಜೋಳಿಗ್ಯಾಗ ಹಾಕೇನಿ)
ಮುಂಜ ಮುಂಜಾನೆ ಎದ್ದ ತಯಾರಾಗೋ ಹೊತ್ತಿನಾಗ ನನ್ನ ಮೊಬೈಲ್ ಹೊಯ್ಕೊಳ್ಳಿಕತ್ತ, ಇನ್ನ ನಾ ಮೂಬೈಲ್ ಎತ್ತಿ ಮಾತಾಡಿದರ ನನಗ ಆಫೀಸಿಗೆ ಹೊತ್ತಾಗತದ ಅಂತ ನನ್ನ ಹೆಂಡತಿಗೆ
“ಲೇ ಫೋನ್ ಎತ್ತ, ಅದು ಒದರೋದ ಕೇಳಸಂಗಿಲ್ಲೇನ ” ಅಂತ ಒದರಿ ಬಾಥರೂಮಗೆ ಹೋದೆ.
ಮೊದ್ಲ ನನಗ ಮುಂಜಾನೆ ಲಗೂನ ಏಳೊದ ಏಳೂ ಹನ್ನೆರಡ ಆಗಿರ್ತದ. ಇನ್ನ ಎಂಟು ಐವತ್ತರೊಳಗ ರೆಡಿ ಆಗಿ ಆಫೀಸಿಗೆ ಹೊಗಲಿಕ್ಕೆ ಗಡಿಬಿಡಿಲೆ ತಯಾರಾಗೊ ಹೊತ್ತಿನಾಗ ಯಾರರ ಫೋನ್ ಮಾಡಿಬಿಟ್ಟರ ಮುಗದ ಹೋತು, ನಾ ಒಂದ ಸಂಡಾಸಕ್ಕ ಹೋಗೊದು, ಇಲ್ಲಾ ದಾಡಿ ಮಾಡ್ಕೊಳೋದು, ಇಲ್ಲಾ ನಾಷ್ಟಾ ಮಾಡೋದು ಯಾವದರ ಒಂದ ಅವತ್ತ ಡ್ರಾಪ ಮಾಡಿದರ ಇಷ್ಟ ಕರೆಕ್ಟ ಟೈಮಿಗೆ ಆಫೀಸಿಗೆ ಹೋಗೋದು. ಹಿಂಗಾಗಿ ನಾ ವಾರದಾಗ ಒಂದ ಸರತೆ ಇಷ್ಟ ದಾಡಿ ಮಾಡ್ಕೋಂಡ ಆಫೀಸಗೆ ಹೋಗ್ತೇನಿ. ಇನ್ನ ತಿಂಡಿ ತಿನ್ನೋದು – ಬೈಲಕಡಿಗೆ ಹೋಗೋದು ವಾರದಾಗ ಒಂದೆರಡ ಸಲಾ ಬಿಟ್ಟ-ಬಿಟ್ಟಿರತೇನಿ ಆ ಮಾತ ಬ್ಯಾರೆ.
“ರ್ರೀ ಯಾರೋ ಸುರೇಶಂತ ನಿಮ್ಮ ಜೊತಿನ ಮಾತಾಡಬೇಕಂತ” ಅಂತ ನನ್ನ ಹೆಂಡತಿ ಮೊಬೈಲ್ ಬಾಥರೂಮನಾಗ ತುರಕಿದ್ಲು, ಇಂವಾ ಯಾಕ ಫೋನ್ ಮಾಡಿದ್ನಪ್ಪಾ, ಹಂಗ ಹಗಲಗಲಾ ಫೋನ್ ಮಾಡೋ ಗಿರಾಕಿನೂ ಅಲ್ಲಾ, ಏನರ ಅರ್ಜೆಂಟ ಕೆಲಸ ಇರಬೇಕು ಅಂತ ನಾ ಫೋನ್ ತೂಗೊಂಡೆ
“ಹೇಳಪಾ, ಮುಂಜ-ಮುಂಜಾನೆದ್ದ ಫೋನ್ ಮಾಡಿಯಲಾ,ಏನ್ ವಿಶೇಷ?” ಅಂದೆ
“ಲೇ, ಇವತ್ತ ಸಂಜಿಗೆ ಗೋಕಲ್ ಗಾರ್ಡನ್ ಗೆ ನಿನ್ನ ಹೆಂಡತಿ ಮಕ್ಕಳನ ಕರಕೊಂಡ ಬಾ, ಇವತ್ತ ನಂದ ಒಂದನೇ ಅನಿವರ್ಸರಿ, ನಾ ಪಾರ್ಟಿ ಕೊಡಲಿಕತ್ತೇನಿ” ಅಂದಾ. ‘ಹೌದಾ, ಯಾರ ಜೊತಿಗೆ ಅನಿವರ್ಸರಿ?’ ಅನ್ನೋವಿದ್ದೆ ಆದರ ಆಮ್ಯಾಲೆ ಹೊಳಿತ ಅನಿವರ್ಸರಿ ಅಂದರ ಹೆಂಡತಿ ಜೊತಿಗೆ ಇಷ್ಟ ಆಗೋದ, ಹಂಗ ಹೊರಗಿನ ಸೆಟಿಂಗ್ ಎಷ್ಟ ಇದ್ದರು ಅನಿವರ್ಸರಿ ಮಾಡ್ಕೋಳ್ಳಿಕ್ಕೆ ಬರಂಗಿಲ್ಲಾ ಅಂತ ಸುಮ್ಮನ
” ಆತ ತೊಗೊಪಾ, ಸಂಜೀಗೆ ಬರ್ತೇನಿ, ಎನಿ ವೇ ವಿಶ್ ಯು ವೆರಿ ಹ್ಯಾಪಿ ಫಸ್ಟ್ ಅನಿವರ್ಸರಿ” ಅಂತ ಕೆಟ್ಟ ಮಾರಿಲೆ ನನ್ನ ಹೆಂಡತಿ ಮಾರಿ ನೋಡ್ಕೋತ ಮೊಬೈಲ್ ಅಕಿ ಕೈಯಾಗ ಕೊಟ್ಟೆ.
ಜನಾ ಜಗತ್ತಿನಾಗ ಏನೇನ ಸೆಲೆಬ್ರೇಟ ಮಾಡ್ಕೋತಾರಲಾ ಅಂತ ಅನಸ್ತು, ಅಲ್ಲಾ ಅವನೌನ ಮ್ಯಾರೇಜ ಅನಿವರ್ಸರಿ ಏನ ಸೆಲೆಬ್ರೇಟ ಮಾಡೋದ ? ‘ಮ್ಯಾರೇಜ ಅನಿವರ್ಸರಿ’ ಅಂದರ ಗಂಡಸರಿಗೆ ‘ಶಹಿದ ದಿವಸ’ ಇದ್ದಂಗ, ಒಂದ ಥರಾ ಗಂಡಂದರ ಶ್ರಾದ್ಧ ಅನ್ನರಿ. ಅದನ್ನು ಹೆಂಡತಿ ಹೇಳ್ತಾಳ ಅಂತ ಸೆಲೆಬ್ರೇಟ್ ಮಾಡ್ತಾರ ಅಂದರ, ಏನ ಹೇಳಬೇಕ? ಇದ ಒಂಥರಾ ನಮಗ ನಾವ ವರ್ಷಕ್ಕೊಮ್ಮೆ ನೀರ ಬಿಟಗೊಂಡಂಗ. ಅಲ್ಲಾ ಇದ ನನ್ನ ಅನಿಸಿಕೆ ಬಿಡರಿ, ಕೆಲವಬ್ಬರಿಗೆ ಹಿಂತಾವನ್ನ ಸೆಲೆಬ್ರೇಟ್ ಮಾಡೋದರಾಗೂ ಮಜಾ ಬರ್ತದ ಆ ಮಾತ ಬ್ಯಾರೆ. ಆ ಮಗಗ ಲಗ್ನ ಮಾಡ್ಕೊಂಡಿದ್ದ ಒಂದ ದೊಡ್ಡ ಅಚೀವಮೆಂಟ ಅನಸಿರಬೇಕು ಅದಕ್ಕ ಅನಿವರ್ಸರಿ ಮಾಡ್ಕೋಳಿಕತ್ತಾನ ಅಂತ ನಾ ಸುಮ್ಮನಾದೆ.
ಮುಂದ ನಾ ನಾಷ್ಟಾ ಮಾಡಬೇಕಾರ ನನ್ನ ಹೆಂಡತಿ
“ಅಲ್ಲರೀ ಅವರದ ಒಂದನೇ ಅನಿವರ್ಸರೀನ ? ಆರ ತಿಂಗಳ ಹಿಂದ ಅವನ ಹೆಂಡತಿ ಎರಡನೇದ ಹಡದಾಗ ಇಬ್ಬರೂ ಹೋಗಿ ವಾತ್ಸಲ್ಯ ಹಾಸ್ಪಿಟಲದಾಗ ಕೂಸಿನ ಕೈಯಾಗ 100 ರೂಪಾಯಿ ಕೊಟ್ಟ ಬಂದಿಲ್ಲಾ ?” ಅಂದ್ಲು. ಏ ಇಕಿ ಭಾರಿ ನೆನಪ ಇಟ್ಟಾಳಲಾ ಅನಸ್ತು. ಹಿಂತಾದರಾಗ ನಮ್ಮಕಿ ಭಾಳ ಶಾಣ್ಯಾಕಿರಿಪಾ, ಕೊಟ್ಟದ್ದ ಎಂದು ಮರೆಯಂಗಿಲ್ಲಾ. ನಾವ ಅವರ ಕೂಸಿಗೆ ಎಷ್ಟ ಕೊಟ್ಟಿದ್ವಿ, ಅವರ ನಮ್ಮ ಕೂಸಿಗೆ ಎಷ್ಟ ಕೊಟ್ಟಿದ್ದರು? ಹಿಂತಾವೇಲ್ಲಾ ಲೆಕ್ಕಾ ಇಡಲಿಕ್ಕೆ ಹೇಳಿ ಮಾಡಿಸಿದಂಗ ಇದ್ದಾಳ. ವ್ಯವಹಾರ ಜ್ಞಾನ ಇಲ್ಲದ ಇದ್ದರು ಕಡಾ ತೀರಿಸಿಗೊಳ್ಳಿಕ್ಕೆ ಎತ್ತಿದ ಕೈ. ಅಲ್ಲಾ ಹಂಗ ಎಲ್ಲಾ ಹೆಣ್ಣಮಕ್ಕಳು ಅವರ ಬಿಡರಿ, ಕುಂಕುಮಾ ಹಚ್ಚಿ ಜಂಪರ್ ಪೀಸ್ ಉಡಿತುಂಬಬೇಕಾರು ‘ಆನ್ ರಿಟರ್ನೇಬಲ್ ಬೇಸಿಸ್’ ಅಂತ ತಲ್ಯಾಗ ಇಟಗೊಂಡ ಉಡಿತುಂಬಿರತಾರ ಸುಳ್ಳ ನನ್ನ ಹೆಂಡತಿಗೆ ಇಷ್ಟ ಯಾಕ ಬಟ್ಟ ಮಾಡಬೇಕು.
ಆದರ ಇಕಿ ಹೇಳೋದು ಖರೇನ ಅದ, ಅವಂಗ ಇವತ್ತ ಎರಡ ಮಕ್ಕಳ ಅವ, ಅವೇನ ವರ್ಷ ತುಂಬೋದರಾಗ ಇಲ್ಲಾ ಮದುವಿಗಿಂತಾ ಮುಂಚೆ ಏನ ಹುಟ್ಟಿದ್ದಲ್ಲಾ, ಒಂದನೇದಕ್ಕ ಎರಡ – ಎರಡುವರಿ ವರ್ಷ ಇರಬೇಕು , ಎರಡನೇದ ಒಂದ ಆರ ತಿಂಗಳ ಕೂಸ ಅದ. ಹಂಗಾದರ ಇವಂದ ಒಂದನೇ ಅನಿವರ್ಸರೀ ಹೆಂಗ? ಅಂತ ವಿಚಾರ ಮಾಡಲಿಕತ್ತೆ. ಅಲ್ಲಾ ನಮಗ ಯಾರಿಗೂ ಹೇಳಲಾರದ ಮತ್ತೇನರ ಇನ್ನೊಂದ ಲಗ್ನಾ ಮಾಡ್ಕೋಳೊ ಸೌಭಾಗ್ಯ ಸಿಕ್ಕತಿನ ಮಗಗ ಅಂತ ನನಗ ಸಂಕಟ ಆಗಲಿಕತ್ತ. ಅಷ್ಟರಾಗ ನೆನಪಾತ ನೋಡ್ರಿ ಇವತ್ತ ಫೆಬ್ರುವರಿ 29 ಅಂತ. ಅವಂದ ಮದುವಿ ಆಗಿದ್ದ ಫೆಬ್ರುವರಿ 29, 2008ಕ್ಕ ಅಂದರ ‘ಲೀಪ್’ ವರ್ಷದಾಗ, ಹಂಗಾಗಿ ಅವಂದ ಅನಿವರ್ಸರಿ ಡೇಟ್ ಪ್ರಕಾರ ಬರೋದ 4 ವರ್ಷಕ್ಕ ಒಂದ ಸರತೆ ಇಷ್ಟ. ಅದಕ್ಕ ಮಗಾ ಲಗ್ನದಾಗ ನಾಲ್ಕ ಮಂದಿ ಕರದ ಊಟಾ ಮಾಡಿಸಿದಾಂವ ತಿರುಗಿ ಊಟಕ್ಕ ಕರದಿದ್ದ ಇವತ್ತ.
ಈ ಮಗಾ ಏನ ಪೂಣ್ಯಾ ಮಾಡ್ಯಾನ ಅನಸ್ತು. ಅಲ್ಲರಿ , ನಾಲ್ಕ ವರ್ಷಕ್ಕೊಂದ ಸರತೆ ಇಷ್ಟ ಅನಿವರ್ಸರಿ ಅಂದರ ಅವನ ಹೆಂಡತಿಗೆ ಅಂವಾ ನಾಲ್ಕ ವರ್ಷಕ್ಕೊಮ್ಮೆ ಇಷ್ಟ ಅನಿವರ್ಸರಿ ಗಿಫ್ಟ ಕೊಡತಾನ ಮುಂದ ಮೂರ ವರ್ಷ ಅನಿವರ್ಸಿರಿ ಚಿಂತೆನ ಇರಂಗಿಲ್ಲಾ. ಅಲ್ಲಾ, ಹಂಗ ಹೆಂಡತಿ ಇದ್ದಾಳಲಾ ಅನ್ನೋ ಚಿಂತಿ ಮುಂದ ಅನಿವರ್ಸರಿ ಚಿಂತಿ ಏನ ದೊಡ್ಡದಲ್ಲ ಖರೆ, ಆದ್ರೂ ಒಂದ ಚಿಂತೆರ ನಮಕಿಂತಾ ಅವಂಗ ಕಡಿಮೆ ಅದ ಅಲಾ, ಈ ಮಗಾ ಭಾಳ ವಿಚಾರ ಮಾಡಿನ ಫೆಬ್ರುವರಿ 29ಕ್ಕ ಮದುವಿ ಆಗ್ಯಾನ ಅನಸ್ತು.
ಹಂಗ ಫೆಬ್ರುವರಿ 29ಕ್ಕ ಹುಟ್ಟಿದವರದ ಹುಟ್ಟಿದ ಹಬ್ಬನು ಡೇಟ ಪ್ರಕಾರ ನಾಲ್ಕ ವರ್ಷಕ್ಕೊಮ್ಮೆ ಇಷ್ಟ, ಹಂಗ ಯಾರರ ಫೆಬ್ರುವರಿ 29ಕ್ಕ ನಮ್ಮ ಮಂದ್ಯಾಗ ಸತ್ತಾಗ ವರ್ಷಾಂತಕಾನೂ ತಿಥಿ ಬದ್ಲಿ ಡೇಟ ಪ್ರಕಾರ ಮಾಡೋ ಪದ್ಧತಿ ಇದ್ದರ, ಅದನ್ನು ನಾಲ್ಕ ವರ್ಷ ಬಿಟ್ಟ ಮಾಡಬೇಕಾಗತಿತ್ತು. ಮುಂದ ನಾಲ್ಕ-ನಾಲ್ಕ ವರ್ಷಕ್ಕೊಮ್ಮೆ ಇಷ್ಟ ಶ್ರದ್ಧಾ, ಈಗ ವರ್ಷಕ್ಕೊಮ್ಮೆ ಶ್ರಾದ್ಧಾ ಮಾಡಬೇಕಾರ ಇಷ್ಟರ ತಮ್ಮ ಅಜ್ಜಾ-ಅಜ್ಜಿ , ಅವ್ವಾ-ಅಪ್ಪನ್ನ ನೆನಸೊರು ಮುಂದ ನಾಲ್ಕ ವರ್ಷಕ್ಕೊಮ್ಮೆ ಇಷ್ಟ ಶ್ರಾದ್ಧ ಅಂದರ ಮುಂದಿನ ಶ್ರಾದ್ಧದ ಪಾಳೆ ಬರೋದರಾಗ ಇವತ್ತ ಯಾರ ಶ್ರಾದ್ಧ ಅನ್ನೋದನ್ನೂ ಮರತ ಬಿಟ್ಟಿರತಾರ. ಹಂಗ ಆಗಬಾರದಂತ ನಮ್ಮ ಮಂದಿ ತಿಥಿ ಹುಟ್ಟಿಸಿರಬೇಕ, ಆ ತಿಥಿ ಎರೆಡರಡ ಬರತಾವ ಹೊರತು ಗುಪ್ತ ಆಗಂಗಿಲ್ಲಾ.
ಹಂಗ ನನ್ನ ಮದುವಿ ಆಗಿದ್ದೂ ‘ಲೀಪ್’ ವರ್ಷ ಇದ್ದಾಗ,ಅಂದರ 2000ದಾಗ. ನಾನು ಸುಮ್ಮನ ಫೆಬ್ರುವರಿ 29ಕ್ಕ ಮದುವಿ ಮಾಡ್ಕೋಬೇಕಿತ್ತು ಇಂತ ಈನ ಅನಸಲಿಕತ್ತದ. ನನ್ನ ಹೆಂಡತಿಗೆ ವರ್ಷಾ- ವರ್ಷಾ ಎರೆಡೆರಡ ಹೊಸಾ ನೈಟೀ ಕೊಡಸೋದರ ತಪ್ಪತಿತ್ತ. ಆದ್ರ ಆಗಿದ್ದ ಆಗಿ ಹೋತ ಬಿಡ್ರಿ. ಈಗ ಭಾಳಂದ್ರ ಮುಂದಿನ ಫೆಬ್ರುವರಿ 29ಕ್ಕ ಸಾಕವಾ ನಿನ್ನ ಉಸಾಬರಿ ಅಂತ ಕೈಮುಗದ ಅರಿಷಣ ಕುಂಕಮಾ ಹಚ್ಚಿ ಒಂದ ಜಂಪರ್ ಪೀಸ್ ಉಡಿ ತುಂಬಿ ಡೈವರ್ಸ ಕೊಡಬಹುದು ಇಷ್ಟ.
ಈ ‘ಲೀಪ್ ಇಯರ್’ಕ್ಕು ನಮ್ಮ ಮಂದಿ ಅಧಿಕ ವರ್ಷಕ್ಕೂ ಹಂಗೇನ ಖಾಸ ಸಂಬಂಧ ಇಲ್ಲಾ, ನಮ್ಮ ಅಧಿಕ ಮಾಸ ಮೂರ ವರ್ಷಕ್ಕೊಮ್ಮೆ ನಾವ ಮಾಡಿದ್ದ ಪಾಪಾ ಜಾಸ್ತಿ ಆದಗೊಮ್ಮೆ ಬರಕೋತ ಇರತದ. ಹಿಂಗಾಗಿ ಮಂದಿ ಅಧಿಕ ಮಾಸದಾಗ ದಾನ-ಧರ್ಮ, ದೇವರು-ದಿಂಡ್ರು ಎಲ್ಲಾ ಮಾಡಿ ಗುಡಿ-ಗುಂಢಾರ ಅಡ್ಡ್ಯಾಡತಾರ. ಅಧಿಕ ಮಾಸದಾಗ ಬರೋ ತಿಥಿಯೆಲ್ಲಾ ಮತ್ತ ಅದರ ಮುಂದಿನ ತಿಂಗಳ ರಿಪೀಟ್ ಆಗತಾವ. ಹಂಗ ಅಧಿಕ ಮಾಸದಾಗ ಮದುವಿ ಆದರ ಮತ್ತ ಅದು ಮುಂದಿನ ತಿಂಗಳ ರಿಪೀಟ್ ಆಗಂಗಿಲ್ಲಾ ಮತ್ತ. ಅದಕ್ಕ ಜನಾ ಎಲ್ಲೇರ ಹಂಗ ತಿಳ್ಕೊಂಡ ಮತ್ತೊಂದ ಮಾಡ್ಕೊಂಡ ಗಿಂಡಾರಂತ ಅಧಿಕದಾಗ ಮದುವಿ ಮಾಡ್ಕೋಬಾರದ ಅಂತ ಶಾಸ್ತ್ರನ ಮಾಡಿಬಿಟ್ಟಾರ. ಆದರ ಅಷ್ಟರಾಗ ಅಧಿಕ ಮಾಸದಾಗ ಯಾರರ ಸತ್ತರ ಅವರ ಶ್ರಾದ್ಧ ಮಾತ್ರ ಅಧಿಕ ಬಂದಾಗ ಒಮ್ಮೆ ಎರೆಡೆರಡ ಸರತೆ ಮಾಡಬೇಕಾಗತದ. ಅಧಿಕ ಮಾಸದಾಗ ಮಂದಿಗೆ ಬಾಗಣಾ ಕೊಡೊ ಪದ್ಧತಿ ಬ್ಯಾರೆ ಇರತದ, ಹಂಗ ಬಾಗಣಾ ಕೊಟ್ಟರ ಪುಣ್ಯಾ ಬರತದಂತ, ಪಾಪ ಏನ ಕಡಿಮೆ ಆಗಂಗಿಲ್ಲ ಮತ್ತ. ಅದ ಏನ ಬಾಗಣ ಕೊಟ್ಟರು 33 ಕೊಡಬೇಕಂತ. ಬಹುಶಃ ನಮ್ಮ ಪೈಕಿ 33 ಕೋಟಿ ದೇವರ ಇದ್ದಾರಂತಲಾ ಅದಕ್ಕೊ ಇಲ್ಲಾ ಅಧಿಕ ಮಾಸ ಲಗಭಗ 33 ತಿಂಗಳಿಗೊಮ್ಮೆ ಬರತದ ಅಂತನೋ ಒಟ್ಟ ಏನ ಕೊಟ್ಟರು 33 ಕೊಡೊ ಪದ್ಧತಿ. ಮತ್ತ ಅಗದಿ ಈ ಅಧಿಕ ಮಾಸ ನಮಗ ರೊಕ್ಕದ ತ್ರಾಸ ಜಾಸ್ತಿ ಇದ್ದಾಗ ಬಂದಿರತದ ಹಿಂಗಾಗಿ ಕೆಲವೊಮ್ಮೆ ಬಾಗಣ ಕೊಡಬೇಕಾರೂ 33 ಮಂದಿ ಕಡೆ ಸಾಲಾ ಮಾಡೋ ಪ್ರಸಂಗ ಬರತದ, ಇರಲಿ ಈಗ ಅಧಿಕ ಮಾಸನ ನಡದದ, ಸಾಲಾ ಸೂಲಾ ಮಾಡಿದರೂ ಅಡ್ಡಿಯಿಲ್ಲಾ ಉರ ಮಂದಿನ್ನ ಕರದ 33 ಉತ್ತತ್ತಿ ಕೊಟ್ಟರು ಅಡ್ಡಿಯಿಲ್ಲಾ ದಾನಾ ಕೊಡದನ್ನ ಮಾತ್ರ ಬಿಡೋದ ಬ್ಯಾಡ, ಅಂದರ ಮತ್ತ ಮುಂದಿನ ಅಧಿಕ ಮಾಸದ ತನಕಾ ನಾವು ಏನ ಸುಡಗಾಡ ಪಾಪ ಮಾಡ್ಕೋತ ಅಡ್ಯಾಡಿದರು ನಮಗ ಒಂದ ಮನಸಿಗೆ ಸಮಾಧಾನರ ಇರತದ.
ಇನ್ನ ನಿಮಗ ಈ ಫೆಬ್ರುವರಿ 29ರದ ಇತಿಹಾಸ ಒಂದ ಚೂರ ಹೇಳ್ಬೇಕಂದ್ರ, ಹಿಂದಕ 5ನೇ ಶತಮಾನದಾಗ ಐರಲ್ಯಾಂಡ , ಸ್ಕಾಟಲ್ಯಾಂಡ ಒಳಗ ಯಾ ಹುಡುಗಿ ಬೇಕಾದರು ಫೆಬ್ರುವರಿ 29ಕ್ಕ ತನ್ನ ತಲ್ಯಾಗ ತಿಳಿದಿದ್ದ ಹುಡುಗಗ ಪ್ರಪೋಸ್ ಮಾಡಬಹುದಿತ್ತ ಅಂತ, ಅಂದ್ರ ನಾಲ್ಕ ವರ್ಷಕ್ಕ ಒಂದ ಸರತೆ ಇಷ್ಟ ಹುಡುಗಿ ಮನಸ್ಸಿಗೆ ಬಂದ ಹುಡುಗಗ ಪ್ರಪೋಸ ಮಾಡತಿದ್ಲು, ಉಳದ ಮೂರ ವರ್ಷ ಸುಮ್ಮನ ಬಾಯಿ ಮುಚಗೊಂಡ ಅವ್ವಾ ಅಪ್ಪಾ ಹೇಳಿದ್ದ ಹುಡಗ್ಗ ಲಗ್ನ ಮಾಡ್ಕೋತಿದ್ದರು, ಈಗಿನ ಗತೆ ನಂಗ ಸಲ್ಮಾನಖಾನ ಬೇಕು, ರಣಬೀರ ಕಪೂರ ಬೇಕು ಅಂತಿದ್ದಿಲ್ಲಾ. ಇತ್ತೀಚಿಗಂತೂ ನಾವು ಅಂದರ ಗಂಡಸರು ನಮ್ಮ ಮರ್ಜಿ ಪ್ರಕಾರ ಹುಡುಗ್ಯಾರನ್ನ ಲಗ್ನ ಮಾಡ್ಕೋಳೋದ ಕನಸಿನ ಮಾತ ಆಗೇದ, ಈಗ ಏನಿದ್ರು ಹುಡುಗ್ಯಾರ ಮರ್ಜಿ ಮ್ಯಾಲೆ ಹುಡುಗರು ಸೆಲೆಕ್ಟ, ಸೊಲ್ಡ ಆಗಲಿಕತ್ತಿದ್ದು. ಇರಲಿ, ಹಂಗ ಆವಾಗ ಹುಡುಗಿ ಪ್ರಪೋಸ ಮಾಡಿದಾಗ ಅಕಸ್ಮಾತ ಆ ಹುಡುಗಾ ನಾ ಒಲ್ಲೇ ಅಂತ ಅಂದರ ಅಂವಾ ಅಕಿಗೆ ದಂಡಾ ಕೊಡಬೇಕಾಗ್ತಿತ್ತಂತ, ಈಗ ನಾವ ಹೂಂ ಅಂದದ್ದ ತಪ್ಪಿಗೆ ದಿವಸಾ ದಂಡಾ ಕೊಡಲಿಕತ್ತೇವೆಲಾ ಹಂಗ ಅಲ್ಲಾ ಮತ್ತ. ಆ ದಂಡಾ ಏನಪಾ ಅಂದರ ತಾ ಒಲ್ಲೇ ಅಂದ ಹುಡುಗಿಗೆ ಆ ಹುಡುಗಾ ಒಂದ ಕಿಸ್ಸ್ (ಗಲ್ಲಕ್ಕ ಇಷ್ಟ ಮತ್ತ), ಒಂದ ಹೊಸಾ ನೀರಿಗೆ ಹಾಕಲಾರದ ಸಿಲ್ಕ ಗೌನ ಕೊಡಸಬೇಕಾಗ್ತಿತ್ತಂತ,
ಹೆಂತಾ ಮಜಾ ಅಂತೀರಿನ, ನಾವು-ನೀವು ಆಗಿದ್ದರ ಒಂದ ಇಪ್ಪತ್ತ ಹುಡಿಗ್ಯಾರಿಗೆ ಅವರು ಪ್ರಪೋಸ್ ಮಾಡಿದಾಗ ‘ಇಲ್ಲಾ’ ಅಂದ ಇಪ್ಪತ್ತ ಕಿಸ್ಸ್ ಕೊಟ್ಟ, ಗೌನ ಹಾಕಿ ಕಳಸ್ತಿದ್ದವಿ ಅನ್ನ ಬ್ಯಾಡರಿ, ಹಂಗ ನಮ್ಮ ನಸೀಬದಾಗ ಇಪ್ಪತ್ತ ಕಿಸ್ಸ್ ಕೊಡೋದು ಬರದಿರಬೇಕು ಅಂದರ ನಮ್ಮ ಮಾರಿಗೆ ಮೊದ್ಲ ಇಪ್ಪತ್ತ ಹುಡಗ್ಯಾರ ಪ್ರಪೋಸ್ ಮಾಡಬೇಕು, ಆಮ್ಯಾಲೆ ನಾವು ರಿಜೆಕ್ಟ ಮಾಡೋ ಮಾತ. ಇವತ್ತ ನಾವ ಇಲ್ಲಾ ಅಂದ ಕಿಸ್ ಕೊಡೊದ ದೂರ ಉಳಿತ ನಮ್ಮ ಮಾರಿಗೆ … ಹೋಗಲಿ ಬಿಡರಿ ನಮ್ಮಷ್ಟಕ್ಕ ನಾವ ಯಾಕ ಕಂಡೆಮ್ ಮಾಡ್ಕೋಬೇಕು.
ಹಂಗ ಯಾ ಹುಡುಗಿ ಬೇಕ ಆ ಹುಡುಗಿ ಪ್ರಪೋಸ ಮಾಡೋ ಹಂಗನೂ ಇದ್ದಿದ್ದಿಲ್ಲಾ, ಯಾರ ಪ್ರಪೋಸ ಮಾಡಬೇಕ ಅಂತಾರೋ ಹಂತಾ ಹುಡುಗಿ ತನ್ನ ಗೌನ ಒಳಗ ಕೆಂಪದು ಇಲ್ಲಾ ಪಿಂಕ್ ಪೆಟಿಕೋಟ ಅಂದರ ಪರಕಾರ ಹಾಕ್ಕೊಂಡಿದ್ದರ ಇಷ್ಟ ಅದ ವ್ಯಾಲಿಡ್ ಪ್ರಪೋಸಲ್ ಆಗ್ತಿತ್ತಂತ. ಅವಾಗ ಈ ಸುಡಗಾಡ ನೈಟಿ ಇದ್ದಿದ್ದಿಲ್ಲಾ, ಹಿಂಗಾಗಿ ಒಳಗ ಪೆಟಿಕೋಟ್ ಮ್ಯಾಲೆ ಗೌನ್ ಅಂತ ಹೆಣ್ಣಮಕ್ಕಳ ಎರಡೆರಡ ಹಾಕೊತಿದ್ದರು. ಅಲ್ಲಾ ಹಂಗ ಪ್ರಪೋಸ ಮಾಡಲಿಕ್ಕೆ ಬಂದೋಕಿದ ಹುಡುಗುರು ಗೌನ ಎತ್ತೇತ್ತಿ ನೋಡತಿದ್ದರೇನೂ ಅಂತ ನನಗ ಕೇಳಬ್ಯಾಡರಿ, ನಂಗ ಅದ ಗೊತ್ತಿಲ್ಲಾ, ನಾ ಅಂತೂ ಯಾರ ಗೌನ್ ಎತ್ತಿ ನೋಡಿಲ್ಲಾ. ನಾನು ನಿಮ್ಮಂಗ ಇಪ್ಪತ್ತನೇ ಶತಮಾನದಾಗ ಹುಟ್ಟಿದಂವಾ. ಏನೋ ಫೆಬ್ರುವರಿ 29ಕ್ಕ ಹಿಂದ ಇತಿಹಾಸದಾಗ ಹೆಂತಿಂತಾ ವಿಚಾರ ನಡಿತಿದ್ವು ಅಂತ ತಿಳಿಸಿ ಹೇಳಿದೆ ಇಷ್ಟ. ಮತ್ತ ಇದ ಏನ ನಾ ಕಟ್ಟಿದ್ದ ಕಥಿ ಅಲ್ಲಾ, ಇತಿಹಾಸ ತಗದ ನೋಡ್ರಿ ನಿಮಗೂ ಗೊತ್ತಾಗತದ ನಾ ಖರೆ ಹೇಳಲಿಕತ್ತೇನಿ ಅಂತ.
ಏನ ‘ರೇರ ಕಸ್ಟಮ’ ಅನಸ್ತದ ಅಲಾ? ಬಹುಶಃ ಆವಾಗ ಇದ ಒಂದ ನಮೂನಿ ಹೆಣ್ಣಮಕ್ಕಳೊಳಗ ನಾಲ್ಕ ವರ್ಷಕ್ಕೊಮ್ಮೆ ಬರೋ ಡೀಸಿಸ್ ಇತ್ತ ಕಾಣಸ್ತದ. ನಾಲ್ಕ ವರ್ಷಕ್ಕೊಮ್ಮೆ ಕಂಡ – ಕಂಡ ಗಂಡಸರಿಗೆಲ್ಲಾ ‘ಗಂಡಸರನ ಕಂಡೇನೂ ಇಲ್ಲೊ’ ಅನ್ನೊ ಹಂಗ ಪ್ರಪೋಸ್ ಮಾಡೋದು, ಅಂವಾ ಹೂಂ ಅಂದರ ಅವನ್ನ ಕಟಕೊಂಡ ಜೀವನ ಪರ್ಯಂತ ಅವನ ಜೀವಾ ತಿನ್ನೊದು ಇಲ್ಲಾ ಅಂದರ ಒಂದ ಕಿಸ್ಸ್, ಒಂದ ಗೌನ ಕೊಡಿಸಿಕೊಂಡ ಮತ್ತೊಬ್ಬನ ಕಡೆ ಹೋಗಿ ಮತ್ತ ಪ್ರಪೋಸ್ ಮಾಡೋದು, ಬಹುಶಃ ಅದಕ್ಕ ಈ ಸಲ ಫೆಬ್ರುವರಿ 29ಕ್ಕ ಭಾಳಷ್ಟ ದೇಶದಾಗ ಇದನ್ನ ‘ರೇರ ಡಿಸಿಸ್ ಡೇ’ ಅಂತ ಆಚರಿಸಿದರು. ಅಂದ್ರ ಗೊತ್ತಾತಲಾ? ಹಿಂಗ ಕಂಡ ಕಂಡೊರಿಗೆ ಪ್ರಪೋಸ್ ಮಾಡೋದು ಹೆಣ್ಣ ಮಕ್ಕಳ ಒಳಗ ಇರೋ ‘ರೇರ್ ಡೀಸಿಸ್’ ಅಂದರ ‘ಅತಿ ವಿರಳ ಜಡ್ಡು’ ಅಂತ ಅರ್ಥ ಆದರ ಅದು ಭಾಳ ಪುರಾತನ ಜಡ್ಡು ಅಂತ ನಿಮಗ ಈಗ ಗೊತ್ತಾತ ಹೌದಲ್ಲ?
ಅಲ್ಲಾ ನಮ್ಮ ಮಂದಿ ಒಳಗ ಮೊದ್ಲ ಹೆಣ್ಣ ಸಿಗೋದ ಭಾಳ ‘ರೇರ’ ಆಗಿ, ಪಾಪ ನಮ್ಮ ಎಳೆ ಹುಡುಗರೆಲ್ಲಾ ‘ಡೀಸಿಸಡ’ ಆಗ್ಯಾರ. ಇನ್ನ ಕನ್ಯಾ ತಾವ ಬಂದ ಪ್ರಪೋಸ್ ಮಾಡೋದು ನಮ್ಮ ಕನಸಿನ ಮಾತ ಸೈ. ಇದೇಲ್ಲಾ ಒಂದ ಸಾವಿರಾರು ವರ್ಷದ ಹಿಂದ ಮುಗದ ಹೋದ ಕಥಿ, ನಿಮಗೂ ಗೊತ್ತಿರಲಿ ಅಂತ ಹೇಳಿದೆ ಇಷ್ಟ.
ಈಗ ಆಗಿದ್ದ ಆಗಿ ಹೋತು, ಮುಂದೀನ ಫೆಬ್ರುವರಿ 29ಕ್ಕ ನೀವ ಏನ ಮಾಡೊರು ವಿಚಾರ ಮಾಡ್ರಿ,ಹಂಗ ನಿಮಗ್ಯಾರಿಗರ ಫೆಬ್ರುವರಿ 29ಕ್ಕ ಮದುವಿ ಆಗಬೇಕಂದರ ಇಲ್ಲಾ ಹಡಿಬೇಕಂದರ ಈಗಿಂದ ಪ್ಲ್ಯಾನ ಮಾಡರಿ , ಫೆಬ್ರುವರಿ 29 ಮತ್ತ ಬರೋದ ಇನ್ನ 2016ಕ್ಕ, ನೀವ ಈಗಿಂದ ಕನ್ಯಾ ನೋಡಲಿಕ್ಕೆ ( ಲಗ್ನ ಆಗಲಾರದವರ ಮತ್ತ ) ಶುರುಮಾಡಿದರ ಅಲ್ಲಿ ಮಟಾ ಮದುವಿ ಆದರು ಆಗ ಬಹುದು, ಹಂಗ ಈಗ ಕನ್ಯಾ ಲಗು ಸಿಕ್ಕವರು ಮದುವಿ ಮಾಡ್ಕೊಂಡ ಒಂದನೇದ ತಯಾರಿ ಮಾಡೋದರಾಗ 2015 ಆಗಿ ಬಿಡತದ ಮುಂದ 2016ಕ್ಕ ಕರೆಕ್ಟ ಫೆಬ್ರುವರಿ 29ಕ್ಕ ಹಡಿಬಹುದು, ಹಂಗ ನಾರ್ಮಲ್ ಡಿಲೆವರಿನ ಆಗಬೇಕಂತ ಏನ ಇಲ್ಲಾ , ಕರೆಕ್ಟ ಅವತ್ತ ಸಿಜರಿನ್ ಮಾಡಿಸಿದರಾತು. ಏನ ಈಗಿನ ಹೆಣ್ಣ ಮಕ್ಕಳು ಬ್ಯಾನಿ ತಿಂದ ನಾರ್ಮಲ್ ಹಡೆಯೋದ ಅಷ್ಟರಾಗ ಅದ. ಈಗಿನ ಕಾಲದಾಗ ಏನ ಬ್ಯಾನಿ ತಿಂದರು ಗಂಡಂದರ ತಿನ್ನಬೇಕು. ನನ್ನ ಕೇಳರಿಲ್ಲಿ ನಾ ಎರಡ ಹಡದವ ಇದ್ದೇನಿ. ಹಡದ ಮ್ಯಾಲೆ ಗಂಡಸರಿಗೆ ಇನ್ನೂ ಬ್ಯಾನಿ ಜಾಸ್ತಿ ಆಗತಾವ ಹೊರತು ಕಡಿಮೆ ಅಂತೂ ಆಗಂಗಿಲ್ಲಾ.
ಅಲ್ಲಾ, ಮತ್ತ ನಿಮಗೂ ಯಾವದರ ಹುಡುಗಿ ಫೆಬ್ರುವರಿ 29ಕ್ಕ ಬಂದ ಪ್ರಪೋಸ್ ಮಾಡತಾಳ ನೀವು ಅಕಿಗೆ ‘ಒಲ್ಲೆ’ ಅಂದ ಒಂದ ಕಿಸ್ಸ್ ಕೊಟ್ಟ ಕಳಸಿದರಾತೂ ಅಂತ ಅನ್ಕೋ ಬ್ಯಾಡರಿ, ಅಕಸ್ಮಾತ ಹಂಗ ಯಾರರ ಬಂದ ಪ್ರಪೊಸ್ ಮಾಡಿದರು ಅಂತ ಅಂದರ ಸುಡಗಾಡ ಒಂದ ಗಲ್ಲದ ಕಿಸ್ಸ್ ಸಂಬಂಧ ಇಡೀ ಹುಡುಗಿನ್ನ ರಿಜೆಕ್ಟೂ ಮಾಡ ಬ್ಯಾಡರಿ. ಏ, ಮತ್ತೇಲ್ಲರ ಯಾರರ ಕನ್ಯಾ ತೋರಸಲಿಕ್ಕೆ ಬಂದಾಗ ಕನ್ಯಾದ್ದ ಸೀರಿ ಎತ್ತಿ ಒಳಗ ಪಿಂಕ್ ಪರಕಾರ ಅದನೋ ಇಲ್ಲೊ ಅಂತ ನೋಡಲಿಕ್ಕೆ ಹೋಗಿ-ಗೀಗಿರಿ. ಆಮ್ಯಾಲೆ ಅದೇನೋ ಹೇಳ್ತಾರಲಾ, ನೀವ ಅಕಿ ಗಲ್ಲಕ್ಕ ಕಿಸ್ ಕೊಡದ ದೂರ ಉಳಿತ ಆ ಹುಡುಗಿ ನಿಮ್ಮ ಗಲ್ಲಕ್ಕ ಚಪ್ಪಲ್ಲಿಲೆ ಕಡದ ಹೋಗ್ತಾಳ ಇಷ್ಟ. ಅದಕ್ಕ ಸುಮ್ಮನ ಆ ಹುಡುಗಿ ಪರಕಾರ ಹಾಕ್ಕೊಂಡಿರಲಿ ಬಿಟ್ಟಿರಲಿ, ಒಟ್ಟ ಕನ್ಯಾ ‘ಕನ್ಯಾ’ ಇದ್ದರ ಹೂಂ ಅಂದ ಬಿಡರಿ. ಮದ್ಲ ಇಲ್ಲೆ ಕನ್ಯಾ ಸಿಗವಲ್ವು, ಸಿಕ್ಕಿದ್ದ ಶಿವಾ ಅನ್ನರಿ.
ಅನ್ನಂಗ ಅಧಿಕ ಮಾಸ ಮುಗಿಲಿಕ್ಕೆ ಬಂತು, ನಾನು ವೈದಿಕ ಬ್ರಾಹ್ಮಣ ಇದ್ದೇನಿ ಯಾರರ ಬಾಗಣಕೊಡರಿದ್ದರ ವಿಚಾರ ಮಾಡ್ರಿ ಮತ್ತ.