ಒಂದ ಹತ್ತ ದಿವಸದ ಹಿಂದಿನ ಮಾತ ಇರಬೇಕ, ಮಧ್ಯಾಹ್ನ ಊಟಾ ಮಾಡಿ ಆಫೀಸಗೆ ಬಂದೆ, ಅದರಾಗ ಮನ್ಯಾಗ ಬಿಸಿಬ್ಯಾಳಿ ಅನ್ನ ಉಂಡ ಬಂದಿದ್ದೆ ಹಿಂಗಾಗಿ ಹೊಟ್ಟ್ಯಾಗ ಕಾಂಕ್ರೀಟ್ ಹಾಕಿದಂಗ ಆಗಿತ್ತ. ಅಲ್ಲಾ ಹಂಗ ಅದರ ಟೇಸ್ಟೂ ಹಂಗ ಆಗಿತ್ತ ಆ ಮಾತ ಬ್ಯಾರೆ. ಇನ್ನ ಅದನ್ನ ಯಾರ ಮಾಡಿದ್ದರ ಅಂತ ಬಿಡಿಸಿ ಹೇಳೋದ ಏನ ಬ್ಯಾಡ ಅಲಾ?
ಸರಿ, ಹೊಟ್ಟಿ ವಜ್ಜಾ ಆಗೇದ, ಒಂದ ರೌಂಡ ಫ್ಯಾಕ್ಟರಿ ಒಳಗ ಅಡ್ಡಾಡಿ ಬಂದರಾತು ಅಂತ ಶಾಪ್ ಫ್ಲೋರ ರೌಂಡ್ಸಗೆ ಹೋದೆ. ಹಿಂಗ ಒಂದ ನಾಲ್ಕ ಹೆಜ್ಜಿ ಅಡ್ಡಾಡೊದರಾಗ ಎದರಿಗೆ ವೇಯಿಂಗ್ ಸ್ಕೇಲ ಕಾಣತ. ಅರೇ ಭಾಳ ದಿವಸ ಆತ ವೇಟ ಚೆಕ್ ಮಾಡಲಾರದ, ಅದರಾಗ ಯಾಕೊ ಒಂದ ಎರಡ ತಿಂಗಳದಿಂದ ಪ್ಯಾಂಟ ಬ್ಯಾರೆ ಟೈಟ ಆದಂಗ ಅನಸಲಿಕತ್ತಾವ ತಡಿ ಅಂತಾ ಸೀದಾ ವೇಯಿಂಗ ಮಶೀನ್ ಹತ್ತಿದೆ. ಅದು ಸೀದಾ ೫೬.೫೫೦ ಕೆ.ಜಿ ಅಂತ ತೋರಸ್ತ, ನಂಗ ಒಮ್ಮಿಂದೊಮ್ಮಿಲೆ ಗಾಬರಿ ಆತ. ಯಾಕಂದರ ಎರಡ ತಿಂಗಳ ಹಿಂದ ತೂಕಾ ನೋಡಿದಾಗ ೫೨.೪೫೦ ಇತ್ತ ಈಗ ಹೆಂಗ ಒಮ್ಮಿಕ್ಕಲೇ ಇಷ್ಟ ಏರ್ತಪಾ ಅಂತ ಅನಸ್ತ.
ನನ್ನ ವೇಟ ನೋಡಿ ನಮ್ಮ production managerಗೂ ಡೌಟ ಬಂತ, ಅಂವಾ ಎರಡ ಸರತೆ ವೇಯಿಂಗ್ ಸ್ಕೇಲಗೆ ಹೊಡದ- ಬಡದ ನೋಡಿದಾ ಆದರು ಅದ ಅಷ್ಟ ತೊರಸ್ತ. ಅಂವಾ ಒಂದ ಸರತೆ ನನ್ನ ಮಾರಿ ನೋಡಿ
’ಏನ್ ಸರ್ ದಪ್ಪಾಗಿರಲಾ’ಅಂದಾ. ನಾ ಗಾಬರಿ ಆಗಿ
’ಹೌದೊ..ಲೈಫ್ ಒಳಗ ಫಸ್ಟ್ ಟೈಮ್ ನನ್ನ ವೇಟ್ ೫೫ ಕ್ರಾಸ್ ಆಗಿದ್ದ’ ಅಂದೆ. ನಂಗ ನನ್ನ ವೇಟ್ ಜಾಸ್ತಿ ಆಗಿದ್ದಕ್ಕ ಖುಷಿ ಕಡಿಮಿ ಶಾಕ್ ಜಾಸ್ತಿ ಆಗಿತ್ತ. ಅಂವಾ ನನ್ನ ಮಾರಿ ನೋಡಿ
’ಸರ್ ಇದ ಗ್ರಾಸ್ ವೇಟ್ ತೊಗೊಳ್ರಿ..ಟೇರ್ ವೇಟ ಏನ ಜಾಸ್ತಿ ಆದಂಗ ಕಾಣಂಗಿಲ್ಲಾ, ಭಾಳ ಟೇನ್ಶನ್ ತೊಗೊಬ್ಯಾಡರಿ’ ಅಂತ ಸಮಾಧಾನ ಮಾಡಿದಾ. ಅಂವಾ ಹೇಳಿದ್ದು ಖರೇ ಅಂತ ನಾ ಭಡಾ ಭಡಾ ಬೂಟ್, ಪರ್ಸ್, ಮೊಬೈಲ್ ತಗದ ಮತ್ತೊಮ್ಮೆ ವೇಯಿಂಗ್ ಸ್ಕೇಲ್ ಮ್ಯಾಲೆ ಹತ್ತಿದೆ. ಅದ ಈ ಸರತೆ ೫೪.೯೫೦ ತೋರಸ್ತ.
ಒಂದ ಸ್ವಲ್ಪ ಸಮಾಧಾನ ಆತ, ಆ ಪ್ರೊಡಕ್ಶನ್ ಸುಪರವೈಸರ್
’ಸರ್ ಆ ಜೀನ್ಸ್ ಒಂದ ಎರಡ ಕೆ.ಜಿ ಇರಬೇಕ ತೊಗೊಳ್ರಿ’ ಅಂದಾ. ನಾ ತಲಿ ಕೆಟ್ಟ
’ಟೇರ್ ವೇಟ ಅಂದರ ನಾ ಏನ ಬತ್ತಲೇ ಬಂದ ನಿಲ್ಲಲಿ ಏನ್?’ ಅಂತ್ ಒದರಿದೆ.
ಅಷ್ಟರಾಗ ನಮ್ಮ quality managerನು ಬಂದಿದ್ದಾ, ಅವಂಗೂ ನನ್ನ ವೇಟ್ ಜಾಸ್ತಿ ಆಗಿದ್ದ ಆಶ್ಚರ್ಯ ಆಗಿತ್ತ. ಅಂವಾ
’ಸರ್. ವೇಯಿಂಗ್ ಸ್ಕೇಲ್ calibration due ಇದೆ. ಹಿಂಗಾಗಿ ತಪ್ಪ ತೋರಸ್ತಿರಬೇಕ. ನಿಂಬದೇನ ವೇಟ್ ಜಾಸ್ತಿ ಆಗಿಲ್ಲಾ ತೊಗೊಳ್ರಿ’ ಅಂತ ಅವನು ಸಮಾಧಾನ ಮಾಡಿದಾ.
ಒಂದ ಮಜಾ ಅಂದರ ನನ್ನ ಹಿಡದ ಯಾರಿಗನೂ ನಂದ ವೇಟ್ ಜಾಸ್ತಿ ಆತು ಅನ್ನೋದ ಖುಶಿ ಆಗಿರಲಿಲ್ಲಾ, ಅದ ಹೆಂಗ ವೇಟ್ ಜಾಸ್ತಿ ಆತು, ವೇಯಿಂಗ ಸ್ಕೇಲ ಕೆಟ್ಟಿರಬೇಕು, ಅದರ calibration ಆಗಿಲ್ಲಾ, ನನ್ನ ಮೈಮ್ಯಾಲಿನ ಅರಬಿ ದಪ್ಪ ಇದ್ದದ್ದಕ್ಕ ವೇಟ್ ಜಾಸ್ತಿ ತೊರಸಲಿಕತ್ತದ ಅಂತನ ಎಲ್ಲಾರೂ ವಿಚಾರ ಮಾಡಲಿಕತ್ತರು.
ಏನ್ಮಾಡ್ತೀರಿ. ದುಡದ ತಿಂದ-ಉಂಡ ಎರಡ ಕೆ.ಜಿ ವೇಟ್ ಜಾಸ್ತಿ ಮಾಡ್ಕೊಂಡರೂ ಯಾರು ನಂಬಲಿಲ್ಲಾ.
ಕಡಿಕೆ ರಾತ್ರಿ ಮನಿಗೆ ಹೋದಾಗ ನಮ್ಮವ್ವಗ ಹೇಳಿದರ ಪಾಪ ಅಕಿ
’ನಂಗೂ ನೀ ದಪ್ಪ ಆಗಿ ಅನಸ್ತದಪಾ, ಆದರ ಎಲ್ಲೆ ನಾ ಹಂಗ ಅಂದರ ನಿನ್ನ ಹೆಂಡತಿ ’ಹೆತ್ತ ತಾಯಿಗೆ ಹೆಗ್ಗಣಾ ಯಾವಾಗಲೂ ದುಂಡ ದುಂಡಗ ಕಾಣ್ತಾವ’ ಅಂತಾಳ ಅಂತ ಅನಲಿಲ್ಲಪಾ’ ಅಂತ ಅಂದ ರಾತ್ರಿ ಮಲ್ಕೋಬೇಕಾರ ದೃಷ್ಟಿ ತಗದ್ಲು.
ಆಮ್ಯಾಲೆ ನನ್ನ ಹೆಂಡ್ತಿಗೆ ’ನಾ ದಪ್ಪ ಆಗೇನಲೇ ಎರಡ ಕೆ.ಜಿ ವೇಟ್ ಏರೇದ’ ಅಂತ ಅಂದರ ಅಕಿ
’ಅಯ್ಯ..ವೇಟ್ ಜಾಸ್ತಿ ಆಗೇದ ಅಂತ ಜಾಸ್ತಿ. ಆ ಸುಡಗಾಡ ನಿಮ್ಮ ಫ್ಯಾಕ್ಟರಿ ವೇಯಿಂಗ ಸ್ಕೇಲದ್ದ ವೇಟ್ ತೊಗೊಂಡ ಏನ್ಮಾಡ್ತೀರಿ, ಹಂಗ ನಿಮ್ಮ ವೇಟ್ ಜಾಸ್ತಿ ಆದರ ಮೊದ್ಲ ಗೊತ್ತಾಗೋದ ನಂಗ. ನಿಂಬದೇನ ವೇಟ್ ಜಾಸ್ತಿ ಆಗಿಲ್ಲಾ ಸುಮ್ಮನಿರ್ರಿ’ ಅಂದ್ಲು.
’ಲೇ, ಹುಚ್ಚಿ ಪ್ಯಾಂಟ ಎಲ್ಲಾ ಟೈಟ ಆಗಲಿಕತ್ತಾವ ಗೊತ್ತಾಗಂಗಿಲ್ಲೇನ’ ಅಂತ ನಾ ಅಂದರ
’ಪ್ಯಾಂಟ ಉಡಗಿರ ಬೇಕ (shrink) ತೊಗೊಳ್ರಿ’ ಅಂತ ನಂಗ ಜೋರ ಮಾಡಿ ಬಾಯಿ ಮುಚ್ಚಸಿದ್ಲು.
ಅಲ್ಲಾ ಹಂಗ ಪ್ಯಾಂಟ್ shrink ಆದರೆ ಬರೇ ನಡದಾಗ ಇಷ್ಟ ಯಾಕ ಶ್ರಿಂಕ್ ಆಗ್ತಾವ ಅಂತೇನಿ.
ಹಂಗ ಅಕಿ ಹೇಳಿದ್ದ ಒಂದ ಮಾತು ಅಂತು ಖರೇ. ನನ್ನ ವೇಟ್ ಜಾಸ್ತಿ ಆದರ ಮೊದ್ಲ ಅಕಿಗೆ ಗೊತ್ತಾಗಲಾರದ ಇನ್ನ್ಯಾರಿಗೆ ಗೊತ್ತಾಗಬೇಕ? ಆದರ ಅಕಿ ಮಾತ್ರ ನಂಗ ಒಂದ ದಿವಸನೂ ನಿಮ್ಮ ತೂಕ ಜಾಸ್ತಿ ಆಗೇದ, ಮೊದ್ಲಿನಕಿಂತ ಭಾರ ಆಗಿರಿ ಅಂದಿಲ್ಲಾ. ಅಲ್ಲಾ ಹಂಗ ನಂದ ಎರಡ ಕೆ.ಜಿ ತೂಕ ಏರೊದರಾಗ ಅಕಿದ ಐದ ಕೆ.ಜಿ ತೂಕ ಏರಿದ್ದರೂ ಏರಿರಬೇಕ ಬಿಡ್ರಿ ಹಿಂಗಾಗಿ ಅಕಿಗೆ ನನ್ನ ವೇಟ್ ಜಾಸ್ತಿ ಆಗಿದ್ದ ಗೊತ್ತಾಗಿರಲಿಕ್ಕಿಲ್ಲಾ.
ಮುಂದ ಒಂದ ಎರಡ ದಿವಸದಾಗ ನಮ್ಮ ದೋಸ್ತರ ಗ್ರುಪನಾಗೂ ಸುದ್ದಿ ಹಬ್ಬತ ’ಏ, ಆಡ್ಯಾಂದ ವೇಟ್ ಜಾಸ್ತಿ ಆಗಿದಂತ’ ಅಂತ ಎಲ್ಲಾರೂ ಮಾತೊಡ ಹಂಗ ಆತ. ಅದರಾಗ ಒಂದಿಬ್ಬರಂತೂ ಪಾರ್ಟಿ ಕೊಡ ಮಗನ ಅಂತ ಗಂಟ ಬಿದ್ದರು. ಅಷ್ಟರಾಗ ನಮ್ಮ ದೋಸ್ತ ಒಬ್ಬಂವಾ ಎರಡುವರಿ ಲಕ್ಷದ್ದ ಹೊಸಾ ಬೈಕ ತೊಗೊಂಡಿದ್ದಾ, ಮೊನ್ನೆ ಅಂವಾ ಸಿಕ್ಕಾಗ ಎಲ್ಲಾರೂ ಅವನ ಬೈಕ ಒಂದೊಂಡ ರೌಂಡ ಹೊಡದರು. ನಾ ಅಂತೂ ನನ್ನ ಬೈಕ್ ಬಿಟ್ಟ ಬ್ಯಾರೆ ಬೈಕ ಮುಟ್ಟಂಗಿಲ್ಲಾ ಹಂತಾದರ ರಾಯಲ್ ಎನಫಿಲ್ಡ್ ಬೈಕ ಹೊಡೆಯೊದ ದೂರದ ಮಾತ ಅಂತ ಸುಮ್ಮನ ಇದ್ದೆ. ಆದರೂ ನಂಗ ಎಲ್ಲಾರು ಕರದ
’ಏ ಮಗನ ವೇಟ್ ಜಾಸ್ತಿ ಆಗೇದ ಅಂತಿ, ನೀ ಒಂದ ರೌಂಡ ಹೊಡಿ’ ಅಂತ ಗಂಟ ಬಿದ್ದರು.
ಅಲ್ಲಾ ನಂದ ಎರಡ ಕೆ.ಜಿ ವೇಟ್ ಜಾಸ್ತಿ ಆದರ ಇವರ ಎರಡ ನೂರ ಕೆ.ಜಿ ಬೈಕ್ ಕೈಯಾಗ ಕೊಟ್ಟ ಹೊಡಿ ಅಂದರ ಹೆಂಗ ಅಂತೇನಿ.
’ಲೇ, ಹೊಗರಲೇ..ಎಲ್ಲರ ಹಾಕ್ಕೊಂಡ ಬಿದ್ದರ ಏನ ಗತಿ ಮಕ್ಕಳ’ಅಂತ ನಾ ಅಂದರು ಕೇಳಲಿಲ್ಲಾ, ಕಡಿಕೆ
’at least ನೀ ಈ ಬೈಕದ side standರ ತಗಿಲೇ ಮಗನ’ ಅಂತ ನನ್ನ ಕೈಯಾಗ ಬೈಕ ಕೊಟ್ಟ side stand ತಗಿಸಿಸಿ ಈ ಫೋಟ ಹೊಡದರು. ಏನ್ಮಾಡ್ತೀರಿ ಹಿಂತಾ ದೋಸ್ತರ ಇದ್ದರ.
ಹಂಗ ನಂಗ ಇವತ್ತಿಗೂ ನನ್ನ splendourದ್ದ center stand ಹಚ್ಚಲಿಕ್ಕೆ ಬರಂಗಿಲ್ಲಾ, ಬರಂಗಿಲ್ಲಾ ಏನ ವೇಟ ಬ್ಯಾಲೆನ್ಸ್ ಆಗಂಗಿಲ್ಲಾ. ಆಮ್ಯಾಲೆ ನನ್ನ ಹೆಂಡತಿ ಇವತ್ತಿಗೂ ಎರಡು ಕಾಲ ಅತ್ತಲಾಗ ಇತ್ತಲಾಗ ಹಾಕ್ಕೊಂಡ ಹಿಂದ ಕೂತರ ಇಷ್ಟ ಗಾಡಿ ಬ್ಯಾಲೆನ್ಸ್ ಆಗ್ತದ, ಸೀರಿ ಉಟಗೊಂಡ ಒಂದ ಕಡೆ ಕೂತರ ಮುಗದ ಹೋತ, bike only left turn ಗ್ಯಾರಂಟಿ. ಅಲ್ಲಾ ಅದಕ್ಕ ಅಕಿ ತೂಕ ಕಾರಣ ಬಿಡ್ರಿ. ನಾ ಹಿಂಗಾಗೇ ಅಕಿನ್ನ ಯಾವಾಗಲೂ ಆಟೊದಾಗ ಕರಕೊಂಡ ಹೊಗೊದ.
ಆದರೂ ಎನ ಅನ್ನರಿ ನಾ ನನ್ನ ಜೀವನದಾಗ highest weight reach ಆಗಿದ್ದ ಅಂತು ಖರೇ. ನಂಬೋರ ನಂಬಲಿ ಬಿಡೋರ ಬಿಡ್ಲಿ.
ಆ ಎರಡ ಕೆ.ಜಿ ಏರಿದ್ದರ ಖುಶಿ ಒಳಗ ಎರಡ ಪ್ಯಾರಾ ಬರದ ನಿಮ್ಮ ಜೊತಿ ಹಂಚಗೊಬೇಕ ಅನಸಿ ಇಷ್ಟ ಬರದೆ.
ಜಗತ್ತಿನಾಗ ಎಲ್ಲಾರೂ ವೇಟ್ ಕಡಮಿ ಮಾಡಲಿಕ್ಕೆ ತಿಣಕ್ಯಾಡತೀರಬೇಕಾರ ನನ್ನಂತಾ ವೇಟ್ ಜಾಸ್ತಿ ಆತ ಅಂತ ಖುಷಿ ಪಡೋ ಮಂದಿನೂ ಇದ್ದಾರಲಾ ಅಂತ ಸಂತೋಷ ಪಡ್ರಿ.