ಮೊನ್ನೆ ಹಂಪಿಗೆ ನಮ್ಮಜ್ಜನ ಧರ್ಮೋದಕ ಬಿಡಲಿಕ್ಕ ಹೋಗಿದ್ದೆ. ನದಿ ದಂಡಿ ಮ್ಯಾಲೆ ‘ಕಾಗಿ ಪಿಂಡ’ ರೆಡಿಮಾಡಿ ಕಾಗಿಗೆ ಅಹ್ವಾನ ಮಾಡಿದರು. ಒಂದ ಕಾಗಿನೂ ಅರ್ಧತಾಸ ಆದರೂ ಪಿಂಡದ ಹತ್ತರ ಹಾಯಲಿಲ್ಲಾ , ನಾವೇಲ್ಲಾ ಒದ್ದಿ ಪಂಜಿಲೆ ಇಂಥಾ ಥಂಡ್ಯಾಗ ಸಾಯ್ಕೋತ ಕಾಗಿ ಪಿಂಡ ಆಗೋದನ್ನ ಕಾಯಲಿಕತ್ತಿದ್ದಿವೆ . ಹೊಟ್ಟಿ ಹಸ್ತ ನಮ್ಮಪ್ಪಗ ಬಿ. ಪಿ. ನೆತ್ತಿಗೆ ಏರಲಿಕತ್ತ, ನಮ್ಮ ಅತ್ಯಾನ ಶುಗರ ಲೊ ಆತು. ನಮ್ಮ ಮೂರ ಮಂದಿ ಕಾಕಾಗೋಳ ಪಿಂಡದ ಮುಂದ ಹೋಗಿ ಮನಸ್ಸಿನಾಗ ನಾವ ಹಂಗ ಮಾಡತೇವಿ – ಹಿಂಗ ಮಾಡತೇವಿ ಅಂತ ಬೇಡ್ಕೊಂಡರು. ಆದ್ರೂ ಒಂದ ಕಾಗಿನೂ ಪಿಂಡದ ಹತ್ತರ ಹಾಯಲಿಲ್ಲಾ.
ಪಾಪ ನಮ್ಮಜ್ಜ ಇತ್ತಿಚಿಗೆ ನಮ್ಮ ದೇಶದಾಗಿನ ಭ್ರಷ್ಟಾಚಾರ ನೋಡಿ ಭಾಳ ಮನಸ್ಸಿಗೆ ಹಚಗೊಂಡ ಬಿಟ್ಟಿದ್ದಾ. ‘ದೇವರ, ನಾ ಸಾಯೋದರಾಗ ನಮ್ಮ ದೇಶ ಸುಧಾರಸಲಿ, ಬ್ಲ್ಯಾಕ ಮನಿ ನಮ್ಮ ದೇಶಕ್ಕ ವಾಪಸ ಬರಲಿ, ಭ್ರಷ್ಟಾಚಾರ ತೊಲಗಲಿ, ಲೋಕಪಾಲ್ ಜಾರಿಗೆ ಬರಲಿ’ ಅಂತೇಲ್ಲಾ ಬಡ ಬಡಸ್ತಿದ್ದಾ. ಕಡಿಕೆ ಮೊನ್ನೆ ಅತ್ತಲಾಗ ಪಾರ್ಲಿಮೆಂಟ ಒಳಗ ಪಾರ್ಲಿಮೆಂಟರಿ ಪ್ಯಾನೆಲನವರ ಲೋಕಪಾಲ್ ಡ್ರಾಫ್ಟ ಇಟ್ಟ ಮ್ಯಾಲೆ ಇಂವಾ ಇತ್ತಲಾಗ ಕಣ್ಣ ಮುಚ್ಚಿದಾ. ಜೀವನದಾಗ ಮನಿ ಮಂದಿ ಕಿಂತಾ ದೇಶದ ಬಗ್ಗೆ ತಲಿ ಕೆಡಿಸಿಕೊಂಡ ಸತ್ತಾ, ನಮ್ಮ ರಾಜ್ಯದಾಗಿನ ಹಗರಣ ನೋಡಿ ಹಾಸಗೀನ ಹಿಡದಿದ್ದಾ. ಭ್ರಷ್ಟಾಚಾರಕ್ಕೆಲ್ಲಾ ಲೋಕಪಾಲ್ ಮದ್ದು ಅಂತಿದ್ದಾ. ನಂಗ ಅನಸ್ತು ಬಹುಶಃ ಈ ಲೋಕಪಾಲ್ ಬಿಲ್ ಜಾರಿಗೆ ಆಗೋಮಟಾ ಕಾಗಿ ಪಿಂಡ ಆಗಲಿಕ್ಕಿಲ್ಲಾ ಅಂತ.
ಇನ್ನ ಕಾಗಿ ಬೇಕಾರ ತಿನ್ನಲಿ ಬ್ಯಾಡಾರ ಬಿಡ್ಲಿ ಅಂತ ಪಿಂಡಾ ಅಲ್ಲೆ ಬಿಟ್ಟ ಬಂದ್ರ ನಮ್ಮಜ್ಜನ ಆತ್ಮಕ್ಕ ತೃಪ್ತಿ ಆಗಂಗಿಲ್ಲಂತ, ಇದೇನ ವಿಚಿತ್ರಾನೋ ಏನೋ ? ಇಲ್ಲೆ ನಂಬದ ಜೀವಂತ ಇದ್ದೊರದ ಆತ್ಮನ ತೃಪ್ತಿ ಇಲ್ಲಾ, ಇನ್ನ ಸತ್ತವರದ ಆತ್ಮ ತೃಪ್ತಿ ಆಗೋದ- ಬೀಡೋದು ತೊಗೊಂಡ ಏನ್ಮಾಡಬೇಕು ಅನಕೊಂಡೆ. ಆದರ ಭಟ್ಟರು
” ಹಂಗಲ್ಲ ತಮ್ಮಾ, ನಿಮ್ಮಜ್ಜಾ ಹೀರೆ ಮನಷ್ಯಾರು, ಅವರ ಮನಸ್ಸನಾಗ ಏನೋ ಇತ್ತೊ ಏನೋ, ಅವರ ಆಶಾ ತೀರಸ್ತೇವಿ ಅಂತ ಎಲ್ಲಾ ಮನಿ ಮಂದಿ ಸೇರಿ ಇನ್ನೋಮ್ಮೆ ಬೇಡ್ಕೊಂಡ ಬಿಡ್ರಿ ” ಅಂದರು.
ನಾ ಮತ್ತೋಮ್ಮೆ ಎಲ್ಲಾ ಮನಿ ಮಂದೀನ ಕಟಗೊಂಡ ಪಿಂಡದ ಮುಂದ ನಿಂತ ಕಾಗಿ ಇಷ್ಟ ಅಲ್ಲಾ ನಮ್ಮಜ್ಜಗೂ ಕೇಳಸೋ ಹಂಗ ಜೋರಾಗಿ ಬೇಡ್ಕೊಳ್ಳಿಕತ್ತೆ ” ಅಜ್ಜಾ . ನೀ ಏನ ಚಿಂತಿ ಮಾಡಬ್ಯಾಡಾ, ನಾವ ಲೋಕಪಾಲ್ ಬಿಲ್ ಜಾರಿ ಆಗೋಮಟಾ ಬಿಂಡಗಿಲ್ಲಾ. ಬೇಕಾರ ನಾವು ಉಪವಾಸ ಮಾಡತೇವಿ. ನಮ್ಮ ರಾಜ್ಯದಾಗ ಲೋಕಾಯುಕ್ತ ವರದಿ ಜಾರಿಗೆ ಮಾಡಿ ತಪ್ಪ ಮಾಡಿದವರಿಗೆ ಮತ್ತ ಜೈಲಿಗೇ ಕಳಸ್ತೇವಿ, ಭ್ರಷ್ಟಾಚಾರದ ವಿರುದ್ಧ ಹೋರಾಡತೇವಿ, ಅಂತೇಲ್ಲಾ ಬೇಡ್ಕೊಂಡೆ ಆದರೂ ಒಂದ ಕಾಗಿನೂ ಹತ್ತರ ಹಾಯಲಿಲ್ಲಾ.
ನಾ ನನ್ನ ತಮ್ಮಗ ಅಂದೆ ” ಲೇ ಕಾಗಿ ಪಿಂಡ ಆಗಲಾರದಕ್ಕೂ ಅಜ್ಜನ ಆಶಾಕ್ಕೂ ಏನ ಸಂಬಂಧಿಲ್ಲಾ. ಇವತ್ತ ಬಹುಶಃ ಕಾಗಿನೂ ತಮ್ಮ ಯಾವದೋ ಬೇಡಿಕೆ ಸಂಬಂಧ ಉಪವಾಸಕ್ಕ ಕೂತಿರಬಹುದು , ನಡೀರಿ ನಾವ ಊಟಾ ಮಾಡೋಣ” ಅಂದೆ. ಆದರ ಭಟ್ಟರು ಅದು ಹಂಗ ನಡೆಯಂಗಿಲ್ಲಾ – ಕಾಗಿ ಪಿಂಡ ಆಗಲೇಬೇಕು ಅಂದರು
ಇದನ್ನ ನೋಡಿ ನಮ್ಮ ಎಮ್. ಎಲ್. ಎ ಮಾಮಾಗ, ಅಂದರ ನಮ್ಮಜ್ಜನ ಅಳಿಯಾಗ ತಲಿಕೆಟ್ಟತ, ‘ಲೇ, ಪಿಂಡಕ್ಕ ಬೇಡ್ಕೋ ಬ್ಯಾಡ್ರಿ, ಕಾಗಿಗೆ ಏನ್ ಬೇಕ್ ಕೇಳರಿ’ ಅಂತ ಸೀದಾ ಕಾಗಿ ಮುಂದ ಹೋಗಿ ಅಗದಿ ವೋಟ ಕೇಳೋರಗತೆ ಕೈ ಮುಗದ ಏನೇನೋ ಆಶ್ವಾಸನೆ ಕೊಟ್ಟಾ. ಹೇಳ್ತೇನಿ , ನೋಡ- ನೋಡತ ಕಾಗಿ ಹಿಂಗ ಬಂದವು ನೋಡ್ರಿ, ಎನ್ ಒಂದ ವಾರದಿಂದ ಉಪವಾಸ ಇದ್ದವೂ ಏನೋ ಅನ್ನೋರಗತೆ ಪಿಂಡಕ್ಕ ಮುಕರಿಬಿಟ್ಟವು. ಅದನ್ನ ನೋಡಿ ನಮಗೆಲ್ಲಾ ನಾವ ಹೊಟ್ಟಿತುಂಬ ಉಂಡಂಗ ಅನಸ್ತು. ಎಲ್ಲಾರೂ ಖುಷಿಲೆ ನಮ್ಮಜ್ಜಗ ಮತ್ತೊಮ್ಮೆ ತರ್ಪಣ ಬಿಟ್ಟ ಊಟಾ ಹೊಡದವಿ.
ಊಟಕ್ಕ ಕೂತಾಗ ನಮ್ಮ ಮಾಮಾಗ ಹಗರಕ ಕೇಳಿದೆ,
“ಏನ ಮಾಮಾ ಹಂತಾದ ಏನ ಅಜ್ಜಂದ ಆಶಾ ತೀರಸ್ತೇನಿ ಅಂತ ಆಶ್ವಾಸನೆ ಕೊಟ್ಟಿ” ಅಂದೆ
“ಲೇ, ಎನಿಲ್ಲಾ ಊರ ಹೊರಗ ಒಂದ ೫ ಎಕರೆ ಸರ್ಕಾರಿ ಜಗಾ ‘ಡಿ’ ನೋಟಿಪೈ ಮಾಡಿಸಿ ನಿಮ್ಮ ಅತ್ಯಾನ ಹೇಸರಲೆ ಮಾಡಿಸಿದ್ದೆ, ಅದನ್ನ ವಾಪಸ್ಸ ಸರ್ಕಾರಕ್ಕ ಕೊಡತೇನಿ ಅಂತ ಅಂದೆ ಇಷ್ಟ ” ಅಂದಾ.
ಅಡ್ಡಿಯಿಲ್ಲಾ, ಕಡಿಕೂ ನಮ್ಮ ದೇಶದಾಗ ಲೋಕಪಾಲ್ ಹೆದರಕಿ ಶುರು ಆತ ಅಂತ ಒಂದ ತುತ್ತ ಜಾಸ್ತಿ ಉಂಡ ಕೈ ತೊಳ್ಕೋಂಡೆ.