ಇದ ನಂದ ಲಗ್ನ ಆದ ವೆರಿ ನೆಕ್ಸ್ಟ ಇಯರದ್ದ ಮಾತ, ಆ ವರ್ಷ ನನ್ನ ಹೆಂಡತಿದ ಅತ್ತಿ ಮನ್ಯಾಗ ಅಂದರ ನಮ್ಮ ಮನ್ಯಾಗ ಮೊದ್ಲನೇ ಬರ್ಥಡೆ ಬಂತ. ಹಂಗ ಅಕಿಗೆ ಅವರವ್ವನ ಮನ್ಯಾಗ ಇಷ್ಟ ದೊಡ್ಡೊಕಿ ಆದರು ವರ್ಷಾ ಬರ್ಥಡೆ ಸೆಲೆಬ್ರೇಶನ್ ಮಾಡಿಸ್ಗೊಳೊ ಪದ್ಧತಿ ಇತ್ತ. ಅವರಪ್ಪಂತೂ
“ನಮ್ಮ ಅವ್ವಕ್ಕ ಎಷ್ಟ ದೊಡ್ಡೊಕಿ ಆದರ ಏನರಿ ನಮಗಂತು ಮಗಳ, ನಮ್ಮಕಿಂತಾ ಸಣ್ಣೋಕಿನ” ಅಂತ ವರ್ಷಾ ಅಲ್ಲೆ ನೇಕಾರನಗರದಾಗ ಯಾವದೊ ಒಂದ ಲೋಕಲ್ ಬೇಕರಿ ಒಳಗ ಮಾಡಿದ್ದ ಕೇಕ ತಂದ ಕಟ್ಟ ಮಾಡಿಸಿ ಓಣಿ ಮಂದಿಗೆಲ್ಲಾ ಚುರ- ಚುರ ಹಂಚತಿದ್ದರು. ಮತ್ತ ಇನ್ನ ಹಿಂಗ ವರ್ಷಾ ಮಗಳ ಬರ್ಥಡೆ ಮಾಡೋರಿಗೆ ಈ ವರ್ಷ ಹೆಂಗ ಬಿಟ್ಟ ಇರಲಿಕ್ಕೆ ಆಗ್ತದ ಅದರಾಗ ಹಿಂತಾ ಅವಕಾಶ ತಪ್ಪ ಬಾರದಂತ ಮಗಳನ ಇದ್ದೂರಾಗ ಇದ್ದದ್ದರಾಗ ಛಲೋ ಹುಡಗನ್ನ ನೋಡಿ ಕೊಟ್ಟಿದ್ದರು. ಸರಿ ಬರ್ಥಡೆ ಬರೊದ ಇನ್ನು ಒಂದ ವಾರ ಇರ್ತನ ನಮ್ಮ ಮಾವ ಮನಿಗೆ ಬಂದ ’ಏ, ನಿನ್ನ ಬರ್ಥಡೇ ಇಲ್ಲೆ ನಿಮ್ಮ ಅತ್ತಿ ಮನ್ಯಾಗ ಮಾಡೋಣ, ನಾ ಒಂದ ಕೇಕ ತೊಗೊಂಡ ಬರ್ತೇನಿ, ನಿಮ್ಮತ್ತಿಗೆ ಹೇಳಿ ನೀ ಒಂದ ತಪ್ಪೇಲಿ ಉಪ್ಪಿಟ್ಟ ಮಾಡಸ’ ಅಂತ ಅಡ್ವಾನ್ಸ ಬುಕಿಂಗ ಮಾಡ್ಕೊಂಡ ಹೋದರು. ನಮ್ಮನ್ನ ಒಂದ ಮಾತ ಸಹಿತ ಕೇಳಲಿಲ್ಲಾ. ಅಲ್ಲಾ ಅವರ ಮಗಳ, ಅಕಿ ಬರ್ಥಡೆ ಖರೆ ಆದರು ಲಗ್ನಾದ ಮ್ಯಾಲೆ ಅಕಿ ಅತ್ತಿ ಮನಿ ಸ್ವತ್ತ ಅಲ್ಲಾ, ನಮ್ಮನ್ನ ಕರ್ಟಸಿಗರ ನಮ್ಮ ಮಗಳ ಬರ್ಥಡೆ ನಿಮ್ಮ ಮನ್ಯಾಗ ಮಾಡೋಣ ಅಂತ ಕೇಳಲಿಲ್ಲಾ,
ಅಲ್ಲಾ ಹಂಗ ಅಕಿ ಅವರಿಗೆ ಮಗಳ ಆದರ ನನಗ ಹೆಂಡ್ತಿ ಬಿಡ್ರಿ, ನನ್ನ ಜವಾಬ್ದಾರಿನು ಇರತದ ಹೆಂಡ್ತಿದ ಒಂದನೇ ಬರ್ಥಡೆ ನಮ್ಮ ಮನ್ಯಾಗ ಮಾಡೊದ ಆ ಮಾತ ಬ್ಯಾರೆ, ಆದರು ಅವರ ಅಗದಿ ನಾವೇನ ಅಕಿ ಹುಟ್ಟಿದ್ದ ನಮಗ ಸಂಬಂಧ ಇಲ್ಲಾ ಅನ್ನೋರಗತೆ ಮಾಡ್ತೇವೇನೊ ಅನ್ನೋರಗತೆ ತಾವ ಮುಂದ ಬಂದ ನಮ್ಮ ಮನ್ಯಾಗ ಅಕಿ ಬರ್ಥಡೆ ಮಾಡಲಿಕ್ಕೆ ಹಿರೇತನ ಮಾಡಲಿಕತ್ತರು. ನಿಮ್ಮ ಮಗಳ ಹುಟ್ಟಿದ ಹಬ್ಬ ನಮಗೇನ ಸಂಬಂಧ ಅಂತ ನಮ್ಗ ಅನ್ನಲಿಕ್ಕರ ಹೆಂಗ ಬರತದರಿ, ದಿನಾ ಅಕಿ ಸಂಬಂಧ ನಾವ ಇಲ್ಲೆ ಸಾಯಿತಿರಬೇಕಾರ.
ಆತ ಮತ್ತ ಇನ್ನ ಅವರ ಇಷ್ಟ ಕೇಕ ತೊಗಂಡ ಬಂದ ಬಿಟ್ಟಾರ ಅಂದರ ನಮ್ಮವ್ವರ ಏನ ಮಾಡ್ತಾಳ ಪಾಪ ಒಂದ ಕೊಪ್ಪರಿಗೆ ಉಪ್ಪಿಟ್ಟ ಮಾಡಿದ್ಲು. ನಾ ಒಂದ ಪಾವ ಕೆ.ಜಿ ಮಿಶ್ರಾದಾಗಿನ ಖಾರ ತಂದ ನನ್ನ ಮಾವಾ, ಅತ್ತಿ, ಅಳಿಯೊರೊಂದೊಡಗೂಡಿ ನನ್ನ ಹೆಂಡ್ತಿ ಬರ್ಥಡೆ ಮಾಡಿ ಮುಗಿಸಿದೆ. ಇನ್ನ ಹಂಗ ನಾ ಅಕಿದ ನಮ್ಮ ಮನ್ಯಾಗಿಂದ ಒಂದನೇ ಬರ್ಥಡೆ ಬರೆ ಉಪ್ಪಿಟ್ಟ-ಕೇಕಮ್ಯಾಲೆ ಮುಗಸಲಿಕ್ಕೆ ಬರಂಗಿಲ್ಲಾಂತ ಯಾರಿಗೂ ಗೊತ್ತ ಆಗಲಾರದಂದ ರಾತ್ರಿ ಅಕಿಗೆ ಒಂದ ಗಿಫ್ಟ ತಂದ ಕೊಟ್ಟಿದ್ದೆ. ಅದ ಯಾರಿಗೂ ಗೊತ್ತಾಗಲಾರದಂಗ ಯಾಕ ಅಂದರ ನಮ್ಮ ಮನ್ಯಾಗ ಮೊದ್ಲಿಂದ ಯಾರು ಯಾರಿಗೂ ಬರ್ಥಡೆಕ್ಕ ಗಿಫ್ಟ ಕೊಡೊ ಪದ್ಧತಿನ ಇಲ್ಲಾ. ಇನ್ನ ನಾ ನನ್ನ ಹೆಂಡತಿಗೆ ಗಿಫ್ಟ ಕೊಟ್ಟಿದ್ದ ಗೊತ್ತಾದರ ಮುಂದ ನನ್ನ ತಂಗಿಗು ಅಕಿ ಬರ್ಥಡೆಕ್ಕ ಕೊಡ್ಬೇಕಾಗತದ, ಹಂಗ ಒಬ್ಬರಿಗೆ ಕೊಟ್ಟ ಒಬ್ಬರಿಗೆ ಬಿಡಲಿಕ್ಕೆ ಬರಂಗಿಲ್ಲಾ ಅಂತ ಹೆಂಡ್ತಿಗೆ ಒಬ್ಬೊಕಿಗೆ ಕಳುವಿಲೆ ಗಿಫ್ಟ ಕೊಟ್ಟ ಕೈತೊಳ್ಕೊಂಡಿದ್ದೆ.
ಹಿಂಗ ಬರ್ಥಡೆ ಮುಗದ ಒಂದ ವಾರ ಆಗಲಿಕ್ಕೆ ಬಂದಿತ್ತೊ ಇಲ್ಲೊ ಒಂದ ದಿವಸ ರಾತ್ರಿ ಇಕಿ ಮಲ್ಕೊಂಡಾಗ ನನ್ನ ಕಿವ್ಯಾಗ “ರ್ರಿ, ನಾಳೆ ನನ್ನ ಬರ್ಥಡೆ ಇಬ್ಬರು ಸೇರಿ ನವೀನ ಹೋಟೆಲ್ಲಿಗೆ ಹೋಗೋಣು” ಅಂದ್ಲು.
“ಏ, ಮೊನ್ನೇರ ಡಬರಿ ಗಟ್ಟಲೇ ಉಪ್ಪಿಟ್ಟ ಮಾಡಿ ತಿಂದ ಉಳದಿದ್ದನ್ನ ಓಣಿ ಮಂದಿಗೆ ಹಂಚಿ ಬರ್ಥಡೆ ಮಾಡ್ಕೊಂಡಿ, ಮತ್ತೇಲ್ಲಿ ಬರ್ಥಡೆಲೇ ನಿಂದ” ಅಂತ ನಾ ಕೇಳಿದರ
“ರ್ರಿ, ಅದ ಡೇಟ ಪ್ರಕಾರ ಹಂಗ ತಿಥಿ ಪ್ರಕಾರ ನಾಳೆ ಬರ್ತದ, ಇನ್ನ ನಮ್ಮ ಹಿಂದು ಸಂಪ್ರದಾಯ ಪ್ರಕಾರ ಬರ್ಥಡೆ ಮಾಡ್ಕೊಳಿಲ್ಲಾಂದರ ಹೆಂಗರಿ” ಅಂದ್ಲು.
“ಹಂಗರ ನಿಮ್ಮಪ್ಪ ನಾಳೆ ಮತ್ತ ಕೇಕ ತೊಗೊಂಡ ಬರ್ತಾನೇನ್” ಅಂತ ನಾ ಕೇಳಿದರ.
“ಹೂಂ. ಪಾಪ ಅವರ ಯಾಕ ತರಬೇಕ, ನೀವು ಗಂಡ ಆಗಿ ನಿಮಗ ಒಂದ ಸ್ವಲ್ಪರ ಹೆಂಡ್ತಿ ಬರ್ಥಡೆ ಜವಾಬ್ದಾರಿ ಬ್ಯಾಡಾ, ನಾಳಿ ಬರ್ಥಡೆದ್ದ ಎಲ್ಲಾ ನಿಂಬದ ಖರ್ಚ” ಅಂದ್ಲು, ಆತ ತೊಗೊ ಹೊಸಾ ಹೆಂಡ್ತಿ, ಇಲ್ಲಾ ಅನಲಿಕ್ಕೆ ಹೆಂಗ ಬರ್ತದ ಇದೊಂದ ವರ್ಷ ಮಾಡಿದರಾತು ಅಂತ ನಾ ಸುಮ್ಮನ ಅಕಿನ್ನ ಮರದಿವಸ ನವೀನ ಹೋಟೆಲ್ಲಿಗೆ ಕರಕೊಂಡ ಹೋಗಿ ನಾರ್ಥ ಇಂಡಿಯನ್ ತಿನಿಸಿಸಿಕೊಂಡ ಬಂದೆ, ಆವಾಗ ಇಗಿನ್ನ ಹಂಗ ಯಾರದ ಬರ್ಥಡೆ ಇದ್ದರು ಬಾರ್ & ರೆಸ್ಟೋರೆಂಟಗೆ ಹೋಗೊ ಪದ್ಧತಿ ಇರಲಿಲ್ಲಾ, ಮ್ಯಾಲೆ ಧೈರ್ಯಾನೂ ಇರಲಿಲ್ಲಾ. ಅಲ್ಲಾ ಮೊದ್ಲ ಹೇಳಿದ್ನೆಲ್ಲಾ ಲಗ್ನ ಆಗಿ ದಣೆಯಿನ ಒಂದ ವರ್ಷ ಆಗಲಿಕ್ಕೆ ಬಂದಿತ್ತ ಅಂತ, ಹಂಗ ಅಷ್ಟ ಸರಳ ಅಕಿನ್ನ ಬಾರಗೆ ಕರಕೊಂಡ ಹೋಗೊ ಹಂಗ ಇರಲಿಲ್ಲಾ. ನೋಡಿದವರರ ಏನ ತಿಳ್ಕೋಬೇಕ.
ಹಿಂಗ ಒಂದ ತಿಂಗಳ ದಾಟಿತ್ತೊ ಇಲ್ಲೊ ಒಂದ ದಿವಸ ನಾ ಆಫೀಸಗೆ ಹೋಗಬೇಕಾರ ಇಕಿ
“ರ್ರಿ, ಇವತ್ತ ಲಗೂನ ಬರ್ರಿ, ಸಂಜಿಗೆ ನನ್ನ ಬರ್ಥಡೆ” ಅಂದ ಬಿಟ್ಲು. ನಂಗ ತಲಿ ಕೆಟ್ಟ ಹೋತ
“ಲೇ, ಎಷ್ಟ ಸರತೆ ಹುಟ್ಟಿ ನೀ, ವರ್ಷಕ್ಕ ನಿನ್ನವು ಬರ್ಥಡೆ ಎಷ್ಟ ಬರತಾವ” ಅಂತ ನಾ ಜೋರ ಮಾಡಿದರ
“ರ್ರೀ, ಹೋದ ತಿಂಗಳ ಅಧಿಕ ಮಾಸ ಇತ್ತಿಲ್ಲೊ, ಹಿಂಗಾಗಿ ಈ ಬರ್ಥಡೆನ ರಿಯಲ ಬರ್ಥಡೆ. ಆವಾಗ ಅಧಿಕದಾಗ ಮಾಡಿ ಈಗ ಮಾಡಂಗಿಲ್ಲಾ ಅಂದರ ಹೆಂಗ” ಅಂತ ನಂಗ ಜೋರ ಮಾಡಲಿಕತ್ಲು.
“ಅಲ್ಲಲೇ ಹಂಗಿದ್ದರ ಆವಾಗ ಯಾಕ ಮಾಡ್ಕೊಂಡಿ, ರಿಯಲ ಬರ್ಥಡೆ ಇದ್ದಾಗ ಮಾಡ್ಕೊಬೇಕಿತ್ತ ಇಲ್ಲೊ” ಅಂತ ನಾ ಒದರಲಿಕತ್ತೆ.
“ಆವಾಗ ಡೇಟ ಪ್ರಕಾರ ಬರ್ಥಡೆ ಮಾಡ್ಕೊಂಡೆ, ಈಗ ತಿಥಿ ಪ್ರಕಾರ, ಹಂಗ ಈ ಸರತೆ ಅಧಿಕ ಮಾಸ ಬಂದದ್ದಕ್ಕ ತಿಥಿ ಎರೆಡೆರಡ ಸರತೆ ಬಂದಾವ ಅದಕ್ಕ ಎರೆಡೆರಡ ಸರತೆ ಬರ್ಥಡೆ, ಈಗ ನಿಮ್ಮಜ್ಜನ ಶ್ರಾದ್ಧಾ ಅಧಿಕದಾಗ ಒಮ್ಮೆ, ನಿಜದಾಗ ಒಮ್ಮೆ ಮಾಡಿದಿರಿಲ್ಲೋ ಹಂಗ ಇದು” ಅಂದ್ಲು. ಏನ್ಮಾಡ್ತೀರಿ?
ಅಲ್ಲರಿ ಅಧಿಕ ಮಾಸದಾಗ ಶ್ರಾದ್ಧ ಎರೆಡೆರಡ ಸರತೆ ಮಾಡ್ತೇವಿ ಅಂತ ಬರ್ಥಡೆನೂ ಎರೆಡೆರಡ ಸರತೆ ಮಾಡೋದ ಎಲ್ಲೇರ?
ನಾ ಏನೊ ಹೋಗಲಿ ಇಕಿದ ನಮ್ಮ ಮನ್ಯಾಗ ಒಂದನೇ ಸರತೆ ಬರ್ಥಡೆ ಅಂತ ಸುಮ್ಮನಿದ್ದದ್ದ ತಪ್ಪ ಆತ ಅನಸ್ತ. ಕಡಿಕೆ ಇಕಿ ಹುಟ್ಟಿದ್ದ ಒಂದ ದಿವಸಕ್ಕ ಮೂರ ಮೂರ ಸರತೆ ಬರ್ಥಡೆ ಮಾಡ್ಕೊಂಡ ಕೈ ಬಿಟ್ಲು.
ನಾ ಖರೇ ಹೇಳ್ತೇನಿ ಅದ ಲಾಸ್ಟ ಅಕಿದ ನಮ್ಮ ಮನ್ಯಾಗ ಬರ್ಥಡೆ ಮಾಡಿದ್ದ, ಮುಂದ ಯಾವತ್ತು ಅಕಿದ ಹುಟ್ಟಿದ ಹಬ್ಬ ಮಾಡಿಲ್ಲಾ, ಮಾಡಂಗನು ಇಲ್ಲಾ. ಇನ್ನ ನಾ ಎಲ್ಲರ ನನ್ನ ಬರ್ಥಡೆ ಮಾಡ್ಕೊಂಡರ ಅಕಿ ತಂದು ಮಾಡರಿ ಅಂತ ಗಂಟ ಬಿಳ್ತಾಳ ಅಂತ ನಾ ನನ್ನ ಬರ್ಥಡೆ ಸಹಿತ ಮನ್ಯಾಗ ಮಾಡ್ಕೋಳೊದ ಬಿಟ್ಟ ಬಿಟ್ಟೆ. ಹಂಗ ದೋಸ್ತರ ಬಿಡಂಗಿಲ್ಲಾಂತ ಹೊರಗ ದೋಸ್ತರ ಜೊತಿ ಮಾಡ್ಕೊಂಡಿರ್ತೇನಿ ಆದರ ಅದನ್ನ ಮನ್ಯಾಗ ಮಾತ್ರ ಹೇಳಂಗಿಲ್ಲಾ.
ಅಲ್ಲಾ ಈಗ ಎಲ್ಲಾ ಬಿಟ್ಟ ಹದಿಮೂರ ವರ್ಷದ ಹಿಂದಿಂದ ನನ್ನ ಹೆಂಡತಿ ಬರ್ಥಡೆ ಯಾಕ ನೆನಪಾತು ಅಂದರ ಜುನ್ ತಿಂಗಳದಾಗ ನಮ್ಮ ಬ್ರಿಟನ್ ರಾಣಿದ ಆಫಿಸಿಯಲ್ ಬರ್ಥಡೆ ಬರತದ, ಅಕಿದು ಹಿಂಗ ಒಂದ ತಿಂಗಳದಾಗ ಮೂರ ಮೂರ ಸರತೆ ಬರ್ಥಡೆ ಮಾಡ್ತಾರಂತ. ಒಂದೊಂದ ಕಾಮನ್ ವೆಲ್ಥ ದೇಶದಾಗ ಒಂದೊಂದ ಸರತೆ ತಮ್ಮ ಅನಕೂಲ ಇದ್ದಾಗ ಮಾಡ್ತಾರ. ಹಿಂಗಾಗಿ ಕ್ವೀನ್ಸ್ ಆಫಿಸಿಯಲ್ ಬರ್ಥಡೆ ಜೂನ ತಿಂಗಳದ ಫಸ್ಟ, ಸೆಕೆಂಡ್ & ಥರ್ಡ್ ಶನಿವಾರ ಮಾಡ್ತಾರ. ನನ್ನ ಹೆಂಡ್ತಿ ಮಾಡ್ಕೊಂಡಿದ್ಲಲಾ ಹಂಗ. ಇನ್ನೊಂದ ಮಜಾ ಅಂದರ ಆ ರಾಣಿದ actual birth dateಗೆ ಇವರ ಸೆಲೆಬ್ರೇಟ ಮಾಡೋ ಆಫಿಸಿಯಲ್ ಡೇಟಗೆ ಸಂಬಂಧ ಇರಂಗಿಲ್ಲಂತ. ಏನ್ಮಾಡ್ತೀರಿ? ರಾಣಿ ಬರ್ಥಡೆ ಯಾವಗ ಬೇಕ ಆವಾಗ ಮಾಡ್ಕೋಬಹುದು. ನಾವ ಹೆಂಗ ಕರ್ನಾಟಕದಾಗ ನವೆಂಬರದಾಗ ತಿಂಗಳಾನಗಟ್ಟಲೇ ಕರ್ನಾಟಕ ರಾಜ್ಯೋತ್ಸವ ಮಾಡ್ತೇವಿ ಹಂಗ ಇದು.
ಇನ್ನ ಮತ್ತ ಇಂಗ್ಲೆಂಡದ ರಾಣಿ ತನ್ನ ಬರ್ಥಡೆ ವರ್ಷಾ ತಿಂಗಳದಾಗ ಮೂರ ಸರತೆ ಮಾಡ್ಕೋತಾಳ ಅಂದರ ನಮ್ಮ ಮಹಾರಾಣಿ ಬಿಡ್ತಾಳ. ಏನೊ ನನ್ನ ಪುಣ್ಯಾ ಲಾಸ್ಟ ಹದಿನಾಲ್ಕ ವರ್ಷದಾಗ ಅಕಿದ ಬರ್ಥಡೆ ಇದ್ದ ತಿಂಗಳನ ಅಧಿಕ ಮಾಸ ಬಂದಿದ್ದ ಅದ ಒಂದ ಸರತೆ, ಅದಕ್ಕ ಅಕಿಗೆ ನಾ ಹೇಳಿ ಇಟ್ಟೇನಿ
“ಮತ್ತ ಯಾವಾಗ ನೀ ಹುಟ್ಟಿದ್ದ ತಿಂಗಳ ಅಧಿಕ ಮಾಸ ಬರತದ ಆವಾಗಿಷ್ಟ ನಿನ್ನ ಬರ್ಥಡೆ ಮಾಡೋದು” ಅಂತ. ಅದು ಮೂರ- ಮೂರು ಸರತೆ, ಒಮ್ಮೆ ಡೇಟ ಪ್ರಕಾರ, ಒಮ್ಮೆ ಅಧಿಕದಾಗಿನ ತಿಥಿ ಪ್ರಕಾರ, ಒಮ್ಮೆ ಖರೇನ ತಿಥಿ ಪ್ರಕಾರ.
ಹಂಗ ಅಧಿಕಮಾಸ ಅಕ್ಟೋಬರದಾಗ ಬರೋದ ೨೦೪೪ರಾಗ, ಅಲ್ಲಿ ತನಕ ಅಂತು ಚಿಂತಿ ಇಲ್ಲಾ ಆ ಮಾತ ಬ್ಯಾರೆ.