ಇದ ದೀಪಾವಳಿ ಟೈಮಿನಾಗಿನ ಸುದ್ದಿ. ನಮ್ಮ ದೋಸ್ತ ದೇಸಾಯಿ ದೀಪಾವಳಿಗೆ ತಮ್ಮ ಮನಿಗೆ ಫರಾಳಕ್ಕ ಕರದಿದ್ದಾ. ಅಂವಾ ಅಮೇರಿಕಾದಿಂದ ಮೂರ ವರ್ಷದ ಮ್ಯಾಲೆ ಬಂದಿದ್ದಾ ಹಿಂಗಾಗಿ ಎಲ್ಲಾ ದೋಸ್ತರಿಗೂ ಭೆಟ್ಟಿ ಆದಂಗ ಆಗತದ ಅಂತ ಕರದಿದ್ದಾ. ಅದರಾಗ ಯಾಕೋ ಈ ವರ್ಷ ದೀಪಾವಳಿಗೆ ನಮ್ಮ ಭಾಳ ಮಂದಿ NRI ದೋಸ್ತರ ತಮ್ಮ ತವರ ಮನಿಗೆ ಬಂದಿದ್ದರು. ಎಲ್ಲಾರೂ ಏಷ್ಟೋ ದಿವಸದ ಮ್ಯಾಲೆ ಸೇರಲಿಕತ್ತಿದ್ವಿ.
ಆಸ್ಟ್ರೇಲಿಯಾದಿಂದ ಪವ್ಯಾ ಬಂದಿದ್ದ, ಲಂಡನ್ನಿಂದ ಜೋಶ್ಯಾ ಬಂದಿದ್ದ, ಅಮೇರಿಕಾದಿಂದ ಇನ್ನೊಬ್ಬ ದೋಸ್ತ ಶ್ರೀಪ್ಯಾ ಬಂದಿದ್ದಾ, ಇನ್ನ ಇಂಡಿಯಾದಾಗ ಇದ್ದು ಫಾರೇನದಾಗ ಇದ್ದೊರಂಗ ಇದ್ದ ರಾಘ್ಯಾ ಬಂದಿದ್ದಾ. ಅಡ್ಡಿಯಿಲ್ಲಾ ಎಲ್ಲಾರು ಸಿಗ್ತಾರ ಅಂತ ಖರೇನ ಭಾಳ ಖುಶಿ ಅನಸ್ತು.
ಅದರಾಗ ಈ ಸರತೆ ನಮ್ಮ ಮನ್ಯಾಗ ಕಾಕು ಸತ್ತಿದ್ದಕ್ಕ ಹಬ್ಬಾ ಮಾಡೊ ಹಂಗ ಇದ್ದಿದ್ದಿಲ್ಲಾ, ಹಿಂಗಾಗಿ ಮಂದಿ ಮನಿ ಫರಾಳದ ಮ್ಯಾಲೆ ದೀಪಾವಳಿ ಮುಗಸೋ ಪಾಳೆ ಬಂದಿತ್ತ. ನಂಗ ನಮ್ಮವ್ವ ಈ ಸರತೆ ನಮ್ಮ ಮನ್ಯಾಗ ಆರತಿ ಇಲ್ಲಾ ಅಂದಾಗ ಆರತಿ ಒಳಗ ರೊಕ್ಕಾ ಹಾಕೋದ ತಪ್ಪತ ಬಿಡ ಅಂತ ಖರೇನ ಭಾಳ ಖುಶಿ ಆತ. ಅದರಾಗ ನಾ ಒಂದ ಸ್ವಲ್ಪ ಕೈ ಬಿಚ್ಚಿ ಆರತಿ ಒಳಗ ರೊಕ್ಕಾ ಹಾಕೋ ಮನಷ್ಯಾ ಹಿಂಗಾಗಿ ನಂಗ ವರ್ಷಾ ಎಲ್ಲಾರೂ ತಮ್ಮ ತಮ್ಮ ಮನಿಗೆ ಆರತಿಗೆ ಕರೆಯೋರ ಕರೆಯೋರ. ನಮ್ಮ ಮಾಮಿ ಕರೆಯೋಕಿ, ನಮ್ಮ ಅತ್ತಿ ಮನ್ಯಾಗ ಕರೆಯೋರು, ಓಣ್ಯಾಗ ಒಂದ ಇಬ್ಬರ ಮೂರ ಮಂದಿ ಕರಿತಿದ್ದರು. ಇನ್ನ ನಮ್ಮ ಮನ್ಯಾಗ ಇರೋರs ಮೂರ ಮಂದಿ ಗಂಡಸರು. ನಾನು, ನಮ್ಮಪ್ಪ, ನನ್ನ ಮಗಾ. ಅದರಾಗ ಅವರಿಬ್ಬರು ದುಡಿಯಂಗಿಲ್ಲಾ ಅಂತ ಅವರಿಗೂ ಆರತಿ ಒಳಗ ಹಾಕಲಿಕ್ಕೆ ರೊಕ್ಕಾ ನಾನ ಕೊಡಬೇಕ. ಒಟ್ಟ ಆರತಿ ಎಲ್ಲಾರಿಗೂ ಆದ್ರು ಮಂಗಳಾರತಿ ನಂಗೊಬ್ಬ. ವರ್ಷಾ ಇದ ಹಣೇಬರಹ, ಒಂದ ವರ್ಷರ ತಪ್ಪತಲಾ ಅಂತ ನಂಗ ಸಮಾಧಾನ ಆತ.
ಇನ್ನ ನನ್ನ ಹೆಂಡತಿ ಮೊದ್ಲ ಮುಗ್ಗಲಗೇಡಿ, ಈ ಸರತೆ ಆರತಿ ಇಲ್ಲಾ ಅಂದರ ಫರಾಳನು ಇಲ್ಲಾ ಅಂದ ಬಿಟ್ಟಿದ್ದಳು. ಇನ್ನ ನಮ್ಮ ಮನ್ಯಾಗ ಹಬ್ಬ ಇಲ್ಲಾಂದರ ಏನಾತ ಮಂದಿ ಮನ್ಯಾಗರ ಮಾಡೇ ಮಾಡ್ತಾರ. ಹಿಂಗಾಗಿ ಯಾರ ಫರಾಳಕ್ಕ ಕರದರೂ ಒಲ್ಲೆ ಅನಬಾರದ ಅಂತ ಮೊದ್ಲ ಡಿಸೈಡ ಮಾಡಿ ಬಿಟ್ಟಿದ್ದೆ. ಅಷ್ಟರಾಗ ನಮ್ಮ ದೇಸಾಯಿ ಕರದ ಬಿಟ್ಟಾ,
ಸಂಡೇ ಮುಂಜಾನೆ ತೊರವಿ ಗಲ್ಲಿಗೆ ದೇಸಾಯರ ಮನಿಗೆ ಹೋದೆ. ಅಲ್ಲೆ ನಮ್ಮ ಎಲ್ಲಾ ಪ್ರಳಯಂಕರು ಅಂದರ ಹಳೇ ಜಿಗರಿ ದೋಸ್ತರು ಬಂದಿದ್ದರು.
“ಏನಲೇ ಅದ ಸಿ.ಬಿ.ಟಿ, ಹೆಂಗಿತ್ತ ಹಂಗ ಅದ ಅಲಾ, ಜನಾ ಇನ್ನೂ ಅಲ್ಲೆ ಗ್ವಾಡಿಗೆ ಉಚ್ಚಿ ಹೋಯ್ತಾರ,ಅಲ್ಲೇ ಉಗಳತಾರ, ಸಣ್ಣ ಹುಡಗರಿಗೆ ಅಲ್ಲೇ ಸಂಡಾಸಕ್ಕ ಕೂಡಸ್ತಾರ, ಎಲ್ಲೆ ಬೇಕಲ್ಲೆ ದನಾ ಮಲ್ಕೊಂಡಿರತಾವ, ಏನ ಹೊಲಸ, ಏನತಾನ ಒಟ್ಟ ಸುಧಾರಸಲಿಲ್ಲ ಬಿಡ ನಿಮ್ಮ ಹುಬ್ಬಳ್ಳಿ” ಅಂತ ಪವ್ಯಾ ಅಂದಾ.
“ಯಾಕಪಾ ಮಗನ, ಇದ ಸಿ.ಬಿ.ಟಿ ಯಿಂದ ನೀ ವರ್ಷಾನಗಟ್ಟಲೇ ಕಾಲೇಜಿಗೆ ಅಡ್ಡ್ಯಾಡತಿದ್ದೆಲಾ ಮರತೇನ? ಆವಾಗ ನೀ ಗ್ವಾಡಿಗೆ ಒಂದಕ್ಕ ಮಾಡ್ತಿದ್ದೇಲಾ ಅದನ್ನ, ಮಂಗಳವಾರ ಪೇಟದಾಗ ಸಣ್ಣಂವ ಇದ್ದಾಗ ಮೇನ ರೋಡಿಗೆ ಗಟರ ದಂಡಿಗೆ ಕೂತ ‘ಅವ್ವಾ ನಂದ ಆತ, ನೀರ ಹಾಕ ಬಾ’ ಅಂತಿದ್ದೆಲ್ಲಾ ಅದನ್ನೇಲ್ಲಾ ಯಾರ ಹೇಳಬೇಕ ಮಗನ” ಅಂದೆ.
“ಅದs ಹೇಳೋದಲೇ, ಆವಾಗಿಂದ ಹುಬ್ಬಳ್ಳಿ ಇನ್ನು ಹಂಗ ಅದ, ಒಟ್ಟ ಸುಧಾರಸಲಿಲ್ಲಾ ಬಿಡ ನಿಮ್ಮ ಊರು, ನೀವು” ಅಂದಾ.
ನಾ ಅವನ ಜೊತಿ ಜಾಸ್ತಿ ಮಾತಡಲಿಕ್ಕೆ ಹೋಗಲಿಲ್ಲಾ. ಯಾಕಂದರ ಅಲ್ಲೇ ನಾ ಒಬ್ಬನ indigenous, ಉಳದವರೇಲ್ಲಾ ಇಲ್ಲೆ ಹುಟ್ಟಿ, ಇಲ್ಲೇ ತಿಂದ ಬೆಳದ ಇವತ್ತ ಬ್ಯಾರೆ ದೇಶಕ್ಕ ಹೋಗಿ genius ಆದೋರು.
ಈ ಪವ್ಯಾ ನನ್ನ ಜೊತಿ ಐದನೇತದಿಂದ ಘಂಟಿಕೇರಿ ನ್ಯಾಶನಲ್ ಹೈಸ್ಕೂಲನಾಗ ಕ್ಲಾಸಮೇಟ್. ಅಂವಾ ಮಂಗಳವಾರ ಪೇಟದಿಂದ ಬರತಿದ್ದಾ ನಾ ಜೋಳದ ಓಣಿಯಿಂದ ಬರತಿದ್ದೆ. ಅವರಪ್ಪಾ ತಹಶೀಲ್ದಾರ ಆಫೀಸನಾಗ ಪ್ಯೂನ್ ಇದ್ದಾ, ಅವರವ್ವ ಮನ್ಯಾಗ ಹಪ್ಪಳ, ಸಂಡಗಿ, ಮೆಂತೆ ಹಿಟ್ಟ, ಖಾರಪುಡಿ, ಅಳ್ಳಿಟ್ಟ, ಮಸಾಲ ಪುಡಿ ಎಲ್ಲಾ ಮಾರತಿದ್ಲು. ಅವರಜ್ಜಿ ದಿವಸಕ್ಕ ಮೂರ ಹೊತ್ತ ಪ್ಯುರ್ ಕಾಟನದ ಬತ್ತಿ ಮಾಡಿ ಮಠದ ಕಟ್ಟಿ ಮ್ಯಾಲೆ ಮಾರಕೋತ ಕೂತ
“ನಮ್ಮ ಪವಿ ಮುಂದ ದೊಡ್ಡಂವಾದ ಮ್ಯಾಲೆ ಇಂಜೀನಿಯರ ಆಗ್ತಾನ” ಅಂತ ಬರೋರು ಹೋಗೊರ ಮುಂದ ಹೇಳತಿದ್ಲು. ಆವಾಗ ಈ ಮಗಗ ಇನ್ನೂ ಇಂಜೀನಿಯರ ಸ್ಪೆಲಿಂಗ ಬರತಿದ್ದಿಲ್ಲಾ, ಆದರೂ ಅಂವಾ ಮುಂದ ಇಂಜೀನಿಯರs ಆದ. ಇವತ್ತ senior analyst engineer ಅಂತ TCS ಒಳಗ ಕೆಲಸಾ ಮಾಡ್ತಾನ, ಅದು ಆಸ್ಟ್ರೇಲಿಯಾದಾಗ.
ಇವಂಗ BVB college ನಾಗ BE seat ಸಂಬಂಧ ಅವನ ಅಜ್ಜಿ ತನ್ನ ಬಂಗಾರದ ಅವಲಕ್ಕಿ ಸರಾ ವತ್ತಿ ಇಟ್ಟ ರೊಕ್ಕಾ ಕೊಟ್ಟಿದ್ಲು, ಈ ಮಗಾ ಒಂದನೇ ವರ್ಷನ ಎರಡ ಸಬ್ಜೆಕ್ಟ ಫೇಲ ಆಗಿದ್ದ ಕೇಳಿ ಹೊಟಬ್ಯಾನಿ ಹಚಗೊಂಡ ಮುಂದ ಇಂವಾ ಆ ಎರಡ ಸಬ್ಜೆಕ್ಟ ಕ್ಲೀಯರ್ ಮಾಡೊದರಾಗ ಅಕೀ ಸತ್ತ ಹೋದ್ಲು. ಹಂಗ ಅಕಿ ಅಷ್ಟೇನ ಲಗೂ ಸಾಯಲಿಲ್ಲಾ, ಆದರ ಇಂವಾ ಅಷ್ಟ ಲೇಟಾಗಿ ಆ ಎರೆಡ ಸಬ್ಜೆಕ್ಟ ಕ್ಲೀಯರ ಮಾಡಿದಾ.
ಮುಂದ ಇಂವಾ ಇಂಜೀನಿಯರ ಆಗಿ ನೌಕರಿ ಹತ್ತೋಕಿಂತಾ ಮೊದ್ಲ ಅವರಪ್ಪನು ಹೋಗಿ ಬಿಟ್ಟರು. ಅವರವ್ವ ಅರಷಣ ಪುಡಿ, ಮಸಾಲ ಪುಡಿ ಜೊತಿ ಹೂ ಬತ್ತಿ, ತುಪ್ಪಾ ತೊಯಿಸಿದ್ದ ಎಳ ಬತ್ತಿನೂ ಮಾರಲಿಕ್ಕೆ ಶುರು ಮಾಡಿದ್ಲು. ಏನೋ ಅವರದೇಲ್ಲಾ ಪುಣ್ಯಾ ಛಲೋ ಇತ್ತ ಈ ಮಗಗ ಲಗೂನ ನೌಕರಿ ಸಿಕ್ಕತು. ಆದರ ಅದ ಹುಬ್ಬಳ್ಳ್ಯಾಗ ಅಲ್ಲಾ, ಬೆಂಗಳೂರಾಗ. ಅವರವ್ವ ನಾ ಬೆಂಗಳೂರಿಗೆ ಬರಂಗಿಲ್ಲಾ ಅಂದ್ಲು. ಈ ಮಗಾ ರೊಕ್ಕಾ ತಿಂಗಳಾ ಕಳಸಿದರು ಅಕಿ ಹೊತ್ತ ಹೋಗಂಗಿಲ್ಲಾ ಅಂತ ಹುಬ್ಬಳ್ಳ್ಯಾಗ ಹೂ ಬತ್ತಿ, ಹಪ್ಪಳಾ ಮಾರೋದ ಏನ ಬಿಡಲಿಲ್ಲಾ. ಇಂವಾ ಮುಂದ ತನ್ನ ನೌಕರಿ ಬದಲಾದಂಗ ಬೆಂಗಳೂರ-ಪುಣಾ-ಚೆನ್ನೈ ಅಂತ ಹಾರಕೋತ ಹೋದಾ. ಕಡಿಕೆ ಅವರವ್ವ ಇವನ ಕೊರಳಿಗೆ ಒಂದ ಹಗ್ಗ ಇರಲಿ ಅಂತ ಇಲ್ಲೇ ಹಳೇ ಹುಬ್ಬಳ್ಳಿ ಕಿಲ್ಲಾದಾಗಿನ ತನ್ನ ಅಣ್ಣನ ಮಗಳನ ಕೊಟ್ಟ ಲಗ್ನಾ ಮಾಡಿದ್ಲು. ಆದರ ಆ ಹಗ್ಗ ಅವನ ಕೊರಳಿಗೆ ಇಷ್ಟ ಉರಲಾ ಆಗಲಿಲ್ಲಾ ಅವರವ್ವನ ಕೊರಳಿಗೂ ಊರಲಾತು. ಅವರವ್ವ ಇನ್ನ ತನ್ನ ಕಡೆ ಹಪ್ಪಳಾ ಲಟ್ಟಸಲಿಕ್ಕೆ ಆಗಂಗಿಲ್ಲಾ, ಖಾರ ಪುಡಿ ಕುಟ್ಟಲಿಕ್ಕೆ ಆಗಂಗಿಲ್ಲಾ ನನ್ನ ಕರಕೊಂಡ ಹೋಗರಿ ನಿಮ್ಮ ಜೊತಿ ಅಂದಾಗ ಅವನ ಹೆಂಡತಿ
“ನಿಮಗ ಅಲ್ಲೆ ಬಗಿಹರೆಯಂಗಿಲ್ಲಾ, ದೊಡ್ಡ ಊರು, ನಾವ ಬಂದು ಹೋಗಿ ಮಾಡ್ತೇವಿ. ನೀವ ಸುಮ್ಮನ ಹುಬ್ಬಳ್ಳ್ಯಾಗ ಇರ್ರಿ” ಅಂತ ಅಂದ ಬಿಟ್ಟಳು. ಮುಂದ ಒಂದ ಸ್ವಲ್ಪ ದಿವಸಕ್ಕ ಇಂವಾ ಆಸ್ಟ್ರೇಲಿಯಾಕ್ಕ ಹೋಗಿ ಬಿಟ್ಟಾ. ‘ಹಂಗ ಹೋಗೊದ ಖರೆ ಅಂದರ ನಂಗ ನೀರ ಬಿಟ್ಟ ಹೋಗಿ ಬಿಡು ಮತ್ತ ಯಾವಾಗ ಬರತೀಯೋ ಏನೋ’ ಅಂತ ಅವರವ್ವ ಬಡ್ಕೊಂಡರು ಅಂವಾ ಏನ ನೀರ ಬಿಡಲಿಲ್ಲಾ. ಅವರವ್ವ ಇವತ್ತು ಮಂಗಳವಾರ ಪೇಟದಾಗ ಇದ್ದಾಳ. ಹಂಗ ಇನ್ನೂ ಗಟ್ಟೆ ಇದ್ದಾಳ. ಮಗಾ ಆವಾಗ ಇವಾಗ ಬಂದ ಹೋಗ್ತಾನ. ಸೊಸಿ ತವರಮನಿಗೆ ಬಂದಾಗೊಮ್ಮೆ ಬಂದ ಹಣಿಕಿ ಹಾಕಿ ಮುದಕಿ ಇನ್ನೂ ಇದ್ದಾಳೊ ಇಲ್ಲೊ ನೋಡ್ಕೊಂಡ ಹೋಗ್ತಾಳ.
ಮಂಗಳವಾರ ಪೇಟನಾಗಿಂದ ಅವರ ಮನಿ ಭಾಳ ಹಳೇದ, ಅದಕ್ಕ ಇವತ್ತ ಭಾಳ ವ್ಯಾಲ್ಯೂ ಬಂದದ ಖರೆ ಆದರ ಮುದಕಿ ಇರೋ ಮಟಾ ಅದನ್ನ ಮಾರೋ ಹಂಗ ಇಲ್ಲಾ. ಒಮ್ಮೆ ಆ ಮನಿ ಒಂದ ಮಾರಿ ಬಿಟ್ಟರ ನಮ್ಮ ಪವ್ಯಾಗ ಹುಬ್ಬಳ್ಳಿ ಕಡೆ ತಲಿ ಮಾಡಿ ಮಲ್ಕೋಳೊ ಅವಶ್ಯಕತೆನ ಇಲ್ಲಾ. ಇದ ನಮ್ಮ ಪವ್ಯಾನ ಕಥಿ. ಹಂಗ ಉಳದವರದು ಎಲ್ಲಾ ಲಗಭಗ ಒಂದ ಟೈಪ ಕಥಿನ.
ಆದರ ಇವತ್ತ ಇವರ ಯಾರಿಗೂ ವಾಪಸ ಹುಬ್ಬಳ್ಳಿಗೆ ಬರೋ ವಿಚಾರ ಇಲ್ಲಾ. ಎಲ್ಲಾ ಎಲ್ಲೇಲ್ಲೆ ಇದ್ದಾರ ಅಲ್ಲೇ ಸೆಟ್ಲ್ ಆಗೋರು. ಅವ್ವಾ ಅಪ್ಪಾ ಇರೋತನಕ ಹುಬ್ಬಳ್ಳಿ ನೆಂಟ, ಆಮ್ಯಾಲೆ ಅವರ ಯಾರೋ ನಾವ ಯಾರೋ.
ನಾವೇಲ್ಲಾ ದೋಸ್ತರು ಸೇರಿ ಅದು ಇದು ಅಂತ ಹಾಳ ಹರಟೆ ಹೊಡ್ಕೋತ ಫರಾಳ ಹೊಡಿಲಿಕತ್ತಿದ್ವಿ, ಹಂಗ ಮಾತಾಡ್ತ-ಮಾತಾಡ್ತ ನಮ್ಮ 12 lacs to 20 lacs package per annum (cost to company) ದೋಸ್ತರು ಒಬ್ಬರಿಗೊಬ್ಬರು income tax ಉಳಸಲಿಕ್ಕೆ ಎಲ್ಲೆಲ್ಲೆ ಎಷ್ಟೇಷ್ಟ invest ಮಾಡಬೇಕು, ಯಾವದಕ್ಕ income tax exemption ಸಿಗತದ ಯಾವದಕ್ಕ ಇಲ್ಲಾ ಅಂತ ಸಿರಿಯಸ ಆಗಿ ಡಿಸ್ಕಸ್ ಮಾಡಲಿಕ್ಕೆ ಹತ್ತಿದರು. ನಾ this is not my cup of tea ಅಂತ ಅದರಾಗ ತಲಿ ಹಾಕಲಿಕ್ಕೆ ಹೋಗಲಿಲ್ಲಾ. ನಮಗ ಪಗಾರದಾಗ ಉಳಸೋದ ರಗಡ ಆಗಿರ್ತದ ಇನ್ನ income tax ಉಳಸೋದ ಎಲ್ಲೀದ ಬಂತ. ಆದರೂ ಇವರ ಎಲ್ಲೇಲ್ಲೋ, ಯಾರಾರಗೋ ಡೊನೇಶನ ಕೊಡೋದ ಕೇಳಿ ನಂಗ ತಡಕೊಳ್ಳಿಕ್ಕೆ ಆಗಲಿಲ್ಲಾ. ನಾ “ಅಲ್ಲಲೇ, ಸುಮ್ಮನ ರೊಕ್ಕಾ ಎಲ್ಲೆ ಬೇಕ ಅಲ್ಲೆ ಕೊಟ್ಟ ಹಾಳ ಮಾಡಬ್ಯಾಡರಿ, ನೀವು ಹುಟ್ಟಿ – ಬೆಳದ ಊರಾಗ ಏನರ ಮಾಡರಿ, ನಾವ ಕಲತ ಸಾಲಿಗೆ ಏನರ ಕೊಡರಿ, ನಿಮ್ಮ ಪೈಕಿ ಬಡವರ ಇದ್ದೊರಿಗೆ ಸಹಾಯ ಮಾಡರಿ, ಇಲ್ಲಾ ಒಂದ ngoನರ ಮಾಡರಿ” ಅಂತ ನಾ ಅಗದಿ ತಿಳದವರಗತೆ ಹೇಳಿದೆ.
“ಏ, ನಾವ ಅದಕ್ಕ ರೆಡಿ, ngo ಮಾಡೋಣಲಾ ಅದರಾಗೇನ. ಆದರ ಅದನ್ನ ನೀನ ನೊಡ್ಕೋಬೇಕ, ಹುಬ್ಬಾಳ್ಳ್ಯಾಗ ಖಾಲಿ ಇರೊಂವ ನೀ ಒಬ್ಬನ ಅಲಾ ಮತ್ತ” ಅಂದರು. ಏ ಇವರೇನ ನಾ ಹುಬ್ಬಳ್ಳಿ ಒಳಗ ಇದ್ದೇನಿ ಅಂದರ ಫಾಲತೂ ಇದ್ದೇನಿ ಅಂತ ತಿಳ್ಕೊಂಡಾರೇನ ಅಂತ ಅನಸ್ತ ಆದರೂ ಇವರ ಇಷ್ಟ ಸರಳ ngo ಮಾಡಲಿಕ್ಕೆ ಹೂಂ ಅಂದ ಬಿಟ್ಟರಲಾ ಅಂತ ನಂಗ ಆಶ್ಚರ್ಯ ಆತ. ಹಂಗರ ಯಾ ngo ಮಾಡಬೇಕು, ಅದರ ಉದ್ದೇಶ ಏನಿರಬೇಕು ಅಂತ ಸಿರಿಯಸ್ ಆಗಿ ಡಿಸ್ಕಶನ್ ಸ್ಟಾರ್ಟ ಮಾಡಿದ್ವಿ.
“ಆಡ್ಯಾ ನಾ ಹೇಳೊದ ಕೇಳ ಇಲ್ಲೆ” ಅಂತ ನಮ್ಮ ಜೋಶ್ಯಾ ಶುರು ಮಾಡಿದಾ “ಒಂದ ಜಾಗಾ ತೊಗೊಂಡ ಕಮ್ಯುನಿಟಿ ಹಾಲ್ ಮಾಡೋಣ. ನಮ್ಮಂದಿವು ಎಂಗೇಜಮೆಂಟ, ಸೀಮಂತ, ಜವಳ, ಮುಂಜವಿ ಹಿಂತಾ ಸಣ್ಣ ಪುಟ್ಟ ಕಾರ್ಯಕ್ರಮ ಇರತಾವಲ ಅವಕ್ಕೇಲ್ಲಾ ಫ್ರೀ ಕೋಡೊಣ” ಅಂದಾ.
ಅಡ್ಡಿಯಿಲ್ಲಾ ನಾಟ ಬ್ಯಾಡ ಐಡಿಯಾ ಅನಸ್ತ. ಅಷ್ಟರಾಗ ರಾಘ್ಯಾ ಅಡ್ಡ ಬಾಯಿ ಹಾಕಿ “ಏ,ನಮ್ಮಂದಿಗೆ ಇಷ್ಟ ಯಾಕ? ಏನಿಲ್ಲದ ಸಮಾಜದಾಗ ಮಂದಿ ನೀವು ಬ್ರಾಹ್ಮರು, ಮಡಿ- ಮೈಲಗಿ ಹಂಗ ಹಿಂಗ ಅಂತಾರ. ಮಾಡೋದಾದರ ನಾವ ಎಲ್ಲಾರ ಸಂಬಂಧ ಮಾಡಬೇಕು, ಜಾತಿ ನಡಕ ತರಬಾರದು” ಅಂದಾ.
ಅಲಾ ಇವನ, ಒಮ್ಮಿಂದೊಮ್ಮಿಲೆ ಎಷ್ಟ ಸೆಕ್ಯುಲರ ಆದ ಮಗಾ, ಮೊದ್ಲ ಮಠದಾಗ ಭೆಟ್ಟಿ ಆದಾಗ ನನಗ ನೀ ಸ್ಮಾರ್ತರಂವಾ ಅಂತಾ ದೂರಿಂದ ತೀರ್ಥ, ಅಕ್ಷತಾ ಕೊಡತಿದ್ದಾ. ಇವತ್ತ ದಿಲ್ಲಿಗೆ ಹೋಗಿ ಮನ್ಯಾಗ ಹೇಳದ ಕೇಳದ ಪಂಜಾಬಿ ಹುಡಗಿ ಲಗ್ನಾ ಮಾಡ್ಕೊಂಡ ಮ್ಯಾಲೆ ಜ್ಞಾನೋದಯ ಆತನ ಇವಂಗ ಅನಸ್ತ.
ಅವರಪ್ಪಂತೂ ಮಾತ ಮಾತಿಗೆ ‘ಹರಿ-ಹರಿ’ ಅನ್ಕೋತ ಆಜು-ಬಾಜು ಇದ್ದೋರಿಗೆ ಹರಕೊಂಡ ತಿನ್ನೋರಗತೆ ನೋಡ್ಕೋತ ದಿವಸಾ ವದ್ದೀಲೇ ಮಠಕ್ಕ ಹೋಗೊಂವಾ, ಮಗಾ ಪಂಜಾಬಿ ಹುಡಗಿನ ಮನಸ್ಸಿಗೆ ಹಚಗೊಂಡ ನಾ ಅಕಿನ್ನs ಮಾಡ್ಕೋತೇನಿ ಅಂದದ್ದನ್ನ ತಾ ಮನಸ್ಸಿಗೆ ಹಚಗೊಂಡ ವರ್ಷಾನ ಗಟ್ಟಲೇ ಶಟಗೊಂಡಿದ್ದಾ. ಮುಂದ ಹಡದ ತಾಯಿ ಕರಳ ಯಾಕ ಹಿಂಡಬೇಕು ಅಂತ ಮಗನ ಜೊತಿ ರಾಜಿ ಮಾಡ್ಕೊಂಡರು ಸೊಸಿನ ಮಾತ್ರ ಮನಿ ತುಂಬಿಸಿಗೊಳ್ಳಿಲ್ಲಾ. ಇವತ್ತು ವರ್ಷಕ್ಕ ಒಂದ ಸರತೆ ರಾಘ್ಯಾ ಒಬ್ಬನ ಹುಬ್ಬಳ್ಳಿಗೆ ಬಂದ ಹೋಗ್ತಾನ. ಅವರವ್ವಾ ಅಪ್ಪಾ ಇರೋ ಅಷ್ಟ ದಿವಸ ಬಂದು ಹೋಗಿ ಮಾಡ್ತಾನ ಆ ಮಾತ ಬ್ಯಾರೆ.
ಅಲ್ಲಾ, ಅವರಪ್ಪಗೂ ಬುದ್ಧಿ ಇದ್ದಿದ್ದಿಲ್ಲ ಬಿಡ್ರಿ, ೨೧ನೇ ಶತಮಾನದಾಗೂ ‘ನಮ್ಮ ಮಗಗ ವೈಷ್ಣವರ ಹುಡಗಿನ ಬೇಕು’ , ಅದು ರಾಯರ ಮಠಾನ ಇರಬೇಕು, ಮೈತುಂಬ ಮುದ್ರ ಇರಬೇಕು ಅಂತಿದ್ದರು, ನೋಡ್ರಿ ಈಗ ಮಗಾ ಏನ ಮಾಡಿದಾ. ‘ಏನೋ ಪುಣ್ಯಾ ಒಟ್ಟ ಹುಡಗಿನ್ನ ಲಗ್ನಾ ಮಾಡ್ಕೊಂಡಾನ ಅಂತ ಸಮಾಧಾನ ಮಾಡ್ಕೊಂಡ ಇರ್ರಿ, ನಾರ್ಥ ಇಂಡಿಯಾದಾಗ ಏನ ಹೇಳಲಿಕ್ಕೆ ಬರಂಗಿಲ್ಲಾ’ ಅಂತ ಮಂದಿ ತಿಳಿಸಿ ಹೇಳಿದ ಮ್ಯಾಲೆ ಸುಮ್ಮನಾಗಿದ್ದರು.
ಅಷ್ಟರಾಗ ನಮ್ಮ ಶ್ರೀಪ್ಯಾ “ಏ, ಹೌದ ಒಂದ ಕಮ್ಯುನಿಟಿ ಹಾಲ್ ಮಾಡೋದ ಛಲೊ, ಬೇಕಾರ ಅಲ್ಲೆ ಶ್ರಾದ್ಧ, ಪಕ್ಷಾ, ಐದಾನವಮಿ ಎಲ್ಲಾ ಮಾಡಲಿಕ್ಕೆ ಕೊಡಬಹುದು, ನಮ್ಮ ಧರ್ಮ, ನಮ್ಮ ಸಂಸ್ಕೃತಿ ಉಳಿಸಿದಂಗ ಆಗ್ತದ” ಅಂದಾ.
ಅದೇನೋ ಅಂತಾರಲಾ…..ಶ್ರಾದ್ಧ – ಪಕ್ಷ ಮಾಡೋದರಿಂದ ನಮ್ಮ ಧರ್ಮ ಸಂಸ್ಕೃತಿ ಉಳಿತದಂತ. ಏನ್ಮಾಡ್ತೀರಿ? ಅಲ್ಲಾ ಇಂವಾ ಯಾಕ ಸೀದಾ ಶ್ರಾದ್ಧ-ಪಕ್ಷಕ್ಕ ಬಂದಪಾ ಅಂದರ ಇವರಪ್ಪಂದ ವರ್ಷಕ್ಕ ಒಂದ ಸರತೆ ಶ್ರಾದ್ಧ ಬರತಿತ್ತ. ಅದನ್ನ ಅವರವ್ವಾ ಇಲ್ಲೆ ಮಠದಾಗ ಮಾಡತಿದ್ಲು. ಇಂವಾ ತನಗ ವರ್ಷಾ ಶ್ರಾದ್ಧಕ್ಕ ಅಮೇರಿಕಾದಿಂದ ಬರಲಿಕ್ಕ ಆಗಂಗಿಲ್ಲಾ ಅಂತ ಇಲ್ಲೇ ಹುಬ್ಬಳ್ಳ್ಯಾಗಿನ ಒಂದ ಮಠಕ್ಕ ಅಡ್ವಾನ್ಸ ಕೊಟ್ಟ ಬಿಟ್ಟಿದ್ದಾ, ವರ್ಷಕ್ಕ ಇಷ್ಟ ನಮ್ಮಪ್ಪನ ಶ್ರಾದ್ಧ/ಪಕ್ಷ ಮಾಡಬೇಕು ಪ್ರಸಾದಕ್ಕ ನಮ್ಮವ್ವ, ನನ್ನ ತಂಗಿ ಬರತಾರ ಅವರಿಬ್ಬರಿಗೆ ಹೊಟ್ಟಿತುಂಬ ಬಾಳೆ ಎಲಿ ಒಳಗ ಊಟಕ್ಕ ಹಾಕಬೇಕು ಅಂತ ಕಂಟ್ರ್ಯಾಕ್ಟ ಕೊಟ್ಟಿದ್ದಾ. ಆದರ ಅವರವ್ವ ಶ್ರಾದ್ಧ ಊಟಾ ಮಾಡಿ ಬಂದ ಸರತೆಗೊಮ್ಮೆ ಅಮೇರಿಕಾಕ್ಕ ಫೋನ ಹಚ್ಚಿ ಕಣ್ಣೀರ ಹಾಕೋಕಿ, ಅವರಪ್ಪಂದ ನೆನಪಾತ ಅಂತ ಅಲ್ಲಾ ಮತ್ತ
“ಏನ ಸುಡಗಾಡ ಶ್ರಾದ್ಧ ಮಾಡತಾರ ಶ್ರೀಪ್ಯಾ ಅಲ್ಲೇ, ನಿಮ್ಮಪ್ಪ ಹೆಂತಾ ದೊಡ್ಡ ದಿಕ್ಷೀತರು, ಹೆಂತಾ ದೊಡ್ಡ ವೈದಿಕ ಬ್ರಾಹ್ಮರ ಮನೆತನ ನಂಬದು, ಇವತ್ತ ನಮ್ಮ ಹಣೇಬರಹಕ್ಕ ಹಂತಾವರ ಸತ್ತರ ಒಂದ ಶ್ರಾದ್ಧ ಮಾಡಲಿಕ್ಕೆ ಮನ್ಯಾಗ ಮಗ ಇಲ್ಲದಂಗ ಆತು. ಅದರಾಗ ಆ ವೈಷ್ಣವರ ಮಠದಾಗ ಏನ ಮಡಿ- ಏನ ಮೈಲಗಿ, ಖೋಡಿಗಳು ದಾಬಳಿ ಒಂದ ಉಟಗೊಂಡರ ಮುಗದ ಹೋತೇನು? ಹತ್ತ ಹತ್ತ ಶ್ರಾದ್ಧ ಒಂದ ಸರತೆ ಮಾಡ್ತಾರ. ಯಾರಿಗೆ ಯಾರ ಹೆಸರಲೇ ನೀರ ಬಿಡ್ತಾರ ಆ ದೇವರಿಗೆ ಗೊತ್ತ. ಸಾರ್ವಜನಿಕ ಶ್ರಾದ್ಧ ಮಾಡಿದಂಗ ಮಾಡ್ತಾರ. ನಂಗಂತೂ ಒಟ್ಟ ಮನಸ್ಸಿಗೆ ಸಮಾಧಾನ ಇಲ್ಲಪಾ” ಅಂತ ಗೋಳೊ ಅನ್ನೋಕಿ.
ಇವಂಗ ಅದನ್ನ ಕೇಳಿ ಕೇಳಿ ಸಾಕಾಗಿ ಬಿಟ್ಟಿತ್ತ.
“ಇನ್ನ ನಾ ಏನ ಅಪ್ಪನ ಶ್ರಾದ್ಧ ಮಾಡಲಿಕ್ಕೆ ಅಮೇರಿಕಾದ್ದ ನೌಕರಿ ಬಿಟ್ಟ ವಾಪಸ ಬರಲೇನವಾ” ಅಂತ ಅವರವ್ವನ ಜೊತಿ ಜಗಳಾಡೊಂವಾ. ಇದ ಇವನ ಕಥಿ.
ಅಷ್ಟರಾಗ ದೇಸಾಯಿ “ಮೊದ್ಲ ಒಂದ ngo ಮಾಡಿ ರೆಜಿಸ್ಟರ ಮಾಡೋಣ. ಎಲ್ಲರ ಒಂದ ಜಾಗಾ ನೋಡಿ ಬೇಕಾರ ಅಲ್ಲೆ ಸುಮ್ಮನ ಈ ಕಮ್ಯುನಿಟಿ ಹಾಲ್ ಮಾಡೋದಕಿಂತಾ ‘ವೃದ್ಧಾಶ್ರಮ’ ಮಾಡೋಣ, ಹುಬ್ಬಳ್ಳ್ಯಾಗ ಯಾವದು ಬ್ರಾಹ್ಮರದ ಒಂದ ಛಲೊ ‘ವೃದ್ಧಾಶ್ರಮ’ ಇಲ್ಲಾ” ಅಂದಾ. ಅದಕ್ಕ ಪವ್ಯಾ, ಜೊಶ್ಯಾ ಇಬ್ಬರೂ ಬೆಸ್ಟ ಐಡಿಯಾ, ಬೆಸ್ಟ ಐಡಿಯಾ ಅಂದರು. ಅಗದಿ ಒಮ್ಮಿಂದೊಮ್ಮಿಲೇ ಎಲ್ಲಾರೂ ‘ವೃದ್ಧಾಶ್ರಮ’ಕ್ಕ ಜೈ ಅಂದ ಬಿಟ್ಟರು. ಇನ್ನ ಆ ‘ವೃದ್ಧಾಶ್ರಮ’ಕ್ಕ ಯಾರ ಅವ್ವಂದ ಹೆಸರ ಇಡಬೇಕ ಅನ್ನೋದ ಬಾಕಿ ಉಳದಿತ್ತ, ಆವಾಗ “ಆಡ್ಯಾ, ನೀ ಏನ ಅಂತಿಲೇ, ಎಲ್ಲರ ಒಂದ ವೃದ್ಧಾಶ್ರಮಕ್ಕ ಜಾಗ ಇದ್ದರ ನೋಡಲೇ” ಅಂತ ನನ್ನ ಕೇಳಿದರು. ನಂಗ ಮೊದ್ಲ ‘ವೃದ್ಧಾಶ್ರಮ’ ವಿಚಾರ ಕೇಳಿ ತಲಿ ಕೆಟ್ಟಿತ್ತ. ತೊಗೊ ಸಿಟ್ಟ ನೆತ್ತಿಗೇರತ “ಲೇ, ಒಂದ ಕೆಲಸಾ ಮಾಡೋಣ, ಎಲ್ಲೇರ ಊರ ಹೊರಗ ಜಾಗ ಹಿಡದ ಮೊದ್ಲ ಒಂದ ಮುಕ್ತಿಧಾಮ ಮಾಡೋಣ, ಅದರ ಎಡಕ್ಕ ವೃದ್ಧಾಶ್ರಮ, ಬಲಕ್ಕ ಕರ್ಮಾ ಮಾಡಸಲಿಕ್ಕೆ ಹಾಲ್ ಒಂದ ಮಾಡಿ ಬಿಡೋಣ” ಅಂದೆ.
“ಏ, ಏನ ಮಾತಾಡ್ತಿಲೇ ಮಗನ” ಅಂದರು
“ಹಲಕಟ ಸೂ.ಮಕ್ಕಳ.. ಹಬ್ಬದ ದಿವಸ ಯಾಕ ಬೈಸ್ಗೋತೀರಿ. ಅಲ್ಲಲೇ ಇಷ್ಟ ಗಳಸ್ತಿರಿ ಅದರಾಗ ಒಂದ ಸ್ವಲ್ಪ ಏನರ ಸಮಾಜಕ್ಕ ಕೊಡರಿ ಅಂದರ ಒಬ್ಬಂವಾ ಅವರಪ್ಪನ ಶ್ರಾದ್ಧ ಮಾಡಲಿಕ್ಕೆ ಕಮ್ಯುನಿಟಿ ಹಾಲ್ ಮಾಡ ಅಂತಾನ ಇನ್ನೊಬ್ಬಂವ ವಯಸ್ಸಾದ ಅವ್ವನ ಇಡಲಿಕ್ಕೆ ವೃದ್ಧಾಶ್ರಮ ಮಾಡೋಣ ಅಂತಾನ, ಆಟಾ ಹಚ್ಚಿರೇನಲೇ? ನಾಚಿಕೆ ಬರಂಗಿಲ್ಲಾ ವೃದ್ಧಾಶ್ರಮ ಕಟ್ಟಸೋಣು ಅಂತ ಹೇಳಲಿಕ್ಕೆ? ಹಡದ ಅವ್ವಾ-ಅಪ್ಪನ್ನ ವಯಸ್ಸಾದ ಮ್ಯಾಲೆ ಸಾಕಲಿಕ್ಕೆ ಆಗಲಾರದ ಅವರನ ಸ್ವಂತ ವೃದ್ಧಾಶ್ರಮ ಕಟ್ಟಿಸಿ ಇಡೊದು ಸಮಾಜ ಸೇವಾನ? ನಮ್ಮಂಥಾ ಮಕ್ಕಳ ಹುಟ್ಟಿದ್ದಕ್ಕ ಇವತ್ತ ಸಮಾಜದಾಗ ವೃದ್ಧಾಶ್ರಮದ ಡಿಮಾಂಡ ಜಾಸ್ತಿ ಆಗಿದ್ದ. ನಮ್ಮ ಅವ್ವಾ-ಅಪ್ಪನ್ನ ನಾವ ಛಂದಾಗಿ ಸಾಕೋದ ಬಿಟ್ಟ income tax ಉಳಸಲಿಕ್ಕೆ ವೃದ್ಧಾಶ್ರಮ ಕಟ್ಟಸತಾರಂತ, ಮೊದ್ಲ ಛಂದಾಗಿ ಅವ್ವಾ-ಅಪ್ಪನ ಉಳಸಿಗೋರಿ, ಆಮ್ಯಾಲೆ income tax ಉಳಸರಿ.
ಇವತ್ತ ವೃದ್ಧಾಶ್ರಮದಾಗ ಬ್ರಾಹ್ಮರ ಸಂಖ್ಯೆ ಜಾಸ್ತಿ ಆಗಲಿಕ್ಕೆ ನಮ್ಮಂತ educated ಮಕ್ಕಳ ಕಾರಣ. ಲೇ, ನಾವು ಯಾ ಸಮಾಜ ಸೇವಾ ಮಾಡದೇ ಇದ್ದರು ಅಡ್ಡಿಯಿಲ್ಲಾ ಆದರ ನಮ್ಮ ನಮ್ಮ ಹಡದ ಅವ್ವ-ಅಪ್ಪನ್ನ ಛಂದಾಗಿ ನೋಡ್ಕೊಂಡರ ಅದ ನಮ್ಮ ಧರ್ಮಕ್ಕ, ಸಮಾಜಕ್ಕ ದೊಡ್ಡ ಸೇವಾ. ವೃದ್ಧಾಶ್ರಮ ಮಾಡಬೇಕು ಅನ್ನೋ ವಿಚಾರ ಸಹಿತ ನಮ್ಮಂತ ಹುಡಗರ ಮನಸ್ಸಿನಾಗ ಬರಬಾರದು. ಹಂಗ ಇವತ್ತ ನಾವ ‘ವೃದ್ಧಾಶ್ರಮ’ ಕಟ್ಟಸೋದು ನಮ್ಮ ಅವ್ವಾ ಅಪ್ಪಗ ಇಷ್ಟ ಅಲ್ಲಾ ನಾಳೆ ಅದ ನಮಗ. ಅವ್ವಾ-ಅಪ್ಪನ್ನ ಸಾಕಲಾರದಂತಾ ಧಾಡಿ ನಮಗೇನ ಆಗೇದರಲೇ, ಇವತ್ತ ಹಡದ ಬೆಳಸಿ ದೊಡ್ಡವರನ ಮಾಡಿದ ಅವ್ವಾ-ಅಪ್ಪನ್ನ ವಯಸ್ಸಾದ ಮ್ಯಾಲೆ ನಾವ ಅನಾಥ ಮಾಡೋದಕಿಂತ ಅವರ ನಮ್ಮನ್ನ ಹಡದಾಗ ಅನಾಥ ಮಾಡಿ ಹೋಗಿದ್ದರ ಭಾಳ ಛಲೋ ಇತ್ತ ಅನ್ನೊಹಂಗ ಮಾಡಬ್ಯಾಡರಲೇ. ಇನ್ನೊಮ್ಮೆ ಈ ‘ವೃದ್ಧಾಶ್ರಮ’ ಕಟ್ಟಸೋ ವಿಷಯ ತಗದರ ನೋಡ” ಅಂತ ಒಂದ ಉಸಿರನಾಗ ಎಮೋಶನಲ ಆಗಿ ಭಾಷಣ ಮಾಡಿದೆ.
ಯಾ ನನ್ನ ಮಗನೂ ಚಪ್ಪಾಳೆ ಹೊಡಿಲಿಲ್ಲಾ. ಆದರ ‘ವೃದ್ಧಾಶ್ರಮ’ ಮಾಡೋ ವಿಷಯ ಮಾತ್ರ ಅಲ್ಲಿಗೆ ನಿಂತ ಹೋತ. ಎಲ್ಲಾರು ಬಾಯಾಗ ಶಂಕರಪೊಳೆ- ಅನಾರಸ ತುರಕೊಂಡ ಕಿವ್ಯಾಗ ಕೊಡಬೊಳೆ ಇಟಗೊಂಡ ಸುಮ್ಮನ ಕೂತರು.
ಆದರ ಒಂದ ಅಂತೂ ಖರೆ ಇವತ್ತ ಸಮಾಜದಾಗ ‘ವೃದ್ಧಾಶ್ರಮ’ದ ಅವಶ್ಯಕತೆ ಅದ ಅಂತ ಅನಿಸಿದರ ನಾಳೆ ಅದರ ಬಾಜುಕ ‘ಮುಕ್ತಿಧಾಮ’ ಇರಲಿ ಅನಸ್ತದ. ಅದರ ಬಾಜುನ ಕರ್ಮ ಮಾಡೋ ವ್ಯವಸ್ಥಾ ಒಂದ ಆಗಿ ಬಿಟ್ಟರ ಇನ್ನೂ ಭಾಳ ಛಲೋ. ಕಾಗಿ ಪಿಂಡ, ಧರ್ಮೋದಕ ಬಿಡೋದ, ಸೀ ಮುಟ್ಕೋಳೋದು ಎಲ್ಲಾ ಮೂರನೇ ದಿವಸ ಇಲ್ಲಾ ಐದನೇ ದಿವಸ ಶಾಸ್ತ್ರಕ್ಕ ಮಾಡಿ ಮುಗಿಸಿ ಬಿಟ್ಟರಂತು ಇನ್ನೂ ಛಲೋ. ಪಾಪ ನಮ್ಮ ಫಾರೇನ ದೋಸ್ತರಗಿ ಒಂದ ವಾರದಾಗ ಎಲ್ಲಾ ಮುಗಿಸಿಕೊಂಡ ವಾಪಸ್ಸ ಹೋಗಲಿಕ್ಕೆ ಭಾಳ ಅನಕೂಲ ಆಗ್ತದ.
ಹೆಂಗ ಸಮಾಜ ಬದಲಾಗ್ತದ ಅದರ ತಕ್ಕ ನಮ್ಮ ಪದ್ದತಿ, ಸಂಪ್ರದಾಯನೂ ಬದಲಾಗಬೇಕಲಾ ಮತ್ತ. ಅದಕ್ಕ ಹೌದಲ್ಲ ನಾವ growth ಅನ್ನೋದು.
ಅಡೂರ ಕಾಕರ,
ನಿಮ್ಮ almost ಎಲ್ಲಾ ಪ್ರಹಸನಗಳನ್ನ ಓದೀನಿ, ಬಹಾಳ enjoy ಮಾಡೀನಿ. ನನ್ನ ಮನ್ಯಾಗಿನ ನನ್ನಾಕಿಗೂ ಓದಿ ಹೇಳಿ ಖುಷಿ ಪಟ್ಟೇನಿ. ವೃದ್ಧಾಶ್ರಮದ ಬಗ್ಗೆ ನಿಮ್ಮ ಅಭಿಪ್ರಾಯ ಮನಸ್ಸಿಗಿ ಬಹಾಳ ಹತ್ತಿತು. ಕಣ್ಣಾಗ ನೀರೂ ಬಂದ್ವು……