ವೈ pi ಡೇ.. ವೈ ನಾಟ ‘ ಉಳ್ಳಾಗಡ್ಡಿ ಡೇ’?

ಇದ ಏನಿಲ್ಲಾಂದರು ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ, ನಾ ಶ್ರೀ ಕಾಡಸಿದ್ಧೇಶ್ವರ ಆರ್ಟ್ಸ ಕಾಲೇಜ & ಹುಚ್ಚಪ್ಪಾ ಸಕ್ರೆಪ್ಪಾ ಕೋತಂಬರಿ ಸೈನ್ಸ್ ಇನ್ಸ್ಟಿಟ್ಯುಟನಾಗ B.Sc ಫೈನಲ್ ಇಯರ ಕಲಿಲಿಕತ್ತಿದ್ದೆ. ಆ ವರ್ಷದ ಸೈನ್ಸ್ ಸೆಕ್ರೇಟರಿ ಅಂತ ನನಗ ಮಾಡಿದ್ದರು. ಹಂಗ ನಾ ಯಾವದರ ಗೇಮ್ಸದ್ದ ಸೆಕ್ರೇಟರಿ ಆಗ್ತೇನಿ ಅಂತ ಹಿತ್ತಲಮನಿ ಸರಗೆ ಕೇಳಿದಾಗ ಅವರು ಮತ್ತ ಅವರ ಜೊತಿಗೆ ಇದ್ದ ಮುಂದಿನಮನಿ ಸರ ಇಬ್ಬರು ಸೇರಿ
“ತಮ್ಮಾ, chemistry ಒಳಗಿನ ಮೇಸರಿಂಗ ಸಿಲೇಂಡರ್ ಇದ್ದಂಗ ಇದಿ. ಕಾಲ ನೋಡಿದರ ೯೦ ml ಬ್ಯುರೇಟ್ ಆಗೇವ, ಕೈ ನೋಡಿದರ ೩೦ ml ಪಿಪ್ಪೇಟ್ ಇದ್ದಂಗ ಅವ ಇನ್ನ ೬೦ml ರೌಂಡ ಬಾಟಮ್ ಫ್ಲಾಸ್ಕ ಇಟಗೊಂಡ ನೀ ಏನ sports secretary ಆಗ್ತಿ” ಅಂತ ಬೈದ ಕಳಸಿದರು. ಕಡಿಕೆ ಮೂಲಿಮನಿ ಸರ್ ಕರದ ಸಮಾಧಾನ ಮಾಡಿ
“ಬಾ ತಮ್ಮಾ, ನೀ ಹೆಂಗಿದ್ದರು ಸೈನ್ಸ್ ಸ್ಟುಡೇಂಟ, ಸುಮ್ಮನ ಸೈನ್ಸ ಸೆಕ್ರೇಟರಿ ಆಗ” ಅಂತ ನಂಗ ಸೈನ್ಸ್ ಸೆಕ್ರೇಟರಿ ಮಾಡಿದರು.
ಇನ್ನ ಸೈನ್ಸ ಸೆಕ್ರೇಟರಿ ಅಂದರ ವರ್ಷದಾಗ ಒಂದ ಹತ್ತ ಸೆಮಿನಾರ್ ಕಂಡಕ್ಟ ಮಾಡೋದ ಬಿಟ್ಟರ ಮತ್ತ ಬ್ಯಾರೆ ಏನ ಕೆಲಸ ಇರಂಗಿಲ್ಲಾ. ಕಡಿಕೆ ವರ್ಷದ ಎಂಡಿಗೆ ಒಂದ science exhibition ಮಾಡಿ ಕಪ್ಪಿ, ಜೊಂಡಿಗ್ಯಾ ಇಲಿ ಕೋಯ್ದ ಒಂದ ನಾಲ್ಕ ಬೋನ್ಸಾಯ್ ಗಿಡ, ಒಂದ್ಯಾರಡ oscillator, vantilator ಇಟ್ಟ ಇದ ಸೈನ್ಸ್ ಎಕ್ಜಿಬಿಶನ್ ಅಂತ ಜೈಹಿಂದ ಅಂದರ ಮುಗದ ಹೋತ. ಹಂಗ ನಾ as science secretary ಅವನ್ನೇಲ್ಲಾ ಮಾಡಿದೆ ಆದರು ಒಂದ ಸ್ವಲ್ಪ ಏನರ ಕ್ರೀಯೇಟಿವ್ activity ಮಾಡಬೇಕು ಅಂತ ತಲ್ಯಾಗ ಬಂದ ಕಡಿಕೆ ಮಾರ್ಚ್ ತಿಂಗಳದಾಗ ಪೈ ಡೇ ಮಾಡಿದರಾತು ಅಂತ ಪ್ರಿನ್ಸಿಪಾಲರಿಗೆ ಒಂದ ರಿಕ್ವೆಸ್ಟ ಲೆಟರ್ ಕೊಟ್ಟೆ. ಅವರು ‘ಆತು ಒಂದ ನಾಲ್ಕ ಮಂದಿ ಪ್ರೊಫೇಸರ ಜೊತಿ ಡಿಸ್ಕಸ್ ಮಾಡಿ ಫೈನಲ್ ಮಾಡೋಣು’ ಅಂತ ಹೇಳಿದರು.
ಅದರಾಗ ನಮ್ಮ ಸೈನ್ಸ್ ಕಾಲೇಜದ್ದು ಮತ್ತ ಆರ್ಟ್ಸ ಕಾಲೇಜಿಂದು ಎರಡು ಸೇರಿ ಒಂದ ಆಫೀಸ. ಹಿಂಗಾಗಿ ಪ್ರಿನ್ಸಿಪಾಲ್ ಮತ್ತ ಸ್ಟಾಫ್ ಎಲ್ಲಾ ಕಾಮನ್. ಆ ವರ್ಷ ಒಬ್ಬರ ಸೋಸಿಯಾಲಜಿ ಸರ್ ಪ್ರಿನ್ಸಿಪಾಲ್ ಇದ್ದರು.
ಕಡಿಕೆ ಪ್ರಿನ್ಸಿಪಾಲರು
“ಹಿಂಗs, ಮತ್ತ ಸೈನ್ಸ್ ಸೆಕ್ರೇಟರಿ ‘ಪೈ’ ಡೇ ಮಾಡೋಣ ಅಂತ ಅನ್ನಲಿಕತ್ತಾರ ಹೆಂಗ”
ಅಂತ ಸ್ಟಾಫ್ ಮೀಟಿಂಗ ಒಳಗ ವಿಷಯ ತಗದರು. ನಂಗು ಮೀಟಿಂಗಗೆ ಕರದಿದ್ದರು. ‘ಪೈ’ ಡೇ ಅಂದ ಕೂಡಲೇನ ಮೂರ ನಾಲ್ಕ ಮಂದಿ ಆರ್ಟ್ಸ್ ಸರ್ ಅದಕ್ಕ oppose ಮಾಡಲಿಕತ್ತರು.
ಒಮ್ಮಿಂದೊಮ್ಮಿಲೆ ಹಿಸ್ಟರಿ ಉಳ್ಳಾಗಡ್ಡಿಮಠ ಸರ್ ಸಿಟ್ಟಿಗೆದ್ದ
“ವೈ pi ಡೇ.. ವೈ ನಾಟ ‘ ಉಳ್ಳಾಗಡ್ಡಿ ಡೇ’. ಅದೇನ ನಿಮಗ ಯಾರದ ಬೇಕ ಅವರದ ಡೇ ಮಾಡ್ಕೋತಿರೇನ, ನಾಳೆ ನಾ ಉಳ್ಳಾಗಡ್ಡಿ ಡೇ ಮಾಡೋಣ ಅಂತೇನಿ, ಮಾಡ್ತಿರೇನ?” ಅಂದರು. ಇತ್ತಲಾಗ ಅವರ ಹಂಗ ಅಂದಿದ್ದ ನೋಡಿ ಜೀಯೊಗ್ರಫಿ ಲಿಂಬಿಕಾಯಿ ಸರ್
“ಹೌದ..ಹೌದ..ಇವತ್ತ ಪೈ ಡೇ ಮಾಡಿದರಿ ಅಂದರ ಅವರ ಉಳ್ಳಾಗಡ್ಡಿ ಡೇ ಮಾಡೋಣ ಅಂತಾರ ನಾಳೆ ನಾ ಲಿಂಬಿಕಾಯಿ ಡೇ ಮಾಡೋಣ ಅಂತೇನಿ ಆಮ್ಯಾಲೇ ಮೇಣಸಿನಕಾಯಿ ಸರ ಸುಮ್ಮನ ಕೂಡ್ತಾರೇನ” ಅಂದರು.
ಪಾಪ ನಮ್ಮ ಫಿಸಿಕ್ಸ್ ಧೋತ್ರದ ಸರ್ ಏನೋ ತಿಳಿಸಿ ಹೇಳಲಿಕ್ಕೆ ಹೋದರ ಎಕಾನಾಮಿಕ್ಸ್ ಅಕ್ಕಿ ಸರ್ ಸಿಟ್ಟಿಗೆದ್ದ
“ಯಾಕ, ಈಗ ನಿಮ್ಮ ಹೆಸರಿಲೆ ಮೊನ್ನೆ ಧೋತಿ ಡೇ ಮಾಡೇವಲಾ ಅದ ಸಾಕಾಗಿಲ್ಲಾ, ಮತ್ತ ಪೈ ಡೇ ಕ್ಕ ಗಂಟ ಬಿದ್ದಿರಿಲಾ” ಅಂದ ಬಿಟ್ಟರು. ಕಾಲೇಜ ಗ್ಯಾದರಿಂಗ ಕಲ್ಚರಲ್ ಫೆಸ್ಟ್ ಒಳಗ ಧೋತಿ ಡೇ ಮಾಡಿದ್ದನ್ನ ಇವರ ದೋತ್ರದ ಸರ್ ಸಂಬಂಧ ಅಂತ ತಿಳ್ಕೊಂಡಿದ್ದರೋ ಏನೋ.
ನಾ ಅಲ್ಲೇ ನಿಂತಿದ್ದೆ. ಇಷ್ಟೋತ್ತನಕ ಮಾಸ್ತರ ಮಂದಿ ದೊಡ್ಡವರು, ಶಾಣ್ಯಾರು ನಾ ಸಣ್ಣಂವಾ ಮಾತಾಡಬಾರದ ಅಂತ ಬಿಟ್ಟಿದ್ದೆ ಆದರ ಇದ ಏನ ಬಗೆ ಹರಿಯೋಹಂಗ ಕಾಣಂಗಿಲ್ಲಾ ಅಂತ
“Excuse me sir, ನನಗ ಒಂದ ನಿಮಿಷ ಮಾತಾಡಲಿಕ್ಕೆ ಅವಕಾಶ ಕೊಡರಿ” ಅಂತ ಕೇಳಿದರ.
“ಏ, ನೀ ಸುಮ್ಮನಿರ. ಹಂಗೇಲ್ಲಾ ಕಂಡ-ಕಂಡೋರ್ ಡೇ ಮಾಡಲಿಕ್ಕೆ ಇದ ಕಾಲೇಜೊ ಕೊಂಡವಾಡೊ”
ಅಂತ ಎಲ್ಲಾರೂ ಸೇರಿ ನಂಗ ಜೋರ ಮಾಡಿದರು. ನಂಗ ಇವರ ಹಿಂಗ್ಯಾಕ ಪೈ ಬಗ್ಗೆ ಇಷ್ಟ ಲೈಟಾಗಿ ಮಾತಾಡಲಿಕತ್ತಾರ ಅಂತ ಅರ್ಥ ಆಗಲಿಲ್ಲಾ. ನಾ
“ಸರ್, ನಿಮಗ ಪೈ ಅಂದರ ಗೊತ್ತೇನ್ರಿ ಅಂತ” ಸೋಸಿಯಾಲಜಿ ಪ್ರಿನ್ಸಿಪಾಲರಿಗೆ ಧೈರ್ಯಾ ಮಾಡಿ ಕೇಳಿದೆ.
“ಏ, ‘ಪೈ’ ಯಿಲ್ಲಾ ‘ಕೈ’ ಯಿಲ್ಲಾ, ಹಿಂಗೇಲ್ಲಾ ಮಾಡಲಿಕ್ಕೆ ಆಗಂಗಿಲ್ಲಾ. exams ಹತ್ತರವ ಹೋಗಿ ಅಭ್ಯಾಸ ಮಾಡ್ಕೋ” ಅಂತ ನಡಕ ಬಾಯಿ ಹಾಕಿ ಗೋದಿ ಸರ ಬೈದ ಬಿಟ್ಟರು. ಆದರು ನಾ ಏನೋ ಹೇಳಲಿಕ್ಕೆ ಹೊಂಟಿದ್ದೆ ಅಷ್ಟಕ್ಕ ಬಾಯಿ ಮುಚಗೊಂಡ ಬಿಟ್ಟೆ. ಪಾಪ ಪ್ರಿನ್ಸಿಪಾಲರಿಗೆ ಏನ ಅನಸ್ತೋ ಏನೋ ನನ್ನ ಮಾರಿ ನೋಡಿ
“o.k. cool, ಪೈ ಅಂದರ ಏನ ಹೇಳ, come on, what is this ‘pi’ explain me” ಅಂದರು.
ನಂಗ ಸ್ವಲ್ಪ ಧ್ಯರ್ಯ ಬಂತ
“ಸರ್. ಪೈ ಅನ್ನೋದ ಮ್ಯಾಥೆಮ್ಯಾಟಿಕಲ್ ಕಾನ್ಸ್ಟಂಟ್ ( mathematical constant ) it is the ratio of circle circumference to its diameter, and its approximate value is 3.141592653589793238462643383279502……..”
“ಏ, ಸಾಕ..ಸಾಕ…ಸಾಕ….” ಅಂತ ಎಲ್ಲಾ ಮಾಸ್ತರು ಕೂಡೆ ಒದರಲಿಕತ್ತರು.
ಒಂದ ಎರಡ ನಿಮಿಷ ಎಲ್ಲಾ ಮಾಸ್ತರು ಸುಮ್ಮನಾದರು ಕಡಿಕೆ ಬಳ್ಳೊಳ್ಳಿ ಸರ್
“ಅಲ್ಲೋ ತಮ್ಮಾ ನೀ ಮೊದ್ಲ ಈ ಪೈ ಅಂದರ ಮ್ಯಾಥೆಮ್ಯಾಟಿಕಲ್ ಕಾನ್ಸ್ಟಂಟ ಅದರ ಅಪ್ರಾಕ್ಸಿಮೇಟ್ ವ್ಯಾಲ್ಯೂ ನ ಇಷ್ಟ ದೊಡ್ಡದು ಅಂತ ಹೇಳ ಬಾರದೇನ. ನಾವೇಲ್ಲಾ ನೀ ಪೈ ಡೇ ಅಂದ ಕೂಡಲೇ ಆ ಗಣಿತ ಮಾಸ್ತರ ಅದಾರಲ ಪೈ ಸರ್ ಅವರದ ಡೇ ಮಾಡಾಕ ಹೊಂಟಿ ಅಂತ ತಿಳ್ಕೊಂಡಿದ್ವಿ” ಅಂದರು.
ಏನ್ಮಾಡ್ತೀರಿ? ನಾ ಪೈ ಡೇ ಮಾಡಲಿಕ್ಕೆ ಹೊಂಟಿದ್ದ ಸೈನ್ಸ್ ಪೈ ದ್ದ ಇವರ ತಿಳ್ಕೊಂಡಿದ್ದ ಪೈ ಸರದ. ಪಾಪ, ಹಿಂಗಾಗೆ ಎಲ್ಲಾ ಮಾಸ್ತರ ಮಂದಿಗೆ ಸಿಟ್ಟ ಬಂದದ್ದ, ಹಂಗ ಒಬ್ಬ ಸರದ ಡೇ ಮಾಡಿ ಇನ್ನೊಬ್ಬ ಸರದ ಡೇ ಬಿಡಲಿಕ್ಕೆ ಹೆಂಗ ಬರತದ. ಒಟ್ಟ ಇವರ confusion ಒಳಗ ನನ್ನ ಎಲ್ಲಾ ಸರ ಕೂಡಿ pie ಮಾಡಲಿಕ್ಕೆ ಹೊಂಟಿದ್ದರು.
ಅಷ್ಟರಾಗ ನಮ್ಮ ಪ್ರಿನ್ಸಿಪಾಲರು ಸ್ವಲ್ಪ ಧೈರ್ಯ ತೊಗೊಂಡ ಗಡಸ ದನಿ ಮಾಡ್ಕೊಂಡ
” ಏ, ಯಾಕ ಆಗವಲ್ತಾಕ this is very innovative idea. ನೀ ಪೈ ಡೇ ಮಾಡ. ಅನ್ನಂಗ ಗೆಸ್ಟ್ ಯಾರಿಗೆ ಕರಸ್ತಿ?” ಅಂದರು.
ನಾ ಖರೇ ಅಂದರ ಪೈ ಸರಗೆ ಗೆಸ್ಟ್ ಮಾಡಬೇಕು ಅವರ ಹೆಂಗಿದ್ದರು ಈ ವರ್ಷನ ರಿಟೈರ್ಡ ಆಗೋರಿದ್ದಾರ ಅಂತ ವಿಚಾರ ಮಾಡಿದ್ದೆ, ಆದರ ಬ್ಯಾಡ ಬಿಡ ಈಗ ಏನಿಲ್ಲದ ಅವರ ಹೆಸರ ತೊಗೊಂಡಿದ್ದ ಇಷ್ಟ ದೊಡ್ಡ ಇಶ್ಯು ಅಗೇದ ಮತ್ತ ಇನ್ನ ‘ಪೈ’ ಡೇ ಕ್ಕ ಪೈ ಸರನ ಗೆಸ್ಟ ಮಾಡಿ controversy ಮಾಡ್ಕೋಳೊದ ಬ್ಯಾಡಾ ಅಂತ
“karnataka university, maths department ಒಳಗ ಒಬ್ಬರ ಲೋಗೆ (loge)ಅಂತ ಸರ್ ಇದ್ದಾರ ಅವರನ ಕರಸ್ತೇನಿ” ಅಂದೆ. ‘ಲೋಗೆ, ಇದು ಸರ ಹೆಸರ ಮತ್ತ ನೀವೇಲ್ಲರ log to the base e ಅಂತ ತಿಳ್ಕೊಂಡಿರಿ’ ಅಂತ clarify ಬ್ಯಾರೆ ಮಾಡಿ ಹೇಳಿದೆ.
ಎಲ್ಲಾರೂ ಖುಷಿಲೇ ಯಾಕ ಆಗವಲ್ತಾಕ ಅಂದರು. ಮುಂದ march 14, 1994 official pi day ದಿವಸ ಹಾಲ್ ನಂ ೪ ರಾಗ ನಾ ‘ಪೈ’ ಡೇ ಮಾಡೆ ಕೈ ಬಿಟ್ಟೆ. ಲೋಗೆ ಸರ್ ‘ಪೈ’ ಬಗ್ಗೆ ಗೆಸ್ಟ ಲೆಕ್ಚರ್ ಕೊಟ್ಟರು. ನಮ್ಮ ಪೈ ಸರ ‘ಪೈ’ ಬಗ್ಗೆ ಪ್ರಾಸ್ತಾವಿಕ ಹೇಳಿದರು. ಉಳ್ಳಾಗಡ್ಡಿ ಸರ್ ಸ್ವಾಗತ ಮಾಡಿದರು. ಲಿಂಬಿಕಾಯಿ ಸರ್ ವಂದಾನರ್ಪಣೆ ಮಾಡಿದರು. ಮುಂದ ಉಳದವರೇಲ್ಲಾ ಚಹಾ ಕುಡಿಬೇಕಾರ ಹಳೇದ ಸ್ಟಾಫ್ ಮೀಟಿಂಗನಾಗ ನಡದಿದ್ದನ್ನ ನೆನಸಿಗೊಂಡ ನೆನಸಿಗೊಂಡ ನಕ್ಕಿದ್ದ ನಕ್ಕಿದ್ದ.
ಅಷ್ಟರಾಗ ನಮ್ಮ ಬಳ್ಳೊಳ್ಳಿ ಸರ್ ನಂಗ ಸೈಡಿಗೆ ಕರದ
“ಅಲ್ಲಾ, ಆಡೂರ ಈ ಪೈ ದ approximate valueನ ಇಷ್ಟ ಆದರ ಇದರ real value ಎಷ್ಟ?” ಅಂತ ಕೇಳಿದರು. ನಾ ಮತ್ತ ಅವರಿಗೆ
“the value of pi is 3.14159265358979323846264338327950288419716939937510
582097494459230781640628620899862803482534…..”
” ಏ, ಸಾಕ..ಸಾಕ….” ಅಂತ ಅವರು ತಲಿ ಆಡಿಸಿಗೋತ ಮನಿ ಹಾದಿ ಹಿಡದರು. ನಾ ನಮ್ಮ ಮನಿ ಹಾದಿ ಹಿಡದೆ.
ಆ ಮಾತಿಗೆ ಇವತ್ತ ೨೦ ವರ್ಷ್ದ ಮ್ಯಾಲೆ ಆತು. ‘ಪೈ’ ದ ನೆನಪಾತು, ನಿಮ್ಮ ಜೊತಿ ಹಂಚಗೊಬೇಕ ಅನಸ್ತು ಹಂಚಗೊಂಡೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ