ಅವತ್ತ ಮುಂಜ ಮುಂಜಾನೆ ಗಡಿಬಿಡಿಲೆ ಸ್ನಾನ ಮಾಡಿ ರೆಡಿ ಆಗೋ ಹೊತ್ತಿನಾಗ ನಮ್ಮ ಮೌಶಿ ಮಗಾ ವಿನಾಯಕ ಧಾರವಾಡದಿಂದ ಫೋನ ಮಾಡಿದಾ. ಹಂಗ ನಾ ಬ್ಯಾರೆ ಯಾರದರ ಫೋನ ಇದ್ದರ ಮುಂಜಾನಿ ಹೊತ್ತನಾಗ ಎತ್ತೊವನ ಅಲ್ಲಾ ಆದರ ಈ ಮನಷ್ಯಾ ನಾವ ಫೋನ ಮಾಡಿದಾಗ ಎತ್ತೋಂವ ಅಲ್ಲಾ ಹಂತಾವ ತಾನಾಗೆ ಯಾಕೊ ಫೋನ ಮಾಡ್ಯಾನ ಅಂದರ ಅರ್ಜೆಂಟ ಇರಬೇಕ ಅಂತ ಮನಸ್ಸಿನಾಗಿನ ರಾಮರಕ್ಷಾ ಸ್ತೋತ್ರಕ್ಕ ಒಂದ ಕಮರ್ಶಿಯಲ್ ಬ್ರೆಕ್ ಕೊಟ್ಟ ಫೋನ ಎತ್ತಿದೆ. ನಾ ಎತ್ತೊ ಪುರಸತ್ತ ಇಲ್ಲದ
“ಪೇಪರ ನೋಡಿದೇನಪಾ?” ಅಂತ ಕೇಳಿದಾ. ಅಂವಾ ಪಾಲಿಟಿಕಲ್ ಮನಷ್ಯಾ ಇನ್ನ ಪೇಪರ ನೋಡಿ ಏನ ಅಂತ ಕೇಳಲಿಕತ್ತಾನ ಅಂದರ ನಮ್ಮ ಪಾರ್ಟಿ ಬಗ್ಗೆ ಮತ್ತೇನರ ನೆಗಿಟಿವ್ ಸುದ್ದಿ ಬರದಿರಬೇಕ ಬಿಡ ಅಂತ
“ಯಾಕ ಏನಾತ ಹೇಳ” ಅಂದೆ.
“ಏ ಮೂರನೇ ಪುಟ ನೋಡ, ನಿಮ್ಮ ಶಿವಪ್ಪಜ್ಜಾ ನಿನ್ನೆ ಸಂಜಿ ಮುಂದ ಸತ್ತನಂತ, ನಾ ಯಾರಿಗೂ ಮನ್ಯಾಗ ಹೇಳಲಿಕ್ಕೆ ಹೋಗಿಲ್ಲಾ, ನೀನು ನಿಮ್ಮವ್ವಗ ನಿಮ್ಮಜ್ಜಿಗೆ ಹೇಳಬ್ಯಾಡ..ಪಾಪ ಅವರದ ಅವರಿಗೆ ರಗಡ ಆಗಿರ್ತದ ಮೊದ್ಲ ವಯಸ್ಸಾದವರು ಅವರಿಗ್ಯಾರಿಗೂ ಹೇಳೋದ ಬ್ಯಾಡ. ಅದಕ್ಕ ನೀ ಎಲ್ಲೇರ ಪೇಪರ ನೋಡಿ ಮನ್ಯಾಗ ಹೇಳಿ-ಗಿಳಿ ಅಂತ ಮೊದ್ಲ ನಿನಗ ಹೇಳಿದೆ” ಅಂತ ಹೇಳಿ ಫೋನ ಇಟ್ಟಾ.
ಅಲಾ ಇವನ, ಇವಂಗೇನ ಕಾಳಜಿ ಬಂತಪಾ ಒಮ್ಮಿಂದೊಮ್ಮಿಲೆ ನಮ್ಮ ಮನಿ ಮಂದಿ ಆರೋಗ್ಯದ್ದ, ಏನ ಅಗದಿ ನನ್ನಕಿಂತ ಜಾಸ್ತಿ ಇವಂಗ ನಮ್ಮವ್ವಂದು, ನಮ್ಮಜ್ಜಿದು ಆರೋಗ್ಯದ ಚಿಂತಿ ಹತ್ತೇದಲಾ ಅನಸ್ತು. ಅಲ್ಲಾ ಹಂಗ ಅಂವಾ ಹೇಳಿದ್ದ ಖರೇನ, ನಮ್ಮಜ್ಜಿಗೆ ಈಗಾಗಲೇ ಸಹಸ್ರ ಚಂದ್ರ ದರ್ಶನ ಆಗಿ ಇವತ್ತ ನಾಳೆ ಅನ್ನೊ ಹಂಗ ಆಗೇದ ಇನ್ನ ಹಂತಾದರಾಗ ಅಕಿಗೆ ಅಕಿ ಮೈದನಾ ಶಿವಪ್ಪ ಸತ್ತಿದ್ದ ಸುದ್ದಿ ಗೊತ್ತಾದರ ’ನನ್ನಕಿಂತ ಮೊದ್ಲ ಹೋದೆಲೋ ಶಿವಪ್ಪಾ’ ಅಂತ ಎದಿ ಒಡ್ಕೊಂಡ ಎಲ್ಲರ ತಂದು ತಯಾರಿ ಮಾಡಿ ಬಿಟ್ಟರ ಏನ ಮಾಡೋದ. ಇನ್ನ ನಮ್ಮವ್ವ ಹಂಗ ಕೈಕಾಲಲೇ ಗಟ್ಟಿ ಇದ್ದರು ಮಡಿ ಮೈಲಗಿ ಹೆಣ್ಣಮಗಳು, ಅದರಾಗ ಅಕಿಗೆ ಶಿವಪ್ಪಾ ಕಾಕಾ ಆಗಬೇಕು, ಮೂರ ದಿವಸದ ಮೈಲಗಿ, ಅಕಿ ಸುದ್ದಿ ಕೇಳಿದ ಕೂಡ್ಲೇನ ಅಲ್ಲೇ ಸ್ಟ್ಯಾಚು ಆಗಿ ನಿಂತ ಅಲ್ಲಿಂದ ಇಡಿ ಮಂದಿಗೆ ’ಅಲ್ಲೆ ಮುಟ್ಟ ಬ್ಯಾಡರಿ, ನೀರ ಹಾಕೋರಿ, ದೇವರಿಗೆ ದೀಪ ಹಚ್ಚಬ್ಯಾಡರಿ’ಹಂಗ-ಹಿಂಗ ಅಂತ ಆಟಾ ಆಡಸೋಕಿ. ಅದರಾಗ ಹುಡಗರದ ಪರೀಕ್ಷಾ ಬ್ಯಾರೆ ನಡದಾವ ಮತ್ತೇಲ್ಲರ ಇಕಿ ಮೂರ ದಿವಸ ಚಾಪಿ ಹಿಡದ ಕೂತ್ಲ ಅಂದರ ನನ್ನ ಹೆಂಡತಿಗೆ ವಜ್ಜ ಆಗ್ತದ ತಡಿ ಅಂತ ನಾ ನಮ್ಮವ್ವಗು ಸುದ್ದಿ ಮುಟ್ಟಸಲಿಲ್ಲಾ.
ನಾ ಫೋನ ಮುಗದ ಮ್ಯಾಲೆ ನನ್ನ ರಾಮರಕ್ಷಾ ಸ್ತೋತ್ರಾ ಕಂಟಿನ್ಯೂ ಮಾಡಿ ಆಫೀಸಗೆ ರೈಟ ಹೇಳಿದೆ. ಹೋಗಬೇಕಾರ ಸೂಕ್ಷ್ಮ ನಮ್ಮಪ್ಪಗ ಹೇಳಿ ಹೋಗಿದ್ದೆ. ಇಲ್ಲಾಂದರ ಆಮ್ಯಾಲೆ ಎಲ್ಲರ ನಮ್ಮಪ್ಪ ಪೇಪರ ಓದಿ ನಮ್ಮವ್ವಗ “ಏ, ನಿಮ್ಮ ಶಿವಪ್ಪ ಹೋದನಂತ ನೋಡ’ ಅಂತ ಹೇಳಿದರ ಏನ್ಮಾಡೋದು. ಇನ್ನ ನನ್ನ ಹೆಂಡತಿ, ನಮ್ಮವ್ವ ಅಂತೂ ಪೇಪರ ಓದೊದ ಕಡಮಿ, ಅದರಾಗ ಅವರ ನಿಧನ ವಾರ್ತೆ ಓದೊದ ಫ್ರಂಟ ಪೇಜನಾಗ ಯಾರರ ಸತ್ತರ ಇಷ್ಟ.
ಹಂಗ ಈ ಶಿವಪ್ಪಗ ನಮಗ ಭಾಳ ಕಂಟ್ಯಾಕ್ಟ ಇರಲಿಲ್ಲಾ, ನಮ್ಮ ಜೊತಿ ಇಷ್ಟ ಅಲ್ಲಾ, ಅವಂದು ಯಾ ಬಂಧು ಬಳಗದವರ ಜೊತಿನು ಸಂಪರ್ಕ ಅಷ್ಟ ಇರಲಿಲ್ಲಾ. ಆದರೂ ನಮ್ಮ ಅಜ್ಜಿಗೆ ಹತ್ತ ದಿವಸದಂವಾ, ನಮ್ಮವ್ವಗ ಮೂರ ದಿವಸದಂವಾ, ನನಗ ನಮ್ಮಪ್ಪಗ ಒಂದ ಬಕೀಟ ನೀರಿನಂವಾ, ನನ್ನ ಹೆಂಡತಿ-ಮಕ್ಕಳಿಗೆ ಬರೇ ಕಾಲತೊಳ್ಕೋಳಿಕ್ಕೆ ಒಂದ ತಂಬಿಗಿ ನೀರಿನಂವಾ.
ಅದರಾಗ ನಮ್ಮ ಅವ್ವಾ-ಅಪ್ಪನ್ನ ಮದುವಿ ಮಾಡಿಸಿದವರ ಪೈಕಿ ಇವನು ಒಬ್ಬಂವ ಅಂತ ನಮ್ಮವ್ವಾ-ಅಪ್ಪಾ ಹಗಲಗಲಾ ನೆನಸಿತಿದ್ದರು, ಹಂಗ ನಮ್ಮವ್ವ ಮರತರು ನಮ್ಮಪ್ಪಂತೂ ವಾರಕ್ಕ ಮೂರ ಸರತೆ ಇವತ್ತಿಗೂ ಸಹಿತ ’ಶಿವಪ್ಪಾ, ನನಗ ಛಲೋ ಗಂಟ ಹಾಕ್ಯಾನ ತೊಗೊ’ಅಂತ ನೆನಸ್ತಾನ. ಹಂಗ ವಯಸ್ಸಿನಾಗ ನಮ್ಮಪ್ಪ ಶಿವಪ್ಪನಕಿಂತ ಆರ ತಿಂಗಳಕ್ಕ ದೊಡ್ಡಂವನ ಆದರು ಶಿವಪ್ಪಾ ’ಏ ನಾ ನಿನಗ ಮಾವ ಆಗಬೇಕು, ನಾನ ನಿಂತ ನಿನ್ನ ಮದವಿ ಮಾಡಿದ್ದ’ ಅಂತ ಭಾಳ ಹೆಮ್ಮೆಯಿಂದ ಹೇಳ್ಕೊತಿದ್ದಾ. ಅಂವಾ ಹಂಗ ಅಂದಾಗ ಒಮ್ಮೆ ನಮ್ಮಪ್ಪ ’ನಿಮ್ಮ ಮಗಳಿಗೆ ವರಾ ಸಿಕ್ಕಿದ್ದಿಲ್ಲಾ ಅಂತ ನನ್ನ ಹಿಡದ ಕೊಳ್ಳಿಗೆ ಗಂಟ ಹಾಕಿರಿ ತೊಗೊ’ ಅಂತಿದ್ದಾ.
ಹಂಗ ಶಿವಪ್ಪ ಸತ್ತಿದ್ದಂತು ಹಿಂದಿನ ದಿವಸ ಸಂಜಿ ಮುಂದ, ಈಗ ನಂಗ ಸುದ್ದಿ ಗೊತ್ತಾಗೇದ ಅಂದ ಮ್ಯಾಲೆ ನಾನರ ಹೋದರಾತು ಅಂತ ಆಫೀಸಿಗೆ ಬಂದ ’ಎಲ್ಲಾ ಮಾಡಿ ಮುಗಿಸ್ಯಾರೊ ಇಲ್ಲಾ ಇವತ್ತ ಬೆಳಿಗ್ಗೆ ಮಾಡ್ತಾರೊ’ ಅಂತ ಅವರ ಗೋತ್ರದವರಿಗೆ ಕೇಳಿದೆ. ಇಲ್ಲಾ ಅಂವಾ ತನ್ನ ದೇಹಾ ದಾನ ಮಾಡ್ರಿ ಅಂತ ಬರದಕೊಟ್ಟಿದ್ದಾ, ಇವತ್ತ ಬೆಳಿಗ್ಗೆ ಎಂಟ ಗಂಟೆಕ್ಕ ಎಸ್.ಡಿ.ಎಮ್ ನವರ ಬಂದ ಬಾಡಿ ತೊಗೊಂಡ ಹೋಗ್ಯಾರ ಅಂದರು. ಆತ ತೊಗೊ ಹಂಗರ ಹೋಗಿ ಒಂದ ಮಾಲಿ ಹಾಕಿ ನಮಸ್ಕಾರ ಮಾಡೊದ ಸಹಿತ ಉಳಿತ ಅಂತ ಅಲ್ಲೆ ಎರಡ ನಿಮಿಷ ಮೊಬೈಲ ಬಂದ ಮಾಡಿ ಮೌನ ಆಚರಿಸಿ ನಾ ನನ್ನ ಆಫೀಸ ಕೆಲಸಾ ಕಂಟಿನ್ಯೂ ಮಾಡಿದೆ.
ಇತ್ತಲಾಗ ಮನ್ಯಾಗ ನಮ್ಮವ್ವನ್ವು ಯಥಾ ಪ್ರಕಾರ ಪೂಜಾ ಕಾರ್ಯಕ್ರಮ, ದೇವರು-ದಿಂಡ್ರು ಕಂಟಿನ್ಯು ನಡದಿದ್ವು ನಾ ಅದರ ಬಗ್ಗೆ ಏನ ತಲಿಕೆಡಸಿಗೊಳ್ಳಿಕ್ಕೆ ಹೋಗಲಿಲ್ಲಾ. ಅದ ಹೊತ್ತಿನಾಗ ಇನ್ನೊಂದ ಮಜಾ ಅಂದರ ನಮ್ಮ ಓಣಿ ಚಿದಂಬರೇಶ್ವರ ಗುಡಿ ಒಳಗ ಅವತ್ತ ಸಂಜಿಗೆ ದೊಡ್ಡ ಸ್ವಾಮಗೊಳ ಬರೋರಿದ್ದರು. ಸಂಜಿ ಮುಂದ ಅವರದ ಶೋಭಾ ಯಾತ್ರಾ, ಮರದಿವಸ ಅವರದ ಪಾದ ಪೂಜಾ, ಸಾರ್ವಜನಿಕ ಪ್ರವಚನಾ ಎಲ್ಲಾ ಹಮ್ಮಿಕೊಂಡಿದ್ದರು.
ಇನ್ನ ನಮ್ಮವ್ವ ನಮ್ಮ ಮನಿಗೆ ಇಷ್ಟ ಹಿರೇಮನಷ್ಯಾಳ ಅಲ್ಲಾ, ಇಡಿ ಓಣಿಗೆ ಹಿರೇಮನಷ್ಯಾಳ ಅದರಾಗ ಬ್ರಾಹ್ಮರೊಕಿ ಬ್ಯಾರೆ, ಮ್ಯಾಲೆ ಸ್ಮಾರ್ತರೋಕಿ, ಹಂಗ ನಮ್ಮ ಓಣ್ಯಾಗ ಒಂದ ಸ್ವಲ್ಪ ವೈಷ್ಣವರದ ಹಾವಳಿ ಜಾಸ್ತಿ ಇದ್ದದ್ದಕ್ಕ ಚಿದಂಬರೇಶ್ವರ ಗುಡಿಯವರು ಹಿಂತಾ ಹಿರೇಮನಷ್ಯಾಳ ಅದು ಸ್ಮಾರ್ತರೋಕಿ ಓಣ್ಯಾಗ ಇದ್ದಾಳಲಾ ಅಂತ ನಮ್ಮವ್ವಗ ಸ್ವಾಮಿಗೋಳ ಪಾದ ಪೂಜಾಕ್ಕ ಹೇಳಿದ್ದರು. ನಮ್ಮವ್ವನ್ನು ಅಂತು ಹಿಡದೋರ ಇದ್ದಿದ್ದಿಲ್ಲಾ, ಹಂಗ ಅಕಿದ ಏನರ ಫೇಸಬುಕ್ಕಿನಾಗ ಅಕೌಂಟ ಇದ್ದರ ಗ್ಯಾರಂಟಿ ಸ್ಟೇಟಸ್ ಮೆಸೆಜ ಹಾಕಿ ಆ ಸ್ವಾಮಿಗೊಳಿಗೆ ಟ್ಯಾಗ ಮಾಡಿ ಬಿಡತಿದ್ಲು.
ಅವತ್ತ ಶೋಭಾ ಯಾತ್ರೆ ಸಂಜಿ ಆರಕ್ಕ ಇದ್ದರ ಇಕಿದ ಸಡಗರ ನಾಲ್ಕ ಗಂಟೆಯಿಂದ ಶುರು ಆಗಿತ್ತ, ಹತ್ತ ಮನಿಗೆ ಹೋಗಿ ಮಟಾ-ಮಟಾ ಮಧ್ಯಾಹ್ನ ಬಾಗಲಾ ಬಡದ ಸಂಜಿಗೆ ಮನಿ ಮುಂದ ಥಳಿ ಹೊಡದ ರಂಗೋಲಿ ಹಾಕರಿ ಅಂತ ಹೇಳಿ, ಕಡಿಕೆ ಯಾರ ಛಂದ ರಂಗೋಲಿ ಹಾಕಲಿಲ್ಲಾ ಅವರ ಮನಿ ಮುಂದ ತಾನ ರಂಗೋಲಿ ಹಾಕಿ ಬಂದಳು. ತನಗರ ಕೂತರ ಏಳಲಿಕ್ಕೆ ಬರಂಗಿಲ್ಲಾ, ಎದ್ದರ ಕೂಡಲಿಕ್ಕೆ ಬರಂಗಿಲ್ಲಾ ಹಂತಾದರಾಗ ಸ್ವಾಮಿಗೊಳ ಶೋಭಾ ಯಾತ್ರೆ ಖುಷಿ ಒಳಗ ಓಣಿ ತುಂಬ ಓಡಾಡಿದ್ದ ಓಡಾಡಿದ್ದ.ಸಂಜಿ ಮುಂದ ಕೈಯಾಗ ಆರತಿ ಹಿಡಕೊಂಡ ಸ್ವಾಮಿಗೊಳಿಗೆ ಆರತಿ ಎತ್ತಿ ಶೋಭಾ ಯಾತ್ರೆ ಒಳಗ ಮೊದ್ಲನೇ ಲೈನ ಒಳಗ ನಿಂತ ದೀಡ ಕಿಲೊಮೀಟರ ಹೋಗಿ ಶೋಭಾ ಯಾತ್ರೆ ಮುಗಿಸಿಕೊಂಡ ಬಂದ್ಲು.
ಮರದಿವಸ ಮತ್ತ ಪಾದ ಪೂಜೆ, ಹೋಮ- ಹವನ, ಪುಜಿ-ಪುನಸ್ಕಾರ ಅಂತ ಇಡಿ ದಿವಸ ಕೇರ್ ಆಫ್ ಚಿದಂಬರೇಶ್ವರ ದೇವಸ್ಥಾನ. ಒಂದ ಮುಂಜಾನಿ ಚಹಾದಿಂದ ಹಿಡದ ರಾತ್ರಿ ಉಟದ ತನಕ ಎಲ್ಲಾ ಅಲ್ಲೇ. ಹಂಗ ಅಕಿ ಮನ್ಯಾಗ ನನ್ನ ಹೆಂಡತಿಗೆ ನೀ ಮೂರ ದಿವಸ ಗ್ಯಾಸ ಹಚ್ಚ ಬ್ಯಾಡ ಮುಂಜಾನಿ ಚಹಾದಿಂದ ಹಿಡದ ರಾತ್ರಿ ಊಟದ್ದ ತನಕ ಗುಡಿ ಓಳಗ ವ್ಯವಸ್ಥಾ, ಒಲ್ಲೆ ಅನಬಾರದು ಪ್ರಸಾದ, ಎಲ್ಲಾರೂ ಅಲ್ಲೇ ಬರ್ರಿ ಅಂತ ಗಂಟ ಬಿದ್ದಿದ್ಲು. ಆದರ ನನ್ನ ಹೆಂಡತಿ ನಮ್ಮಪ್ಪಗ, ಮಕ್ಕಳಿಗೆ ಬಗಿಹರೆಯಂಗಿಲ್ಲಾ ಅಂತ ಊಟಕ್ಕ ಏನ ಹೋಗಲಿಲ್ಲಾ. ಮರುದಿವಸದ ಇಕಿದ ಪಾದ ಪೂಜೆ ಕಾರ್ಯಕ್ರಮ ಮುಗದ ಸಂಜಿಮುಂದ ಸ್ವಾಮಿಗಳ ಪ್ರವಚನಕ್ಕ ನಮ್ಮವ್ವ ಕೂತಾಗ ಅಕಿ ಬಾಜು ನಮ್ಮ ವಿನಾಯಕ ಭಟ್ಟರ ಹೆಂಡತಿ ಕುಮ್ಮಿ ಮೌಶಿ ಬಂದ ಕೂತ ಸ್ವಾಮಿಗಳ ಪ್ರವಚನ ಜೊತಿ ತಂದು ಪ್ರವಚನ ಶುರುಮಾಡಿದ್ಲು. ಪಾಪ, ನಮ್ಮವ್ವಗರ ಭಕ್ತಿ ಇಂದ ಪ್ರವಚನ ಕೇಳೊದ ಇತ್ತ ಆದರ ನಮ್ಮ ಕುಮ್ಮಿ ಮೌಶಿ ತಂದ ಪುರಾಣ ಶುರು ಮಾಡಿ ಬಿಟ್ಟಿದ್ಲು. ನಮ್ಮವ್ವ ಆ ಕುಮ್ಮಿ ಮೌಶಿ ಕಕ್ಕಕ್ಕನ ಮಕ್ಕಳು ಹಿಂಗಾಗಿ ನನಗ ಮೌಶಿ ಆಗಬೇಕ.
ಒಮ್ಮಿಂದೊಮ್ಮಿಲೆ ಕುಮ್ಮಿ ಮೌಶಿ “ಸಿಂಧಕ್ಕ ಅನ್ನಂಗ ನಿನಗ ಸುದ್ದಿ ಗೊತ್ತ ಅದೋನ ಇಲ್ಲೊ” ಅಂತ ಕೇಳಿದ್ಲು. ನಮ್ಮವ್ವಗರ ಮೊದ್ಲ ಇಕಿ ಹರಟಿ ಹೊಡಿಯೋದ ಕೇಳಿ-ಕೇಳಿ ತಲಿಕೆಟ್ಟಿತ್ತ. “ಕುಮ್ಮಿ ಒಂದ ಸ್ವಲ್ಪ ಸುಮ್ಮನ ಕೂಡ, ನಂಗ ಶಾಂತರಿತೀಲೆ ಪ್ರವಚನ ಕೇಳಲಿಕ್ಕೆ ಬಿಡ” ಅಂತ ಅಕಿಗೆ ಜೋರ ಮಾಡಿ ಸುಮ್ಮನ ಕುಡಸಿದ್ಲು. ಆದರ ಅಕಿ ಬಿಡಬೇಕೆಲ್ಲೆ ಮತ್ತ “ಅಲ್ಲಾ, ಸಿಂಧಕ್ಕ ನಿಂಗ ಸುದ್ದಿ ಗೊತ್ತಿಲ್ಲೇನ” ಅಂತ ಮತ್ತ ಎರಡೆರಡ ಸರತೆ ಕೆದರಿ ಕೆದರಿ ಕೇಳಿದರು ನಮ್ಮವ್ವೇನ ಅಕಿ ಕಡೆ ಲಕ್ಷ ಕೊಡಲಿಲ್ಲಾ. ಅದರಾಗ ನಮ್ಮ ಮೌಶಿ ಊರ ಉಸಾಬರಿ ಮಾಡಿ ಇಡಿ ಜಗತ್ತಿನ ಸುದ್ದಿ ಎಲ್ಲಾ ತಿಳ್ಕೊಂಡೋಕಿ ಅಕಿ ಹಿಂಗ ಸುದ್ದಿ ಗೊತ್ತದ ಏನ ಅಂತ ಕೇಳಿದರ ನಮ್ಮವ್ವಗ ಯಾ ಸುದ್ದಿ ಅಂತ ಗೊತ್ತಾಗಬೇಕ.
ಕಡಿಕೆ ಪ್ರವಚನ ಮುಗಿಯೋದರಾಗ ನಮ್ಮ ಮೌಶಿ ಊಟಕ್ಕ ಗದ್ಲ ಆಗ್ತದ ಅಂತ ನಡಕ ಎದ್ದ ಹೋಗಿ ಊಟಕ್ಕ ಪಾಳೆ ಹಚ್ಚಿದ್ದಳು ಮುಂದ ನಮ್ಮವ್ವ ಊಟಕ್ಕ ತಾಟ ತೊಗೊಳಿಕ್ಕೆ ಹೋದಾಗ ಆಲ್ ರೆಡಿ ಊಟಾ ಹೊಡದ ನಿಂತಿದ್ದ ನಮ್ಮ ಮೌಶಿನ್ನ ಹಿಡದ
“ಏನ ಸುದ್ದಿವಾ, ನಮ್ಮವ್ವ…ಈಗ ಹೇಳ, ಅಲ್ಲೇ ಸ್ವಾಮಿಗೋಳ ಪ್ರವಚನ ಮಾಡಲಿಕತ್ತಾಗ ನೀನರ ವಟಾ- ವಟಾ ಹಚ್ಚಿ ಬಿಟ್ಟಿ, ಸ್ವಾಮಿಗೋಳ ನಮ್ಮನ್ನ ನೋಡಲಿಕತ್ತಿದ್ದರು. ಈನ ಏನ ಹೇಳೊದ ಅದ ಹೇಳ” ಅಂತ ಕೇಳಿದರ ಕುಮ್ಮಿ ಮೌಶಿ ಭಡಾ..ಭಡಾ ಒಂದ ಸರತೆ ಬಾಯಾಗಿನ ಎಲಿ ಅಡಿಕಿ ನುಂಗಿ ತೇಗಿ
“ಶಿವಪ್ಪ ಕಾಕಾ ಹೋದನಂತಲ್ವಾ” ಅಂತ ಯಾ ಪೀಠಿಕೆ ಇಲ್ಲದ ಡೈರೆಕ್ಟ ಹೇಳಿ ಬಿಟ್ಲು.
“ಅಯ್ಯ, ಯಾವಾಗ ನಮ್ಮವ್ವಾ, ನಂಗ ಗೊತ್ತ ಇಲ್ಲಲಾ” ಅಂತ ನಮ್ಮವ್ವ ಗಾಬರಿ ಆಗಿ ಕೇಳಿದ್ಲು.
“ಅಯ್ಯ, ಅದ ಹೆಂಗ ನಿಂಗ ಗೊತ್ತಿಲ್ಲ ಸಿಂಧಕ್ಕ. ಶಿವಪ್ಪ ಹೋಗಿ ಇವತ್ತಿಗೆ ಮೂರ ದಿವಸಾತು” ಅಂತ ಅಕಿ ಹೇಳಿ ಕಡಿಕೆ ಅವಂಗೇನಾಗಿತ್ತು, ಯಾಕಾಗಿತ್ತು, ಯಾವಾಗಿಂದ ಶುರುಆಗಿತ್ತು ದಿಂದ ಶುರು ಮಾಡಿ ಅವನ ದೇಹ ದಾನ ಕೊಟ್ಟಿದ್ದರತನಕಾ ಎಲ್ಲಾ ಪುರಾಣ ಹೇಳಿ ಕಳಸಿದ್ಲು.
ಪಾಪ ನಮ್ಮವ್ವ ಎರಡ ದಿವಸದಿಂದ ಸ್ವಾಮಿಗಳ ಪಾದ ಪೂಜಾ, ಭಜನಿ, ಕೀರ್ತನ ಅಂತ ಎಷ್ಟ ಖುಷಿಲೆ ಇದ್ಲು ಒಮ್ಮಿಂದೊಮ್ಮಿಲೆ ಈ ಸುದ್ದಿ ಕೇಳಿ ಡಲ್ ಆಗಿ ತಾಟಿನಾಗ ಜಸ್ಟ ಹಾಕಿಸಿಕೊಂಡಿದ್ದ ತವಿ ಅನ್ನ ಹಂಗ ಬಿಟ್ಟ ಬಿಟ್ಟಳು. ಅಲ್ಲಾ, ಶಿವಪ್ಪ ಎಷ್ಟ ಅಂದರು ಖಾಸ ಕಾಕಾ, ಅದರಾಗ ನಿಂತ ಅಕಿದ ಮದುವಿ ಮಾಡಿಸಿದೊಂವಾ ಹಂತಾವ ಹೋದಾ ಅಂದರ ಕೆಟ್ಟ ಅನಸಲಾರದ ಏನ. ಯಾರೋ ಸಂಬಂಧ ಇಲ್ಲದವರ ಸತ್ತರ ಹತ್ತ ಸಲ ಲೊಚಗುಟ್ಟೋಕಿ ಇನ್ನ ಖಾಸ ಕಾಕ ಸತ್ತರ ಹೆಂಗ ಅನಸಲಿಕ್ಕಿಲ್ಲಾ ನಮ್ಮವ್ವಗ?
ಕಡಿಕೆ ಕೆಟ್ಟ ಮಾರಿ ಮಾಡ್ಕೊಂಡ ಮನಿಗೆ ಬಂದ ಗೇಟ ತಗದ ಅಲ್ಲಿಂದನ ನನ್ನ ಹೆಂಡತಿಗೆ
“ಪ್ರೇರಣಾ, ಒಂದ ತಂಬಗಿ ನೀರ ಹಾಕ ಬಾರವಾ ಕಾಲಿಗೆ…ಹಂಗ ನಂಗ ಒಂದ ಬಕೀಟ್ ಬಿಸಿನರ ಬಿಟ್ಟ ಹಿತ್ತಲದಾಗ ಒಯ್ದ ಇಡು, ನಂಗೊಂದ ಚಾಪಿ ನಡಮನ್ಯಾಗ ಒಗಿ” ಅಂತ ಒದರಿದ್ಲು.
ಪಾಪ ನನ್ನ ಹೆಂಡತಿ ಗಾಬರಿ ಆಗಿ ಒಂದ ತಂಬಗಿ ನೀರ ಹಿಡಕೊಂಡ ಬಂದ
“ಯಾಕ್ರಿ ಅತ್ಯಾ ನಿಮ್ಮ ಪೈಕಿ ಯಾರ ಹೋದರು” ಅಂತ ಕೇಳಿ ಕಾಲಿಗೆ ಮೂರ ಮಾರ ದೂರದಿಂದ ನೀರ ಗುಜ್ಜಿದ್ಲು.
“ನಮ್ಮ ಶಿವಪ್ಪ ಕಾಕಾ ಹೋದನಂತ್ವಾ, ಇವತ್ತೀಗ ಮೂರ ದಿವಸಾತು, ಯಾರು ಹೇಳೇಲ ನೋಡ್ವಾ” ಅಂತ ಅಂದರ ನನ್ನ ಹೆಂಡತಿಗೆ ಶಿವಪ್ಪ ಯಾರ ಅನ್ನೋದ ನೆನಪ ಇದ್ದಿದ್ದಿಲ್ಲಾ, ಅಲ್ಲಾ ಅಕಿ ಏನ ಅವನ್ನ ನೋಡಿಲ್ಲ ಬಿಡ್ರಿ, ಬರೇ ಅವನ ಬಗ್ಗೆ ಕೇಳಿದ್ಲ ಇಷ್ಟ. ಅಲ್ಲಾ ಹಂಗ ಅದರಾಗ ಸತ್ತಿದ್ದ ನಮ್ಮವ್ವನ ಕಾಕಾ, ಅಕಿನರ ಯಾಕ ತಲಿ ಕೆಡಸಿಗೊತಾಳ ಭಡಾ ಭಡಾ ಬಿಸಿನೀರ ಬಿಡಲಿಕ್ಕೆ ಬಚ್ಚಲಕ್ಕ ಹೋದ್ಲು.
ಅಷ್ಟರಾಗ ನಮ್ಮಪ್ಪ ಒಳಗಿಂದ ಬಂದಾ
“ಏ, ನಿಮ್ಮ ಶಿವಪ್ಪ ಸತ್ತ ಮೂರ ದಿವಸಾತ ಅಂತಿ, ಇನ್ನೇನ ನೀ ಮೈಲಗಿ ಮಾಡತಿ, ಸುಮ್ಮನ ಒಳಗ ಬಾ” ಅಂತ ಒದರಿದಾ.
“ಅಯ್ಯ, ಅದ ಹೆಂಗರಿ, ಖಾಸ ನಮ್ಮ ಕಾಕಾ, ಮ್ಯಾಲೆ ಲಗ್ನಾ ಮಾಡಿಸಿದಂವಾ, ನನಗ ಮೂರದಿವಸ ಮೈಲಗಿ ಇರ್ತದ, ಇವತ್ತಿನ್ನು ಮೂರನೇ ದಿವಸ” ಅಂತ ನಮ್ಮವ್ವ ಅಂದದ್ದಕ್ಕ ನಮ್ಮಪ್ಪ
“ಲೇ, ಎರಡ ದಿವಸದಿಂದ ಚಿದಂಬರೇಶ್ವರ ಗುಡ್ಯಾಗ ಇದ್ದಿ, ಶೋಭಾ ಯಾತ್ರಿ, ಸ್ವಾಮಿಗಳ ಪಾದ ಪೂಜಾ, ದೇವರಿಗೆ ಆರತಿ, ಸ್ವಾಮಿಗೊಳಿಗೆ ಮಂಗಾಳಾರತಿ, ಉಡಿ ತುಂಬೋದು ಎಲ್ಲಾ ನೀನ ಮಾಡಿ. ಯಾಕ ಆವಾಗ ಮೈಲಗಿ ಇದ್ದಿದ್ದಿಲ್ಲೇನ? ನಿಂಗ ಈಗ ನಿಮ್ಮ ಕಾಕಾ ಸತ್ತಾ ಅಂತ ಗೊತ್ತಾದ ಮ್ಯಾಲೆ ಮೈಲಗಿ ಶುರು ಆತೇನ? ಭಾಳ ಶಾಣ್ಯಾಕಿ ಇದ್ದಿ, ಓಣ್ಯಾಗ ಯಾರ ಮುಂದು ಹೇಳಲಿಕ್ಕೆ ಹೋಗಬ್ಯಾಡ ನಿಮ್ಮ ಕಾಕಾ ಸತ್ತಾನಂತ. ಸುಮ್ಮನ ಒಳಗ ಬಂದ ಮಲ್ಕೊ ಬಾ” ಅಂತ ಜೋರ ಮಾಡಿದ ಮ್ಯಾಲೆ ಬಾಯಿ ಮುಚಗೊಂಡ ಒಳಗ ಬಂದ್ಲು.
ಪಾಪ ನಮ್ಮವ್ವ ಏನಿಲ್ಲದ ಮಡಿ-ಮೈಲಗಿ ಹೆಣ್ಣಮಗಳು ಹಂತಾದ ಅಕಿ ತನಗ ಮೈಲಗಿ ಇದ್ದಾಗ ಸ್ವಾಮಿಗಳ ಪಾದ ಪೂಜಾ, ಅಭಿಷೇಕ ಎಲ್ಲಾ ಮಾಡ್ಕೊಂಡ ಬಂದಿದ್ಲು. ಈಗ ಖರೇ ಹೇಳ್ಬೇಕಂದರ ಅಕಿಗೆ ತನ್ನ ಕಾಕಾ ಸತ್ತಿದ್ದರಕಿಂತಾ ಹಿಂಗ ಮೈಲಾಗ್ಯಾಗ ಸ್ವಾಮಿಗಳ ಪಾದ ಪೂಜಾ ಮಾಡಿದ್ನೇಲ್ಲಾ ಅಂತ ಭಾಳ ಕೆಟ್ಟ ಅನಿಸಿಕೊಂಡ ಬಿಟ್ಟಾಳ.
ಅಕಿಗೆ ಗೊತ್ತಾಗಲಾರದ ಇನ್ನೊಂದ ವಿಷಯ ಅಂದರ ಶಿವಪ್ಪ ಸತ್ತಿದ್ದ ನಮಗೇಲ್ಲಾ ಗೊತ್ತಿತ್ತ ಆದರ ಅದನ್ನ ನಾವ ಅಕಿಗೆ ಹೇಳಿಲ್ಲಾ ಅನ್ನೋದ.
ಹೋಗಲಿ ಬಿಡ್ರಿ ಈಗ ಅಕಿಗೆ ಅದನ್ನ ಹೇಳಿ ನಾವ್ಯಾಕ ಬಯಸಿಗೊಳೊದು.
ಅಲ್ಲಾ ಹೆಂಗೂ ಇಗಾಗಲೇ ’ಶಿವ್ವಪ್ಪ ಹೋಗಿ ಮೂರ ದಿವಸದ ಮ್ಯಾಲೆ ಆಗೇದ’ಇನ್ನರ ಹೇಳಿ ಏನ್ಮಾಡೊದ.