ಇದ ಒಂದ ಹತ್ತ-ಹನ್ನೆರಡ ದಿವಸದ ಹಿಂದಿನ ಮಾತ ಇರಬೇಕು. ಒಬ್ಬರು ಅರವತ್ತ- ಅರವತ್ತೈದ ವರ್ಷದ ಆಸ ಪಾಸ ಇರೋರು, ಇನ್ನೊಬ್ಬಂವ ನನ್ನ ವಾರ್ಗಿ ಹುಡಗಾ ಓಣ್ಯಾಗ ನಮ್ಮ ಮನಿ ಎಲ್ಲೆದ ಅಂತ ಆಜು-ಬಾಜುದವರಿಗೆ ಕೇಳ್ಕೊಂಡ ಮುಂಜ – ಮುಂಜಾನೆ ಕಾರ ತೊಗೊಂಡ ನಮ್ಮ ಮನಿಗೆ ಬಂದ್ರು. ಅವರ ಬಂದಾಗ ನಾ ಸ್ನಾನಕ್ಕ ಹೋಗಿದ್ದೆ, ನಮ್ಮಪ್ಪ ಅವರನ ಒಳಗ ಕರದರ ಅವರು
“ಇಲ್ಲಾ, ನಾವ ಒಳಗ ಬರೋ ಹಂಗ ಇಲ್ಲಾ, ನಮಗ ಮೈಲಗಿ ಅದ, ನಿಮ್ಮ ಮಗನ್ನ ಹೊರಗ ಕರಿರಿ” ಅಂದರಂತ. ನಮ್ಮಪ್ಪಾ, ಪಾಪ ಗಾಬರಿ ಆಗಿ ನನ್ನ ಬಚ್ಚಲ ಬಾಗಲಕ್ಕ ಬಂದ
“ಏ, ಯಾರೊ ಬಂದಾರೊ, ಅವರ ಪೈಕಿ ಯಾರೊ ಸತ್ತಿರಬೇಕು ಅವರಿಗೆ ಮೈಲಗಿ ಅದ ಅಂತ, ನೀ ಭಡಕ್ಕನ ಹೊರಗ ಬಾ, ಹಂಗ ಮತ್ತ ನೀ ಅವರ ಜೊತಿ ಹೋದರ ಬಂದ ಮತ್ತ ಬಂದ ಸ್ನಾನ ಮಾಡೋದ ಅದನ ಅದ, ಈಗ ಅಷ್ಟಕ್ಕ ಮುಗಿಸಿ ಬಾ” ಅಂತ ಅಂದಾ. ಹಂಗ ಅಂವಾ ಹೇಳಿದ್ದು ಖರೇನ, ಮುಂಜ-ಮುಂಜಾನೆ ಯಾರ ಬಂದಾರೋ ಏನೋ, ಯಾರ ಹೋಗ್ಯಾರೊ ಏನೊ, ಒಂದ ಹತ್ತ ನಿಮಿಷ ಮೊದ್ಲನರ ಬಂದಿದ್ದರ ಸ್ನಾನ ಮಾಡೋದರ ತಪ್ಪತಿತ್ತ ಮೊದ್ಲ ಐದ ದಿವಸಕ್ಕೊಮ್ಮೆ ನೀರ ಬರತದ, ಸುಳ್ಳ ನೀರ ವೇಸ್ಟ ಆತ ಅಂತ ನಾ ಸ್ನಾನ ಅಷ್ಟಕ್ಕ ಮುಗಿಸಿದವನ ಟಾವೇಲ್ ಸುತಗೊಂಡ ಸೀದಾ ವರಾಂಡಕ್ಕ ಹೋದೆ.
ಅಲ್ಲೆ ಬಂದೊರ ಯಾರು ನನ್ನ ಪರಿಚಯದವರ ಇದ್ದಿದ್ದಿಲ್ಲಾ. ನಾ,
“ನಾನ ಪ್ರಶಾಂತ ಆಡೂರ, ಯಾರ ಹೋದರು” ಅಂದೆ. ನನ್ನ ವಾರ್ಗಿ ಹುಡಗ
“ಹೆಲೊ, ನಾ ಸುಧಿಂದ್ರ, ಸುಧಿಂದ್ರ ಜೋಶಿ ಅಂತ infosysನಾಗ ಕೆಲಸ ಮಾಡ್ತೇನಿ, I follow your articles in facebook, ನಿಮ್ಮ ಕಡೆ ಒಂದ ಹೆಲ್ಪ ಆಗಬೇಕಿತ್ತ ಅದಕ್ಕ ಬಂದೆ” ಅಂತ ದೂರಿಂದ ಮುಟ್ಟಲಾರದ ಹ್ಯಾಂಡ ಶೇಕ ಮಾಡಿ ಅಂದಾ.
ಏ ಹಂಗರ ಇವನು ನನ್ನ ಫ್ಯಾನ ಇರಬೇಕ ’ಕುಟ್ಟವಲಕ್ಕಿ’ ಬುಕ್ಕ ಬೇಕಾಗಿರಬೇಕ ಅದಕ್ಕ ಬಂದಾನ, ಛಲೊ ಆತ ಭಾಳ ದಿವಸಾಗಿತ್ತ ನನ್ನ ’ಕುಟ್ಟವಲಕ್ಕಿ’ ಸೇಲ ಆಗಲಾರದ ಅಂತ ನಾ ಅನ್ಕೋಳೊದರಾಗ ಅಂವಾ
“ಏನಿಲ್ಲಾ, yesterday I lost my grandfather, ಅವರ ಇಲ್ಲೆ ಹುಬ್ಬಳ್ಳಿ ಒಳಗ ನಮ್ಮಪ್ಪನ ಜೊಡಿ ಇದ್ದರು” ಅಂತ ಅವರಪ್ಪನ್ನ ಪರಿಚಯ ಮಾಡಿಸಿ ಮುಂದ
“ನಮಗ ಪೇಪರ ಒಳಗ ನಮ್ಮ ಅಜ್ಜ ಸತ್ತಿದ್ದನ್ನ ಕೊಡಬೇಕಿತ್ತ ಅದಕ್ಕ ಬಂದಿದ್ವಿ” ಅಂದರು.
ಹಕ್ಕ ನಾ ಪೇಪರ ಒಳಗ ಇನ್ನೂ ಕಾಲಮಿಸ್ಟ ಇದ್ದೇನಿ ಅಂತ ತಿಳ್ಕೊಂಡ ನಾ ಪೇಪರನಂವಾ ಅಂತ ಬಂದಾರ ಅನಸ್ತ. ನಾ ಅವರಿಗೆ ಸಮಾಧಾನದ್ಲೇ. ಇಲ್ಲಾ, ನಾ ಈಗ ಯಾ ಪೇಪರ ಒಳಗು ಇಲ್ಲಾ, ನನ್ನ ಕಾಲಮ್ ಪೇಪರನಾಗ ಬಂದ ಆಗಿ ಭಾಳ ವರ್ಷ ಆತು ಅದರಾಗ ನಾ ಪೇಪರನಾಗ ಬರಿತಿರಬೇಕಾರ ಸಹಿತ ಬರೇ ಕಾಲಮ್ ಬರಿತಿದ್ದೆ, ನಿಧನ ವಾರ್ತೆ ಅಲ್ಲಾ ಅಂತ ತಿಳಿಸಿ ಹೇಳಿದೆ. ನಾ ಹಂಗ ಅನ್ನೋದ ತಡಾ ಅಂವಾ
“ಸರ್. ಅದು ನನಗೊತ್ತು, ಹಂಗ ನಿಧನ ವಾರ್ತೆ ಇವತ್ತ ಪೇಪರನಾಗ ಬಂದದ. ನಮಗ ಹದಿಮೂರನೇ ದಿವಸಕ್ಕ ಪೇಪರನಾಗ ad ಕೊಡಲಿಕ್ಕೆ ಒಂದ ನಮ್ಮಜ್ಜನ ಹೆಸರಿಲೇ ಛಂದಂದ obituary (ಮೃತ್ಯುಲೇಖನ, ಮರಣ ಪ್ರಕಟಣೆ) ಬರದ ಕೊಡ್ರಿ, ನೀವು ಭಾಳ ಛಲೋ ಬರೀತಿರಿ ಅದು ನಮ್ಮ ಉತ್ತರ ಕರ್ನಾಟಕದ ಭಾಷೆ ಒಳಗ” ಅಂದ ಬಿಟ್ಟಾ.
ಏನ ಜನಾನೋ ಏನೋ? ನಾ ಏನೊ ಬರೇತಿನ ಅಂತ ಅಂದರ ನನ್ನ ಕಡೇ ಒಬೆಚುರಿ ಬರಸಲಿಕ್ಕೆ ಬಂದಾರಲಾ ಅಂತ ಖರೇನ ಸಿಟ್ಟ ಬಂತ. ಅಲ್ಲಾ ಹಂಗ ’All publicity is good, except an obituary notice’ ಅಂತಾರ ಆದರ ಇವರ ನೋಡಿದರ obituary ಒಳಗೂ publicity ಮಾಡೊಹಂಗ ಕಾಣತದ ಅನಸಲಿಕತ್ತ.
ಅಲ್ಲಾ ಅದ ಇರಲಿ, ಇವರ ನಾ ಬರೇಯೋ ಲೇಖನಾನರ ಓದ್ಯಾರೋ ಇಲ್ಲೊ ಅಂತ ಡೌಟ ಬರಲಿಕತ್ತ, ನಾ ನೋಡಿದರ ಎಲ್ಲಾದರಾಗೂ ಮಸ್ಕೀರಿ ಮಾಡ್ಕೋತ ಬರೆಯೋಂವಾ ಹಂತಾವನಕಡೆ ಇವರ ಒಬೆಚುರಿ ಬರಸ್ತಾರ ಅಂದರ ಅಂತ ಸಿರಿಯಸ್ ಆಗಿ
“ಏ, ಹೋಗ್ಲಿ ಬಿಡ್ರಿ ಮಾರಾಯರ, ನಾ ಬರದಿದ್ದ ಓದಿ ಎಲ್ಲೇರ ಸತ್ತವರು ಎದ್ದ ಬಂದ ಗಿದ್ದಾರ, I am humorist not obituarist” ಅಂತ ಕ್ಲಿಯರ್ ಆಗಿ ಹೇಳಿದೆ.
ನಾ ಹಂಗ ಅಂದರೂ ಅವರೇನ ಕೇಳಲಿಲ್ಲಾ
“ಇಲ್ಲಾ ನಮ್ಮಜ್ಜನು ಭಾಳ ಹಾಸ್ಯ ಸ್ವಭಾವದವರ ಇದ್ದರು, he had great sense of humour, ಅವರ ನಿನ್ನೆ ಜೋರಾಗಿ ನಕ್ಕೋತ ನಕ್ಕೋತನ ಅಲ್ಲೇ cardiac arrest ಆಗಿ ಹೋಗಿ ಬಿಟ್ಟರು, ಹಿಂಗಾಗಿ ಅವರ obituary ನೀವ ಬರೀಬೇಕು ಅಂತ ನಮ್ಮ ಆಶಾ ಅದ, ಅದರಾಗ ಅವರ ನಿಮ್ಮ ಕುಟ್ಟವಲಕ್ಕಿ ಬುಕ್ಕ ಮೂರ ಸರತೆ ಓದಿದ್ದರು. please dont say no, take your time” ಅಂತ ಗಂಟ ಬಿದ್ದರು.
ಅಲ್ಲಾ, ಹಂಗ ನಂಗ ಯಾರರ ’ನನ್ನ ಹೆಂಡ್ತಿ ಸತ್ತಾಳ obituary ಬರದ ಕೊಡ್ರಿ’ ಅಂದ್ರ ಏನರ ಒಂದ ಸ್ವಲ್ಪ ತಲಿಕೆಡಸಿಗೊಂಡ ಬರದ ಕೊಡ್ತಿದ್ದೆ, ಅದ ನನ್ನ ಫಿಲ್ಡ – ನನ್ನ ಸಬ್ಜೆಕ್ಟ ಆದರ ಹಿಂಗ ಹೀರೇ ಮನಷ್ಯಾರ ಸತ್ತಾಗ ಏನ ಬರಿಬೇಕಪಾ ಅಂತ ವಿಚಾರ ಮಾಡಿ ಅವರ ಮಾರಿ ನೋಡಿ ಅದರಾಗ ಅವರಜ್ಜ ನನ್ನ ಕುಟ್ಟವಲಕ್ಕಿ ಮೂರಸರತೆ ಓದ್ಯಾನ ಅಂತ ಇಲ್ಲಾ ಅನ್ನಲಿಕ್ಕೆ ಆಗಲಾರದ
“ಸಂಜಿಗೆ ನಿಮ್ಮ ಮನಿ ಕಡೇ ಬಂದ ಅವರ ಬಗ್ಗೆ ಎಲ್ಲಾ ಡಿಟೇಲ್ಸ್ ತೊಗೊಂಡ ಬರದ ಕೊಡ್ತೇನಿ ತೊಗೊಳ್ರಿ” ಅಂತ ಹೇಳಿ ಅವರನ ಕಳಸಿದೆ.
ಅಷ್ಟರಾಗ ಬಾಗಲದಾಗ ನಿಂತ ನಮ್ಮವ್ವ ಇದನ್ನೇಲ್ಲಾ ಕೇಳಲಿಕತ್ತಿದ್ಲು, ಅಕಿ ಹಣಿ ಬಡ್ಕೊಂಡ ಏನ ಜನಾನೋ ಏನೋ ಅಂದ ನಂಗ ಒಮ್ಮಿಂದೊಮ್ಮಿಲೇ
“ನೀ, ಇನ್ನೊಮ್ಮೆ ಕೈಕಾಲ ತೊಳ್ಕೊಂಡ ಒಳಗ ಬಾ” ಅಂದ್ಲು
“ಏ, ನಾ ಏನ ಅವರಿಗೆ ಮುಟ್ಟೇನಿನ, ಈಗೀನ ಸ್ನಾನ ಮಾಡಿ ಬಂದೇನಿ” ಅಂತ ನಾ ಅಂದರು ಕೇಳಲಿಲ್ಲಾ.
ಇನ್ನ obituary ಬರದ ಕೊಟ್ಟ ಮ್ಯಾಲೆನೂ ಮತ್ತ ಎಲ್ಲೆ ಸ್ನಾನ ಮಾಡ ಅಂತಾಳೊ ಅನಸಲಿಕತ್ತ.
ಅಲ್ಲರಿ ಆದರೂ ಏನ ಜನಾ ಅಂತೇನಿ ಹಿಂಗ ಬಂದ ’ಸರ್..ಒಂದ ಛಲೋ obituary ಬರದ ಕೊಡ್ರಿ’ ಅಂತ ನಂಗ ಕೇಳ್ತಾರ ಅಂದ್ರ ನನ್ನ credibility ಏನ ಅಂತ ಗೊತ್ತಾಗಲಾರದಂಗ ಆತ. ನಾ ಇದನ್ನ matter of pride ಅಂತ ತಿಳ್ಕೊಳ್ಯೊ ಇಲ್ಲಾ ನಾ ಖರೇನ obituary ಬರಿಲಿಕ್ಕೆ ಲಾಯಕ್ಕ ಇದ್ದೇನಿ ಆದರ ತಪ್ಪಿ humour ಬರಿಲಿಕ್ಕೆ ಹತ್ತೇನಿ ಅಂತ ತಿಳ್ಕೊಳ್ಯೊ ಇಲ್ಲಾ ನಾ ಬರೇಯೊ humour obituary ಇದ್ದಂಗ ಅದನೋ ಅನ್ನೋದ confuse ಆಗಲಿಕತ್ತ. ಇರಲಿ ಆದರೂ ಅವರಿಗೆ ಬರದ ಕೊಡ್ತೇನಿ ಅಂತ ಹೇಳೇನಿ ಅಂತ ಸಂಜಿ ಮುಂದ ಅವರ ಮನಿಗೆ ಹೋಗಿ ಆ ಅಜ್ಜನ್ನ ಸ್ವಭಾವ, ಹಿಸ್ಟರಿ, ಎಲ್ಲೆ ಹುಟ್ಟಿದ್ದಾ ಎಲ್ಲೆ ಸತ್ತಾ ಎಲ್ಲಾ ತಿಳ್ಕೊಂಡ ಬಂದ ಒಂದ obituary ಬರದ ಅವರಿಗೆ email ಮಾಡಿದೆ. ಒಂದ ಸರತೆ ನೀವು ಅದನ್ನ ಓದಿ ಎರಡ ನಿಮಿಷ ಆ ಅಜ್ಜಾನ ಆತ್ಮಕ್ಕ ಶಾಂತಿ ಸಿಗಲಿ ಅಂತ ಕೋರಿ ಬಿಡ್ರಿ…
’ಶ್ರದ್ಧಾಂಜಲಿ’
“ಶ್ರೀ ವಾಮನರಾವ್ ವಾಸುದೇವರಾವ್ ಜೋಶಿ, ಸಾಕೀನ ಸವಣೂರ.
ಹುಟ್ಟಿದ್ದ ಎಪ್ರಿಲ್ ೧೨, ೧೯೨೬ ಶಿಗ್ಗಾಂವದಾಗ, ಅಮವಾಸಿ ಮುಂದ ಹುಣ್ಣಮಿ ಆದಮ್ಯಾಲೆ. ತೃತಿಯಾ ದಿವಸ ಅವರವ್ವಾ-ಅಪ್ಪಗ ದ್ವೀತಿಯ ಪುತ್ರ.
ಚುರ-ಪಾರ ಕಲತದ ಕುಂದಗೋಳದಾಗ, ಮುಂದ ದೊಡ್ಡಂವ ಆಗೋ ಪುರಸತ್ತ ಇಲ್ಲದ ಕಟಗೊಂಡಿದ್ದ ಕಾರಟಗಿ ಹುಡಗಿ ವಿಮಲಾಬಾಯಿನ.
ಅಮ್ಯಾಲೆ ಸವಣೂರಾಗ ಸರ್ಕಾರಿ ಸಾಲಿ ನೌಕರಿ, ಆ ನೌಕರಿ ಮಾಡ್ಕೋತ, ಹೆಂಡ್ತಿ ಚಾಕರಿ ಮಾಡ್ಕೋತ ವರ್ಷಕ್ಕ ಒಂದರಂಗ ಆರ ವರ್ಷದಾಗ ಐದ ಹಡದ ನಾಲ್ಕ ಉಳಸಿಗೊಂಡ ಆರನೇದ ಹಡಿಲಿಕ್ಕೆ ಹೋಗಿ ಹೆಂಡ್ತಿನ್ನ ’ಮುತ್ತೈದ ಸಾವು’ಪಟ್ಟಕ್ಕ ಕಟ್ಟಿದ ಪುಣ್ಯಾತ್ಮ.
ಈಗ ಬಿಟ್ಟ ಹೋಗಿದ್ದ ಮೂರ ಮಕ್ಕಳು, ನಾಲ್ಕ ಸೊಸೆಂದರು ಏಳ ಮೊಮ್ಮಕ್ಕಳು ಮೂರ ಮರಿಮಮ್ಮಕ್ಕಳು.
ನಮಗ್ಯಾಕ ಆಸ್ತಿ, ಮಕ್ಕಳ ನಮ್ಮ ಆಸ್ತಿ ಅಂತ ಇದ್ದ ಮೂರ ಎಕರೆ ಹೊಲಾ ಸರ್ಕಾರಿ ಸಾಲಿಗೆ ಕೊಟ್ಟ, ಈಗ ಬಿಟ್ಟ ಹೋಗಿದ್ದ ಸವಣೂರಾಗ ಒಂದ ತಟ್ಟಿ ಗ್ವಾಡಿ ಮನಿ.
ಜೀವನದಾಗ ಒಂದ ಚಟಾ ಇರದಿದ್ದರು ಯಾವಗಲು ಚಟುವಟಿಕೆ ಇಂದ ಇರ್ತಿದ್ದ ಜೋಶಿ ಮಾಸ್ತರ ತಮ್ಮ ೮೭ನೇ ವಯಸ್ಸಿನಾಗ ದಿ.೨೮.೦೬.೧೩ರಂದು ಚಟ್ಟ ಏರಿ ತಮ್ಮ ದಿವಂಗತ ಪತ್ನಿ ವಿಮಲಬಾಯಿಯವರ ಪಾದ ಕಮಲಗಳನ್ನ ಸೇರಿದರು.
ಬದಕಿದಷ್ಟ ದಿವಸ ನಕ್ಕೋತ, ನಗಿಸಿಗೋತ..ನಗದೊನ್ನ ಕಲಿಸಿಗೋತ ಕಡಿಕೆ ನಗತಾ-ನಗತಾ ಆ ನಗು ಎದಿಗೆ ಹತ್ತಿ ನೆಗದ ಹೋದ ಜೋಶಿ ಮಾಸ್ತರಗೆ ಶ್ರದ್ಧಾಂಜಲಿ…….”
ಅಲ್ಲಾ ಮತ್ತ ಇದನ್ನ ಓದಿ ನಂಗೇಲ್ಲರ ಯಾರರ ಮ್ಯಾಲೆ ಹೋದಾಗ obituary ಬರದ ಕೊಡ ಅಂತ ಕೇಳಿ-ಗೀಳಿರಿ..ನಾ ಮೊದ್ಲ ಹೇಳಿದ್ನೆಲಾ…ನಾ humourist…obituarist ಅಲ್ಲಾ ಅಂತ.