ನಿನ್ನೆ ಬೆಳಿಗ್ಗೆ ಏಳೋ ಪುರಸತ್ತ ಇಲ್ಲದ ನಮ್ಮ ಕೌಸ್ತ್ಯಾನ ಫೋನ್ ಬಂತ, ಇಂವಾ ಹಂಗ ಇಷ್ಟ ಲಗೂ ಎದ್ದ ಫೋನ್ ಮಾಡೋಂವ ಅಲ್ಲಾ, ಯಾಕ ಮಾಡಿದಾ ಪಾ, ಯಾರರ ಗೊಟಕ-ಗಿಟಕ್ ಅಂದ-ಗಿಂದಾರಿನ ಅಂತ ವಿಚಾರ ಮಾಡ್ಕೋತ ಫೋನ ಎತ್ತಿದೆ. ಅಂವಾ ಒಂದ ನಾಲ್ಕ ಮಾತಾಡಿ, ‘ನಿಮ್ಮ ಒಬ್ಬ ಹಳೆ ದೋಸ್ತ ಬಂದಾನ ಮಾತಾಡ್ತಾನಂತ ನೋಡ’ ಅಂತ ಫೋನ್ ಯಾರೊ ಒಂದ ಅನ್ನೌನ ಮನುಷ್ಯಾನ ಕೈಯಾಗ ಕೊಟ್ಟಾ,
ಅತ್ತಲಾಗಿಂದ “ಏನಪಾ, ರಾಜಾ ಹೆಂಗಿದ್ದಿ ,ಗೊರ್ತ ಹಿಡದಿ ಏನ್ ನನಗ?” ಅಂತ ಆ ಅನ್ನೌನ ಧ್ವನಿ ಕೇಳತ.
ಧ್ವನಿ ನೋಡಿದರ ಗೊಗ್ಗರ ಇತ್ತ, ಅಗದಿ ರಾತ್ರಿದ ಇನ್ನು ಇಳದಿಲ್ಲೆನೋ ಅನ್ನೋ ಹಂಗ ಧ್ವನಿ ಒಳಗ ಹ್ಯಾಂಗಒವರ್ ತುಂಬಿ ತುಳಕ್ಯಾಡಲಿಕತ್ತಿತ್ತು. ಧಾಟಿ ನೋಡಿದರ ಎಲ್ಲೋ ಕೇಳಿದಂಗ, ಯಾರೋ ಹೀರೇ ಮನಷ್ಯಾರ ಮಾತಾಡಿದಂಗ ಇತ್ತ. ನಾ “ಇಲ್ಲಾ ಗೊತ್ತ ಹಿಡಿಲಿಲ್ಲಾ, ತಾವು ಯಾರ ಮಾತಾಡೋದ” ಅಂತ ಅಗದಿ ರಿಸ್ಪೆಕ್ಟಲೆ ಅಂದೆ.
“ಲೇ ನಿನ್ನೌನ, ಭಾಳದೊಡ್ಡ ಮನುಷ್ಯಾ ಆಗಿ ಬಿಡ ಮಗನ, ಒಂದ ಬುಕ್ ಬರದಿ ಅಂತ ಎಲ್ಲಾರನೂ ಮರತ ಬಿಟ್ಟಿ ಏನ್” ಅಂತ ನನಗ ಅನ್ನೌನ ಇದ್ದಾಂವ ಸೀದಾ ನಿನ್ನೌನಕ್ಕ ಬಂದಾ. ಹಿಂಗ ಅವನೌನ ಇಂವಾ ನಿನ್ನೌನ ಅಂತ ನನ್ನ ಮಾತೃ ಭಾಷಾದಾಗ ಮಾತಡ್ತಾನ ಅಂದ್ರ ಇಂವಾ ನಮ್ಮ ಪೈಕಿನ, ಇದ ಯಾವದೊ ನಂಗ ಕ್ಲೋಸ್ ಇರೋ ಗಿರಾಕಿನ ಅಂತ ನನಗ ಗ್ಯಾರಂಟೀ ಆಗಿ ನಾ ಸೀದಾ
” ಲೇ, ಹು.ಸೂ.ಮಗನ, ಯಾರಂತ ಲಗೂ ಹೇಳಲೇ, ಮುಂಜ-ಮುಂಜಾನೆ ಎದ್ದ ಜೀವಾ ತಿನ್ನಬ್ಯಾಡಾ. ಮಗನ ನಾ ಸ್ನಾನಾ ಮಾಡಿ ಕೆಲಸಕ್ಕ ಹೋಗಬೇಕ” ಅಂತ ಜೋರ ಮಾಡಿದೆ. ಇನ್ನ ಲಗೂನ ಹೆಸರ ಹೇಳಲಿಲ್ಲಾ ಅಂದ್ರ ನನ್ನ ಬಾಯಾಗ ನುಡಿಮುತ್ತ ಬರತಾವ ಅಂತ ಗೊತ್ತಾಗಿ ಅಂವಾ
“ಲೇ, ನಾನಲೇ ಕೇರೂರ ಮಾತಾಡೋದ, ಹನುಮಂತರಾವ್ ಭೀಮರಾವ್ ಕೇರೂರ” ಅಂದಾ.
ಆದ್ರು ನನಗ ಹೋಳಿಲಿಲ್ಲಾ, ಹಂಗ ನಾವ ಯಾವ ದೋಸ್ತರಿಗೂ ಪೂರ್ತಿ ಹೆಸರ ಹಿಡದ ಕರದ ಗೊತ್ತನೂ ಇಲ್ಲಾ. ಕೆಲವೊಮ್ಮೆ ಅಂತೂ ಅವರ ಅವ್ವ-ಅಪ್ಪ ಇಟ್ಟಿದ್ದ ಖರೆ ಹೆಸರ ಗೊತ್ತ ಇರತಿದ್ದಿಲ್ಲಾ, ಎಲ್ಲಾರಿಗೂ ಬರೆ ಅಡ್ಡ ಹೆಸರಲೇನ ಕರಿತಿದ್ವಿ. ನಾ ಹಿಂಗ ವಿಚಾರ ಮಾಡೋದರಾಗ ಅವನ ಹೇಳಿದಾ, ” ಲೇ, ದನಾಕಾಯೋನ ಕೇರೂರ ಹನಮ್ಯಾಲೇ, ಹುಬ್ಬಳ್ಯಾಗ ದೇವಾಂಗಪೇಟದಾಗ ಇದ್ದನೇಲ್ಲಾ” ಅಂದಾ.
“ಹಿಂಗ ಹೇಳೋ ಮಗನ ಏನ ಅಗದಿ ಹನಮಂತರಾವ್ ಭೀಮರಾವ್ ಕೇರೂರ ಅಂತ ಸ್ವಾತಂತ್ರ್ಯ ಹೋರಾಟಗಾರರಗತೆ ಹೇಳಿದರ ಯಾವಂಗ ತಿಳಿಬೇಕಲೇ, ಅನ್ನಂಗ ಎಲ್ಲಿ ಸತ್ತಿದ್ದಿ ಇಷ್ಟ ದಿವ್ಸ?” ಅಂತ ನಾ ಹರಟಿ ಶುರುಮಾಡಿದೆ. ಹಿಂಗ ‘ನಿಂಗೆಷ್ಟ ಮಕ್ಕಳು – ನಂಗ ಇಷ್ಟ ಮಕ್ಕಳು, ನಿನ್ನ ಹೆಂಡತಿ ಹೆಂಗ – ನನ್ನ ಹೆಂಡತಿ ಹಿಂಗ, ನಿಮ್ಮ ಅವ್ವಾ-ಅಪ್ಪಾ ಇನ್ನೂ (ಗಟ್ಟಿ) ಇದ್ದಾರೇನು’ ಅದು- ಇದು ಅಂತ ಒಂದೆರಡ ಮಾತಾಡಿ, ಹಂಗರ ಸಂಜಿಮುಂದ ಎಲ್ಲೇರ ಸಿಗೋಣಂತ ಅಂತ ಡಿಸೈಡ ಮಾಡಿ ಆಫೀಸಗೆ ಹೊತ್ತಾಗತದ ಅಂತ ಫೋನ್ ಇಟ್ಟೆ.
ಈ ಮಗಂದ ನಾ ಧ್ವನಿ ಕೇಳಲಾರದ ಒಂದ ೧೭-೧೮ ವರ್ಷದ ಮ್ಯಾಲೆ ಆಗಿರಬೇಕು, ನನಗ ನೆನಪ ಇದ್ದಂಗ ನಾ ಆ ಮಗಂದ ‘ಬಾಲ್ಯ ವಿವಾಹಕ್ಕ’ ಹೋದಾಗ ಲಾಸ್ಟ ಭೆಟ್ಟಿ ಆಗಿದ್ದ. (ಬ್ರಾಹ್ಮಣರಾಗ ೨೪-೨೫ ವರ್ಷಕ್ಕ ಗಂಡ ಹುಡುಗರದು ಮದುವಿ ಆದರ ಅದ ಬಾಲ್ಯ ವಿವಾಹ ಇದ್ದಂಗ ಅಲಾ ಅದಕ್ಕ ಹೇಳಿದೆ). ಅದ ಆದ ಮ್ಯಾಲೆ ಆ ಮಗನ ಧ್ವನಿ ಕೇಳಿದ್ದ ಇವತ್ತ. ಇಷ್ಟ ದಿವಸ ಎಲ್ಲಿ ಇದ್ದನೋ ಏನೋ ನಾ ಅಂತೂ ಮರತ ಬಿಟ್ಟಿದ್ದೆ. ಆದ್ರೂ ಒಬ್ಬ ಹಳೆ ಗೆಳೆಯ, ಆತ್ಮೀಯ ಇದ್ದಂವಾ ಫೋನ್ ಮಾಡಿ ಮಾತಾಡಿದ್ನಲಾ ಅಂತ ಖುಷಿ ಆತ.
ಹಂಗ ಈ ಹನಮ್ಯಾ ನನಗ ಮೊದ್ಲನೇ ಸಲಾ ಭೆಟ್ಟಿ ಆಗಿದ್ದ ನಾ ಪಿ.ಯು.ಸಿ ಫಸ್ಟ ಇಯರ ಇದ್ದಾಗ, ಇಂವಾ ಹಾನಗಲ್ ಹತ್ರ ಒಂದ ಯಾವದೋ ಹಳ್ಳಿಯಿಂದ ಹುಬ್ಬಳ್ಳಿಗೆ ಬಂದಿದ್ದಾ. ಎಸ್.ಎಸ್.ಎಲ್.ಸಿ ಒಳಗ ನಾಲ್ಕ ಮಾರ್ಕ್ಸಲೇ ರಾಜ್ಯಕ್ಕ ೨೦ ನೇ rank ತಪಿತ್ತಂತ ಹೇಳಕೊತ್ತ ಅಡ್ಯಾಡತಿದ್ದಾ. ಕಲತದ್ದ ಕನ್ನಡ ಮಿಡಿಯಮದಾಗ ಆದ್ರೂ ನಮ್ಮ ಕಾಲೇಜನಾಗಿನ ಇಂಗ್ಲೀಷ ಕಲಸೊ ನಮ್ಮ ಪಾಟೀಲ್ ಮೇಡಮ್ ಕಿಂತಾ ಛಲೋ ಇಂಗ್ಲೀಷ ಮಾತಾಡ್ತಿದ್ದಾ. ನೋಡಲಿಕ್ಕೆ ಇತ್ತಲಾಗ ಹುಡುಗರ ಪೈಕಿನೂ ಅಲ್ಲಾ ಹುಡಿಗ್ಯಾರ ಪೈಕಿನೂ ಅಲ್ಲಾ ಅಗದಿ ಶಾಣ್ಯಾರ ಪೈಕಿ ಕಂಡಂಗ ಕಾಣತಿದ್ದಾ. ದಿವಸಾ ತಲಿಗೆ ಕೊಬ್ಬರಿ ಎಣ್ಣಿ ಹಚಗೊಂಡ, ಅವರವ್ವನ ಕಡೆ ಬೈತಲಾ ತಗಿಸಿ ಹಿಕ್ಕಿಸಿಕೊಂಡ ಬರ್ತಿದ್ದಾ, ಹಿಂದ ಮಾಟ ಅಂದ ತುರಬಾ ಕಟಗೊಳೊ ಅಷ್ಟ ಜುಟ್ಲಾ ಬಿಟ್ಟ, ಹಣಿ ಮ್ಯಾಲೆ ಒಂದ ದೊಡ್ಡ ಉದ್ದನೀ ನಾಮ, ಕಿವ್ಯಾಗ ಹೂವು, ಕೊಳ್ಳಾಗ ತುಳಸಿಮಣಿ ಸರಾ, ಅದಕ್ಕ ಎರಡ ಹಿತ್ತಾಳಿ ತಾಳಿ ಹಾಕ್ಕೊಂಡಿದ್ದರ ಮಾಡರ್ನ್ ಮಂಗಳಸೂತ್ರ ಕಂಡಂಗರ ಕಾಣತಿತ್ತ. ಕಣ್ಣಾಗ ಚಸಮಾ ಬ್ಯಾರೆ, ಶ್ಯಾಣ್ಯಾ ಅಂದ ಮ್ಯಾಲೆ ಚಸಮಾ ಇಲ್ಲಾಂದ್ರ ಹೆಂಗ ಮತ್ತ. ಅಗದಿ ನೋಡಿದ್ರ ಬ್ಯಾರೆಯವರಿಗೆ ಭಯ-ಭಕ್ತಿ, ವಿದ್ಯಾ-ಬುದ್ಧಿ ಎಲ್ಲಾ ಬಂದಿರಬೇಕು, ಹಂಗ ಸಾಕ್ಷಾತ ಸರಸ್ವತಿ ಪುತ್ರ ಇದ್ದಂಗ ಇದ್ದಾ. ತಾ ಆತು ತನ್ನ ಕಾಲೇಜು ಆತು, ಕಾಲೇಜನಾಗ ಪಿರಿಡ ತಪ್ಪಿದರ ಲೈಬ್ರರಿ,ಲೈಬ್ರರಿ ತಪ್ಪಿದರ ಪಿರಿಡ್. ಅಂವಾ ಅಕಸ್ಮಾತ ಲೈಬ್ರರಿಗೆ ಹೋಗಲಿಲ್ಲಾ ಅಂದ್ರ ನಮ್ಮ ಲೈಬ್ರರಿಯನ್ ಮಾಳವಾಡ ಸರ್ ಗೆ ಏನೊ ಭಣಾ-ಭಣಾ ಅನಸ್ತಿತ್ತು. ಅಷ್ಟ ಅಂವಾ ಪುಸ್ತಕ, ಲೈಬ್ರರಿ, ಲೈಬ್ರರಿಯನ್ ಎಲ್ಲಾರನೂ ಹಚಗೊಂಡಿದ್ದಾ. ಈ ಮಗಾ ಲೈಬ್ರರಿ ಒಳಗ ನಾಲ್ಕ ಪುಸ್ತಕ ಸೈಡಿಗೆ ಇಟ್ಟ ಅದರ ಮ್ಯಾಲೆ ಒಂದ ನಾಲ್ಕ ಮಂತ್ರಾಕ್ಷತಿ ಕಾಳ ಹಾಕಿ, ಒಂದ ಬಾಟಲಿ ತುಂಬ ಅವರವ್ವ ಕಾಯಿಸಿ ಆರಿಸಿ ಕೊಟ್ಟಿದ್ದ ನೀರ ಇಟಗೊಂಡ ಕೂತನಂದ್ರ ಇಡಿ ಲೈಬ್ರರಿಗೆ ಒಂದ ಕಳೆ ಬರ್ತಿತ್ತ. ಪ್ರತಿ ಸಬ್ಜೆಕ್ಟ್ ಓದೊಕ್ಕಿಂತ ಮುಂಚೆ ಕಣ್ಣಮುಚ್ಚಿ ಏನೋ ಸಂಸ್ಕೃತ ಒಳಗ ಮಂತ್ರಾ ಹೇಳಿ ಬುಕ್ ತಗಿತಿದ್ದಾ. ಉಳದ ಹುಡುಗರು ಅಂವಾ ಹಂಗ ಮಾಡೋದ ನೋಡಿ ಬಹುಶಃ ಅಂವಾ ಲೈಬ್ರರಿ ಒಳಗ ಸಂಧ್ಯಾವಂದನಿ ಮಾಡಿ ಗಾಯತ್ರಿ ಜಪಾ ಮಾಡ್ತೀರ ಬೇಕ ಅಂತ ತಿಳ್ಕೊಳ್ಳೊರು.
ಹಂಗ ನೋಡಿದ್ರ ಇವನ ಮಡಿ-ಮೈಲಗಿ ಕಾಲೇಜನಾಗು ಚಾಲು ಇರ್ತಿತ್ತ. ಕಾಲೇಜನಾಗ ಡೆಸ್ಕ ಮ್ಯಾಲೆ ಊಟಾ ಮಾಡಬೇಕಾರ ಚಿತ್ರಾವತಿ ಇಟ್ಟ ಆಮ್ಯಾಲೆ ಗ್ವಾಮಾ ಹಚ್ಚತಿದ್ದಾ. ಅದು ಬ್ಯಾರೆಯವರ ಡೆಸ್ಕ ಮ್ಯಾಲೆ, ಆ ಡೆಸ್ಕಿಗೆ ಆಮ್ಯಾಲೆ ಇರಬಿ ಹತ್ತತ್ತಿದ್ದವು ಆ ಮಾತ ಬ್ಯಾರೆ. ಹುಡಗ್ಯಾರನ ಯಾವಾಗಲೂ ಮೂರ ಫೂಟ ದೂರದಿಂದನ ಮಾತಾಡಸ್ತಿದ್ದಾ. ನೋಡಿದವರು ಬಹುಶಃ ಆ ಹುಡುಗಿ ಕಡಿಗ್ಯಾಗಿರಬೇಕು ಇಲ್ಲಾ ಅವರ ಮನ್ಯಾಗ ರಿದ್ದಿ ಇಲ್ಲಾ ಮೈಲಗಿ ಇರಬೇಕು ಅಂತ ತಿಳ್ಕೋಬೇಕು ಹಂಗ ಮಾಡತಿದ್ದಾ. ಟಾಯ್ಲಟ್ ಬ್ಲಾಕ್ ಗೆ ಹೋದ್ರ ಕಿವ್ಯಾಗ ಜನಿವಾರ ಹಾಕ್ಕೊಂಡ ಮೂತ್ರ ವಿಸರ್ಜನೆ ಮಾಡ್ತಿದ್ದಾ. ಒಂದ ಸರತೆ ಕ್ಲಾಸಿಗೆ ಲೇಟ ಆಗ್ತದ ಅಂತ ಗಡಿಬಿಡಿ ಒಳಗ ಮರತ ಕಿವ್ಯಾಗಿನ ಜನಿವಾರ ಹಂಗ ಇಟಗೊಂಡ ಬಂದಿದ್ದಾ. ಇಡೀ ಕ್ಲಾಸ್ ಮಂದಿ ಎಲ್ಲಾ ಅವನ ಮಾರಿ ನೋಡಿ ನಕ್ಕಿದ್ದರು. ಆವಾಗ ನಾ ಅಂವಾ ಜಿಪ್ಪರ ಹಾಕ್ಕೊಂಡಾನೋ ಇಲ್ಲಂತ ಕೆಳಗ ನೋಡಿದ್ದೆ. ಕಾಲೇಜ ಕ್ಯಾಂಟೀನ ಒಳಗ ಚಹಾ ಬಿಟ್ಟರ ಏನು ಕುಡಿತಿದ್ದಿಲ್ಲಾ, ತಿಂತಿದ್ದಿಲ್ಲಾ. ಹಂಗ ಅಕಸ್ಮಾತ ಏನರ ಅಪ್ಪಿ ತಪ್ಪಿ ಮಂದಿ ತಿನಿಸಿದಾಗ ತಿಂದರೂ ಮನಿಗೆ ಹೋಗಿ ಪಂಚಗವ್ಯಾ ತಿನ್ನೊ ಮಗಾ. ಅವನೌನ ಅಂವಾ ಬಾಯಿತಗದರ ಒಮ್ಮೊಮ್ಮೆ ಪಂಚಗವ್ಯದ್ದ ವಾಸನಿನ ಬರ್ತಿತ್ತು.
ಒಂದ ದಿವಸನೂ ಸಂಜಿ ಆದ ಮ್ಯಾಲೆ ನಮ್ಮ ಜೊತಿ ಬ್ರಾಡವೆಕ್ಕ ಸೇವಪುರಿ – ಪಾವಭಾಜಿ, ಗಿರಮಿಟ್ಟ ತಿನ್ನಲಿಕ್ಕೆ ಬರಲಿಲ್ಲಾ, ಹೋಗಲಿ ಲೈನ ಹೊಡಿಲಿಕ್ಕೆರ ಬಾರಲೆ ಅಂದ್ರ ಅದಕ್ಕೂ ಬರತಿದ್ದಿಲ್ಲಾ. ಅದಾ ಹೆಂತಾ ಗಂಡಸೊ ಏನೋ ? ‘ಏ ನಾ ಮನಿಗೆ ಹೋಗಿ ಸಂಧ್ಯಾವಂದನಿ ಮಾಡಬೇಕ ಇಲ್ಲಾಂದ್ರ ನಮ್ಮವ್ವ ಬೈತಾಳ’ ಅಂತಿದ್ದಾ. ‘ನಮ್ಮವ್ವ ಆರ ಗಂಟೆ ಒಳಗ ಮನಿಗೆ ಬಾ ಅಂತ ಹೇಳ್ಯಾಳ, ರಾತ್ರಿ ಹೊಚ್ಚಲಾ ದಾಟಿದರ ಬೈತಾಳ’ ಅಂತಿದ್ದಾ. ಅವಂಗ ನಾವೇಲ್ಲಾ ಈ ಮಗಾ ಇನ್ನೂ ದೊಡ್ಡಂವಾಗಿಲ್ಲಾ, ಹೊಚ್ಚಲಾ ದಾಟಿಲ್ಲಾ ಅಂತ ಕಾಡಸ್ತಿದ್ದಿವಿ. ಅಷ್ಟ ಕಟ್ಟಾ ಅವರವ್ವ ಹೇಳಿದ್ದನ್ನ ಪಾಲಿಸ್ತಿದ್ದಾ, ಅಲ್ಲಾ ಎಲ್ಲಾದಕ್ಕೂ ಒಂದ ವಯಸ್ಸ ಇರತದ ಬಿಡ್ರಿ, ಯಾ ವಯಸ್ಸಿನಾಗ ಅವ್ವನ ಸೀರಿ ಹಿಡಕೊಂಡ ಅಡ್ಯಾಡಬೇಕು, ಯಾವ ವಯಸ್ಸನಾಗ ಹುಡಗ್ಯಾರ ಮಿಡಿ ಹಿಡಕೊಂಡ ಅಡ್ಯಾಡಬೇಕು ಅನ್ನೋದ ಗೊತ್ತಾಗಂಗಿಲ್ಲಾಂದ್ರ ಹೇಂಗ್ರಿ. ಕಾಲೇಜಿಗೆ ಬರಬೇಕಾರ ಎದುರಿಗೆ ಯಾವದರ ಗಿಡದ ಬುಡಕ ಗುಡಿ ಕಂಡ್ರ, ಪಾಲಕಿ ಹೊಂಟಿದ್ರ ಸಾಕು ಚಪ್ಪಲ್ ತಗದ ನಮಸ್ಕಾರ ಮಾಡೋದು, ರಸ್ತೇದಾಗಿನ್ ಬಿಡಾಡಿ ಅಕಳದ್ದ ಮಾರಿ ಮುಟ್ಟಿ ನಮಸ್ಕಾರ ಮಾಡೋದ, ಅವನೌನ ಅವನ ಜೊತಿ ಹೊಗೋದ ಅಂದ್ರ ನಮಗ ತಲಿ ಕೆಟ್ಟ ಹೋಗ್ತಿತ್ತು. ಒಂದ ಸರತೆ ಬಸ್ಸಿನಾಗ ನಿಂತ ಹೋಗ ಬೇಕಾರ ಹೊಸುರ ಹತ್ತರ ರಸ್ತೇದಾಗಿನ ಗಾಳಿ ದುರ್ಗಮ್ಮನ ಗುಡಿಗೆ ಬಸ್ಸಿನ ಸಳಿ ಹಿಡದದ್ದ ಕೈ ಬಿಟ್ಟ ಬಗ್ಗಿ ನಮಸ್ಕಾರ ಮಾಡಲಿಕ್ಕೆ ಹೋಗಿ ಬ್ಯಾಲೆನ್ಸ್ ತಪ್ಪಿ ಸೀಟ ಮ್ಯಾಲೆ ಕೂತಿದ್ದ ಜಾಬಿನ್ ಕಾಲೇಜ ಹುಡಗಿ ಎದಿ ಮ್ಯಾಲೆ ಬಿದ್ದ ಮೂಗ ಜಜ್ಜಿಸಿಕೊಂಡಿದ್ದಾ. ಅಕಿದ ಏನ್ ಜಜ್ಜಿತ್ತೋ ಗೊತ್ತಿಲ್ಲಾ ಆದರ ಅಕಿ ಮಾತ್ರ “ಏ. ಸ್ಟುಪಿಡ್ ಮ್ಯಾಲೆ ಏಳ” ಅಂತ ಸಾಕ್ಷಾತ ದುರ್ಗಿ ರೂಪದಾಗ ಅವಂಗ ಎದಿಲೆ ದುಗಿಸಿದ್ಲು. ನಾವೆಲ್ಲಾ ಅವತ್ತ ಅವನ ಕಡೆ ಕಿಟ್ಟಿ ಪಾರ್ಟಿ ತೊಗೊಂಡ್ವಿ ಆ ಮಾತ ಬ್ಯಾರೆ. ಮತ್ತೊಂದ ಸರತೆ ಕಾಮರ್ಸ ಕಾಲೇಜ ಮುಂದ ಮೂರ-ನಾಲ್ಕ ಆಕಳ ಮಲ್ಕೊಂಡಿದ್ವು, ಈ ಮಗಾ ಬಗ್ಗಿ ಆ ದನದ್ದ ಕೋಡ ಮುಟ್ಟಿ, ಹಣಿ ಮುಟ್ಟಿ, ಅದರ ಹಣಿಮ್ಯಾಲಿನ ಕುಂಕಮಾ ತನ್ನ ಹಣಿಗೆ ಹಚಗೊಂಡ ನಮಸ್ಕಾರ ಮಾಡ್ಲಿಕ್ಕೆ ಹೋಗಿ ಅದರ ಕಡೆಯಿಂದ ತಿವಿಸಿಗೊಂಡಾ.
“ಲೇ, ದನಾ ಕಾಯೋನ ಮೊದ್ಲ ಇದ ಜೆ.ಜಿ. ಕಾಮರ್ಸ ಕಾಲೇಜಲೆ, ದನಾ ಕಾಯೋರ ಕಾಲೇಜ. ಅದರ ಮುಂದಿನ ದನಾನು ದನಾ ಕಾಯೋವ ಇರತಾವ, ಹಂಗ ಕಂಡ ಕಂಡದ್ದ ದನಾ ಮುಟ್ಟಿ ನಮಸ್ಕಾರ ಮಾಡೋದ ಬಿಡ ಮಗನ” ಅಂತ ಅಂದಿದ್ದೆ, ಅಂವಾ ಮುಂದ ಹಂಗ ಆಕಳಾ ಮುಟ್ಟಿ ನಮಸ್ಕಾರ ಮಾಡೋದ ನಾ ನೋಡಲಿಲ್ಲಾ, ಬಹುಶಃ. ನನ್ನ ಜೊತಿ ಇದ್ದಾಗ ಮಾಡ್ತಿದ್ದಿಲ್ಲೊ, ಇಲ್ಲಾ ಖರೇನ ಹೆದರಿ ನಮಸ್ಕಾರ ಮಾಡೋದ ಬಿಟ್ಟ ಬಿಟ್ಟನೋ ಆ ಗೋಮಾತಾಗ ಗೊತ್ತ.
ಹಂಗ ನಂದು ಅವಂದು ದೋಸ್ತಿ ಛಲೋ ಇತ್ತು. ಇಬ್ಬರು ಗಾಳಿಬಂದರ ಹಾರಿ ಹೋಗೊ ಹಂಗ ಇದ್ದವಿ, ಇಬ್ಬರಿಗೂ ಉಡಾಳಗಿರಿ ಮಾಡೋ ದಮ್ಮ ಇರಲಿಲ್ಲಾ, ಹುಡಗ್ಯಾರನ ನಾವ ಪಟಾಯಿಸೋದ ದೂರ ಉಳಿತ ಅವರ ನಮ್ಮನ್ನ ಪಟಾಯಿಸಿದರು ನಾವ ಬೀಳೋ ಹಂಗ ಇದ್ದಿದ್ದಿಲ್ಲಾ. ಮ್ಯಾಲೆ ಇಬ್ಬರು ಇದ್ದಿದ್ದರಾಗ ಸ್ವಲ್ಪ ಶಾಣ್ಯಾರಿದ್ವಿ. ನಾ ಎಲ್ಲಾದರಾಗು ಒಂದ ಗುಂಜಿ ಜಾಸ್ತಿ ಇದ್ದೆ ಅನ್ರಿ. ಮುಂದ ಐದ ವರ್ಷ ಇಬ್ಬರೂ ಕೂಡೇನ ಕಲತ ಡಿಗ್ರಿ ಮುಗಿಸಿದ್ವಿ. ಕಾಲೇಜ ಮುಗದ ಮ್ಯಾಲೆ ನಮ್ಮ-ನಮ್ಮ ದಾರಿ ಹಿಡದ್ವಿ, ಮುಂದ ಅವನ ಸಂಪರ್ಕ ಕಡಿಮೆ ಆಕ್ಕೋತ ಹೋತ.
ಅವನ ನಸೀಬ ಛಲೋ ಇತ್ತು, ಅವಂಗ ಮುಂದ ಲಗೂನ ಅವರಪ್ಪಂದ ಕರ್ನಾಟಕ ಬ್ಯಾಂಕ ನೌಕರಿ ಬಂತು. ಹಿಂಗಾಗಿ ಅಂವಾ ನೌಕ್ರಿ ಬೆನ್ನಹತ್ತಿ ಎಲ್ಲೊ ಭೂಪಾಲಕ್ಕ ಹೋದಾಂತ ಗೊತ್ತಾತ. ಅವಾಗ ಇನ್ನೂ ಈ ಸಾಫ್ಟವೇರ ಹುಟ್ಟಿದ್ದಿಲ್ಲಾ ಹಿಂಗಾಗಿ ಹಾರ್ಡವೇರ್ ಮಂದಿಗೆ ಸ್ವಲ್ಪ ಕಿಮ್ಮತ್ತ ಇತ್ತ. ಅದ್ರಾಗ ನಮ್ಮ ಮಂದಿ ಒಳಗ ಬ್ಯಾಂಕ ನೌಕರಿ ಇತ್ತಂದ್ರ ಮುಗದ ಹೋತ ಈಗಿನ ಸಾಫ್ಟವೇರ್ ಮಂದಿಗೆ ಹೆಂಗ ಕನ್ಯಾ ಹಡದವರ ಮುಕರತಾರಲಾ ಹಂಗ ಮುಕರತಿದ್ದರು. ಆ ಹುಡುಗಾ ದೊಡ್ಡಂವಾಗಿಲ್ಲಾಂದ್ರೂ ಅಡ್ಡಿಯಿಲ್ಲಾ ತಮ್ಮ ಕನ್ಯಾ ಕೊಡಲಿಕ್ಕೆ ಬಿದ್ದ ಸಾಯ್ತಿದ್ದರು. ಹಿಂಗಾಗಿ ಆ ಮಗಾ ನಾವೆಲ್ಲಾ ಇನ್ನೂ ನೌಕರಿ ಹುಡಕ್ಯಾಡಿತಿರಬೇಕಾರ ಕನ್ಯಾ ಹುಡಕ್ಯಾಡಿ ಲಗ್ನಾ ಮಾಡ್ಕೊಂಡಾ, ನಾವೇಲ್ಲಾ ‘ ಲೇ, ನಿನಗ ಏನ ತಿಳಿತದಂತ ಲಗ್ನ ಮಾಡ್ಕೋಳ್ಳಿಕತ್ತೀಲೇ, ನೀ ಇನ್ನು ಸಣ್ಣಂವಾ, ‘ಬಾಲ್ಯ ವಿವಾಹ’ ಮಾಡ್ಕೋಂಡರ ಪೋಲಿಸರ ಹಿಡಿತಾರ ಅಂತ ಕಾಡಸಿದ್ದಿವಿ. ಆ ಹುಡುಗಿನೂ ಅವನ ತಕ್ಕ ಮಡಿ ಹೆಂಗಸ ಇದ್ಲು, ಅಗದಿ ಒಂಬತ್ತವಾರಿ ಕಚ್ಚಿ ಪೈಕಿ ‘ಕಟ್ಟಿ’ ಅನ್ನೊ ಹುಡುಗಿ. ಮುಗಿತ ಅದ ಲಾಸ್ಟ ಮುಂದ ಅವಂದ ಏನ ಸುದ್ದಿನು ಇದ್ದಿದ್ದಿಲ್ಲಾ.
ಹಿಂಗ ನಮ್ಮ ಕೇರೂರ ಹನಮ್ಯಾನ್ನ ನಾವು ಮರಿಲಿಕ್ಕೆ ಸಾಧ್ಯ ಇಲ್ಲಾ. ಆದ್ರ ಇವತ್ತ ಇಷ್ಟ ವರ್ಷ ಆದ ಮ್ಯಾಲೆ ಬಂದ ವಕ್ಕರಿಸಿದಾ ಅಂತ ಎಲ್ಲಾ ನೆನಪು ತಾಜಾ ಆದವು. ಹಂಗ ನಾವು ಅವನ್ನ ಭಾಳಷ್ಟ ವಿಷಯದಾಗ ಆದರ್ಶ ಅನ್ಕೋ ಬೇಕ ಮಗಾ ಅಷ್ಟ ಛಲೋ ಇದ್ದಾ. ನಮ್ಮೇಲ್ಲಾರ ಮನ್ಯಾಗೂ “ಆ ಕೇರೂರ ಹುಡಗನ್ನ ನೋಡಿ ನಾಚರಿ ಅವನ ಜೊತಿ ಅಡ್ಯಾಡತೀರಿ ಒಂದ ಸ್ವಲ್ಪನೂ ಸುಧಾರಿಸಲಿಲ್ಲಾ, ಅವನ ಉಚ್ಚಿನರ ದಾಟರಿ” ಅಂತ ಬೈಸ್ಕೊತಿದ್ವಿ. ನಾ ಅಂತೂ ತಲಿಕೆಟ್ಟ ಅವನೌನ ಇವನ ಸಂಭಂದ ನಾವ ಯಾಕ ಮನ್ಯಾಗ ಬೈಸಿಗೋ ಬೇಕ ಅಂತ ಅವಂಗ ಮನಿಗೆ ಕರಕೊಂಡ ಹೋಗೋದ ಬಿಟ್ಟ ಬಿಟ್ಟಿದ್ದೆ.
ಇನ್ನ ಇವತ್ತ ಇಷ್ಟ ವರ್ಷದ ಮ್ಯಾಲೆ ಸಿಕ್ಕಾನ ಹಂಗರ ಇವತ್ತ ರಾತ್ರಿ ಅವನ ಜೊತಿ ಸ್ವಲ್ಪ ಹರಟಿ ಹೊಡಿಬಹುದು ಅಂತ ಡಿಸೈಡ ಮಾಡಿ ಸಂಜಿ ಮುಂದ ಕೌಸ್ತ್ಯಾನ ಮನಿಗೆ ಹೋದೆ. ಒಂದ ಅರ್ಧ ತಾಸ ಬಿಟ್ಟ ಅಂವಾ ಬಂದಾ, ಖರೆ ಹೇಳ್ತಿನಿ ನಾ ಗೊತ್ತ ಹಿಡಿಲಾರದಂಗ ಆಗಿ ಬಿಟ್ಟಿದ್ದಾ, ಸೋಡಾ ಗ್ಲಾಸ್ ಚಸಮಾ ಹೋಗಿ 3 ಪೀಸ ಚಸಮಾ ಬಂದಿತ್ತ, ಜುಟ್ಟಲೇನ ಕೂದ್ಲನೂ ನಾಪತ್ತೆ ಆಗಿದ್ವು, ಕೊಳ್ಳಾಗ ಮಂಗಳಸೂತ್ರ ಮಾಯ ಆಗಿ ಸೊಕೆಸ್ಯಾರ ಚೈನ್ (ಅವಲಕ್ಕಿ ಸರಾ) ಬಂದಿತ್ತ. ಹಣಿ ಭಣಾ-ಭಣಾ ಅನ್ನಲಿಕತ್ತಿತ್ತ, ಒಂಥರಾ more face to wash less hair to comb ಅನ್ನೋಹಂಗ ಆಗಿತ್ತ. ಒಂದ ‘i am STUD’ ಅಂತ ಬರದಿದ್ದ ಟೀ-ಶರ್ಟ, denim ಜೀನ್ಸ ಮ್ಯಾಲೆ ಹಾಕ್ಕೊಂಡ
” ಮತ್ತೇನಲೇ ಅಡ್ಯಾ, ಹೆಂಗ ಇದ್ದಿ ಹಂಗ ಇದ್ದಿ ಅಲ್ಲಲೇ ಮಗನ, ಲಗ್ನ ಆದರೂ ಮೈ ಹಿಡಿಲಿಲ್ಲಾ ಅಲಾ” ಅಂತ ನನಗ ಕೈಕೊಟ್ಟ ಅಪಗೊಳ್ಳಿಕ್ಕೆ ಹೋದಾ, ಆದ್ರ ಅವನ ದಿಂದಾಗ ಇರೋ ಹೊಟ್ಟಿ ಅಡ್ಡ ಬಂತ. ಮೊದ್ಲ ಒಂದ ಹೋಳ ಅಡಿಕೆ ಹಾಕಲಾರದಾಂವ ಬಹುಶಃ ಗುಟಕಾ ತಿನ್ನಲಿಕ್ಕೆ ಶುರು ಮಾಡಿದ್ದಾ ಕಾಣತದ ಬಾಯಾಗ ಖಮ್ಮ ಅಂತ ಮಾಣಿಕಚಂದದ ವಾಸನಿ ಬರಲಿಕತ್ತ. ಹಲ್ಲ ಅನ್ನೊವು ಶಗಣ್ಯಾಗಿನ ಬಳ್ಳೊಳ್ಳಿ ಆಗಿದ್ವು. ಅಲ್ಲಾ ಅವು ಅಂತೂ ಇವತ್ತಿಲ್ಲಾ ನಾಳೆ ಹಂಗ ಆಗೋವ ಇದ್ವು ಬಿಡ್ರಿ. ದಿವಸಾ ಪಂಚಗವ್ಯ ತಿಂದಿದ್ರು ಹಂಗ ಆಗತಿದ್ವು ಆ ಮಾತ ಬ್ಯಾರೆ, ವಾಸನೆರ ಛಲೋ ಬಂತಲಾ ಅಂತ ಖುಷಿ ಆತ. ಹನಮ್ಯಾ ಒಂಥರಾ ನಮ್ಮ ಕಾಕಾನ ವಾರ್ಗಿ ಕಂಡಂಗ ಕಾಣತಿದ್ದಾ.
“ಏ ನಡ್ರಿಲೇ, ಎಲ್ಲೇರ ಸಾವಜಿ ಊಟಕ್ಕ ಹೋಗೊಣ, ಭಾಳ ದಿವಸಾತ ಖೀಮಾ ಬಾಲ್ಸ ತಿನ್ನಲಾರದ” ಅಂತ ಅಂದಾ. ನನಗ ಒಮ್ಮಿಂದೊಮ್ಮೆಲೇ ಎದಿ ಧಸಕ್ ಅಂತ. ಇವತ್ತ ಮಂಗಳವಾರ ಗಣಪತಿ ಗುಡಿಗೆ ಕರಿತಾನ ಅಂದ್ರ ಈ ಮಗಾ ಸೀದಾ ಸಾವಜಿ ಖಾನಾವಳಿ ಅಂದಾ. ಅಲ್ಲಾ, ಕಾಲೇಜನಾಗ ಜೀವಶಾಸ್ತ್ರ ತೊಗೊಂಡ್ರ ಜೊಂಡಿಗ್ಯಾ ಕೊಲ್ಲ ಬೇಕಾಗತದ ಅಂತ ಸ್ಟ್ಯಾಟ್ಸ ತೊಗೊಂಡಿದ್ದಾ, ಈಗ ನೋಡಿದ್ರ ಮಟನ್ ಖೀಮಾ ಬಾಲ್ಸ ಅಂತಾನಲ್ಲೆ ಅನಸ್ತು.
“ಲೇ, ಏನ್ ಮಾತಾಡತಿ ಮಗನ, ನೀ ಯಾವಗಿಂದ ಸಾವಜಿ ಹಚಗೊಂಡಿಲೇ,ಅದು ಖೀಮಾ ಬಾಲ್ಸ ಅಂತಿ ಅಲಾ?” ಅಂದೆ. “ಅದರಾಗ ಏನ ಆತಲೇ, ಯಾಕ ನಾ ಮನುಷ್ಯಾ ಅಲ್ಲೇನ?” ಅಂತ ನನ್ನ ಡುಬ್ಬಾ ಹೊಡದ ಕರಕೊಂಡ ಹೋದಾ. “ಇನ್ನೇನೈತಲೇ ಜೀವನದಾಗ, ಛಲೋ ನೌಕರಿ ಸಿಕ್ಕತು, ಒಂದ ಹೆಂಡತಿ, ಒಬ್ಬಕಿನ ಮಗಳು ಈಗ ಎಂಜಾಯ್ ಮಾಡಲಾರದ ಮತ್ತ ಯಾವಾಗ ಮಾಡಬೇಕ ಮಗನ” ಅಂತ ನನಗ ತಿರಗಿ ಕೇಳಿದಾ. ಮುಂದ ಅಂವಾ ಸಾವಜಿ ಖಾನಾವಳಿ ಒಳಗ ಎರಡ ಕೆ.ಎಫ್ ಸ್ಟ್ರಾಂಗ್, ಹಾಫ್ ಪ್ಯಾಕ್ ಕಿಂಗ್, ಅಂಡಾ ಕರಿ,ಚಿಕನ್ 65 ಬೊನಲೆಸ್, ಒಂದ ಪ್ಲೇಟ ಖೀಮಾ ಬಾಲ್ಸ ಹೊಡದ ಅಂವಾ ಉಂಡದ್ದ ನೋಡಿ ನಾ ಗಾಬರಿ ಆದೆ. ಮನಿಗೆ ಹೋಗಿ ನಾನ ಪಂಚಗವ್ಯ ತೊಗೊಬೇಕ ಹಂಗ ಅನಸಲಿಕತ್ತ. ಕಾಲೇಜನಾಗ ಇದ್ದಾಗ boiled egg ತಿಂದರ ಮೈ ಹಿಡಿತಿ ಅಂತ ಯಾರೊ ಹೇಳಿದಾಗ, ನಾ ಸಾಯ್ತೇನಿ ಆದ್ರ ತತ್ತಿ ಮುಟ್ಟಂಗಿಲ್ಲಾ ಅಂದೋವಾ ಇವತ್ತ ಆ ತತ್ತಿ ಅವ್ವಗ ಕೈ ಹಚ್ಚಿದ್ದಾ. ಅವನ ಮುಂದ ನಾನ ಭಾಳ ಸುಧಾರಿಸದಂವಾ ಅನಸಲಿಕತ್ತ. ಅಂತೂ ನಮ್ಮ ಹನಮ್ಯಾ ಹೊಚ್ಚಲ ದಾಟಿದಾ ತೊಗೊ ಅಂತ ಹಂಗ ಸಮಾಧಾನನು ಆತು. ” ಮತ್ತ ಹುಬ್ಬಳ್ಳಿಗೆ ಬಂದಾಗ ಭೆಟ್ಟಿ ಆಗಲೆ ಮಗನ” ಅಂತ ನಾ ಎರಡ ಹೋಳ ಮಾಣಿಕಚಂದನಾಗಿಂದ ಅಡಕಿ ಹಾಕ್ಕೊಂಡ ನಮ್ಮನಿ ಹಾದಿ ಹಿಡದೆ.
ಇದ ನಮ್ಮ ಹನಮ್ಯಾಂದ ಒಂದs ಕಥೆ ಅಲ್ಲಾ, ಹಂಗ ನಮ್ಮ ಸರ್ಕಲ್ ದಾಗ ಹೊಚ್ಚಲಾ ದಾಟಿದ್ದ ಹನಮ್ಯಾಗೋಳ ಭಾಳ ಮಂದಿ ಇದ್ದಾರ. ನಾವಂತೂ ಜೀವನದಾಗ ನೈಂಟಿ ದಾಟಲಿಲ್ಲಾ ಥರ್ಟಿಕ್ಕಿಂತ ಕೆಳಗ ಇಳಿಲಿಲ್ಲಾ. ಈ ಮಗಾ ನೋಡಿದ್ರ ಡೈರೆಕ್ಟ ಬಾಟಲಿ ಲೇವಲಗೆ ಬಂದಾನಲಾ ಅಂತ ಆಶ್ಚರ್ಯ ಆತ, ಹಂಗ ಖುಷಿನೂ ಆತ. ಹಿಂಗ ಕಾಲೇಜನಾಗ ಭಾಳ ಸಂಬಾವಿತ ಇದ್ದ, ಒಂದ ಚಟಾ ಇರಲಾರದವರು ಇವತ್ತ ಚಟ ಚಕ್ರವರ್ತಿಗಳ ಆಗ್ಯಾರ. ಒಂದಿಷ್ಟ ಮಂದಿ ಅತೀ ಚಟಾ ಮಾಡಿ ಚಟ್ಟಾ ಕಟ್ಗೊಂಡ ಮ್ಯಾಲೆನೂ ಹೋಗ್ಯಾರ. ಇವತ್ತ ಹಿಂಗ ಜೀವನದಾಗ ಎಲ್ಲಾ ಚಟಾನೂ ಮಾಡೋದ ಒಂದ ಟ್ರೆಂಡ್- ಲೈಫ್ ಸ್ಟೈಲ್ ಆಗೇದ. ಹಿಂದಿನ ಸಂಪ್ರದಾಯ, ಸಂಸ್ಕ್ರತಿ ಎಲ್ಲಾ ಔಟ ಡೇಟೆಡ್ ಆಗ್ಯಾವ, ಇಲ್ಲಾ ಮನಿ ಪೂರ್ತೇಕ ಉಳದಾವ. ಇವತ್ತ ಜೀವನ ಹೊರಗೊಂದು ಒಳಗೊಂದು ಅಂತಾರಲಾ ಹಂಗ ಆಗೇದ. ಇನ್ನೊಂದ ಸ್ವಲ್ಪ ದಿವಸಕ್ಕ, ಅಂದ್ರ ನಾವು ನಮ್ಮ ಹನಮ್ಯಾನ ಹಂತಾವರು ಮುದಕರಾದಾಗ ಹೊರಗಿನ ಸಂಸ್ಕೃತಿನ ಒಳಗ ಬಂದರು ಬರಬಹುದು. ಜನಾ ಈಗ ಯಾರರ ಸಂಧ್ಯಾವಂದನಿ ಮಾಡ್ತಾನ ಅಂದ್ರ ಹುಬ್ಬ ಏರಸ್ತಾರ, ಇನ್ನ ಪಂಚಗವ್ಯ ಅಂದ್ರ ಏನು ಅಂತ ಹೇಳಲಿಕ್ಕೂ ನಮಗ ನೆನಪ ಇರಂಗಿಲ್ಲಾ.
ಇದನ್ನ ನಾವು ನಮ್ಮ ಗ್ರೌಥ ಅನ್ನಬೇಕೂ ಇಲ್ಲಾ ಗ್ಲೊಬಲೈಸೇಶನ್ ಪರಿಣಾಮ ಅನ್ನಬೇಕೊ, ಇಲ್ಲಾ “ಕಾಲಾಯ ತಸ್ಮೈ ನಮಃ ಅಂತ” ಸುಮ್ಮನ ನಮ್ಮ ಹಳೇ ಸಂಪ್ರದಾಯಕ್ಕ ‘ಎಳ್ಳೂ ನೀರ ಬಿಟ್ಟ ಬಿಡಬೇಕೋ’ ಅದನ್ನ ನಾವ ಡಿಸೈಡ ಮಾಡಬೇಕು….ಹಂಗ ನಾ ಏನ್ ಸಂಪನ್ನ ಅಂತ ನಮ್ಮ ಹನಮ್ಯಾನ ಬಗ್ಗೆ ಬರದಿಲ್ಲಾ. ನನಗು ಒಂದಿಷ್ಟ ಮಂದಿ “ಆಡ ಮುಟ್ಟಲಾರದ ತೊಪ್ಪಲ ಇಲ್ಲಾ, ಆಡ್ಯಾ ಮಾಡಲಾರದ ಚಟಾ ಇಲ್ಲಾ” ಅಂತ ಮಾತಾಡ್ತಾರ. ಇರಲಿ ಅದರ ಬಗ್ಗೆ ಮತ್ತ ಯಾವಾಗರ ಬರೆಯೋಣಂತ.