ಹಾಡಿದ್ದ ಹಾಡೋ ಕಿಸಬಾಯಿ ದಾಸ……..

ಇತ್ತಿಚಿಗೆ ಮುಂಜಾನೆ ಎದ್ದ ಪೇಪರ ತಗದರ ಸಾಕ ಬರೇ ಭಿನ್ನಮತದ ಸುದ್ದಿನ ತುಂಬಿರತದ, ಅದರಾಗ ಮಾತ -ಮಾತಿಗೆ ಹೈಕಮಾಂಡ ಅಂತ ದಿಲ್ಲಿ ಮಂದಿನ್ನ ಕರಸ್ತಾರ, ಅವರ ಇಲ್ಲೆ ಬಂದ ಉದ್ದಹುರಿಯೋದು ಅಷ್ಟರಾಗ ಅದ. ಖರೇ ಅಂದ್ರ ನಮ್ಮ ರಾಜ್ಯದ ರಾಜಕೀಯ ಹದಗೆಡಸಿದ್ದ ಈ ದಿಲ್ಲಿ ಹೈಕಮಾಂಡನವರು. ಅವರಿಗರ ಸ್ವಂತ ಬುದ್ಧಿ ಇಲ್ಲಾ, ಲೋಕಲ್ ಪಾಲಿಟಿಕ್ಸ ತಿಳಿಯಂಗಿಲ್ಲಾ, ಸುಮ್ನ ಇಲ್ಲೆ ಬಂದ ಯಾರ ಜಾಸ್ತಿ ರೊಕ್ಕಾ ಕೊಡ್ತಾರ ಅವರ ಬಾಲ ಬಡದ ಹೋಗಿ ಬಿಡ್ತಾರ. ಹಗ್ಗ ಹರೆಯಂಗಿಲ್ಲಾ ಕೋಲ್ ಮುರಿಯಂಗಿಲ್ಲಾ ಅನ್ನೊ ಹಂಗ ಈ ಜಂಗಿ ಕುಸ್ತಿ ಯಾವಾಗಲೂ ಚಾಲೂನ ಇರತದ. ಯಾರ, ಯಾವಾಗ, ಯಾರ ಜೊತಿ ಇರತಾರ, ಯಾವಾಗ ಯಾರಿಗೆ ಕೈ ಕೊಡತಾರ ಒಂದು ಗೊತ್ತಾಗಂಗಿಲ್ಲಾ. ಒಟ್ಟ ಎಲ್ಲಾರೂ ಸೇರಿ ಮಂದಿನ್ನ ಮಂಗ್ಯಾ ಮಾಡ್ಲಿಕತ್ತಾರ.
ಅದರಾಗ ರಾಜಕೀಯದಾಗ ಯಾವಾಗ ‘ಆ ಮಠಾ- ಈ ಮಠಾ’ ಅಂತ ನೂರಾ ಎಂಟ ಮಠಾ ಹೊಕ್ಕಂಡ್ವಲಾ ಆವಾಗಿಂದ ಜನರಿಗೆ ಈ ರಾಜಕೀಯ ಅಂದ್ರ ಕಂಠ ಮಟಾ ಬಂದಂಗ ಆಗಿ ಎಲ್ಲಾ ಮಠದವರಿಗೂ ನಾವ ಯಾಕರ ಇವರಿಗೆ ಮತಾ ಕೊಟ್ಟವಿ ಅನಿಸಿ ಹೋಗೆದ. ದಿವಸಾ ಬೆಳಗ ಹರದರ ಒಬ್ಬರಿಲ್ಲಾ ಒಬ್ಬರ ಭಿನ್ನಮತದ ರಾಗ ತಗದ ಬಿಟ್ಟಿರತಾರ.
ಮೊನ್ನೆ ನಮ್ಮ ಕಾಡಶಿದ್ದೇಶ್ವರ ಕಾಲೇಜನಾಗ ‘ಭಿನ್ನಮತ ಶಮನ’ ಅಂತ ಒಂದ ಅಣಕು ಕಾರ್ಯಕ್ರಮ ಇಟಗೊಂಡಿದ್ದರು. ಹಂಗ ಪಾರ್ಲಿಮೆಂಟನ ಅಣಕು , ವಿಧಾನಸಭಾದ್ದ ಅಣಕು ಈಗೆಲ್ಲಾ ಹಳೆದ ಆತು, ಈಗ ಮಜಾ ಏನಿದ್ದರು ರೂಲಿಂಗ್ ಪಾರ್ಟಿ ಭಿನ್ನಮತದ್ದ ಅಂತ ಹೇಳಿ ಕಾರ್ಯಕ್ರಮ ಫಿಕ್ಸ ಮಾಡಿದ್ದರು. ನಂಗ ಫೋನ್ ಮಾಡಿ “ಸಾಹೇಬರ, ನೀವು ಬಂದ ಹೈಕಮಾಂಡ್ ರೋಲ್ ಮಾಡಿ ಈ ಭಿನ್ನಮತ ಬಗಿಹರಸಬೇಕು” ಅಂತ ಕೇಳ್ಕೊಂಡರು. ನಾ ಹೈಕಮಾಂಡ್ ರೋಲ್ ಅಂದ ಕೂಡಲೇನ ಅಗದಿ ಖುಶ್ ಆಗಿ ” ಮತ್ತ ನನಗ ಏನ ಕೊಡ್ತಿರಿ?” ಅಂದೆ, ಅಲ್ಲಾ ಹೈಕಮಾಂಡ್ ಅಂದ ಮೇಲೆ ಕೈ ಬೆಚ್ಚಗ ಆಗಬೇಕಲಾ?
“ಸರ್, ಇದ ಖರೆ-ಖರೆ ಭಿನ್ನಮತ ಅಲ್ರಿಪಾ, ಕಾಲೇಜ ಹುಡುಗರ ಅಣಕು ಕಾರ್ಯಕ್ರಮ. ಹಂಗ ಬಂದ ಹುಡುಗರಿಗೆ ನಾಲ್ಕ ಬುದ್ಧಿ ಮಾತ ಹೇಳಿ ಹೋಗರಿ” ಅಂದರು.
ಆತ ತೊಗೊ ಒಟ್ಟ ಹೈಕಮಾಂಡ್ ಅಂತ ಕಿಮ್ಮತ್ತ ಕೊಟ್ಟ ಕರದಾರಲಾ ಅಂತ ಹೋದೆ. ಅಲ್ಲೆ ಎರಡೂ ಪಾರ್ಟಿಯವರು ತಮ್ಮ-ತಮ್ಮ ಸಪೋರ್ಟ ಬಗ್ಗೆ ಹೇಳಿಲಿಕತ್ತರು. ಅದರಾಗ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅನ್ನೊಂವಾ ಅಂತೂ ನಂಗ ಏನರ ಸಿ.ಎಮ್. ಮಾಡಲಿಲ್ಲಾ ಅಂದರ ನಾ ಪಾರ್ಟಿನ ಬಿಡತೇನಿ, ನಾ ನನ್ನ ಮ್ಯಾಲಿನ ಆರೋಪ ಒಂದೊಂದ ಡಿನೊಟಿಫೈ ಮಾಡಸಲಿಕತ್ತೇನಿ. ನಾ ಮನಸ ಮಾಡಿದರ ಈ ಸರ್ಕಾರ ಬಿದ್ದ ಹೋಗ್ತದ ಅಂತೇಲ್ಲಾ ಡೈರಕ್ಟ ಧಮಕಿ ಕೊಟ್ಟಾ. ಇನ್ನ ಈಗ ಮುಖ್ಯಮಂತ್ರಿ ಇದ್ದೊಂವಾ, ನಾ ನನಗ ಸ್ವಂತ ಬುದ್ಧಿ ಇಲ್ಲಾ ಅಂದ್ರು ನಾಲ್ಕ ಮಂದಿ ಹಳೆ ಮುಖ್ಯಮಂತ್ರಿಗಳನ್ನ ( ಅವರ ಯಾ ಪಕ್ಷದವರರ ಇರವಲ್ಲರಾಕ ) ಕೇಳ್ಕೊಂಡ ಎಷ್ಟ ಕಷ್ಟ ಬಂದರು ಸಿಟ್ಟಿಗೆ ಏಳಲಾರದ, ಹಿಂತಾ ಬರಗಾಲದಾಗು ನಕ್ಕೋತ ಆಳಲಿಕತ್ತೇನಿ, ನಂಗೇನರ ಏನರ ಚೇಂಜ್ ಮಾಡಿದರ ರಾಜ್ಯದಾಗ ಗೌಡ್ರ ಗದ್ಲ ಆಗತದ ಅಂತ ಹೆದರಿಸಿದಾ.
ಎರಡು ಕಡೆದವರು ಹಾಡಿದ್ದ ಹಾಡೊ ಕಿಸಬಾಯಿ ದಾಸ ಅಂತ ಹೇಳಿದ್ದ ಹೇಳಿದರು. ನನಗ ದಿನಾ ಒಂದಕ್ಕೂ ಇದನ್ನ ಕೇಳಿ- ಕೇಳಿ, ಓದಿ- ಓದಿ ತಲಿ ಕೆಟ್ಟಿತ್ತು. ಪಾಪ, ಆ ಕಾಲೇಜ ಹುಡಗರ ಮ್ಯಾಲೆ ಈ ಪಾರ್ಟಿ ಲೀಡರ್ಸದ್ದ ಸಿಟ್ಟ ತಗದ ನಾ ಹೈಕಮಾಂಡ ಅನ್ನೋದನ್ನ ಮರತ, ಒಬ್ಬ ಸಾಮಾನ್ಯ, ಶೋಷಿತ,ನಿರಾಶ್ರಿತ, ಜಿಗೂಪ್ಸೆ ಹೊಂದಿದೆ ಮತದಾರನಗತೆ
” ಲೇ ನಿಮ್ಮೌರ, ಸಾಕಲೆ ನೀವ ಆಳಿದ್ದ, ಅವನೌನ ನಿಮಗ ಒಟ ಕೊಟ್ಟ ನಮಗ ಬುಟ್ಟಿಗಟ್ಟಲೇ ತಿಂದಂಗ ಆಗೇದ, ನಮ್ಮ ರಾಜ್ಯಕ್ಕ ನೀವು ಭಾರ ಆಗಿರಲೇ. ನೀವು ಯಾರೂ ಮುಖ್ಯಮಂತ್ರಿ ಆಗೋದ ಬ್ಯಾಡಾ, ಸುಮ್ಮನ ವಿಧಾನಸಭಾ ವಿಸರ್ಜಿಸಿ ಚುನಾವಣೆ ಮಾಡಿ ಮಂದಿಗೆ ತಾವ ಮಾಡಿದ್ದ ತಪ್ಪ ತಿದ್ಕೊಳ್ಳಿಕ್ಕೆ ಒಂದ ಚಾನ್ಸ್ ಕೊಡ್ರಿ. ಮಾತ ಮಾತಿಗೆ ದಿಲ್ಲಿಯಿಂದ ಹೈಕಮಾಂಡ್ ಅಂತ ಕರದ ನಮ್ಮ ರಾಜ್ಯದ ಮಂದಿಗೆ ಅಸಂಯ್ಯ ಮಾಡಬ್ಯಾಡರಿ. ಹಂಗ್ ಹೈಕಮಾಂಡ್ ಕಡೆ ಖರೇನ ದಮ್ಮ್ ಇದ್ದರ ಇಷ್ಟೋತ್ತಿಗೆ ಸರ್ಕಾರ ಬಿದ್ದರ ಬೀಳಲಿ ಅಂತ ಭ್ರಷ್ಟರನ್ನ ಪಾರ್ಟಿಯಿಂದ ಒದ್ದ ಓಡಸಿ ಮತ್ತ ಇಲೆಕ್ಷನ ಮಾಡ್ತಿದ್ದರು, ಸಾಕ ಮುಗಸರಿ ನಿಮ್ಮ ನಾಟಕ.” ಅಂತ ಕೈ ಮುಗದೆ.
ಅಲ್ಲೆ ಸೇರಿದ್ದ ಎಲ್ಲಾ ಹುಡುಗರು, ಮಾಸ್ತರು ತಮ್ಮ-ತಮ್ಮ ಭಿನ್ನಮತ ಮರತ ಅಗದಿ ನಾ ಅವರ ಮನಸ್ಸಿನಾಗಿಂದ ಮಾತ ಹೇಳಿದೆ ಅನ್ನೊ ಹಂಗ ಚಪ್ಪಾಳೆ ಹೊಡದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ