ಮೊನ್ನೆ ಮುಂಜ ಮುಂಜಾನೆ ನಾ ಇನ್ನೇನ ಗಾಡಿಗೆ ಕಿಕ್ ಹೊಡದ ಆಫೀಸಿಗೆ ಹೋಗಬೇಕ ಅಂತ ಗೇಟ ತಗಿಯೊದಕ್ಕ ಕಿಲ್ಲೇದಾಗಿನ ಗಾಯತ್ರಿ ಮೌಶಿ ಆಟೊ ತಗೊಂಡ ಇಳದ್ಲು, ಅಕಿ ಬಂದಿದ್ದ ಸ್ಪೀಡ್ ನೋಡಿದರ ಏನೋ ಎಮರ್ಜನ್ಸಿ ಆಗಿರಬೇಕ ಅಂತ
’ಏನ ಆತ ಮೌಶಿ, ಮುಂಜ ಮುಂಜಾನೆ ಎದ್ದ ಬಂದಿಯಲಾ, ಏನ ಹಂತಾ ಗಡಬಡಿ’ ಅಂತ ನಾ ಕೇಳೊ ಪುರಸತ್ತ ಇಲ್ಲದ
’ನಿನ್ನ ಹೆಂಡತಿ ಹೊರಗ ಇದ್ದಾಳೊ ಇಲ್ಲಾ ಒಳಗ ಇದ್ದಾಳೊ ಅದನ್ನ ಮೊದ್ಲ ಹೇಳ’ಅಂತ ಅಗದಿ ಒಂದ ಉಸಿರಿನಾಗ ಕೇಳಿದ್ಲು. ನಾ ಇಕಿ ಏನ ಕೇಳಲಿಕತ್ತಾಳ ಅಂತ ತಿಳಿಲಾರದ
’ಏ, ಅಕಿ ಇಲ್ಲೆ ಹಿತ್ತಲದಾಗ ಇದ್ದಾಳ, ಯಾಕ ಏನಾತ?’ಅಂತ ನಾ ಕೇಳಿದೆ.
’ಲೇ, ದನಾ ಕಾಯೋನ ನಿನ್ನ ಹೆಂಡ್ತಿದ ಡೇಟ್ ಇತ್ತಂತ ಅದಕ್ಕ ಕೇಳಿದೆ ಹೊರಗ ಆಗ್ಯಾಳೊ ಇಲ್ಲಾ ಒಳಗ ಇದ್ದಾಳೊ ಅಂತ’ ಅಂತ ನನಗ ಜೋರ ಮಾಡಿದ್ಲು.
ನಂಗ ಒಮ್ಮಿಕ್ಕಲೇ ಏನ ಹೇಳಬೇಕ ಗೊತ್ತಾಗಲಿಲ್ಲಾ ಕಡಿಕೆ ತಲಿಕೆಟ್ಟ
’ಅದೇಲ್ಲಾ ನಂಗೇನ ಗೊತ್ತ….ನಿನ್ನೆ ರಾತ್ರಿ ಅಂತು ಒಳಗ ಇದ್ದಳು’ ಅಂತ ಅಂದ ಬಿಟ್ಟೆ..ಅಕಿ ಸಿಟ್ಟ ನೆತ್ತಿಗೇರತ ಭಡಾ,
’ಲೇ ಮಂಗ್ಯಾ ನಿನ್ನೆ ರಾತ್ರಿ ಒಳಗಿ ಇದ್ದಳು ಅಂದರ ಏನ ಅರ್ಥ’ಅಂತ ನಂಗ ಜೋರ ಮಾಡಿದ್ಲು. ನಾ ಮತ್ತ ಅಕಿಗೆ
’ಇಲ್ಲವಾ ನಮ್ಮವ್ವಾ, ನಿನ್ನೆ ರಾತ್ರಿ ಅಕಿ ನಾಲ್ಕೈದ ಮನಿಗೆ ಅರಿಷಣ ಕುಂಕಮಕ್ಕ ಹೋಗಿದ್ಲು, ಅದಕ್ಕ ಅಕಿ ಒಳಗಿದ್ಲು ಅಂತ ಹೇಳಿದೆ’ ಅಂತ ಕ್ಲ್ಯಾರಿಫಿಕೇಶನ್ ಕೊಟ್ಟೆ. ಏನ ಜನಾsಪಾ ಅಂತೇನಿ ಎಲ್ಲಾದಕ್ಕೂ ಡಬಲ್ ಮೀನಿಂಗ ಹುಡಕತಾರ.
ಕಡಿಕೆ ನಮ್ಮ ಮೌಶಿ ನನ್ನ ಸೈಡ ಸರಿಸಿ ಭಡಾ ಬಾಗಲಾ ದುಗಿಸಿಕೊಂಡ ಸೀದಾ ಮನಿ ಒಳಗ ಹೊಕ್ಕೋಕಿನ ಪ್ರೇರಣಾಗ ಓದರಿ ಕೇಳಿ ಬಿಟ್ಲು.
ಅಕಿ ಹಿತ್ತಲದಾಗಿಂದ ಬಾಯಾಗ ಬ್ರಶ್ ಇಟಗೊಂಡ ’ನಾ ಒಳಗ ಇದ್ದೇನಿ ಮೌಶಿ’ ಅನ್ನೋದ ತಡಾ
’ಭಾಳ ಛಲೋ ಆತ್ವಾ ನಮ್ಮವ್ವಾ, ಲಗೂನ ನಾಲ್ಕ ತಂಬಗಿ ನೀರ ಹಾಕ್ಕೊಂಡ ಕಿಲ್ಲೇಕ್ಕ ಬಾ, ಅಲ್ಲೇ ನಮ್ಮ ನಿಗೇಣ್ಣಿ ಮನಿ ಒಳಗ ದೇವರ ಊಟ ಅದ ಇವತ್ತ, ಹಿತ್ತಲಗೊರ್ಜಿ ಮುತೈದಿ ಆಯ್ತ ವೇಳ್ಯಾಕ್ಕ ಹೊರಗ ಆದೆ ಅಂತ ಕೈಕೊಟ್ಟ ಬಿಟ್ಟಾಳ, ನೀ ಒಳಗಿದ್ದಿಯಲ್ವಾ ಬಾ’ ಅಂತ ಅಗದಿ ದೈನಾಸ ಪಟ್ಟಳು.
ತೊಗೊ ನನ್ನ ಹೆಂಡ್ತಿ ಫುಲ್ ಖುಶ್ ಆಗಿ ಬಿಟ್ಟಳು, ಅಕಿಗೆ ಹಿಂಗ ಬಿಟ್ಟಿ ನೇವಾ ಸಿಕ್ಕರ ಸಾಕ ಹೊರಗ ಹೊಗಲಿಕ್ಕೆ ಯಾವಾಗಲೂ ತಯಾರ ಇರ್ತಾಳ. ಅದರಾಗ ಹಿಂಗ ಹಿತ್ತಲಗೊರ್ಜಿ ಅಂತ ಕರದಾರ ಅಂದರ ಇಕಿದ ಡಿಮಾಂಡ್ ಇನ್ನೂ ಜಾಸ್ತಿ.
‘ಹಿತ್ತಲಗೊರ್ಜಿ ಮುತ್ತೈದಿ’ ಅಂದರ ‘ಯಾ ಮುತ್ತೈದಿಗೆ ಅಂದರ ಮುತ್ತೈದಿ ಅಂದ ಮ್ಯಾಲೆ ಗಂಡ ಅಂತೂ ಇರಬೇಕ ಆ ಮಾತ ಬ್ಯಾರೆ, ಇನ್ನ ತವರಮನ್ಯಾಗ ಅವ್ವಾ-ಅಪ್ಪಾ ಇನ್ನೂ ಇರ್ತಾರೋ, ಅತ್ತಿಮನ್ಯಾಗ ಅತ್ತಿ-ಮಾವಗ ಅಕಿ ಇನ್ನೂ ಜೀವಂತ ಇಟ್ಟಿರತಾಳೋ ಹಂತಾಕಿಗೆ ಹಿತ್ತಲಗೊರ್ಜಿ ಮುತ್ತೈದಿ’ ಅಂತ ಕರಿತಾರ. ಹಿಂತಾ ಮುತ್ತೈದಿಯರು ಸಾವಿರಕ್ಕ ಒಬ್ಬರ ಸಿಗತಾರ. ಹಂತಾವರ ಒಳಗ ನನ್ನ ಹೆಂಡತಿನೂ ಒಬ್ಬಕಿ. ಅಲ್ಲಾ ಹಂಗ ಇತ್ತೀಚಿಗೆ ಎಲ್ಲಾ ಕನ್ಯಾನೂ ನನಗ ಅತ್ತಿ ಇಲ್ಲದ ಮನಿನ ಬೇಕ ಅಂತ ಹಟಾ ಹಿಡದದ್ದಕ್ಕ ’ಹಿತ್ತಲಗೊರ್ಜಿ ಮುತೈದಿ’ಯರ ಸಂಖ್ಯೆ ಕಡಮಿ ಆಗಿ ನನ್ನ ಹೆಂಡತಿ ಹಂತಾವರದ ಡಿಮಾಂಡ್ ಜಾಸ್ತಿ ಆಗೇದ ಇಷ್ಟ.
ಇನ್ನ ಈ ಹಿತ್ತಲಗೊರ್ಜಿ ಮುತ್ತೈದಿ ಕೆಲಸ ಏನಪಾ ಅಂದರ ಯಾರ ಮನಿ ಒಳಗ ಮದುವಿ, ಮುಂಜವಿ ಟೈಮ ಒಳಗ ದೇವರ ಊಟಾ ಅಂತ ದೇವತಾ ಕಾರ್ಯಕ್ರಮ ಮಾಡ್ತಾರಲಾ ಆವಾಗ ಹಿಂತಾ ಮುತ್ತೈದಿನ್ನ ಕರದ ಅಕಿ ಕೈಲೆನ ಒಳಕಲ್ಲ, ಬೀಸುಕಲ್ಲ ಮತ್ತ ಹಿಟ್ಟಿನ ಗಣಪತಿ ಪೂಜಾ ಮಾಡಸಸತಾರ. ಹಿಂಗಾಗಿ ಯಾರದ ಮನ್ಯಾಗ ದೇವತಾ ಕಾರ್ಯಕ್ರಮ ಇದ್ದಾಗ ಒಬ್ಬ ಹಿತ್ತಲಗೊರ್ಜಿ ಮಸ್ಟ್. ಅವರಿಲ್ಲದ ನಡೆಯಂಗೇಲಾ.
ಇನ್ನ ಮನಿ ತನಕಾ ಆಟೋ ತೊಗೊಂಡ ಬಂದ ಮುತ್ತೈದಿ ಅಂತ ಕರದಾರ ಅಂದರ ನನ್ನ ಹೆಂಡತಿ ಬಿಡತಾಳ, ಭಡಾ ಭಡಾ ಶಾಸ್ತ್ರಕ್ಕ ಒಂದ ನಾಲ್ಕ ತಂಬಗಿ ನೀರ ಹಾಕ್ಕೊಂಡ ಅವರ ಮೌಶಿ ಜೊತಿ ರೈಟ ಅಂತ ಆಟೊ ಹತ್ತಿ ಜಿಗದ ಬಿಟ್ಟಳು. ಅದರಾಗ ನನ್ನ ಹೆಂಡ್ತಿದ ’ಹಿತ್ತಲಗೊರ್ಜಿ ಮುತ್ತೈದಿ’ ಆಗಲಿಕ್ಕೆ ಇನ್ನೊಂದ ಕಂಡಿಶನ್ ಇತ್ತ, ಅಕಿಗೆ ಮುತ್ತೈದಿ ಅಂತ ಕರದ ಬರೇ ಒಂದ ಜಂಪರ್ ಪೀಸ್ ಉಡಿ ತುಂಬಿದರ ನಡಿತಿದ್ದಿಲ್ಲಾ, ಸೀರಿನ ಹಾಕಿ ಉಡಿ ತುಂಬಬೇಕ, ಬೇಕಾರ ಜಂಪರ್ ಪೀಸ್ ಇಲ್ಲದಿದ್ದರು ನಡಿತಿತ್ತ. ಅಲ್ಲಾ ನಾ ಮೊದ್ಲ ಹೇಳಿದ್ನೇಲ್ಲಾ ಹಿತ್ತಲಗೊರ್ಜಿ ಮುತ್ತೈದಿಯರ ಸಿಗೊದ ಎಷ್ಟ ರೇರ್ ಅಂತ ಇನ್ನ ಹಂತಾದರಾಗ ನನ್ನ ಹೆಂಡತಿ ಹಿಂತಾ ಆಪುರ್ಚುನಿಟಿ ಸಿಕ್ಕರ ಬಿಡ್ತಾಳ. ಬರೋಬ್ಬರಿ ವಸೂಲ ಮಾಡೆ ಕೈತೊಳ್ಕೊಳೊಕಿ.
ನಾ ಖರೇ ಹೇಳ್ತೇನಿ ಹಂಗ ಓಲ್ಡ ಹುಬ್ಬಳ್ಳಿ, ಕಿಲ್ಲೆ, ದೇಸಾಯರ ಗಲ್ಲಿ, ಗೋಕುಲ್ ರೋಡ್ ಈ ಎಲ್ಲಾ ಕಡೆನೂ ನನ್ನ ಹೆಂಡ್ತಿ ’ಹಿತ್ತಲಗೊರ್ಜಿ ಮುತ್ತೈದಿ’ ಅಂತ ಭಾರಿ ಫೇಮಸ್ ಆಗಿ ಬಿಟ್ಟಾಳ. ಒಂದಿಷ್ಟ ಮಂದಿ ಅಂತೂ ಅಕಿ ಎಲ್ಲರ ಮಾರ್ಕೇಟನಾಗ ಭೇಟ್ಟಿ ಆದರ ’ನೀ ಆರಾಮ ಇದ್ದೀ ಏನ ಅಂತ ಕೇಳಂಗಿಲ್ಲಾ, ನಿಮ್ಮ ಅತ್ತಿ ಮಾವಾ ಆರಾಮ ಇದ್ದಾರಿಲ್ಲೋ ಅಂತ ಮೊದ್ಲ ಕೇಳ್ತಾರ, ಯಾಕಂದರ ಪಾಪ ಅವರಿಗೆ ನಾಳೆ ನಮ್ಮವ್ವಾ ಅಪ್ಪಗ ಏನರ ಆದರ ಹಿತ್ತಲಗೊರ್ಜಿ ಮುತ್ತೈದಿ ಕೈ ತಪ್ಪಿ ಹೋಗ್ತಾಳಲಾ ಅಂತ ಸಂಕಟಾ, ಅಲ್ಲಾ ಎಲ್ಲಾರೂ ತಮ್ಮ ತಮ್ಮ ಸ್ವಾರ್ಥ ನೋಡ್ಕೋಳೊರ ತೊಗೊಳ್ರಿ.
ಹಂಗ ನಮಗ ಖೂನ ಇಲ್ಲದವರು ಅಂದರ ಬಂಧು-ಬಳಗ ಅಲ್ಲದವರ ಸಹಿತ ನಮ್ಮನಿ ಹುಡ್ಕ್ಯಾಡಕೊಂಡ ಬಂದ ನನ್ನ ಹೆಂಡತಿಗೆ ’ಪುಣ್ಯಾದ್ದ ಕೆಲಸವಾ, ಒಲ್ಲೆ ಅನಬ್ಯಾಡ..ನಮ್ಮ ಪೈಕಿ ಯಾರು ಅತ್ತಿ-ಮಾವ,ಅವ್ವಾ-ಅಪ್ಪಾ ಇದ್ದ ಮುತ್ತೈದಿಯರ ಇಲ್ಲಾ ನೀನ ಬಾ, ಬೇಕಾರ ಕಾರ ಕಳಸ್ತೇವಿ, ಇಲ್ಲಾ ಆಟೋದಾಗ ಬಾ, ಆಟೋದ ರೊಕ್ಕಾ ನಾವ ಕೊಡ್ತೇವಿ’ ಅಂತ ದೈನಾಸ ಪಟ್ಟ ಕರಕೊಂಡ ಹೋಗ್ತಾರ.
ಕೆಲವೊಬ್ಬರಂತು ಮನಿ ಬಾಗಲತನಕಾ ಬಂದ ’ಹಿತ್ತಲಗೊರ್ಜಿ ಮುತ್ತೈದಿ’ ಇದ್ದಾರೇನ್ರಿ ಅಂತ ಕೇಳ್ತಾರ. ಏನ ಮಾಡ್ತೀರಿ? ಅಲ್ಲಾ ಹಂಗ ಹಿತ್ತಲಗೊರ್ಜಿ ಮುತ್ತೈದಿ ಆಗಲಿಕ್ಕೆ ಪುಣ್ಯಾ ಪಡದೀರಬೇಕು ಹಂತಾ ಪುಣ್ಯಾ ಅಕಿಗೆ ನನ್ನಿಂದ ಸಿಕ್ಕದ ಆ ಮಾತ ಬ್ಯಾರೆ.
ಹಂಗ ನಿಮ್ಮ ಮನ್ಯಾಗ ಯಾವದರ ಫಂಕ್ಶನ್ ಇದ್ದಾಗ ದೇವರ ಕಾರ್ಯ ಮಾಡಬೇಕಾರ ’ಹಿತ್ತಲಗೊರ್ಜಿ ಮುತ್ತೈದಿ’ ಬೇಕಾರ ಹೇಳ್ರಿ ಮತ್ತ…ನನ್ನ ಹೆಂಡ್ತಿ ಇದ್ದಾಳ. ಹೋಗ್ತ ಬರ್ತ ಗಾಡಿ ಖರ್ಚ್ ಮ್ಯಾಲೆ ಒಂದ ಸೀರಿ ನೆನಪ ಇರಲಿ ಮತ್ತ.
ಕಾಕಾರ ಏನ್ ಬರ್ದಿರಿ
…ಸೂಪರ್… ನಾನೂ ನಮ್ ಭಾಷಾ ಶೈಲಿಯೊಳಗ್ ಯಾರರೆ ಬರದಾ ರೋ ಇಲ್ಲೊ ಅಂತ ಹುಡ್ಕಿದ್ನಿ… ಪೈಲಾ ಕ್ ನಿಮ್ದ್ ಆ ಓ ದಾಕ್ ಸಿಕ್ತು… ಭಾಳ್ ಖುಷಿ ಆತ್ ಓದಿ.. ಹಿಂಗ ಮುಂದ್ದ್ ವರ್ಸ್ ರಿ