ಮೊನ್ನೆ ಸಂಡೇ ಹುಬ್ಬಳ್ಳಿ ಒಳಗ ತಾಲುಕ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತ. ಹಂಗ ನಂಗ ನಮ್ಮೂರಾಗೂ ಸಾಹಿತ್ಯ ಸಮ್ಮೇಳನ ಮಾಡ್ತಾರಂತ ಗೊತ್ತಗಿದ್ದ ಒಂದ ವಾರದ ಹಿಂದ ನಮ್ಮ ದೋಸ್ತ ಒಬ್ಬಂವ ಫೊನ ಮಾಡಿ
“ಏನಪಾ, ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನಕ್ಕ ಬರಲಿಕತ್ತಿ ಇಲ್ಲ? ಹಿಂತಾವಕ್ಕೇಲ್ಲಾ ಬರತೀರಬೇಕಲೇ ನೀ, ಅಂದರ ನಾಲ್ಕ ಮಂದಿಗೆ ಗೊತ್ತಾಗೋದ ನೀನು ಸಾಹಿತಿ ಅಂತ” ಅಂತ ಅಂದಾ. ನಂಗ ಖರೇನ ಅಲ್ಲಿ ತನಕ ಹುಬ್ಬಳ್ಳಿ ತಾಲೂಕ ಸಾಹಿತ್ಯ ಸಮ್ಮೇಳನದ ಬಗ್ಗೆ ಏನೂ ಗೊತ್ತಿದ್ದಿಲ್ಲಾ ಮತ್ತ ನಂಗ ಯಾರ ಕರದಿದ್ದಿನೂ ಇಲ್ಲಾ ಆ ಮಾತ ಬ್ಯಾರೆ.
ಅಲ್ಲಾ, ನಾ ಎಲ್ಲಿನೂ ಸಾಹಿತಿ ಅಂತ ರಿಜಿಸ್ಟರ ಮಾಡಿಸಿಲ್ಲಾ, ನಾ ಏನಿದ್ದರು unofficial (facebook) ಸಾಹಿತಿ, ಹಿಂಗಾಗಿ organizersಗೆ ನಾ ಪರಿಚಯ ಇದ್ದಿದ್ದಿಲ್ಲಾ. ನಂಗ ಅವರದ ಪರಿಚಯ ಇಲ್ಲಾ. ಆದರ ಇಬ್ಬರಿಗೂ ಕಾಮನ್ ಪರಿಚಯ ಇದ್ದದ್ದ ಅಂದರ ಸಾಹಿತ್ಯ ಒಂದ, ಅದು ನಂಗ ಅಷ್ಟಕ್ಕ- ಅಷ್ಟ ಪರಿಚಯ. ಅದರಾಗ ಹುಬ್ಬಳ್ಳಿ ಸಾಹಿತ್ಯಿಕ ಮಂದಿ ಜಾಸ್ತಿ ಫೇಸಬುಕ್ಕಿನಾಗ ಇಲ್ಲಾ. ಅದರಾಗ ಅವರ ಕೆಂಡಸಂಪಗಿ, ಅವಧಿ ಅಂದರ ಯಾವದೊ ಬುಕ್ ಇಲ್ಲಾ ಮಂಥ್ಲಿ ಮ್ಯಾಗಜೀನ್ ಅಂತ ತಿಳ್ಕೊಂಡಾರ ಹಿಂಗಾಗಿ ಅವರಿಗೆ ನನ್ನ ಹಂಗ officeನಾಗ ಕೂತ ಕೆಲಸಾ-ಬೊಗಸಿ ಬಿಟ್ಟ ಬ್ಲಾಗನಾಗ ಬರೇಯೋ so called ಸಾಹಿತಿಗಳ ಪರಿಚಯ ಇಲ್ಲಾ. ಅಲ್ಲಾ ಅದರಾಗ ಅವರದೇನ ತಪ್ಪ ಇಲ್ಲ ಬಿಡ್ರಿ.
ಇನ್ನ ಹುಬ್ಬಳ್ಳಿ ಒಳಗs ಸಾಹಿತ್ಯ ಸಮ್ಮೇಳನ, ಅವರ ಕರದಿರಲಿ ಬಿಡಲಿ ಎಷ್ಟ ಅಂದರೂ ನಮ್ಮೂರಿಂದು, ಒಂದ ರೌಂಡ ಫ್ರೀ ಆದಮ್ಯಾಲೆ ಹೋಗಿ ಬಂದರಾತು ಹೆಂಗಿದ್ದರೂ ಸಂಡೇ ಅಂತ ಡಿಸೈಡ ಮಾಡಿ ನಾ ಹೋಗೊದರಾಗ ಸಂಜಿ ಆಗೇ ಬಿಟ್ಟಿತ್ತ.
ನಾ ಹೋದಾಗ ಇನ್ನೇನ ಸಮಾರೋಪ ಸಮಾರಂಭ ಶುರು ಆಗೋದ ಇತ್ತ, Tea break ಕೊಟ್ಟಿದ್ದರು. ಹೊರಗ ಒಂದಿಷ್ಟ ಸಾಹಿತಿಗೊಳ ಚಹಾದಾಗ ಪಾರ್ಲೆ ಬಿಸ್ಕಿಟ ಎದಕೊಂಡ ತಿನ್ನಲಿಕತ್ತಿದ್ದರು. ಒಂದಿಷ್ಟ ಮಂದಿ ಅಲ್ಲೆ ಹರಟಿ ಹೊಡಿಲಿಕತ್ತಿದ್ದರು. ಹಂಗ ಅವರ ಯಾರು ನಂಗ ಗೊರ್ತ ಹಿಡಿದಿದ್ದರು ನಾ ಗೊರ್ತ ಹಿಡಿಯೊಹಂತಾ ಒಂದಿಷ್ಟ ಮಂದಿ ಇದ್ದರು. ಒಂದ ಕಡೆ ಚಹಾ ಕುಡಕೋತ ನಮ್ಮ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ನಿಂತಿದ್ದರು ಅವರ ಜೊತಿ ಇನ್ನೊಂದಿಬ್ಬರು ಇದ್ದರು. ಅದರಾಗ ಒಬ್ಬರು ಎಲ್ಲಾರಿಗು ಮಾತಾಡಿಸಿ ಮಾತಾಡಿಸಿ ಒಂದ invitation card ಕೊಡಲಿಕತ್ತಿದ್ದರು. ನಾ ಇದೇನಪಾ ಹುಬ್ಬಳ್ಳಿ ಸಾಹಿತ್ಯ ಪರಿಷತನವರ ಎಷ್ಟ ಫಾಸ್ಟ ಇದ್ದಾರಲಾ ಎರಡನೇ ಸಾಹಿತ್ಯ ಸಮ್ಮೇಳನದ ಸಮಾರೋಪದಾಗ ಮೂರನೇ ಸಾಹಿತ್ಯ ಸಮ್ಮೇಳನದ ಆಮಂತ್ರಣ ಕೊಡಲಿಕತ್ತಾರ ಅಂತ ಖರೇನ ಖುಷಿ ಆತ. ಒಂದ ಸ್ವಲ್ಪ ಮುಂದ ಹೋಗಿ ನೋಡಿದರ ಆ ಕಾರ್ಡ ಕೊಡಲಿಕತ್ತೋರು ಸುನಂದಾ ಕಡಮೆಯವರು. ಹಂಗ ನಾ ಅವರನ ಒಮ್ಮೆನೂ ಭೆಟ್ಟಿ ಆಗಿದ್ದಿಲ್ಲಾ ಅವರ ಹೌದಲ್ಲೋ ಅಂತ ಮತ್ತೊಬ್ಬರನ ಕೇಳಿ ಕನಫರ್ಮ ಮಾಡ್ಕೊಂಡ ನಾನಾಗೆ ಅವರಕಡೆ ಹೋಗಿ
“ನಮಸ್ಕಾರ, ಸುನಂದಾ ಕಡಮೆ ಅವರಲಾ?” ಅಂದೆ. ಅವರು
“ಹೌದು, ತಾವು” ಅಂದರು.
“ನಾ ಪ್ರಶಾಂತ ಆಡೂರ” ಅಂದೆ,
ಅವರಿಗೆ ಫ್ಲ್ಯಾಶ್ ಆಗಲಿಲ್ಲ,
ನಾ “ಕುಟ್ಟವಲಕ್ಕಿ- ಪ್ರಶಾಂತ ಆಡೂರ” ಅಂದೆ. ಒಮ್ಮಿಕ್ಕಲೇ ಗೊತ್ತ ಹಿಡಿದರು. ಏ ನಿಮ್ಮ ಪ್ರಬಂಧ ಓದಿ ನಗತಿರ್ತೇವಿ ಅಂತ ಮತ್ತೊಮ್ಮೆ ನಕ್ಕ ಪಟ್ಟ ಅಂತ ಒಂದ ಕಾರ್ಡ ಮ್ಯಾಲೆ ನನ್ನ ಹೆಸರ ಬರಿಲಿಕತ್ತರು. ಅಡ್ಡಿಯಿಲ್ಲಾ ಮೂರನೇ ಸಾಹಿತ್ಯ ಸಮ್ಮೇಳನಕ್ಕರ ನನಗ ಆಮಂತ್ರಣ ಸಿಕ್ಕತು ಅಂತ ನಾ ಅನ್ಕೋಳೊದರಾಗ
“ಜುಲೈ ಹತ್ತಕ್ಕ ಮಧ್ಯಾಹ್ನ ನನ್ನ ಮಗಳ ಕಾವ್ಯಾಂದ ಮದುವಿ, ಸಂಜಿಗೆ ಅಕಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ, ಜಯಂತ ಕಾಯ್ಕಿಣಿಯವರ ಬರ್ತಾರ ತಪ್ಪದ ಬರ್ರಿ” ಅಂತ ಕಾರ್ಡ ಕೈಯಾಗ ಕೊಟ್ಟರು.
ನಂಗ ಇವರ ಮದುವಿಗೆ ಕರದರೊ ಇಲ್ಲಾ ಬುಕ್ ರಿಲೀಸಗೆ ಕರದರೊ ಅಂತ ಕ್ಲೀಯರ ಆಗೋದರಾಗ
“ಮಧ್ಯಾಹ್ನ ಉಟಕ್ಕ ಬರ್ರಿ ಮತ್ತ” ಅಂತ ಕರದರು. ಆವಾಗ ನಂಗ ಕ್ಲಿಯರ ಆತ ಮೊದಲ ಇವರ ಬರೇ ಪುಸ್ತಕ ಬಿಡುಗಡೆಗೆ ಇಷ್ಟ ಕರದಿದ್ದರು ಅಂತ. ಅಷ್ಟರಾಗ ಮತ್ತೊಬ್ಬರ ಯಾರೊ ಬಂದರು ಇವರ ಅವರಿಗೆ ಕಾರ್ಡ ಬರದ ಕೊಡಲಿಕತ್ತರು ಅತ್ತಲಾಗ ಒಳಗ ಕಾರ್ಯಕ್ರಮ ಶುರು ಆತ.
ಮೊದ್ಲಿಗೆ ಒಂದಿಷ್ಟ ವಿವಿಧ ಕ್ಷೇತ್ರದೊಳಗ ಸಾಧನೆ ಮಾಡಿದವರಿಗೆ ಸನ್ಮಾನ, ಒಂದಿಷ್ಟ ಬುಕ್ ಹೋಲಸೇಲಾಗಿ ಬಿಡುಗಡೆ ಮಾಡಿದರು. ನಾ ಒಂದ ಕಡೆ ಹೋಗಿ ಹಿಂದ ಕುತಗೊಂಡೆ. ಎರಡ ಲೈನ ಮುಂದ ನಮ್ಮ ಕುಂ.ವಿ ಅವರ ಕುತಗೊಂಡಿದ್ದರು, ಅರೇ ಇವರ ’ದೇವರ ಹೆಣ’ ಹೊತ್ತವರು ಹುಬ್ಬಳ್ಳಿ ತನಕಾ ಬಂದಾರಲಾ ಅಂತ ಖುಷಿಲೇ ಅವರನ ಹೋಗಿ ಮಾತಾಡಿಸಿದೆ. ನಾ ಏನೋ ಅವರನ ಗೊರ್ತ ಹಿಡದ ಮಾತಾಡಿಸಿದೆ ಆದರ ಅವರೇನ ಪ್ರಶಾಂತ ಆಡೂರ ಅಂದ ಕೂಡಲೇ ಗೊರ್ತ ಹಿಡಿಲಿಲ್ಲಾ ಆಮ್ಯಾಲೆ ನನ್ನ ಫೇಸಬುಕ್ ಒಪನ್ ಮಾಡಿ ಪ್ರೊಫೈಲ ಫೋಟೊ ತೊರಿಸಿದ ಮ್ಯಾಲೆ ” ಓಹೋ, ನೀವು ಅವಧಿಗೆಲ್ಲಾ ಬರಿತಿರಲಾ” ಅಂತ ಕೈಕೊಟ್ಟರು. ಮುಂದ ಅವರs ನನ್ನ ಒಂದಿಬ್ಬರ ಹುಬ್ಬಳ್ಳಿ ಸಾಹಿತಿಗಳಿಗೆ ಪರಿಚಯ ಮಾಡಿಸಿ ಭಾಳ ಆತ್ಮೀಯವಾಗಿ ಮಾತಾಡಿದರು, ಅಷ್ಟರಾಗ ಅವರಿಗೆ ಸ್ಟೇಜ ಮ್ಯಾಲಿಂಗ ಬುಲಾವ ಬಂತ ಅವರ ಸ್ಟೇಜಿಗೆ ಹೋದರು.
ಸಮಾರೋಪ ಸಮಾರಂಭ ಆಫಿಸಿಯಲ್ಲಿ ಶುರು ಆತ. ಮೊದಲ ಸಮ್ಮೇಳನದ ಅಧ್ಯಕ್ಷರಾದ ’ಚುನಾವಣೆಗೆ ನಿಂತ ನಮ್ಮ ಕಡಿಮನಿ ಹನಮಂತ’ಖ್ಯಾತಿಯ ಎಮ್.ಡಿ.ಗೋಗೇರಿಯವರ ಸಮ್ಮೇಳನದ ಬಗ್ಗೆ ಒಂದ ನಾಲ್ಕ ಮಾತಾಡಿದರು.
” ನಾ ಎಂದೂ ಸನ್ಮಾನ, ಪುರಸ್ಕಾರ ಇವಕ್ಕ ಬೆನ್ನ ಹತ್ತಿ ಹೋದೊಂವ ಅಲ್ಲಾ, ನನಗ ಇವರಾಗೆ ಅದು ಅವಿರೋಧವಾಗಿ ನಾನ ಸಮ್ಮೇಳನದ ಅಧ್ಯಕ್ಷ ಆಗಬೇಕು ಅಂತ ಕರದ ಸನ್ಮಾನ, ಪದವಿ ಕೊಟ್ಟಾರ, ನಂಗ ಖರೇನ ಭಾಳ ಖುಷಿ ಅನಸ್ತು. ಹಂಗ ಇವತ್ತ ಯಾವದರ ಸನ್ಮಾನ, ಪ್ರಶಸ್ತಿ ತೊಗೊಬೇಕಂದರ ಏನೇನೋ ಮಾಡಬೇಕಾಗ್ತದ ಆದರ ಇಲ್ಲೆ ಹಂತಾದ ಏನು ಇಲ್ಲಾ. ಅಗದಿ ಆತ್ಮೀಯತೆಯಿಂದ ಕರದು ಸನ್ಮಾನಿಸಿದರು ಅದಕ್ಕ ನಾ ಎಲ್ಲಾರಿಗೂ ಆಭಾರಿ ಇದ್ದೇನಿ. ಒಟ್ಟ ಸಾಹಿತ್ಯ ಸಮ್ಮೇಳನ ಭಾಳ ಛಂದ ಆತು” ಅಂತ ಚಿಕ್ಕ ಆದರ ಚೊಕ್ಕ ಮಾತಾಡಿದರು.
ಮುಂದ ಲೇಖಕಿ ವೀಣಾ ಬನ್ನಂಜೆ ಮಾತಡಲಿಕ್ಕೆ ಬಂದರು. ಅವರದು ಒಂದ ಬುಕ್ ’ಲೋಕಾಂತ’ನೂ ಬಿಡುಗಡೆ ಆಗಿತ್ತ. ಅವರು ಸಾಹಿತ್ಯ ಸಮ್ಮೇಳನದ ಬಗ್ಗೆ ಭಾಳ ಹೆಮ್ಮೆಯಿಂದ ಭಾಳ ಛಂದ ಕಾರ್ಯಕ್ರಮ ಆದ್ವು ಅಂತ ಹೇಳಿ
“ಈಗ ನಾವು ಹೆಂಗ ಸಾಹಿತ್ಯ ಸಮ್ಮೇಳನ ಮಾಡೇವಿ ಹಂಗ ಒಂದ ಸಾಹಿತಿಗಳ ಸಮ್ಮೇಳನ ಮಾಡಬೇಕು, ಬರೇ ಸಾಹಿತಿಗಳನ್ನಿಷ್ಟ ಕರಿಸಿ- ಕೂಡಿಸಿ ಅವರ ಬರೆದಂತೆ ಬದುಕತಾರ ಇಲ್ಲೊ ಕೇಳ್ಬೇಕು, ಅವರ ವ್ಯಕ್ತಿತ್ವ ಮತ್ತ ಪರಿಶುದ್ಧತೆಯನ್ನ ಪ್ರಶ್ನಿಸಬೇಕು. ನಾ ಸಾಹಿತಿಗೊಳ ಎಲ್ಲಾರೂ ಛಲೋನ ಇರ್ತಾರ ಅಂತ ಹೇಳಲಿಕತ್ತಿಲ್ಲಾ, ಆದರ ದುಡ್ಡ ತೊಗೊಂಡ ಬರೇಯೋ ಪತ್ರಕರ್ತರ ಹೆಂಗ ಇದ್ದಾರ ಹಂಗ ದುಡ್ಡ ತೊಗೊಂಡ ಯಾ ಸಾಹಿತಿನೂ ಬರೆಯಂಗಿಲ್ಲಾ” ಅಂತ ಮತ್ತೊಮ್ಮೆ ಮಾರ್ಮಿಕವಾಗಿ ಹೇಳಿದರು.
ಅದೇನ ಆಗಿತ್ತಂದರ ಮಧ್ಯಾಹ್ನ ಗೋಷ್ಟಿ ಒಳಗ ಬನ್ನಂಜೆಯವರು ’ಸಾಹಿತ್ಯ ಅಗದಿ ಪರಿಶುದ್ಧ ಕ್ಷೇತ್ರ, ಪೆಪರನವರು, ಟಿವಿ ಮಾಧ್ಯಮದವರು ಪಾಲಿಟಿಸಿಯನ್ಸ್ ರೊಕ್ಕಾ ಕೊಟ್ಟಂಗ ಅವರ ಬಗ್ಗೆ ಮಾತಾಡ್ತಾರ, ಅವರದ ಇಂಟರ್ವಿವ್ ಮಾಡ್ತಾರ’ ಅಂತ ಅಂದಿದ್ದರಂತ ಅದಕ್ಕ ನಮ್ಮ ಪ್ರಜಾವಾಣಿ ಗೋಪಾಲಕೃಷ್ಣ ಹೆಗಡೆಯವರು ಮುಂದ ತಮ್ಮ ಗೋಷ್ಟಿ ಒಳಗ ’ ಹಂಗೇನಿಲ್ಲಾ, ಎಲ್ಲಾ ಕಡೆ ಭ್ರಷ್ಟರ ಇದ್ದ ಇದ್ದಾರ, ಬೆಂಗಳೂರಾಗೇಲ್ಲಾ ಸಾಹಿತಿಗಳು ರೊಕ್ಕ ತೊಗೊಂಡ ಬರೀತಾರ, ಸಾಹಿತಿಗಳೇಲ್ಲಾ ಏನ ಸಾಚಾ ಅಲ್ಲಾ’ ಅಂತ ಹೇಳಿದ್ದರಂತ. ಹಿಂಗಾಗಿ ಅದಕ್ಕ clarification ಬನ್ನಂಜೆಯವರ ಸಂಜಿ ಮುಂದ ಕೊಟ್ಟಿದ್ದರು. ನಾ ಮಧ್ಯಾಹ್ನ ಹೋಗಲಾರದ ಒಮ್ಮೆ ಸಂಜಿಗೆ ಹೋಗಿದ್ದಕ್ಕ ಇವರ ಮಧ್ಯಾಹ್ನದ ಗೋಷ್ಟಿನ ಕಂಟಿನ್ಯು ಮಾಡ್ಯಾರ ಅಂತ ಲಗೂನ ತಿಳಿಲಿಲ್ಲಾ.
ಅಷ್ಟರಾಗ ನಡಕ ಒಂದ interruption ಬಂತ, ಒಂದಿಷ್ಟ ಮಹಿಳಾ ಮಣಿಗಳು ಒಂದ ಪೇಜ ಮನವಿ ಬರಕೊಂಡ ಸ್ಟೇಜ ಮ್ಯಾಲೆ ಬಂದ ಆ ಮನವಿ ಓದಿ ಅದನ್ನ ಸಮ್ಮೇಳಾನಧ್ಯಕ್ಷರ ಕಡೆ ಕೊಟ್ಟ ಹೋದರು. ಆ ಮನವಿ ಒಳಗ ’ಚುಟುಕ ಸಾಹಿತ್ಯ ಬರೇಯುವ ಮಹಿಳೆಯರನ್ನ ಗುರುತಿಸಿ ಅವರನ್ನ ಸನ್ಮಾನಿಸಬೇಕು, ಮಹಿಳಾ ಸಾಹಿತಿಗಳ ಬರದ ಸಾಹಿತ್ಯವನ್ನ ಸಾಹಿತ್ಯ ಪರಿಷತ್ತಿನವರ ತಾವ ರೊಕ್ಕಾ ಹಾಕಿ ಪ್ರಕಟಿಸಬೇಕು. ಮಹಿಳೆಯರು ಹೆಚ್ಚು ಹೆಚ್ಚು ಹಿಂತಾ ಕಾರ್ಯಕ್ರಮದೊಳಗ ಭಾಗವಹಿಸೊ ಹಂಗ ಅವರನ್ನ ಪ್ರೋತ್ಸಾಹಿಸಬೇಕು…..ಅದು..ಇದು.’ಅಂತ ಒಂದ ಪೇಜ ಗಟ್ಟಲೇ ಬರದಿದ್ದರು.
ಆಮ್ಯಾಲೆ ಮಾತಾಡಲಿಕ್ಕೆ ಬಂದ ನಮ್ಮ ಹಿರಿಯ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಅಗದಿ ಚೊಕ್ಕ ಹುಬ್ಬಳ್ಳಿ ಧಾರವಾಡ ಭಾಷಾದಾಗ ತಮ್ಮ ಮಾತ ಶುರು ಮಾಡಿದರು.
“ಮಹಿಳೆಯರಿಗೆ ಸಾಹಿತ್ಯದೊಳಗ ಮೀಸಲಾತಿ ಸರಿ ಅನಸಂಗಿಲ್ಲಾ, ಹಂಗೇಲ್ಲಾ ಸಾಹಿತ್ಯದೊಳಗ ಮೀಸಲಾತಿ ಮಾಡಬ್ಯಾಡರಿ, ಪ್ರತಿಯೊಬ್ಬ ಸಾಹಿತಿಗೂ ಒಂದ ಹೆಣ್ಣ ಹೃದಯ ಇರತದ, ಆ ತಾಯಿ ಹೃದಯ ಇದ್ದವನ ಸಾಹಿತ್ಯ ರಚನೆ ಮಾಡಲಿಕ್ಕೆ ಶಕ್ಯೆ ಅದ. ಇವತ್ತ ನೆಲದ ಕೃಷಿ ಎಷ್ಟ ಅವಶ್ಯ ಅದನೋ ಅಷ್ಟ ನೆಲೆಯ (existence) ಕೃಷಿದ ಅವಶ್ಯಕತೆ ಅದ. ಇವ ಎರಡು ಸತತವಾಗಿದ್ದಾಗ ಮಾತ್ರ ನಾಡು ಬೆಳಗತದ, ಉಳಿತದ” ಅಂತ ಹೇಳಿದರು. ಮುಂದ ಮಾತಾಡ್ತ ಮಾತಾಡ್ತ ” ಬನ್ನಂಜೆಯವರ ಹೇಳಿದಂಗ ನೀವು ಸಾಹಿತಿಗಳನ್ನ ಪ್ರಶ್ನಿಸಬೇಕು ಅಂದರ ಮೊದ್ಲ ಅವರ ಬರದದ್ದನ್ನ ಎಲ್ಲಾ ಓದ್ಕೊಂಡ ಬರ್ರಿ, ಆಮ್ಯಾಲೆ ಅವರನ್ನ ಅವರ ಸಾಹಿತ್ಯವನ್ನ ಪ್ರಶ್ನಿಸರಿ” ಅಂತ ಹೇಳಿದರು.
ಮುಂದ ಕಾರ್ಯಕ್ರಮದ ಮುಖ್ಯ ವಕ್ತಾರರಾದ ನಮ್ಮ ಕುಂ.ವಿ ಯವರ ತಮ್ಮ ಭಾಷಣಾ ಶುರು ಮಾಡಿದರು. ಅಗದಿ ದಿಲ್ ಖೋಲ್ ಕೆ ಮಾತಾಡಲಿಕ್ಕೆ ಶುರು ಮಾಡಿದರು. ನಾ ಅವರ ಭಾಷಣಾ ಕೇಳಲಿಕತ್ತಿದ್ದ ಒಂದನೇ ಸಲಾ, ಅಲ್ಲಾ ಹಂಗ ಎಲ್ಲಾರದೂ ಕೇಳಿದ್ದ ಫಸ್ಟ ಟೈಮ ಬಿಡ್ರಿ, ಸಾಹಿತ್ಯ ಕಾರ್ಯಕ್ರಮಕ್ಕ ಹೋದರ ಅಲಾ ಕೇಳೋದ. ಬರೇ facebook ನಾಗ ಕೂತ friendship ಮಾಡ್ಕೊಂಡರ ಏನ ಗೊತ್ತಾಗಬೇಕ ತಲಿ.
ಇರಲಿ, ನಮ್ಮ ಕುಂ.ವಿ ಯವರ ಇವತ್ತ ಸಾಹಿತ್ಯ ಉಳದಿದ್ದ ಉತ್ತರ ಕರ್ನಾಟಕದ ಮಂದಿಯಿಂದ, ಏನ ಸಾಹಿತ್ಯಿಕ ಕೃಷಿ ನಡಿಬೇಕು ಅಂದರ ಅದ ತುಂಬಭದ್ರಾ ನದಿ ಇಚ್ಚಿಕಡೇನ, ಹುಬ್ಬಳ್ಳಿ ಒಳಗ ಹೆಂತಿಂತಾ ಸಾಹಿತಿಗಳ ಬಂದ ಹೋಗ್ಯಾರ, ಹುಬ್ಬಳ್ಳಿ ಧಾರವಾಡ ಹಂಗ ಹಿಂಗ, ಇಲ್ಲಿ ಸಾವಜಿ ಊಟಾ, ಬಸಪ್ಪನ ಖಾನಾವಳಿ ಎಲ್ಲಾ ನೆನಿಸಿ ಕಡಿಕೆ ಹುಬ್ಬಳ್ಳಿ ಧಾರವಾಡದಾಗ ಎಲ್ಲೆ ಬೇಕಲ್ಲೆ ಉಗಳ ಬಹುದು ಅಂತ ಅಂದರು. ಅಗದಿ ಖರೇ ಮಾತ ಉಗಳೋರ ಸಂಕಟಾ ಉಗಳೋರಗೆ ಗೊತ್ತಾಗಬೇಕ, ನುಂಗೋರಿಗೆ ಹೆಂಗ ಗೊತ್ತಾಗ್ತದ.
ಅವರ ಮೊನ್ನೆ ಅಮೇರಿಕಾಕ್ಕ ಹೋಗ ಬೇಕಾರ ಒಂದ ಎರಡನೂರ ಜರ್ದಾ೧೨೦ ಪಾನ್ ಕಟ್ಟಿಸಿಗೊಂಡ ಹೋಗಿದ್ದರಂತ. ಪ್ಲೇನದಾಗ ಇಪ್ಪತ್ತೊಂದ ತಾಸ ಪಾನ ತಿಂದ ತಿಂದ ಪ್ಲಾಸ್ಟಿಕ ಚೀಲದಾಗ ಉಗಳಿ ಅದನ್ನ ಕಟ್ಟಿ ತಮ್ಮ briefcase ನಾಗ ಇಟಗೊಂಡ ಇಳದರಂತ ಅಮೇರಿಕಾದ ಕಸ್ಟಮ್ ಆಫೀಸರ ಇವರನ ಹಿಡದ
“what is this” ಅಂತ ಕೇಳಿದರ, ಇವರ
“this is cough syrup” ಅಂತ ಹೇಳಿ ಕೆಮ್ಮಿದ ಮ್ಯಾಲೆ ಇವರನ ಹೊರಗ ಬಿಟ್ಟರಂತ.
ಕಡಿಕೆ ಅಮೇರಿಕಾದಾಗ ಎಲ್ಲೀನೂ ಒಳ ಚರಂಡಿ, ಗಟಾರ ಸಿಗಲಾರದ ಕಡಿಕೆ ಮಿಚಿಗನ್ ಲೇಕಕ್ಕ ಹೋದಾಗ ಅಲ್ಲೆ ಆ ಪಾನಿನ ಅಸ್ತಿ ವಿಸರ್ಜನೆ ಮಾಡಿ ಬಂದರಂತ.
ಹಿಂಗಾಗಿ ಅವರಿಗೆ ಹುಬ್ಬಳ್ಳಿ-ಧಾರವಾಡದಾಗ ಎಲ್ಲೆ ಬೇಕ ಅಲ್ಲೆ ಉಗಳಬಹುದಲ್ಲಾ ಅಂತ ಭಾಳ ಖುಶಿ ಆಗಿತ್ತ. ಮುಂದ ಹಂಗ ಮಾತಾಡ್ತ
“ಸಾಹಿತಿ ಅಂದರ ಎಲ್ಲಾದರ ರುಚಿನು ಗೊತ್ತಿರಬೇಕು, ನಾ ಕುಡಿಯಂಗಿಲ್ಲಾ, ಸೇದಂಗಿಲ್ಲಾ, ಉಗಳಂಗಿಲ್ಲಾ, ನಂಗ ಒಬ್ಬಕಿನ ಅಂತೇಲ್ಲಾ confined ಆಗಿರಬಾರದು, ಎಲ್ಲಾದರದು ಅಭಿರುಚಿ ಇರಬೇಕು, ನಾ ಸಾಹಿತ್ಯ ಸಮ್ಮೇಳನಕ್ಕ ಬರೋ ಮುಂಚೇನ ನಂಗ organizers ನಂದ brand ಯಾವದು ಅಂತ ಕೇಳಿದ್ದರು” ಅಂತ ಹೇಳಿದರು.
ನಂಗ ಇವರೇನ ಭಾರಿ ಕರೆಕ್ಟ ಹೇಳಿದರಲಾ ಅನಸ್ತ, ನಾ ಒಂದ ಸ್ವಲ್ಪ ಸಾಹಿತ್ಯ ಬೆಳಸಿಗೊಂಡರ ಸಾಕ ಬಾಕಿ ಎಲ್ಲಾ characters ನನ್ನ ಕಡೆ ಹೆಂಗಿದ್ದರು ಅವsನ ಅವ ಅಂತ ನನಗ ಅನಸಲಿಕತ್ತ.
ಕಡಿಕೆ ಕುಂ.ವಿ ಯವರ ಒಂದಿಷ್ಟ ಪಾಲಿಟಿಸಿಯನ್ಸಗೆ ಮಂಗಳಾರತಿ ಮಾಡಿ ತಮ್ಮ ಭಾಷಣಾ ಮುಗಸಿದರು. ಮುಂದ ನಮ್ಮ ಕೌಜಲಗಿ ಸರ ವಂದಾನರ್ಪಣೆ ಮಾಡಿದರು. ಮುಂದ ಹಂಗ ಸಂಗೀತ, ಹಾಸ್ಯ, ನೃತ್ಯ ಕಾರ್ಯಕ್ರಮ ಇದ್ದವು ಆದರ ನಾ ಇಷ್ಟಕ್ಕ ಸಾಕ ಒಂದ ದಿವಸಕ್ಕ ಇದ ಟೂ ಮಚ್ ಸಾಹಿತ್ಯ ಆಗ್ತದ ಅಂತ ಸವಾಯಿ ಗಂಧರ್ವಹಾಲನಿಂದ ಎದ್ದೆ.
ಒಟ್ಟಾರೆ ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನ ಭಾಳ ಛಂದ ಆತು ಅಂತ ಬಂದ ಮಂದಿ ಎಲ್ಲಾ ಮಾತಾಡಲಿಕತ್ತಿದ್ದರು. ನಂಗು ಸಮಾರೋಪ ನೋಡಿದ ಮ್ಯಾಲೆ ನಾ ಮುಂಜಾನೆನ ಬರಬೇಕಿತ್ತು ಅಂತ ಅನಸ್ತು. ಇರಲಿ ಮುಂದಿನ ವರ್ಷ ಲಗೂನ ಬಂದರಾತು ಅನ್ಕೊಂಡ ಆಟೋ ಹತ್ತಿ ಮನಿ ಹಾದಿ ಹಿಡದೆ.
(ಇದು ನಾ ೨೦೧೩ರ ಹುಬಳ್ಳಿ ತಾಲುಕ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭಕ್ಕ ಹೋಗಿ ಬಂದ ನನಗ ಆದ ಅನುಭವ, ಅನಿಸಿಕೆಯನ್ನ ನನಗ ಅನಿಸಿದಂಗ ಬರದಿದ್ದ, ಇದರಾಗ ಯಾರದು ಮನಸ್ಸ ನೋಯಿಸುವ intention ಇಲ್ಲ ಮತ್ತ. ಹಿಂಗಾಗಿ ಯಾರು ತಪ್ಪ ತಿಳ್ಕೋಬ್ಯಾಡರಿ)