ಹೋಳಿ ಹುಣ್ಣಿಮೆಗೆ ‘ಹೆಣ್ಣ ಮಕ್ಕಳು’ ಹೋಯ್ಕೊಂಡರು

ಹಂಗ ಖರೆ ಹೇಳ್ಬೇಕಂದರ ನಾ ಈ ಲೇಖನಾ ಬರದಿದ್ದ ಹೋದ ಹೋಳಿ ಹುಣ್ಣಿಮಿಗೆ, ಆದರ ಅವತ್ತ ನಾ ಇನ್ನೇನ ಈ ಲೇಖನಾ ಟೈಪ ಮಾಡಿ ಕೆಂಡಸಂಪಿಗೆಗ ಕಳಸಬೇಕು ಅನ್ನೋದರಾಗ ಅದನ್ನ ನನ್ನ ಹೆಂಡತಿ ಓದಿ ಬಿಟ್ಲು. ಅದರಾಗ ಇತ್ತೀಚಿಗೆ ನಿಮ್ಮ ಪೈಕಿ ಯಾರೊ ಆಕಿಗೆ ನಾ ಬರೆ ಎಲ್ಲಾ ಲೇಖನದಾಗೂ ಆಕಿನ್ನ ‘ಟಾರ್ಗೆಟ್’ ಮಾಡ್ತೇನಿ ಅಂತ ಬ್ಯಾರೆ ತಲ್ಯಾಗ ತುಂಬಿ ಬಿಟ್ಟಾರ. ಹಿಂಗಾಗಿ ಇನ್ನಮುಂದ ಪ್ರತಿ ಲೇಖನಾ ನಾ ಕಳಸಬೇಕಾರ ” ಒಂದ ಸರತೆ ನನಗ ತೊರಿಸಿ, ನಾ ಓದಿ ಹೂಂ ಅಂದ ಮ್ಯಾಲೆ ಕಳಸರಿ” ಅಂತ ಬ್ಯಾರೆ ಹೇಳಿದ್ಲು. ಅಕಿ ಅವತ್ತ ಈ ಲೇಖನಾ ಓದಿ “ಇದನ್ನ ಏನರ ಇವತ್ತ ಪಬ್ಲಿಶ್ ಮಾಡಿದರ ನಿಮ್ಮನ್ನ ಮತ್ತ ಆ ಸಂಪಾದಕರನ, ಇಬ್ಬರನ್ನೂ ……..ನೋಡ್ರಿ ಮತ್ತ ಏನ ಮಾಡ್ತೇನಿ” ಅಂತ ಧಮಕಿ ಕೊಟ್ಟಳು, ಅದಕ್ಕ ಆವಾಗ ನಾ ಇದನ್ನ ಕಳಸೊ ಧೈರ್ಯಾ ಮಾಡಲಿಲ್ಲ, ಈಗ ಹೆಂಗಾದರು ಆ ಮಾತಿಗೆ ಒಂದ ತಿಂಗಳಾಗಿ ಹೋತ, ಆಕೀನೂ ಮರತಾಳ ಅಂತ ಕಳುವಿಲೆ ಪಬ್ಲಿಶ್ ಮಾಡೇನಿ. ಇನ್ನ ಮುಂದ ಆ ಲೇಖನಾ ಓದರಿ, ಆದರ ನನ್ನ ಹೆಂಡ್ತಿಗೆ ಹೇಳ ಬ್ಯಾಡರಿ ಮತ್ತ……………..

ಹೋಳಿ ಹುಣ್ಣಿಮೆ ಬಂತಂದ್ರ ಗಂಡಸರಿಗೆ ‘ಲಬೋ, ಲಬೋ’ ಅಂತ ಓಪನ್ ಆಗಿ ಹೊಯ್ಕಳ್ಳಿಕ್ಕೆ ಒಂದ ದೊಡ್ಡ ಅವಕಾಶ. ಹಂಗ ನಾವು (ಗಂಡಸರು) ಸಂಸಾರದಾಗ ಹೆಂಡತಿ ಕೈಯಾಗ ಸಿಕ್ಕ ದಿವಸಾ ಹೋಯ್ಕೊತ್ತೇವಿ, ಆ ಮಾತ ಬ್ಯಾರೆ. ಆದ್ರ ದಿವಸಾ ಮನಸ್ಸಿನಾಗ ಹೋಯ್ಕೊಳ್ಳೋರು ಹೋಳಿ ಹುಣ್ಣಿಮೆ ಬಂತಂದ್ರ ಖುಲ್ಲಂ ಖುಲ್ಲಾ ರಸ್ತೆ ಮ್ಯಾಲೆ ನಿಂತ ಹೋಯ್ಕೊತೇವಿ ಅಷ್ಟ. ಅದರಾಗ ಈ ಸರತೆ ಹೋಳಿ ಹುಣ್ಣಿಮೆ ದಿವಸನ ‘ಹೆಣ್ಣ ಮಕ್ಕಳ’ ದಿವಸ ಬಂದಿತ್ತ. ’ಹೆಣ್ಣ ಮಕ್ಕಳ ದಿವಸ’ ಅಂದ್ರ ನಾವು ಮನ್ಯಾಗ ’ಹಿರಿಯರ ದಿವಸ’ ಅಂತ ಅವರ ಸತ್ತಮ್ಯಾಲೆ ವರ್ಷಕ್ಕೊಮ್ಮೆ ’ಶ್ರಾದ್ಧ’ ಅಂತ ಮಾಡ್ತೇವಲ್ಲಾ ಹಂಗ ಅಲ್ಲ ಮತ್ತ. ನೀವೆಲ್ಲರ ಹಂಗ ತಿಳ್ಕೊಂಡೀರಿ, ಆಮೇಲೆ ಈ ಹೆಣ್ಣ ಮಕ್ಕಳೆಲ್ಲಾ ಬಂದ ಈಗಾಗಲೆ ಹೆಂಡತಿ ಕೈಯಾಗ ಸಿಕ್ಕ ಅರ್ಧ-ಮರ್ಧಾ ಬದುಕಿರೋ ನನ್ನ ಪೂರ್ತಿ ಮುಗಿಸಿ ಬಿಡತಾರ. ‘ಹೆಣ್ಣ ಮಕ್ಕಳ ದಿವಸಾ’ ಅಂದ್ರ ’ವುಮೆನ್ಸ್ ಡೇ’. ಅದೂ ಹಂತಾದ – ಹಿಂತಾದ ಅಲ್ಲಾ, ’ ಇಂಟರನ್ಯಾಶನಲ್ ವುಮೆನ್ಸ್ ಡೇ’ ಮತ್ತ.

ನಾವು ಗಂಡಸರಗಿಂತಾ ಕಡಿಮೆ ಏನ ಇಲ್ಲಾ, ನಾವ ಎದರಾಗೂ ಗಂಡಸರಗಿಂತಾ ಹಿಂದಿಲ್ಲಾ, ನಮ್ಮನ್ನ ಯಾರೂ ಶೋಷಣೆ ಮಾಡಲಿಕ್ಕೆ ಆಗಂಗಿಲ್ಲಾ, ನಾವ ಈ ಗಂಡಸರನ ಹಡದವರು, ಹಂಗ -ಹಿಂಗ ಅಂತ ಓಣಿ ಹೆಣ್ಣಮಕ್ಕಳೆಲ್ಲಾ ಕೂಡಿ ಊರತುಂಬ ಒದರ್ಕೋತ ನೂರಾ ಎಂಟ ಫಂಕ್ಶನ್ ಮಾಡ್ಕೊಂಡ ಸೆಲೆಬ್ರೇಟ್ ಮಾಡ್ಕೊಳೊ ದಿವಸಕ್ಕ ’ಮಹಿಳಾ ದಿವಸ’ ಅಂತಾರ. ಅಲ್ಲಾ ನಾವು, ಅಂದರ ಗಂಡಸರು, ಯಾವಾಗ ಹೆಣ್ಣ ಮಕ್ಕಳು ನಮಗಿಂತಾ ಕಡಿಮೆ ಅಂತ ಅನ್ಕೊಂಡೇವಿ? ಯಾವಾಗ ನಾವು ಹೆಣ್ಣ ಮಕ್ಕಳ ಹೊಟ್ಟ್ಯಾಗ ಹುಟ್ಟಿಲ್ಲಾ, ’ಟೆಸ್ಟ್ ಟ್ಯೂಬ’ನಾಗ ಹುಟ್ಟೇವಿ ಅಂದೇವಿ? ದಿನಾ ಬೆಳಗ ಹರದರ ಅವರ ಹೇಳಿದ್ದ ಕೇಳ್ಕೊಂಡ ಸಂಸಾರ ನಡಸ್ತೇವಿ, ಹಂಗ ಇವತ್ತ ಖರೇ ಶೋಷಣೆ ಆಗ್ತಾ ಇರೋದ ಗಂಡಸರದು ಅಂದರನು ತಪ್ಪ ಆಗಂಗಿಲ್ಲಾ. ಹಿಂತಾದ್ರಾಗ ಇವರಿಗೆ ಮತ್ತ ‘ಹೆಣ್ಣಮಕ್ಕಳ ದಿವಸ’ ಅಂತ ಸಪರೇಟಾಗಿ ಆಚರಿಸೋ ಅವಶ್ಯಕತೆನರ ಎಲ್ಲೆ ಅದ ಅಂತೇನಿ. ಪ್ರತಿ ದಿವಸನೂ ಅವರದ, ನಾ ಅಂತೂ ಒಂದ ದಿವಸನೂ ನನ್ನ ಹೆಂಡತಿ, ನಮ್ಮವ್ವ ಹಾಕಿದ್ದ ಒಂದ ಎಳಿ ರಂಗೋಲಿ ದಾಟಂಗಿಲ್ಲಾ, ಹಂಗ ದಾಟಿದರು ಅವರ ಪರ್ಮಿಶನ್ ತೊಗೊಂಡ ದಾಟತೇನಿ, ಇಲ್ಲಾ ರಂಗೋಲಿ ಅಳಕಿದ ಮ್ಯಾಲೆ ಅಂದ್ರ ರಾತ್ರಿ ದಾಟತೇನಿ. ಅದರಾಗ ಈ ಸುಡಗಾಡ ಟಿ.ವಿ., ಪೇಪರ್ ನವರು ’ವುಮೆನ್ಸ್ ಡೇ’ ಅಂತ ಒಂದ ವಾರದಿಂದ ಸುಟ್ಟು-ಸುಡಗಾಡ ಕಾರ್ಯಕ್ರಮ ತೋರಿಸಿದ್ದ-ತೋರಿಸಿದ್ದ, ಹಿಂಗಾಗಿ ಹೆಂತಾ ಹಳ್ಳಿ ಹುಡಗಿ ಲಗ್ನಾ ಮಾಡ್ಕೊಂಡರು ಆಕಿಗೆ ‘ವುಮೆನ್ಸ್ ಡೇ’ ಬಂದ ಕೊಡಲೇನ ಮೈಯಾಗ ಶಿರ್ಶಿ ಮಾರಿಕಾಂಬಾ ಬಂದಂಗ ಮಾಡ್ತಾಳ. ಏನೋ ಪುಣ್ಯಾ ಕತ್ತಿ ತೊಗಂಡ ಮಾರಿಕಾಂಬಾನಗತೆ ಕಟಗೊಂಡ ಗಂಡನ್ನ ‘ಬಲಿ ಕೊಡೊ ಕೋಣಾ’ ಅಂತ ಕಡೆಂಗಿಲ್ಲಾ ಇಷ್ಟ. ಅಲ್ಲಾ ಈಗ ಕೋಣಾ ಕಡಿಯೋದು ಸರ್ಕಾರದವರ ಬ್ಯಾನ್ ಮಾಡ್ಯಾರ ಇಲ್ಲಾಂದ್ರ ’ವುಮೆನ್ಸ್ ಡೇ’ ದಿವಸ ಒಂದ ಮೂರ- ನಾಲ್ಕ ಗಂಡಂದರದ ಹೆಣಾ ಗ್ಯಾರಂಟಿ ಬೀಳ್ತಿದ್ವು ಬಿಡ್ರಿ.

ಅದರಾಗ ಈ ಸರತೆ ಹೋಳಿ ಹುಣ್ಣಿಮೆ ದಿವಸನ ಮಹಿಳಾ ದಿವಸ ಬಂದದ್ದಕ್ಕ ಹೆಣ್ಣ ಮಕ್ಕಳು ನಮ್ಮ ಜೊತಿ ಹೋಯ್ಕೊಂಡ್ರು, ನಾವು “ಕಾಮಣ್ಣನ ಮಕ್ಕಳು” ಅಂದಾಗ ಅವರು “ಕಳ್ಳ ಸೂಳೆ ಮಕ್ಕಳು” ಅಂತ ಎಲ್ಲಾ ಗಂಡಸರ ವಿರುದ್ಧ ಸಾರ್ವಜನಿಕವಾಗಿ ಹೋಯ್ಕೊಂಡರು, ನಾವು ಕುಡದ ಹೋಯ್ಕೊಂಡವಿ, ಅವರ ಕುಡಿಲಾರದ ಹೋಯ್ಕೊಂಡರು, ಅಷ್ಟ ಫರಕ್. ಅಲ್ಲಾ ಅವರ ಕಣ್ಣಾಗ ಎಲ್ಲಾ ಗಂಡಸರು ಕಾಮಣ್ಣನ ಮಕ್ಕಳ ಆಗ್ಯಾರ ಬಿಡ್ರಿ. ಅದರಾಗ ಅವತ್ತ ‘ವುಮೆನ್ಸ್ ಡೇ’ ಬ್ಯಾರೆ, ಏನು ಅನ್ನಲಿಕ್ಕೂ ಬರಂಗಿಲ್ಲಾ. ಅವರ ಅಂದಿದ್ದ ಅನಿಸಿಕೊಳ್ಳೊದು.

ಅಲ್ಲಾ ಹಂಗ ಇಂಟರನ್ಯಾಶನಲ್ ವುಮೆನ್ಸ್ ಡೇ ಸೆಲೆಬ್ರೇಟ ಮಾಡಬೇಕಂದ್ರ ಅವರೇನ ಇಂಟರನ್ಯಾಶನಲ್ ವುಮೆನ್ ಇರಬೇಕಂತ ಏನಿಲ್ಲಾ , ಇಂಡಿಜಿನಸ್ ಹೆಂಡತಿನೂ ಸೆಲೆಬ್ರೇಟ ಮಾಡಬಹುದು.

ನಮ್ಮ ಮನ್ಯಾಗಂತೂ ಮುಂಜಾನೆ ಎದ್ದ ಕೂಡಲೇನ ನನ್ನ ಹೆಂಡತಿ ಶುರು ಮಾಡಿದ್ಲು
“ಇವತ್ತ ‘ವುಮೆನ್ಸ್ ಡೇ’, ನಾವು ಮನ್ಯಾಗ ಅಡಗಿ-ಗಿಡಗಿ ಏನೂ ಮಾಡಂಗಿಲ್ಲಾ, ಎಲ್ಲಾರನು ಹೊರಗ ಊಟಕ್ಕ ಕರಕೊಂಡ ಹೋಗರಿ” ಅಂದ್ಲು. ಪ್ರತಿ ಸಲಾ ಹಬ್ಬಾ-ಹುಣ್ಣಮಿಗೆ ನಾವ ಊಟಕ್ಕ ಹೊರಗ ಹೋದರ ಬೈತಿದ್ದ ನಮ್ಮವ್ವಾ,
“ಹೌದಪಾ, ನಂಗೂ ಮನ್ಯಾಗ ನಿನ್ನ ಹೆಂಡತಿ ಅಡಗಿ ಉಂಡ – ಉಂಡ ಬಾಯಿ ಕೆಟ್ಟಹೋಗೇದ, ಎಲ್ಲರ ಸಾವಜಿ ಖಾನಾವಳಿಗೆ ಊಟಕ್ಕ ಕರಕೊಂಡ ಹೋಗು” ಅಂತ ಗಂಟ ಬಿದ್ಲು.

“ಅಲ್ಲವಾ, ಇವತ್ತ ಹಬ್ಬ, ಮನ್ಯಾಗ ಹೋಳಿಗೆ ಅಡಗಿ ಊಟಾ ಮಾಡ್ಬೇಕು, ನೀ ಹಂತದ್ರಾಗ ಸೊಸಿ ಮಾತ ಕೇಳಿ ಹೊರಗ ಉಣತೇನಿ ಅಂತಿಯಲಾ” ಅಂದೆ,
“ಹಬ್ಬ ಹುಣ್ಣಿಮೆ ತಿಂಗಳಾ ಬರತಾವ ’ವುಮೆನ್ಸ್ ಡೇ’ ವರ್ಷಕ್ಕೊಂದ ಸರತೆ ಬರೋದು” ಅಂದ್ಲು.

ಹಕ್ಕ್…. ನಾನು, ನಮ್ಮಪ್ಪ ಹಣಿ-ಹಣಿ ಬಡ್ಕೊಳೋದ ಒಂದ ಬಾಕಿ ಉಳದಿತ್ತು.

ಅಲ್ಲರಿ ನಮ್ಮ ಹುಬ್ಬಳ್ಳ್ಯಾಗಂತೂ ಹೆಣ್ಣ ಮಕ್ಕಳ ’ವುಮೆನ್ಸ್ ಡೇ’ ದಿವಸ ಹೆಂತಿಂತಾ ಕಾರ್ಯಕ್ರಮ ಮಾಡಿದರರಿ, ಒಂದಿಷ್ಟ ಮಂದಿ ‘ರನ್ ಫಾರ ವುಮೆನ್’ ಅಂತ ಓಡಿದರು. ಅವರ ದುರ್ಗದಬೈಲನಾಗ ಓಡಿ ಬರೋದ ನೋಡಿ ಗಂಡಸರು ಗಾಬರಿ ಆಗಿ ’ರನ್ ಫ್ರಾಮ್ ವುಮೆನ್’ ಅಂತ ಬ್ರಾಡವೇ ತುಂಬ ಓಡಿದರು. ಮತ್ತೊಂದಿಷ್ಟ ಮಂದಿ ‘ವುಮೆನ್ಸ್ ವೀಕ’ ಅಂತ ಒಂದ ವಾರಗಟ್ಟಲೇ ಮನಿ ಹೆಣ್ಣ ಮಕ್ಕಳನ್ನೆಲ್ಲಾ ಕೆಲಸಾ-ಬೊಗಸಿ ಬಿಡಿಸಿಸಿ ’ ಭಗಿನಿ ಮಂಡಳ’ದಾಗ ಭಜನಿ ಮಾಡಿಸಿಸಿದರು. ಯಾರೊ ಪುಣ್ಯಾತಗಿತ್ತಿ ಒಬ್ಬೊಕಿ ’ಹೆಲ್ಮೇಟ್ ಫಾರ್ ವುಮೆನ್ ಸೇಫ್ಟಿ’ ಅಂತ ಹೇಳಿ ಗೋಕುಲ ರೋಡನಾಗ ನಿಂತ ಹೆಣ್ಣ ಮಕ್ಕಳಿಗೆಲ್ಲಾ ಅರಿಷಣಾ-ಕುಂಕುಮ ಹಚ್ಚಿ ’ಚೀಪ್’ ರೇಟಿಂದ ಹೆಲ್ಮೆಟ್ ಕೊಟ್ಟಳು. ’ಹೆಲ್ಮೇಟ್ ಫಾರ್ ವುಮೆನ್ ಸೇಫ್ಟಿ’ ಅಂದರ ಆ ಹೆಲ್ಮೇಟ್ ಮನಿಗೆ ಹೋಗಿ ಗಂಡಂದರಿಗೆ ಕೊಡೋದು, ಮುಂದ ಯಾವಾಗರ ಹೆಂಡತಿ ಸಿಟ್ಟಲೇ ಹೊಡದಾಗ ಗಂಡ ಎಲ್ಲರ ತಲಿ ಒಡಕೊಂಡ ಸತ್ತ-ಗಿತ್ತರ ಆಮೇಲೆ ಹೆಂಡತಿ ಜೇಲಿಗೆ ಹೋಗ ಬಾರದಲಾ ಅಂತ ತಮ್ಮ ’ಸೇಫ್ಟಿ’ ಸಂಬಂಧ ಗಂಡಂದರಿಗೆ ಹೆಲ್ಮೇಟ್. ಕೆಲವಬ್ಬರು ‘ವುಮೆನ್ ಅಚೀವರ್ ಅವಾರ್ಡ್’ ಅಂತ ಮಾಡ್ಕೊಂಡ ತಮ್ಮ-ತಮ್ಮೊಳಗ ’ ಕುಂಟಲ್ಪಿ, ಮುಟ್ಟಾಟ, ಆಣಿಕಲ್, ಚಕ್ಕಾ-ವಚ್ಚಿ, ಹಾವು-ಏಣಿ ಆಟ ಆಡಿ ಅವಾರ್ಡ್ ಹಂಚಗೊಂಡರು. ಅಲ್ಲಾ ‘ಅರಬಿ ಒಗೆಯೋದು ಇಲ್ಲಾ ಭಾಂಡಿ ತಿಕ್ಕೋ’ ಕಾಂಪಿಟೇಶನ್ ಮಾಡಿದ್ದರ ಛಲೋ ಇತ್ತೇನೋ? ಹೋಗ್ಲಿ ಬಿಡ ಏನರ ಹಾಳ ಗುಂಡಿ ಬೀಳವಲ್ಲರಾಕ, ನನಗ್ಯಾಕ ಈ ಹೆಣ್ಣಮಕ್ಕಳ ಉಸಾಬರಿ ಅಂತ ಸುಮ್ಮನ ಇದ್ದೆ. ಒಂದ ಐವತ್ತ – ಅರವತ್ತ ದಪ್ಪ-ದಪ್ಪ ಇರೋ ಹೆಣ್ಣ ಮಕ್ಕಳ ಸೇರಿ ಬ್ಲಡ್ ಡೋನೆಶನ್ ಕ್ಯಾಂಪ್ ಮಾಡಿ, ೫-೬ ಬಾಟಲಿ ರಕ್ತಾ ಕೊಟ್ಟರು. ಅದು ಹೆಂಗಸಿರಗೆನ ಮತ್ತ (ಅದ ಇಷ್ಟ ದಿವಸ ಗಂಡಂದರದ ಹೀರಿದ್ದ ರಕ್ತನ ಬಿಡ್ರಿ). ಇಷ್ಟಕ್ಕ ಮುಗಿಲಿಲ್ಲಾ, ‘ಸೆಕ್ಸುವಲ್ ಹರಾಸಮೆಂಟ್ ಬೈ ಮೆನ್’ ಅಂತ ‘ಇರೋಟಿಕ್’ ಟಾಪಿಕ್ ಮ್ಯಾಲೆ ಗಂಡಸರು ಅಂದ್ರ ಅತ್ಯಾಚಾರಿಗಳೂ ಅಂತ ’ಇಮೋಶನಲ್’ ಆಗಿ ಭಾಷಣ ಮಾಡಿದ್ರು, ಇವರ ಅವತ್ತ ಮಾಡಿದ್ದ ಒಂದ-ಎರಡ. ವರ್ಷಾನಗಟ್ಟಲೇ ಗಂಡಸರು ಸಹಿಸಿದ್ದು ಒಂದ, ‘ವುಮೆನ್ಸ್ ಡೇ’ ದಿವಸ ಸಹಿಸಿದ್ದೂ ಒಂದ ಅನಿಸಿಬಿಡ್ತ. ಆದ್ರ ಏನ ಮಾಡೋದು ಅನುಭವಿಸಬೇಕು, ಇಲ್ಲಾ ಜೋರಾಗಿ ಲಬಾ-ಲಬಾ ಅಂತ ಹೋಯ್ಕೊಬೇಕು, ನಾ ಅಂತೂ ಹೋಯ್ಕೋಂಡೆ, ಹೆಂಗಿದ್ದರೂ ಹೋಳಿ ಹುಣ್ಣಿಮೆ ಎಷ್ಟ ಹೋಯ್ಕೊಂಡರು ಯಾರು, ಯಾಕ ಅಂತ ಕೇಳವರಿದ್ದಿದ್ದಿಲ್ಲಾ.

ಹಂಗ ಇತಿಹಾಸದಾಗ ಮೊದ್ಲ ಇಂಟರನ್ಯಾಶನಲ್ ’ವುಮೆನ್ಸ್ ಡೇ’ ನ ಇರಲಿಲ್ಲಂತ, ಬರೇ ’ಮೆನ್ಸ್ ಡೇ’ ಒಂದ ಇತ್ತು. ಅದನ್ನ ನೋಡಿ ಇತ್ತೀಚಿಗೆ ನಾಲ್ಕ ಅಕ್ಷರ ಕಲತ ಹೆಣ್ಣಮಕ್ಕಳೆಲ್ಲಾ ಸೇರಿ “ಇದು ಅನ್ಯಾಯ, ನೀವು ಇರೋ ಎರಡ-ಮೂರ ಲಿಂಗದಾಗ ಲಿಂಗ ಭೇದ ಮಾಡ್ಲಿಕತ್ತೀರಿ, ನಾವೇನ ಪಾಪಾ ಮಾಡೇವಿ ಅಂತೆಲ್ಲಾ ಚೀರಾಡಿ, ಕಡಿಕೆ ತಮ್ಮದು ಒಂದ ದಿವಸ ಇರಲಿ ಅಂತ ’ಇಂಟರನ್ಯಾಶನಲ್ ವುಮೆನ್ಸ್ ಡೇ’ ಅಂತ ಮಾಡ್ಕೊಂಡರು. ಅದ ಏನೋ ಅಂತಾರಲಾ ’ಅತ್ತು-ಕರದ ಔತಣಾ ತೊಗಂಡ್ರು’ ಅಂತ, ಹಂಗ ಈ ಹೆಣ್ಣಮಕ್ಕಳು ಗಂಡಸರಿಗೆ ಕಾಡಿ-ಬೇಡಿ ‘ವುಮೆನ್ಸ್ ಡೇ’ ಶುರುಮಾಡ್ಯಾರ. ಅಲ್ಲಾ ಮಾಡೋರ ಮಾಡವಲ್ಲರಾಕರಿ ಈ ನಮ್ಮನೀ ಹೆಣ್ಣ ಮಕ್ಕಳಿಗೆ ಯಾಕ ಬೇಕರಿ ಊರ ಉಸಾಬರಿ ಅಂತೇನಿ? ಆ ಇಂಟರನ್ಯಾಶನಲ್ ವುಮೆನ್ ಗಳಿಗೂ ನಮ್ಮನೀ ಹೆಣ್ಣ ಮಕ್ಕಳಿಗೂ ಫರಕ್ ಅದನೋ ಇಲ್ಲೋ? ನಮ್ಮ ಇಂಡಿಜನಸ್ ಹೆಣ್ಣಮಕ್ಕಳೇನ ಇಂಟರ ನ್ಯಾಶನಲ್ ವುಮೆನ್ ಗತೆ ಇದ್ದಾರ? ಇವರ ‘ಇಂಟರನ್ಯಾಶನಲ್ ವುಮೆನ್’ಗತೆ ಇದ್ದರ ನಾವ ಯಾಕ ‘ಇಂಟರ ನ್ಯಾಶನಲ್’ ವುಮೆನ್ ಕಂಡಾಗ ಒಮ್ಮೆ ಬಾಯಿ ತಕ್ಕೊಂಡ ನೋಡ್ತಿದ್ದಿವಿ? ಇರಲಿ ಬಿಡರಿ, ಅದೆಲ್ಲಾ ನಮ್ಮ ಹಣೆಬರಹ. ಈಗ ಹಳ-ಹಳಿಸಿದರ ಏನ ಬರತದ. ಆದ್ರೂ ಮಾತ ಹೇಳಿದೆ.

‘ವುಮೆನ್ಸ್ ಡೇ’ ದಿವಸ ಕಡಿಕೂ ನಮ್ಮ ಮನ್ಯಾಗ ಹೆಣ್ಣಮಕ್ಕಳು ಗಂಟ ಬಿದ್ದು ಕಮರೀಪೇಟ ಸಾವಜಿ ಖಾನಾವಳಿಗೆ ಹೋಗಿ ಮಧ್ಯಾಹ್ನದ ಊಟಾ ಹೊಡದ ಬಂದ್ರು. ಇನ್ನೇನ ರಾತ್ರಿ ಅಡಗಿ ಮಾಡಬೇಕು ಅಂತ ನೋಡ್ತಾರ, ಮಧ್ಯಾಹ್ನ ಹಿತ್ತಲದಾಗ ಇದ್ದದ್ದ ಭಾಂಡೆ, ತೋಯಿಸಿ ಇಟ್ಟಿದ್ದ ಅರಬಿ ಹಂಗ ಬಿದ್ದಿದ್ವು. ಮಧ್ಯಾಹ್ನ ಬರಬೇಕಾಗಿದ್ದ ಮನಿಗೆಲಸದ ಮಂಜುಳಮ್ಮಾ ಬಂದಿದ್ದೀಲ್ಲಾ. ನನ್ನ ಹೆಂಡತಿಗೆ ಹಿತ್ತಲದಾಗಿನ ರಾಶಿ-ರಾಶಿ ಭಾಂಡೆ, ಎರಡ ಬುಟ್ಟಿ ತುಂಬಿದ್ದ ಅರಬಿ ಕಂಡ ಪಿತ್ತ ನೆತ್ತಿಗೇರತ,
“ಈ ಸುಡಗಾಡ ಮಂಜುಳಮ್ಮ ಬರಂಗಿಲ್ಲಾಂತ ಮೊದ್ಲನರ ಹೇಳಲಿಲ್ಲಾ, ಮೊದ್ಲ ಹೇಳಿದ್ದರ ನಮಗ ಆದಂಗ- ಆದಂಗ ನಾವ ಸ್ವಲ್ಪ-ಸ್ವಲ್ಪ ತೊಳ್ಕೊಂಡರ ಬಿಡತಿದ್ದವಿ, ಇಷ್ಟ ಅರಬೀನೂ ತೊಯಿಸಿ ಇಡತಿದ್ದಿಲ್ಲಾ” ಅಂತ ಆಕಿಗೆ ಬೈಲಿಕತ್ತಳು.

“ಲೇ, ಆಕಿ ಬರಂಗಿಲ್ಲಾ ಅಂತ ಅಂದಿದ್ರ ನೀ ಏನ ಇವತ್ತ ಸ್ನಾನ ಮಾಡೋದ ಬಿಡತಿದ್ದಿ ಏನ? ಅದು ವುಮೆನ್ಸ್ ಡೇ ದಿವಸ! ಅಲ್ಲಲೇ ಮನಿ ಕೆಲಸಾ ಮಾಡೊ ಮಂಜುಳಮ್ಮನೂ ಎಲ್ಲೇರ ನಿನ್ನಂಗ ‘ಮಹಿಳಾ ದಿವಸ’ ಮಾಡಲಿಕ್ಕೆ ಹೋಗಿರಬೇಕ ತೊಗೊ, ಪಾಪಾ ಆಕಿನೂ ನಿನ್ನಂಗ ‘ಇಂಟರನ್ಯಾಶನಲ್’ ಮಹಿಳೆನ ಅಲಾ ಮತ್ತ” ಅಂದೆ.

“ಸಾಕ ಬಾಯಿ ಮುಚ್ಚರಿ, ನಮ್ಮ ’ವುಮೆನ್ಸ್ ಡೇ’ ಒಂದ ನಿಮ್ಮ ಕಣ್ಣಾಗ ಎದ್ದ ವತ್ತಲಿಕತ್ತದ” ಅಂತ ಸೀರಿ ಕಳದ ನೈಟಿ ಹಾಕ್ಕೊಂಡ ಅರಬಿ ಒಗೀಲಿಕ್ಕೆ ಹೋದ್ಲು. ನಮ್ಮವ್ವ ನಳದ ಬುಡಕ ಭಾಂಡಿ ಸುರಕೊಂಡ ತಿಕ್ಕಲಿಕ್ಕೆ ಶುರುಮಾಡಿದ್ಲು. ಪಾಪ! ಇಂಟರನ್ಯಾಶನಲ್ ವುಮೆನ್ ಡೇ ದಿವಸ ದೇವರು ಇವರಿಗೆ ಹಿಂಗ ತ್ರಾಸ ಕೊಡಬಾರದಾಗಿತ್ತು. ಬಹುಶಃ ಇದ ಯಾವದೋ ಗಂಡ ದೇವರದ ಕೆಲಸ ಇರಬೇಕ ಅನಸ್ತು.

ಮುಂದ ಒಂದ ತಾಸಿಗೆ ಹಿತ್ತಲದಾಗಿಂದ ಒದರಿದ್ಲಲಾ ನನ್ನ ಹೆಂಡತಿ, “ರ್ರೀ ಸ್ವಲ್ಪ ಪ್ಲೀಸ್ ಈ ಅರಬಿ ಹಿಂಡಿ ಕೊಡತೇನಿ, ಮುಂಚಿಕಡೆ ಒಣ ಹಾಕಿ ಬರ್ರಿ” ಅಂದ್ಲು, ಅಕಿ ವುಮೆನ್ಸ್ ಡೇ ದಿವಸ ಗಂಡಸರಿಗೆ ಅದು ಗಂಡಗ ಅದು ನನ್ನಂತಾ ಗಂಡಗ ಪ್ಲೀಸ್ ಅಂದಿದ್ದ ಕೇಳಿ ನನಗ ಕರಳ ಹಿಂಡಿದಂಗ ಆತು. ಎಷ್ಟ ಅಂದರೂ ನಂದ ‘ಗಂಡ ಕರಳು’ ಹೆಂಡತಿ ಮುಂದ ಕರಗಿ ನೀರ ಆಗಿ ಬಿಡತ. ನಾ ಒಂದ ಮಾತಿಗೆ ಎದ್ದ ಹೋದೆ. ಒಳಗ ನಮ್ಮಪ್ಪಾ ಅಡಗಿ ಮನ್ಯಾಗ ಸುಮ್ಮನ ಬಾಯಿ ಮುಚ್ಗೊಂಡ ನಮ್ಮವ್ವ ತಿಕ್ಕಿ ತೊಳದಿದ್ದ ಭಾಂಡೆ ಗಲಬರಿಸಿ ಡಬ್ಬ ಹಾಕಲಿಕತ್ತಿದ್ದಾ. ನಾ ನನ್ನ ಹೆಂಡತಿ ಹಿಂಡಿದ್ದ ಅರಬಿ ಹೆಗಲ ಮ್ಯಾಲೆ ಹಾಕ್ಕೊಂಡ ಹೊರಗೆ ಬಂದೆ.

ಇದಕ್ಕ ಅಲಾ ಸಂಸಾರ ಅನ್ನೋದ ಮತ್ತ. ಒಬ್ಬರ ತಿಕ್ಕಿ ತೊಳದರ-ಮತ್ತೊಬ್ಬರ ಗಲಬರಸಿ ಡಬ್ಬ ಹಾಕೋದ. ಒಬ್ಬರ ಒಗದರ ಇನ್ನೊಬ್ಬರು ಒಣಾ ಹಾಕೋದು. ಹಿಂಗ ಇದ್ದಮ್ಯಾಲೆ ನಮಗ್ಯಾಕ ಈ ಸುಡಗಾಡ ಇಂಟರನ್ಯಾಶನಲ್ ವುಮೆನ್ಸ್ ಡೇ ಉಸಾಬರಿ ನೀವ ಹೇಳ್ರಿ! ನಂಬದು ಏನ ಇದ್ರು ಸಂಪ್ರದಾಯಸ್ಥ ಸ್ವದೇಶಿ ಸಾಂಸಾರಿಕ ಜೀವನ ವ್ಯವಸ್ಥೆ. ಹಿಂಗಾಗಿ ನಾವು ಇನ್ನೂ ‘ಇಂಡಿಜಿನಿಸ್’ ಆಗಿ ಉಳದೇವಿ, ಇಂಟರನ್ಯಾಶನಲ್ ಆಗಿಲ್ಲಾ, ಆಗೋದು ಬ್ಯಾಡಾ, ನಮಗ ಪ್ರತಿ ದಿವಸನೂ ‘ಸುಖ ಸಂಸಾರದ ದಿವಸ’ ಆಗಬೇಕ ಹೊರತು ‘ಮಹಿಳಾ ದಿವಸಾ’, ‘ಪುರಷ ದಿವಸ’ ಅಂತ ಅಲ್ಲಾ.

ಇರಲಿ ನನ್ನ ಪ್ರಹಸನ ಓದಿ ಹೆಣ್ಣ-ಮಕ್ಕಳು ಬೇಜಾರ ಆಗ ಬ್ಯಾಡರಿ. ’ ಬುರಾ ಮತ್ ಮಾನಿಯೆ, ಎ ಹೋಲಿ ಕಾ ಹೈ. ನಾನೂ ಹಂಗ ಹೆಣ್ಣಮಕ್ಕಳ ಹೊಟ್ಟ್ಯಾಗ ಹುಟ್ಟಿ, ಹೆಣ್ಣಮಕ್ಕಳ ಕೈಯಾಗ ಬೆಳದ, ಹೆಣ್ಣಮಕ್ಕಳ ಅಂದರ ಹೆಂಡತಿ ಆಡಿಸಿದಂಗ ಆಡಕೋತ ಮ್ಯಾಲೆ ಸಾಲದ್ದಕ್ಕ ಒಂದ ಮಾಟನ ಹೆಣ್ಣ ಬ್ಯಾರೆ ಹಡದೇನಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ