ನನ್ನ ಹೆಂಡತಿಗೆ ಮೊದ್ಲ ಮೊದ್ಲ ಈ ಹ್ಯಾಷ ಟ್ಯಾಗ್ ಅಂದರು ಏನು? ಅದನ್ನ ಯಾಕ ಹಾಕ್ತಾರ ಅಂತ ಗೊತ್ತ ಆಗತಿದ್ದಿಲ್ಲಾ, ಅಕಿ ಯಾರರ ಫೇಸಬುಕ್ಕಿನಾಗ ಇಲ್ಲಾ ಟ್ವಿಟ್ಟರನಾಗ ಇದನ್ನ ಹಾಕಿದ್ದರು ಅಂದರ, ಒಂದು ಅವರ ಟೈಪಿಂಗ್ ತಪ್ಪ ಮಾಡ್ಯಾರ (typo) ಇಲ್ಲಾ ಅದ ಏನೋ ಒಂಥರಾ ಎರಡ ಉದ್ದ, ಎರಡ ಅಗಲ ಲೈನದ್ದ ರಂಗೋಲಿ ಅಂತ ತಿಳ್ಕೊಂಡಿದ್ದಳು.
ನಾನೂ ಅಕಿಗೇನ ತಲಿ ಒಡಕೊಂಡ ತಿಳಿಸಿ ಹೇಳೊದ ಬಿಡ, it is not her cup of tea ಅಂತ ಸುಮ್ಮನ ಬಿಟ್ಟ ಬಿಟ್ಟಿದ್ದೆ. ಆದರ ಒಂದ ಸರತೆ ಅಕಿ ಅದರ ಬಗ್ಗೆ ಭಾಳ ತಲಿಕೆಡಸಿಗೊಂಡ
“ರ್ರಿ, ಇದೇನ್ರಿ ಎಲ್ಲಾರೂ ಹೆಸರ ಹಿಂದ ’#’ ಮಾರ್ಕ್ ಹಾಕ್ತಾರ. ಏನದು?” ಅಂತ ನನಗ ಗಂಟ ಬಿದ್ದ ಕೇಳಲಿಕತ್ತಳು.
ಇನ್ನ ಹ್ಯಾಷ ಟ್ಯಾಗ್ ಅಂದರ ಏನಂತ ಗೊತ್ತಿದ್ದರು ಅದನ್ನ ಕನ್ನಡದಾಗ ಹೇಳೊದ ನನಗ ಟಫ್ ಇತ್ತ. ಹಂಗ ಇಂಗ್ಲೀಷನಾಗ ಹೇಳಿದರ ಅಕಿಗೆ ತಿಳಿಯೋದ ಟಫ್ ಇತ್ತ. ಇರಲಿ ಆದರು ಇದ್ದಿದ್ದರಾಗ ತಿಳಿಸಿ ಹೇಳಿದರಾತು ಎಷ್ಟ ಅಂದರೂ ನನ್ನ ಹೆಂಡ್ತಿ ಅಂತ
’ಲೇ, ಅದಕ್ಕ ಹ್ಯಾಷ ಟ್ಯಾಗ ಅಂತಾರ, ಹ್ಯಾಷ್ ಟ್ಯಾಗ್ ಅಂದರ ಒಂದ ಕೊಂಡಿ, ಲಿಂಕ್ ಇದ್ದಂಗ ನೀ ಏನ ಹೇಳ್ತಿರ್ತಿ ಅಲಾ ಅದರಾಗ ನೀ ಯಾರನ್ನ, ಯಾವದನ್ನ ಲಿಂಕ್ ಮಾಡಬೇಕ ಅಂತಿ ಅದರ ಹಿಂದ ಈ ಹ್ಯಾಷ್ ಟ್ಯಾಗ ಹಾಕಿದರ ಅದು ಲಿಂಕ ಆಗ್ತದ, ಮುಂದ ಹಗಲಗಲಾ ಅದನ್ನ ಉಪಯೋಗಿಸಿದರ ಅದ ಟ್ರೇಂಡ ಆಗ್ತದ’ ಅಂತ ತಿಳಿಸಿ ಹೇಳಿದೆ.
ಅದೇನ ಅಕಿ ತಲ್ಯಾಗ ಹೋದಂಗ ಕಾಣಲಿಲ್ಲಾ. ಕಣ್ಣ ಪಿಕಳಿಸಿಕೋತ ನನ್ನ ಮಾರಿ ನೋಡಲಿಕತ್ತಳು. ಮುಂದ ಏನ ಹೋಳಿತೊ ಏನೊ ಒಮ್ಮಿಂದೊಮ್ಮಿಲೇ
’ಈಗ ನಿಮ್ಮವ್ವ ಪ್ರತಿಯೊಂದರಾಗೂ ನನ್ನ ಲಿಂಕ ಮಾಡಿ ಮಾಡಿ ಮಾತಾಡ್ತಾರಲಾ, ಅದ ಒಂಥರಾ ಹ್ಯಾಷ್ ಟ್ಯಾಗ ಇದ್ದಂಗ ಹೌದಲ್ಲ’ ಅಂದ್ಲು. ಈ ಸರತೆ ನನಗ ತಿಳಿಲಿಲ್ಲಾ,
ಅಕಿ ನನ್ನ ಮಾರಿ ನೋಡಿ,
“ಈಗ ನೋಡ್ರಿ ನಿಮ್ಮವ್ವ ಮಾತ ಮಾತಿಗೆ
’ಅಯ್ಯ #ಪ್ರೇರಣಾ, ಏನ ಛಂದ ಭಾಂಡಿ ತಿಕ್ಕಿಯ ನಮ್ಮವ್ವ, ಆ # ಕೆಲಸದೋಕಿದ ಬೇಕಾತ ನಿಂದ ಬ್ಯಾಡಾತಲಾ’ಅಂತ ನನಗ,
ಚಹಾಕ್ಕ ಸ್ವಲ್ಪ ಸಕ್ಕರಿ ಜಾಸ್ತಿ ಆದರ ’ಏನಾತ ತೊಗೊ, ನಿನ್ನ ಹೆಂಡತಿ #ಪ್ರೇರಣಾ ಮಾಡಿದ್ದಪಾ, ಸುಮ್ಮನ #ಬಾಯಿ ಮುಚಗೊಂಡ ಕುಡಿ’ಅಂತ ನಿಮಗ
’ಲೇ, # ದನಾ ಕಾಯೋಕಿ ಮಗನ, ಹಿಂಗ ಮನಿ ಹರವಿದರ ಹೆಂಗ? #ನಿಮ್ಮವ್ವಗ ದಿವಸಕ್ಕ ಒಂದ ಸರತೆ #ಛಂದಾಗಿ ಕಸಾ ಹೊಡಿಯೋದ ರಗಡ ಆಗಿರ್ತದ’ ಅಂತ ನನ್ನ ಮಗಗ ಅಂತಾರಲಾ, ಹಿಂಗ ಎಲ್ಲಾದರಾಗು ನನ್ನ ಹೆಸರ ಒಂಥರಾ ಟ್ಯಾಗ ಮಾಡಿ ಎಲ್ಲಾ ತಪ್ಪ ಕೆಲಸಕ್ಕ ನನ್ನ ಲಿಂಕ ಮಾಡ್ತಾರಲಾ ಇದ ಹೌದಲ್ಲ ಹ್ಯಾಷ್ ಟ್ಯಾಗ್ ಅಂದರ” ಅಂದ್ಲು.
ನನಗ ಏನ ಬರೋಬ್ಬರಿ ಹೇಳಿದ್ಲಲೇ ಇಕಿ, ಒಮ್ಮಿಂದೊಮ್ಮಿಲೇ ಎಷ್ಟ ಶಾಣ್ಯಾಕಿ ಆದ್ಲಲಾ, ಏ ಅಡ್ಡಿ ಇಲ್ಲಾ ಖರೇನ ನನ್ನ ಹೆಂಡ್ತಿ ಅನಸಲಿಕತ್ತಾಳ ಅಂತ ಅಗದಿ ಖುಷ್ ಆತ. ಹಂಗ ಈ ಎಲ್ಲಾ ಹ್ಯಾಷ್ ಟ್ಯಾಗ್ ಇದ್ದದ್ದ ವರ್ಡ ನೋಡ್ರಿ #ಕಲಸದೋಕಿ, #ದನಾ ಕಾಯೋಕಿ ಇವೇಲ್ಲಾ ಕಡಿಕೆ ಲಿಂಕ ಆಗೋದ #ಪ್ರೇರಣಾಗ. ನಾ ಅಕಿಗೆ
“ಏ ಏನ್ ಭಾರಿ ಹೇಳಿದಿ # ಪ್ರೇರಣಾ, ನೀ ಯಾವಾಗ # ಇಷ್ಟ_ ಶಾಣ್ಯಾಕಿ_ ಆದಿ” ಅಂತ ಅಂದ ಬಿಟ್ಟೆ.
ತೊಗೊ ಅಕಿಗೆ ತಲಿ ಕೆಟ್ಟ ಬಿಡ್ತ.
’ನಂಗೇನ ತಿಳ್ಕೊಂಡಿರಿ #ತಾಯಿ_ ಮಗಾ, ಎಲ್ಲಾ ತಪ್ಪ ಕೆಲಸದಾಗು ನನ್ನ ಹೆಸರ ಹಿಂದ ಹ್ಯಾಷ್ ಟ್ಯಾಗ ಹಾಕಿ ಹಾಕಿ ಬರೇ ತಪ್ಪ ಕೆಲಸಕ್ಕ ನಾನ ಕಾರಣ ಅನ್ನೋದ ಟ್ರೆಂಡಿಂಗ್ ಆಗೊ ಹಂಗ ಮಾಡಿ ಬಿಟ್ಟಿರಿ ತೊಗೊರಿ’ ಅಂತ ಬಯಲಿಕತ್ತಳು.
ಹಂಗ ಪಾಪ ಅಕಿ ಹೇಳೋದನು ಖರೇನ, ಯಾವಾಗ ನಂದ ಲಗ್ನ ಆಗೇದ ಆಗೇದ ಆವಾಗಿಂದ ನಮ್ಮವ್ವ ಎಲ್ಲಾ ತಪ್ಪ ಕೆಲಸಕ್ಕೂ ಅಕಿ ಹೆಸರ ಹಿಂದ # ಹಾಕಿ ಲಿಂಕ್ ಮಾಡಿ ಇವತ್ತ ನಮ್ಮ ಇಡಿ ಆಡೂರ ಮನೆತನದಾಗ ನನ್ನ ಹೆಂಡತಿ ಹೆಸರ ನಂ. ೧ ಟ್ರೆಂಡಿಂಗ್ ಆಗೇದ. ಕೆಟ್ಟ ಕೆಲಸಕ್ಕ ಇಷ್ಟsನ ಮತ್ತ.
ಒಮ್ಮೆ ಯಾವಾಗ ನನ್ನ ಹೆಂಡತಿಗೆ ಈ #( ಹ್ಯಾಷ್ ಟ್ಯಾಗ್) ಮಹಾತ್ಮೆ ತಿಳಿತಲಾ ಆವಾಗಿಂದ ಅಕಿನು ಅದನ್ನ ಉಪಯೋಗಿಸಲಿಕ್ಕೆ ಶುರು ಮಾಡಿದ್ಲು. ಆದರ ಅಕಿ ಹ್ಯಾಷ್ ಟ್ಯಾಗ್ ಹಾಕಿ ಹಾಕಿ ಲಿಂಕ್ ಮಾಡಲಿಕ್ಕೆ ಶುರು ಮಾಡಿದ್ದ ನನಗ, ಇರೊಂವ ಒಬ್ಬ ಗಂಡ ಮತ್ತ ಅವನ ಟಾರ್ಗೆಟ್ ಮಾಡಲಾರದ ಯಾರಿಗ ಮಾಡ್ತಾಳ? ನಮ್ಮವ್ವನ ಮ್ಯಾಲಿನ ಸಿಟ್ಟ ತಗದ ನನ್ನ ಮ್ಯಾಲೆ ದಿವಸಾ ಮನ್ಯಾಗ ಅಕಿವು # ಹಾಕಿ ಹಾಕಿ ಟ್ವೀಟ್ ಶುರು ಆದವು, ಬೆಳಕ ಹರಿಯೋ ಪುರಸತ್ತ ಇಲ್ಲದ
’# ರ್ರಿ..ಏಳ್ರಿ ಸಾಕ, ಅದ ಏಷ್ಟೊ ತನಕ ಮಲ್ಕೋತಿರಿ # ಮುಗ್ಗಲಗೇಡಿ ಗತೆ’
’# ರ್ರಿ, ಆಫಿಸಿನಿಂಗ ಬರಬೇಕಾರ ಒಂದ #ಕೆಲಸಾಮಾಡ್ರಿ, ನನ್ನ #ಜಂಪರ್ ಹೊಲಿಲಿಕ್ಕೆ ಕೊಟ್ಟೇನಿ ಅದನ್ನ # ಸೈಜ್ ಚೆಕ್ ಮಾಡಿ ತೊಗೊಂಡ ಬರ್ರಿ’
’#ರ್ರಿ, ಯುಗಾದಿ ಬಂತ, ಈ ಸರತೆನರ #ಬಂಗಾರದ್ದ ಗಟಾಯಿಸಿದ #ಮಂಗಳಸೂತ್ರ ಮಾಡಸ್ತಿರೋ ಇಲ್ಲೊ ನೋಡ್ರಿ’
ಹಿಂಗ ಮಾತ ಮಾತಿಗೆ # ಹಾಕಿ ಮಾತಡಲಿಕತ್ತಳು, ಅಕಿ ಇಷ್ಟ ವರ್ಡ ವರ್ಡಗೆ ಹ್ಯಾಷ ಟ್ಯಾಗ ಹಾಕಲಿಕತ್ತಳಲಾ, ಆ ಎಲ್ಲಾ ಟ್ಯಾಗ ಒಳಗ ಸಿಕ್ಕೊಂಡ ಸಾಯೊಂವ ನಾನ ಮತ್ತ. ಯಾಕಂದರ ಅಕಿ ಮಾತನಾಗ ಒಂದ ಕಾಮನ್ ಅಂದರ ’#ರ್ರಿ’ ಅಂದರ ಅದ ನಾನ, ಹಿಂಗಾಗಿ
#ಬಂಗಾರದ್ದ #ಮಂಗಳಸೂತ್ರ
#ಜಂಪರ್ # ಸೈಜ್
#ಕೆಲಸಾಮಾಡ್ರಿ # ಮುಗ್ಗಲಗೇಡಿ ಇದರಾಗ ಯಾವದ ವಿಷಯ ಬಂದ್ರು ಅದ #ರ್ರಿ ಗೆ ಲಿಂಕ್ ಆಗೇ ಬಿಡೋದ.
ಈಗ ನಮ್ಮ ಮನ್ಯಾಗ ನಾ ಎಲ್ಲಾದರಾಗು ಟ್ರೆಂಡಿಂಗ್ ಟ್ರೆಂಡಿಂಗ್…ಏನ್ಮಾಡ್ತೀರಿ?
ಅಕಿಗೆ ಈಗ ಅಂತು ಈ ಸುಡಗಾಡ ಹ್ಯಾಷ್ ಟ್ಯಾಗದ್ದ ಇಷ್ಟ ಹುಚ್ಚ ಹಿಡದದಲಾ ಯಾರಿಗರ ಪೋಸ್ಟ ಕಾರ್ಡನಾಗ ಪತ್ರಾ ಬರದರು # ಹಾಕ್ತಾಳ, ಕಿರಾಣಿ ಸಾಮಾನ ಲಿಸ್ಟ ಒಳಗ
#ತೊಗರಿ ಬ್ಯಾಳಿ – ೪ ಕೆ.ಜಿ
# ಕೇಸರಿ ರವಾ – ೨ ಕೆ.ಜಿ
#ಸಾಬುದಾಣಿ – ಪಾವ ಕೆ.ಜಿ
#ದಪ್ಪನ ಅವಲಕ್ಕಿ – ೩ ಕೆ.ಜಿ……….
ಅಂತ ಬರದ ಕಳಸ್ತಾಳ, ನನಗ ಎಸ್. ಎಮ್. ಎಸ್ ಮಾಡಿದರು # ಹಾಕ್ತಾಳ.
ತನ್ನ ಸಹಿ ಒಂದ ಬಿಟ್ಟ ಎಲ್ಲಾದರಾಗೂ # ಹಾಕ್ತಾಳ. ಏನ ಹೇಳೋದ ಹಿಂತಾಕಿಗೆ?
ಲಗ್ನಾ ಮಾಡ್ಕೋಬೇಕಾರ ಹೂಯ್ಯಿ ಅಂತ ಅಕಿ #ಬಣ್ಣಾ #ಅವರಪ್ಪನ_ಬಂಗಾರ #ಛಂದಾ-ಚಾರ ನೋಡಿ ನೋಡಿ ಮಾಡ್ಕೊಂಡ್ವಿ, ಒಂದ ಸರತೆ ಅಕಿ #ತಲಿ ಟ್ರೆಂಡಿಂಗ್ ಅದನೋ ಇಲ್ಲಾ ಅಂತ ನೋಡಲಿಲ್ಲಾ ಈಗ ಅವ ಹ್ಯಾಷ್ ಟ್ಯಾಗ #ಕುತಗಿಗೆ ಊರಲ ಆಗ್ಯಾವ ಇಷ್ಟ.
ನೋಡೊಣಂತ ಈ ವರ್ಷದ್ದ ಮನ್ಮಥನಾಮ ಸಂವತ್ಸರ ಬಂದ ಮ್ಯಾಲೇರ ಸಂಸಾರೇನರ ಬದಲಾಗ್ತದೇನೊ ಅಂತ..ಅಲ್ಲಾ ಹಂಗ ಸಂಸಾರ ಬದಲಾಗೋದ ಅಂದರ ಹೆಂಡತಿ ಬದಲಾಗೋದಲ್ಲಾ ಮತ್ತ. ಹಂಗ ನೂರಾ ಎಂಟ ಹ್ಯಾಷ್ ಟ್ಯಾಗ್ ಕಟಗೊಂಡ ಮಾಡ್ಕೊಂಡ ಹೆಂಡ್ತಿ ಟ್ರೆಂಡಿಂಗ್ ಇರಲಿ ಬಿಡಲಿ, ಅಕಿ ನಮ್ಮೊಕಿನರಿಪಾ.
ಇವತ್ತ ನಮ್ಮ ಸಂಸಾರದೊಳಗ, ಸಂಪ್ರದಾಯದೊಳಗ, ಸಂಸ್ಕೃತಿ ಒಳಗ, ಸಂಬಂಧದೊಳಗ ಒಂದಕ್ಕೊಂದ ಹ್ಯಾಷ್ ಟ್ಯಾಗ ಇದ್ದರ ಜೀವನ ಛಂದ..ಮರಿ ಬ್ಯಾಡರಿ…ನಿಮಗೇಲ್ಲಾ ಯುಗಾದಿ ಹಬ್ಬದ ಶುಭಾಷಯಗಳು,ನೀವು ಇದ್ದನ್ನ ಓದಿ ಮತ್ತೊಬ್ಬರಿಗೆ # ಹಾಕಿ ಟ್ಯಾಗ ಮಾಡರಿ ಮತ್ತ್.