“ರ್ರಿ…ಮುಂಜ ಮುಂಜಾನೆ ಏನ ಲ್ಯಾಪಟಾಪ್ ಹಿಡ್ಕೊಂಡ ಕೂತಿರಿ…. ಒಲಿ ಮ್ಯಾಲೆ ಹಾಲ ಇಟ್ಟೆನಿ ನೋಡ ಅಂತ ಹೇಳಿದ್ದಿಲ್ಲಾ” ಅಂತ ಅಂಗಳಾ ಕಸಾ ಹುಡಗಲಿಕತ್ತಿದ್ದ ನನ್ನ ಹೆಂಡ್ತಿ ಓಣಿ ಮಂದಿಗೆ ಕೇಳೊ ಹಂಗ ಒದರಿದ್ಲ.
“ಲೇ….ಒಂದ ಸ್ವಲ್ಪ ತಡ್ಕೊ…..ಮುಂದಿನ ವಾರ ಸಂಜುನ ಅಪ್ಪಾ-ಅಮ್ಮಂದ 50 ವರ್ಷದ ಅನಿವರ್ಸರಿ ಅಂತ…ಅದಕ್ಕ ಒಂದ ಮ್ಯಾಟರ್ ಬರದ ಕೊಡ ಕಾರ್ಡ್ ಮಾಡಸ್ತೇನಿ ಅಂತ ಅಂವಾ ಹೇಳಿ ಒಂದ ವಾರ ಆತ, ನಾ ಮರತ ಬಿಟ್ಟಿದ್ದೆ…”
“ಭಾಳ ಶಾಣ್ಯಾರ ಇದ್ದೀರಿ ತೊಗೊರಿ…… ನೀವ ಅವರ ಅನಿವರ್ಸರಿ ಮ್ಯಾಟರ್ ಬರೆಯೋತನಕಾ ಹಾಲ ಕುದ್ದ ಕುದ್ದ ಬಾಸುಂದಿ ಆಗಿರ್ತದ’ ಅಂತ ಬೈಕೋತ ತಾನ ಎಡಗಯ್ಯಾಗ ಕಸಬರಗಿ ಹಿಡ್ಕೊಂಡ ಹೋಗಿ ಗ್ಯಾಸ್ ಆರಿಸಿ ಬಂದ..”ಅಲ್ಲರಿ ಅವರದ 50ನೇ ವರ್ಷದ ಅನಿವರ್ಸರಿನ…ನೋಡಿದರ ಹಂಗ ಕಾಣಂಗೇಲಾ’ ಅಂತ ಅಂದ್ಲು.
’ನೋಡ… ಅವರ ಹೆಂಗ ಮೆಂಟೇನ್ ಮಾಡ್ಯಾರ…ನೀ ನೋಡಿದರ ಇನ್ನೂ ಲಗ್ನ ಆಗಿ ಹದಿನೈದ ವರ್ಷ ಆಗಿಲ್ಲ ಈಗ ಸಾಕ ಸಾಕಾಗಿ ಹೋಗೇದ ಜೀವ ಈ ಗಂಡನ ಕಾಲಾಗ ಅಂತ ದಿವಸಕ್ಕ ಹತ್ತ ಸರತೆ ಅಂತಿ’ ಅಂತ ನಾ ಅನ್ನೋದ ತಡಾ
’ನೀವ ನೋಡ್ರಿ..ನನಗೇನ ತಲಿ ಹೇಳ್ತೀರಿ……ಮಾತ ಮಾತಿಗೆ ನಿನ್ನ ಕಟಗೊಂಡಿದ್ದ ದೊಡ್ಡ ತಪ್ಪ ಆಗೇದ ಅಂತಿರ್ತೀರಿ…ಏನೋ ನಾ ಅಂತ ಹದಿನೈದ ವರ್ಷ ಮೆಂಟೇನ್ ಮಾಡೇನಿ ಬ್ಯಾರೆ ಯಾರ ಆಗಿದ್ದರ ಇಷ್ಟೋತ್ತಿಗೆ ಬಿಟ್ಟ ಹೋಗಿರ್ತಿದ್ದರು’ ಅಂತ ನಂಗ ಜೋರ ಮಾಡಿದ್ಲು….ಆತ ತೊಗೊ ಇನ್ನ ಇಕಿ ಜೊತಿ ಜಗಳಾಡ್ಕೋತ ಕೂತರ ಎಲ್ಲೇರ ಸಂಜುರ ಅವ್ವಾ-ಅಪ್ಪಂದ ಅನಿವರ್ಸರಿ ಡ್ರಾಫ್ಟ ಕಿಂತ ಮೊದ್ಲ ನಂದ ಡೈವರ್ಸ್ ಮ್ಯಟರ್ ಡ್ರಾಫ್ಟ ಮಾಡಬೇಕಾಗ್ತದ ಅಂತ ಆ ವಿಷಯ ಅಲ್ಲಿಗೆ ಬಿಟ್ಟ ನಮ್ಮ ದೋಸ್ತಗ ಅನಿವರ್ಸರಿ ಕಾರ್ಡ್ ಮ್ಯಾಟರ್ ಡ್ರಾಫ್ಟ ಮಾಡಿ ಕೊಟ್ಟಿದ್ದೆ……
ಈ ಮಾತಿಗೆ ಈಗ ಎಂಟ ವರ್ಷ ಆತ…ಇವತ್ತ ಅವರ 58ನೇ ಅನಿವರ್ಸರಿ…..
ಹಿರಿಯ ನಾಡಿಗೀರ ದಂಪತಿಗಳಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು, ಅವರ ಹಿಂಗ ಖುಷಿ ಖುಷಿಯಿಂದ ಇರಲಿ, ನಮ್ಮಂಗ ದಿವಸಕ್ಕ ಹತ್ತ ಸರತೆ ಜಗಳಾಡೊ ದಂಪತಿಗಳಿಗೂ ನಿಮ್ಮ ಆಶೀರ್ವಾದ ಸದಾ ಇರಲಿ… 60ನೇ ಅನಿವರ್ಸರಿಗೆ ಮತ್ತ ಪಾರ್ಟಿ ಕೊಡ್ತೀರಿ ಅಂತ ಆಶಿಸುತ್ತ…..
ಅವರ ಐವತ್ತನೇ ವರ್ಷದ ಅನಿವರ್ಸರಿಗೆ ನಾ ಬರದ ಕೊಟ್ಟ ಡ್ರಾಫ್ಟ ನಿಮ್ಮ ಜೊಗಿ ಹಂಚಗೊಳ್ಳಿಕತ್ತೇನಿ…ಒಂದ ಸರತೆ ಓದರಿ, ನಿಮ್ಮ ಶುಭಾಶಯ ಅವರಿಗೆ ಇರಲಿ…
“ನಾನು ಶ್ರೀ ರಂಗನಗೌಡ ಕೃಷ್ಣಗೌಡ ನಾಡಿಗೀರ್, ಸಾಕೀನ ಕುಂದಗೋಳ ನಿಮಗೆಲ್ಲಾ ಗೊತ್ತ ಅದ ಅಲಾ…..
ಇನ್ನ ನನ್ನ ಹೆಂಡತಿ ಹುಬ್ಬಳ್ಳಿ ಹುಡಗಿ ರೇಣುಕಾ, ಅಕಿದು ನಿಮಗೇಲ್ಲಾ ಪರಿಚಯ ಅದ.
ಹಂಗ ಇವತ್ತಿಗೆ ಇಕಿನ್ನ ಕಟಗೊಂಡ ಐವತ್ತ ವರ್ಷ ಆತ ಅನ್ರಿ……ಆ ಐವತ್ತ ವರ್ಷದಾಗ ಸಾಧಿಸಿದ್ದ ಭಾಳ ಇದ್ರು ನಾಲ್ಕ ಮಂದಿ ಕಣ್ಣಿಗೆ ಕಾಣೊದ ಅಂದ್ರ ಎರಡ ಹೆಣ್ಣ ಮಕ್ಕಳು ಒಬ್ಬ ಮಗಾ. ಆರತಿಗೆ ಎರಡ ಹೆಣ್ಣಮಕ್ಕಳು ಕೀರ್ತಿಗೆ ಒಬ್ಬ ಮಗಾ ಸಾಕು ಅಂತ ಮೂರ ಹಡದ ಹೆಂಡ್ತಿದ ಫ್ಯಾಮಿಲಿ ಪ್ಲ್ಯಾನಿಂಗ ಮಾಡಿಸಿ ಕೈ ಬಿಟ್ಟಿದ್ದೆ.
ಹಂಗ ಈ ಮಕ್ಕಳಿಗೆ ಆಸ್ತಿ ಏನ ಮಾಡದಿದ್ರು…ಮಕ್ಕಳನ ಆಸ್ತಿ ಮಾಡಿದ್ದ ಸಮಾಧನ ಅಂತು ಅದ.
ಈ ಮಕ್ಕಳು ಹೆಂಡ್ತಿನ್ನ ಸಾಕೋದರಾಗ ಐವತ್ತ ವರ್ಷ ಹೆಂಗ ಹೋತ ಏನೋ ಒಂದು ಗೊತ್ತಾಗಲಿಲ್ಲಾ. ಅದೇನೊ ಅಂತಾರಲಾ ಸುಖಾ ಇದ್ದಾಗ ಮನಷ್ಯಾಗ ಟೈಮ ಹೋಗಿದ್ದ ಗೊತ್ತಾಗಂಗಿಲ್ಲಾ ಅಂತ ಹಂಗ ಐವತ್ತ ವರ್ಷ ಅನ್ನೋದ ಕಣ್ಣ ಮುಚ್ಚಿ ಕಣ್ಣ ತಗೆಯೊದರಾಗ ಹೋತ. ಅಲ್ಲಾ, ಇದಕ್ಕೇಲ್ಲಾ ಕಾರಣ ನನ್ನ ಸೌಭಾಗ್ಯವತಿನ ಆ ಮಾತ ಬ್ಯಾರೆ.
ಯಾ ಜನ್ಮದ ಋಣಾನೋ ಏನೋ ಈ ಜೀವನದಾಗ ನನ್ನ ಹೆಂಡತಿ ಆಗಿ ನನ್ನ ಜೊತಿ ತನ್ನ ಜೀವಾ ತೇಯದ, ಇಬ್ಬರೂ ಒಬ್ಬರದೊಬ್ಬರದ ಜೀವಾ ಹಂಚಗೊಂಡ ತಿಂದ ಇವತ್ತ ಇಬ್ಬರೂ ಸೇರಿ ಐವತ್ತನೇ ವರ್ಷದ ಮದುವಿ ವಾರ್ಷಿಕೋತ್ಸವ ಆಚರಿಗೊಳ್ಳಿಕತ್ತೇವಿ…..
ಅಲ್ಲಾ ಹಂಗ ಭಾಳಿಷ್ಟ ಮಂದಿಗೆ ಮತ್ತ ನಮ್ಮ ಮಕ್ಕಳು-ಮೊಮ್ಮಕ್ಕಳಿಗೆ ಮದ್ವಿಗೆ ಬರಲಿಕ್ಕಾ ಆಗಿದ್ದಿಲ್ಲಾ ಅಂತ ಈಗ ಮತ್ತ ಫಂಕ್ಶನ್ ಮಾಡಿ ಕರಿಲಿಕತ್ತೇವಿ…
ದಯವಿಟ್ಟ ನೀವು ನಿಮ್ಮ ಸಹ ಕುಟಂಬದ ಜೊತಿ ಬಂದ ಇನ್ನೊಂದ ಐವತ್ತ ವರ್ಷ ನಾ ಹಿಂಗ ಸಂಸಾರದ ಜಂಜಾಟದೊಳಗ ಸಿಕ್ಕೊಂಡಿರಲಿ ಆಂತ ಶುಭ ಹಾರೈಸಿ ಹೋಗರಿ ಮತ್ತ….ಲಗ್ನದಾಗ ಗಿಫ್ಟ ಕೊಟ್ಟೊರ ಈಗ ಮತ್ತೇನ ಗಿಫ್ಟ ಕೋಡದ ಬ್ಯಾಡ… ಬರ್ತಿರಲಾ ಮತ್ತ…..ನಾವು ಇಬ್ಬರು ನಿಮ್ಮ ದಾರಿ ಕಾಯಿತಿರ್ತೇವಿ …….
ಶ್ರೀಮತಿ/ಶ್ರೀ ರಂಗನಗೌಡ ಕೃಷ್ಣಗೌಡ ನಾಡಿಗೀರ, ಹುಬ್ಬಳ್ಳಿ
Super 👌🏻