ನಾಳೆ ವ್ಯಾಲೆಂಟೈನ್ ಡೇ ಅಂತ. ಹಂಗ ಅದ ನಮ್ಮ ಸಂಪ್ರದಾಯ, ಸಂಸ್ಕೃತಿ ಅಂತು ಅಲ್ಲಾ ಮ್ಯಾಲೆ ಲಗ್ನಾ ಆಗಿ ಇಪ್ಪತ್ತ ವರ್ಷ ಆದಮ್ಯಾಲೆ ಕಟಗೊಂಡ ಹೆಂಡ್ತಿ ಎಷ್ಟ ಜೀವಾ ತಿಂದರು ಒಂದ ಒಪ್ಪತ್ತನೂ ಏಕ ಪತ್ನಿ ವೃತ ಬಿಡಲಾರದ ಪಾಲಸೋರಿಗೆ ಎಲ್ಲಿ ವ್ಯಾಲೆಂಟೈನ್ ಡೇ ಅಂತೇನಿ.
ಆದರು ಹೋದ ವರ್ಷ ವ್ಯಾಲೆಂಟೈನ್ ಡೇ ಸೆಲೆಬ್ರೇಟ್ ಮಾಡ್ಬೇಕಾರ ಎಷ್ಟೊ ಮಂದಿಗೆ ಮುಂದ ಕ್ವಾರೆಂಟೈನ್ ಡೇ ಬರ್ತದ, ವೆಡ್ ಲಾಕ್ ಡೇ ಫಿಕ್ಸ್ ಮಾಡ್ಬೇಕಾರ ಲಾಕ್ ಡೌನ್ ಆಗ್ತದ ಅಂತ ಕನಸ-ಮನಸಿನಾಗು ಗೊತ್ತಿರ್ಲಿಲ್ಲಾ. ಅಲ್ಲಾ ಅವೇಲ್ಲಾ ಯಾರ ಕೈಯಾಗಿನ ಮಾತಲ್ಲಾ ಅಂದರು ಅವು ಅವರವರ ಕೈಯಾಗಿಂದ ಮಾತ ಬಿಡ್ರಿ. ಎಷ್ಟ ಸಬಕಾರ, ಸ್ಯಾನಿಟೈಸರ ಹಚ್ಚಿ ಕೈತೊಳ್ಕೊಂಡರ ಏನ ಆಗೋದ ಅದ, ನಮ್ಮ ಕೈಯಾಗ ಮದ್ವಿ ಗೆರಿ ಯಾವಾಗ ಮೂಡ್ತದ ಆವಾಗ ಲಗ್ನ ಆಗೋದಲಾ.
ಹಿಂಗಾಗಿ ಎಷ್ಟೊ ವ್ಯಾಲೆಂಟೈನಗೊಳು ಕ್ವಾರೆಂಟೈನ್ ಆದ್ವು, ಎಷ್ಟೋ ವೆಡ್ ಲಾಕ್, ಲಾಕ್ ಡೌನ್ ಆದ್ವು.
ಆವಾಗ ನಮ್ಮ ಕಡೆ ಒಂದಿಷ್ಟ ವಿಚಿತ್ರ ವಿಚಿತ್ರ ಪ್ರಹಸನ ನಡದ್ವು.
ನಮ್ಮ ಮೌಶಿ ಮಗಾ ಪವ್ಯಾಂದ ಮದ್ವಿ ಮಾರ್ಚ ಎಂಡಿಗೆ ಫಿಕ್ಸ್ ಆಗಿತ್ತ. ಇನ್ನ ಮನ್ಯಾಗ ಒಂದ ವಾರದಿಂದ ಸಜ್ಜಗಿ ಮೂಹೂರ್ತ, ಸೋಡ ಮುಂಜವಿ, ದೇವರ ಊಟ ಅಂತ ಒಂದಿಲ್ಲಾ ಒಂದ ಕಾರ್ಯಕ್ರಮ ಇರ್ತಿದ್ವು. ನಮ್ಮ ಮನ್ಯಾಗ ಅಂತು ಒಂದ ವಾರ ಕುಕ್ಕರ ಸೀಟಿನ ಹೊಡಸಿದ್ದಿಲ್ಲಾ ಅನ್ನರಿ. ಯಾಕಂದರ every alternate day ಅವರ ಮನ್ಯಾಗ ಫಂಕ್ಶನ್ ಇರ್ತಿತ್ತ, ರಾತ್ರಿ ಬರ್ತ ಉಳದಿದ್ದ ಅನ್ನಾ-ಹುಳಿ ಕಟಗೊಂಡ ಬಂದ ಬಿಡ್ತಿದ್ವಿ. ಅದ ಮರದಿವಸಕ್ಕ ಆಗ್ತಿತ್ತ. ಅಲ್ಲಾ ತುಟ್ಟಿ ಕಾಲ ಚೆಲ್ಲಲಿಕ್ಕ ಹೆಂಗ ಬರತದ. ರಾಯರ ಆರಾಧನಿಗೆ ಮಠಕ್ಕ ಹೋದರ ಹುಳಿ ಕಟಗೊಂಡ ಬರೊ ಪೈಕಿ ನಾವ ಇನ್ನ ಮದ್ವಿ ಮನಿಗೆ ಹೋದರ ಬಿಡ್ತೇವೇನ್?
ಇನ್ನೇನ ಎರಡ ದಿವಸಕ್ಕ ಮದ್ವಿ ಅದ ಅನ್ನೋದರಾಗ ಲಾಕ್ ಡೌನ್ ಅನೌನ್ಸ್ ಆತ. ಏನ್ಮಾಡ್ತೀರಿ? ಕಷ್ಟ ಪಟ್ಟ ಹುಡಗಿಗೆ ಹೂಂ ಅನಿಸಿಸಿ ಫಿಕ್ಸ್ ಮಾಡಿದ್ದ ಲಗ್ನ ಮುಂದ ಅಂತು ಹಾಕಲಿಕ್ಕೆ ಬರಂಗಿಲ್ಲಾ, ಕಡಿಕೆ ಅವರಿವರ ಕೈಕಾಲ ಹಿಡ್ಕೊಂಡ (sorry ಬರೇ ಕಾಲ ಹಿಡ್ಕೊಂಡ ಯಾಕಂದರ ಕೊರೊನಾ ಟೈಮ ಒಳಗ ಜನಾ ಕೈ ಕೊಡೊದ ಬಿಟ್ಟ ಬಿಟ್ಟಿದ್ದರು) ನಾನ ಸ್ಟೇಶನ್ ರೋಡ ಈಶ್ವರ ದೇವರ ಗುಡ್ಯಾಗ ನಿಂತ ಲಗ್ನಾ ಮಾಡಿಸಿಸಿದೆ. ಬರೇ ಇಪ್ಪತ್ತ ಮಂದಿ ಮುಂದ ಲಗ್ನ ಆತ. ಇನ್ನ ಬ್ಯಾರೆ ಊರವರ ಅಲ್ಲೇ ಫೇಸಬುಕ್ಕಿನಾಗ ಲೈವ ನೋಡಿ ವಾಟ್ಸಪನಾಗ ಅಕ್ಕಿಕಾಳ ಹಾಕಿ ಆಶೀರ್ವಾದ ಮಾಡಿದರು.
’ಇರೋಂವ ಒಬ್ಬ ಮಗನ ಲಗ್ನಕ್ಕೂ ಜನಾ ಬರಲಿಲ್ಲಾ’ ಅಂತ ಮೌಶಿ ಭಾಳ ಮನಸಿ ಹಚಗೊಂಡಿದ್ಲು.
ಪಾಪ ಅಕಿ ಸಂಕಟ ಏನಪಾ ಅಂದರ ಲಗ್ನ ಕಾರ್ಡ ಕೊಡಲಿಕ್ಕೆ ಹೋದಾಗ ದೊಡ್ಡಿಸ್ತನ ಮಾಡಿ ರಿಟರ್ನ್ ಗಿಫ್ಟ ಕೊಟ್ಟ ಬಂದಿದ್ಲು. ಮದ್ವಿಗೆರ ಜನಾನೂ ಬರಲಿಲ್ಲಾ, ಗಿಫ್ಟೂ ಬರಲಿಲ್ಲಾ.
ನಮ್ಮ ಪವ್ಯಾನ ನಸೀಬಕ್ಕ ವೆಡಲಾಕ್ ಜೊತಿ ಲಾಕಡೌನನೂ ಆಗಿತ್ತ. ಮನ್ಯಾಗ ಹೊಸಾ ಹೆಂಡ್ತಿ ಇದ್ಲು. ಮುಂದ ಹನಿಮೂನ್ ಇಲ್ಲಾ ಏನಿಲ್ಲಾ. ಅಲ್ಲಾ, ತಿಂಗಳಾನ ಗಟ್ಟಲೇ ಮನ್ಯಾಗ ಇದ್ದ ಮ್ಯಾಲೆ ಮತ್ಯಾಕ ಸಪರೇಟ್ ಹನಿಮೂನ. ಮದ್ವಿಗೆ ಕರದವರ ಮುಂದ ಡೈರೆಕ್ಟ ಕುಬಸಕ್ಕ ಬರೋಹಂಗ ಆತ. ಅಲ್ಲಾ ಲಾಕಡೌನ ಇದ್ದರ ಏನ? ಕೊರೊನಾ ಬಂದರ ಏನ? ಆಗೋದ ಆಗಬೇಕಲಾ?
ಇನ್ನ ನಮ್ಮ ರಮ್ಯಾಂದ ಒಂದ ಕಥಿ, ಅಂವಾ ೨೦೧೯ ಡಿಸೆಂಬರ್ ಒಳಗ ಎಂಗೇಜಮೆಂಟ್ ಮಾಡ್ಕೊಂಡ ಎಪ್ರಿಲ್ ಒಳಗ ಮದ್ವಿ ಫಿಕ್ಸ ಮಾಡ್ಕೊಂಡಿದ್ದಾ. ಅಂವಾ ಕೆಲಸಾ ಮಾಡೋದ US ಒಳಗ ಹಿಂಗಾಗಿ ಇನ್ನೇನ ಮದ್ವಿ ಒಂದ ವಾರ ಅದ ಅನ್ನೋ ಹೊತ್ತಿಗೆ ಬರೋಂವ ಇದ್ದಾ. ಅಷ್ಟರಾಗ Internationa flights ಬಂದ ಅಂದರು ಹಿಂಗಾಗಿ ಲಾಸ್ಟ ವಸ್ತಿ ವಿಮಾನ ಹತ್ತಿ ಇಂಡಿಯಾಕ್ಕ ಬಂದಾ. ಬರೋ ಪುರಸತ್ತ ಇಲ್ಲದ ಅವಂಗ ದಿಲ್ಲಿ ಒಳಗ ಕ್ವಾರೆಂಟೈನ್ ಮಾಡಿದರು. ಎಪ್ರಿಲ್ ಒಳಗಿನ ಮದ್ವಿ ಮುಂದ ಹೋತ. ಎಲ್ಲಾರೂ ಅವಂಗ ’ ಏನಪಾ ಕ್ವಾರೆಂಟೈನ್ ವ್ಯಾಲೆಂಟೈನ್’ ಅನ್ನೊಹಂಗ ಆತ.
ಕಡಿಕೆ ಮೊನ್ನೆ ಡಿಸೆಂಬರ ಒಳಗ ಆ ಹಳೇ ಎಂಗೇಜಮೆಂಟ ಆಗಿದ್ದ ಹುಡಗಿ ಜೊತಿನ ಮದ್ವಿ ಆತ.
ಇನ್ನೊಂದ ಮಜಾ ಕೇಳ್ರಿ ಇಲ್ಲೆ, ಈ ಮಗಾ ಒಂದ ವರ್ಷದ ಹಿಂದ ಎಂಗೇಜಮೆಂಟ್ ಆದ ಮರದಿವಸನ ಮದ್ವಿದ ರೆಜಿಸ್ಟ್ರೇಶನ್ ಮಾಡಿಸಿಸಿ ಹುಡಗಿದ ವಿಸಾ ರೆಡಿ ಮಾಡ್ಕೊಂಡಿದ್ದಾ. ಮೊನ್ನೇನ ಮದ್ವಿ ಆತಲಾ ಅವತ್ತಿಗೆ ಕರೆಕ್ಟ ಅವಂದ ಲಿಗಲಿ ಮದ್ವಿ ಆಗಿ ಒಂದ ವರ್ಷ ಆಗಿತ್ತ.
ಅವಂಗ ಇಂವಾ ಎಲ್ಲೇಲ್ಲೇ ಲಿಗಲ್ ಡಾಕ್ಯುಮೆಂಟ್ ಒಳಗ ಲಿಗಲ್ ಮ್ಯಾರೇಜ ಡೇಟ್ ಹಾಕಿದ್ದಾ ಅವರ ಕಡೆಯಿಂದ ಲಗ್ನದ ದಿವಸ happy married life ಮೆಸೆಜ ಬದ್ಲಿ happy anniversary ಅಂತ ಮೆಸೆಜ್ ಬಂದ್ವು. ಏನ್ಮಾಡ್ತೀರಿ?
ಅಲ್ಲಾ ಪಾಪ, ಕ್ವಾರೆಂಟೈನ್ ಆಗಿದ್ದಕ್ಕ ವರ್ಷಾನಗಟ್ಟಲೇ ವ್ಯಾಲೆಂಟೈನ್ ಆಗಿ ಉಳದಿದ್ದಾ. ಈಗ ಲಗ್ನಾ ಮಾಡ್ಕೊಂಡ ಮತ್ತ ಲೈಫ ಟೈಮ್ ಕ್ವಾರೆಂಟೈನ್ ಆದ ಅನ್ನರಿ.
ಇನ್ನ ನಮ್ಮ ಮನಿದ ಒಂದ ಪ್ರಹಸನ ಕೇಳಿ ಬಿಡ್ರಿ.
ದಣೇಯಿನ ಒಂದನೇ ಲಾಕ್ ಡೌನ್ ಮುಗದಿತ್ತ ಇನ್ನೂ ಎರಡನೇ ಲಾಕ್ ಡೌನ್ ಅನೌನ್ಸ ಆಗಿದ್ದಿಲ್ಲಾ ನನ್ನ ಹೆಂಡತಿ ಅರಿಷಣ ಕುಂಕಮಕ್ಕ ಅಂತ ನಮ್ಮ ಕಸೀನ್ ಸಿಸ್ಟರ್ ಮನಿಗೆ ಹೋಗಿದ್ಲು.
’ಈಗೇನ ವಿಶೇಷ’ ಅಂತ ಕೇಳಿದರ,
’ಇಲ್ಲಾ ಲಾಕಡೌನ ಮುಗದ ಮ್ಯಾಲೆ ಸತ್ಯನಾರಾಯಣ ಪೂಜಾ ಮಾಡ್ತೇನಿ ಅಂತ ಅಕಿ ಗಂಡ ಬೆಡ್ಕೊಂಡಿದ್ದನಂತ ಅದಕ್ಕ’ ಅಂದ್ಲು.
ಪಾಪ ಅವಂಗೂ ನನ್ನಂಗ ಲಾಕ್ ಡೌನ ಒಳಗ ಹೆಂಡ್ತಿ ಕೈಯಾಗ ಸಿಕ್ಕ ಯಾವಾಗ ಮನಿ ಹೊಚ್ಚಲಾ ದಾಟೇನೋ ಅನ್ನೊಂಗ ಆಗಿತ್ತ ಕಾಣ್ತದ ಹಿಂಗಾಗಿ ಲಾಕ್ ಡೌನ ಮುಗದರ ಸತ್ಯನಾರಾಯಣ ಪೂಜಾ ಮಾಡಸ್ತೇನಿ ಅಂತ ಬೇಡ್ಕೊಂಡಿರಬೇಕ ಬಿಡ ಅಂತ ಸುಮ್ಮನ ಕಣ್ಣ-ಮುಚ್ಚಿ ಪ್ರಸಾದ ಇಸ್ಗೊಂಡೆ.
ಇತ್ತಲಾಗ ನನ್ನ ಹೆಂಡ್ತಿ ನಮ್ಮ ತಂಗಿ ಉಡಿ ತುಂಬಿದ್ದ ಜಂಪರ್ ಪೀಸ ನೋಡಿ
’ಅಯ್ಯ ಮಾರ ಉದ್ದಿಲ್ಲಾ, ಹೆಂತಾದ ಕೊಟ್ಟಾಳ ನೋಡ ನಿಮ್ಮ ತಂಗಿ’ ಅಂದ್ಲು.
’ಲೇ ಅದು ಪ್ಯೂರ್ ಕಾಟನದ್ದ’ ಅಂತ ನಾ ಅಂದರ.
’ಅದಕ್ಕ ಹೇಳಿದ್ದ ಇನ್ನ ನೀರಾಗ ಹಾಕಿದ್ರ ಇನ್ನೂ ಉಡಗಿ ಹೋಗ್ತದ ನಂಗೇಲ್ಲೆ ಬರಬೇಕ’ ಅಂದ್ಲು.
ನಂಗ ಸಿಟ್ಟ ಬಂತ ’ಲೇ..ಹುಚ್ಚಿ ಅದನ್ನ ಕೊಟ್ಟದ್ದ ಜಂಪರ್ ಹೊಲಿಸ್ಗೊಳ್ಳಿಕ್ಕೆ ಅಲ್ಲಾ, ಮಾಸ್ಕ ಹೊಲಿಸ್ಗೊಳ್ಳಿಕ್ಕೆ’ ಅಂತ ತಿಳಿಸಿ ಹೇಳೋದರಾಗ ರಗಡ ಆತ.
’ಹೌದ ನೋಡ್ರಿ ಇನ್ನ ಮ್ಯಾಲೆ ಜಂಪರ್ ಪೀಸ ಕೊಡೊ ಬದ್ಲಿ ಮಾಸ್ಕ ಅರಬಿ ಕೊಟ್ಟರ ಹೆಂಗ?’ ಅಂತ ನನ್ನ ಹೆಂಡತಿ ಕೇಳಿದ್ಲು. ಅಲ್ಲಾ, ಹಂಗ ಇಕಿ ಕಡೆ ಅಗದಿ ಛಲೋ ಕಾಟನ್ ಜಂಪರ್ ಪೀಸ ಅಕಿಗೆ ಸಾಲಲಾರದ್ದವ ರಗಡ ಇದ್ದವು. ಅವನ್ನ ಇವತ್ತಿಗೂ ಮನಿಗೆ ಬಂದ ಹೆಣ್ಣಮಕ್ಕಳಿಗೆ ’ಸಾತರ ಜಂಪರ್ ಇಲ್ಲಾಂದರ ಮಾಸ್ಕ್ ಹೊಲಿಸ್ಗೊಳ್ಳರಿ, ಹೆಂಗಿದ್ದರು ಸೀರಿಗೆ ಮ್ಯಾಚಿಂಗ್ ಮಾಸ್ಕ್ ಬೇಕ ಬೇಕಲಾ’ ಅಂತ ಉಡಿ ತುಂಬಿ ಕಳಸ್ತಾಳ.
ಹಂಗ ಅದರಾಗ ತಪ್ಪ ಏನ ಇಲ್ಲ ಬಿಡ್ರಿ, ಕೋರೊನಾ ಕಡಿಮೆ ಆದರೂ ಮಾಸ್ಕ ಬಳಸೋದ ಏನ ತಪ್ಪಂಗಿಲ್ಲಾ.
ಇನ್ನ ಎಲ್ಲಾ ಬಿಟ್ಟ ವ್ಯಾಲೆಂಟೈನ್ ಡೇ ಟೈಮ್ ಒಳಗ ಸತ್ಯನಾರಾಯಣನ ಪೂಜಾದ್ದ ವಿಷಯ ಯಾಕ ಬಂತು ಅಂದರ ವರ್ಷಾ ವ್ಯಾಲೆಂಟೈನ್ ಡೇ ಕ್ಕ ನಮ್ಮ ಅತ್ತಿ ಮನ್ಯಾಗ ಸತ್ಯನಾರಾಯಣನ ಪೂಜಾ ಮಾಡ್ತಾರ್ರಿಪಾ. ಹಂಗ ವ್ಯಾಲೆಂಟೈನ್ ಡೇ ಕ್ಕ ಪೂಜಾ ಮಾಡ್ತೇವಿ ಅಂತ ಅವರೇನ ಬೇಡ್ಕೊಂಡಿಲ್ಲ ಮತ್ತ. ಅಲ್ಲಾ ಮೊದ್ಲ ಹೇಳಿದ್ನೇಲಾ ನಾವ ಸಂಪ್ರದಾಯಸ್ಥರು ನಮಗ ಕ್ವಾರೆಂಟೈನ್ ಇಷ್ಟ ಸಂಬಂಧ ವ್ಯಾಲೆಂಟೈನ್ ಡೇ ಸಂಬಂಧ ಇಲ್ಲಾ ಅಂತ.
ನಮ್ಮ ಅತ್ತಿ ಮನ್ಯಾಗ ಅವತ್ತ ಯಾಕ ಪೂಜಾ ಮಾಡ್ತಾರ ಅಂದರ ಅವರ ಮಗಳದ ಎಂಗೇಜಮೆಂಟ್ ೨೦೦೦ರಾಗ ಫೆಬ್ರುವರಿ ೧೩ಕ್ಕ ಆಗಿತ್ತ, ಅವರು ಮಗಳಿಗೆ ಸರ್ವಗುಣ-ಸಂಪನ್ನ ವರಾ ಸಿಕ್ಕ ನಿಶ್ಚಯ ಆದರ ಮರದಿವಸನ ಸತ್ಯನಾರಾಯಣನ ಪೂಜಾ ಮಾಡ್ತೇನಿ ಅಂತ ಬೇಡ್ಕೊಂಡಿದ್ದರಂತ ಹಿಂಗಾಗಿ ಅವತ್ತಿನಿಂದ ಇವತ್ತಿನ ತನಕ ವರ್ಷಾ ತಪ್ಪಲಾರದ ವ್ಯಾಲೆಂಟೈನ್ ಡೇ ದಿವಸ ಪೂಜಾ ಮಾಡ್ತಾರ.
ಅಲ್ಲಾ ಅವರ ಮಗಳಿಗೆ ಸಿಕ್ಕ ವರಾ ನಾನ ಮತ್ತ. ಇವತ್ತಿಗೆ ೨೧ ವರ್ಷದ ಹಿಂದ ನಿಶ್ಚಯ ಮಾಡ್ಕೊಂಡ ಮುಂದ ವೆಡ್ ಲಾಕ್ ಒಳಗ ಸಿಕ್ಕೊಂಡ ಕ್ವಾರೆಂಟೈನ ಆಗಿ ಇವತ್ತಿಗೂ obedient valentine ಆಗಿ ಸಂಸಾರ ನಡಿಸಿಗೋತ ಹೊಂಟೇನಿ. ಈಗ ನಮಗ every day is valentine day and everyday is quarantine day ಇದ್ದಂಗ.
Some situation is the pause button of lifetime