ಹೆಂತಾ ಛಲೋ ಬೆಚ್ಚಗ ಹೋತಗೊಂಡ ಇವತ್ತ ಅರಾಮ ಎದ್ದರಾತ ಅಂತ ಮಲ್ಕೋಂಡಿದ್ದೆ, ನನ್ನ ಮಗಾ ಬಂದ ” ಡ್ಯಾಡಿ ವೇಕ್ ಅಪ್, ಯಾರೋ ಕಂಬಾರ ಅಂಕಲ್, ನಿಂಗ ಕನ್ನಡದಾಗ ಬೈಲಿಕತ್ತಾರ ” ಅಂತ ಮೊಬೈಲ್ ಮುಸಕಿನಾಗ ತುರುಕಿದಾ. ನಾ ನಿದ್ದಿ ಗಣ್ಣಾಗ “ಹಲೋ, ಹೂ ಇಸ್ ಇಟ್ ” ಅಂದೆ.
” ಲೇ ನಿನ್ನೌನ , ಮ್ಯಾಲೆ ಏಳ, ಎಂಟಾತ , ಇನ್ನೂ ಹಾಸಿಗ್ಯಾಗ ಬಿದ್ದಿ ಏನ? ” ಅಂತ ಆ ಕಡೆಯಿಂದ ನಮ್ಮ ದೋಸ್ತ ಕಂಬಾರ ಶಂಭ್ಯಾ ನಮ್ಮ ಮಾತೃ ಭಾಷಾದಾಗ ಹೋಯ್ಕೋಂಡಾ. ಅಂವಾ ಮಾತಾಡೋದ ಹೀಂಗ, ಅಗದಿ ಶುದ್ಧ ಜಾನಪದ ಭಾಷಾದಾಗ, ಹೀಂತಾ ಭಾಷಾದಾಗ ನಮ್ಮ ಆತ್ಮೀಯತೇ- ದೋಸ್ತಿ ಇರೋದ. ಹಂಗ ಏನರ ಜಾನಪದ ಬೈಗಳಕ್ಕೂ ಏನರ ಪುರಸ್ಕಾರ ಇದ್ದರ ಅದು ನಮಗ ಗ್ಯಾರಂಟೀ ಸಿಗತದ.
” ಏನ್ ಮಾಡ್ಲಿಕತ್ತಾನ ನಿಮ್ಮಪ್ಪಾ , ಹು.ಸೂ. ಮಗಾ ಇನ್ನೂ ಮಕ್ಕೋಂಡಾನೇನ್, ಎರಡ ಒದ್ದ ಎಬ್ಬಸ್ ದನಾಕಾಯೋನ್” ಅಂತ ಅಂವಾ ಅಂದದ್ದನ್ನ ನನ್ನ ಮಗಾ ಕೇಳಿ, ಪಾಪ, ನನಗ ಬೈಲಿಕತ್ತಾರ ಅಂತ ತಿಳ್ಕೋಂಡಿದ್ದಾ. ಸುಡಗಾಡ ನಮ್ಮ ಮಕ್ಕಳು ಕಲಿಯೋದ ಇಂಗ್ಲೀಷ ಸಾಲ್ಯಾಗ, ಇವಕ್ಕ ಕನ್ನಡಾ ಬರೋದ ದೂರ ಉಳಿತ, ಕನ್ನಡದಾಗಿಂದ ಬೈಗಳ ಸಹಿತ ತಿಳಿಯಂಗಿಲ್ಲಾ. ಏನೋ ನಾ ಮನ್ಯಾಗ ಎಲ್ಲಾರಿಗೂ ಹಿಂತಾವ ಬೈಕೋತ ಇರತೇನಿ ಅಂತ ಅವಕ್ಕ ಇವು ಬೈಗಳ ಅಂತ ಗೊತ್ತ ಆಗ್ಯಾವ.
” ಮತ್ತೇನಲೇ ಶಂಭ್ಯಾ, ನಿನ್ನೌನ , ಮುಂಜ-ಮುಂಜಾನೆ ಎದ್ದ ಎಲ್ಲಿಂದ ಪೋನ್ ಹಚ್ಚಿ “ಅಂದೆ.
” ಇಲ್ಲೇ ಬೆಂಗಳೂರಿಗೆ ಬಂದೇನ್ಲೇ ಮಗನ, ನಾಳೆ ನವೆಂಬರ ೧ಕ್ಕ ನಮ್ಮ ಕಂಬಾರವರಿಗೆ ಸನ್ಮಾನ ಐತಿ ಅದಕ್ಕ ಬಂದೇನಿ, ಅವರು ನಮ್ಮ ಪೈಕಿ, ನಿಂಗ ಗೊತ್ತೈತಲಾ? ” ಅಂದಾ.
” ಯಾಕಲೇ ಅವಾರ್ಡ ಬಂದಮ್ಯಾಲೆ ಕಂಬಾರವರ ನಿಮ್ಮ ಪೈಕಿ ಆದರೇನ ಮಗನ? ಇಷ್ಟ ದಿವಸ ಒಮ್ಮೇನೂ ನಿನ್ನ ಬಾಯಾಗ ಅವರ ಹೆಸರ ಕೇಳಿದ್ದಿಲ್ಲಾ, ಇಬ್ಬರದು ಅಡ್ರೆಸ್ ಒಂದ ಅಂತ ನಿಮ್ಮ ಪೈಕಿ ಅದರ ಏನಲೇ ಮಗನ ?”
” ಲೇ ಖರೇಲೇ, ನಾವೂ ಹುಕ್ಕೇರಿಯವರ ಮಗನ, ಕಂಬಾರವರ ನಮಗ ದೂರಿಂದ ಹತಗಡಿ ಆಗಬೇಕ ” ಅಂದಾ,
ಆದು ಖರೇನೋ ಸುಳ್ಳೋ ಆ ಕಂಬಾರವರಿಗೆ ಗೊತ್ತ, ಆದರ ಒಂದ ಅಂತೂ ಖರೇ ಕಂಬಾರವರು ನಮ್ಮೇಲ್ಲಾರ ಪೈಕಿ, ಕನ್ನಡದ ಪೈಕಿ, ಅಖಂಡ ಕರ್ನಾಟಕದ ಪೈಕಿ.
ಅಲ್ಲಾ ಇವತ್ತ ಮನ್ಯಾಗ ಮಾತೃ ಭಾಷಾದಾಗ ನಾಲ್ಕ ಮುತ್ತಿನಂತಹ ಬೈಗಳ ಬೈದರ ನಮ್ಮ ಮಕ್ಕಳಿಗೆ ಅರ್ಥ ಆಗಂಗಿಲ್ಲಲಾ, ಇದ ಭಾಳ ಕೆಟ್ಟ ಅನಸೋ ವಿಷಯ, ಅವನೌನ
ಎಂಥಾ ಅರ್ಥ ಗರ್ಭಿತ ಬೈಗಳ ಅದಾವ ನಮ್ಮ ಭಾಷಾದಾಗ ಅದನ್ನ ಬಿಟ್ಟ ಇಂಗ್ಲಿಷನಾಗಿನ ‘ಸಿಲ್ಲೀ, ನಾನ್ಸೆನ್ಸ’ ಬೈಗಳ ಬೈದಾಡತಾವ ನಮ್ಮ ಮಕ್ಕಳು. ಇವಕ್ಕ ಛಂದ ಕನ್ನಡದಾಗ ‘ಜ್ಞಾನಪೀಠ ಪುರಸ್ಕಾರ’ ಅಂತ ಎರಡ ಅಕ್ಷರ ಬರಿಲಿಕ್ಕೆ ಬರಂಗಿಲ್ಲಾ, ಹಂತಾ ಮಕ್ಕಳ ಹುಟ್ಟ್ಯಾವ. ಕನ್ನಡ ಮೊದ್ಲ ಮನಿ ಭಾಷಾ ಆಗಬೇಕ್ರಿ. ಆಡಳಿತ ಭಾಷಾ, ವ್ಯವಹಾರಿಕ ಭಾಷಾ ಎಲ್ಲಾ ಆಮೇಲೆ. ಮೊದ್ಲ ಮನ್ಯಾಗ ಮಕ್ಕಳಿಗೆ ಕನ್ನಡದಾಗ ಮಾತೋಡದ ಕಲಸರಿ. ಇವಕ್ಕ ಅನಸಲಿ ಕನ್ನಡ ತಿಂದ ಉಂಡ-ಅಡ್ಡಾಡೋ ನಮ್ಮ ಮನಿ ಭಾಷಾ ಅಂತ, ಇದರಾಗ ತಪ್ಪ ಪಾಪ ಆ ಮಕ್ಕಳದ್ದಲ್ಲಾ, ನಂಬದ. ನಾವ ಎಷ್ಟ ಕನ್ನಡಾ ನಮ್ಮ ದೈನಂದಿನ ಜೀವನದಾಗ ಹಚಗೋತೇವಿ, ಅವು ಅಷ್ಟ ಹಚಗೋತಾವ, ಅದಕ್ಕ ನಾ ಹೇಳೋದ ಮೊದಲ ಕನ್ನಡ ನಮ್ಮ ಮನಿ-ಮನಿ ಒಳಗ , ಮನ-ಮನದ ಒಳಗ ನುಗ್ಗಲಿ ಅಂತ. ಖರೇ ಹೇಳ್ರಿ ನಿಮಗ ಎಷ್ಟ ಮಂದಿಗೆ ಕಂಬಾರವರ ಬಗ್ಗೆ ಅವಾರ್ಡ ಬರೋಕಿಂತಾ ಮೊದ್ಲ ಗೊತ್ತ ಇತ್ತ ? ಹೋಗಲಿ ” ಜ್ಞಾನಪೀಠ ” ಅನ್ನೋದ ಒಂದ ದೊಡ್ಡ ಪುರಸ್ಕಾರ ಅನ್ನೋದರ ಗೊತ್ತಿತ್ತಾ ?
ಮೊದ್ಲ ನಮ್ಮ ನಾಡು , ನುಡಿ ಮತ್ತ ನಾಡೋಜರ ಬಗ್ಗೆ ತಿಳ್ಕೋಬೇಕರಿ. ನಮಗೇಲ್ಲಾ ಕನ್ನಡಕ್ಕ ಪುರಸ್ಕಾರ ಸಿಕ್ಕಾಗ, ರಾಜ್ಯೋತ್ಸವ ಬಂದಾಗ ಮಾತ್ರ ಅದರ ಕನ್ನಡದ ಬಗ್ಗೆ ಕಾಳಜಿ, ಕಳಕಳಿ ಬರಬಾರದು, ಅದು ಯಾವಾಗಲೂ ಇರಬೇಕ. ಹಂಗ ಆಗಬೇಕಂದರ ಕನ್ನಡ ನಮ್ಮ ಮನ್ಯಾಗ , ಮನದಾಗ ಮತ್ತ ನಮ್ಮ ಮುತ್ತಿನಂತಹ ಮಾತನಾಗ ಇರಬೇಕ, ಬರೇ ಬೈಗಳದಾಗನೂ ಅಲ್ಲಾ.
” ಲೇ ಮಗನ ಮತ್ತ ಮಲ್ಕೋಂಡಿನೋ ನಿನ್ನೌನ ಏಳ್, ನಾ ನಿಮ್ಮ ಮನಿ ಕಡೆ ಬರಾಕತ್ತೇನಿ, ದೀಪಾವಳಿ ಫರಾಳ ಮಾಡಿರಿಲ್ಲ ಮತ್ತ ! ಎದ್ದ ತಯಾರಾಗ” ಅಂತ ಶಂಭ್ಯಾ ಆ ಕಡೆ ಇಂದ ವದರಿ ಪೋನ್ ಇಟ್ಟಾ.