ಹೋದ ಸಂಡೆ ಒಂದ ಕನ್ಯಾ ನೋಡಲಿಕ್ಕೆ ಹೋಗಿದ್ದೆ. ನಂಗಲ್ಲ ಮತ್ತ. ಅಲ್ಲಾ, ಹಂಗ ನಂಗೇನ ಕನ್ಯಾ ನೋಡಲಾರದಷ್ಟ ವಯಸ್ಸಾಗಿಲ್ಲಾ, ಇನ್ನೂ ವರಾ ಕಂಡಂಗ ಕಾಣ್ತೇನಿ ಆ ಮಾತ ಬ್ಯಾರೆ ಆದರ ಇಪ್ಪತ್ತೊಂದ ವರ್ಷದ ಹಿಂದ ಏನ ಒಂದ ಕನ್ಯಾ ನೋಡಿ ಕಟಗೊಂಡೆ ಅದ ರಗಡ ಆಗೇದ.
ನನ್ನ ಹೆಂಡ್ತಿ ಅತ್ತಿ ಒಬ್ಬೋಕಿ ಬಿಜಾಪುರ ಹತ್ತರ ಹಳ್ಳಿಯಿಂದ ತನ್ನ ಮಗಗ ಕನ್ಯಾ ನೋಡಲಿಕ್ಕೆ ಹುಬ್ಬಳ್ಳಿಗೆ ಬಂದಿದ್ದರು. ನಮಗ ಅವರ ಜೊತಿ ಹಿರೇತನ ಮಾಡಲಿಕ್ಕೆ ಕರದಿದ್ದರು. ಹಂಗ ಈಗ ಕನ್ಯಾದ್ದ ಡಿಮಾಂಡ್ ಜಾಸ್ತಿಯಾಗಿದ್ದಕ್ಕ ಗಂಡಿನವರ ಕನ್ಯಾದವರ ಮನಿ ಮುಂದ ಒಂದ ಕಾಲದಾಗ ರೇಶನ್ ಅಂಗಡಿ ಮುಂದ ಪ್ಲಾಸ್ಟಿಕ್ ಡಬ್ಬಿ ಹಿಡಕೊಂಡ ಚಿಮಣಿ ಎಣ್ಣಿಗೆ ಪಾಳೆ ಹಚ್ಚಿದಂಗ ಹಚ್ಚೊ ಪ್ರಸಂಗ ಬಂದದ.
ಪಾಪ ಆ ಹುಡಗನ ತಾಯಿ
’ಅವ್ವಕ್ಕ ನೀನೂ ನಿನ್ನ ಗಂಡ ಇಬ್ಬರು ಬರ್ರಿ, ನಮ್ಮ ರಾಘುಗ ಕನ್ಯಾ ನೋಡೊದ ಅದ, ನಮ್ಮ ಪೈಕಿ ಯಾರ ಬರಂಗಿಲ್ಲಾ. ನೀ ಏನಿಲ್ಲದ ಹಿರೇತನ ಮಾಡ್ತಿ. ಮ್ಯಾಲೆ ನಾವೇಲ್ಲಾ ಬಾಯಿ ಸತ್ತೋರ, ನೀವ ನಾಲ್ಕ ಮಾತಾಡ್ರಿ’ ಅಂತ ಅಂದರು. ಇನ್ನ ಹೆಂಡ್ತಿ ಪೈಕಿಯವರದ ಅದು ಕನ್ಯಾ ನೋಡೊ ಕೆಲಸಾ ಅಂದರ ಪುಣ್ಯಾದ್ದ ಕೆಲಸಾ ಅಂತ ನಾನೂ ಹೆಂಡ್ತಿ ಸೆರಗ ಹಿಡ್ಕೊಂಡ ಹೋಗಲಿಕ್ಕೆ ರೆಡಿ ಆದೆ ಅನ್ನರಿ.
ಸಂಜಿ ಮುಂದ ಕನ್ಯಾ ನೋಡಲಿಕ್ಕೆ ಹೊಂಟ್ವಿ, ಕನ್ಯಾದವರಿಗೆ ಐದಕ್ಕ ಬರ್ತೇವಿ ಅಂತ ಹೇಳಿದ್ವಿ ಆದರ ನನ್ನ ಹೆಂಡತಿ ರೆಡಿ ಆಗಬೇಕಾರ ಆರ ಹೊಡದಿತ್ತು, ಅದು ನಾ ಹತ್ತ ಸರತೆ
’ನಾವು ರಾಘುಗ ಕನ್ಯಾ ನೋಡಲಿಕ್ಕೆ ಹೊಂಟೇವಿ, ನಿಂಗ ತೋರಸಲಿಕ್ಕೆ ಅಲ್ಲಾ’ ಅಂತ ಹೇಳಿದ ಮ್ಯಾಲೆ ಇಕಿ ರೆಡಿ ಆಗಿ ಧರೆಗೆ ಇಳದ ಬಂದ್ಲು. ಮುಂದ ನಾವ ಕನ್ಯಾ ಮನಿ ಮುಟ್ಟಿದಾಗ್ ಏಳ ಹೊಡದಿತ್ತ.
ಹುಡಗಿ ಬಂದ ಆ ಹುಡುಗನ ಅವ್ವಗ, ನನ್ನ ಹೆಂಡತಿಗೆ ನಮಸ್ಕಾರ ಮಾಡಿದ್ಲು. ಅಲ್ಲಾ ಹಂಗ ಅವರ ಇಬ್ಬರು ಹಿರೇಮನಷ್ಯಾರ ಬಿಡ್ರಿ. ಅವರಪ್ಪಾ ’ಏ, ಹುಡುಗುಗೂ ಮಾಡ್ವಾ’ ಅಂದ ಕೂಡ್ಲೇ ಪಾಪ ಅಕಿ ಸೀದಾ ನನಗ ನಮಸ್ಕಾರ ಹೊಡಿಲಿಕ್ಕೆ ಬಂದ್ಲು, ನಾ ಸಟಕ್ಕನ ಅಗದಿ ಕಾಲಾಗ ಝಿರಿ ಬಂದವರಗತೇ ಕಾಲ ಎತ್ತಿ
’ಏ, ತಂಗಿ ನಾ ವರಾ ಅಲ್ವಾ..ಅಂವಾ ವರಾ’ ಅಂತ ಹುಡುಗನ ತೊರಿಸಿದೆ.
ಅಲ್ಲಾ ಹಿಂಗ ಕನಫ್ಯೂಸ್ ಆಗ್ತದಂತ ನಾ ಯಾರ ಜೊತಿನೂ ಕನ್ಯಾ ನೋಡಲಿಕ್ಕೆ ಹೋಗಂಗಿಲ್ಲಾ.
ನಾ ಸ್ವಂತ ಕನ್ಯಾ ನೋಡಿ ಹೂಂ ಅಂದಾಗ ಸಹಿತ ನಮ್ಮ ಮಾವ ಹುಡುಗ ದೊಡ್ದೊಂವ ಆದಮ್ಯಾಲೆ ಮದ್ವಿ ಮಾಡಿ ಕೋಡ್ತೇವಿ ಅಂತ ಒಂದ ವರ್ಷ ಬಿಟ್ಟ ಮದ್ವಿ ಮಾಡಿಕೊಟ್ಟಿದ್ದರು. ಅಷ್ಟ ಯಂಗ್ ಇದ್ದೆ ನಾ.
ಮುಂದ ಹುಡಗಿ ಅಪ್ಪಾ, ಕನ್ಯಾಕ್ಕ ಏನರ ಕೇಳೋದ ಇದ್ದರ ಕೇಳ್ರಿ ಅಂದರು.
ನಂಗ ಏನ ಕೇಳ ಬೇಕಂತ ಲಗೂನ ಹೊಳಿಲಿಲ್ಲಾ, ಹಿಂದ ಸ್ವಂತ ಕನ್ಯಾಕ್ಕ ಏನೇನೊ ಹುಚ್ಚುಚಾಕಾರ ಕೇಳಿ ಹಿರೇಮನಷ್ಯಾರ ಕಡೆ ಬೈಸ್ಗೊಂಡ ಮುಂದ ಆ ತಪ್ಪಿಗೆ ಅಕಿನ್ನ ಲಗ್ನ ಆಗಿದ್ದೆ ಆದರ ಇವತ್ತ ನಾನ ಹಿರೇಮನಷ್ಯಾ.
ಸರಿ.. “ಏನ ಕಲ್ತಿವಾ ತಂಗಿ” ಅಂದೆ, ಅಕಿ
“B.Sc. ಕಂಪ್ಯೂಟರ ಸೈನ್ಸ” ಅಂದ್ಲು. ಅಡ್ಡಿಯಿಲ್ಲಾ, ನನ್ನಂಗ ಸೈನ್ಸ ಸ್ಟುಡೆಂಟ.
“ಈಗ ಏನ ಮಾಡ್ಲಿಕತ್ತೀವಾ”
“M.Sc ಎಂಟ್ರನ್ಸ ಕಟ್ಟೇನಿ”. ಮುಂದ
“ನಿಂಗ ಎಷ್ಟ ಲಾಂಗ್ವೇಜ ಬರತಾವ” ಅಂತ ಅಂದೆ, ಅಕಿ
“ಮೂರ ಬರ್ತಾವರಿ, c, c++, java………..”
ಅಕಿ ಹಂಗ ಅನ್ನೋದ ತಡಾ ನನ್ನ ಹೆಂಡ್ತಿ
“ಯವ್ವಾ…ಜಾವಾ ಪಾವಾ ಅಲ್ವಾ, ನಾಲ್ಕ ಮಂದಿ ಜೊತಿ ಮಾತೋಡದ ಹೇಳ” ಅಂದ್ಲು. ಅಕಿ
“ಕನ್ನಡ, ಮರಾಠಿ, ಇಂಗ್ಲೀಷ್” ಅಂದ್ಲು. ನಾ ಮುಂದ ಏನೋ ಕೇಳ ಬೇಕ ಅನ್ನೋದರಾಗ ನನ್ನ ಹೆಂಡ್ತಿನ ಗಬಕ್ಕನ
“ಹಾಡಲಿಕ್ಕೆ ಬರ್ತದ ಇಲ್ಲ ನಿನಗ” ಅಂತ ಕೇಳಿದ್ಲು. ಪಾಪ ಹುಡಗಿ ಬರಂಗಿಲ್ಲಾ ಅಂತ ಗೋಣ ಅಳ್ಳಾಡಿಸಿದ್ಲು.
“ಅಯ್ಯ..ಸಣ್ಣೋಕಿದ್ದಾಗ ನಿಮ್ಮ ಮನ್ಯಾಗ ಹಾಡ ಹೇಳಿ ಕೊಟ್ಟಿಲ್ಲಾ” ಅಂತ ದೊಡ್ಡಿಸ್ತನಾ ಬಡದ್ಲು. ಆ ಹುಡಗಿ ಸಣ್ಣೋಕಿದ್ದಾಗಿನ ಹಾಡ ಅಂತ ಅಂದಕೂಡ್ಲೇ
“ಆನಿ ಬಂತ ಆನಿ..
ಯಾ ಊರ ಆನಿ..ಬಿಜಾಪುರ ಆನಿ..
ಇಲ್ಲಿಗ್ಯಾಕ ಬಂತ..ಹಾದಿ ತಪ್ಪಿ ಬಂತ್..” ಅಂತ ಶುರು ಹಚಗೊಂಡ್ಲು. ಪುಣ್ಯಾಕ್ಕ ’ಕನ್ಯಾ ನೋಡ್ಲಿಕ್ಕೆ ಬಂತ’ ಅನಲಿಲ್ಲಾ, ಯಾಕಂದರ ನಮ್ಮ ಹುಡಗ ರಾಘು ಒಂದ ಸ್ವಲ್ಪ ನನ್ನ ಹೆಂಡ್ತಿಗತೆನ ಘಡತರ ಬ್ಯಾರೆ ಇದ್ದಾ. ನಮಗೇಲ್ಲಾ ಎಲ್ಲೇ ಅಕಿ ಅವಂಗ ಆನಿ ಅಂದ್ಲೋ ಅಂತ ಅನಸಲಿಕತ್ತ. ಆ ಹಾಡ ಕೇಳಿದೋಕಿನ ನನ್ನ ಹೆಂಡ್ತಿ
“ಏ…..ಸಾಕ ಮಾಡ ಅದ ನಾಳೆ ಮಕ್ಕಳನ ಹಡದ ಮ್ಯಾಲೆ ಹೇಳೊ ಹಾಡ, ಅಲ್ಲಾ
’ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನಾ….’
ಇದನ್ನ ಒಂದರ ಕಲಿಬೇಕ್ವಾ ಇದ ನಮ್ಮಂದಿದ ಕನ್ಯಾ ತೋರಸಲಿಕ್ಕೆ ಹೋದಾಗ ಹಾಡೋ ಪೇಟೆಂಟ್ ಹಾಡ. ಅಗದಿ ಇಪ್ಪತ್ತ ಮಾರ್ಕ್ಸಿಂದ್ ಗ್ಯಾರಂಟೀ ಕ್ವೇಶನ್ ಇದ್ದಂಗ. ಇರಲಿ ತೊಗೊ, ಮುಂದಿನ ಸಲಾ ಕಲ್ತಕೋ. ನಾ ಅದನ್ನ ಹಾಡೇ ಇವರನ ಮಾಡ್ಕೊಂಡಿದ್ದು” ಅಂತ ನನ್ನ ಕಡೆ ಬಟ್ಟ ಮಾಡಿ ಅಂದ್ಲು.
ಅಷ್ಟರಾಗ ವರನ ಅವ್ವಾ ’ಮನಿ ಕೆಲಸಾ-ಬೊಗಸಿ, ಪದ್ದತಿ-ಸಂಪ್ರದಾಯ್’ ಬಗ್ಗೆ ಸ್ವಲ್ಪ ಕೇಳ’ ಅಂದ್ಲು, ಇಕಿ ಸೀದಾ
“ಕೊಬ್ಬರಿ ಹೆರಿಲಿಕ್ಕೆ, ಸವತಿಕಾಯಿ ಕೊಚ್ಚಲಿಕ್ಕೆ, ಥಾಲಿಪಟ್ಟ ತಟ್ಟಲಿಕ್ಕೆ, ಭಕ್ಕರಿ ಬಡಿಲಿಕ್ಕೆ ಎಲ್ಲಾ ಬರ್ತದ ಹೌದಲ್ಲ” ಅಂತ ಕೇಳಿದ್ಲು.ಆ ಹುಡಗಿ ಗಾಬರಿ ಆಗಿ ಏನ ಕೊಚ್ಚಬೇಕು, ಏನ ಹೆರಿಬೇಕು, ಏನ ತಟ್ಟಬೇಕು, ಏನ ಬಡಿಬೇಕು ಗೊತ್ತಾಗಲಾರದ expressionless face ಮಾಡಿದ್ಲು.
ಮುಂದ ’ಬಾಳಕಾ ತುಂಬಲಿಕ್ಕೆ, ಸಂಡಗಿ ಇಡಲಿಕ್ಕೆ, ಹಪ್ಪಳದ ಉರಳಿ ಲಟ್ಟಸಲಿಕ್ಕೆ ಬರತದೇನ’ ಅಂತ ಕೇಳಿದ್ಲು.
’ಇಲ್ಲಾ..ನಾವೇಲ್ಲಾ ರೆಡಿಮೇಟ್ ತೊಗೋತೇವಿ’ ಅಂದ್ಲು. ನನ್ನ ಹೆಂಡ್ತಿ ಮುಂದ ಸಬ್ಜೆಕ್ಟ ಚೇಂಜ್ ಮಾಡಿ ಒಮ್ಮಿಕ್ಕಲೇ “ಅಗ್ಗಿಷ್ಟಗಿ ಅಂದರ ಏನ” ಅಂತ ಕೇಳಿದ್ಲು..
ಹಕ್ಕ್..ಇಲ್ಲೇ ಇನ್ನೂ ಕನ್ಯಾನ ಫಿಕ್ಸ ಆಗಿಲ್ಲಾ ಇಕೇನ ಸೀದಾ ಬಾಣಂತನ, ಅಗ್ಗಿಷ್ಟಗಿಗೆ ಹೋದ್ಲಲಾ ಅಂತ ನಾ ಅನ್ಕೋಳೊದರಾಗ
ಆ ಹುಡಗಿ ” ಕ್ಯಾಂಪಫೈರಗೆ ಅಗ್ಗಿಷ್ಟಗಿ ಅಂತಾರ” ಅಂದ ಬಿಟ್ಲು. ಏನ ಮಾಡ್ತೀರಿ?
ನನ್ನ ಹೆಂಡ್ತಿ ಅಷ್ಟಕ್ಕ ಬಿಡಲಿಲ್ಲಾ ಮುಂದ ’ಹಾಲಮನಿ ಮುತ್ತೈದಿ’ ಅಂದ್ರ ಏನೂ ಅಂದ್ಲು, ಹುಡಗಿ..sorry ಅಂದ್ಲು..
’ಹಿತ್ತಲಗೊರ್ಜ ಮುತ್ತೈದಿ ಅಂದ್ರ ಏನು?’ ಅಂದ್ಲು..ಹುಡುಗಿ dont know ಅಂದ್ಲು…
ಇದ ಇವತ್ತ ನಮ್ಮ ಕನ್ಯಾಗೊಳದ್ದ ಪರಿಸ್ಥಿತಿ. ಎದನ್ನ ತುಂಬತಾರ, ಯಾವದ ಇಡ್ತಾರ, ಯಾರನ ಲಟ್ಟಸ್ತಾರ ಗೊತ್ತಿಲ್ಲಾ ಇವರ ಮುಂದ ಸಂಸಾರ ಮಾಡೋರ. ನಮ್ಮ ರಾಘ್ಯಾನ ಮನ್ಯಾಗ ನೋಡಿದರರ ಇವತ್ತಿಗೂ ಮಡಿವಂತರ. ಇನ್ನ ಮುಂದ ಈ ಕನ್ಯಾ ಪಾಸ ಆದರ ಹೆಂಗೋ ಏನೋ ಅಂತ ಅಲ್ಲಿಗೆ ಕನ್ಯಾ ಪರೀಕ್ಷಾ the end ಮಾಡಿ, ನಾವ ಏನ ಅಂಬೋದ ತಿಳಸ್ತೇವಿ ಅಂತ ನಮ್ಮ ಮನಿಗೆ ಬಂದ್ವಿ.
ಅಲ್ಲಾ ’ಹಿತ್ತಲಗೊರ್ಜ ಮುತ್ತೈದಿ’, ’ಹಾಲಮನಿ ಮುತ್ತೈದಿ’ ಅಂದ್ರ ಏನು ಅಂತ ನಿಮಗರ ಗೊತ್ತದ ಇಲ್ಲೋ ಮತ್ತ್..ಗೊತ್ತಿಲ್ಲಾಂದರ ಒಂದ ಸರತೆ ಕೇಳ್ರಿ ಇಲ್ಲೆ.
‘ಹಿತ್ತಲಗೊರ್ಜಿ ಮುತ್ತೈದಿ’ ಅಂದರ ‘ಯಾ ಮುತ್ತೈದಿಗೆ ತವರಮನ್ಯಾಗ ಅವ್ವಾ-ಅಪ್ಪಾ ಇನ್ನೂ ಇರ್ತಾರೋ, ಅತ್ತಿಮನ್ಯಾಗ ಅತ್ತಿ-ಮಾವಗ ಅಕಿ ಇನ್ನೂ ಜೀವಂತ ಇಟ್ಟಿರತಾಳೋ ಹಂತಾಕಿಗೆ ಹಿತ್ತಲಗೊರ್ಜಿ ಮುತ್ತೈದಿ’ ಅಂತ ಕರಿತಾರ. ಇನ್ನ ಮುತ್ತೈದಿ ಅಂದ ಮ್ಯಾಲೆ ಗಂಡ ಅಂತೂ ಇರಬೇಕ ಆ ಮಾತ ಬ್ಯಾರೆ. ಹಿಂತಾ ಮುತ್ತೈದಿಯರು ಭಾಳ ರೇರ. ಅಲ್ಲಾ ಹಂಗ ಕನ್ಯಾಗೊಳ ಇತ್ತೀಚಿಗೆ ಅತ್ತಿ ಇಲ್ಲದ ಮನಿನ ಬೇಕ ಅಂತ ಹಟಾ ಹಿಡದದ್ದಕ್ಕ ’ಹಿತ್ತಲಗೊರ್ಜಿ ಮುತೈದಿ’ಯರ ಕಡಮಿ ಆಗಿದ್ದ.
ಇನ್ನ ಈ ಹಿತ್ತಲಗೊರ್ಜಿ ಮುತ್ತೈದಿನ್ನ ಮನಿ ಒಳಗ ಮದುವಿ-ಮುಂಜವಿ ಇದ್ದಾಗ ದೇವತಾ ಕಾರ್ಯಕ್ರಮ ಮಾಡ್ತಾರಲಾ ಆವಾಗ ಕರದ ಇಕಿ ಕೈಲೆನ ಒಳಕಲ್ಲ, ಬೀಸುಕಲ್ಲ ಮತ್ತ ಹಿಟ್ಟಿನ ಗಣಪತಿ ಮಾಡಿಸಿ ಪೂಜಾ ಮಾಡಸಸತಾರ.
ಇನ್ನ ’ಹಾಲಮನಿ ಮುತ್ತೈದಿ’ ಅಂದರ ಯಾವ ಮುತ್ತೈದಿ ಇನ್ನೂ ಕೂಸಿಗೆ ಹಾಲುಣಿಸ್ತಿರ್ತಾಳೊ ಹಂತಾ ಮುತ್ತೈದಿನ್ನ ಬ್ಯಾರೆವರ ತಮ್ಮ ಮನಿ ಕೂಸಿಗೆ ಹೆಸರ ಇಡಬೇಕಾರ ತೊಟ್ಟಲದ ಪೂಜಾ ಮಾಡಲಿಕ್ಕೆ ಕರಸ್ತಾರ. ಹಾಲಮನಿ ಮುತ್ತೈದಿ ಹೆಸರ ಇಡಬೇಕಾರ ಕಂಪಲ್ಸರಿ.
ಹಂಗ ನಾಳೆ ಈ ನೋಡಿದ್ದ ಕನ್ಯಾ ಏನರ ನಮ್ಮ ರಾಘ್ಯಾಗ ಫಿಕ್ಸ್ ಆದರ ಅವನ ಲಗ್ನಕ್ಕ ಒಬ್ಬೊಕಿ ಹಿತ್ತಲಗೊರ್ಜಿ ಮುತ್ತೈದಿ ಬೇಕ. ಮುಂದ ಈ ಕನ್ಯಾ ಏನರ ವರ್ಷ ತುಂಬೋದರಾಗ ಜರಕರತಾ ಹಡದರ ಅಕಿ ಬ್ಯಾರೆಯವರಿಗೆ ’ಹಾಲಮನಿ ಮುತ್ತೈದಿ’ ಆಗ್ತಾಳ.
ಹಂಗ ಕನ್ಯಾ ಫಿಕ್ಸ ಆದರ ಮುಂದಿನ ಕಥಿನೂ ಬರಿತೇನಿ ಅಲ್ಲಿ ತನಕ ಇತಿ ಶ್ರೀಸಂಸಾರಪುರಾಣೇ ಕನ್ಯಾದರ್ಶನ ಪ್ರಥಮೋಧ್ಯಾಯಃ
ನಿಮ್ಮ ಕಲೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀವು ಹೀಗೆ ಬರಿದು ಪೇಪರ್ನಲ್ಲಿ ಹಾಕಿಸಿರ್ತಿರಿ ನಾವು ಒಂದನ್ನು ಬಿಟ್ಟಿಲ್ಲ ಎಲ್ಲಾನೂ ಓದಿದಿನಿ ತುಂಬಾನೇ ಚೆನ್ನಗಿದೆ ನಾವು ಕೂಡ ನಿಮ್ಮ ಭಾಷೆ ನೆ ಮಾತನಾಡುತ್ತೇವೆ ನೀವು ಹೀಗೆ ಬರಿದು. ಹಾಕಿ tqsm ಸಿರ್. ನಿಮ್ಮ ಗಣೇಶ ಹಬ್ಬ ಕ್ಕೆ ಹಕಿದ್ರಲ್ವ ಅದು ತುಂಬಾನೇ ಚೆನ್ನಾಗಿತ್ತು ನನಗೂ ಕೂಡ ನಿಮ್ಮ ಹಾಗೆ ಬರಿಯುದು ಎಂದರೆ ತುಂಬಾ. ಎಷ್ಟ tqsm